ಮೌನವೇಕೆ..?

     ಪಕ್ಕದ ಚೀನಾದಲ್ಲಿ ಟಿಬೆಟ್ ಸ್ವಾಯತ್ತತೆಗಾಗಿ ಹೋರಾಟ ತೀವ್ರಗೊಂಡಿದೆ. ಬೌದ್ಧ ಬಿಕ್ಷುಗಳು ಲ್ಹಾಸಾದಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಲ್ಹಾಸಾ ಅಕ್ಷರಶಃ ಬೆಂಕಿಯುಂಡೆಯಂತಾಗಿದೆ. ತಾತ್ಕಾಲಿಕ ಶಮನ ಕಂಡರೂ, ಬೂದಿ ಮುಚ್ಚಿದ ಕೆಂಡ. ಸರ್ವಾಧಿಕಾರಿ ಧೋರಣೆಯ ಚೀನಾ ಪ್ರತಿಭಟನಾಕಾರರಿಗೆ ‘Dead’line ನೀಡಿದ್ದು ಮುಗಿದಿದೆ. ಹೋರಾಟವನ್ನು ಹತ್ತಿಕ್ಕಲಿಕ್ಕೆ ಹರಸಾಹಸ ಮಾಡುತ್ತಲೇ ಇದೆ.  ಹತ್ತಿಕ್ಕಿದಷ್ಟೂ ಹೋರಾಟ ತೀವ್ರತೆ ಪಡೆಯುತ್ತದೆ. ಅದೇ ಈಗ ನೆಡೆಯುತ್ತಿರುವುದು. ಹೋರಾಟಗಾರರನ್ನು ಮಾತುಕತೆಗೆ ಆಹ್ವಾನಿಸುವುದು ಸರ್ವಾಧಿಕಾರಿ, ಸಾಮ್ರಾಜ್ಯಶಾಹೀ ಚೀನಾ ಆಡಳಿತಗಾರರಿಗೆ ಗೊತ್ತಿಲ್ಲ. ಅಷ್ಟಕ್ಕೂ ಟಿಬೆಟ್ಟಿಯನ್ನರು ಕೇಳುತ್ತಿರುವುದಾದರೂ ಏನನ್ನ? ಮೊದಲು ಸಂಪೂರ್ಣ ಸ್ವತಂತ್ರ ಕೇಳುತ್ತಿದ್ದವರು ಈಗ ಕೇವಲ ಸ್ವಾಯತ್ತತೆ ಕೇಳುತ್ತಿದ್ದಾರೆ. ಪ್ರತ್ಯೇಕತೆ ಬದಲಾಗಿ ಸ್ವಾಯತ್ತತೆ, ಟಿಬೆಟ್ಟಿಯನ್ನರ ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಅದನ್ನೂ ಚೀನಾ ಕಾನೂನಿನ ಅಡಿಯಲ್ಲಿ ರಕ್ಷಿಸಲಾಗಿರುವ ಹಕ್ಕುಗಳ ಮುಖಾಂತರವಾಗಿ. ಟಿಬೆಟನ್ನ ಆಕ್ರಮಿಸಿಕೊಂಡು, ಅದರ ಸಕಲ ಸಂಪನ್ಮೂಲವನ್ನೂ ಬಳಸಿಕೊಳ್ಳುತ್ತಿರುವ ಚೀನಾ ಅಲ್ಲಿನ ಜನರಿಗೆ ನ್ಯಾಯ ಒದಗಿಸುವುದು ತರವಲ್ಲವೇ?  ಟಿಬೆಟ್ಟಿನ ಜನ ಸರಿಯಾದ ಸಮಯಕ್ಕೇ ಹೋರಾಟ ಶುರು ಮಾಡಿದ್ದಾರೆ. ಒಲಂಪಿಕ್ ಕ್ರೀಡಾಕೂಟ ನೆಡೆಯುವ ಸಮಯ. ಚೀನಾವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆಡಳಿತಗಾರರಿಗೆ ಪಾಠ ಕಲಿಸಲು ಸರಿಯಾದ ಸಮಯ. ಯಾವ ಕೆಲಸಗಳನ್ನೂ ಮಾಡದೇ ಓಟು ಕೇಳಲಿಕ್ಕೆ ಹೋಗುವ ರಾಜಕಾರಣಿಗಳಿಗೆ ಮತದಾರರು ಚುನಾವಣಾ ಸಮಯದಲ್ಲಿ ಬುದ್ಧಿ ಕಲಿಸುವುದಿಲ್ಲವೇ ಅದೇ ಥರ.

     ಇಲ್ಲಿ ನಾನು ಹೇಳ ಹೊರಟಿರುವುದು ಭಾರತೀಯ ರಾಜಕೀಯ ಆಡಳಿತಗಾರರ ನಿಷ್ಕ್ರಿಯತೆಯನ್ನು. ವಿದೇಶಾಂಗ ಇಲಾಖೆಯಲ್ಲಿ ಯಾರೂ ಎದೆಗಾರಿಕೆಯನ್ನು ಹೊಂದಿದವರಿಲ್ಲವೇ? ಚೀನಾದಲ್ಲಿ ಟಿಬೆಟಿಯನ್ನರ ಹತ್ಯೆನೆಡೆಯುತ್ತಿದ್ದರೆ, ಅದನ್ನು ವಿರೋಧಿಸಿ ಹೇಳಿಕೆ ನೀಡುವಷ್ಟು ಸಮರ್ಥವಿಲ್ಲವೇ ಭಾರತ..? ಅಷ್ಟೊಂದು ನಿರ್ಬಲತೆ ಇದೆಯೇ ಭಾರತಕ್ಕೆ? ಪಶ್ಚಿಮ ದೇಶಗಳು, ಅಮೇರಿಕಾ ಚೀನಾಕ್ಕೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತೆ ಹೇಳಿವೆ. ಆದರೆ, ಭಾರತ ಸರ್ಕಾರ ದನಿ ಇದೆಯೆಂಬುದನ್ನೇ ಮರೆತಂತಿದೆ. ಪಕ್ಕದ ದೇಶದಲ್ಲಿ ಥರಾವರೀ ಸಾಮ್ರಾಜ್ಯಶಾಹೀ ಪ್ರೇರಿತ ಕೊಲೆಗಳು ನೆಡೆಯುತ್ತಿದ್ದರೆ, ಭಾರತದ ದಿವ್ಯ ಮೌನ. ಎಡ ಪಕ್ಷಗಳು ಬೆಂಬಲ ನೀಡಿವೆ ಎಂದ ಮಾತ್ರಕ್ಕೆ ಚೀನಾವನ್ನೂ ಟೀಕಿಸದ, ಚೀನಾಕ್ಕೆ ಬುದ್ಧಿ ಹೇಳುವ ಅಧಿಕಾರವನ್ನೂ ಯುಪಿಎ ಸರ್ಕಾರ ಕಳೆದುಕೊಂಡಿದೆಯೇ? ಅಣು ಒಪ್ಪಂದ ಅಮೇರಿಕಾದ ಜೊತೆ ನೆಡೆಯುತ್ತಿದೆ ಎನ್ನೋ ಒಂದೇ ಒಂದು ಕಾರಣಕ್ಕೆ, ಅದನ್ನು ಶಾನೆ ವಿರೋಧಿಸುವ ಕಮ್ಮ್ಯುನಿಷ್ಟರು ಅದೇ ಒಪ್ಪಂದ ರಷ್ಯಾದ ಜೊತೆ ಆಗಿದ್ದರೆ, ಅದನ್ನ ನಗುಮೊಗದಿಂದ ಸ್ವಾಗತಿಸುತ್ತಿದ್ದರು. ಇಲ್ಲಿ ಪ್ರಶ್ನೆ ಬರೋದು ನಿಷ್ಠೆ ಸಿದ್ಧಾಂತಕ್ಕೋ ತನ್ನ ದೇಶಕ್ಕೋ ಅನ್ನೋದು. ದೇಶಕ್ಕೆ ಅನ್ನೋದಾದ್ರೆ, ದೇಶದ ಹಿತ ಮೊದಲ ಆದ್ಯತೆಯಾಗಬೇಕು. ಸಿದ್ಧಾಂತಕ್ಕೆ ಅನ್ನೋದಾದ್ರೆ, ಅದು ದೇಶಕ್ಕೆ ಯಾವ ದ್ರೋಹವನ್ನು ಬಗೆಯಲೂ ಹಿಂಜರಿಯದಂಥ ಮನಸ್ಥಿತಿ.

    ಕಮ್ಮುನಿಸಂ ಅನ್ನುವುದು ಬಡವರ, ಶೋಷಿತರ ಪರವಾಗಿ ನಿಂತು ಬಂಡವಾಳಶಾಹಿಗಳ ವಿರುದ್ಧವಾಗಿ ನಿಂತು ಕೆಲಸ ಮಾಡುವಂಥದ್ದು. ಆದರೆ, ಪ್ರಜಾಸತ್ತಾತ್ಮಕ ಸಮಾಜವಾದಕ್ಕೂ ಅದಕ್ಕೂ ಬಹಳ ವ್ಯತ್ಯಾಸವಿದೆ. ಪ್ರಜಾಪ್ರಭುತ್ವದಲ್ಲಿದ್ದುಕೊಂಡೇ ಬಡವರ, ಶೋಷಿತರ, ದಲಿತರ ಪರವಾಗಿ ಹೋರಾಡಬಹುದು. ಆದರೆ, ಚೀನಾದ್ದು ಸರ್ವಾಧಿಕಾರಿ ಧೋರಣೆ. ಪ್ರಜಾಪ್ರಭುತ್ವವಿಲ್ಲದ ದೇಶದಲ್ಲಿ ಪ್ರಜೆಗಳ ಹಕ್ಕುಗಳು ರಕ್ಷಿಸಲ್ಪಡುವುದಾದರೂ ಹೇಗೆ? ಕಮ್ಯುನಿಸಂ ಅನ್ನೋದು ಈಗ ಶುದ್ಧ ಶೋಷಕರ ಪರಿಸ್ಥಿತಿಯನ್ನು ಬಿಡಿ ಬಿಡಿಯಾಗಿ ಬಿಡಿಸಿಡುತ್ತಿದೆ. ಕಮ್ಮ್ಯುನಿಸಂ ಅನ್ನೋದು ಬಡವರ ಪರವಾಗಿ ನಿಲ್ಲುವಂಥದ್ದು ಅನ್ನೋದಾದರೂ, ಅದು ನೆಗೆಟಿವಿಟಿಯ ಪ್ರತೀಕವಾಗಿದೆ. ಬಡವರನ್ನು, ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳುವ ಕಮ್ಮ್ಯುನಿಷ್ಟರು ಅವರನ್ನು ಬಡವರನ್ನಾಗಿಯೇ ಉಳಿಸುತ್ತಾರೆ. ಬಡವರ ಸ್ಥಿತಿ ಉತ್ತಮಗೊಳ್ಳಲು ಯಾವ ಕ್ರಮಗಳನ್ನೂ ಕೈಗೊಳ್ಳುವುದಿಲ್ಲ. ಬಡವರೇನಾದರೂ ಸ್ಥಿತಿವಂತರಾದರೆ, ಅನುಕೂಲಸ್ಥರಾದರೆ, ಕಮ್ಮ್ಯುನಿಸಂ ದುರ್ಬಲವಾಗುತ್ತರೆ.  ಹಾಗಾಗಿಯೇ ಬಡವರನ್ನು ಬಡವರನ್ನಾಗಿಯೇ ಉಳಿಸುವ ಹುನ್ನಾರ. ಬಡವರನ್ನು ಶ್ರೀಮಂತರ ವಿರುದ್ಧ ದಂಗೆ ಎಬ್ಬಿಸಿ, ಲೂಟಿ ಮಾಡಿ, ಅರಾಜಕತೆ ಸೃಷ್ಟಿಸಿ, ಅದರ ಸಂಪೂರ್ಣ ಲಾಭ ಪಡೆಯುವುದು ಕಮ್ಮುನಿಸಂ ಆಗುತ್ತಿದೆ.

    ವಾಸ್ತವದ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಡಾ.ಯು.ಆರ್.ಅನಂತಮೂರ್ತಿಯವರು(Dr.U.R.Ananthamurthy) ಇತ್ತೀಚೆಗೆ ಶಂಕಿತ ಭಯೋತ್ಪಾದಕರನ್ನು ವಶಕ್ಕೆ ತೆಗೆದುಕೊಂಡಾಗ ಅಮಾಯಕರನ್ನು ಬಂಧಿಸಬೇಡಿ ಎಂದರು. ಆದರೆ, ದೇಶದ ಭದ್ರತೆಯನ್ನು ಮಾನವೀಯತೆ, ಮಾನವ ಹಕ್ಕುಗಳು ಇವುಗಳ ದೃಷ್ಟಿಕೋನದಲ್ಲಿ ನೋಡಲಾಗುವುದಿಲ್ಲ. ದೇಶ ಎಲ್ಲಕ್ಕೂ ಮುಖ್ಯವಾದದ್ದು, ಸಿದ್ಧಾಂತ, ಮತ, ಭಾಷೆ, ಅಭಿಪ್ರಾಯ ಭಿನ್ನತೆ ಎಲ್ಲವನ್ನೂ ಮೀರಿದ್ದು. ಅವುಗಳನ್ನು ಮೀರಿದಾಗಲೇ ದೇಶ ಸುಭದ್ರವಾಗಿರಲು ಸಾಧ್ಯ. ಬಲಪಂಥೀಯತೆ ಇರುವಂತೆ ಎಡಪಂಥೀಯತೆ ಕೂಡಾ ಇದೆ. ಆದರೆ ಇವೆರಡೂ ಸಮಾನಾಂತರದಲ್ಲಿ ನೆಡೆ ಹೊಂದಿರುವಂಥವು.(ಇಲ್ಲಿ ನಾನು ಯಾವ ಪಂಥವನ್ನೂ ಬೆಂಬಲಿಸುತ್ತಿಲ್ಲ) ಆದರೆ, ದೇಶದ ಭದ್ರತೆ ಎದುರಾದಾಗ, ಇಂಥಾ ಸಮಾನಾಂತರತೆ(Parallelism) ಅಪಾಯಕಾರಿಯಾದುದು. ಕಮ್ಮ್ಯುನಿಸಂನ್ನು ಮೆಚ್ಚಿಕೊಳ್ಳುವ ಅವರು ಕಮ್ಮ್ಯುನಿಸಂ ಪ್ರೇರಿತ ಕೊಲೆಗಳನ್ನು ಖಂಡಿಸದಿರುವುದು ವಿಷಾದನೀಯ.   ವೈದಿಕತೆಯ ಪ್ರಾಬಲ್ಯ ವಿರೋಧಿಸಿ, ಬಸವ ಬುದ್ಧರನ್ನು ಮೆಚ್ಚಿಕೊಳ್ಳುವ ಅನಂತಮೂರ್ತಿಯವರು, ಬುದ್ಧನ ಅನುಯಾಯಿಗಳು ಸಂಕಷ್ಟದಲ್ಲಿರುವಾಗ ಸೈದ್ಧಾಂತಿಕತೆಗೆ ನಿಷ್ಠೆ ಹೊಂದಿ ಖಂಡಿಸದಿರುವುದು ಸಾಹಿತಿಯೊಬ್ಬರಿಗೆ ಇರಬೇಕಾದ ತಟಸ್ಥತೆಯ ಲಕ್ಷಣವಲ್ಲ.  ಸೈದ್ಧಾಂತಿಕತೆಯ ನೆರಳಿನಲ್ಲಿ ನ್ಯಾಯ ಅನ್ಯಾಯ ಗೌಣವಾಗುವುದು ಉತ್ತಮಿಕೆಯ ಲಕ್ಷಣವಲ್ಲ. ಇದು ಮಿಥ್ಯಾ ಜಾತ್ಯಾತೀತತೆಯಾಗುತ್ತದೆ.  

(ಈ ಲೇಖನ ಇಂದಿನ, ೧೯ ಮಾರ್ಚ್ ೨೦೦೮ ರ ‘ವಿಜಯ ಕರ್ನಾಟಕ’ ದ ‘ವಾಚಕರ ವಿಜಯ’ದಲ್ಲಿ ಪ್ರಕಟಗೊಂಡಿದೆ)

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s