ಪ್ರತಿಸ್ಪಂದನ – Pratispandana

Entries from February 2008

ಇಷ್ಟೇ ಮತ್ತು ಇಷ್ಟೇನಾ ನಡುವೆ ಇರುವ ವ್ಯತ್ಯಾಸ : ಇದು ಬದುಕಿನ ವ್ಯಾಕರಣ..!

February 29, 2008 · Leave a Comment

    ಇವು ಎರಡು ಪದಗಳು ಎಷ್ಟು ಹತ್ತಿರದಲ್ಲಿವೆ ಸ್ವಲ್ಪ ಗಮನಿಸಿ. ಯಾವುದೇ ವಸ್ತು, ವ್ಯಕ್ತಿ ಅಥವಾ ಸಂಬಂಧಗಳು ಇಷ್ಟೇಎನ್ನೋ ಶಬ್ಧ ಬಂದಾಗ ಕೊನೆಗೊಳ್ಳುತ್ತವೆ. ಯಾವುದೇ ವ್ಯಕ್ತಿ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಾಗ ನಿರಾಸಕ್ತಿ ಮೂಡುತ್ತದೆ. ಇದು ವಸ್ತುಗಳಿಗೂ ಸಂಬಂಧಗಳಿಗೂ ಅನ್ವಯಿಸಲ್ಪಡುತ್ತದೆ. ನಿಮ್ಮ ಪರಮಾಪ್ತ ಗೆಳೆಯ ಅಥವಾ ಗೆಳತಿ ಹಾಡುಗಾರಿಕೆಯನ್ನೋ, ಬರಹವನ್ನೋ, ಚಿತ್ರಕಲೆಯನ್ನೋ ತಮ್ಮ ಪ್ರವೃತ್ತಿಯನ್ನಾಗಿ, ಹವ್ಯಾಸವನ್ನಾಗಿ ಸ್ವೀಕರಿಸಿದ್ದಾರೆಂದಿಟ್ಟುಕೊಳ್ಳಿ. ಮೊದಲು ಆ ವ್ಯಕ್ತಿ ಪರಿಚಯವಾದಾಗ ಅವರ ಹವ್ಯಾಸಗಳ ಬಗ್ಗೆ, ವಿಶೇಷತೆಗಳ ಬಗ್ಗೆ ಒಂದು ಅಭಿಮಾನ, ಕುತೂಹಲ ಇರುತ್ತದೆ. ಆದರೆ, ಅದೇ ವ್ಯಕ್ತಿ ನಿಮಗೆ ಹತ್ತಿರವಾಗುತ್ತಾ ಹೋದಂತೆ ಸಂಬಂಧದ ಕುತೂಹಲ, ಆಸಕ್ತಿ ಕಡಿಮೆಯಾಗುತ್ತದೆ. ಅಯ್ಯೋ ಅವನೋನು ಮೊದಲಿನಿಂದಾ ಮಾಡಿಕೊಂಡು ಬಂದಿದ್ದಾನೆ/ಳೆ ಅಂತಾ ಸಿದ್ಧಿಸಿದ ಕಲೆಯನ್ನು ಅವಗಣಿಸುತ್ತೇವೆ. ಹಾಗಾಗಿ ಸಂಬಂಧಗಳು ಕೊನೆಗೊಳ್ಳುವುದು ವ್ಯಕ್ತಿಗಳ ನಡುವಿನ ಸಮಾನ ಆಸಕ್ತಿಗಳು, ಅಭಿರುಚಿಗಳು ಕಡಿಮೆಯಾಗುತ್ತಾ ಬಂದು ಕೊನೆಗೆ ಸಂಬಂಧವೂ ತನ್ನ ಆಕರ್ಷಣೆ ಕಳೆದುಕೊಳ್ಳುತ್ತದೆ. ಇವನು ಇಷ್ಟೇ. ಇವಳು ಇಷ್ಟೇ ಅಂತಾ ಒಂದು ಗೆರೆ ಕೊರೆದಂಗೆ ಹೇಳಿಬಿಡುತ್ತೇವೆ. ಆಗಲೇ ಸಂಬಂಧ ಅರ್ಥ ಕಳೆದುಕೊಳ್ಳೋದು.

    “ಇಷ್ಟೇನಾಕಥೆ ಇದಕ್ಕೆ ಸಂಪೂರ್ಣ ವೈರುಧ್ಯದ್ದು. ಇಷ್ಟೇ ಅನ್ನೋದು ನಕಾರಾತ್ಮಕವಾಗಿ ನಿರಾಸಕ್ತಿಯನ್ನು ಹೊರಹೊಮ್ಮಿಸಿದರೆ, ಇಷ್ಟೇನಾ ಅನ್ನೋದೂ ಕೂಡಾ ಕೆಲವೊಮ್ಮೆ ಶಕ್ತಿ ಸಾಮರ್ಥ್ಯಗಳ ಅವಗಣನೆಗೆ, ಅವಹೇಳನೆಗೆ ಬಳಸಲ್ಪಡುತ್ತದೆ. “ನಿನ್ನ ಕೈಲಾಗೋದು ಇಷ್ಟೇನಾಅನ್ನೋದನ್ನ ಕೇಳ್ತಾನೇ ಇರ್ತೀವಿ. ಆದರೆ, “ಜೀವನ ಅಂದ್ರೆ ಇಷ್ಟೇನಾ?” ಅಂತಾ ಒಂದು ಪ್ರಶ್ನೆ ನಮ್ಮೊಳಗೆ ಒಮ್ಮೊಮ್ಮೆ ತೂರಿ ಬರುತ್ತಲ್ಲಾ ಆವಾಗಲೆಲ್ಲಾ ಅದು ಏನಾದರೊಂದನ್ನ ಹೊಸದನ್ನ ಹೊರಹೊಮ್ಮಿಸಲಿಕ್ಕೆ ಅದಮ್ಯ ಚೈತನ್ಯವನ್ನೊದಗಿಸುತ್ತದೆ. ಬದುಕಿನ ಜೀವದ್ರವ್ಯವಾಗುತ್ತದೆ. ನಮ್ಮೆಲ್ಲ ಕಾರ್ಯಕಲಾಪಗಳನ್ನ ವಿಮರ್ಶೆ ಮಾಡುತ್ತೆ. ಇಷ್ಟೇನಾ ಅನ್ನೋ ಪ್ರಶ್ನೆ ಬಂದಾಗಲೆಲ್ಲಾ ಅದು ಇನ್ನೂ ಇದೆಅನ್ನೋ ಸಕಾರಾತ್ಮಕ ಉತ್ತರವನ್ನೇ ದೊರಕುವಂತೆ ಮಾಡುತ್ತದೆ. ಇಲ್ಲಿವರೆಗೂ ಬದುಕಿದ ರೀತಿಯನ್ನ ಒಮ್ಮೆ ನೆನೆಸಿಕೊಳ್ಳಿ. ನಾನು ಅದನ್ನ ಮಾಡಿದ್ದೇನೆ. ಇದನ್ನ ಮಾಡಿದ್ದೇನೆ ಎಂದೆಲ್ಲಾ ಹೇಳಬಹುದು. ಆದರೂ ಒಂದೇ ಒಂದು ಝಲಕ್‌ನಲ್ಲೇ ಎಲ್ಲಾ ಮುಗಿದು ಹೋಗುತ್ತದೆ ಎನಿಸುತ್ತದೆ. ಇಷ್ಟೇನಾಅನ್ನೋ ಪ್ರಶ್ನೆ ಮತ್ತೆ ಮತ್ತೆ ಕಾಡಿಸುತ್ತದೆ. ಆಗಲೇ ಬದುಕಿನ ಬಗೆಗಿನ ಒಳಾರ್ಥಗಳು ಅನಾವರಣಗೊಳ್ಳತೊಡಗುತ್ತವೆ. ಬಂದ ದಾರಿ ಬಗ್ಗೆ ತೃಪ್ತಿ, ಮಾಡಬೇಕಾದ ಸಾಧನೆಯ ಬಗೆಗೆ ಅತೃಪ್ತಿ ಇದ್ದಾಗ ಬದುಕು ಸಾಧನೆಯ ಹಾದಿಯಲ್ಲಿ ಔನ್ನತ್ಯವನ್ನರಸಲಿಕ್ಕೆ ಅನುವಾಗುತ್ತದೆ. ಅದಕ್ಕೇ ಹೇಳಿದ್ದು ಇದು ಬದುಕಿನ ವ್ಯಾಕರಣ..!


Categories: ಮನದ ಮಾತು

ಯಾರಿಗುಂಟು ಯಾರಿಗಿಲ್ಲ. 3,000 ರೂ ಗೆ 100 ಪುಸ್ತಕಗಳು..! (ನೂರಿನ್ನೂರು ರೂ ಪುಸ್ತಕಗಳು ಸರಾಸರಿ 30ರ ಅತಿ ಸುಲಭ ಬೆಲೆಯಲ್ಲಿ!)

February 7, 2008 · 1 Comment

 

    ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೇ ತನ್ನ ಬಳಗನೆಲ್ಲವ? ಅನ್ನೋ ಶರಣರ ವಚನವಿದೆ.(ನಾನೇನೂ ಕಾಗೆಯಷ್ಟು ಕಪ್ಪಗಿಲ್ಲಪ್ಪ..!) ನಾನಂತೂ 3000 ಕೊಟ್ಟು 100 ಪುಸ್ತಕ ಕೊಂಡದ್ದಾಯಿತು. ಇನ್ನು ಊರವರಿಗೆಲ್ಲಾ ಕೊಡಿಸುವ “ಕಾಯಕ”..!

 

    ಸುವರ್ಣ ಕರ್ನಾಟಕ ವರ್ಷಾಚರಣೆಯ ಸುಸಂದರ್ಭದಲ್ಲಿ “ಸುವರ್ಣ ಸಾಹಿತ್ಯ ಗ್ರಂಥಮಾಲೆ” ಅನ್ನೋ ಯೋಜನೆಯಡಿಯಲ್ಲಿ ಸೃಜನಶೀಲ ಮತ್ತು ಸೃಜನೇತರ 100 ಪುಸ್ತಕಗಳನ್ನು ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳ ಮುಖಾಂತರ ಆಯ್ಕೆ ಮಾಡಿ, ಅಚ್ಚು ಹಾಕಿಸಿ ಸುಲಭ ಬೆಲೆಗೆ ಮಾರಾಟದ ವ್ಯವಸ್ಥೆ ಮಾಡಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ ಕನ್ನಡ ಸಾಹಿತ್ಯದ ಮಹತ್ವದ ಕಾಲಘಟ್ಟಗಳನ್ನು ನೆನಪಿಸುವ ಎಲ್ಲ ಪ್ರಕಾರದ ಪುಸ್ತಕಗಳು ಲಭ್ಯ. ಬಿಡಿ ಪುಸ್ತಕಗಳೂ ಲಭ್ಯ. ಬಿಡಿ ಪುಸ್ತಕವೊಂದಕ್ಕೆ ಬೆಲೆ ರೂ 25 ರಿಂದ 50. ಒಮ್ಮೆಗೇ ಕೊಂಡರೆ 3,620 ರೂ ಬೆಲೆಯ 100 ಪುಸ್ತಕಗಳ ಪುಸ್ತಕಗಳ ಬೆಲೆ 3,000

 

 

 

   ಬಿಡಿಯಾಗಿ ಬೇರೆ ಅಂಗಡಿಗಳಲ್ಲಿ ಖರೀದಿ ಮಾಡಿದರೆ 10,000 ಕ್ಕಿಂತ ಕಡಿಮೆಯಾಗದು ಎಂಬ ಅಂದಾಜು.

 

 

 

ಕುವೆಂಪು, ತೀ.ನ.ಶ್ರೀ, ಶಿವರುದ್ರಪ್ಪ, ಪುತಿನ, ಚನ್ನವೀರ ಕಣವಿ, ತೇಜಸ್ವಿ, ಯು.ಆರ್.ಅನಂತ ಮೂರ್ತಿ, ಗಿರೀಶ್ ಕಾರ್ನಾಡ್, ಹಾಮಾನಾ, ತ್ರಿವೇಣಿ, ಕುಂ.ವೀರಭದ್ರಪ್ಪ, ಶಾಂತರಸ, ಸಿದ್ಧಲಿಂಗಯ್ಯ, ವ್ಯಾಸರಾಯ ಬಲ್ಲಾಳ, ಶಂಕರ ಮೊಕಾಶಿ ಪುಣೇಕರ, ವಿ.ಕೃ. ಗೋಕಾಕ್, ಎಂ.ಕೆ.ಇಂದಿರಾ, ಚದುರಂಗ, ಬಿ.ಜಿ.ಎಲ್.ಸ್ವಾಮಿ, ಕೆ.ಎಸ್.ನರಸಿಂಹಸ್ವಾಮಿ, ದೇ.ಜ.ಗೌ, ಹೆಚ್.ನರಸಿಂಹಯ್ಯ, ಕೆ.ಎಸ್.ನಿಸ್ಸಾರ್ ಅಹಮದ್, ನಾ.ಕಸ್ತೂರಿ, ಜಿ.ಪಿ.ರಾಜರತ್ನಂ, ಸಿ.ಆರ್.ಚಂದ್ರಶೇಖರ್, ಆಲೂರು ವೆಂಕಟರಾಯರು, ಎಂ.ಎಂ.ಕಲಬುರ್ಗಿ, ಎಂ.ಚಿದಾನಂದಮೂರ್ತಿ ಮುಂತಾದ ಅನೇಕಾನೇಕರು ಬರೆದ ಶ್ರೇಷ್ಠ ಕೃತಿಗಳು

 

 

 

ಕಾದಂಬರಿಗಳು, ಕಥಾಸಂಕಲನಗಳು, ಜೀವನ ಚರಿತ್ರೆ,ವೈಚಾರಿಕ – ವೈಜ್ಞಾನಿಕ ಲೇಖನಗಳು, ವಿಮರ್ಶಾ ಸಂಪುಟ, ಕಥಾ ಸಂಪುಟ, ಜಾನಪದ ಸಂಪುಟ, ಪ್ರಬಂಧ ಸಂಪುಟ, ಕಾವ್ಯ ಸಂಪುಟ ಮುಂತಾದ ಸೃಜನಶೀಲ ಮತ್ತು ಸೃಜನೇತರ ಕೃತಿಗಳು.

 

ಸಿಗುವ ಸ್ಥಳ : ಕನ್ನಡ ಭವನ, ನೆಲಮಹಡಿ(ನೆಲಮನೆ) (ರವೀಂದ್ರ ಕಲಾಕ್ಷೇತ್ರದ ಪಕ್ಕ / ಟೌನ್ ಹಾಲ್ ಪಕ್ಕ)

 

 

 

ಸಮಯ : ಬೆಳಗ್ಗೆ 10ರಿಂದ ಸಂಜೆ 5ರವರೆಗೆ.

 

 

 

ಒಂದು ಸೆಟ್ ಪುಸ್ತಕ ಕೊಳ್ಳುವುದಾದರೆ ಜೊತೆಗೆ ಇನ್ನೊಬ್ಬರನ್ನು ಕರೆದೊಯ್ಯುವುದು ಒಳಿತು. ಎರಡು ರಟ್ಟಿನ ಡಬ್ಬಿ ತುಂಬ ಪುಸ್ತಕಗಳಿರುತ್ತವೆ.

 

 

 

ಆಫರ್ ಎಲ್ಲಿವರೆಗೆ : ಪುಸ್ತಕಗಳು ಇರುವವರೆಗೆ. ಒಂದೊಂದು ಪುಸ್ತಕಗಳನ್ನೂ 3000 ಪ್ರತಿ ಹಾಕಿಸಿದ್ದಾರೆ. ಇನ್ನೂ ಒಂದು ತಿಂಗಳು ಸಿಗುವ ನಿರೀಕ್ಷೆ. ತಡ ಮಾಡದೆ, ಈ ಸುಸಂದರ್ಭ ಬಳಸಿಕೊಳ್ಳಿ.

 

 

 

   ಸರ್ಕಾರದ ಈ ಯೋಜನೆಯನ್ನ ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸರ್ಕಾದವರು ಒಮ್ಮೊಮ್ಮೆ ಒಳ್ಳೇ ಕೆಲಸಗಳನ್ನ ಮಾಡುತ್ತಾರೆ. ಆ ಒಳ್ಳೇ ಕೆಲಸಗಳ ಲಾಭ ಪಡೆಯಬೇಕು. ಅದೂ ಕೂಡಾ ಸಕಾಲದಲ್ಲಿ.

 

 

 

   ಇನ್ನೊಂದು ವಿಷ್ಯ. ಒಂದು ಜೊತೆ ರೀಬಾಕ್ ಶೂ ತೊಗೋಳ್ಳೋಕೆ 2500 ರಿಂದ 3000 ಬೇಕು. ಇನ್ನೂ ಜಾಸ್ತಿನೇ ಬೇಕಾಗಬಹುದು. ಜೀವಮಾನಕ್ಕಾಗುವಷ್ಟು ಪುಸ್ತಕಗಳನ್ನ ಕೊಂಡುಕೊಳ್ಳಲಿಕ್ಕೆ ಇಷ್ಟೂ ಖರ್ಚು ಮಾಡದಿದ್ದರೆ..?

     

Categories: ಮನದ ಮಾತು · ಮಾಹಿತಿ
Tagged: , ,