ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಮತದಾರರಿಗೇಕೆ..?

    ಚುನಾವಣೆ ಸುರುವಾಗಿದೆ. ಹಣ, ಹೆಂಡ, ಸೀರೆ, ಪಂಚೆ, ಟಿ.ವಿ, ಫ್ರಿಡ್ಜು ಮುಂತಾದ ಸಕಲ ಸಾಮಗ್ರಿಗಳನ್ನ ಹೊತ್ತ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಚುನಾವಣಾ ಆಯೋಗದ ಕೆಂಗಣ್ಣಿನಿಂದಾಗಿ ಈಗ “ಉಡುಗೊರೆ” ನೀಡುವ ಪರಿ ಕೂಡಾ ಬದಲಾಗಿದೆ. ಮೊದಲು ಮೊದಲು ಮನೆಗಳಿಗೇ ಸಾಮಾನುಗಳನ್ನ ತಲುಪಿಸುತ್ತಿದ್ದವರು ಈಗ “ಕೂಪನ್” ನೀಡಿ, ನಿರ್ದಿಷ್ಟ ಅಂಗಡಿಗಳಲ್ಲಿ “ಉಡುಗೊರೆ” ಪಡೆಯುವಂತೆ ಸೂಚಿಸುತ್ತಿದ್ದಾರೆ. ರಾಜಕಾರಣಿಗಳೇನೋ ಆಮಿಷ ಒಡ್ಡುತ್ತಾರೆ. ಇಷ್ಟು ದಿನ ಹಾಯಾಗಿ ಗೂಳಿಗಳಂಗೆ “ತಿಂದುಂಡು” ಅಲೆದಾಡಿದ್ದಕ್ಕೆ ದಂಡ ಪಾವತಿಸುತ್ತಿದ್ದಾರೆ. ಆದರೆ, ಮತದಾರರರು ಇವರ ಋಣಭಾರದಲ್ಲೇಕೆ ಇರಬೇಕು ಎಂಬುದು ನನ್ನ ಪ್ರಶ್ನೆ. ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಜನಕ್ಕೇಕೆ? ಎಲ್ಲರಿಂದನೂ ಬರೋದನ್ನೆಲ್ಲವನ್ನ ತೊಗೋಬೇಕು. ತಮಗೆ ಬೇಕಾದವರಿಗೆ ಒತ್ತಬೇಕು. ಆದರೆ, ಬಡವರ, ದಲಿತರ, ಸ್ಲಂ ಜನರ “ನಿಯತ್ತು” ಹೊಲಸು ರಾಜಕಾರಣಿಗಳನ್ನ ಇನ್ನೂ ಜೀವಂತ ಇಟ್ಟಿದೆ. ಮುಗ್ಧ ಜನರ ಮುಗ್ಧತೆಯನ್ನ ಎನ್‍ಕ್ಯಾಷ್ ಮಾಡಿಕೊಳ್ತಾ ಇದಾರೆ ಅಷ್ಟೇ.

    ಇನ್ನ ಜಾಗೃತ, ಪ್ರಜ್ಞಾವಂತ ಮತದಾರ ಮಹಾಪ್ರಭುಗಳ ಬಗ್ಗೆ ಹೇಳಬೇಕು. ಮೊನ್ನೆ ಮೊನ್ನೆ ನೆಡೆದ ನಮ್ಮೂರಿನ ಕಾರ್ಪೊರೇಷನ್ ಎಲಕ್ಷನ್‍ಗೆ ಹೋಗಿದ್ದೆ ಮತದಾನಕ್ಕೇ ಅಂತಲೇ. ಬಹಳ ಜನ ಕಟಕಿಯಾಡಿದ್ದರು ನಿನೊಬ್ಬ ಓಟುಹಾಕದಿದ್ರೆ ಯಾವನಿಗೂ ಏನೂ ಆಗಲ್ಲ ಅಂತಾ. ಹೋದಾಗ, ಇರುವ ಎಲ್ಲಾ ಕ್ಷೇತ್ರಗಳನ್ನ ಒಮ್ಮೆ ಗಾಡಿಯಲ್ಲಿ ಸುತ್ತಿ ಬಂದಿದ್ದೇನೆ. ೨೦ ವರ್ಷಗಳಲ್ಲಿ ತಿರುಗಾಡದ ಪ್ರದೇಶಗಳನ್ನ, ಕೇವಲ ಹೆಸರು ಕೇಳಿದ್ದ ಪ್ರದೇಶಗಳನ್ನ, ಇನ್ನೂ ಕೆಲವು ಹೆಸರೇ ಕೇಳದ ಏರಿಯಾಗಳನ್ನ ಸುತ್ತಿಬಂದಿದ್ದೇನೆ. ಸಮೀಕ್ಷೆ ಮಾಡಿದ್ದೇನೆ. ಎಲ್ಲೆಲ್ಲಿ ಬಡವರಿದ್ದಾರೋ, ದಲಿತರಿದ್ದಾರೋ, ಸ್ಲಂ ನಿವಾಸಿಗಳಿದ್ದಾರೋ, ನಿರ್ಗತಿಕರಿದ್ದಾರೋ ಅಲ್ಲೆಲ್ಲಾ ಎಲಕ್ಷನ್ ಅಂದರೆ ಹಬ್ಬದ ವಾತಾವರಣ. ಕೆ.ಟಿ.ಜೆ ನಗರ, ನಿಟ್ಟುವಳ್ಳಿ, ಆಜಾದ್ ನಗರ, ಹಳೇ ದಾವಣಗೆರೆಯ ಪ್ರದೇಶಗಳು ಜನಸಂದಣಿಯ ಪ್ರದೇಶಗಳಾಗಿದ್ದವು. ಜನ ಮನೆಯಲ್ಲಿಯೇ ಇರಲಿಲ್ಲ..! ರೋಡ ತುಂಬೆಲ್ಲಾ ಜನ. ರಾಜಕಾರಣಿಗಳೂ, ಸಚಿವರಾಗಿದ್ದವರೂ ಆಗಾಗ ಬಂದು ಹೋಗುತ್ತಿದ್ದರು.  ಬ್ಯಾನರ್ ಬಂಟಿಗ್, ಎಲ್ಲಾ ರಸ್ತೆ ತುಂಬೆಲ್ಲಾ ತುಂಬಿಕೊಂಡಿತ್ತು. ಯಾವ ಧಾರ್ಮಿಕ ಹಬ್ಬಗಳಲ್ಲೂ ಕಾಣಬರದ ಉತ್ಸಾಹ, ಹುಮ್ಮಸ್ಸು, ಹಬ್ಬದ ವಾತಾವರಣ. ಜನ ಓಟು ಹಾಕಲ್ಲಿಕ್ಕೆ ಕ್ಯೂನಲ್ಲಿ ನಿಂತಿದ್ದರು.  ಇನ್ನೂ ಕೆಲವು “ವಿದ್ಯಾವಂತರ, ಪ್ರಜ್ಞಾವಂತರ” ಏರಿಯಾಗಳನ್ನ ತಿರುಗಾಡಿ ಬಂದಿದ್ದೇನೆ. ಎಸ್.ಎಸ್.ಲೇ ಔಟ್, ವಿದ್ಯಾನಗರಗಳಲ್ಲಿ, ಮೆಡಿಕಲ್, ಡೆಂಟಲ್ ಕಾಲೇಜುಗಳಿರುವ ಬಡಾವಣೆಗಳಲ್ಲಿ, ಆಂಜನೇಯ ಬಡಾವಣೆಗಳಲ್ಲಿ ಎಲಕ್ಷನ್ನಿನ ಕುರುಹುಗಳೇ ಕಾಣುತ್ತಿರಲಿಲ್ಲ. ಮತಗಟ್ಟೆಗಳ ಬಳಿ ಒಬ್ಬರೊ ಇಬ್ಬರೋ ಇರುತ್ತಿದ್ದರು. ಮತಗಟ್ಟೆ ಎಲ್ಲಿದೇ ಎಂಬುದೇ ಗೊತ್ತಾಗುವಂತಿರಲಿಲ್ಲ. ಆದರೆ, ಅದೇ ಕೆಳ ಮಧ್ಯಮ ವರ್ಗದ ಜನರಿರುವ ಏರಿಯಾಗಳಲ್ಲಿ, ನಿಮ್ಮದೊಂದು ಓಟು ಇದೆ ಅಂದರೆ ಕೈ ಹಿಡಿದುಕೊಂಡು ಹೋಗಿ ಇಲ್ಲಿದೆ ಮತಗಟ್ಟೆ, ಅಣ್ಣಾ ನಮ್ಮ ಪಕ್ಷಕ್ಕೇ ಓಟು ಹಾಕಿ ಗೊತ್ತಲ್ಲಾ… ಅಂತಾ ಅನ್ನೋ ಮಂದಿ ಇದ್ದರು.

    ಎಷ್ಟು ವಿರೋಧಾಭಾಸಗಳಲ್ಲವಾ? ನಾವು ಯಾರನ್ನ ವಿದ್ಯಾವಂತರು, ಪ್ರಜ್ಞಾವಂತರು ಅನ್ನೋದು? ಮತ ಹಾಕದವರನ್ನಾ? ಕೈಗೆ ಸಿಕ್ಕಾಗಲೆಲ್ಲಾ ನಮ್ಮ ಭಾರತ ಹಿಂಗೇ ಅಂತಾ ಹೀಗಳೆಯುವವರನ್ನಾ..? ನಮ್ ದೇಶ ಇನ್ನು ಉದ್ಧಾರ ಆಗೋಲ್ಲ ಅನ್ನೋ ಜೋಬದ್ರಗೇಡಿಗಳನ್ನಾ..? ಒಮ್ಮೆ ಯೋಚಿಸಬೇಕಾಗಿದೆ.  40*60 ಸೈಟುಗಳಿರುವ, ಮನೆಗಳಿರುವ ಏರಿಯಾಗಳಲ್ಲಿ ಮನೆಗೆ ಒಬ್ಬರೋ ಇಬ್ಬರೋ ಇರುತ್ತಿದ್ದರು. ಒಮ್ಮೊಮ್ಮೆ ಅದೂ ಇಲ್ಲ. ಎಲಕ್ಷನ್ನು ಬಂತೆಂದ್ರೆ, ರಜಾ ದಿನ ಕಳೆಯಲು ತಮ್ಮೂರಿಗೋ, ಮಗನೂರಿಗೋ ಪಿಕ್‍ನಿಕ್ ಹೊರಟುಬಿಡುತ್ತಿದ್ದರು. ರಾಜಕಾರಣಿಗಳು ನೋಡೋದು ತಲೆಗಳನ್ನ, ಎಣಿಸೋದು ತಲೆಗಳನ್ನ, ಓಟುಗಳನ್ನ. ಐಶ್ವರ್ಯವನ್ನಲ್ಲ. 10*10 ಇರೊ ಕೆಳಮಧ್ಯಮ ವರ್ಗದ, ಬಡವರ, ಹಿಂದುಳಿದವರ ಮನೆಗಳಲ್ಲಿ ಹತ್ತು ಓಟುಗಳಿರುತ್ತವೆ. ಒಬ್ಬರ ಮನೆಗೆ ಹೋಗಿ ಬಂದರೆ, ಅವರನ್ನ ಒಲಿಸಿಕೊಂಡರೆ, 10ಓಟು ಅನಾಮತ್ತಾಗಿ ಬಿತ್ತು ಅಂತಾನೇ ಅರ್ಥ. ವಿದ್ಯಾವಂತರ ಮನೆಗಳಲ್ಲಿ ಒಬ್ಬರು, ಇಬ್ಬರು ಇರುವ ಮನೆಗಳಲ್ಲಿ, ಇರುವ ಮಂದಿನೂ ಓಟು ಹಾಕದಿದ್ರೆ, ರಸ್ತೆ ಚರಂಡಿ ಲೈಟು ಎಲ್ಲಾ ಬರ್ತವಾ? ಕೈಯ್ಯಾಗೆ ಜುಟ್ಟು ಹಿಡ್ಕಳಕ್ಕೆ ಕೊಟ್ಟರೂ ಹಿಡಿದುಕೊಳ್ಳದ ಮಂದಿಯನ್ನೇನಾ ವಿದ್ಯಾವಂತರು, ಬುದ್ಧಿವಂತರು ಅನ್ನೋದು?

    ಎಲ್ಲೆಲ್ಲಿ ಚುನಾವಣೆ ಅಬ್ಬರ ಹೆಚ್ಚಾಗಿತ್ತೋ ಅಲ್ಲೆಲ್ಲಾ ಸಿಮೆಂಟು ರೋಡುಗಳಾಗಿವೆ. ಪಾಪ, ಬಡವರು, ಸೂರಿದ್ದೂ ಕಡಿಮೆ ಜಾಗವಿರುವವರು, ಮಲಗೋದೇ ರಸ್ತೆಗಳ ಮೇಲೆ. ಹಾಗಾಗಿ ಓಟುಗಳಿರುವ ಕಡೆಗಳೆಲ್ಲಾ ಸಿಮೆಂಟು ರಸ್ತೆಗಳಾಗಿವೆ. ಅದೇ ವಿದ್ಯಾ ನಗರ, ಆಂಜನೇಯ ಬಡಾವಣೆ, ಎಸ್.ಎಸ್.ಲೇ ಔಟ್‍ಗಳಲ್ಲಿ ಒಂದು ಸರಿಯಾದ ಮಣ್ಣಿನ ರಸ್ತೇನೂ ಇಲ್ಲ. ಯಾಕಂದ್ರೆ, ಬರೀ ಮಾತಿನ ಮಲ್ಲರು ಸಿಗಬಲ್ಲರು, ದೇಶದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ನೀಡುವ ಮಂದಿ ಸಿಗಬಲ್ಲರೇ ಹೊರತು ಮತದಾರರಲ್ಲ.  ಎಲ್ಲೆಲ್ಲೆ ಮತದಾನ ನೆಡೆಯುವುದಿಲ್ಲವೋ ಆ ಕ್ಷೇತ್ರಗಳನ್ನ ರಾಜಕಾರಣಿಗಳು ನಿರ್ಲಕ್ಷಿಸಿಬಿಡುತ್ತಾರೆ. ಅವು ಅಸಲಿಗೆ ಸವಾಲುಗಳೇ ಅಲ್ಲ. ಅವರ ಮತಗಳು ನಿರ್ಣಾಯಕವಲ್ಲ. ನಿರ್ಣಾಯಕ ಮತಗಳಾಗದ ಹೊರತು ರಾಜಕಾರಣಿಗಳು ಗಮನ ಹರಿಸುವುದಿಲ್ಲ. ಹಾಗಾಗಿ 10-15 ವರ್ಷಗಳಾದರೂ ಏರಿಯಾಗಳು ಧೂಳು ಮಣ್ಣಿನಲ್ಲೇ ಇರಬೇಕಾಗುತ್ತದೆ. ಇದನ್ನ ನಮ್ಮ ಮಾನ್ಯ”ವಿದ್ಯಾವಂತ, ಪ್ರಜ್ಞಾವಂತ” ಮತದಾರರು ತಿಳಿಯುವುದೇ ಇಲ್ಲ.

    ಹರಿಜನ ಕೇರಿಗಳಲ್ಲಿ, ಬಡವರ ಏರಿಯಾಗಳಲ್ಲಿ ಜನ ಹೆಂಡ, ಹಣ, ಸೀರೆ, ಪಂಚೆಗಳಿಗೆ ತಮ್ಮ ಮತಗಳನ್ನ ಮಾರಿಕೊಂಡಿರಬಹುದು. ಆದರೆ, ಅವರು ಮತದಾನ ಮಾಡಿದ್ದಾರೆ.  ತಮ್ಮ ಕ್ಷೇತ್ರದ ಮತಗಳು, ತಮ್ಮವರ ಮತಗಳು ನಿರ್ಣಾಯಕವಾಗುವಂತೆ ಮಾಡಿದ್ದಾರೆ. ಇದು ಮಹತ್ಕಾರ್ಯವಲ್ಲವೇ? ಇವರು ವಿವೇಚನಾಪೂರಿತ ಮತದಾರರಾಗಿಲ್ಲದೇ ಇರಬಹುದು ಆದರೆ, ಪ್ರಜ್ಞಾವಂತ ಮತದಾರರು. ಮತದಾನದ ಪ್ರಜ್ಞೆಯಿದೆ ಅವರಲ್ಲಿ.

 

1 thought on “ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಮತದಾರರಿಗೇಕೆ..?

  1. ಅಲ್ಲೋ ಗಣೇಶ.. ಭ್ರಷ್ಟರೆ ತುಂಬಿರೋ ರಾಜಕೀಯದಲ್ಲಿ ಯಾರಿಗೆ ಅಂತ ವೋಟ್ ಹಾಕ್ತೀಯ? ಯಾರನ್ನು ನೋಡಿದ್ರೂ ಥೂ ಅವ್ನಿಗೆ ಹಾಕಬಾರದು ಅಂತ ಅನ್ಸುತ್ತೆ..

    ಈ ದೇಶದ ಗತಿ ಇಷ್ಟೇ ಕಣಮ್ಮೋ .. ನೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ ..

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s