ಬಯೋ ಟೆಕ್ನಾಲಜಿ : ಸುಖಾ ಸುಮ್ಮನೆ ಬೀಳಬೇಡಿ ಹಳ್ಳಕ್ಕೆ..!

ಈ ಲೇಖನ ಬರೆದು ಒಂದು ವರ್ಷವಾಯಿತು. ಹಿಂದಿನ ಸಾರಿ ಸಿ.ಇ.ಟಿ ಕೌನ್ಸಿಲಿಂಗ್ ಶುರುವಾಗುವ ಮೊದಲು ಕನ್ನಡದ ಎಲ್ಲ ಪತ್ರಿಕೆಗಳಿಗೆ ಮೇಲ್ ಮಾಡಿದ್ದೆ. ಪಾಪ ಪತ್ರಕರ್ತರಿಗೆ ಐಟಿ-ಬಿಟಿ ಪದ ಬಿಟ್ಟು ಬೇರೆ ಏನೂ ಗೊತ್ತಿಲ್ಲ. ತಿಳಿದುಕೊಳ್ಳುವ ಆಸಕ್ತಿ ಕೂಡಾ ಇದ್ದಂತಿಲ್ಲ. ತಿಳಿದವರು ಹೇಳಿದರೂ ಕೇಳುವ ವ್ಯವಧಾನವೂ ಇಲ್ಲ. ಬಯೋ ಟೆಕ್ನಾಲಜಿ ಮಾಡಿದ ಹುಡುಗರು ಕೆಲಸಕ್ಕಾಗಿ ಎಷ್ಟು ಅಡ್ಡಾಡುತ್ತಿದ್ದಾರೆ, ಒದ್ದಾಡುತ್ತಿದ್ದಾರೆ ಅನ್ನುವುದನ್ನ ವಿವರಿಸಿ ಬರೆದಿದ್ದೆ. ನನ್ನ ಗೆಳೆಯರ ಪಡಿಪಾಟಲುಗಳನ್ನ ಕಣ್ಣಾರೆ ಕಂಡಿದ್ದೇನೆ. ವಿದ್ಯೆ, ಪರ್ಸೆಂಟೇಜು, ಅವಕಾಶ ಇದ್ದರೂ ಬೇರೆ ಬ್ರಾಂಚುಗಳನ್ನ ಆಯ್ಕೆಮಾಡಿಕೊಳ್ಳದೇ ಬಯೋ ಟೆಕ್ನಾಲಜಿ ಮಾಡಿ ಎಲ್ಲಿಯೂ ಸಲ್ಲದವರಾಗಿ ಉಳಿದಿರುವ ಸಾವಿರಾರು ಮಂದಿ ಹುಡುಗರ ಅಂತರಾಳದ ಮಾತುಗಳಿಗೆ ಕನ್ನಡಿ ಹಿಡಿದಿದ್ದೆ. ಪಾಪ ನಮ್ಮ ಕನ್ನಡ ಪತ್ರಕರ್ತರಿಗೆ ಟೆಕ್ನಾಲಜಿಯ ಒಳಸುಳಿಗಳು ಅರ್ಥವಾಗಬೇಕಲ್ಲ? ಅಟ್ಲೀಸ್ಟ್ ಈ ಸಲವಾದರೂ ಪ್ರಕಟಣೆಯ ಭಾಗ್ಯ ಕಾಣಲಿ. ವಿದ್ಯಾವಂತ ಹುಡುಗರು, ಪೋಷಕರು ಖೆಡ್ಡಕ್ಕೆ ಬೀಳುವುದು ತಪ್ಪಲಿ ಎಂಬ ಆಶಯವಿದೆ.

“ಐಟಿ ಬಿಟಿಯಲ್ಲಿ ಕರ್ನಾಟಕ ದೇಶದಲ್ಲೇ ನಂ 1“, “ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಐಟಿ-ಬಿಟಿ ದಿಗ್ಗಜರ ದಂಡು”,”ಐಟಿ-ಬಿಟಿ ವಲಯಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಠಿ” ಮುಂತಾದ Fancy ಹೆಡ್ಡಿಂಗುಗಳು ಪತ್ರಿಕೆಗಳಲ್ಲೆಲ್ಲಾ ರಾರಾಜಿಸಿದವು. ಅದರಲ್ಲಿ ಐಟಿಯ ಪಾಲೆಷ್ಟು ಬಿಟಿಯ ಪಾಲೆಷ್ಟು ಅನ್ನುವುದರ ಅಂಕಿ ಅಂಶಗಳಿಲ್ಲ. ಒಂದೇ ಒಂದು ಪ್ರಾಸಪದದ ಅವಾಂತರವಿದು. ಜುಲ್ಯ್ 14ರಿಂದ ಸಿ.ಇ.ಟಿ. ಕೌನ್ಸಲಿಂಗ್ ಶುರುವಾಗಿದೆ. ಜನರನ್ನ ಸರ್ಕಾರಗಳು, ಆಡಳಿತ ವ್ಯವಸ್ಥೆ, ಕಾಲೇಜುಗಳು ಮತ್ತು ಪತ್ರಿಕೆಗಳು ಜನರನ್ನ ಬಿ.ಟಿ ಹೆಸರಿನಲ್ಲಿ ಮೂರ್ಖರನ್ನಾಗಿಸಿವೆ. ಆದರೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿ ಪೋಷಕರು ಈ ನಿಟ್ಟಿನಲ್ಲಿ ವಾಸ್ತವಿಕತೆ ಅರಿತು ಪ್ರಜ್ಞಾವಂತಿಕೆ ಮೆರೆಯಬೇಕೆಂಬುದು ಈ ಲೇಖನದ ಆಶಯ.

 ಪೋಷಕರ ಮತ್ತು ಪಿ.ಯು.ಸಿ ಮುಗಿಸಿದ ವಿದ್ಯಾರ್ಥಿವೃಂದದ ತಪ್ಪು ಗ್ರಹಿಕೆಗಳಿಂದಲೋ ಅಥವಾ ವಸ್ತು ಸ್ಥಿತಿ ಮರೆಮಾಚಿ ಬರೆದ ಪತ್ರಿಕಾ ವರದಿಗಳಿಂದಲೋ ಬಯೋಟೆಕ್ನಾಲಜಿ ಬಗ್ಗೆ ಆಕರ್ಷಿತರಾಗುತ್ತಾರೆ. ಜೊತೆಗೆ, ಪತ್ರಿಕೆಗಳಲ್ಲಿ “ಬಿಟಿ” ಶಬ್ಧ ಐಟಿಗೆ ಪ್ರಾಸಪದವಾಗಿ ಪ್ರತಿ ದಿನವೂ ಚಾಲ್ತಿಯಲ್ಲಿರುತ್ತದೆ. ಸರ್ಕಾರ ಹೇಳಿದ ಹೇಳಿದ ಹೇಳಿಕೆಗಳಿಂದಾಗಲೀ, ಪತ್ರಿಕಾ ವರದಿಗಳಿಂದಾಗಲೀ ತಮ್ಮ ಮಗ/ಮಗಳು ಎಂಜಿನಿಯರಿಂಗ್‍ನಲ್ಲಿ ಬಯೋಟೆಕ್ನಾಲಜಿ ಓದಲಿ ಎಂದು ಬಯಸುತ್ತಾರೆ. ಜೊತೆಗೆ ವಿದ್ಯಾರ್ಥಿವಲಯದಲ್ಲೂ ಇದು ಚಿರಪರಿಚಿತ ಶಬ್ಧ. ಆದರೆ, ಕ್ಷೇತ್ರದ ಬಗ್ಗೆ ಮಾಹಿತಿಯಾಗಲೀ, ಡಿಗ್ರಿ ಮುಗಿಸಿ ಹೊರಬಂದ ಪದವೀಧರರ ಕೆಲಸ ಸಿಗದ ಹತಾಶೆಗಳಾಗಲೀ, ಚಿಂತಾಕ್ರಾಂತತೆಗಳಾಗಲೀ, ಅನಿವಾರ್ಯವಾಗಿ ಕಂಪ್ಯೂಟರ್ ಕೋರ್ಸುಗಳನ್ನ ಮಾಡುವ ಅನಿವಾರ್ಯತೆಗಳಾಗಲೀ ಅಪರಿಚಿತ.

 ಬಯೋ ಟೆಕ್ನಾಲಜಿ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಆದರೆ, ಆ ಭವಿಷ್ಯ ಬಯೋಟೆಕ್ನಾಲಜಿ ಕೋರ್ಸು ಓದಿದವರಿಗೆ ಅನ್ವಯಿಸುವುದಿಲ್ಲ..! ವಿರೋಧಾಭಾಸವಾದರೂ ಕಟುಸತ್ಯ.! Electronics, Electrical, Instrumentation, Telecommunication ಓದಿದ ಹುಡುಗನಿಗೆ Hardware/Software ಕಂಪನಿಯಲ್ಲಿ ಕೆಲಸ ಸಿಗುತ್ತೆ. Computer Science ಓದಿದ ಹುಡುಗರಿಗೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. Mechanical ಓದಿದ ಹುಡುಗರಿಗೆ ಸ್ಟೀಲ್ ಇಂಡಸ್ಟ್ರಿಯಲ್ಲೋ, ಪೆಟ್ರೋಲಿಯಂ ರಿಫೈನರಿಯಲ್ಲೋ ಕೆಲಸ ದೊರಕುತ್ತದೆ. ಸಿವಿಲ್ ಓದಿದವರಿಗೆ ಕಟ್ಟಡ ನಿರ್ಮಾಣ ಕಂಪನಿಗಳಲ್ಲಿ ಕೆಲಸ ದೊರಕಿಸಿಕೊಳ್ಳಲಿಕ್ಕೆ ಅವಕಾಶಗಳಿವೆ. ಆದರೆ, ಬಯೋ ಟೆಕ್ನಾಲಜಿ, ಬಯೋ ಮೆಡಿಕಲ್, ಮೆಡಿಕಲ್ ಎಲೆಕ್ಟ್ರಾನಿಕ್ಸ್ ಓದಿದ ಹುಡುಗರಿಗೆ ಸಾಮರ್ಥ್ಯಕ್ಕೆ ತಕ್ಕ, ಗೌರವಾನ್ವಿತ ಸಂಭಾವನೆಯ ಉದ್ದಿಮೆಗಳಿಲ್ಲ. ಹಾಗಾಗಿಯೇ ಈ ಎಲ್ಲಾ ಬ್ರಾಂಚುಗಳಲ್ಲಿ ಓದಿದವರ ಸ್ಥಿತಿ ಅತಂತ್ರವಾಗಿದೆ. ಕಂಪನಿಗಳಿಗೆ ಆಯ್ಕೆಯಾಗುವ ಪ್ರಮಾಣ ತುಂಬಾ ವಿರಳ. ಅರವತ್ತು ವಿದ್ಯಾರ್ಥಿಗಳಿರುವ ಬ್ರಾಂಚಿನಲ್ಲಿ ಒಬ್ಬಿಬ್ಬರಿಗೆ ಕೆಲಸ ದೊರಕುವ ಅವಕಾಶಗಳಿರುತ್ತವೆ ಅಷ್ಟೆ.

ಬಿ.ಇ. ಬಯೋ ಟೆಕ್ನಾಲಜಿ ಓದಿದಾಕ್ಷಣ ಬಯೋಕಾನ್‍ನ ಕಿರಣ ಮುಜುಂದಾರ್ ನೇಮಕ ಮಾಡಿಕೊಳ್ಳುವುದಿಲ್ಲ. ಬದಲಿಗೆ ಅವರು ಸ್ನಾತಕೋತ್ತರ ಪದವೀಧರರಿಗೆ ಮಣೆ ಹಾಕುತ್ತಾರೆ. ಎಂ.ಎಸ್ಸಿ. ಮೈಕ್ರೋಬಯೋಲಜಿ, ಬಯೋಕೆಮಿಸ್ಟ್ರಿ ಓದಿದವರನ್ನ ನೇಮಿಸಿಕೊಳ್ಳುತ್ತಾರೆ. ಬಿ.ಎಸ್ಸಿ ಮುಗಿಸಿ, ಎಂ.ಎಸ್ಸಿ ಮಾಡಲಿಕ್ಕೆ 5 ವರ್ಷಗಳು ಹಿಡಿಯುತ್ತವೆ. ಅದೇ ಬಿ.ಇ. ಮುಗಿಸಿ ಎಂ.ಟೆಕ್ ಮಾಡಲಿಕ್ಕೆ 6 ವರ್ಷಗಳು ಹಿಡಿಯುತ್ತವೆ. ಜೊತೆಗೆ ಬಿ.ಇ. ಓದುವ ಖರ್ಚೇನೂ ಕಮ್ಮಿ ಇಲ್ಲ. ಹಾಗಾಗಿ, ಸಹಜವಾಗಿ ಬಿ.ಇ. ಓದಿದವರ ಸಂಬಳ ನಿರೀಕ್ಷೆಗಳು ತುಸು ಹೆಚ್ಚೇ. ಇವೆಲ್ಲವುಗಳ ಜೊತೆಗೆ ಬಯೋ ಟೆಕ್ನಾಲಜಿಯ ಪಠ್ಯಕ್ರಮ ಚೌ ಚೌ ಭಾತ್‍ನಂತಿದೆ. ಎಲ್ಲ ವಿಷಯಗಳಲ್ಲಿ ಅರೆ ಪರಿಣಿತಿ ಹೊಂದುವಂತೆ ಪಠ್ಯಕ್ರಮ ರಚಿಸಲಾಗಿದೆ. ಇದೂ ಕೂಡಾ ಬಿ.ಇ. ಬಯೋ ಟೆಕ್ನಾಲಜಿ ಓದಿದವರನ್ನ ಕಂಪನಿಗಳು ನೇಮಿಸಿಕೊಳ್ಳಲಿಕ್ಕೆ ಹಿಂದು ಮುಂದು ನೋಡಲಿಕ್ಕೆ ಕಾರಣೀಭೂತವಾಗಿರಬಹುದು. ಲೈಫ್ ಸೈನ್ಸ್‍ನ ಎಲ್ಲ ಶಾಖೆಗಳಲ್ಲಿ ಪರಿಣಿತಿ ಹೊಂದುವಂತೆ ಸಿಲೆಬಸ್ ರೂಪಿಸಲಾಗಿಲ್ಲ. ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಕ್ಷೇತ್ರದ Operating system, Linux, Pearl ಗಳನ್ನೂ ಸೇರಿಸಲಾಗಿದೆ.! ಈ ವಿಷಯಗಳು ಸಾಫ್ಟ್‍ವೇರ್ ಕ್ಷೇತ್ರಕ್ಕೆ ಸಂಬಂಧಿಸಿದವುಗಳು. ಈ ಬ್ರಾಂಚುಗಳ ಹುಡುಗರು ಸಾಫ್ಟ್‍ವೇರ್ ಕ್ಷೇತ್ರಕ್ಕೆ ಕುರಿತಂತೆ ಮೊದಲ ಸೆಮಿಸ್ಟರಿನಲ್ಲಿ ಮಾತ್ರ ಸಿ ಪ್ರೋಗ್ರಾಮಿಂಗನ್ನ ಓದಿರುತ್ತಾರೆ. ನಂತರ ಅದರ ಸಂಪರ್ಕವೇ ಇರುವುದಿಲ್ಲ.

 ಬಡ ಪ್ರತಿಭಾವಂತ ವಿದ್ಯಾರ್ಥಿಗಳು, ಮಧ್ಯಮವರ್ಗದ ವಿದ್ಯಾರ್ಥಿ ಸಮೂಹ ಬಹುಪಾಲು ಶಿಕ್ಷಣ ಸಾಲದಲ್ಲೇ ಓದು ಮುಂದುವರೆಸುವುದು. ಬಿ.ಇ. ಮುಗಿಸಿದ ನಂತರ ಕೆಲಸ ಸಿಗದೇ ಹೋದರೆ, ಸಾಲ ತೀರಿಸುವುದಾದರೂ ಹೇಗೆ? ಎಲ್ಲರ ಬಳಿಯೂ ಸ್ನಾತಕೋತ್ತರ ಪದವಿ ಎಂ.ಟೆಕ್ ಓದುವಷ್ಟು ಹಣವಾಗಲೀ ಸಮಯವಾಗಲೀ ಇರುವುದಿಲ್ಲವಲ್ಲ. ಹಾಗಾದರೆ, ಈ ಬ್ರಾಂಚುಗಳ ಸೇರ್ಪಡೆಯ ಔಚಿತ್ಯವಾದರೂ ಏನು? ನಿರುದ್ಯೋಗಿಗಳ ಸಾಲು ಸಾಲು ಸೃಷ್ಟಿಯೇ?

 ಬಯೋ ಮೆಡಿಕಲ್ ಓದಿದವರನ್ನ ಕೆಲವು ದೊಡ್ಡ ದೊಡ್ಡ ಆಸ್ಪತ್ರೆಗಳು ವಿದೇಶದಿಂದ ಆಮದಾದ ಎಮ್.ಆರ್.ಐ, ಸಿ.ಟಿ ಸ್ಕ್ಯಾನ್ ಮಷೀನ್‍ಗಳನ್ನ ನೋಡಿಕೊಳ್ಳಲಿಕ್ಕೆ ಬಯೋ ಮೆಡಿಕಲ್ ಎಂಜಿನಿಯರ್ ಆಗಿ ನೇಮಕ ಮಾಡಿಕೊಳ್ಳುತ್ತವಾದರೂ ಸಂಬಳ 8-10 ಸಾವಿರವಷ್ಟೆ. ಜೊತೆಗೆ ಓದಿದ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳೆಲ್ಲಾ ಕನಿಷ್ಟ 20 ಸಾವಿರ ಎಣಿಸುವಾಗ ಇವರು ಮಾಡಿದ ತಪ್ಪಾದರೂ ಏನು? ಸಾಫ್ಟ್‍ವೇರ್ ಕಂಪನಿಗಳು ಈ ಕ್ಷೇತ್ರದವರನ್ನ ನೇಮಿಸಿಕೊಳ್ಳುತ್ತವಾದರೂ ಅವರು ಬಯೋಟೆಕ್ನಾಲಜಿ ಸಂಬಂಧಿತ ಕ್ಷೇತ್ರದಲ್ಲೇನೂ ಪ್ರಾಜೆಕ್ಟ್‍ಗಳನ್ನ ಹೊಂದಿಲ್ಲ. ಮತ್ತೆ ಕಂಪ್ಯೂಟರ್ ಕೋರ್ಸುಗಳನ್ನ ಮಾಡಿಕೊಂಡು, ಐಟಿಯೆಡೆಗೆ ವಲಸೆ ಹೋಗಬೇಕು. ಏನೇ ಓದಿದರೂ ಐಟಿಯೆಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದಾದರೆ, ಈ ಬ್ರಾಂಚುಗಳಲ್ಲಿ ಓದುವ ಔಚಿತ್ಯವಾದರೂ ಏನು?

 ಇನ್ನು ಈ ಕ್ಷೇತ್ರಗಳ ಸ್ನಾತಕೋತ್ತರ ಪದವಿ ವಿಚಾರ. ಕರ್ನಾಟಕದಲ್ಲಿ ವಿ.ಟಿ.ಯು. ಅಡಿಯಲ್ಲಿ ಬಯೋಟೆಕ್ನಾಲಜಿಗೆ ಸಂಬಂಧಿಸಿದ ಎರಡು ಕೋರ್ಸುಗಳಿವೆ. ಬಯೋ ಇನ್ಫಾರ್ಮೆಟಿಕ್ಸ್ ಮತ್ತು ಸಿಗ್ನಲ್ ಪ್ರೋಸೆಸ್ಸಿಂಗ್. ಎಂ.ಟೆಕ್.ನಲ್ಲಿ ಪ್ರತಿ ಬ್ರಾಂಚಿಗೆ, ಪ್ರತಿ ಕಾಲೇಜಿಗೆ ಇರುವ ಸೀಟುಗಳ ಸಂಖ್ಯೆ 18 ರಿಂದ 20. ಇನ್ನುಳಿದ ಸಾವಿರಾರು ವಿದ್ಯಾರ್ಥಿಗಳ ಗರಿಯೇನು? ಮಣಿಪಾಲ್ ವಿವಿಯಲ್ಲಿ ಮೆಡಿಕಲ್ ಸಾಫ್ಟ್‍ವೇರ್ ಎಂಬ ಎಂ.ಎಸ್. ಪದವಿಯಿದೆ. ಈ ಪದವಿ ಪಡೆದರೆ ಅವಕಾಶಗಳನ್ನ ಹೆಚ್ಚಾಗಿಸಿಕೊಳ್ಳಬಹುದು. ಆದರೆ, ಸ್ನಾತಕೋತ್ತರ ಓದಿಸುವಷ್ಟು ಶ್ರೀಮಂತರಲ್ಲವಲ್ಲ ಬಡ ಪ್ರತಿಭಾವಂತ ವರ್ಗ. ಕರ್ನಾಟಕದಲ್ಲಿ ಬಿ.ಇ ಮುಗಿಸಿ ಪಕ್ಕದ ತಮಿಳ್ನಾಡಿನ ಶಾಸ್ತ್ರ ವಿವಿಯಲ್ಲಿ ಬಯೋ ಇನ್ಫಾರ್ಮೆಟಿಕ್ಸ್‍ನಲ್ಲಿ ಎಂ.ಟೆಕ್ ಮಾಡಿಬಂದವರಿಗೂ ಅವಕಾಶಗಳೇನೂ ಹೆಚ್ಚಾಗಿಲ್ಲ. ಹೆಚ್ಚಿನ ಕಾಲೇಜುಗಳಲ್ಲಿ ತಮ್ಮ ವಿದ್ಯಾರ್ಥಿಗಳನ್ನೇ ಲೆಕ್ಚರಿಕೆಗೆ ತೆಗೆದುಕೊಳ್ಳುವುದಿಲ್ಲ. ಎಂ.ಎಸ್ಸಿ. ಆದವರನ್ನ ತೆಗೆದುಕೊಂಡು ಕಡಿಮೆ ವೇತನಕ್ಕೆ ದುಡಿಸಿಕೊಳ್ಳುವ ಕಾಲೇಜುಗಳಿವೆ.

 ಬಯೋ ಟೆಕ್ನಾಲಜಿಗೆ ಹೋಗುವ ಹುಡುಗರು ಸಾಮಾನ್ಯ ಬುದ್ಧಿವಂತರೆಂದು ಈ ಲೇಖನ ಹೇಳ ಹೊರಟಿಲ್ಲ. ಆದರೆ, ಬಯೋಟೆಕ್ನಾಲಜಿಯಲ್ಲಿ ಆಸಕ್ತಿ ಹೊಂದಿದವರಿಗೆ ಅವಕಾಶಗಳಿಲ್ಲ ಅನ್ನುವುದನ್ನ ಹೇಳಲಿಚ್ಛಿಸುತ್ತದೆ. ಬಯೋ ಟೆಕ್ನಾಲಜಿ ಕೂಡಾ ಅಪಾರ ಅವಕಾಶಗಳಿರುವ ಕ್ಷೇತ್ರ. ಆ ಅವಕಾಶಗಳು ನಮಗೆ ಸಿಗದಿದ್ದರೆ ಅದರಿಂದೇನು ಪ್ರಯೋಜನ? ಆದ್ರೆ, ಈ ಕ್ಷೇತ್ರದ ಎಲ್ಲ ಸಂಶೋಧನೆಗಳು ನೆಡೆಯುತ್ತಿರುವುದು ಅಮೇರಿಕಾ, ಬ್ರಿಟನ್‍ಗಳಲ್ಲಿ. ಜಿ.ಆರ್.ಇ. ಮತ್ತು ಟೋಫೆಲ್ ಪರೀಕ್ಷೆಗಳನ್ನ ಪಾಸು ಮಾಡಿಕೊಂಡು ಅಲ್ಲಿ ಹೋಗಲಿಕ್ಕೆ ಎಷ್ಟು ಜನರಿಗೆ ಸಾಧ್ಯವಿದೆ. ಎಷ್ಟು ಮಧ್ಯಮ ವರ್ಗದ ಪೋಷಕರಿಗೆ 20-30.ಲಕ್ಷ ವ್ಯಯಿಸಿ ಅಲ್ಲಿ ಸ್ನಾತಕೋತ್ತರ ಪದವಿ ಓದಿಸುವಷ್ಟು ಸಾಮರ್ಥ್ಯವಿದೆ? ಕನ್ನಡಿಯೊಳಗಿನ ಗಂಟನ್ನ ತೋರಿಸಿ ಮೋಸ ಮಾಡಬಾರದು ಅಲ್ವಾ?

ಗಣೇಶ್.ಕೆ.

5 thoughts on “ಬಯೋ ಟೆಕ್ನಾಲಜಿ : ಸುಖಾ ಸುಮ್ಮನೆ ಬೀಳಬೇಡಿ ಹಳ್ಳಕ್ಕೆ..!

 1. One thing..i guess this article is biased!!! No computer science student is working on his core interest area…When he gets into one company…based on the project he gets…career ll start!!!

  And coming back to biotechnology..,tat s a growing sector and its in budding stage here in India…Guys r getting job but with lot of comepetition and less salary! And moreover I dont know about you..,but when you are able to think this much…the guys who are framing syllabus and other things t the top are much much exp and have knowledge than you I guess!!!

  People now what ever they study they are going towards IT!!! Thats not the fault of people..IT is ruling and it is coming everywhere in our daily lives dude!!! Similarly in life science sector IT plays a major part… Not only to life sciences sector…even to Mechanical,Civil and all other things now IT is playing a major part!!!Please refer some really good information over the net and update yourself regarding this!!!

  Writing what you think is good. . . But please don’t try to shatter something!!!

  And what pity here is.., in the article that you have written its like one-way. . . No point for discussion!!!

  Freak!!!!

  • Aniketh,

   ನೀವು ಏನ್ ಹೇಳ್ತಾ ಇದ್ದೀರಿ? ಅವರು ಬರೆದಿರೋದು ಬಯೋಟೆಕ್ನಾಲಜಿ ಕೋರ್ಸಿನ ಬಗ್ಗೆ. ಅದನ್ನು ಮಾಡಿ ಕೆಲಸಕ್ಕೆ ಪರದಾಡ್ತಿರೋ ಹುಡುಗರ ಬಗ್ಗೆ. ಅದು ಬಡ್ಡಿಂಗ್ ಸ್ಟೇಜಲ್ಲಾದ್ರೂ ಇರ್ಲಿ, ದೊಡ್ಡದಾಗಿ ಬೇಕಿದ್ರೆ ಬೆಳೆದಿರಲಿ.. ಕೊನೆಗೆ ಹುಡುಗರಿಗೆ ಬೇಕಾಗಿದ್ದು ಜೀವನ ನಿರ್ವಹಣೆಗೆ ಕೆಲಸ, ಸಂಪಾದನೆ ಅಷ್ಟೆ. ಇದರಲ್ಲಿ ಸಾಫ್ಟ್ ವೇರ್ ಬಗ್ಗೆ ಅಸೂಯೆ ಎನಿಲ್ಲ. ವಾಸ್ತವ ಸ್ಥಿತಿ ಹೇಳಿದ್ದಾರಷ್ಟೆ. ಒಂದು ಎಚ್ಚರಿಕೆ ಕೊಡುವ ಬರಹ ಇದು.

 2. ಉದ್ಯೋಗವಕಾಶಗಳು ಎಲ್ಲ ಕ್ಷೇತ್ರದಲ್ಲೂ ಸ್ಪರ್ದಾತ್ಮಕವಗಿರುತ್ತೆ. ಅಂತದರಲ್ಲಿ ಬಯೋ ಟೆಕ್ನಾಲಜಿ ಓದಿದವರಿಗೆ ಅವಕಾಶಗಳೇ ಇಲ್ಲ ಅಂದರೆ ತಪ್ಪಾಗುತ್ತದೆ. ಆದ್ರೆ ಒಂದು caution ಏನಂದ್ರೆ, biology ಏರಿಯ ಪ್ರೊಫೆಶನಲ್ ಆಗಿ ತೆಗೊಳೋರಿಗೆ ಅದ್ರಲ್ಲಿ ಬಹಳ ಆಸಕ್ತಿ ಮತ್ತೆ ತಾಳ್ಮೆ ಇರಬೇಕು. basic ಬಯೋ ಟೆಕ್ನಾಲಜಿ educationge ದೊಡ್ಡ ಸಂಬಳ ನಿರೀಕ್ಷೆ ಮಾಡೋದು ಸರಿಯಲ್ಲ.

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s