ಅನೈತಿಕತೆ vs ಭ್ರಷ್ಟತೆ?

ಜನರ ಕಣ್ಣಲ್ಲಿ ಭ್ರಷ್ಟತೆ ಅನ್ನೋದು ಸಾಮಾನ್ಯ ವಿಷಯ. ಅವನು ಅಷ್ಟ್ ದುಡ್ ತಗಂಡ ಅವನು ಅಷ್ಟ್ ಲಂಚ ಕೇಳಿದ ಅನ್ನೋದು ಜನರ ಕಣ್ಣಲ್ಲಿ ಸುದ್ದಿಯೇ ಅಲ್ಲ. (ಇನ್ಫಾರ್ಮೇಷನ್ ಥಿಯರಿ ಪ್ರಕಾರ ಅತಿ ಕಡಿಮೆ ಸಂಭವನೀಯತೆ ಇರುವ ವಿಚಾರ ಅತಿ ಹೆಚ್ಚಿನ ಸುದ್ದಿ ಹೊಂದಿರುತ್ತದೆ) ಅದು ರಂಜನೀಯವೂ ಅಲ್ಲ. ರಸವತ್ತಾಗಿ ಬಾಯ ಮೇಲೆ ನಲಿದಾಡುವಂಥದ್ದೂ ಅಲ್ಲ. ದುಡ್ಡು ಹೊಡೆದ ಹೊಡೆದ ಅಷ್ಟೇ. ಮುಗೀತು.

ಆದರೆ, ಅನೈತಿಕತೆಯ ವಿಷಯ ಹಾಗಲ್ಲ. ಅದು ಪ್ರತಿ ಕ್ಷಣಕ್ಕೂ ಹೊಸ ಹೊಸ ತಿರುವುಗಳನ್ನ ನೀಡುತ್ತ, ರಂಜನೆ, ಕುತೂಹಲ ಹುಟ್ಟಿಸುತ್ತದೆ ಜೊತೆಗೆ ಸುದ್ದಿಯಾಗುತ್ತದೆ. ಈ ಸುದ್ದಿ ಹೊಸ ಸುದ್ದಿಗಳಿಗೆ ಕಾರಣೀಭೂತವಾಗುತ್ತದೆ. ಜನರ ಬಾಯಲ್ಲಿ ಆಡಿಕೊಂಡು ನಗಲಿಕ್ಕೆ, ಹೀಯಾಳಿಸಲಿಕ್ಕೆ, ಜನ ಈ ಸುದ್ದಿ ಹೇಳುವಾಗ ತಾವೇನೋ ಸಾಚಾ ಎಂದು ಜಂಭ ಕೊಚ್ಚಿಕೊಳ್ಳಲೊಕ್ಕೂ ವೇದಿಕೆ ಒದಗಿಸುತ್ತದೆ.

ಹಾಗಾಗಿ, ಕೂಡ್ಲಿಗಿ ಡಿ.ವೈ.ಎಸ್.ಪಿ. ಅನುಪಮಾ ಶೆಣೈ ಪಿ.ಟಿ.ಪರಮೇಶ್ವರ ನಾಯ್ಕರ ವಿರುದ್ಧ ಭ್ರಷ್ಟತೆಯ, ಅಧಿಕಾರ ದುರುಪಯೋಗದ ಆರೋಪ ಮಾಡಿದ್ದರೆ ಆದು ಸುದ್ದಿಯೇ ಆಗುತ್ತಿರಲಿಲ್ಲ. ಯಾವಾಗ ಅದಕ್ಕೆ ಪರಮೇಶಿ ಪ್ರೇಮ ಪ್ರಸಂಗ, ವಾಷಿಂಗ್ ಪೌಡರ್ ನಿರ್ಮಾ ಅನ್ನೋ ಶೀರ್ಷಿಕೆಗಳು ಲಭಿಸಿದವೋ, ಅದೇ ಕ್ಷಣದಿಂದ ಒಂದು ಕೆಟ್ಟ ಕುತೂಹಲವನ್ನು ಕೋಟ್ಯಂತರ ಜನರ ಮನಸ್ಸಿನಲ್ಲಿ ಈ ಸುದ್ದಿ ಬಿತ್ತಿಬಿಟ್ಟಿದೆ. ಇನ್ನು ಏನೇ ಬೆಳವಣಿಗೆಗಳು ಈ ವಿಷಯವಾಗಿ ನಡೆದರೂ ಅದು ಸಾವಿರ ಅರ್ಥಗಳನ್ನ ಕಲ್ಪಿಸಿಕೊಳ್ಳುವಷ್ಟು ಪ್ರಬಲವಾಗಿ ಕೆಟ್ಟ ಕುತೂಹಲವನ್ನು ನಿರ್ಮಿಸಿಕೊಟ್ಟಿದೆ.

ಯಾವುದಕ್ಕೂ ಹೆದರದ ಭಂಡ, ಭ್ರಷ್ಟರು ಆನೈತಿಕತೆಯ ಕೆಟ್ಟ ಕುತೂಹಲಕ್ಕೆ ಬೆಚ್ಚಿ ಬೆದರಿರುವುದು ಒಂಥರಾ ಆಸಕ್ತಿಕರ ವಿಷಯ. ಜನರ ಸಾಮಾಜಿಕ ವರ್ತನೆ ಮತ್ತು ಕಾಲಕ್ಕೆ ತಕ್ಕಂತೆ ಅದರ ಪರಿವರ್ತನೆ ಅಭ್ಯಾಸಿಸುವವರಿಗಂತೂ ಸುಗ್ಗಿ ಕಾಲ.

ಬಸವಜಯಂತಿ ವಿಶೇಷ: ೧೨ನೇ ಶತಮಾನದ ಶರಣರ ಕಾಲದ ಖಾದ್ಯ ಪದಾರ್ಥಗಳು

ಹೋಳಿಗೆ (ಕೋಲಶಾಂತಯ್ಯ ವಚನದಲ್ಲಿದೆ)

ಎಣ್ಣೆ ಹೋಳಿಗೆ (ಚನ್ನಬಸವಣ್ಣನ ವಚನದಲ್ಲಿದೆ), ಎಣ್ಣೆ ಹೂರಿಗೆ(ಮಡಿವಾಳ ಮಾಚಯ್ಯ). ಹೋಳಿಗೆಗೆ ೮೦೦ ವರ್ಷಗಳ ಇತಿಹಾಸವಿದೆ..!

ಬೀಸುಂಬೂರಿಗೆ(ಹರಿಹರ ಕವಿ)

ಹೂರಿಗೆ (ಮಂಗರಸನ ಸೂಪಶಾಸ್ತ್ರ) -ಗೋಧಿಯ ಹಿಟ್ಟು ಅಥವಾ ರವೆಯನ್ನು ಕಲಿಸಿ ಸ್ವಲ್ಪ ಸೇರಿಸಿ ನಾರು ಹರಿಯದ ಕಣಕವನ್ನಾಗಿ ಮಾಡಿ, ನಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಬಟ್ಟೆಯಲ್ಲಿ ಮುಚ್ಚಿಡಬೇಕು. ಕಡಲೆಬೇಳೆಯನ್ನು ಬೇಯಿಸಿ ಅದಕ್ಕೆ ತಕ್ಕಷ್ಟು ಬೆಲ್ಲವನ್ನು ಸೇರಿಸಿ ತಯಾರಿಸಿದ ಹೂರಣವನ್ನು ಒಂದು ಗೋಳಕದ ಮೇಲಿಟ್ಟು, ಅದರ ಮೇಲೆ ಮತ್ತೊಂದು ಹಿಟ್ಟಿನುಂಡೆಯನ್ನಿಟ್ಟು , ಕೈಗಳ ಹರವಿ ಅದನ್ನು ಹಂಚಿನ ಮೇಲೆ ತುಪ್ಪದಲ್ಲಿ ಬೇಯಿಸುವುದು.

ಖಂಡಮಂಡಗೆ(ಬಸವಣ್ಣನ ವಚನ) , ಕಟ್ಟು ಮಂಡಗೆ(ಮಡಿವಾಳ ಮಾಚಿದೇವ) – ಕಣಕದಲ್ಲಿ ಬರಿಯ ಸಕ್ಕರೆ ತುಪ್ಪಗಳ ಹೂರಣವನ್ನು ಅಟ್ಟು ಸಕ್ಕರೆಯನ್ನು ತಳಿದು ಬಿಯೋಡಿನ(ಬಿಸಿ ಹಂಚು) ಮೇಲಿರಿಸುವುದು.

ಸುಲಿಗಡಲೆಯ ಕಜ್ಜಾಯ(ಬಸವಣ್ಣನ ವಚನ)

ಉಂಡಲಿಗೆ, ಉಂಡೆ, ಹಾಲುಂಡೆ (ಹರಿಹರ ಕವಿ)  – ಕಡೆಗಂದಿಯೆಮ್ಮೆಯ ಹಾಲಿನಲ್ಲಿ ತುರುವೆ ಬೇರನ್ನು ಜಜ್ಜಿ ಹಾಕಿ, ಆ ಹಾಲನ್ನು ಅರ್ಧ ಆಗುವವರೆಗೂ ಕಾಯಿಸಿ ಅದಕ್ಕೆ ತುಪ್ಪ ಸಕ್ಕರೆಗಳನ್ನು ಬೆರೆಸಿ, ಲವಂಗ – ಪತರೆ – ಏಲಕ್ಕಿಗಳನ್ನು ಪುಡಿ ಮಾಡಿ ಅದರಲ್ಲಿ ಕಲಸಿ, ಆ ಗಟ್ಟಿಯಾದ ಹಾಲನ್ನು ತೆಗೆದು ಉಂಡೆಗಳನ್ನಾಗಿ ಮಾಡುವುದೇ ಹಾಲುಂಡೆ ಅಥವಾ ಕ್ಷೀರದುಂಡೆ (ಲೋಕೋಪಕಾರ ಗ್ರಂಥ) – ಧಾರವಾಡ ಪೇಡ ಮಾಡುವ ವಿಧಾನವೂ ಇದೇ.

ಸೂಸಲು – ಅಲ್ಲಮಪ್ರಭು ವಚನ. ಈಗ ಸೂಸಲು ಎಂಬುದು ಸೇವಗೆ(ಶ್ಯಾವಿಗೆ?)ಯೊಡನೆ ಕಲಸಿ ತಿನ್ನಲು ಮಾಡಿದ ಎಳ್ಳು ಬೆಲ್ಲಗಳ ಮಿಶ್ರಣವನ್ನು ಸೂಚಿಸುತ್ತದೆ. ಸೇವಗೆಯನ್ನು ಪರಡಿ ಎಂತಲೂ ಕರೆಯುತ್ತಿದ್ದರು. ಹರಿಹರನು ಪರಡಿಯ ಪಾಯಸವನ್ನು ಹೆಸರಿಸುತ್ತಾನೆ. ಮಂಗರಸನು ಹೇಳುವ ‘ಸೂಸಲು ಸಕ್ಕರೆ’ಯೂ ಅಲ್ಲಮನು ಹೇಳುವ ಸೂಸಲು ಒಂದೇ ಇರಬಹುದು. ಹಾಲನ್ನು ಗಟ್ಟಿಯಾಗುವಂತೆ ಕಾಸಿ ಅದನ್ನು ಆರಿಸಿ ಸಕ್ಕರೆಯನ್ನು ಸೇರಿಸಿದರೆ ಸೂಸಲು ಸಕ್ಕರೆಯಾಗುತ್ತದೆಯೆಂದು ಮಂಗರಸನು ವಿವರಿಸುತ್ತಾನೆ.

ಪಾಯಸವನ್ನು ವಚನಗಳಲ್ಲಿ ‘ತುಯ್ಯಲು’ ಎಂದು ಕರೆದಿದ್ದಾರೆ. (ಅಲ್ಲಮಪ್ರಭು, ಬಸವಣ್ಣ)

ಹಡಪದ ಅಪ್ಪಣ್ಣನು ದೋಸೆ-ಕಡುಬುಗಳನ್ನು ಹೆಸರಿಸುತ್ತಾನೆ. ‘ಕಡುಬು’ ಎನ್ನುವುದು ಬಹುಷಃ ‘ಇಡ್ಡಲಿ’ಯನ್ನು ಸೂಚಿಸುತ್ತದೆ. ‘ಇಡ್ಡಲಿಗೆ’ ಯನ್ನು ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಉಲ್ಲೇಖಿಸುತ್ತದೆ. – ಉದ್ದನ್ನು ರುಬ್ಬಿ, ಮೊಸರು, ಇಂಗು, ಜೀರಿಗೆ, ಕೊತ್ತಂಬರಿ, ಮೆಣಸು, ಶುಂಠಿಗಳನ್ನು ಸೇರಿಸಿ ಬೇಯಿಸುವುದು ಇಡ್ಡಲಿಗೆ ಎಂದೆನಿಸಿಕೊಳ್ಳುತ್ತಿತ್ತು. (ಲೋಕೋಪಕಾರ) . ನನ್ನದೊಂದು ಪ್ರಶ್ನೆ. ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿರುವ ಶರಣ ಸಂಸ್ಕೃತಿಯ ಕಾಲದಲ್ಲೇ ಇಡ್ಲಿ ದೋಸೆಗಳು ಉಲ್ಲೇಖಿತವಾಗಿರುವಾಗ ಇಡ್ಲಿ ದೋಸೆಗಳು ತಮಿಳುನಾಡು ಮೂಲದವು ಎಂದು ಹೇಗೆ ಹೇಳುತ್ತೀರಿ?

ಗುಗ್ಗರಿ ಎನ್ನುವುದೂ ಒಂದು ಖಾದ್ಯವಾಗಿತ್ತು – ಬಸವಣ್ಣನ ವಚನ

ಅವಲಕ್ಕಿ – ಬಸವಣ್ಣನ ವಚನ
ಕಿಚ್ಚಡಿ ಮತ್ತು ಮೇಲೋಗರ ಎಂಬುವು ವಿಶಿಷ್ಟ ರೀತಿಯಲ್ಲಿ ತಯಾರಿಸಿದ ಅನ್ನಗಳು. – ಬಸವಣ್ಣ ಹಾಗೂ ದೇವರ ದಾಸಿಮಯ್ಯ ವಚನಗಳು.

ಹುಗ್ಗಿ (ಗೋಧಿ ಹುಗ್ಗಿ?) ಮತ್ತು ಬೆಳಸೆ- ಚನ್ನಬಸವಣ್ಣನ ವಚನಗಳಲ್ಲಿ ಉಲ್ಲೇಖವಾಗಿದೆ. (ಪುಳ್ಗೆಳ್ಗೆ – ಹುಗ್ಗಿಯ ಹಳಗನ್ನಡ ರೂಪವು ‘ರಾಮಚಂದ್ರ ಚರಿತ ಪುರಾಣ’ ದಲ್ಲಿ ಉಲ್ಲೇಖವಾಗಿದೆ)

ಪ್ರಾಚೀನಭಾರತದ ಸಮಯದಲ್ಲಿಯೇ ಪಂಚಾಮೃತದ ಉಲ್ಲೇಖವಿದೆ. ಹಾಲಿಗೆ ಸಕ್ಕರೆ, ತುಪ್ಪ, ಮೊಸರು ಮತ್ತು ಜೇನುಗಳನ್ನು ಸೇರಿಸಿ ದೇವರಿಗೆ ಅಭಿಷೇಕ ಮಾಡಿದಾಗ ಪಂಚಾಮೃತವೆನಿಸಿಕೊಳ್ಳುತ್ತಿತ್ತು. ‘ಬಸವ ಪುರಾಣ’ವು ಮೊಸರಿಗೆ ಬದಲು ಬಾಳೆಯ ಹಣ್ಣನ್ನು ಹೇಳುತ್ತದೆ.

ಹಾಲಿಗೆ ತುಪ್ಪ, ಸಕ್ಕರೆಗಳನ್ನು ಸೇರಿಸುವುದನ್ನು ಮಹಾದೇವಿಯಕ್ಕನು ‘ತ್ರಿವಿಧಾಮೃತ’ ಎಂದು ಕರೆದಿದ್ದಾಳೆ.

ಈ ಬಸವ ಜಯಂತಿಗೆ ಕೇಜಿಗಟ್ಲೇ ಬಂಗಾರ ತೊಗೋಬೇಡಿ. ಬಂಗಾರ ತಿನ್ನಕ್ಕಾಗಲ್ಲ. ಇಲ್ಲಿರುವ ಖಾದ್ಯ ಪದಾರ್ಥಗಳನ್ನ ಮನೆಯಲ್ಲಿ ತಯಾರಿಸಿ ಮಕ್ಕಳೊಂದಿಗೆ ಸೇವಿಸಿ, ವಚನ ಹೇಳಿಸಿ. ಬದುಕು ಸಾರ್ಥಕ.

ಬರಹ – ಶ್ರೀ. ಗಣೇಶ್ ಕೆ. ದಾವಣಗೆರೆ, ಸಹಾಯಕ ಪ್ರಾಧ್ಯಾಪಕರು. Www.pratispandana.WordPress.com

ಆಕರ – ವಚನ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ ಲೇಖಕರು – ಡಾ. ಪಿ.ವಿ.ನಾರಾಯಣ.

ಮಾಸ್ತರಿಕೆಗೆ ಮೂರು – ಹುಬ್ಳೀಕರ್ ಧಾರವಾಡಕರ್ ಗದಗಕರ್ ಪುಣೇಕರ್ ಬೆಳಗಾಂವಕರ್ ಅಷ್ಟೇ ಅಲ್ಲ. ಇಗ್ನೋರ್ ಕರ್ ಇಗ್ನೋರ್ ಕರ್..!

3 years of teaching - An article by Ganesh K Davanagere ಮಾಸ್ತರಿಕೆಗೆ ಮೂರು – ಗಣೇಶ್ ಕೆ. ದಾವಣಗೆರೆ

ಮಾಸ್ತರಿಕೆಗೆ ದೀಡು : ಕಂಡದ್ದೇನು ಕಾಣದ್ದೇನು? – ಭಾಗ ೧

ಮಾಸ್ತರಿಕೆಗೆ ದೀಡು ೨ : ಒಂದೇ ಒಂದು ಕೊನೆಯ ಸಹಿಯ ಬೆಲೆ

ಕಲಾತ್ಮಕ ಮತ್ತು ಸಾಹಿತಿಕ ಪ್ರಕಾರಗಳಲ್ಲಿ ತಂತ್ರಜ್ಞಾನ – ಮುಂದೊಂದು ದಿನ ಇತಿಹಾಸದ ಪುಟ ಸೇರಿ ನಗು ತರಿಸಬಹುದೇ?

ಕಲಾತ್ಮಕ ಮತ್ತು ಸಾಹಿತಿಕ ಪ್ರಕಾರಗಳಲ್ಲಿ ತಂತ್ರಜ್ಞಾನ –  ಮುಂದೊಂದು ದಿನ ಇತಿಹಾಸದ ಪುಟ ಸೇರಿ ನಗು ತರಿಸಬಹುದೇ? 

ಒಂದಿಷ್ಟು ದಶಕಗಳ ಹಿಂದಿನ ಸಿನಿಮಾಗಳತ್ತ ಹೋಗೋಣ. ವಿಲನ್ನು ಬಂದವನೇ ಹೀರೋನ ಅಥವಾ ಹೀರೋಯಿನ್ನಿನ ಮನೆಗೆ ಬರುತ್ತಾನೆ. ಆಗ ಹೀರೋ/ಹೀರೋಯಿನ್ನು ಪೊಲೀಸರಿಗೆ ಫೋನು ಮಾಡಲು ಲ್ಯಾಂಡ್ ಲೈನ್ ಫೋನಿನ (ಫೋನಿನ ವಿವಿಧ ಪ್ರಕಾರಗಳು ಬಂದಾದಮೇಲೆ ಫೋನಿನ ಹಿಂದಿನ ಈ ವಿಶೇಷಣ ಬಂತು) ರಿಸೀವರ್ ಕೈಗೆತ್ತಿಕೊಳ್ಳುತ್ತಾನೆ/ಳೆ. ವಿಲನ್ನು ಟೆಲಿಫೋನಿನ ವಯರ್ ಕತ್ತರಿಸುತ್ತಾನೆ. ಆ ವಯರ್ ನಿಂದಲೇ ಕುತ್ತಿಗೆಗೆ ಬಿಗಿಯುತ್ತಾನೆ. ಈಗಿನ ವೈರ್ ಲೆಸ್ ಯುಗದಲ್ಲಿ ಟೆಲಿಫೋನಿಗೆ ವಯರ್‌ಗಳೂ ಇಲ್ಲ. ಕತ್ತರಿಸುವಂತೆಯೂ ಇಲ್ಲ. ಇನ್ನು ಮುಂದಿನ ಸಿನಿಮಾಗಳಲ್ಲಿ ಮೊಬೈಲ್ ಜಾಮರ್ ತಂದು ವಿಲನ್ ಹೀರೋಯಿನ್ನು, ಹೀರೋಗಳನ್ನ ಕೊಲ್ಲಬೇಕು..! Continue reading

ಲೋಕಪಾಲ್ – ಯಾರದೋ ಹೆಸರು ಯಾರದೋ ಬಸರು ಅನ್ನೋ ಹಂಗಾಯಿತು ಇದು.

ಯಾರದೋ ಹೆಸರು ಯಾರದೋ ಬಸರು ಅನ್ನೋ ಹಂಗಾಯಿತು ಇದು.
ಅಣ್ಣಾ ಹಜಾರೆ ಒಳ್ಳೇ ವ್ಯಕ್ತಿ. ಆದರೆ, ಅವರ ಒಳ್ಳೇತನವನ್ನ ಯಾರು ಹೆಂಗೆ ಬೇಕಾದರೂ ಬಳಸಬಹುದು ಅನ್ನುವುದಕ್ಕೆ ನಿನ್ನೆಯ ರಾಜ್ಯ ಸಭೆ, ಇವತ್ತಿನ ಲೋಕಸಭೆ ಮಸೂದೆ ಮಂಡನೆ, ನಂತರ ಹಜಾರೆಯವರ ಉಪವಾಸ ಅಂತ್ಯ.. ಇವೆಲ್ಲ ಸನ್ನಿವೇಶಗಳು ಪುಷ್ಟಿಕರಿಸುತ್ತವೆ.

ಅಣ್ಣಾ ಹಜಾರೆಯವರನ್ನ ಜೈಲಿಗೆ ತಳ್ಳಿದ್ದನ್ನ, ರಾಮದೇವ ಬಾಬಾರನ್ನ ವೇದಿಕೆಯ ಮೇಲೆ ಅಟ್ಟಾಡಿಸಿಕೊಂಡು ಹೋಗಿದ್ದನ್ನ ನೆನಿಸಿಕೊಳ್ಳಿ. ಎಲ್ಲಿದ್ದ ರಾಹುಲ ಗಾಂಧೀ? ಬಾಯಿ ಸತ್ತು ಹೋಗಿತ್ತಾ ಅವತ್ತು? ಮನೀಷ್ ತಿವಾರಿ “ಅಡಿಯಿಂದ ಮುಡಿಯವರೆಗೆ ನೀನೇ ಭ್ರಷ್ಟ” ಅಂತಾ ಅಣ್ಣಾ ಹಜಾರೆಯವರನ್ನೇ ಅವಮಾನಿಸಿದಾಗ ಎಲ್ಲಿ ಹೋಗಿದ್ದ ರಾಹುಲ ಗಾಂಧೀ? ನಿನ್ನೆ ಅಣ್ಣಾ ಹಜಾರೆಯವರು ರಾಹುಲಗಾಂಧಿಯನ್ನ ಕೊಂಡಾಡಿದ್ದೇನು ರಾಹುಲಗಾಂಧೀ ಅಣ್ಣಾ ಹಜಾರೆಯವರನ್ನ ಕೊಂಡಾಡಿದ್ದೇನು. ಇವೆಲ್ಲ ಕನಸಿನ ಚಿತ್ರಗಳಂತೆ ಕಣ್ಣ ಮುಂದೆ ಸರಿದು ಹೋದವು.

ಅಣ್ಣಾ ಹಜಾರೆಯವರು ಇಲ್ಲಿಯವರೆಗೂ ರಾಲೇಗಣ ಸಿದ್ಧಿಯಲ್ಲೇ ಉಪವಾಸ ಸತ್ಯಾಗ್ರಹಗಳನ್ನ ಮಾಡಿಕೊಂಡಿದ್ದರೆ ದೇಶಾದ್ಯಂತ ಸುದ್ದಿಯಾಗುತ್ತಿತ್ತೇ? ಯುವಕರನ್ನ ಸಂಘಟಿಸಲಾಗುತ್ತಿತ್ತೇ? ಸರ್ಕಾರದ ಮೇಲೆ ಒತ್ತಡ ನಿರ್ಮಿಸಲಾಗುತ್ತಿತ್ತೇ? ಅರವಿಂದ ಕೇಜ್ರಿವಾಲ್ ಅನ್ನೋ ವ್ಯಕ್ತಿ ಹಜಾರೆಯವರ ಹಿಂದಿನ ಎಲ್ಲ ಉಪವಾಸ ಸತ್ಯಾಗ್ರಹಗಳಲ್ಲಿ ಹಿಂದೆ ನಿಂತು ಸಂಘಟಿಸಿ, ದೇಶದಲ್ಲಿ ಸಂಚಲನ ಮೂಡಿಸಲಿಲ್ಲವೇ?

ಸೌಜನ್ಯಕ್ಕಾದರೂ ಕೇಜ್ರಿವಾಲ್ ಹೆಸರು ಹೇಳಿದ್ದರೂ ಅಣ್ಣಾ ಹಜಾರೆ ಇನ್ನೂ ದೊಡ್ಡವರಾಗುತ್ತಿದ್ದರು. ನಿಷ್ಪಕ್ಷಪಾತಿ ಅನ್ನಿಸಿಕೊಳ್ಳುತ್ತಿದ್ದರು.