ಪ್ರತಿಸ್ಪಂದನ – Pratispandana

Entries from April 2008

ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಮತದಾರರಿಗೇಕೆ..?

April 30, 2008 · 1 Comment

    ಚುನಾವಣೆ ಸುರುವಾಗಿದೆ. ಹಣ, ಹೆಂಡ, ಸೀರೆ, ಪಂಚೆ, ಟಿ.ವಿ, ಫ್ರಿಡ್ಜು ಮುಂತಾದ ಸಕಲ ಸಾಮಗ್ರಿಗಳನ್ನ ಹೊತ್ತ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಚುನಾವಣಾ ಆಯೋಗದ ಕೆಂಗಣ್ಣಿನಿಂದಾಗಿ ಈಗ “ಉಡುಗೊರೆ” ನೀಡುವ ಪರಿ ಕೂಡಾ ಬದಲಾಗಿದೆ. ಮೊದಲು ಮೊದಲು ಮನೆಗಳಿಗೇ ಸಾಮಾನುಗಳನ್ನ ತಲುಪಿಸುತ್ತಿದ್ದವರು ಈಗ “ಕೂಪನ್” ನೀಡಿ, ನಿರ್ದಿಷ್ಟ ಅಂಗಡಿಗಳಲ್ಲಿ “ಉಡುಗೊರೆ” ಪಡೆಯುವಂತೆ ಸೂಚಿಸುತ್ತಿದ್ದಾರೆ. ರಾಜಕಾರಣಿಗಳೇನೋ ಆಮಿಷ ಒಡ್ಡುತ್ತಾರೆ. ಇಷ್ಟು ದಿನ ಹಾಯಾಗಿ ಗೂಳಿಗಳಂಗೆ “ತಿಂದುಂಡು” ಅಲೆದಾಡಿದ್ದಕ್ಕೆ ದಂಡ ಪಾವತಿಸುತ್ತಿದ್ದಾರೆ. ಆದರೆ, ಮತದಾರರರು ಇವರ ಋಣಭಾರದಲ್ಲೇಕೆ ಇರಬೇಕು ಎಂಬುದು ನನ್ನ ಪ್ರಶ್ನೆ. ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಜನಕ್ಕೇಕೆ? ಎಲ್ಲರಿಂದನೂ ಬರೋದನ್ನೆಲ್ಲವನ್ನ ತೊಗೋಬೇಕು. ತಮಗೆ ಬೇಕಾದವರಿಗೆ ಒತ್ತಬೇಕು. ಆದರೆ, ಬಡವರ, ದಲಿತರ, ಸ್ಲಂ ಜನರ “ನಿಯತ್ತು” ಹೊಲಸು ರಾಜಕಾರಣಿಗಳನ್ನ ಇನ್ನೂ ಜೀವಂತ ಇಟ್ಟಿದೆ. ಮುಗ್ಧ ಜನರ ಮುಗ್ಧತೆಯನ್ನ ಎನ್‍ಕ್ಯಾಷ್ ಮಾಡಿಕೊಳ್ತಾ ಇದಾರೆ ಅಷ್ಟೇ.

    ಇನ್ನ ಜಾಗೃತ, ಪ್ರಜ್ಞಾವಂತ ಮತದಾರ ಮಹಾಪ್ರಭುಗಳ ಬಗ್ಗೆ ಹೇಳಬೇಕು. ಮೊನ್ನೆ ಮೊನ್ನೆ ನೆಡೆದ ನಮ್ಮೂರಿನ ಕಾರ್ಪೊರೇಷನ್ ಎಲಕ್ಷನ್‍ಗೆ ಹೋಗಿದ್ದೆ ಮತದಾನಕ್ಕೇ ಅಂತಲೇ. ಬಹಳ ಜನ ಕಟಕಿಯಾಡಿದ್ದರು ನಿನೊಬ್ಬ ಓಟುಹಾಕದಿದ್ರೆ ಯಾವನಿಗೂ ಏನೂ ಆಗಲ್ಲ ಅಂತಾ. ಹೋದಾಗ, ಇರುವ ಎಲ್ಲಾ ಕ್ಷೇತ್ರಗಳನ್ನ ಒಮ್ಮೆ ಗಾಡಿಯಲ್ಲಿ ಸುತ್ತಿ ಬಂದಿದ್ದೇನೆ. ೨೦ ವರ್ಷಗಳಲ್ಲಿ ತಿರುಗಾಡದ ಪ್ರದೇಶಗಳನ್ನ, ಕೇವಲ ಹೆಸರು ಕೇಳಿದ್ದ ಪ್ರದೇಶಗಳನ್ನ, ಇನ್ನೂ ಕೆಲವು ಹೆಸರೇ ಕೇಳದ ಏರಿಯಾಗಳನ್ನ ಸುತ್ತಿಬಂದಿದ್ದೇನೆ. ಸಮೀಕ್ಷೆ ಮಾಡಿದ್ದೇನೆ. ಎಲ್ಲೆಲ್ಲಿ ಬಡವರಿದ್ದಾರೋ, ದಲಿತರಿದ್ದಾರೋ, ಸ್ಲಂ ನಿವಾಸಿಗಳಿದ್ದಾರೋ, ನಿರ್ಗತಿಕರಿದ್ದಾರೋ ಅಲ್ಲೆಲ್ಲಾ ಎಲಕ್ಷನ್ ಅಂದರೆ ಹಬ್ಬದ ವಾತಾವರಣ. ಕೆ.ಟಿ.ಜೆ ನಗರ, ನಿಟ್ಟುವಳ್ಳಿ, ಆಜಾದ್ ನಗರ, ಹಳೇ ದಾವಣಗೆರೆಯ ಪ್ರದೇಶಗಳು ಜನಸಂದಣಿಯ ಪ್ರದೇಶಗಳಾಗಿದ್ದವು. ಜನ ಮನೆಯಲ್ಲಿಯೇ ಇರಲಿಲ್ಲ..! ರೋಡ ತುಂಬೆಲ್ಲಾ ಜನ. ರಾಜಕಾರಣಿಗಳೂ, ಸಚಿವರಾಗಿದ್ದವರೂ ಆಗಾಗ ಬಂದು ಹೋಗುತ್ತಿದ್ದರು.  ಬ್ಯಾನರ್ ಬಂಟಿಗ್, ಎಲ್ಲಾ ರಸ್ತೆ ತುಂಬೆಲ್ಲಾ ತುಂಬಿಕೊಂಡಿತ್ತು. ಯಾವ ಧಾರ್ಮಿಕ ಹಬ್ಬಗಳಲ್ಲೂ ಕಾಣಬರದ ಉತ್ಸಾಹ, ಹುಮ್ಮಸ್ಸು, ಹಬ್ಬದ ವಾತಾವರಣ. ಜನ ಓಟು ಹಾಕಲ್ಲಿಕ್ಕೆ ಕ್ಯೂನಲ್ಲಿ ನಿಂತಿದ್ದರು.  ಇನ್ನೂ ಕೆಲವು “ವಿದ್ಯಾವಂತರ, ಪ್ರಜ್ಞಾವಂತರ” ಏರಿಯಾಗಳನ್ನ ತಿರುಗಾಡಿ ಬಂದಿದ್ದೇನೆ. ಎಸ್.ಎಸ್.ಲೇ ಔಟ್, ವಿದ್ಯಾನಗರಗಳಲ್ಲಿ, ಮೆಡಿಕಲ್, ಡೆಂಟಲ್ ಕಾಲೇಜುಗಳಿರುವ ಬಡಾವಣೆಗಳಲ್ಲಿ, ಆಂಜನೇಯ ಬಡಾವಣೆಗಳಲ್ಲಿ ಎಲಕ್ಷನ್ನಿನ ಕುರುಹುಗಳೇ ಕಾಣುತ್ತಿರಲಿಲ್ಲ. ಮತಗಟ್ಟೆಗಳ ಬಳಿ ಒಬ್ಬರೊ ಇಬ್ಬರೋ ಇರುತ್ತಿದ್ದರು. ಮತಗಟ್ಟೆ ಎಲ್ಲಿದೇ ಎಂಬುದೇ ಗೊತ್ತಾಗುವಂತಿರಲಿಲ್ಲ. ಆದರೆ, ಅದೇ ಕೆಳ ಮಧ್ಯಮ ವರ್ಗದ ಜನರಿರುವ ಏರಿಯಾಗಳಲ್ಲಿ, ನಿಮ್ಮದೊಂದು ಓಟು ಇದೆ ಅಂದರೆ ಕೈ ಹಿಡಿದುಕೊಂಡು ಹೋಗಿ ಇಲ್ಲಿದೆ ಮತಗಟ್ಟೆ, ಅಣ್ಣಾ ನಮ್ಮ ಪಕ್ಷಕ್ಕೇ ಓಟು ಹಾಕಿ ಗೊತ್ತಲ್ಲಾ… ಅಂತಾ ಅನ್ನೋ ಮಂದಿ ಇದ್ದರು.

    ಎಷ್ಟು ವಿರೋಧಾಭಾಸಗಳಲ್ಲವಾ? ನಾವು ಯಾರನ್ನ ವಿದ್ಯಾವಂತರು, ಪ್ರಜ್ಞಾವಂತರು ಅನ್ನೋದು? ಮತ ಹಾಕದವರನ್ನಾ? ಕೈಗೆ ಸಿಕ್ಕಾಗಲೆಲ್ಲಾ ನಮ್ಮ ಭಾರತ ಹಿಂಗೇ ಅಂತಾ ಹೀಗಳೆಯುವವರನ್ನಾ..? ನಮ್ ದೇಶ ಇನ್ನು ಉದ್ಧಾರ ಆಗೋಲ್ಲ ಅನ್ನೋ ಜೋಬದ್ರಗೇಡಿಗಳನ್ನಾ..? ಒಮ್ಮೆ ಯೋಚಿಸಬೇಕಾಗಿದೆ.  40*60 ಸೈಟುಗಳಿರುವ, ಮನೆಗಳಿರುವ ಏರಿಯಾಗಳಲ್ಲಿ ಮನೆಗೆ ಒಬ್ಬರೋ ಇಬ್ಬರೋ ಇರುತ್ತಿದ್ದರು. ಒಮ್ಮೊಮ್ಮೆ ಅದೂ ಇಲ್ಲ. ಎಲಕ್ಷನ್ನು ಬಂತೆಂದ್ರೆ, ರಜಾ ದಿನ ಕಳೆಯಲು ತಮ್ಮೂರಿಗೋ, ಮಗನೂರಿಗೋ ಪಿಕ್‍ನಿಕ್ ಹೊರಟುಬಿಡುತ್ತಿದ್ದರು. ರಾಜಕಾರಣಿಗಳು ನೋಡೋದು ತಲೆಗಳನ್ನ, ಎಣಿಸೋದು ತಲೆಗಳನ್ನ, ಓಟುಗಳನ್ನ. ಐಶ್ವರ್ಯವನ್ನಲ್ಲ. 10*10 ಇರೊ ಕೆಳಮಧ್ಯಮ ವರ್ಗದ, ಬಡವರ, ಹಿಂದುಳಿದವರ ಮನೆಗಳಲ್ಲಿ ಹತ್ತು ಓಟುಗಳಿರುತ್ತವೆ. ಒಬ್ಬರ ಮನೆಗೆ ಹೋಗಿ ಬಂದರೆ, ಅವರನ್ನ ಒಲಿಸಿಕೊಂಡರೆ, 10ಓಟು ಅನಾಮತ್ತಾಗಿ ಬಿತ್ತು ಅಂತಾನೇ ಅರ್ಥ. ವಿದ್ಯಾವಂತರ ಮನೆಗಳಲ್ಲಿ ಒಬ್ಬರು, ಇಬ್ಬರು ಇರುವ ಮನೆಗಳಲ್ಲಿ, ಇರುವ ಮಂದಿನೂ ಓಟು ಹಾಕದಿದ್ರೆ, ರಸ್ತೆ ಚರಂಡಿ ಲೈಟು ಎಲ್ಲಾ ಬರ್ತವಾ? ಕೈಯ್ಯಾಗೆ ಜುಟ್ಟು ಹಿಡ್ಕಳಕ್ಕೆ ಕೊಟ್ಟರೂ ಹಿಡಿದುಕೊಳ್ಳದ ಮಂದಿಯನ್ನೇನಾ ವಿದ್ಯಾವಂತರು, ಬುದ್ಧಿವಂತರು ಅನ್ನೋದು?

    ಎಲ್ಲೆಲ್ಲಿ ಚುನಾವಣೆ ಅಬ್ಬರ ಹೆಚ್ಚಾಗಿತ್ತೋ ಅಲ್ಲೆಲ್ಲಾ ಸಿಮೆಂಟು ರೋಡುಗಳಾಗಿವೆ. ಪಾಪ, ಬಡವರು, ಸೂರಿದ್ದೂ ಕಡಿಮೆ ಜಾಗವಿರುವವರು, ಮಲಗೋದೇ ರಸ್ತೆಗಳ ಮೇಲೆ. ಹಾಗಾಗಿ ಓಟುಗಳಿರುವ ಕಡೆಗಳೆಲ್ಲಾ ಸಿಮೆಂಟು ರಸ್ತೆಗಳಾಗಿವೆ. ಅದೇ ವಿದ್ಯಾ ನಗರ, ಆಂಜನೇಯ ಬಡಾವಣೆ, ಎಸ್.ಎಸ್.ಲೇ ಔಟ್‍ಗಳಲ್ಲಿ ಒಂದು ಸರಿಯಾದ ಮಣ್ಣಿನ ರಸ್ತೇನೂ ಇಲ್ಲ. ಯಾಕಂದ್ರೆ, ಬರೀ ಮಾತಿನ ಮಲ್ಲರು ಸಿಗಬಲ್ಲರು, ದೇಶದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ನೀಡುವ ಮಂದಿ ಸಿಗಬಲ್ಲರೇ ಹೊರತು ಮತದಾರರಲ್ಲ.  ಎಲ್ಲೆಲ್ಲೆ ಮತದಾನ ನೆಡೆಯುವುದಿಲ್ಲವೋ ಆ ಕ್ಷೇತ್ರಗಳನ್ನ ರಾಜಕಾರಣಿಗಳು ನಿರ್ಲಕ್ಷಿಸಿಬಿಡುತ್ತಾರೆ. ಅವು ಅಸಲಿಗೆ ಸವಾಲುಗಳೇ ಅಲ್ಲ. ಅವರ ಮತಗಳು ನಿರ್ಣಾಯಕವಲ್ಲ. ನಿರ್ಣಾಯಕ ಮತಗಳಾಗದ ಹೊರತು ರಾಜಕಾರಣಿಗಳು ಗಮನ ಹರಿಸುವುದಿಲ್ಲ. ಹಾಗಾಗಿ 10-15 ವರ್ಷಗಳಾದರೂ ಏರಿಯಾಗಳು ಧೂಳು ಮಣ್ಣಿನಲ್ಲೇ ಇರಬೇಕಾಗುತ್ತದೆ. ಇದನ್ನ ನಮ್ಮ ಮಾನ್ಯ”ವಿದ್ಯಾವಂತ, ಪ್ರಜ್ಞಾವಂತ” ಮತದಾರರು ತಿಳಿಯುವುದೇ ಇಲ್ಲ.

    ಹರಿಜನ ಕೇರಿಗಳಲ್ಲಿ, ಬಡವರ ಏರಿಯಾಗಳಲ್ಲಿ ಜನ ಹೆಂಡ, ಹಣ, ಸೀರೆ, ಪಂಚೆಗಳಿಗೆ ತಮ್ಮ ಮತಗಳನ್ನ ಮಾರಿಕೊಂಡಿರಬಹುದು. ಆದರೆ, ಅವರು ಮತದಾನ ಮಾಡಿದ್ದಾರೆ.  ತಮ್ಮ ಕ್ಷೇತ್ರದ ಮತಗಳು, ತಮ್ಮವರ ಮತಗಳು ನಿರ್ಣಾಯಕವಾಗುವಂತೆ ಮಾಡಿದ್ದಾರೆ. ಇದು ಮಹತ್ಕಾರ್ಯವಲ್ಲವೇ? ಇವರು ವಿವೇಚನಾಪೂರಿತ ಮತದಾರರಾಗಿಲ್ಲದೇ ಇರಬಹುದು ಆದರೆ, ಪ್ರಜ್ಞಾವಂತ ಮತದಾರರು. ಮತದಾನದ ಪ್ರಜ್ಞೆಯಿದೆ ಅವರಲ್ಲಿ.

 

Categories: ದಾವಣಗೆರೆ · ವಿಚಾರವಾದ
Tagged: , , , , , , , ,

‘ಕಾಳ್’ ಮಿ – ಇದು Virginal ವೃತ್ತಾಂತ..!

April 22, 2008 · 9 Comments


    ಇತ್ತೀಚೆಗೆ ಭಾರತಕ್ಕೆ ಬಂದ ಹೊಸ ನೆಟ್‍ವರ್ಕ್ Virgin mobile ಎಲ್ಲ ಬಸ್‍ಸ್ಟ್ಯಾಂಡು, ಗೋಡೆ, ಪರದೆ, ಎಲ್ಲವುಗಳ ಮೇಲೆ ತನ್ನ ಆಗಮನದ ಮಾಹಿತಿಯನ್ನ, ಜಾಹೀರಾತನ್ನ ಹಾಕಿದೆ. ಈ ಬರಹದ ಜೊತೆ ಅದನ್ನೂ ಮೇಲೆ ಲಗತ್ತಿಸಿದ್ದೇನೆ. ಅದರಲ್ಲಿ ಕಾಲೇಜಿಗೆ ಹೋಗೋ ಥರ ಇರೋ ‘Virgin ಯುವತಿ’ ಪುಸ್ತಕಗಳನ್ನ(ಕಾಲೇಜಿನವು ಅಂದುಕೊಳ್ಳಬಹುದು) ಮಡಿಚಿದ ಸ್ಟೈಲಿಷ್ ಕೈಯ್ಯಲ್ಲಿ ಹಿಡಿದಿದ್ದಾಳೆ. ಇನ್ನೊಂದು ಕೈ ವರ್ಣಿಸೋಣ ಅಂದರೆ, ಅದು ಮೊಣಕೈವರೆಗೆ ಅಷ್ಟೇ ಇರೋದು. ಹಾಗಾಗಿ ಚಾನ್ಸ್ ಇಲ್ಲ..! ಈಗ ‘ನೇರವಾಗಿ’ ವಿಷಯಕ್ಕೆ ಬರೋಣ. ಈ ಮೊಬೈಲ್ ನೆಟ್‍ವರ್ಕನ್ನ ಪ್ರಮೋಟ್ ಮಾಡಲಿಕ್ಕೆ ಆಕೆ ಫೋನ್ ಮಾಡಲಿಕ್ಕೆ ಹೇಳಬೇಕಲ್ಲ ಈ ಜಾಹೀರಾತು ನೋಡಿದವರಿಗೆ..? ಫೋನ್ ನಂಬರ್ರು ಆಕೆ ಧರಿಸಿದ ಟೀ ಶರ್ಟ್ ಮೇಲಿದೆ. ಎಲ್ಲರೂ ಇಲ್ಲಿಗೆ ಫೋನಾಯಿಸಿ ಅಂತಾ Editorial(‘ಎದಿತೋರಿಯಲ್’..!??) ಬರೆದುಕೊಂಡಿದ್ದಾಳೆ. ಹುಡುಗರು ಜಾಹೀರಾತಲ್ಲಿ ಹುಡುಗಿ ಚಿತ್ರ ಹಾಕಿದ್ರೆ, ಮೊದಲು ಮುಖ ನೋಡ್ತಾರೋ ಇಲ್ವೋ ಆದ್ರೆ ಎಲ್ಲಿ ನೋಡ್ತಾರೋ ಅಲ್ಲಿನೇ ಫೋನ್ ನಂ. ಹಾಕಿದ್ದಾರೆ. ಇದೇ ಅಲ್ವಾ ಬಿಸಿನೆಸ್ಸು ಅಂದ್ರೆ..??

    ಅಲ್ಲಿಗೆ ಹುಡುಗರನ್ನ ಸೆಳೆದಿದ್ದಾಯಿತು. ಇನ್ನ ಹುಡುಗಿಯರಿಗೆ ಈ ಹೆಸರೇ ಆಪ್ಯಾಯಮಾನವಾಗಿರುವಂತೆ ಇಟ್ಟಿದ್ದಾರೆ. ಹುಡುಗಿಯರಿಗೆ Virgin ಅಂದ್ರೆ ಏನೋ ಹೆಮ್ಮೆ, ಗೌರವ, ಆತ್ಮಾಭಿಮಾನ, ಇಲ್ಲಿಯವರೆಗೂ ಅಖಂಡ ಬ್ರಹ್ಮಚರ್ಯ(ಇಲ್ಲಿ ಬ್ರಹ್ಮನೇ ಯಾಕೆ..? ಸ್ತ್ರೀಲಿಂಗ ಇಲ್ವಾ?) ಪಾಲಿಸಿದ್ದರ ಧ್ಯೋತಕವಾದ virginal ಹೆಸರು. ಅಲ್ಲಿಗೆ ಹುಡುಗಿಯರಿಗೂ ಪ್ರೀತಿಪಾತ್ರವಾದ ಮೊಬೈಲಾಗುವ ಸಕಲ ಅರ್ಹತೆಗಳನ್ನೂ ಪಡೆದುಕೊಂಡಂತಾಯಿತು. ತಮಗೆ ‘Virgin ಹುಡುಗಿಯರೇ’ ಬೇಕೆಂದು ಬಯಸುವ ಹುಡುಗರಿಗೆ ಆಕಾಶಕ್ಕೆ ಒಂದು ನ್ಯಾನೋಮೀಟರ್ ಉಳೀತು ಅಷ್ಟೇ. ಇಬ್ಬಂದಿತನವೆಂದರೆ, Virginity is not a dignity. Its a loss of opportunity ಅಂತಾ ಛೇಡಿಸುವ ಹುಡುಗರೂ ‘ಕನ್ಯೆ’ಯರನ್ನೇ ಮದುವೆಯಾಗಬಯಸುತ್ತಾರೆ..!


    ಸಾಮಾನ್ಯವಾಗಿ ಹುಡುಗರು ಹುಡುಗಿಯರಿಗೆ
* ಫೋನಾಯಿಸುತ್ತಾರೆ. ತಮ್ಮ ಪ್ರಿಯತಮೆಯಾಗಿರಬಹುದು, ಗೆಳತಿಯಾಗಿರಬಹುದು, ಜತೆಗಾರ್ತಿಯಾಗಿರಬಹುದು ಅಥವಾ ಸಂಗಾತಿಯಾಗಿರಬಹುದು. ಗಮನಿಸತಕ್ಕ ಅಂಶವೆಂದರೆ, ಹುಡುಗರು ಹುಡುಗಿಯರಿಗೆ call  ಮಾಡುವುದು ಹುಡುಗಿಯರು ಹುಡುಗರಿಗೆ ಫೋನಾಯಿಸುವುದಕ್ಕಿಂತ ಜಾಸ್ತಿ. ‘ಮೀಟರ್’ ಹಾಗಾಗಿ ಜಾಸ್ತಿ ಆಗ್ತಿರ್ತದೆ. ಇದನ್ನೇ ಗಮನಿಸಿ, ಮೊಬೈಲ್ ಕಂಪನಿಯವರು ತಾರುಣ್ಯಭರಿತ ಯುವತಿಯ ಜಾಹೀರಾತು ಹಾಕಿದ್ದಾರೆ. ಎಷ್ಟೇ ಆಗಲಿ ಅನ್ಯಲಿಂಗ ಆಕರ್ಷಣೆ ಇಲ್ಲದಿರುತ್ತದೆಯೇ? ಹುಡುಗರಂತೂ ಬಲೆಗೆ ಬೀಳ್ತಾರೆ ಅಂತಾ ಗೊತ್ತು.   ಸ್ತ್ರೀ ದ್ವೇಷಿಗಳು, I mean ಒಬ್ಬ ಹುಡುಗಿಯನ್ನ ಕಂಡರೆ ಮತ್ತೊಬ್ಬ  ಹುಡುಗಿಗಾಗುವುದಿಲ್ಲವಲ್ಲ ಅವರು, ಈ ಮೊಬೈಲನ್ನ ಖರೀದಿಸದೇ ಹೋಗಬಹುದು. ಇಲ್ಲಿ ಇನ್ನೊಂದು possibility ಇದೆ. ತಮಗೆ ‘Virgin’ ಹುಡುಗಿ ಬೇಕೆಂದು ಹಟ ಹಿಡಿಯುವ ಹುಡುಗರು, ತಮ್ಮ ಹುಡುಗಿಗೇ ಈ ಮೊಬೈಲನ್ನ ಕೊಡಿಸಿ virgin ಆಗಿಸಬಹುದು. ಮೊಬೈಲನ್ನ ಕೊಡಿಸಲು ಇನ್ನೊಂದು ಕಾರಣವೂ ಇದೆ. ಈ virgin mobile ಗೆ ಬರುವ ಒಳಬರುವ ಕರೆಗಳಿಗೆ  ನಿಮಿಷಕ್ಕೆ 10ಪೈಸೆ ಬರುತ್ತದೆ. ಹಾಗಾಗಿ ಗಂಟೆಗಟ್ಟಲೇ ಮೀಟರ್ ಹೊಡೆದು ತಮ್ಮ ದುಡ್ಡು ಖರ್ಚು ಮಾಡಿಕೊಂಡು, ಪ್ರಣಯ ಸಲ್ಲಾಪ ನೆಡೆಸುವ ಯುವಕರು, ತಮ್ಮ incoming call ನಿಂದಾದರೂ ತಮ್ಮ ಹುಡುಗಿಯ ಮೊಬೈಲಿಗೆ ಹಣಸಂದಾಯವಾಗಲೆಂಬ ಮಹದಾಸೆ..! ಯಾಕಂದ್ರೆ, ಬಹಳ ಸಲ, ತಾವೇ ಕರೆನ್ಸಿ ಹಾಕಿಸಿಕೊಡಬೇಕಲ್ಲ..!!
(* 
conditions apply ಹುಡುಗಿಯರು ಗೊತ್ತಿದ್ದರೆ).

 
    ಉಳಿದೆಲ್ಲ ನೆಟ್‍ವರ್ಕ್‍ಗಳಿಗೆ ಕನ್ನಡೀಕರಣ ಮಾಡಿದ ಹೆಸರುಗಳಿವೆ
    Airtel – ಗಾಳಿದೂರವಾಣಿ
    Spice – ಮಸಾಲೆ ದೂರವಾಣಿ
    Vodaphone – ವಡೆ ದೂರವಾಣಿ


    ಇಲ್ಲಿ ಗಂಭೀರ ಸಮಸ್ಯೆ ಎದುರಾಗಿರೋದು ಸದರಿ ಫೋನಿನ ಕನ್ನಡೀಕರಣದ್ದು. ಹಾಗಾಗಿ, ಎಲ್ಲ ಅಂತರ್ಜಾಲ ಕನ್ನಡಿಗರು, ಬ್ಲಾಗಮಂಡಲಾಧಿಪತಿಗಳು, ಕನ್ನಡ ‘ಪ್ರೇಮಿಗಳು’ ಇರುವ ಗಂಭೀರ ಚರ್ಚೆಗಳನ್ನೆಲ್ಲಾ ಇರುವಲ್ಲಿಯೇ ಬಿಟ್ಟು ಬರಬೇಕಿದೆ. ಇದಕ್ಕೆ ‘ಕನ್ಯಾ ದೂರವಾಣಿ’ ಎಂದು ಹೆಸರಿಸಬೇಕೋ ಇಲ್ಲಾ ‘ಕನ್ಯತ್ವ ದೂರವಾಣಿ’ ಅನ್ನಬೇಕೋ ತಿಳಿಯದಾಗಿದೆ. ಯಾಕೆಂದರೆ ಇದೊಂದು ರೀತಿ ಅನನ್ಯತೆ ಹೊಂದಿದೆ. ಹಾಗಾಗಿ ಕನ್ಯಾನನ್ಯ ದೂರವಾಣಿ ಎಂದು ನಾಮಕರಣ ಮಾಡಬಹುದೇನೋ ಎಂಬ ಬಗ್ಗೆ ಅನುಮಾನವಿದೆ. ಓದುಗರು suggest ಮಾಡಿದರೆ ಒಳ್ಳೇದು.
 

    ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿ ಇದೆ. Call me 09250362436 ಅಂತಾ ಎದೆಯ ಮೇಲೆ ಧರಿಸಿರುವ ಯುವತಿ, ಅಖಂಡ  ಬ್ರಹ್ಮಚಾರಿಣಿ, ಕನ್ಯತ್ವ ಪರಿಭಾಷಿಣಿ ಹೀಗೆ ಒಮ್ಮಿಂದೊಮ್ಮೆಲೇ ‘ಕಾಳ್ ಮಿ’ ಎಂದರೆ ತುಂಟ ಹುಡುಗರು ‘ಕಾಳು ಹಾಕುವುದಕ್ಕೆ’ ಸಕಲ ತಯಾರಿ ಮಾಡಿಕೊಳ್ಳಲು ತಲೆ ಕೆರೆದುಕೊಳ್ಳುವಂತೆ ಮಾಡಿದ್ದೇಕೆ?

Categories: ಸ್ವಾರಸ್ಯ
Tagged: , , , , , , , , , ,

ಮರ್ಯಾದಸ್ಥರ ಮಾನನಷ್ಟ ಪ್ರಸಂಗ…  ಒಂದು ಪ್ರತಿಕ್ರಿಯೆ.  

April 13, 2008 · Leave a Comment

   ಅಂತರ್ಜಾಲದಲ್ಲಿ ಪರಿಚಯರಾದ ದಾವಣಗೆರೆಯ ಗೆಳೆಯ ಸುಪ್ರೀತ್‍ರವರ ‘ಸೂರ್ಯನ ಶಿಕಾರಿ’ ಬ್ಲಾಗ್‍ನಲ್ಲಿ ಅವರು ಬರೆದ ಮರ್ಯಾದಸ್ಥರ ಮಾನನಷ್ಟ ಪ್ರಸಂಗ…  ಲೇಖನಕ್ಕೆ ಪ್ರತಿಕ್ರಿಯೆ.  

ಪ್ರೀತಿಯ ಸಂಪ್ರೀತ್
 
    ಖಂಡಿತವಾಗಿ ಇದು ಚಿಂತನಾಶೀಲ, ವಿಮರ್ಶಾ ಲೇಖನ. ರವೀಂದ್ರ ರೇಷ್ಮೆಯವರು ತಮ್ಮ ವಿಕ್ರಾಂತ ಕರ್ನಾಟಕದಲ್ಲಿ ರವಿ ಬೆಳಗೆರೆ ಬಗ್ಗೆ, ಅವರ ಬೆಳವಣಿಗೆಗಳ ಹಸಿವಿನ ಬಗ್ಗೆ, ಹಪಹಪಿತನದ ಬಗ್ಗೆ ಬರೆದಿದ್ದರು. ಅದಕ್ಕೆ ಉತ್ತರವಾಗಿ ರವಿ ತಮ್ಮ ಸಂಪಾದಕೀಯದಲ್ಲಿ ಉತ್ತರವನ್ನೂ ನೀಡಿದ್ದಾರೆ. ಕರ್ನಾಟಕದ ಯಾವ ಪತ್ರಕರ್ತನೂ ಹೋಗದ ಸ್ಥಳಗಳಿಗೆ, ದೇಶಗಳಿಗೆ ಹೋಗಿ ಬಂದು ವರದಿ ಮಾಡಿದ್ದಾರೆ. ಸ್ವಲ್ಪ ವೈಭವೀಕರಣ ಜಾಸ್ತಿಯಾಯಿತು ಅಂತಾ ಒಪ್ಪಿಕೊಳ್ಳುತ್ತೇನೆ. ಬದುಕಿನ ಚಲನಶೀಲತೆಗೆ, ಪ್ರಯೋಗಶೀಲತೆಗೆ, ಹೊಸ ಅನುಭವಗಳಿಗೆ ಎದುರಾಗುವ ಕ್ರಿಯಾಶೀಲತೆ ರವಿ ಬೆಳಗೆರೆಯಲ್ಲಿದೆ. ತಝಕಿಸ್ಥಾನ, ಕಝಕಿಸ್ಥಾನ, ಪಾಕಿಸ್ಥಾನ, ಅಫಘನಿಸ್ಥಾನ ಮುಂತಾದ ಹೆಸರೇ ಕೇಳದ ದೇಶಗಳಿಗೆ ಹೋಗಿ ಬಂದಿದ್ದಾರೆ. ಬರೀ ಹೋಗಿ ಬಂದಿಲ್ಲ. ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ, ವಿಶ್ಲೇಷಿಸಿದ್ದಾರೆ. ಮುಸ್ಲಿಂ ಪುಸ್ತಕ ಬರೆಯುವಾಗ, ಮುಸ್ಲಿಂ ಕಟ್ಟರ್‌ವಾದಿಗಳ ಬಗ್ಗೆ ಬರೆಯುವಾಗ ಒಂದು ಮಾತು ಬರೆದಿದ್ದಾರೆ. ‘ಇಲ್ಲಿ ಕುಳಿತು ಮುಸ್ಲೀಮರ ಪರವಾಗಿ ಅಥವಾ ಮುಸ್ಲೀಮರ ವಿರುದ್ಧವಾಗಿ ಮಾತನಾಡುವವರಿಗಿಂತ ನನ್ನ ಅನುಭವಗಳು ಬೇರೆಯಾಗಿಯೇ ನಿಲ್ಲುತ್ತವೆ’ ಎಂದಿದ್ದಾರೆ. ಅದು ಅಕ್ಷರಶಃ ಸತ್ಯ. ಯಾಕೆಂದರೆ, ಇಲ್ಲಿನ ಯಾರೂ ಅಫಘನಿಸ್ಥಾನವನ್ನಾಗಲೀ, ಪಾಕಿಸ್ಥಾವನ್ನಾಗಲೀ ನೋಡಿದವರಲ್ಲ. ನೋಡಿದ್ದರೂ ಉಗ್ರಗಾಮಿಗಳನ್ನು ಕಂಡು ಅವರ ಅಭಿಪ್ರಾಯ ತಿಳಿದುಬಂದವರಲ್ಲ. ಆದರೂ ಇಲ್ಲಿ ಕುಳಿತು, ಅಧಿಕಾರವಾಣಿಯಿಂದ ಬರೆಯುತ್ತಾರೆ, ಮಾತಾಡುತ್ತಾರೆ. ಇದು ವಸ್ತುಸ್ಥಿತಿ ಅರಿಯದ ಜಾಣ ಮೌನ ಅಲ್ಲವೇ?
 
    ಇಂದು ಹಾಯ್ ಬೆಂಗಳೂರು ರಾಜ್ಯಾದ್ಯಂತ ಮಾತ್ರವಲ್ಲದೇ ಸೌದಿ ಅರೇಬಿಯಾಗಳಿಗೂ ಪಸರಿಸಿದೆ ಎಂದರೆ ಅದರ ಅಗಾಧತೆ ನಮ್ಮ ಅರಿವಿಗೆ ಬಾರದಿರದು. ಹೊರ ರಾಜ್ಯವನ್ನು ಮುಟ್ಟುವ, ಜನ ಪತ್ರಿಕೆಗಾಗಿ ಹಪ ಹಪಿಸುವ ಪರಿಸ್ಥಿತಿ ಸೃಷ್ಟಿಸಿರುವ ಪತ್ರಿಕೆಗಳನ್ನು ತೋರಿಸಿ ನೋಡೋಣ. ರವಿಗೆ ಹಪ ಹಪಿತನವಿತ್ತು, ಬೆಳವಣಿಗೆಯ ಹಸಿವಿತ್ತು. ಆ ಓದಿನ ಹಸಿವನ್ನು ಓದುಗರಿಗೂ ವಿಸ್ತರಿಸಿದ ಖ್ಯಾತಿ ಅವರದು. ಆದರೆ, ಈ ಯಾವುದನ್ನೂ ಗಮನಿಸದೇ ಬೆಳೆಯುವ ಅನಿವಾರ್ಯತೆ ಇತ್ತು. ಬೆಳೆದರು ಅನ್ನುವುದು ವೃತ್ತಿ ಮಾತ್ಸರ್ಯದ ನೆಲೆಗಟ್ಟಿನಲ್ಲಿ ಬಂದ ಬರವಣಿಗೆ ಏನೋ ಎಂದೆನಿಸದಿರದು. ಇವತ್ತಿಗೂ ಕರ್ನಾಟಕದ ಟ್ಯಾಬ್ಲಾಯ್ಡ್ಗ್ ಗಳಲ್ಲಿ ಪಕ್ಷಪಾತ ರಾಹಿತ್ಯವಾಗಿ ಬರೆಯುವ ಪತ್ರಿಕೆಗಳು ಎಷ್ಟಿವೆ ಹೇಳಿ? ಲಂಕೇಶ್ ಪತ್ರಿಕೆಯವರಿಗೆ ಬಿ.ಜೆ.ಪಿ ಕಟ್ಟಾ ವಿರೋಧಿ, ಕೋಮುವಾದಿ. ಅವರು ಆ ನಿಲುವು ತಳೆದಿರುವುದು ಪ್ರಶ್ನಾರ್ಹವೇನಲ್ಲ. ಅಭಿವ್ಯಕ್ತಿ ಸ್ವಾತಂತ್ರವಿದೆ. ಒಂದು ಪಕ್ಷಕ್ಕೆ ವಿರೋಧವಿರದಿದ್ದರೆ, ಅವರ ಉಪಟಳ ಸಹಿಸಲಾಗದು. ಆದರೆ, ವಸ್ತು ನಿಷ್ಟತೆ, ತಟಸ್ಥತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಜೆ.ಡಿ.ಎಸ್, ಕಾಂಗ್ರೇಸ್ ಗಳು ಏನೇ ವಿವೇಚನಾಹೀನ ಕೆಲಸ ಮಾಡಿದರೂ ಜಾತ್ಯಾತೀತ ಪಕ್ಷಗಳೆಂದು ಬೆಂಬಲಕ್ಕೆ ನಿಂತುಬಿಡುವುದು ಅಪಾಯಕಾರಿಯಲ್ಲವೇ? ಆದರೆ, ಹಾಯ್ ಬೆಂಗಳೂರು ಯಾವ ಪಕ್ಷಗಳನ್ನೂ ಬೆಂಬಲಿಸಿಲ್ಲವಲ್ಲ. ಬಿ.ಜೆ.ಪಿ ಬಗ್ಗೆ ಒಂದಿಷ್ಟು ಸಾಫ್ಟ್ ಕಾರ್ನರ್ ಹೊಂದಿರಬಹುದು. ಅದೂ ಈ ರಾಜಕೀಯ ರಾದ್ಧಾಂತಗಳೆಲ್ಲಾ ಆದ ಮೇಲೆ. ಆದರೆ, ಎಂದೂ ಅವರು ಮಾಡಿದವುಗಳನ್ನು ನಾಚಿಕೆ ಬಿಟ್ಟು ಬೆಂಬಲಿಸಿಲ್ಲ. ಇದಕ್ಕಿಂತ ಮೊದಲು ಕುಮಾರ ಸ್ವಾಮಿ ಹವಾ ಇದ್ದಾಗ ಕುಮಾರಣ್ಣನನ್ನೂ ಬೆಂಬಲಿಸಿದ್ದರು. ಸಮಯ ಬಂದಾಗ ಕ್ಯಾಕರಿಸಿ ಥೂ ಅಂದ್ದದ್ದೂ ಆಯಿತು. ಆದರೆ, ಅಧಿಕಾರ ಹಸ್ತಾಂತರ ಪ್ರಹಸನ ನೆಡೆಯುವಾಗ, ಬಿ.ಜೆ.ಪಿ ಗೆ ಅಧಿಕಾರ ನೀಡಬಾರದೆಂದು ಹೇಳುತ್ತಾ, ವಿಶ್ವಾಸದ್ರೋಹವನ್ನೂ ಸಮರ್ಥಿಸಿಕೊಂಡವಲ್ಲಾ ಕೆಲವು ಜಾತ್ಯಾತೀತ ಪತ್ರಿಕೆಗಳು, ಹಾಗೇನೂ ಹಾಯ್ ಬೆಂಗಳೂರು ಮಾಡಲಿಲ್ಲ. ಇನ್ನೊಂದು ಸಂಗತಿ ಎಂದರೆ, ಹಿಂದೂ ಮುಸ್ಲಿಂ ವ್ಯತ್ಯಾಸಗಳ ಬಗ್ಗೆ ನಿರ್ಭಾವುಕ ಮನಸ್ನಿನಿಂದ ವಿಶ್ಲೇಷಣೆ ಮಾಡಿದ್ದು ರವಿ.
 
    ಇಷ್ಟೆಲ್ಲಾ ಹೇಳಿ, ನಾನು ರವಿಯವರನ್ನು ಹೊಗಳುತ್ತಿದ್ದೇನೆಂದೇನಲ್ಲ. ಆದರೆ, ಜಡ್ಡುಗಟ್ಟಿದ ಪತ್ರಿಕೋದ್ಯಮಕ್ಕೆ, ಒಂದಷ್ಟು ಹೊಸತನವನ್ನು, ಭಾವನಾತ್ಮಕತೆಯನ್ನೂ ನೀಡಿದ್ದು ರವಿ ಬೆಳಗೆರೆ. ಹಾಯ್ ಬೆಂಗಳೂರು ಇಂದಿಗೂ ನಂಬರ್ ಒನ್ ಆಗಲಿಕ್ಕೆ ಕಾರಣ ಕ್ರೈಂ, ರಾಜಕೀಯ, ರಾಸಲೀಲೆ ವರದಿಗಳೇ ಕಾರಣಗಳಲ್ಲ. ಬಾಟಮ್ ಐಟಮ್, ಖಾಸ್ ಬಾತ್ ಅಂಕಣಗಳು ಇವೆಲ್ಲವನ್ನೂ ಮೀರಿದ್ದು. ಮನಸ್ಸಿನ ಒಳದನಿಗೆ ಕನ್ನಡಿ ಹಿಡಿಯುವ ಲೇಖನಗಳು ಆಪ್ತವಾಗುತ್ತವೆ. ಆ ದನಿ ಅವರ ಬಗೆಗಿನದಾಗಿರಬಹುದು. ನಮಗೂ ಅದೇ ಥರದ ಅನುಭೂತಿಗಳು ಕೆಲವೊಮ್ಮೆ ಆಗುವುದರಿಂದ ಅವು ನಮ್ಮ ದನಿಯನ್ನೇ ಪ್ರತಿಬಿಂಬಿಸುತ್ತವೇನೋ ಎಂಬಷ್ಟು ಆಪ್ತವಾಗುತ್ತವೆ. ಇದೇ ಥರಹದ ಲೇಖನಗಳುಳ್ಳ ಓ ಮನಸೇ ಕೂಡಾ ಉತ್ತುಂಗಕ್ಕೇರಿತು. ಈ ಥರಹದ ರಾಜಕೀಯ, ಸಿದ್ಧಾಂತ ಎಲ್ಲವನ್ನೂ ಮೀರಿದ ಬದುಕಿನ ಬಗ್ಗೆ ಬರಹಗಳು ಎಷ್ಟು ಟ್ಯಾಬ್ಲಾಯ್ಡ್ ಗಳಲ್ಲಿ ಬರುತ್ತವೆ? ಜನ ಸಹಜವಾಗಿಯೇ ಅದರತ್ತ ಆಕರ್ಷಿತರಾದರು. ಓರಗೆಯ ಪತ್ರಿಕೆಗಳಲ್ಲಿ, ಅತಿಯಾದ ಸಿದ್ಧಾಂತವಾದ, ಅತಿಯಾಗಿ ಒಂದು ಪಕ್ಷದ, ವ್ಯಕ್ತಿಯ, ಧರ್ಮದ ರೀತಿ ರಿವಾಜುಗಳ ಬಗ್ಗೆ ಪೂರ್ವಾಗ್ರಹಪೀಡಿತವಾಗಿ ವಿಷಯ ಮಂಡಿಸಿ ವರದಿ ಬರೆಯುವಾಗ, ಹಾಯ್ ಬೆಂಗಳೂರು ಸ್ವಲ್ಪ ತಟಸ್ಥತೆ ಕಾಯ್ದುಕೊಂಡಿದೆ ಎಂದೆನಿಸುತ್ತದೆ.
 
    ಪತ್ರಿಕೆಗಳ, ಮಾಧ್ಯಮಗಳ ಕೆಲಸ ಪಕ್ಷ ಕಟ್ಟುವುದಲ್ಲ, ಸರ್ಕಾರ ಬೀಳಿಸುವುದಲ್ಲ. ಕ್ರೈಂ ಇಲ್ಲವಾಗಿಸುತ್ತೇನೆಂದು ಹೊರಡುವುದಲ್ಲ. ರವೀಂದ್ರ ರೇಷ್ಮೆಯವರು ಹಿರಿಯರು. ಇವರು ಎಷ್ಟು ಸರ್ಕಾರಗಳನ್ನು ಉರುಳಿಸಬಲ್ಲರೆಂದು ಕೇಳಲಾದರೆ, ಉತ್ತರವೇನಾದೀತು? ಪತ್ರಿಕೆಗಳೂ ಶಕ್ತಿ ಪ್ರದರ್ಶನಕ್ಕೆ ತಮ್ಮನ್ನು ತಾವು ಒಡ್ಡಿಕೊಂಡರೆ ಜನಜಾಗೃತಿ ಹಳ್ಳ ಹಿಡಿಯುತ್ತದೆ. ಇದೆಲ್ಲವನ್ನೂ ಮೀರಿದ್ದು ಜನಜಾಗೃತಿ. ಟಿ.ಎನ್. ಸೀತಾರಾಂರವರ ‘ಮುಕ್ತಾ’ ಧಾರಾವಾಹಿ ಜನಾಭಿಮಾನದ, ಜನಪ್ರಿಯತೆಯ ಉತ್ತುಂಗಕ್ಕೇರಿದಾಗ ಕೆಲವು ಜನ ಕೇಳಿದ್ದರು. ನೀವು ಇಷ್ಟೆಲ್ಲಾ ತೋರಿಸಿದ ತಕ್ಷಣ ಎಲ್ಲವೂ ಸರಿಯಾಗಿಬಿಡುತ್ತದೆಯೇ? ಅಂತಾ. ಇತ್ತೀಚೆಗೆ ಜನಮನ್ನಣೆ ಗಳಿಸಿದ ‘ಮಂಥನ’ದ ಸೇತುರಾಂರವರಿಗೆ ಕೆಲವು ಜನ ಪ್ರಶ್ನೆ ಕೇಳಿದ್ದರು. ನೀವು ಭ್ರಷ್ಟಾಚಾರದ ಬಗ್ಗೆ, ಇನ್‍ಕಂ ಟ್ಯಾಕ್ಸ್ ರೇಡ್‍ಗಳ ಬಗ್ಗೆ ಇಷ್ಟೆಲ್ಲಾ ತೋರಿಸಿದ್ದೀರಿ. ಭ್ರಷ್ಟಾಚಾರವೇನೂ ಕಡಿಮೆಯಾಗಿಲ್ಲವಲ್ಲ ಅಂತಾ. ಪ್ರತಿಸಲವೂ ಜನಪ್ರಿಯತೆಯ ಉತ್ತುಂಗಕ್ಕೇರಿದ ವ್ಯಕ್ತಿ, ವಸ್ತು ಬಗ್ಗೆ ನಮಗೆ ಮಾತ್ಸರ್ಯದ, ಕಡೆಗಣಿಕೆಯ ಮಾತುಗಳು ಹೊರಡುವುದು ಸಾಮಾನ್ಯ. ಅದನ್ನೇ ವಿಮರ್ಶೆ ಎನ್ನಲಾಗದು. Criticism ಅಂದರೆ ಬರೀ ಬಯ್ಯುವುದಲ್ಲ. ಮೌಲ್ಯಾತ್ಮಕವಾದ ಮೌಲ್ಯಮಾಪನ ನಡೆಯಬೇಕು.
 
    ಈ ಮೊದಲು ಪ್ರಸಾರವಾಗುತ್ತಿದ್ದ ಕ್ರೈಂ ಡೈರಿ ಇನ್ನೆಲ್ಲಾ ಕ್ರೈಂ ಧಾರಾವಾಹಿಗಳ ಸಾಲಿನಲ್ಲಿ ಮೊದಲಿನಲ್ಲಿ ನಿಂತಿತ್ತು. ಉತ್ತರವೂ ಸ್ಪಷ್ಟ. ಬೇರೆ ಎಲ್ಲಾ ಕ್ರೈಂ ಧಾರಾವಾಹಿಗಳು ಪೇಲವವಾದ ನಿರೂಪಣೆ ಇದ್ದಿದ್ದರೆ(ಈಗಲೂ ಹಾಗೇ ಇವೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ ಅಂದುಕೊಂಡಿದ್ದೇನೆ), ಹೊಸತನವಿರದೇ, ವೈಭವೀಕರಣ ಇದ್ದಿದ್ದರೆ, ಕ್ರೈಂ ಡೈರಿಯಲ್ಲಿ ಎಲ್ಲ ಪ್ರಕರಣಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡುವ ಆಯಾಮ ಒದಗಿಸಿದ್ದು ಜನ ಇಷ್ಟಪಡುವಂತೆ ಮಾಡಿತ್ತು. ಈಗಲೂ ಒಮ್ಮೆ ಕ್ರೈಂ ಧಾರಾವಾಹಿಗಳತ್ತ ಒಮ್ಮೆ ಕಣ್ಣು ಹಾಯಿಸಿ. ಉದಯ ಟಿವಿಯ ಕ್ರೈಂ ಸ್ಟೋರಿ, ಟಿ.ವಿ.೯ ನ ವಾರಂಟ್ ಎಲ್ಲದರಲ್ಲೂ ಬರೀ ವೈಭವೀಕರಣವಿದೆ. ಪೇಲವ ನಿರೂಪಣೆ ಇದೆ. ಕಾರ್ಯಕ್ರಮದ ಕೊನೆಗೆ ಬುದ್ಧಿವಾದವನ್ನೂ ಅಧಿಕಾರವಾಣಿಯಿಂದ ಹೇಳುವ ‘ಅತಿ ಬುದ್ಧಿವಂತ’ ನಿರೂಪಕರಿದ್ದಾರೆ. ಇವೆಲ್ಲವುಗಳ ನಡುವೆ ಕ್ರೈಂ ಡೈರಿ ವಿಭಿನ್ನವಾಗಿಯೇ ನಿಂತಿತ್ತು. ಕ್ರೈಂ ಡೈರಿ ಎಷ್ಟು ನಂಬಿಗಸ್ಥನಾಗಿತ್ತು ಅಂದರೆ ನಮ್ಮೂರು ದಾವಣಗೆರೆಯಲ್ಲಿ ಒಂದೆರಡು ವರ್ಷಗಳ ಹಿಂದೆ ಇಬ್ಬರು ಸೌಹಾರ್ದಯುತವಾಗಿ ಬದುಕುತ್ತಿದ್ದ ಸವತಿಯರು ಗಂಡನ ಹಿಂಸೆ ತಾಳಲಾರದೆ ರವಿ ಬೆಳಗೆರೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ರವಿಯವರು ತಮ್ಮಬಗೆಗಿನ ವೈಭವೀಕರಣದಿಂದ ಪಡೆದ ನಂಬಿಕೆ ಎಂದು ನನಗನ್ನಿಸುವುದಿಲ್ಲ. ಜನ ಅಷ್ಟೊಂದು ನಂಬುವ, ಪ್ರೀತಿಸುವ, ಜನಪ್ರಿಯತೆ ಗಳಿಸಿರುವ, ಬಹುರೂಪತೆಗಳಿಗೆ ಅಣಿಯಾಗುತ್ತಿರುವ ಕರ್ನಾಟಕದ ಒಬ್ಬೇ ಒಬ್ಬ ಪತ್ರಕರ್ತನನ್ನು ತೋರಿಸಿ ನೋಡೋಣ. ಇಲ್ಲೆಲ್ಲವೂ ನಾನು ವಸ್ತು ಸ್ಥಿತಿಯ ಬದಲಾಗಿ ವೈಭವೀಕರಣಕ್ಕೆ ಪ್ರಯತ್ನಿಸಿದ್ದೇನೆ ಎಂದೆನ್ನಬಹುದು. ಆದರೆ, ಇವೆಲ್ಲವೂ ಶ್ರೀಸಾಮಾನ್ಯನ ದನಿ ಎಂಬುದನ್ನು ನೆನಪಿನಲ್ಲಿಡಬೇಕು.
 
    ಇನ್ನು ‘ಮುಖ್ಯಮಂತ್ರಿ ಐ ಲವ್ ಯು’ ಚಿತ್ರ ತೆಗೆಯುತ್ತಿರುವ ಬಗ್ಗೆ. ಒಬ್ಬರ ಖಾಸಗಿ ಬದುಕನ್ನು ಪ್ರಶ್ನಿಸುವ, ಅನಾವರಣಗೊಳಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ಅನೈತಿಕ ಖಾಸಗಿ ಸಂಗತಿಗಳು ಸಾರ್ವತ್ರಿಕವಾದಾಗ, ಸಾರ್ವಜನಿಕರ ಸ್ವತ್ತಾಗಿಬಿಡುತ್ತವೆ. ಅದನ್ನು ಪ್ರಶ್ನಿಸುವ ಹಕ್ಕು, ವಿಮರ್ಶಿಸುವ ಹಕ್ಕು ಎಲ್ಲರಿಗೂ ಸೇರಿದ್ದು. ಎಲ್ಲದರಲ್ಲೂ ಉದಾರೀಕರಣವನ್ನು ಕಂಡಿರುವ, ಮುಕ್ತ ಲೈಂಗಿಗತೆಯ ಪ್ರತಿಪಾದಕ ಅಮೇರಿಕೆಯಲ್ಲಿ ಕೂಡಾ ಜನ ತಮ್ಮ ಅಧ್ಯಕ್ಷ ಅನೈತಿಕ ಸಂಬಂಧದಿಂದ ದೂರವಿರಬೇಕೆಂದು ಬಯಸುತ್ತಾರೆ. ಹಾಗಾಗಿಯೇ ಬಿಲ್ ಕ್ಲಿಂಟನ್ ಬಗ್ಗೆ ಅಷ್ಟೊಂದು ಗುಲ್ಲೆದ್ದಿದ್ದು. ಅಮೇರಿಕೆಗಿಂತ ಸುಸಂಸ್ಕೃತವಾಗಿರುವ ಭಾರತದಲ್ಲಿ ರಾಜಕೀಯ ನಾಯಕನ ‘ಇತರ’ ಸಂಬಂಧ ವೃತ್ತಾಂತಗಳು ವಿಮರ್ಶೆಗೆ ಒಳಪಡದಿರುತ್ತವೆಯೇ? ತೇಜೋವಧೆ ಎಂದೆನ್ನಿಸಿದರೆ, ಕೋರ್ಟ್ ತೀರ್ಮಾನಿಸುತ್ತದೆ. ಹಾಗೆ ಖಾಸಗಿ ಬದುಕನ್ನು ಪ್ರಶ್ನಿಸುವ ಸ್ವಾತಂತ್ರವಿಲ್ಲ ಅನ್ನೋದಾಗಿದ್ದರೆ, ಇಂದಿನ ಕ್ರೈಂ, ಸೆಕ್ಸ್ ಪತ್ರಿಕೆಗಳು, ಟ್ಯಾಬ್ಲಾಯ್ಡ್‍ಗಳು ಮುಚ್ಚಬೇಕಾಗುತ್ತಿತ್ತು. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಪರಿಗಣಿಸಲ್ಪಡುತ್ತದೆ.
 
    ಇವೆಲ್ಲ ನಾನು ಹೇಳಿರುವ ಸಂಗತಿಗಳ ಹೊರತಾಗಿ, ರವಿ ಬೆಳಗೆರೆಯವರನ್ನು, ಸಾಧನೆಗಳನ್ನು ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ನೋಡಲು ಈ ಲೇಖನ ಪ್ರಯತ್ನಿಸಿದೆ. ನಿಮ್ಮ ಪ್ರಯತ್ನ ಮುಂದುವರಿಯಲೆಂದು ಬಯಸುತ್ತೇನೆ.
 
 ಕೆ.ಗಣೇಶ್.

Categories: ಮನದ ಮಾತು · ವಿಚಾರವಾದ
Tagged: , , , , , , , , , , , ,

‘ಮುಂಗಾರು ಮಳೆ’ನಾ ಇಲ್ಲಾ ‘ಹನಿ ಹನಿ’ನಾ ನೀವೇ ನಿರ್ಧರಿಸಿ…!

April 11, 2008 · 1 Comment

      ಮೊನ್ನೆ ಮೊನ್ನೆ ಬಸವೇಶ್ವರ ನಗರದಿಂದ ಕಾರ್ಡ್ ರೋಡ್ ಕಡೆ ನಡಕೊಂಡು ಬರ್ತಾ ಇದ್ದೆ. ಎಡಗಡೆ ಒಂದು ಗೋಡೆಗೆ ಇತ್ತೀಚೆಗೆ ಬಿಡುಗಡೆಯಾದ ‘ಹನಿ ಹನಿ’ ಚಿತ್ರದ ಪೋಸ್ಟರ್ ಅಂಟಿಸಿದ್ದರು. ಗೋಡೆಗೆ ಒಬ್ಬಾತ ಕುಳಿತು ‘ಜಲಬಾಧಿತ’ ಜಲಧಾರೆ ಹರಿಸುತ್ತಿದ್ದ. ಆ ಗೋಡೆಯ ಮೇಲಿನ ಚಿತ್ರದಲ್ಲಿ ಹನಿ ಹನಿ ಚಿತ್ರದ ಹೀರೋ, ಹೀರೋಯಿನ್(ಪೂಜಾ ಗಾಂಧಿ) ಗಾಡಿ ಮೇಲೆ ಕುಂತಿರೋ ಚಿತ್ರ ಇತ್ತು. ನನಗೆ ಇನ್ನೊಂದು ವಿಷಯದ ಬಗ್ಗೆ ಸಮಜಾಯಿಷಿ ಬೇಕಿದೆ. ಅಲ್ಲಾ, ಎಲ್ಲಾ ಸಾಲದಾಗಿ ಈ ಚಿತ್ರ ಪ್ರಚಾರಕರು ಪೋಸ್ಟರ್‍ಗಳನ್ನ ‘ಸಾರ್ವಜನಿಕ ಬಯಲು ಶೌಚಾಲಯ’ಗಳ ಬಳಿಯಲ್ಲಿಯೇ ಯಾಕೆ ಹಚ್ಚುತಾರೆ ಅನ್ನೋದು ನನಗೆ ಕಾಡುವ ಪ್ರಶ್ನೆ. ಇಲ್ಲಾಂದ್ರೆ, ಅಲ್ಲಿ ಪೋಸ್ಟರ್ ಹಚ್ಚಿರುವ ಕಡೆ ಹೋಗಿಯೇ ಜಲಬಾಧೆ ತೀರಿಸಿಕೊಳ್ಳುತ್ತಲೇ ಪುಕ್ಕಟೆ ಮನೋರಂಜನೆ ಪಡೆಯುವ ‘ಜಲಬಾಧಿತರ’ ಇರಾದೆಯೋ..? ಗೊತ್ತಿಲ್ಲ..!

     ಆದರೆ, ಈ ಪ್ರಸಂಗದಲ್ಲಿ ಗೋಡೆ ಮೇಲಿರೋ ಪಾಪ ಪೂಜಾ ಗಾಂಧಿ, ಏನಂತ ಅಂದುಕೊಳ್ಳಬೇಕು ’ಮುಂಗಾರು ಮಳೆ’ಯಾ ಇಲ್ಲಾ ’ಹನಿ ಹನಿ’ಯಾ..? ಬಹುಷಃ ಮೊದಲನೆಯದಾದ ನಂತರ ಎರಡನೆಯದು ಅಂದುಕೊಂಡಿರಬಹುದು…!!!!

Categories: ಸ್ವಾರಸ್ಯ · ಹಾಸ್ಯ
Tagged: , , ,

ಮೊದಲ ಶೃಂಗಾರ

April 11, 2008 · Leave a Comment

     ಮೊದಲ, ಮೊಟ್ಟಮೊದಲ ಇರುಳಿನಲ್ಲಿ ಏನೇನು ಮಾಡಬೇಕೆಂಬುದಕ್ಕೆ, ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಒಂದು ಅನೂಹ್ಯವಾದ, ಅಪೂರ್ವವಾದ, ಚಿಕ್ಕದಾದ, ಚೊಕ್ಕದಾದ ಡಾಕುಮೆಂಟ್. ಶೃಂಗಾರವನ್ನ, ರಸಿಕತೆಯನ್ನ, ವಿಶಿಷ್ಟಾನುಭೂತಿಯನ್ನ ಅನುಭವಿಸುವ ಬಗ್ಗೆ ಇರುವ ಒಂದು ಬರಹ. ಇದನ್ನ ಬರೆದವ ತನ್ನ ಪರಿಚಯವನ್ನೇ ಹೇಳಿಲ್ಲ. ಬರೆದವನಿಗೊಂದು ಹ್ಯಾಟ್ಸ್ ಆಫ್. PDF Documentನ ಲಿಂಕ್ ಕ್ಲಿಕ್ಕಿಸಿ ಬರಹವನ್ನ ಓದಬಹುದು.


Fresher guide to First Night.
(First impression is the best impression)
I N S I G H T
[experiencing the experience]

Categories: ಶೃಂಗಾರ
Tagged: , ,