ಮರ್ಯಾದಸ್ಥರ ಮಾನನಷ್ಟ ಪ್ರಸಂಗ…  ಒಂದು ಪ್ರತಿಕ್ರಿಯೆ.  

   ಅಂತರ್ಜಾಲದಲ್ಲಿ ಪರಿಚಯರಾದ ದಾವಣಗೆರೆಯ ಗೆಳೆಯ ಸುಪ್ರೀತ್‍ರವರ ‘ಸೂರ್ಯನ ಶಿಕಾರಿ’ ಬ್ಲಾಗ್‍ನಲ್ಲಿ ಅವರು ಬರೆದ ಮರ್ಯಾದಸ್ಥರ ಮಾನನಷ್ಟ ಪ್ರಸಂಗ…  ಲೇಖನಕ್ಕೆ ಪ್ರತಿಕ್ರಿಯೆ.  

ಪ್ರೀತಿಯ ಸಂಪ್ರೀತ್
 
    ಖಂಡಿತವಾಗಿ ಇದು ಚಿಂತನಾಶೀಲ, ವಿಮರ್ಶಾ ಲೇಖನ. ರವೀಂದ್ರ ರೇಷ್ಮೆಯವರು ತಮ್ಮ ವಿಕ್ರಾಂತ ಕರ್ನಾಟಕದಲ್ಲಿ ರವಿ ಬೆಳಗೆರೆ ಬಗ್ಗೆ, ಅವರ ಬೆಳವಣಿಗೆಗಳ ಹಸಿವಿನ ಬಗ್ಗೆ, ಹಪಹಪಿತನದ ಬಗ್ಗೆ ಬರೆದಿದ್ದರು. ಅದಕ್ಕೆ ಉತ್ತರವಾಗಿ ರವಿ ತಮ್ಮ ಸಂಪಾದಕೀಯದಲ್ಲಿ ಉತ್ತರವನ್ನೂ ನೀಡಿದ್ದಾರೆ. ಕರ್ನಾಟಕದ ಯಾವ ಪತ್ರಕರ್ತನೂ ಹೋಗದ ಸ್ಥಳಗಳಿಗೆ, ದೇಶಗಳಿಗೆ ಹೋಗಿ ಬಂದು ವರದಿ ಮಾಡಿದ್ದಾರೆ. ಸ್ವಲ್ಪ ವೈಭವೀಕರಣ ಜಾಸ್ತಿಯಾಯಿತು ಅಂತಾ ಒಪ್ಪಿಕೊಳ್ಳುತ್ತೇನೆ. ಬದುಕಿನ ಚಲನಶೀಲತೆಗೆ, ಪ್ರಯೋಗಶೀಲತೆಗೆ, ಹೊಸ ಅನುಭವಗಳಿಗೆ ಎದುರಾಗುವ ಕ್ರಿಯಾಶೀಲತೆ ರವಿ ಬೆಳಗೆರೆಯಲ್ಲಿದೆ. ತಝಕಿಸ್ಥಾನ, ಕಝಕಿಸ್ಥಾನ, ಪಾಕಿಸ್ಥಾನ, ಅಫಘನಿಸ್ಥಾನ ಮುಂತಾದ ಹೆಸರೇ ಕೇಳದ ದೇಶಗಳಿಗೆ ಹೋಗಿ ಬಂದಿದ್ದಾರೆ. ಬರೀ ಹೋಗಿ ಬಂದಿಲ್ಲ. ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ, ವಿಶ್ಲೇಷಿಸಿದ್ದಾರೆ. ಮುಸ್ಲಿಂ ಪುಸ್ತಕ ಬರೆಯುವಾಗ, ಮುಸ್ಲಿಂ ಕಟ್ಟರ್‌ವಾದಿಗಳ ಬಗ್ಗೆ ಬರೆಯುವಾಗ ಒಂದು ಮಾತು ಬರೆದಿದ್ದಾರೆ. ‘ಇಲ್ಲಿ ಕುಳಿತು ಮುಸ್ಲೀಮರ ಪರವಾಗಿ ಅಥವಾ ಮುಸ್ಲೀಮರ ವಿರುದ್ಧವಾಗಿ ಮಾತನಾಡುವವರಿಗಿಂತ ನನ್ನ ಅನುಭವಗಳು ಬೇರೆಯಾಗಿಯೇ ನಿಲ್ಲುತ್ತವೆ’ ಎಂದಿದ್ದಾರೆ. ಅದು ಅಕ್ಷರಶಃ ಸತ್ಯ. ಯಾಕೆಂದರೆ, ಇಲ್ಲಿನ ಯಾರೂ ಅಫಘನಿಸ್ಥಾನವನ್ನಾಗಲೀ, ಪಾಕಿಸ್ಥಾವನ್ನಾಗಲೀ ನೋಡಿದವರಲ್ಲ. ನೋಡಿದ್ದರೂ ಉಗ್ರಗಾಮಿಗಳನ್ನು ಕಂಡು ಅವರ ಅಭಿಪ್ರಾಯ ತಿಳಿದುಬಂದವರಲ್ಲ. ಆದರೂ ಇಲ್ಲಿ ಕುಳಿತು, ಅಧಿಕಾರವಾಣಿಯಿಂದ ಬರೆಯುತ್ತಾರೆ, ಮಾತಾಡುತ್ತಾರೆ. ಇದು ವಸ್ತುಸ್ಥಿತಿ ಅರಿಯದ ಜಾಣ ಮೌನ ಅಲ್ಲವೇ?
 
    ಇಂದು ಹಾಯ್ ಬೆಂಗಳೂರು ರಾಜ್ಯಾದ್ಯಂತ ಮಾತ್ರವಲ್ಲದೇ ಸೌದಿ ಅರೇಬಿಯಾಗಳಿಗೂ ಪಸರಿಸಿದೆ ಎಂದರೆ ಅದರ ಅಗಾಧತೆ ನಮ್ಮ ಅರಿವಿಗೆ ಬಾರದಿರದು. ಹೊರ ರಾಜ್ಯವನ್ನು ಮುಟ್ಟುವ, ಜನ ಪತ್ರಿಕೆಗಾಗಿ ಹಪ ಹಪಿಸುವ ಪರಿಸ್ಥಿತಿ ಸೃಷ್ಟಿಸಿರುವ ಪತ್ರಿಕೆಗಳನ್ನು ತೋರಿಸಿ ನೋಡೋಣ. ರವಿಗೆ ಹಪ ಹಪಿತನವಿತ್ತು, ಬೆಳವಣಿಗೆಯ ಹಸಿವಿತ್ತು. ಆ ಓದಿನ ಹಸಿವನ್ನು ಓದುಗರಿಗೂ ವಿಸ್ತರಿಸಿದ ಖ್ಯಾತಿ ಅವರದು. ಆದರೆ, ಈ ಯಾವುದನ್ನೂ ಗಮನಿಸದೇ ಬೆಳೆಯುವ ಅನಿವಾರ್ಯತೆ ಇತ್ತು. ಬೆಳೆದರು ಅನ್ನುವುದು ವೃತ್ತಿ ಮಾತ್ಸರ್ಯದ ನೆಲೆಗಟ್ಟಿನಲ್ಲಿ ಬಂದ ಬರವಣಿಗೆ ಏನೋ ಎಂದೆನಿಸದಿರದು. ಇವತ್ತಿಗೂ ಕರ್ನಾಟಕದ ಟ್ಯಾಬ್ಲಾಯ್ಡ್ಗ್ ಗಳಲ್ಲಿ ಪಕ್ಷಪಾತ ರಾಹಿತ್ಯವಾಗಿ ಬರೆಯುವ ಪತ್ರಿಕೆಗಳು ಎಷ್ಟಿವೆ ಹೇಳಿ? ಲಂಕೇಶ್ ಪತ್ರಿಕೆಯವರಿಗೆ ಬಿ.ಜೆ.ಪಿ ಕಟ್ಟಾ ವಿರೋಧಿ, ಕೋಮುವಾದಿ. ಅವರು ಆ ನಿಲುವು ತಳೆದಿರುವುದು ಪ್ರಶ್ನಾರ್ಹವೇನಲ್ಲ. ಅಭಿವ್ಯಕ್ತಿ ಸ್ವಾತಂತ್ರವಿದೆ. ಒಂದು ಪಕ್ಷಕ್ಕೆ ವಿರೋಧವಿರದಿದ್ದರೆ, ಅವರ ಉಪಟಳ ಸಹಿಸಲಾಗದು. ಆದರೆ, ವಸ್ತು ನಿಷ್ಟತೆ, ತಟಸ್ಥತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಜೆ.ಡಿ.ಎಸ್, ಕಾಂಗ್ರೇಸ್ ಗಳು ಏನೇ ವಿವೇಚನಾಹೀನ ಕೆಲಸ ಮಾಡಿದರೂ ಜಾತ್ಯಾತೀತ ಪಕ್ಷಗಳೆಂದು ಬೆಂಬಲಕ್ಕೆ ನಿಂತುಬಿಡುವುದು ಅಪಾಯಕಾರಿಯಲ್ಲವೇ? ಆದರೆ, ಹಾಯ್ ಬೆಂಗಳೂರು ಯಾವ ಪಕ್ಷಗಳನ್ನೂ ಬೆಂಬಲಿಸಿಲ್ಲವಲ್ಲ. ಬಿ.ಜೆ.ಪಿ ಬಗ್ಗೆ ಒಂದಿಷ್ಟು ಸಾಫ್ಟ್ ಕಾರ್ನರ್ ಹೊಂದಿರಬಹುದು. ಅದೂ ಈ ರಾಜಕೀಯ ರಾದ್ಧಾಂತಗಳೆಲ್ಲಾ ಆದ ಮೇಲೆ. ಆದರೆ, ಎಂದೂ ಅವರು ಮಾಡಿದವುಗಳನ್ನು ನಾಚಿಕೆ ಬಿಟ್ಟು ಬೆಂಬಲಿಸಿಲ್ಲ. ಇದಕ್ಕಿಂತ ಮೊದಲು ಕುಮಾರ ಸ್ವಾಮಿ ಹವಾ ಇದ್ದಾಗ ಕುಮಾರಣ್ಣನನ್ನೂ ಬೆಂಬಲಿಸಿದ್ದರು. ಸಮಯ ಬಂದಾಗ ಕ್ಯಾಕರಿಸಿ ಥೂ ಅಂದ್ದದ್ದೂ ಆಯಿತು. ಆದರೆ, ಅಧಿಕಾರ ಹಸ್ತಾಂತರ ಪ್ರಹಸನ ನೆಡೆಯುವಾಗ, ಬಿ.ಜೆ.ಪಿ ಗೆ ಅಧಿಕಾರ ನೀಡಬಾರದೆಂದು ಹೇಳುತ್ತಾ, ವಿಶ್ವಾಸದ್ರೋಹವನ್ನೂ ಸಮರ್ಥಿಸಿಕೊಂಡವಲ್ಲಾ ಕೆಲವು ಜಾತ್ಯಾತೀತ ಪತ್ರಿಕೆಗಳು, ಹಾಗೇನೂ ಹಾಯ್ ಬೆಂಗಳೂರು ಮಾಡಲಿಲ್ಲ. ಇನ್ನೊಂದು ಸಂಗತಿ ಎಂದರೆ, ಹಿಂದೂ ಮುಸ್ಲಿಂ ವ್ಯತ್ಯಾಸಗಳ ಬಗ್ಗೆ ನಿರ್ಭಾವುಕ ಮನಸ್ನಿನಿಂದ ವಿಶ್ಲೇಷಣೆ ಮಾಡಿದ್ದು ರವಿ.
 
    ಇಷ್ಟೆಲ್ಲಾ ಹೇಳಿ, ನಾನು ರವಿಯವರನ್ನು ಹೊಗಳುತ್ತಿದ್ದೇನೆಂದೇನಲ್ಲ. ಆದರೆ, ಜಡ್ಡುಗಟ್ಟಿದ ಪತ್ರಿಕೋದ್ಯಮಕ್ಕೆ, ಒಂದಷ್ಟು ಹೊಸತನವನ್ನು, ಭಾವನಾತ್ಮಕತೆಯನ್ನೂ ನೀಡಿದ್ದು ರವಿ ಬೆಳಗೆರೆ. ಹಾಯ್ ಬೆಂಗಳೂರು ಇಂದಿಗೂ ನಂಬರ್ ಒನ್ ಆಗಲಿಕ್ಕೆ ಕಾರಣ ಕ್ರೈಂ, ರಾಜಕೀಯ, ರಾಸಲೀಲೆ ವರದಿಗಳೇ ಕಾರಣಗಳಲ್ಲ. ಬಾಟಮ್ ಐಟಮ್, ಖಾಸ್ ಬಾತ್ ಅಂಕಣಗಳು ಇವೆಲ್ಲವನ್ನೂ ಮೀರಿದ್ದು. ಮನಸ್ಸಿನ ಒಳದನಿಗೆ ಕನ್ನಡಿ ಹಿಡಿಯುವ ಲೇಖನಗಳು ಆಪ್ತವಾಗುತ್ತವೆ. ಆ ದನಿ ಅವರ ಬಗೆಗಿನದಾಗಿರಬಹುದು. ನಮಗೂ ಅದೇ ಥರದ ಅನುಭೂತಿಗಳು ಕೆಲವೊಮ್ಮೆ ಆಗುವುದರಿಂದ ಅವು ನಮ್ಮ ದನಿಯನ್ನೇ ಪ್ರತಿಬಿಂಬಿಸುತ್ತವೇನೋ ಎಂಬಷ್ಟು ಆಪ್ತವಾಗುತ್ತವೆ. ಇದೇ ಥರಹದ ಲೇಖನಗಳುಳ್ಳ ಓ ಮನಸೇ ಕೂಡಾ ಉತ್ತುಂಗಕ್ಕೇರಿತು. ಈ ಥರಹದ ರಾಜಕೀಯ, ಸಿದ್ಧಾಂತ ಎಲ್ಲವನ್ನೂ ಮೀರಿದ ಬದುಕಿನ ಬಗ್ಗೆ ಬರಹಗಳು ಎಷ್ಟು ಟ್ಯಾಬ್ಲಾಯ್ಡ್ ಗಳಲ್ಲಿ ಬರುತ್ತವೆ? ಜನ ಸಹಜವಾಗಿಯೇ ಅದರತ್ತ ಆಕರ್ಷಿತರಾದರು. ಓರಗೆಯ ಪತ್ರಿಕೆಗಳಲ್ಲಿ, ಅತಿಯಾದ ಸಿದ್ಧಾಂತವಾದ, ಅತಿಯಾಗಿ ಒಂದು ಪಕ್ಷದ, ವ್ಯಕ್ತಿಯ, ಧರ್ಮದ ರೀತಿ ರಿವಾಜುಗಳ ಬಗ್ಗೆ ಪೂರ್ವಾಗ್ರಹಪೀಡಿತವಾಗಿ ವಿಷಯ ಮಂಡಿಸಿ ವರದಿ ಬರೆಯುವಾಗ, ಹಾಯ್ ಬೆಂಗಳೂರು ಸ್ವಲ್ಪ ತಟಸ್ಥತೆ ಕಾಯ್ದುಕೊಂಡಿದೆ ಎಂದೆನಿಸುತ್ತದೆ.
 
    ಪತ್ರಿಕೆಗಳ, ಮಾಧ್ಯಮಗಳ ಕೆಲಸ ಪಕ್ಷ ಕಟ್ಟುವುದಲ್ಲ, ಸರ್ಕಾರ ಬೀಳಿಸುವುದಲ್ಲ. ಕ್ರೈಂ ಇಲ್ಲವಾಗಿಸುತ್ತೇನೆಂದು ಹೊರಡುವುದಲ್ಲ. ರವೀಂದ್ರ ರೇಷ್ಮೆಯವರು ಹಿರಿಯರು. ಇವರು ಎಷ್ಟು ಸರ್ಕಾರಗಳನ್ನು ಉರುಳಿಸಬಲ್ಲರೆಂದು ಕೇಳಲಾದರೆ, ಉತ್ತರವೇನಾದೀತು? ಪತ್ರಿಕೆಗಳೂ ಶಕ್ತಿ ಪ್ರದರ್ಶನಕ್ಕೆ ತಮ್ಮನ್ನು ತಾವು ಒಡ್ಡಿಕೊಂಡರೆ ಜನಜಾಗೃತಿ ಹಳ್ಳ ಹಿಡಿಯುತ್ತದೆ. ಇದೆಲ್ಲವನ್ನೂ ಮೀರಿದ್ದು ಜನಜಾಗೃತಿ. ಟಿ.ಎನ್. ಸೀತಾರಾಂರವರ ‘ಮುಕ್ತಾ’ ಧಾರಾವಾಹಿ ಜನಾಭಿಮಾನದ, ಜನಪ್ರಿಯತೆಯ ಉತ್ತುಂಗಕ್ಕೇರಿದಾಗ ಕೆಲವು ಜನ ಕೇಳಿದ್ದರು. ನೀವು ಇಷ್ಟೆಲ್ಲಾ ತೋರಿಸಿದ ತಕ್ಷಣ ಎಲ್ಲವೂ ಸರಿಯಾಗಿಬಿಡುತ್ತದೆಯೇ? ಅಂತಾ. ಇತ್ತೀಚೆಗೆ ಜನಮನ್ನಣೆ ಗಳಿಸಿದ ‘ಮಂಥನ’ದ ಸೇತುರಾಂರವರಿಗೆ ಕೆಲವು ಜನ ಪ್ರಶ್ನೆ ಕೇಳಿದ್ದರು. ನೀವು ಭ್ರಷ್ಟಾಚಾರದ ಬಗ್ಗೆ, ಇನ್‍ಕಂ ಟ್ಯಾಕ್ಸ್ ರೇಡ್‍ಗಳ ಬಗ್ಗೆ ಇಷ್ಟೆಲ್ಲಾ ತೋರಿಸಿದ್ದೀರಿ. ಭ್ರಷ್ಟಾಚಾರವೇನೂ ಕಡಿಮೆಯಾಗಿಲ್ಲವಲ್ಲ ಅಂತಾ. ಪ್ರತಿಸಲವೂ ಜನಪ್ರಿಯತೆಯ ಉತ್ತುಂಗಕ್ಕೇರಿದ ವ್ಯಕ್ತಿ, ವಸ್ತು ಬಗ್ಗೆ ನಮಗೆ ಮಾತ್ಸರ್ಯದ, ಕಡೆಗಣಿಕೆಯ ಮಾತುಗಳು ಹೊರಡುವುದು ಸಾಮಾನ್ಯ. ಅದನ್ನೇ ವಿಮರ್ಶೆ ಎನ್ನಲಾಗದು. Criticism ಅಂದರೆ ಬರೀ ಬಯ್ಯುವುದಲ್ಲ. ಮೌಲ್ಯಾತ್ಮಕವಾದ ಮೌಲ್ಯಮಾಪನ ನಡೆಯಬೇಕು.
 
    ಈ ಮೊದಲು ಪ್ರಸಾರವಾಗುತ್ತಿದ್ದ ಕ್ರೈಂ ಡೈರಿ ಇನ್ನೆಲ್ಲಾ ಕ್ರೈಂ ಧಾರಾವಾಹಿಗಳ ಸಾಲಿನಲ್ಲಿ ಮೊದಲಿನಲ್ಲಿ ನಿಂತಿತ್ತು. ಉತ್ತರವೂ ಸ್ಪಷ್ಟ. ಬೇರೆ ಎಲ್ಲಾ ಕ್ರೈಂ ಧಾರಾವಾಹಿಗಳು ಪೇಲವವಾದ ನಿರೂಪಣೆ ಇದ್ದಿದ್ದರೆ(ಈಗಲೂ ಹಾಗೇ ಇವೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ ಅಂದುಕೊಂಡಿದ್ದೇನೆ), ಹೊಸತನವಿರದೇ, ವೈಭವೀಕರಣ ಇದ್ದಿದ್ದರೆ, ಕ್ರೈಂ ಡೈರಿಯಲ್ಲಿ ಎಲ್ಲ ಪ್ರಕರಣಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡುವ ಆಯಾಮ ಒದಗಿಸಿದ್ದು ಜನ ಇಷ್ಟಪಡುವಂತೆ ಮಾಡಿತ್ತು. ಈಗಲೂ ಒಮ್ಮೆ ಕ್ರೈಂ ಧಾರಾವಾಹಿಗಳತ್ತ ಒಮ್ಮೆ ಕಣ್ಣು ಹಾಯಿಸಿ. ಉದಯ ಟಿವಿಯ ಕ್ರೈಂ ಸ್ಟೋರಿ, ಟಿ.ವಿ.೯ ನ ವಾರಂಟ್ ಎಲ್ಲದರಲ್ಲೂ ಬರೀ ವೈಭವೀಕರಣವಿದೆ. ಪೇಲವ ನಿರೂಪಣೆ ಇದೆ. ಕಾರ್ಯಕ್ರಮದ ಕೊನೆಗೆ ಬುದ್ಧಿವಾದವನ್ನೂ ಅಧಿಕಾರವಾಣಿಯಿಂದ ಹೇಳುವ ‘ಅತಿ ಬುದ್ಧಿವಂತ’ ನಿರೂಪಕರಿದ್ದಾರೆ. ಇವೆಲ್ಲವುಗಳ ನಡುವೆ ಕ್ರೈಂ ಡೈರಿ ವಿಭಿನ್ನವಾಗಿಯೇ ನಿಂತಿತ್ತು. ಕ್ರೈಂ ಡೈರಿ ಎಷ್ಟು ನಂಬಿಗಸ್ಥನಾಗಿತ್ತು ಅಂದರೆ ನಮ್ಮೂರು ದಾವಣಗೆರೆಯಲ್ಲಿ ಒಂದೆರಡು ವರ್ಷಗಳ ಹಿಂದೆ ಇಬ್ಬರು ಸೌಹಾರ್ದಯುತವಾಗಿ ಬದುಕುತ್ತಿದ್ದ ಸವತಿಯರು ಗಂಡನ ಹಿಂಸೆ ತಾಳಲಾರದೆ ರವಿ ಬೆಳಗೆರೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ರವಿಯವರು ತಮ್ಮಬಗೆಗಿನ ವೈಭವೀಕರಣದಿಂದ ಪಡೆದ ನಂಬಿಕೆ ಎಂದು ನನಗನ್ನಿಸುವುದಿಲ್ಲ. ಜನ ಅಷ್ಟೊಂದು ನಂಬುವ, ಪ್ರೀತಿಸುವ, ಜನಪ್ರಿಯತೆ ಗಳಿಸಿರುವ, ಬಹುರೂಪತೆಗಳಿಗೆ ಅಣಿಯಾಗುತ್ತಿರುವ ಕರ್ನಾಟಕದ ಒಬ್ಬೇ ಒಬ್ಬ ಪತ್ರಕರ್ತನನ್ನು ತೋರಿಸಿ ನೋಡೋಣ. ಇಲ್ಲೆಲ್ಲವೂ ನಾನು ವಸ್ತು ಸ್ಥಿತಿಯ ಬದಲಾಗಿ ವೈಭವೀಕರಣಕ್ಕೆ ಪ್ರಯತ್ನಿಸಿದ್ದೇನೆ ಎಂದೆನ್ನಬಹುದು. ಆದರೆ, ಇವೆಲ್ಲವೂ ಶ್ರೀಸಾಮಾನ್ಯನ ದನಿ ಎಂಬುದನ್ನು ನೆನಪಿನಲ್ಲಿಡಬೇಕು.
 
    ಇನ್ನು ‘ಮುಖ್ಯಮಂತ್ರಿ ಐ ಲವ್ ಯು’ ಚಿತ್ರ ತೆಗೆಯುತ್ತಿರುವ ಬಗ್ಗೆ. ಒಬ್ಬರ ಖಾಸಗಿ ಬದುಕನ್ನು ಪ್ರಶ್ನಿಸುವ, ಅನಾವರಣಗೊಳಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ಅನೈತಿಕ ಖಾಸಗಿ ಸಂಗತಿಗಳು ಸಾರ್ವತ್ರಿಕವಾದಾಗ, ಸಾರ್ವಜನಿಕರ ಸ್ವತ್ತಾಗಿಬಿಡುತ್ತವೆ. ಅದನ್ನು ಪ್ರಶ್ನಿಸುವ ಹಕ್ಕು, ವಿಮರ್ಶಿಸುವ ಹಕ್ಕು ಎಲ್ಲರಿಗೂ ಸೇರಿದ್ದು. ಎಲ್ಲದರಲ್ಲೂ ಉದಾರೀಕರಣವನ್ನು ಕಂಡಿರುವ, ಮುಕ್ತ ಲೈಂಗಿಗತೆಯ ಪ್ರತಿಪಾದಕ ಅಮೇರಿಕೆಯಲ್ಲಿ ಕೂಡಾ ಜನ ತಮ್ಮ ಅಧ್ಯಕ್ಷ ಅನೈತಿಕ ಸಂಬಂಧದಿಂದ ದೂರವಿರಬೇಕೆಂದು ಬಯಸುತ್ತಾರೆ. ಹಾಗಾಗಿಯೇ ಬಿಲ್ ಕ್ಲಿಂಟನ್ ಬಗ್ಗೆ ಅಷ್ಟೊಂದು ಗುಲ್ಲೆದ್ದಿದ್ದು. ಅಮೇರಿಕೆಗಿಂತ ಸುಸಂಸ್ಕೃತವಾಗಿರುವ ಭಾರತದಲ್ಲಿ ರಾಜಕೀಯ ನಾಯಕನ ‘ಇತರ’ ಸಂಬಂಧ ವೃತ್ತಾಂತಗಳು ವಿಮರ್ಶೆಗೆ ಒಳಪಡದಿರುತ್ತವೆಯೇ? ತೇಜೋವಧೆ ಎಂದೆನ್ನಿಸಿದರೆ, ಕೋರ್ಟ್ ತೀರ್ಮಾನಿಸುತ್ತದೆ. ಹಾಗೆ ಖಾಸಗಿ ಬದುಕನ್ನು ಪ್ರಶ್ನಿಸುವ ಸ್ವಾತಂತ್ರವಿಲ್ಲ ಅನ್ನೋದಾಗಿದ್ದರೆ, ಇಂದಿನ ಕ್ರೈಂ, ಸೆಕ್ಸ್ ಪತ್ರಿಕೆಗಳು, ಟ್ಯಾಬ್ಲಾಯ್ಡ್‍ಗಳು ಮುಚ್ಚಬೇಕಾಗುತ್ತಿತ್ತು. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಪರಿಗಣಿಸಲ್ಪಡುತ್ತದೆ.
 
    ಇವೆಲ್ಲ ನಾನು ಹೇಳಿರುವ ಸಂಗತಿಗಳ ಹೊರತಾಗಿ, ರವಿ ಬೆಳಗೆರೆಯವರನ್ನು, ಸಾಧನೆಗಳನ್ನು ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ನೋಡಲು ಈ ಲೇಖನ ಪ್ರಯತ್ನಿಸಿದೆ. ನಿಮ್ಮ ಪ್ರಯತ್ನ ಮುಂದುವರಿಯಲೆಂದು ಬಯಸುತ್ತೇನೆ.
 
 ಕೆ.ಗಣೇಶ್.

Advertisements

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s