ಪ್ರತಿಸ್ಪಂದನ – Pratispandana

Entries from March 2008

ಹೊಗೇನಕಲ್ : ಅಷ್ಟಕ್ಕೂ, ಧಮಕಿಗಳಿಗೆ ಧಮಕಿಗಳಿಂದಲೇ ಉತ್ತರಿಸಬೇಕಲ್ಲವಾ?

March 31, 2008 · Leave a Comment

    ತಮಿಳ್ನಾಡು ಕರ್ನಾಟಕಕ್ಕೆ ಹೆಂಗೆ ಅಂದ್ರೆ ಭಾರತಕ್ಕೆ ಪಾಕಿಸ್ಥಾನ ಹೆಂಗೋ ಹಂಗೆ ಅಂತಾ ಸಲೀಸಾಗಿ ಹೇಳಿಬಿಡಬಹುದು. ಕನ್ನಡಿಗರದ್ದು ಮೊದಲು ಭಾಷಾ ನಿರಭಿಮಾನ ಆಗಿತ್ತು. ಈಗ ಕನ್ನಡಿಗರು ಜಾಗೃತರಾಗಿದ್ದಾರೆ. ಭಾಷಾ ಅಭಿಮಾನ ಮೊಳಕೆಯೊಡೆಯುತ್ತಿದೆ. ಅಸಲಿಗೆ ಕನ್ನಡಿಗರದ್ದು ಸೌಮ್ಯ ಸ್ವಭಾವ. ಆದರೆ ಸೌಮ್ಯವಾದವೂ ತೀವ್ರತೆಗೆ ತಿರುಗಲಿಕ್ಕೆ ಪ್ರಚೋದನೆ ಕೂಡಾ ಕಾರಣವಾಗುತ್ತದೆ. ಈಗ ಕರುಣಾನಿಧಿ ನೀಡಿರುವ ಧೋರಣೆ ರಾಷ್ಟ್ರೀಯವಾದಕ್ಕೆ ಧಕ್ಕೆ ತರುವಂಥದ್ದು. ತಮಿಳರದ್ದು ಭಾಷಾ ಉಗ್ರವಾದ. ಈ ಉಗ್ರವಾದ ಉಭಯತರರಿಗೂ ಉತ್ತಮವಾದದ್ದಲ್ಲ. ಕರುಣಾನಿಧಿಗೆ ವಯಸ್ಸಾದ್ರೂ ಬುದ್ಧಿ ಬಲಿತಿಲ್ಲ, ಬಂದಿದ್ದರೆತಾನೇ ಬಲಿಯೋದು..? ಭಾಷೆ, ನೆಲ,ಗಡಿ, ಜಲ, ಧರ್ಮ ಎಲ್ಲವುಗಳು ಅಫೀಮಿನಂತೆ. ಒಮ್ಮೆ ಅದರ ದಿಕ್ಕಿನಲ್ಲಿ ಮತ್ತಿನಲ್ಲಿ ಯೋಚಿಸತೊಡಗಿದಾಗ ಬುದ್ಧಿ ಕುರುಡಾಗುತ್ತದೆ. ಸೌಹಾರ್ದತೆ ಬಯಸುವ ನೆಲದ ಎಲ್ಲರೂ ಹಿರಿತನ, ಮುತ್ಸದ್ದಿತನ, ವಿವೇಚನೆ ಮೈಗೂಡಿಸಿಕೊಂಡಿರಬೇಕು. ಅವಿವೇಕ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಈ ಒಣ ಪ್ರತಿಷ್ಟೆ ರಾಜಕೀಯದ ಧುರೀಣರಿಗೆ ನಾಯಕತ್ವದ, ವೋಟಿನ ರಾಜಕೀಯದ ಅವಕಾಶಗಳನ್ನ, ಪುಕ್ಕಟೆ ಒದಗಿಸುತ್ತವೆ ಅಷ್ಟೇ. 

     ಹೊಗೇನಕಲ್ ಜಲಪಾತ ವಿವಾದ ಹೊಗೆಯಾಡಲಿಕ್ಕೆ ತಮಿಳ್ನಾಡಿನ ಕೊಡುಗೆ ಅಪಾರ. ಆದರೆ ವಿವಾದಗಳಲ್ಲಿ, ವಿವೇಚನಾ ರಾಹಿತ್ಯದ ಹೇಳಿಕೆಗಳಿಂದ ನಷ್ಟಕ್ಕೆ, ಸಂಕಷ್ಟಕ್ಕೆ ಈಡಾಗುವವರು ಮಾತ್ರ ಅಮಾಯಕ ಜನ. ಈಗ ಆಗುತ್ತಿರುವುದೂ ಅದೇ. ಕರ್ನಾಟಕ ರಕ್ಷಣಾ ವೇದಿಕೆಯವರು ಬೆಂಗಳೂರಿನಲ್ಲಿ ತಮಿಳು ಚಿತ್ರ ಪ್ರದರ್ಶನ ಬಂದ್‌ಗೊಳಿಸಿದ್ದಾರೆ. ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಇರುತ್ತದೆ ಎನ್ನೋದನ್ನ ಕರುಣಾನಿಧಿ ಅರ್ಥ ಮಾಡಿಕೊಂಡರೆ ಒಳಿತು. ರಾಜ್‌ಕುಮಾರ್ ಅಪಹರಣವಾದಾಗ ಬೆಂಗಳೂರು ಸ್ತಬ್ಧವಾಗಿದ್ದನ್ನ ಮಾನ್ಯ ಕರುಣಾನಿಧಿಯವರು ನೆನಪಿಸಿಕೊಂಡರೆ ಒಳ್ಳೇದು. ತಮಿಳ್ನಾಡಿನಲ್ಲಿ ಆ ತಲೆಕೆಟ್ಟ ಕರುಣಾನಿಧಿ ಅವಿವೇಕದ ಅತಿರೇಕದ ಹೇಳಿಕೆ ನೀಡಿದರೆ, ಇಲ್ಲಿನ ತಮಿಳರೇನು ಮಾಡಿದ್ದಾರೆ ಅವರನ್ನ ಹಿಂಸಿಸಲಿಕ್ಕೆ ಅನ್ನೋದು ಹಲವು ತಮಿಳರ ಪ್ರಶ್ನೆ. ಆದರೆ, ಹಕ್ಕು ಚಲಾವಣೆಗೆ ನಿಂತಾಗ ಸರಿ ತಪ್ಪುಗಳು ಗೌಣವಾಗುತ್ತವೆ. ಕೇವಲ ಪ್ರತಿಷ್ಟೆ ಮುಖ್ಯವಾಗಿಬಿಡುತ್ತದೆ. ಈಗ ಆಗುತ್ತಿರುವುದೂ ಅದೇ. ಆದರೆ, ತಮಿಳರೇನೂ ಸಾಚಾ ವ್ಯಕ್ತಿಗಳಲ್ಲ. ಪ್ರಭುತ್ವ, ಹಕ್ಕು ಚಲಾವಣೆಗೆ ನಿಂತಾಗ ಎತ್ತಿದಕೈ. ನಿದರ್ಶನಕ್ಕಾಗಿ, ಬೆಂಗಳೂರಿನ H.A.L, N.A.L ಸರಕಾರೀ ಸಂಸ್ಥೆಗಳನ್ನೇ ತೆಗೆದುಕೊಳ್ಳಿ. ಅರ್ಧಕ್ಕರ್ಧ ತಮಿಳರೇ ತುಂಬಿದ್ದಾರೆ.  ಕಸ ಹೊಡಿಯೋ ಜವಾನರಿಂದ ಹಿಡಿದು ಅಡಿಗೆ ಮಾಡೋ ಭಟ್ಟ, ಕಾಂಟ್ರಾಕ್ಟರು, ಎಲ್ಲರೂ ತಮಿಳರೇ. ಕನ್ನಡದವರಿಗೇನು ಈ ಕೆಲಸಗಳು ಬರುವುದಿಲ್ಲವೇ? ಅರ್ಹರಲ್ಲವೇ? ತಮಿಳರು ಪ್ರಾಬಲ್ಯ ಮೆರೆಯಲು ಕಾರಣವೇನು? ಅದೂ ಕರ್ನಾಟಕದಲ್ಲಿ? ದೆಹಲಿ ರಾಜಕೀಯ ನಿಯಂತ್ರಿಸಿ, ಕೇಂದ್ರವನ್ನ ಕೈಯ್ಯಲ್ಲಿ ಹಿಡಿದು ಅಲ್ಲಾಡಿಸುವ ತಮಿಳರು ಯಾವ ಮಟ್ಟಕ್ಕಾದರೂ ಇಳಿಯಬಲ್ಲರು.  ಈ ಸರಕಾರಿ ಸಂಸ್ಥೆಗಳಲ್ಲಿ ಆಗಾಗ ಕನ್ನಡಿಗ, ತಮಿಳರ ಮಧ್ಯೆ ವಾಗ್ವಾದ, ಜಗಳಗಳು ನೆಡೆಯುತ್ತಲೇ ಇರುತ್ತವೆ. N.A.L. ನಲ್ಲಿ ಟಿಫನ್ ಚೀಟಿ ಕೊಡುವ ತಮಿಳ ಅನ್ನ-ಸಾಂಬಾರ್ ಅಂದರೆ ಮುಖ ಮುಖ ನೋಡ್ತಾನೆ. ಅವನಿಗೆ ಸಾಂಬಾರ್‌ಭಾತ್ ಅಂತಾನೇ ಅನ್ನಬೇಕು. ರಾಗಿ ಮುದ್ದೆ ಕೊಡು ಅಂದ್ರೂ ಹೀಂಗೇನೇ ಸತಾಯಿಸುತ್ತಾನೆ. ರಾಗಿ ಬಾಲ್ ಅನ್ನಬೇಕಂತೆ..! ಆತನಿಗೇನೂ ಕನ್ನಡ ಪದಗಳೇನೂ ಅಪರಿಚಿತವಲ್ಲ. ಇಲ್ಲಿನವರು ತನಗೇ ‘Adjust’ ಆಗಲೆನ್ನುವ ಬಯಕೆ. ಇದನ್ನ ತಮಿಳರ ಹಟಮಾರಿತನ, ಪುಂಡಾಟಿಕೆ, ಉಗ್ರವಾದವೆನ್ನದೇ ಮತ್ತೇನನ್ನಬಹುದು? 

    ‘ಕರ್ನಾಟಕ ಕನ್ನಡಿಗರಿಗೆ’ ಅನ್ನೋ ಘೋಷಣೆ ಮುಗಿಲು ಮುಟ್ಟುವುದಕ್ಕೆ ಕನ್ನಡಪರ ಕಾಳಜಿ ಅಷ್ಟೇ ಅಲ್ಲ.  ಕನ್ನಡಿಗರ ಕಾರ್ಯಕ್ಷೇತ್ರಗಳಲ್ಲಿ ಕನ್ನಡಿಗರನ್ನು ಕಾಡುತ್ತಿರುವ ‘insecurity’ ಕೂಡಾ ಕಾರಣ. ಕನ್ನಡದವರ ಕೆಲಸಗಳನ್ನ ಕಬಳಿಕೆ ಮಾಡುತ್ತಿರುವುದು, ಕನ್ನಡನಾಡಿನಲ್ಲಿ ಕನ್ನಡಿಗರನ್ನೇ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವುದು ಎಲ್ಲವೂ ಕಣ್ನಿಗೆ ರಾಚುವಷ್ಟು ಸ್ಪಷ್ಟವಾಗಿವೆ. ಕರ್ನಾಟಕ ರಕ್ಷಣಾ ವೇದಿಕೆ ಇಲ್ಲದಿದ್ದಿದ್ದರೆ, ಇಷ್ಟು ಹೊತ್ತಿಗೆ ತಮಿಳರ ಉಪಟಳ, ಪ್ರಾಬಲ್ಯ ಇನ್ನೂ ಮುಗಿಲಿಗೇರುತ್ತಿತ್ತು.  ಕನ್ನಡಿಗರಿಗೊಂದು, ಕನ್ನಡದವರಿಗೊಂದು ಸಂಸ್ಥೆ ಇಲ್ಲ ಅಂತಾ ಹೋಗಿದ್ರೆ, ಪರಭಾಷಿಕರ ಉಪಟಳ ಸಹಿಸಲಸಾಧ್ಯವಾಗುತ್ತಿತ್ತು.

    ಕರ್ನಾಟಕದಲ್ಲಿರುವ, ಅದರಲ್ಲೂ ಬೆಂಗಳೂರಿನ ತಮಿಳರು ಹೀಗೆ ಅಡಕತ್ತರಿಯಲ್ಲಿ ಸಿಲುಕಿದಾಗಲೆಲ್ಲಾ, ಸೌಹಾರ್ದತೆಯ ಮಂತ್ರ ಜಪಿಸುತ್ತಾರೆ. ಅದೇ ತಮಿಳ್ನಾಡಿಗೆ ಹೋದಾಗ, ಕರ್ನಾಟಕದ ವಿರುದ್ಧ ಕಿಡಿಕಾರದಿದ್ದರೆ ಹೇಳಿ. ಇದೆಲ್ಲವೂ ಒಂದೇ ಮಾತಿನಲ್ಲಿ ಹೇಳುವುದಾದರೆ, ನೆರೆ ರಾಜ್ಯದ ‘ಉಗ್ರವಾದ’. ತಮಿಳರದ್ದು ಎಲ್ಲಿ ಹೋದರೂ ಅಲ್ಲಿನ ನೆಲದ ಸಂಸ್ಕೃತಿಗೆ ಹೊಂದಿಕೊಳ್ಳುವ ಜಾಯಮಾನದವರಲ್ಲ. ಪಕ್ಕದ ಶ್ರೀಲಂಕಾದಲ್ಲೂ ತಮಿಳು ಉಗ್ರರ ಹೋರಾಟ ನೆಡೆದೇ ಇದೆ. ನೆರೆಯ ಆಂಧ್ರದ ಹಲವಾರು ಮಂದಿ ಕರ್ನಾಟಕದಲ್ಲಿ ಇದ್ದಾರೆ. ಅವರಲ್ಲಿ ಹಲವರ ಬಗೆಗೂ ನಮ್ಮಲ್ಲಿ ಅಸಹನೆಗಳಿವೆ. ರೆಡ್ಡಿಗಳು ಮಾಡಿದ, ಮಾಡುತ್ತಿರುವ ಹಗರಣಗಳು, ಭೂ ಕಬಳಿಕೆಗಳು ಒಂದೇ ಎರಡೇ? ಆದರೂ ಆಂಧ್ರದವರ ಬಗೆಗೆ ಅಷ್ಟೊಂದು ದುಷ್ಮನಿ ಇಲ್ಲ. ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ತಂಟೆ ತೆಗೆದರೂ ಸಂಬಂಧ ಅಷ್ಟೇನೂ ಹಳಸಿಲ್ಲ. ಆದರೆ, ತಮಿಳ್ನಾಡು.. ಊಹೂಂ. ಹಂಗಾಗುವುದೇ ಇಲ್ಲ. ತಮಿಳ್ನಾಡಿನ T.N. ಸಿರೀಸಿನ ಗಾಡಿಗಳನ್ನ ಕಂಡಾಗ ಅಸಹನೆಯ ಕಿಡಿ ಹೊತ್ತಿಕೊಳ್ಳುತ್ತದೆ. ಯಾವ ಗಾಡಿಗಳ ಮೇಲೂ ಕನ್ನಡದ ಊರಿನ ಹೆಸರುಗಳು ಕನ್ನಡದಲ್ಲಿರುವುದಿಲ್ಲ. ಆದ್ರೆ, ಕರ್ನಾಟಕದಿಂದ ತಮಿಳ್ನಾಡಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ.ಬಸ್ಸುಗಳು ಕನ್ನಡ ತಮಿಳು ಎರಡೂ ಭಾಷೆಗಳನ್ನ ಹೊಂದಿರುತ್ತವೆ. ಇನ್ನು ಟ್ರೈನು ಬೋರ್ಡು ನೋಡಿ ಒಮ್ಮೆ. ತಮಿಳ್ನಾಡಿಗೆ ಹೋಗುವ ಟ್ರೈನಿನ ಮೇಲೆ ಊರುಗಳ ಹೆಸರುಗಳು ತಮಿಳಿನಲ್ಲಿ ಮತ್ತು ಇಂಗ್ಳೀಷಿನಲ್ಲಿ ಮಾತ್ರ ಇರುತ್ತವೆ. ಬೆಂಗಳೂರಿನಿಂದ ಬಿಡುವ ಟ್ರೈನುಗಳೂ.

    ವಿವಾದ ಸುಪ್ರೀಂ ಕೋರ್ಟಿನಲ್ಲಿರುವಾಗ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದು ನ್ಯಾಯಾಂಗ ನೀತಿ ಉಲ್ಲಂಘನೆಯಲ್ಲವೇ? ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡಿ, ಕನ್ನಡಿಗರು ಮತ್ತು ತಮಿಳರ ನಡುವೆ ಜಗಳ ಹುಟ್ಟುಹಾಕಿ ರಾಜಕೀಯ ಲಾಭ ಪಡೆಯುವುದು ಮತ್ತು ಕರ್ನಾಟಕದಲ್ಲಿ ಜನಪ್ರತಿನಿಧಿ ಸರ್ಕಾರದ ಅನುಪಸ್ಥಿತಿಯ ಉಪಯೋಗ ಪಡೆಯುವುದು, ಮುಂದಿನ ಚುನಾವಣೆಗೆ ಸಿದ್ಧವಾಗುವುದು ಎಲ್ಲವೂ ಕರುಣಾನಿಧಿಯ ಅಜೆಂಡಾದಲ್ಲಿ ಸೇರಿವೆ. ಇನ್ನು ಬೆಂಗಳೂರಿನ ತಮಿಳರು ಕನ್ನಡ ಬಾವುಟ ಹಿಡಿದು ಓಡಾಡುವ ಪರಿಸ್ಥಿತಿ ಬಂದರೂ ಬರಬಹುದು.

ಅಷ್ಟಕ್ಕೂ ಧಮಕಿಗಳಿಗೆ, ಧಮಕಿಗಳಿಂದಲೇ ಉತ್ತರಿಸಬೇಕಲ್ಲವಾ?

Categories: ಮನದ ಮಾತು
Tagged: , , , , , ,

ಮೌನವೇಕೆ..?

March 19, 2008 · Leave a Comment

     ಪಕ್ಕದ ಚೀನಾದಲ್ಲಿ ಟಿಬೆಟ್ ಸ್ವಾಯತ್ತತೆಗಾಗಿ ಹೋರಾಟ ತೀವ್ರಗೊಂಡಿದೆ. ಬೌದ್ಧ ಬಿಕ್ಷುಗಳು ಲ್ಹಾಸಾದಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಲ್ಹಾಸಾ ಅಕ್ಷರಶಃ ಬೆಂಕಿಯುಂಡೆಯಂತಾಗಿದೆ. ತಾತ್ಕಾಲಿಕ ಶಮನ ಕಂಡರೂ, ಬೂದಿ ಮುಚ್ಚಿದ ಕೆಂಡ. ಸರ್ವಾಧಿಕಾರಿ ಧೋರಣೆಯ ಚೀನಾ ಪ್ರತಿಭಟನಾಕಾರರಿಗೆ ‘Dead’line ನೀಡಿದ್ದು ಮುಗಿದಿದೆ. ಹೋರಾಟವನ್ನು ಹತ್ತಿಕ್ಕಲಿಕ್ಕೆ ಹರಸಾಹಸ ಮಾಡುತ್ತಲೇ ಇದೆ.  ಹತ್ತಿಕ್ಕಿದಷ್ಟೂ ಹೋರಾಟ ತೀವ್ರತೆ ಪಡೆಯುತ್ತದೆ. ಅದೇ ಈಗ ನೆಡೆಯುತ್ತಿರುವುದು. ಹೋರಾಟಗಾರರನ್ನು ಮಾತುಕತೆಗೆ ಆಹ್ವಾನಿಸುವುದು ಸರ್ವಾಧಿಕಾರಿ, ಸಾಮ್ರಾಜ್ಯಶಾಹೀ ಚೀನಾ ಆಡಳಿತಗಾರರಿಗೆ ಗೊತ್ತಿಲ್ಲ. ಅಷ್ಟಕ್ಕೂ ಟಿಬೆಟ್ಟಿಯನ್ನರು ಕೇಳುತ್ತಿರುವುದಾದರೂ ಏನನ್ನ? ಮೊದಲು ಸಂಪೂರ್ಣ ಸ್ವತಂತ್ರ ಕೇಳುತ್ತಿದ್ದವರು ಈಗ ಕೇವಲ ಸ್ವಾಯತ್ತತೆ ಕೇಳುತ್ತಿದ್ದಾರೆ. ಪ್ರತ್ಯೇಕತೆ ಬದಲಾಗಿ ಸ್ವಾಯತ್ತತೆ, ಟಿಬೆಟ್ಟಿಯನ್ನರ ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಅದನ್ನೂ ಚೀನಾ ಕಾನೂನಿನ ಅಡಿಯಲ್ಲಿ ರಕ್ಷಿಸಲಾಗಿರುವ ಹಕ್ಕುಗಳ ಮುಖಾಂತರವಾಗಿ. ಟಿಬೆಟನ್ನ ಆಕ್ರಮಿಸಿಕೊಂಡು, ಅದರ ಸಕಲ ಸಂಪನ್ಮೂಲವನ್ನೂ ಬಳಸಿಕೊಳ್ಳುತ್ತಿರುವ ಚೀನಾ ಅಲ್ಲಿನ ಜನರಿಗೆ ನ್ಯಾಯ ಒದಗಿಸುವುದು ತರವಲ್ಲವೇ?  ಟಿಬೆಟ್ಟಿನ ಜನ ಸರಿಯಾದ ಸಮಯಕ್ಕೇ ಹೋರಾಟ ಶುರು ಮಾಡಿದ್ದಾರೆ. ಒಲಂಪಿಕ್ ಕ್ರೀಡಾಕೂಟ ನೆಡೆಯುವ ಸಮಯ. ಚೀನಾವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆಡಳಿತಗಾರರಿಗೆ ಪಾಠ ಕಲಿಸಲು ಸರಿಯಾದ ಸಮಯ. ಯಾವ ಕೆಲಸಗಳನ್ನೂ ಮಾಡದೇ ಓಟು ಕೇಳಲಿಕ್ಕೆ ಹೋಗುವ ರಾಜಕಾರಣಿಗಳಿಗೆ ಮತದಾರರು ಚುನಾವಣಾ ಸಮಯದಲ್ಲಿ ಬುದ್ಧಿ ಕಲಿಸುವುದಿಲ್ಲವೇ ಅದೇ ಥರ.

     ಇಲ್ಲಿ ನಾನು ಹೇಳ ಹೊರಟಿರುವುದು ಭಾರತೀಯ ರಾಜಕೀಯ ಆಡಳಿತಗಾರರ ನಿಷ್ಕ್ರಿಯತೆಯನ್ನು. ವಿದೇಶಾಂಗ ಇಲಾಖೆಯಲ್ಲಿ ಯಾರೂ ಎದೆಗಾರಿಕೆಯನ್ನು ಹೊಂದಿದವರಿಲ್ಲವೇ? ಚೀನಾದಲ್ಲಿ ಟಿಬೆಟಿಯನ್ನರ ಹತ್ಯೆನೆಡೆಯುತ್ತಿದ್ದರೆ, ಅದನ್ನು ವಿರೋಧಿಸಿ ಹೇಳಿಕೆ ನೀಡುವಷ್ಟು ಸಮರ್ಥವಿಲ್ಲವೇ ಭಾರತ..? ಅಷ್ಟೊಂದು ನಿರ್ಬಲತೆ ಇದೆಯೇ ಭಾರತಕ್ಕೆ? ಪಶ್ಚಿಮ ದೇಶಗಳು, ಅಮೇರಿಕಾ ಚೀನಾಕ್ಕೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತೆ ಹೇಳಿವೆ. ಆದರೆ, ಭಾರತ ಸರ್ಕಾರ ದನಿ ಇದೆಯೆಂಬುದನ್ನೇ ಮರೆತಂತಿದೆ. ಪಕ್ಕದ ದೇಶದಲ್ಲಿ ಥರಾವರೀ ಸಾಮ್ರಾಜ್ಯಶಾಹೀ ಪ್ರೇರಿತ ಕೊಲೆಗಳು ನೆಡೆಯುತ್ತಿದ್ದರೆ, ಭಾರತದ ದಿವ್ಯ ಮೌನ. ಎಡ ಪಕ್ಷಗಳು ಬೆಂಬಲ ನೀಡಿವೆ ಎಂದ ಮಾತ್ರಕ್ಕೆ ಚೀನಾವನ್ನೂ ಟೀಕಿಸದ, ಚೀನಾಕ್ಕೆ ಬುದ್ಧಿ ಹೇಳುವ ಅಧಿಕಾರವನ್ನೂ ಯುಪಿಎ ಸರ್ಕಾರ ಕಳೆದುಕೊಂಡಿದೆಯೇ? ಅಣು ಒಪ್ಪಂದ ಅಮೇರಿಕಾದ ಜೊತೆ ನೆಡೆಯುತ್ತಿದೆ ಎನ್ನೋ ಒಂದೇ ಒಂದು ಕಾರಣಕ್ಕೆ, ಅದನ್ನು ಶಾನೆ ವಿರೋಧಿಸುವ ಕಮ್ಮ್ಯುನಿಷ್ಟರು ಅದೇ ಒಪ್ಪಂದ ರಷ್ಯಾದ ಜೊತೆ ಆಗಿದ್ದರೆ, ಅದನ್ನ ನಗುಮೊಗದಿಂದ ಸ್ವಾಗತಿಸುತ್ತಿದ್ದರು. ಇಲ್ಲಿ ಪ್ರಶ್ನೆ ಬರೋದು ನಿಷ್ಠೆ ಸಿದ್ಧಾಂತಕ್ಕೋ ತನ್ನ ದೇಶಕ್ಕೋ ಅನ್ನೋದು. ದೇಶಕ್ಕೆ ಅನ್ನೋದಾದ್ರೆ, ದೇಶದ ಹಿತ ಮೊದಲ ಆದ್ಯತೆಯಾಗಬೇಕು. ಸಿದ್ಧಾಂತಕ್ಕೆ ಅನ್ನೋದಾದ್ರೆ, ಅದು ದೇಶಕ್ಕೆ ಯಾವ ದ್ರೋಹವನ್ನು ಬಗೆಯಲೂ ಹಿಂಜರಿಯದಂಥ ಮನಸ್ಥಿತಿ.

    ಕಮ್ಮುನಿಸಂ ಅನ್ನುವುದು ಬಡವರ, ಶೋಷಿತರ ಪರವಾಗಿ ನಿಂತು ಬಂಡವಾಳಶಾಹಿಗಳ ವಿರುದ್ಧವಾಗಿ ನಿಂತು ಕೆಲಸ ಮಾಡುವಂಥದ್ದು. ಆದರೆ, ಪ್ರಜಾಸತ್ತಾತ್ಮಕ ಸಮಾಜವಾದಕ್ಕೂ ಅದಕ್ಕೂ ಬಹಳ ವ್ಯತ್ಯಾಸವಿದೆ. ಪ್ರಜಾಪ್ರಭುತ್ವದಲ್ಲಿದ್ದುಕೊಂಡೇ ಬಡವರ, ಶೋಷಿತರ, ದಲಿತರ ಪರವಾಗಿ ಹೋರಾಡಬಹುದು. ಆದರೆ, ಚೀನಾದ್ದು ಸರ್ವಾಧಿಕಾರಿ ಧೋರಣೆ. ಪ್ರಜಾಪ್ರಭುತ್ವವಿಲ್ಲದ ದೇಶದಲ್ಲಿ ಪ್ರಜೆಗಳ ಹಕ್ಕುಗಳು ರಕ್ಷಿಸಲ್ಪಡುವುದಾದರೂ ಹೇಗೆ? ಕಮ್ಯುನಿಸಂ ಅನ್ನೋದು ಈಗ ಶುದ್ಧ ಶೋಷಕರ ಪರಿಸ್ಥಿತಿಯನ್ನು ಬಿಡಿ ಬಿಡಿಯಾಗಿ ಬಿಡಿಸಿಡುತ್ತಿದೆ. ಕಮ್ಮ್ಯುನಿಸಂ ಅನ್ನೋದು ಬಡವರ ಪರವಾಗಿ ನಿಲ್ಲುವಂಥದ್ದು ಅನ್ನೋದಾದರೂ, ಅದು ನೆಗೆಟಿವಿಟಿಯ ಪ್ರತೀಕವಾಗಿದೆ. ಬಡವರನ್ನು, ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳುವ ಕಮ್ಮ್ಯುನಿಷ್ಟರು ಅವರನ್ನು ಬಡವರನ್ನಾಗಿಯೇ ಉಳಿಸುತ್ತಾರೆ. ಬಡವರ ಸ್ಥಿತಿ ಉತ್ತಮಗೊಳ್ಳಲು ಯಾವ ಕ್ರಮಗಳನ್ನೂ ಕೈಗೊಳ್ಳುವುದಿಲ್ಲ. ಬಡವರೇನಾದರೂ ಸ್ಥಿತಿವಂತರಾದರೆ, ಅನುಕೂಲಸ್ಥರಾದರೆ, ಕಮ್ಮ್ಯುನಿಸಂ ದುರ್ಬಲವಾಗುತ್ತರೆ.  ಹಾಗಾಗಿಯೇ ಬಡವರನ್ನು ಬಡವರನ್ನಾಗಿಯೇ ಉಳಿಸುವ ಹುನ್ನಾರ. ಬಡವರನ್ನು ಶ್ರೀಮಂತರ ವಿರುದ್ಧ ದಂಗೆ ಎಬ್ಬಿಸಿ, ಲೂಟಿ ಮಾಡಿ, ಅರಾಜಕತೆ ಸೃಷ್ಟಿಸಿ, ಅದರ ಸಂಪೂರ್ಣ ಲಾಭ ಪಡೆಯುವುದು ಕಮ್ಮುನಿಸಂ ಆಗುತ್ತಿದೆ.

    ವಾಸ್ತವದ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಡಾ.ಯು.ಆರ್.ಅನಂತಮೂರ್ತಿಯವರು(Dr.U.R.Ananthamurthy) ಇತ್ತೀಚೆಗೆ ಶಂಕಿತ ಭಯೋತ್ಪಾದಕರನ್ನು ವಶಕ್ಕೆ ತೆಗೆದುಕೊಂಡಾಗ ಅಮಾಯಕರನ್ನು ಬಂಧಿಸಬೇಡಿ ಎಂದರು. ಆದರೆ, ದೇಶದ ಭದ್ರತೆಯನ್ನು ಮಾನವೀಯತೆ, ಮಾನವ ಹಕ್ಕುಗಳು ಇವುಗಳ ದೃಷ್ಟಿಕೋನದಲ್ಲಿ ನೋಡಲಾಗುವುದಿಲ್ಲ. ದೇಶ ಎಲ್ಲಕ್ಕೂ ಮುಖ್ಯವಾದದ್ದು, ಸಿದ್ಧಾಂತ, ಮತ, ಭಾಷೆ, ಅಭಿಪ್ರಾಯ ಭಿನ್ನತೆ ಎಲ್ಲವನ್ನೂ ಮೀರಿದ್ದು. ಅವುಗಳನ್ನು ಮೀರಿದಾಗಲೇ ದೇಶ ಸುಭದ್ರವಾಗಿರಲು ಸಾಧ್ಯ. ಬಲಪಂಥೀಯತೆ ಇರುವಂತೆ ಎಡಪಂಥೀಯತೆ ಕೂಡಾ ಇದೆ. ಆದರೆ ಇವೆರಡೂ ಸಮಾನಾಂತರದಲ್ಲಿ ನೆಡೆ ಹೊಂದಿರುವಂಥವು.(ಇಲ್ಲಿ ನಾನು ಯಾವ ಪಂಥವನ್ನೂ ಬೆಂಬಲಿಸುತ್ತಿಲ್ಲ) ಆದರೆ, ದೇಶದ ಭದ್ರತೆ ಎದುರಾದಾಗ, ಇಂಥಾ ಸಮಾನಾಂತರತೆ(Parallelism) ಅಪಾಯಕಾರಿಯಾದುದು. ಕಮ್ಮ್ಯುನಿಸಂನ್ನು ಮೆಚ್ಚಿಕೊಳ್ಳುವ ಅವರು ಕಮ್ಮ್ಯುನಿಸಂ ಪ್ರೇರಿತ ಕೊಲೆಗಳನ್ನು ಖಂಡಿಸದಿರುವುದು ವಿಷಾದನೀಯ.   ವೈದಿಕತೆಯ ಪ್ರಾಬಲ್ಯ ವಿರೋಧಿಸಿ, ಬಸವ ಬುದ್ಧರನ್ನು ಮೆಚ್ಚಿಕೊಳ್ಳುವ ಅನಂತಮೂರ್ತಿಯವರು, ಬುದ್ಧನ ಅನುಯಾಯಿಗಳು ಸಂಕಷ್ಟದಲ್ಲಿರುವಾಗ ಸೈದ್ಧಾಂತಿಕತೆಗೆ ನಿಷ್ಠೆ ಹೊಂದಿ ಖಂಡಿಸದಿರುವುದು ಸಾಹಿತಿಯೊಬ್ಬರಿಗೆ ಇರಬೇಕಾದ ತಟಸ್ಥತೆಯ ಲಕ್ಷಣವಲ್ಲ.  ಸೈದ್ಧಾಂತಿಕತೆಯ ನೆರಳಿನಲ್ಲಿ ನ್ಯಾಯ ಅನ್ಯಾಯ ಗೌಣವಾಗುವುದು ಉತ್ತಮಿಕೆಯ ಲಕ್ಷಣವಲ್ಲ. ಇದು ಮಿಥ್ಯಾ ಜಾತ್ಯಾತೀತತೆಯಾಗುತ್ತದೆ.  

(ಈ ಲೇಖನ ಇಂದಿನ, ೧೯ ಮಾರ್ಚ್ ೨೦೦೮ ರ ‘ವಿಜಯ ಕರ್ನಾಟಕ’ ದ ‘ವಾಚಕರ ವಿಜಯ’ದಲ್ಲಿ ಪ್ರಕಟಗೊಂಡಿದೆ)

Categories: ಮನದ ಮಾತು
Tagged: , , , ,

ಟೈಮ್ಸ್ ಅಫ್ ಇಂಡಿಯಾ ಎಂಬ ಇಂಗ್ಳೀಷ್ ‘ಪರ್ದೇಸಿ’ ಪತ್ರಿಕೆ

March 4, 2008 · 2 Comments

     ಇವತ್ತಿನ(4 ಮಾರ್ಚ್ 2008) ಟೈಮ್ಸ್ ಆಫ್ ಇಂಡಿಯಾ(English) ಓದ್ರಿ. ಜೊತೆಗೆ ಎಲ್ಲಾ ಕನ್ನಡ ಪತ್ರಿಕೆಗಳನ್ನೂ. ನೆನ್ನೆ Sasken ಕಂಪನಿಯ ಕೆನಡಾ ಮೂಲದ ವ್ಯಕ್ತಿಯೊಬ್ಬ ಕನ್ನಡ, ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ‘ಕವನ’ ಬರೆದಿದ್ದಕ್ಕೆ ಕ.ರ.ವೇ ಕಾರ್ಯಕರ್ತರು ದೊಮ್ಮಲೂರು, ಬೊಮ್ಮನಹಳ್ಳಿ ಬ್ರಾಂಚುಗಳ ಮೇಲೆ ಧಾಳಿ ಮಾಡಿ, ಗಾಜು ಕಂಪ್ಯೂಟರು, ಸೋಫಾ ಎಲ್ಲಾ ಹಾಳು ಮಾಡಿದ್ದಾರೆ. (ಬಾಗ್ಮನೆ ಟೆಕ್ ಪಾರ್ಕಲ್ಲಿ ಇನ್ನೊಂದು ಬ್ರಾಂಚು ಇದೆ. ತಿಳಿದಿದ್ದರೆ ಅದಕ್ಕೂ ಕಲ್ಲಿಬೀಳುತ್ತಿದ್ದವೇನೋ!) ಆದರೆ ಇದಕ್ಕೆಲ್ಲಾ ಏನು ಕಾರಣ? ಕಂಪನಿ ಹೆಚ್.ಆರ್. ಗಳೇನು ಸಗಣಿ ತಿನ್ತಿದ್ರಾ? ಕಂಪನಿಯ ಎಲ್ಲಾ ಉದ್ಯೋಗಿಗಳ ವರ್ತನೆ ಬಗ್ಗೆ “ವಿಶೇಷ ನಿಗಾ” ಇಡುವ ಇವರು ಇಂಥಾ ಭಾಷಾ ಅವಹೇಳನಕಾರಿಯ ಅಂಶದ ಬಗ್ಗೆ ಗಮನ ಹರಿಸಲಿಲ್ಲವಾ? ಇಷ್ಟೊಂದು ದೊಡ್ಡ ಆಘಾತವಾದಗಲೇ ಸರಿಪಡಿಸಿಕೊಳ್ಳಬೇಕಾ?

 

   ನಿನ್ನೆಯೆಲ್ಲಾ ಟಿ.ವಿ.9 ನಲ್ಲಿ ಬೆಳಗಿಂದಾ ಸಂಜೆ ತನಕ ಪ್ರಸಾರವಾಗಿತ್ತು ಈ ಸುದ್ದಿ. ಇಂದಿನ ಎಲ್ಲ ಕನ್ನಡ ಪತ್ರಿಕೆಗಳಲ್ಲೂ ಬಂದಿದೆ, ಅದೂ ಹೆಡ್‌ಲೈನಾಗಿಯೇ. ನಾನು ಮೊದಲು ಹೇಳಿದ್ದು ಇಂಗ್ಳೀಷಿನ “ಟೈಮ್ಸ್ ಆಫ್ ಇಂಡಿಯಾ” ನೋಡ್ರಿ ಅಂತಾ. ನಿನ್ನೆ ಕಂಪನಿ ಉದ್ಯೋಗಿಗಳಿಗೆಲ್ಲಾ ಮಧ್ಯಾಹ್ನ 2.30 ಕ್ಕೇ ರಜೆ ಘೋಷಿಸಿ, ಮನೆಗೆ ಕಳುಹಿಸಿದ್ದಾರೆ. ಒಂದು ಬಹುರಾಷ್ಟ್ರೀಯ ಕಂಪನಿಯು ತನ್ನೆಲ್ಲಾ ಉದ್ಯೋಗಿಗಳಿಗೆ ಆಕಸ್ಮಿಕ ರಜೆ ಘೋಷಿಸಿದರೆ, ಕಂಪನಿಗೆ ಕಲ್ಲು ಬಿದ್ದರೆ ಅದು ಮುಖಪುಟದಲ್ಲಿ ಬರದಷ್ಟು ‘ಕೆಳದರ್ಜೆ ಸುದ್ದಿ’ ಅದಕ್ಕೇ ಟೈಮ್ಸ್‌ನಲ್ಲಿ 5ನೇ ಪುಟದಲ್ಲಿ ಪೇಜ್ ಫಿಲ್ಲರ್ ಆಗಿದೆ. ಆತ ಬರೆದ ಅವಹೇಳನಾಕಾರಿ ಕವನ ಪ್ರಕಟವಾಗಿಲ್ಲ. ಅವರಿಗೆ ಅದು ಸಿಗಲಿಲ್ಲವೆಂದಲ್ಲ. ಬೆಂಗಳೂರಿನ ‘ಇಮೇಜು’ ಜಾಗತಿಕ ಮಟ್ಟದಲ್ಲಿ ಕೆಡಬಾರದಲ್ವಾ ಅದಕ್ಕೆ..! ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಅಂತ ಮಾತ್ರ ಪ್ರಕಟಿಸಿದೆ. ಎಷ್ಟೇ ಆಗಲಿ ಟೈಮ್ಸ್ ಕನ್ನಡಕ್ಕೆ ಯಾವಾಗ ನಿಯತ್ತು ಮೆರೆದಿತ್ತು? ಈ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಲಿಲ್ಲ ಯಾಕಂದ್ರೆ ತಪ್ಪು ಕಂಪನಿಯದು. ತಪ್ಪೇನಾದ್ರೂ ಕನ್ನಡದವರದ್ದಾಗಿದ್ದರೆ, ಮುಖಪುಟದಲ್ಲಿ namma benaguru ವ್ಯಕ್ತಿಗಳಿಂದ ಹಲ್ಲೆ, ದಾಂಧಲೆ ಅಂತೆಲ್ಲಾ ಬರೀತಿತ್ತು..!

 

   ಮೊನ್ನೆ ಮೊನ್ನೆ ನೆಡೆದ ಕನ್ನಡ ರಾಜ್ಯೋತ್ಸವದ ವಿಚಾರನೇ ತೊಗೊಳ್ಳಿ. ಇಡೀ ರಾಜ್ಯಕ್ಕೆ ರಾಜ್ಯಾನೇ ಸಿಂಗಾರ ಮಾಡಿಕೊಂಡು ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಇದ್ರೆ, ಒಂದು ಸಾಲಾದ್ರೂ ಬಂದಿತ್ತಾ ಟೈಮ್ಸ್‌ನಲ್ಲಿ? ಅಸಲಿಗೆ ಕನ್ನಡವೇ ಬರದ ಇಬ್ಬರು ಬೇನಾಮಿ ವ್ಯಕ್ತಿಗಳು(ಜೆನ್ನಿಫರ್, ಧ್ಯಾನ್) ಕನ್ನಡ ಬಾವುಟ ಹಿಡ್ಕಂಡಿರದು ಫೋಟೋ ಬಂದಿತ್ತು we are so proud to hold this flag ಅನ್ನೋ ಶೀರ್ಷಿಕೆಯೊಂದಿಗೆ ಐನಾತಿ Bangalore Timesನಲ್ಲಿ ಬಂದಿತ್ತು..!

 

      ಅದೇ ಬೆಂಗಳೂರಲ್ಲಿ ಬಾರು, ಪಬ್ಬು, ಗಬ್ಬು ಎಲ್ಲಾ ಸಮಾವೇಶ ನೆಡೆಸಲಿ ಅಲ್ಲಿಯ ವರದಿ ಮುಖಪುಟದಲ್ಲಿ ಪ್ರಕಟವಾಗುತ್ತೆ! ಇನ್ನಾದ್ರೂ ಗೊತ್ತಾಯ್ತಾ ಕನ್ನಡದವರು ಹೋರಾಡಬೇಕಾಗಿರೋದು ಬೆಂಗಳೂರಲ್ಲಿ ಝಾಂಡಾ ಊರಿರುವ ಪರ್ದೇಸಿಗಳೊಂದಿಗೆ ಮಾತ್ರವಲ್ಲ. ಬರೀ ಪರ್ದೇಸಿಗಳಿಗೆ ಪ್ರಚಾರ ಸೌಲಭ್ಯ ಒದಗಿಸಿ ಅವರಿಗೆ ‘ಸ್ವಲ್ಪವೂ ನೋವಾಗದಂತೆ’ ನೋಡಿಕೊಳ್ಳುವ ಟೈಮ್ಸ್‌ನಂಥಾ ಇಂಗ್ಳೀಷ್ ಪತ್ರಿಕೆಗಳ ಜೊತೆಗೆ!

 

   ಟೈಮ್ಸ್ ಪತ್ರಿಕೆಯಾಗಿ ‘ದಲ್ಲಾಳಿ’ ಕೆಲ್ಸನೂ ಮಾಡುತ್ತೆ. ಪಬ್‌ಗಳು ರಾತ್ರಿ 11.30ಕ್ಕೆ ಮುಚ್ಚುತ್ತಿದ್ದವು. ಇದನ್ನ 1.30ರ ವರೆಗೆ ವಿಸ್ತರಿಸಲು ಒತ್ತಡ ಹಾಕುವಲ್ಲಿ ಟೈಮ್ಸ್ ಯಶಸ್ವಿಯಾಗಿದೆ. ಬೆಂಗಳೂರಲ್ಲಿ ಪಬ್ಬುಗಳು 11.30ಕ್ಕೇ ಮುಚ್ಚಿಬಿಟ್ರೆ ಜಾಗತಿಕ ಮಟ್ಟದ ‘ಕಾಸ್ಮೋಪಾಲಿಟನ್’ ನಗರದ ಚರ್ಯೆ ಬದಲಾಗಿಹೋಗುತ್ತದೆ ಅಂತೆಲ್ಲಾ ಬರೀತು. ಡಿಸ್ಕೋಗಳಲ್ಲಿ ಡ್ಯಾನ್ಸ್ ಬಂದ್ ಮಾಡಿದಾಗ ಎಸ್ಸೆಮ್ಮೆಸ್ ಅಭಿಪ್ರಾಯ ಸಂಗ್ರಹಣೆಗೆ ತೊಡಗಿತು. ಈ ಅಭಿಪ್ರಾಯ ಸಂಗ್ರಹಗಳನ್ನು ಯಾವರೀತಿ ಬೇಕಾದ್ರೂ ಉಪಯೋಗಿಸಿಕೊಳ್ಳಬಹುದು ಬಿಡಿ. ಏನು ಬರೆಯಬಹುದಾಗಿತ್ತೋ ಅದನ್ನೇ ಬರೀತು.

 

    ನಿನ್ನೆ ಪಾರ್ಟಿಗೆ ಯಾರ್‌ಯಾರು ಬಂದಿದ್ರು, ಯಾವಳು ಯಾವನ ಜೊತೆ ನಿನ್ನೆ ಮಲಗಿದ್ದಳು, ಇವತ್ತು ಯಾರ ಜೊತೆ ಮಲಗ್ತಾಳೆ, ನಿನ್ನೆ ಯಾವಳು ಚಡ್ಡಿ ಪ್ಯಾಂಟಿ ಹಾಕಿಕೊಂಡು ಮಲಗಿರಲಿಲ್ಲ ಅಂತಾ ಲಂಗ ಎತ್ತಿ ನೋಡಿಕೊಂಡು ಬಂದು ವರದಿ ಮಾಡುವ Banaglore Times ಹೊಂದಿರುವ The Times of India ಬಗ್ಗೆ ಕನ್ನಡಿಗರು ನಿರೀಕ್ಷೆ ಮಾಡುವಂಥದ್ದೇನೂ ಇಲ್ಲ. ಆದರೂ ಬೆಂಗಳೂರಲ್ಲಿ ಸರ್ಕ್ಯುಲೇಷನ್ ಇರೋ ಪತ್ರಿಕೆಯಲ್ಲಿ ಬೆಂಗಳೂರು, ಬೆಂಗಳೂರನ್ನ ರಾಜಧಾನಿಯಾಗಿ ಹೊಂದಿರುವ ಕರ್ನಾಟಕದ ಬಗ್ಗೆ ಸುದ್ದಿ ಪ್ರಕಟವಾಗಬೇಕು ಅಂತಾ ಬಯಸುವುದರಲ್ಲಿ ತಪ್ಪೇನಿದೆ?

Categories: ಮನದ ಮಾತು
Tagged: , , , , , , , , , , , , , , , ,