ಬಂಗಾರ – ಬಂಗಾರಿ…, ಚಕೋರಿಯರ ಚಿನ್ನದ ಹಬ್ಬದ ಇನ್ನೊಂದು ಮುಖ…!

     ಇದರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ. ಈಗ ಮತ್ತೊಮ್ಮೆ ಸಕಾಲ ಬಂದೊದಗಿದೆ. ಅಕ್ಷಯ ತೃತೀಯ ಅನ್ನೋ ಮಹಾನ್ “ಚಿನ್ನದ ಹಬ್ಬ”ವನ್ನ ಎಲ್ಲ ಪೇಪರ್ನೋರು, ಟೀವಿಯವರೂ ಅದ್ಧೂರಿಯಾಗಿ ಆಚರಿಸುವ ಕಾಲ ಬಂದಿದೆ. ನಾನು ಹುಟ್ಟಿದಾಗಿನಿಂದ ನೋಡ್ತಾ ಇದೀನಿ ಈ ರೀತಿ ಹಬ್ಬ ಇದೇ ಅನ್ನೋದೆ ಗೊತ್ತಿರಲಿಲ್ಲ..! ಮಾಧ್ಯಮಗಳು ಹೊಸ ಹೊಸ ಹಬ್ಬಗಳನ್ನ ಹುಟ್ಟುಹಾಕುವಲ್ಲಿ ಗಣನೀಯ ಪಾತ್ರವಹಿಸುತ್ತಿವೆ. ಅವಕ್ಕೆ ನಮ್ಮ ಧನ್ಯವಾದಗಳು.

    ಚಿನ್ನ ಅನ್ನೋದು ದುಡ್ದಿನಂತೆ ಅಲ್ಲ. ಅದು ಕೇವಲ consumption. ದುಡ್ಡಿನಂತೆ Flow ಇರೋದಿಲ್ಲ. ಒಮ್ಮೆ ಬಂಗಾರ ಕೊಂಡುಕೊಂಡವರು ಮಾರೋದಿಲ್ಲ. ಕಷ್ಟಕಾಲಕ್ಕೆ ಅಂತಾ ಬಂಗಾರ ಮಾಡಿಕೊಳ್ಳೋದಕ್ಕೂ, ತರಕಾರಿ ಕೊಂಡುಕೊಂಡಂಗೆ ಬಂಗಾರ ಕೊಂಡುಕೊಳ್ಳೋಕೂ ವ್ಯತ್ಯಾಸವಿದೆ. ಈಗ ಆಗ್ತಾ ಇರೋದು ಎರಡನೇ ವಿಧದಲ್ಲಿ. ಬಂಗಾರವೇನು ಉದ್ಭವಿಸುತ್ತದಾ? ಒಂದು ಗ್ರಾಂ ಚಿನ್ನ ಸಿದ್ಧವಾಗಬೇಕು ಅಂದ್ರೆ, ಟನ್ನುಗಟ್ಟಲೇ ಮಣ್ಣನ್ನ ಅಗೀಬೇಕು. ಗಣಿಗಾರಿಕೆ ಮಾಡಬೇಕು. ಭೂಮಿಯಲ್ಲೇನು ತರಕಾರಿ ಬೆಳೆದಂತೆ ಚಿನ್ನದ ಅದಿರೂ ಬೆಳೆಯುತ್ತದೆಯಾ? ನಮ್ಮ ಹೆಣ್ಣುಮಕ್ಕಳು ಹತ್ತು ಗ್ರಾಂ ಚಿನ್ನ ಹಾಕಿಕೊಳ್ಳಲಿಕ್ಕೆ ಹತ್ತು ಟನ್ ನೆಲ ಅಗೀಬೇಕಾ..? ನಾವು ಬಳ್ಳಾರಿಯ ಗಣಿಗಳ ಬಗ್ಗೆ ಮಾತಾಡುತ್ತೇವೆ. ಬರಿದಾದ ಕೋಲಾರದ ಗಣಿ ಮರೆತು ಹೋಗುತ್ತೆ. ತುಂಬಾ limited ಆಗಿ ಬಳಸಬೇಕಾದ ವಸ್ತುಗಳು ಮಾಧ್ಯಮಗಳ ಉತ್ಪ್ರೇಕ್ಷೆಯಿಂದಾಗಿ ಬರಿದಾಗುವ ಕಾಲ ಬಂದಿದೆ. ಮಾಧ್ಯಮಗಳು ತಮ್ಮ ಜವಾಬ್ದಾರಿ ಮರೆತು ಕೇವಲ ಜಾಹೀರಾತಿನ ಆಸೆಗೆ ಅವರು ಹೇಳಿದ್ದನ್ನ ಬರೆದು ಪಾವನವಾಗುತ್ತಿವೆ. ಸ್ಪೆಷಲ್ ಎಡಿಷನ್ ಪುರವಣಿಗಳನ್ನ ಸಿದ್ಧಪಡಿಸಿ ಕೈಗಿಡುತ್ತಿವೆ. ದೊಡ್ಡ ದೊಡ್ಡ ಬಂಗಾರದಂಗಡಿವರಿಗೆ ದಲ್ಲಾಳಿ ಕೆಲಸ ಮಾಡುತ್ತಿವೆ. 

    ಬೆಂಗಳೂರಿಗೆ ಐಟಿ ಕಾಲಿಟ್ಟಾಗಿನಿಂದಾ ಬೆಂಗಳೂರಿನ ಖದರ್ರೇ ಬದಲಾಗಿ ಹೋಗಿದೆ. ತರಕಾರಿಗಳು ಹವಾನಿಯಂತ್ರಿತ ಶೋ ರೂಂಗಳಲ್ಲಿ ಸಿಗುತ್ತಿವೆ, ಕೇಜಿಗಟ್ಲೇ ಚಿನ್ನ ತರಕಾರಿಯಂತೆ ಬಿಕರಿಯಾಗುತ್ತಿದೆ..! ಮಹಿಳೆಯರ ಬಂಗಾರದಾಹಕ್ಕೆ ಇಡೀ ಜಗತ್ತಿನ ಚಿನ್ನದ ಗಣಿಗಳೆಲ್ಲಾ ಬರಿದಾಗುತ್ತಿವೆ. ಐದು ಆರು ಸಾವಿರವಿದ್ದ ಒಂದು ತೊಲ ಚಿನ್ನ ಹದಿಮೂರು ಸಾವಿರದ ಬಳಿಯಿದೆ. ಆದರೂ ಬೆಂಗಳೂರಿನಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಮೊದಲೇ ಹೇಳಿದೆನಲ್ಲ ಬೆಂಗಳೂರಿನ ಮಂದಿ ಬಳಿ ಕಾಂಚಾಣ ಝಣಝಣ ಅಂತಾ ಇದೆ. ಮಧ್ಯಮವರ್ಗದ ಸರ್ಕಾರಿ ನೌಕರಿ ಮಾಡೋರು, ಬೇರೆ ಇನ್‍ಕಂ ಇರದವರು ಈಗಲೂ ಬಂಗಾರ ಖರೀದಿ ಮಾಡಲಿಕ್ಕೆ ಕಷ್ಟವಿದೆ. ಮಗಳ ಮದುವೆಗೆ ಅಂತಾ ಚಿನ್ನ ಖರೀದಿ ಮಾಡಲಿಕ್ಕೆ ಮಧ್ಯಮವರ್ಗದವರಿಗೆ ತ್ರಾಸಿದೆ. ಆದರೆ, ಐಟಿ ಜಗತ್ತಿನಲ್ಲಿ ಆಗುತ್ತಿರುವ ಹಣದ ಚಲಾವಣೆಯಿಂದಾಗಿ “ಚಿನ್ನದ ಗ್ರಾಹಕರು” ತುಂಬಾ ಆಗಿದ್ದಾರೆ. ಒಮ್ಮೆ ಮಲ್ಲೇಶ್ವರದ ಸಂಪಿಗೆ ರೋಡಿನಲ್ಲಿ ತಿರುಗಾಡಿ ಬಂದರೆ ಸಾಕು ಬಂಗಾರದಂಗಡಿಗಳ ಸರಮಾಲೆಯೇ ಕಾಣಸಿಗುತ್ತದೆ. ಒಂದೊಂದು ಅಂಗಡೀಲೂ ನಮನಮೂನಿ ಆಫರ್‍ಗಳು. ಒಂದು ಕೇಜಿ ಚಿನ್ನ ಕೊಂಡರೆ ನೂರು ಗ್ರಾಂ ಫ್ರೀ..! ಹತ್ತು ಪರ್ಸೆಂಟ್ ಫ್ರೀ. ಅಕ್ಷಯ ತೃತೀಯವನ್ನ ಸಂಭ್ರಮದಿಂದ ಆಚರಿಸಿ ಅನ್ನೋ ಜಾಹಿರಾತುಗಳು ಕಣ್ಣಿಗೆ ರಾಚುತ್ತವೆ. ಭಾರತದ ಬೇರೆಡೆಗೆ ಈ ಮಟ್ಟಿಗಿನ ಬಂಗಾರದ ವ್ಯಾಪಾರ ಆಗ್ತಿದೆಯೋ ಇಲ್ಲವೋ ಅಂತಾ ಅನುಮಾನ ಶುರುವಾಗುತ್ತೆ.

    ಒಮ್ಮೆ ದಾವಣಗೆರೆಯಲ್ಲಿ ಇನ್ಫೋಸಿಸ್‍ ಸುಧಾಮೂರ್ತಿಯವರ “ಮನದ ಮಾತು” ಪುಸ್ತಕ ಬಿಡುಗಡೆ ಸಮಾರಂಭವಿತ್ತು. ಅದಕ್ಕೆ ಹಾರ್ನಹಳ್ಳಿ ರಾಮಸ್ವಾಮಿಯವರೂ ಬಂದಿದ್ದರು. ಅವರು, ಒಮ್ಮೆ ಸುಧಾಮೂರ್ತಿಯವರನ್ನ ನೋಡಿ ನಮ್ಮ ಹೆಣ್ಣು ಮಕ್ಕಳು ಕಲಿತುಕೊಳ್ಳಬೇಕು ಅಂತಾ ಅಂದರು. ಸುಧಾಮೂರ್ತಿಯವರಿಗೆ ದುಡ್ಡಿಗೇನೂ ಕೊರತೆ ಇಲ್ಲ. ಸಾವಿರಾರು ಕೋಟಿ ರೂ ವ್ಯವಹಾರವಿದೆ. ಇನ್‍ಕಂ ಇದೆ. ಆದರೂ ಅವರ ಕೊರಳಲ್ಲಿ ಕರಿಮಣಿಸರ ಕಾಣಸಿಗುತ್ತೆ. ಕೇಜಿಗಟ್ಲೇ ಬಂಗಾರದ ಆಭರಣಗಳು ಕಂಗೊಳಿಸೋದಿಲ್ಲ. ವಿದೇಶೀಯರೂ ಆ ಮಟ್ಟಿಗಿನ ಬಂಗಾರದಾಹಿಗಳಲ್ಲ. ಆದರೆ, ನಮ್ಮ ಹೆಣ್ಣುಮಕ್ಕಳಿಗೇಕೆ ಬಂಗಾರದ ದಾಹ. ಅದು ಬಂಗಾರದ ಬಯಕೆಯೂ ಅಲ್ಲ. ತೀರದ ದಾಹ. ಇದು ಹೀಗೇ ಮುಂದುವರಿದರೆ, ಜಗತ್ತಿನ ಎಲ್ಲ ಚಿನ್ನದ ಗಣಿಗಳೂ ಬರಿದಾಗಬೇಕಾಗುತ್ತೆ. ಈಗಲೇ ಭಾರತ, ಚಿನ್ನದ ಬಹುದೊಡ್ಡ ಮಾರುಕಟ್ಟೆ ಪ್ರಪಂಚದಲ್ಲಿ. ಇಲ್ಲಿನ ಎಲ್ಲ ಹೆಣ್ಣುಮಕ್ಕಳೂ ರೇಸಿಗೆ ಬಿದ್ದವರಂತೆ ಬಂಗಾರ ಕೊಳ್ಳಹತ್ತಿದರೆ…. ಮುಂದೆ ಕೆಲವೇ ವರ್ಷಗಳಲ್ಲಿ ಬಂಗಾರ ಮ್ಯೂಸಿಯಂ ವಸ್ತುವಾಗಿಹೋಗುತ್ತೆ.

    ಇನ್ನು ಮಾಧ್ಯಮಗಳು ಜನರ ಮತ್ತು ಸುತ್ತಮುತ್ತಲಿನ ಆಗುಹೋಗುಗಳ ನಡುವಿನ ಮಧ್ಯೆ ಸ್ನೇಹ ಸೇತುವಾಗಬೇಕಾದವುಗಳು ದಲ್ಲಾಳಿ ಕೆಲಸಕ್ಕೆ ಇಳಿದುಬಿಟ್ಟರೆ,  ಅಕ್ಷಯ ತೃತೀಯ ಅಂತಾ ಉತ್ಪ್ರೇಕ್ಷೆ ಮಾಡಿ, ಬಂಗಾರ ಕೊಡಿಸುವ ಕೆಲಸಕ್ಕೆ ಇಳಿದುಬಿಟ್ಟರೆ, ವಿವೇಚನೆ ವಿಕಾರವಾದರೆ, ಜನಜಾಗೃತಿ ಗತಿ..?

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s