Brand Davanagere..!-Ganesh K, Davangere

ದಾವಣಗೆರೆ ಬೆಣ್ಣೆ ದೋಸೆ..!

Ganesh K, Davangere- 2ganesh@gmail.com

ಬ್ರಾಂಡ್ ದಾವಣಗೆರೆ ಅಂದರೆ, ಕೆಲವೇ ಸಾಲುಗಳಲ್ಲಿ ಹೇಳುವುದಾದರೆ,

  ದಾವಣಗೆರೆ ಬೆಣ್ಣೆದೋಸೆ (ಸಾಗರ್ ಬೆಣ್ಣೆದೋಸೆ ಹೋಟೆಲ್, ಗುರುಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್)
  ಖಾರ ಮಂಡಕ್ಕಿ ಮೆಣಸಿನಕಾಯಿ, ಒಗ್ಗರಣೆ ಮಂಡಕ್ಕಿ(ನಾಲ್ಕು ರೋಡು ಕೂಡೋ ಎಲ್ಲಾ ಸರ್ಕಲ್ ಗಳಲ್ಲೂ ಲಭ್ಯ..!)
  ಬಿ.ಎಸ್. ಚನ್ನಬಸಪ್ಪ ಅಂಗಡಿ(ಕಾಳಿಕಾದೇವಿ ರೋಡ್)
  ಮುರುಘಾ ಮಠ, ಶಿವಯೋಗ ಮಂದಿರ
  ಶಾಮನೂರು ಶಿವಶಂಕರಪ್ಪ(ಎಸ್.ಎಸ್)
  ದಶಕದ ಹಿಂದೆ ಜವಳಿ ಕಾರ್ಖಾನೆಗಳಿದ್ದ ಕರ್ನಾಟಕದ ಮ್ಯಾಂಚೆಸ್ಟರ್(ದಾವಣಗೆರೆ ಕಾಟನ್ ಮಿಲ್ಲ್ಸ್, ಡಿ.ಸಿ.ಎಂ)
  ಭಾರೀ ವ್ಯಾಪಾರ, ವಾಣಿಜ್ಯ ವಹಿವಾಟುಗಳ ಸ್ಥಳ, ಈಗ ಪ್ರಮುಖ ವಿದ್ಯಾಕೇಂದ್ರ
  ಊರ ದೇವತೆ ದುರ್ಗಾಂಬಾ ದೇವಸ್ಥಾನ
  ಅತ್ಯಧಿಕ ಸಿನಿಮಾ ಅಭಿಮಾನಿಗಳು ಇರುವ ಜಾಗೆ(ಬೆಂಗಳೂರು ಬಿಟ್ಟರೆ ಆ ಮಟ್ಟಿಗಿನ ಸಿನಿಮಾ ಗೀಳು ದಾವಣಗೆರೇದೇ)

ದಾವಣಗೆರೆ ಬ್ರಾಂಡು ಅಂದ್ರೆ ಅಸಲಿಗೆ ಖಾರ ಮಂಡಕ್ಕಿ ಮೆಣಸಿನಕಾಯಿ. ಬೆಂಗಳೂರು ಮಂದಿಗೆ ಅದು ಇನ್ನೂ ತಿಳಿದಿಲ್ಲ. ಇಲ್ದಿದ್ರೆ ಬೆಂಗಳುರು ತುಂಬಾ ಮಂಡಕ್ಕಿಮೆಣಸಿನಕಾಯಿ ಅಂಗಡಿಗಳಾಗುತ್ತಿದ್ದ್ವವು. ಸಧ್ಯಕ್ಕೆ ನವರಂಗ್ ಚಿತ್ರಮಂದಿರದ ಬಳಿಯ “ನಳಪಾಕ”ದಲ್ಲಿ ಒಗ್ಗರಣೆ ಮಂಡಕ್ಕಿ, ಮೆಣಸಿನಕಾಯಿ ಸಿಗುತ್ತವೆ. ಒಮ್ಮೆ ನಮ್ಮೂರಿನ ರುಚಿ ನೋಡಿ ಬನ್ನಿ. ಹಾಗೇ ಬೆಂಗಳೂರಿನ ವಿಜಯ ನಗರ, ಆರ್.ಪಿ.ಸಿ ಲೇ ಔಟ್‍ ಗಳಲ್ಲಿ ಕೂಡಾ ಮಂಡಕ್ಕಿ, ಮೆಣಸಿನಕಾಯಿ, ನರ್ಗೀಸ್ ಮುಂತಾದವು ಎಲ್ಲವೂ ಸಿಗುತ್ತವಂತೆ. ಮುಂದಿನ ಲೇಖನದಲ್ಲಿ ಸರಿಯಾದ ವಿಳಾಸ ಒದಗಿಸುವೆ. ಇಷ್ಟ್ ಹೇಳಿ ಬರೀ ದಾವಣಗೆರೆಯಲ್ಲಿ ಸಿಕ್ರೆ ಬೆಂಗಳುರ್ನೋರ್ ಏನ್ ಮಾಡ್ಬೇಕು ಅಂತಾ ಕೇಳ್ಬಾರ್ದಲ್ಲ ಅದಕ್ಕೆ..! ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ಲಿನ “ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್”(ಆ ಹೆಸರಿನ ಎರಡು ಹೋಟೆಲ್ ಗಳಿವೆ. ಅದೂ ಒಂದೇ ರಸ್ತೆಯಲ್ಲಿ. ನಾನು ಹೇಳಿದ್ದು ನೋಡಲು ಸಣ್ಣ ಆಕಾರದಲ್ಲಿರುವ ಹೋಟೆಲ್ ಬಗ್ಗೆ. ಇದು ಬಸ್ ಸ್ಟಾಪ್ ಇರುವ ಸಾಲಿನಲ್ಲಿ ಇದೆ.)ನಲ್ಲಿ ಕೂಡಾ ದಾವಣಗೆರೆ ಐಟೆಂಗಳು ಲಭ್ಯ. ಒಮ್ಮೆ ಟೇಸ್ಟ್ ಮಾಡಿ ನೋಡಿ. ಹೌದು ಜಿಹ್ವಾಚಾಪಲ್ಯಕ್ಕೆ ಆಹಾರವನ್ನೊದಗಿಸುವುದರ ಬಗ್ಗೇನೇ ಏಕೆ ಬರಿತಿದೀನಿ ಅಂದ್ರೆ, ಸಂತೋಷದ ಗಳಿಗೆಗಳು, ವಿಚಾರ ವಿನಿಮಯಗಳು, ಚರ್ಚೆಗಳು, ಹರಟೆಗಳು ನೆಡೆಯುವುದು ತಿಂಡಿ ತೀರ್ಥ ಸೇವನೆಯ ಸಮಯದಲ್ಲಿಯೇ. ರುಚಿಕಟ್ಟಾದ ಪದಾರ್ಥಗಳನ್ನು ಸೇವನೆ ಮಾಡುತ್ತಲೇ, ನಮ್ಮ ಗೆಳೆಯರ, ಕುಟುಂಬವರ್ಗದವರ ಜೊತೆಗೆ ಜೀವನದ ಅರ್ಥಪೂರ್ಣ ಸವಿಗಳಿಗೆಗಳನ್ನು ಕಳಿಯುತ್ತೇವೆ.

ಖಾರ ಮಂಡಕ್ಕಿಯನ್ನ ದಾವಣಗೆರೆಯಲ್ಲಿ “ಹೊಟ್ಟೆ ನಂಜಪ್ಪನ ಅಂಗಡಿ”ಯಲ್ಲಿ ತೊಗೊಂಡರೆ ಅದರ ರುಚಿನೇ ಬೇರೆ..! ನಿಜಕ್ಕೂ ಅದರ ರುಚಿಗಾಗಿ ಸಂಜೆ ಆ ಸಣ್ಣ ಅಂಗಡಿ ಮುಂದೆ ಜನ ಕ್ಯೂ ಹಚ್ಚಿರ್ತಾರೆ..! ಸಂಜೆ ೭ ಕ್ಕೆ ತೆಗೆಯೋದು. ಖಾರ ಮಂಡಕ್ಕಿ, ಮೈಸೂರು ಪಾಕು ಮಾಡೋದ್ರಲ್ಲಿ ಎತ್ತಿದ ಕೈ. ಅದೆಷ್ಟು ದಶಕಗಳುಕಳೆದವೋ ಏನುತಾನೋ ಆ ಅಂಗಡಿ ಶುರುವಾಗಿ. ಈಗಲೂ ಸಣ್ಣ ಮಕ್ಕಳು ಕೈಯೊಡ್ಡಿದರೆ ಖಾರ, ಘಾಟಿ ಕೈಗಿಡುತ್ತಾರೆ..! ಅಷ್ಟು ದೊಡ್ಡಗುಣ. ಅದೆಷ್ಟು ಮಂದಿ ದಿನಕ್ಕೆ ಹಾಗೆ ತಿಂದು ಹೋಗುತ್ತಾರೋ..? ನಂಜಪ್ಪನ ಅಂಗಡಿಯ ಒಂದು ಫೋಟೋನ್ನ ಇಲ್ಲಿ ಹಾಕಿದ್ದೇನೆ.

ಇನ್ನೊಂದು ಸ್ವಾರಸ್ಯದ ಸಂಗತಿ ಹೇಳ್ತೀನಿ ಕೇಳಿ. ಮೊನ್ನೆ ಮೊನ್ನೆ ದಾವಣಗೆರೆಗೆ ಹೋದಾಗ, ನಂಜಪ್ಪನ ಅಂಗಡಿ ಫೋಟೊ ತೆಗೀತಿದ್ದೆ. ಆವಾಗ ಒಬ್ಬ ಸಫಾರಿ ಹಾಕಿಕೊಂಡ ಮಧ್ಯ ವಯಸ್ಕ ವ್ಯಕ್ತಿ ನನ್ನನ್ನೇ ಕೆಕ್ಕರಿಸಿ ನೋಡಿ, “ಯಾವ ಡಿಪಾರ್ಟಮೆಂಟು?” ಅಂತಾ ಕೇಳಿದ್ದರು. ಅದಕ್ಕೆ ಐ.ಟಿ ಅನ್ನಬೇಕಿತ್ತು. ಅವಕಾಶ ತಪ್ಪಿಹೋಯಿತು..! (ಐ.ಟಿ. ಅಂದ್ರೆ ಇನ್ಕಮ್ ಟ್ಯಾಕ್ಸೂ ಆಗಬಹುದು, ಇನ್ಫಾರ್ಮೇಷನ್ ಟೆಕ್ನಾಲಜೀನೂ ಆಗಬಹುದಲ್ವಾ..!)ಬೆಂಗಳೂರಿನಲ್ಲಿದ್ದೇನೆ. ಸಾಫ್ಟ್‌ವೇರ್ ಎಂಜಿನಿಯರ್ ಎಂದೆ. ಆತನಿಗೆ ನಂಬಿಕೆ ಬರಲಿಲ್ಲ..! ನಾನು ಒಬ್ಬ ಬರಹಗಾರ. ದಾವಣಗೆರೆ ಬಗ್ಗೆ ಒಂದು ವೆಬ್ ಪೇಜ್ ಮಾಡಬೇಕೆಂದುಕೊಂಡಿದ್ದೇನೆ. ದಾವಣಗೆರೆ ಅಂದಾಕ್ಷಣ ನೆನಪಿಗೆ ಬರುವಂಥವನ್ನು ನನ್ನ ಬ್ಲಾಗಿಗೆ ಹಾಕಬೇಕೆಂದುಕೊಂಡಿದ್ದೇನೆ ಅಂದಾದ ಮೇಲೆ ಸ್ವಲ್ಪ ನಿರಾಳನಂತೆ ಕಂಡು ಬಂದ. ನಾನು “ನೀವು ಏನ್ ಮಾಡ್ತಾ ಇದೀರಾ ಸರ್?” ಎಂದಾಗ ಆತ “ಇನ್ಸ್‌ಪೆಕ್ಟರ್” ಅಂದ. ಈಗ ಡಿಪಾರ್ಟ್ಮೆಂಟು ಕೇಳುವ ಸರದಿ ನನ್ನದಾಗಿತ್ತು. ನಾನು “ಯಾವ ಡಿಪಾರ್ಟ್‌ಮೆಂಟು?” ಅಂದೆ. “ಹೆಲ್ತ್ ಡಿಪಾರ್ಟ್‌ಮೆಂಟ್” ಅಂದರು. ಆಮೇಲ್ ಗೊತ್ತಾಯ್ತು ಈ ವಯ್ಯ ಯಾಕೆ “ಡಿಪಾರ್ಟ್‌ಮೆಂಟು” ಕೇಳಿದ್ದು ಅಂತಾ..! ಆಮೇಲೆ ಸ್ವಲ್ಪ ಹೊತ್ತಾದ ಮೇಲೆ, ತುಂಬಾ ರಶ್ ಇದ್ದ ಅಂಗಡಿಯಲ್ಲಿ ಮಾಲೀಕರಾದ ನಂಜಪ್ಪನವರ ವಂಶಸ್ಥರು, ನೀವು ಕಾಣಲಿಲ್ಲ. ಇಲ್ಲಾ ಅಂದಿದ್ರೆ ನಿಮ್ಗೇ ಮೊದ್ಲು ಹಾಕಿಸ್ತಿದ್ದೆ ಅಂದು ಅವರಿಗೇ ಮೊದಲು ಕೊಡಮಾಡಿದರು..! ನಂಜಪ್ಪನವರ ಅಂಗಡೀಲಿ ಮೈಸೂರುಪಾಕು ತಿನ್ನಬೇಕು. ತುಪ್ಪದಲ್ಲಿ ಮಾಡಿದ ಮೈಸೂರುಪಾಕು…ಬಾಯಲ್ಲಿ ಇಟ್ರೆ ಕರಗುವಂತಿರುತ್ತೆ.. ಒಮ್ಮೆ ಯಾವಾಗಲಾದ್ರೂ ದಾವಣಗೆರೆಗೆ ಹೋದ್ರೆ ನಂಜಪ್ಪನ ಅಂಗಡೀಲಿ ಖಾರ, ಮೈಸೂರು ಪಾಕು ತೊಗೋಳೋದು ಮರ್ತುಬಿಟ್ಟೀರ..!

ಬೆಣ್ಣೆ ದೋಸೆಗೆ ದಾವಣಗೆರೆ ಹೆಸರು ಅಂಟಿಕೊಂಡಿದ್ದು ೯೭ರಿಂದೀಚೆಗೆ ಅಂತಾ ಕಾಣುತ್ತೆ. ಸಾಹಿತಿಗಳು, ಲೇಖಕರು ಒಂದು ಕಾಲದಲ್ಲಿ ಬೆಂಗಳೂರಿನ “ವಿದ್ಯಾರ್ಥಿಭವನ”ದ ದೋಸೆ ತಿಂದು ಆ ಹೋಟೆಲ್‌ ಗೆ ಒಂದು ಮಹತ್ವದ ಸ್ಥಾನ ತಂದು ಕೊಡಲಿಲ್ಲವೇ..? ಇತ್ತೀಚೆಗೆ ಎಸ್ಸೆಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕೂಡಾ, ಅಲ್ಲಿ ಅವರು ಮಸಾಲೆ ದೋಸೆ ತಿನ್ನೋ ಫೋಟೋ ಪೇಪರ್ನಲ್ಲಿ ಬಂದಿತ್ತು. ದಾವಣಗೆರೆ ೯೭ರಲ್ಲಿ ಜಿಲ್ಲೆಯಾಗಿ ರಚನೆಯಾದಾಗ ಜೆ.ಹೆಚ್.ಪಟೇಲರು ಸಾಗರ್ ಬೆಣ್ಣೆದೋಸೆ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ತಿಂದಿದ್ದರು. ಆಗಿನಿಂದ ದಾವಣಗೆರೆ ಸುದ್ದಿಯಾಗಿ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಅದು ಜೆ.ಹೆಚ್.ಪಟೇಲರಿಂದ ಮಾತ್ರವಲ್ಲದೇ, ಹಲವಾರು ಕಾರಣಗಳೂ ಇದ್ದವು. ಆದರೆ ಪಟೇಲರಿಂದ ಮಹತ್ವ ಬಂತು. ಈಗಂತೂ ರಾಜ್ಯಾದ್ಯಂತ ದಾವಣಗೆರೆ ಅಂದ್ರೆ ಬೆಣ್ಣೆದೋಸೆಯಿಂದಲೇ ಗುರುತಿಸುತ್ತಾರೆ !

ಈಗ ನಮ್ಮೂರು ರಾಜ್ಯದ ವಿದ್ಯಾಕೇಂದ್ರ ಬಿ.ಐ.ಇ.ಟಿ(ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ಜಿ.ಎಂ.ಐ.ಟಿ(ಜಿ.ಮಲ್ಲಿಕಾರ್ಜುನಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ಯು.ಬಿ.ಡಿ.ಟ(ಯೂನಿವರ್ಸಿಟಿ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪ )ಎಂಜಿನಿಯರಿಂಗ್ ಕಾಲೇಜುಗಳು, ಜೆ.ಜೆ.ಎಂ(ಜಗದ್ಗುರು ಜಯದೇವ ಮುರುಘರಾಜೇಂದ್ರ), ಎಸ್.ಎಸ್.ಎಂ(ಶಾಮನೂರು ಶಿವಶಂಕರಪ್ಪ ಮಲ್ಲಿಕಾರ್ಜುನಪ್ಪ), ಎ.ವಿ.ಕೆ(ಅಜ್ಜಂಪುರ ವಿರೂಪಾಕ್ಷಪ್ಪ ಕಮಲಮ್ಮ) ಮಹಿಳಾ ಪದವಿ ಪೂರ್ವ, ಪದವಿ ಕಾಲೇಜು, ಡಿ.ಆರ್.ಎಂ(ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ)ಪದವಿ ವಿಜ್ಞಾನ ಕಾಲೇಜು, ತರಳಬಾಳು, ಅನುಭವ ಮಂಟಪ, ಇತ್ತೀಚಿನ ತಿಮ್ಮಾರೆಡ್ಡಿ ಕಾಲೇಜು, ನೂತನ್ ಮುಂತಾದ ಕಾಲೇಜುಗಳಿಂದಾಗಿ ೯೦ರ ದಶಕದಿಂದಾಚೆಗೆ ಜವಳಿ ಕಾರ್ಖಾನೆಗಳು ಮುಚ್ಚಿ ಸಂಕಷ್ಟದ ಸ್ಥಿತಿಯಲ್ಲಿದ್ದ ದಾವಣಗೆರೆ ಮಹತ್ವದ ವಿದ್ಯಾಕೇಂದ್ರವಾಗಿ ಬೆಳೆಯಿತು.

ಇದು ನಮ್ಮೂರಿನ ಬಿ.ಎಸ್ ಚನ್ನಬಸಪ್ಪ ಅಂಗಡಿ. ರಾಜ್ಯದಲ್ಲೇ ಮದುವೆ ಜವಳಿಗೆ ಹೆಸರಾಂತ ಅಂಗಡಿ. ಸೂರತ್ ನ ಮಿಲ್ಲುಗಳಿಂದ ಸೀದಾ ಖರೀದಿ ಮಾಡುವುದರಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಸೀರೆ, ಬಟ್ಟೆಗಳು ಲಭ್ಯವಾಗುತ್ತವೆ. ಸಗಟು ವ್ಯಾಪಾರದಿಂದಾಗಿ ರಾಜ್ಯದಲ್ಲಿ ಮದುವೆ ಜವಳಿಗಳಿಗೆ ಬಟ್ಟೆ ಖರೀದಿಗಾಗಿ ಈ ಅಂಗಡಿಯನ್ನೇ ಹೆಸರಿಸುತ್ತಾರೆಂದರೆ ಅದರ ವ್ಯಾಪ್ತಿ ಅರ್ಥವಾಗಬಹುದು. ಇದು ದಾವಣಗೆರೆಯನ್ನು, ಅದರ ಹೆಸರನ್ನು ಉಜ್ವಲಗೊಳಿಸಲು ತನ್ನ ಪಾಲಿನ ಸೇವೆಯನ್ನು ನೀಡಿದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಕೆಲಸಗಾರರು(ಒಂದು ಅಂದಾಜಿನ ಮೇಲೆ ಹೇಳುತ್ತಿದ್ದೇನೆ. ಮೊದಲು ಅಷ್ಟಿತ್ತು. ಈಗ ಇನ್ನೂ ಜಾಸ್ತಿ ಆಗಿದೆ.) ಹಗಲೂ ರಾತ್ರಿ ದುಡಿಯುತ್ತಿದ್ದಾರೆ. ಬೆಳಗ್ಗೆ ೯ಕ್ಕೆ ಶುರುವಾದರೆ ರಾತ್ರಿ ೧೧ಕ್ಕೆ ಹೋಗುವುದು. ಶಿಫ್ಟ್‌ಗಳಲ್ಲಿ ಕೆಲಸ ನೆಡೆಯುತ್ತದೆ. “ಆದರ್ಶ ದಂಪತಿ” ಕಾರ್ಯಕ್ರಮಕ್ಕೆ ಪ್ರಾಯೋಜಕತ್ವವನ್ನು ನೀಡಿದ್ದರಿಂದ ಈ ಅಂಗಡಿಯು ಜನಪ್ರಿಯತೆಯ ಶಿಖರದಲ್ಲಿ ನೆಲೆಗೊಳ್ಳಲು ಅನುವಾಯಿತು. ಬೆಂಗಳೂರಿನ ಕೆಲವು ಅಂಗಡಿಗಳೂ ಕೂಡಾ ಬಿ.ಎಸ್.ಚನ್ನಬಸಪ್ಪನ ಅಂಗಡಿಯಲ್ಲಿ ಸಗಟು ಖರೀದಿಸುತ್ತವೆ. ದಾವಣಗೆರೆಯ ಸುತ್ತಮುತ್ತಲಿನ ಹಳ್ಳಿ ಜನಕ್ಕೆ ಚನ್ನಬಸಪ್ಪನ ಅಂಗಡಿಯಲ್ಲಿ ಹಬ್ಬಕ್ಕೆ ಬಟ್ಟೆ ತೆಗೆದುಕೊಂಡರೇನೇ ಸಮಾಧಾನ. ಹಬ್ಬ-ಹರಿದಿನಗಳಲ್ಲಿ ಈ ಅಂಗಡಿಯ ಮೆಟ್ಟಲು ಹತ್ತಲಿಕ್ಕೂ ಸಾಧ್ಯವಿಲ್ಲ. ಅಷ್ಟು ಜನಸಾಗರ. ಕಾಳಿಕಾದೇವಿ ರೋಡ್ ಪೂರಾ ಬಿ.ಎಸ್.ಚನ್ನಬಸಪ್ಪ ಅಂಗಡಿಯವರು ಗುತ್ತಿಗೆ ತೊಗೊಂಡಂತಿದಾರೆ..! ಪಕ್ಕದಲ್ಲೇ ಹಲವಾರು ಬಟ್ಟೆ ಅಂಗಡಿಗಳಿದ್ದರೂ ಜನರ ಆಯ್ಕೆ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಟ್ರೈನಿನಲ್ಲಿ ಕುಳಿತುಕೊಂಡಾಗ ದಾರಿಯಲ್ಲಿ ಹಳ್ಳಿಗಳ ಮನೆಗಳ ಮೇಲೆ ಬಿ.ಎಸ್.ಚನ್ನಬಸಪ್ಪ ಅಂಗಡಿಯ ಜಾಹೀರಾತು. ತುಮಕೂರು ದಾಟುತ್ತಲೇ ಇದು ನಿಮ್ಮ ಕಣ್ಣಿಗೆ ಬೀಳತೊಡಗುತ್ತದೆ. ತಿಪಟೂರಿನಲ್ಲೂ ಅವರದೇ ಒಂದು ಅಂಗಡಿ ಇದೆ. ಪಕ್ಕದಲ್ಲೂ ಎಷ್ಟೋ ಬಟ್ಟೆ ಅಂಗಡಿಗಳಿದ್ದರೂ ಜನರ ಆಯ್ಕೆ ಈ ಅಂಗಡೀದೇ..! ಒಂದು ಬ್ರಾಂಡ್ ಅಂತಾದ ಮೇಲೆ ಇದು ಸಾಧ್ಯ.

(ಮುಂದುವರಿಯುತ್ತದೆ.)

2 thoughts on “Brand Davanagere..!-Ganesh K, Davangere

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s