ಪ್ರತಿಸ್ಪಂದನ – Pratispandana

ಬಸವೇಶ್ವರ ಬ್ರಾಹ್ಮಣ ಸಂಘ..!

January 3, 2008 · 4 Comments

ಮೊನ್ನೆ ಮೊನ್ನೆ ಪೇಪರ್ರಲ್ಲಿ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬಸವೇಶ್ವರನಗರ ಬ್ರಾಹ್ಮಣ ಸಂಘ ಅಂತಾ ಇತ್ತು. ಅದರೊಟ್ಟಿಗೇ ಇಂಥಾ ಯೋಚನೆಯೊಂದು ಸುಳಿದು ಹೋಯಿತು..! ಎಷ್ಟೇ ಆಗಲಿ ಬಸವಣ್ಣನವರು ಬ್ರಾಹ್ಮಣರಾಗಿಯೇ ಹುಟ್ಟಿದವರು ತಾನೇ. ಬಸವಣ್ಣನವರು ಬ್ರಾಹ್ಮಣ ಸಂಪ್ರದಾಯದ ಅನಾಚಾರಗಳ ವಿರುದ್ಧ ೧೨ನೇ ಶತಮಾನದಲ್ಲಿಯೇ ದನಿಯೆತ್ತಿದವರು. ಈ ಹೆಸರಿನಲ್ಲಿ ಒಂದು ಸಂಘ ತೆರೆದರೆ, ಬ್ರಾಹ್ಮಣರು ಬಸವಣ್ಣನನ್ನು ತಮ್ಮವರೆಂದುಕೊಳ್ಳಲು ಒಂದು ಅವಕಾಶ! ನನ್ನ ಬ್ರಾಹ್ಮಣ ಗೆಳೆಯನಿಗೆ ಈ ಬಗ್ಗೆ ಹೇಳುತ್ತಿದ್ದೆ. ಆತ ನಕ್ಕು ಸುಮ್ಮನಾದ. ಸುಮ್ಮನೇ ಆತ್ಮೀಯತೆಯಿಂದ ಛೇಡಿಸುವಾಗ, ಆತನಿಗೆ ನೀವು ಬಾಮುಂಡ್ರು ಹಿಂಗೆಲ್ಲಾ ಮಾಡ್ಬಾರ್ದು ಅಂತಾ ಹೇಳಿದಾಗಲೆಲ್ಲಾ ಆತನ ಉತ್ತರ ಬ್ರಾಹ್ಮಣನಾಗಿ ಹುಟ್ಟಿ ಏನು ಉಪಯೋಗ ಆಯ್ತು ಹೇಳು ಎನ್ನುವುದೇ ಆಗಿರುತ್ತಿತ್ತು. ತೀರಾ ಮಧ್ಯಮ ವರ್ಗದಿಂದ ಬೆಳೆದು ಬಂದ ಆತನಿಗೆ ಜಾತಿಯಿಂದ ಏನೂ ಲಾಭವಾಗಿಲ್ಲ.

ಇನ್ನೊಂದು ವಿಷಯವೆಂದರೆ ನಮ್ಮೂರಿನ ಲಾಯರ್ ರೋಡಿನ “ಮಾಧ್ವ ಯುವಕ ಸಂಘ”ದ ಆಟದ ಮೈದಾನದಲ್ಲಿ ಬರೀ ಮಾಧ್ವ ಬ್ರಾಹ್ಮಣ ಹುಡುಗರೇ ಆಡುತ್ತಾರೆ. ಸ್ಮಾರ್ತ ಹುಡುಗರೂ ಹೋಗುವುದಿಲ್ಲ..! ಜನಿವಾರಕ್ಕೂ ಬೆಲೆಇಲ್ಲ..! ಇನ್ನು ಅದರ ಪಕ್ಕದ ದೀಕ್ಷಿತ್ ರೋಡಿನ ಕಥೆಯೂ ಅದೇ. ಬೇರೆ ಹುಡುಗರೊಂದಿಗೆ ಈ ಹುಡುಗರು ಸೇರುವುದೇ ಇಲ್ಲ. ಅದೇಕೆ ಆ ಮಟ್ಟಿಗೆ ಒಂದು ಗೆರೆ ಕೊರೆದುಕೊಂಡುಬಿಟ್ಟಿರುತ್ತಾರೆ? ದೇವರು ಧರ್ಮ ಸಂಪ್ರದಾಯ ಇವುಗಳಾಚೆಗಿನ ಬದುಕು ಏಕೆ ಕಣ್ಮರೆಯಾಗಿರುತ್ತದೆ? ಬೇರೆ ಹುಡುಗರ ಜೊತೆ ಹೋದರೂ ಬ್ರಾಹ್ಮಣ ಹುಡುಗರೊಂದಿಗೆ ಇರುವ ಆತ್ಮೀಯತೆ, ಸಲುಗೆ ಬೆಳೆಸಿಕೊಳ್ಳುವುದಿಲ್ಲ. ಇನ್ನು ಭಾರತೀಯ ಸಂಸ್ಕೃತಿ ಎಂದರೆ ವೇದ, ವೇದಾಂತ, ಭಗವದ್ಗೀತೆ, ಉಪನಿಷತ್ತು ಇಷ್ಟೇನಾ? ರಾಮಾಯಣ ಮಹಾಭಾರತ ಮಾತ್ರ ನಮ್ಮ ಸಂಸ್ಕೃತಿಯನ್ನು ಜೋಪಾನ ಮಾಡಿವೆಯಾ? ಬಸವಣ್ಣನಂಥವರು ೧೨ನೇ ಶತಮಾನದಲ್ಲಿ ಮಾಡಿದ ವೈಚಾರಿಕ ಕ್ರಾಂತಿ, ಜಾಗೃತವಾದ ಕಾಯಕ-ದಾಸೋಹ ಪ್ರಜ್ಞೆ ಇವೆಲ್ಲವೂ ನಮ್ಮ ಸಂಸ್ಕೃತಿಯನ್ನು ಜತನವಾಗಿ ಕಾಪಾಡಲಿಕ್ಕೆ, ವಿಚಾರದ ಓರೆಗಲ್ಲಿಗೆ ಹಚ್ಚಲಿಕ್ಕೆ ಕಾರಣವಾಗಿವೆ.

ಬಸವಣ್ಣನ ಅನುಯಾಯಿಗಳಾದ ಲಿಂಗಾಯಿತರ ಮನೆಗಳಲ್ಲಿ ಬೇಕಾದ್ರೆ ಭಗವದ್ಗೀತೆ ಸಿಗುತ್ತದೆ. ಆದರೆ ಎಷ್ಟು ಜನ ಬ್ರಾಹ್ಮಣರ ಮನೆಗಳಲ್ಲಿ ಬಸವಣ್ಣನ ವಚನಗಳು ಸಿಗುತ್ತವೆ? ಸಂಸ್ಕೃತಿ ಎಂದರೆ ವೈದಿಕ ಮಾತ್ರವೇ ಅಲ್ಲ. ಅದನ್ನು ಧಿಕ್ಕರಿಸಿ ವೈಚಾರಿಕ ನೆಲೆಗಟ್ಟಿನಲ್ಲಿ ಹೊಸದೊಂದು ಕ್ರಾಂತಿಗೆ, ಧರ್ಮದ ಮರುಹುಟ್ಟಿಗೆ, ಮರುವಿಮರ್ಶೆಗೆ ಕಾರಣವಾದ ಅವೈದಿಕದ ನಿಲುವನ್ನೂ ಗಂಭೀರವಾಗಿ ಪರಿಗಣಿಸಬೇಕು.

ಮತಾಂತರ ನೆಡೆಯುತ್ತಿದೆ ಎಂದಾಕ್ಷಣ ಜಾಗೃತರಾಗಿ ಅದನ್ನು ತಡೆಯಲು, ಕ್ರೈಸ್ತ ಮಿಷಿನರಿಗಳ ಕುತಂತ್ರದ ಆಮಿಷಕ್ಕೆ ಬಲಿಯಾಗಿ ಮತಾಂತರವಾಗುವ ಅಮಾಯಕರನ್ನು, ದಲಿತರನ್ನು ರಕ್ಷಿಸಲು ಮುಂದಾಗುವ ಆರ್.ಎಸ್.ಎಸ್-ಬಜರಂಗದಳಗಳು ಅವರನ್ನು ಬ್ರಾಹ್ಮಣರನ್ನಾಗಿಸಿ ಜನಿವಾರ ದೀಕ್ಷೆ ನೀಡುತ್ತವೆಯೇ? ತುಳಿತಕ್ಕೊಳಗಾದವರು, ಶೋಷಿತರು, ಕಾಲಡಿಯಲ್ಲಿದ್ದವರು ಎಲ್ಲಿರಬೇಕೋ ಅಲ್ಲೇ ಇರಬೇಕೇ? ಇದು ಅವರ ನಿಲುವೇ? ಪ್ರಶ್ನೆಗಳ ಸರಮಾಲೆ ಇದೆ. ಉತ್ತರ… ಯಾರಿಗೆ ಕೇಳೋಣ?

ಇದನ್ನೆಲ್ಲಾ ನೆನಸಿಕೊಂಡಾಗ ವಿಚಾರವಂತ ಬ್ರಾಹ್ಮಣ ಹುಡುಗರು ಸೇರಿ ಇಂಥದೊಂದು ಸಂಘ ಕಟ್ಟಬಹುದಲ್ಲವೇ ಅನ್ನಿಸಿತ್ತು..!

Categories: ಮನದ ಮಾತು · ವಿಚಾರವಾದ
Tagged: , , , , ,

4 responses so far ↓

  • nagenagaaridotcom // January 28, 2008 at 9:58 am | Reply

    ನಗುವು ಸಹಜದ ಧರ್ಮ
    ನಗಿಸುವುದು ಪರ ಧರ್ಮ
    ನಗುವ ನಗಿಸುತ ನಗಿಸಿ
    ನಗುತ ಬಾಳುವ ವರವ
    ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
    ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
    ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
    ವಿಳಾಸ: http://nagenagaaridotcom.wordpress.com/

    ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

    ನಗೆ ಸಾಮ್ರಾಟ್

  • s.srinivas // March 5, 2008 at 4:52 am | Reply

    ಲೇಖನಯ ವಿಷಯ ಬಹಳ ಚೆನ್ನಾಗಿದೆ. ನೀವು ಹೇಳಿರುವ ಹಾಗೆ ಮುಸ್ಲಾಮಾನರನ್ನು ಹಾಗು ಕ್ರೈಸ್ತರನ್ನು ಸನಾತನ ಧರ್ಮಕ್ಕೆ ಸೇರಿಸಿಕೊಳ್ಳಲು ಸ್ವಲ್ಪ ಕಷ್ಟಕರವೇ. ಆದರೆ ಬಲು ಹಿಂದಿನಿಂದಲೂ ಆರ್ಯ ಸಮಾಜವು ಇತರ ಧರ್ಮದ ಜನರನ್ನು ‘ಶುದ್ಧಿ’ ಎಂಬ ಪ್ರಕ್ರಿಯೆ ಮೂಲಕ ಹಿಂದೂಗಲ್ಲನಾಗಿ ಮಾಡುತ್ತಾ ಬಂದಿದೆ.

  • Venkatesh // March 5, 2008 at 2:28 pm | Reply

    ಹೆಲೋ,
    ನಿಮ್ಮ ಬ್ಲಾಗ್ ನಲ್ಲಿ ಹೆಸರು ಕಂಡುಬರಲಿಲ್ಲ,
    ನೀವು ಬಜರಂಗದಳದವರು, ಅನ್ಯಜಾತಿಯವರಿಗೆ ಬ್ರಾಹ್ಮಣ ದೀಕ್ಷೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ್ದಿರಾ. ಆದರೆ ಬ್ರಾಹ್ಮಣನಾಗುವ ಅವಶ್ಯಕತೆಯೇನೂ ಯಾರಿಗೂ ಬರಬೇಕಿಲ್ಲ ಹಾಗಾಗುವುದರಿಂದ ಪ್ರಯೋಜನವೇನೂ ಇಲ್ಲ…ಕೀಳರಿಮೆಯವರು ಹಾಗೆ ಹಾತೊರೆಯಬಹುದೇನೋ.

  • s.srinivas // March 6, 2008 at 4:44 am | Reply

    ಮೇಲಿನ ಅನಸಿಕೆಯಲ್ಲಿ ಹಿಂದೂಗಳು ಬದಲಿಗೆ ಹಿಂದುಗಲ್ಲು ಎಂದು ಬರೆಯಲಾಗಿತ್ತು. ಅಂದಹಾಗೆ ಜಗತ್ತಿನಲ್ಲಿ ಇರುವುದು ಯೇರದೆ ಜಾತಿ, ಒಂದು ಗಂಡು ಜಾತಿ ಹಾಗು ಇಂನೂಂದು ಹೆಣ್ಣು ಜಾತಿ.

Leave a Comment