ಮಾಸ್ತರಿಕೆಗೆ ದೀಡು : ಕಂಡದ್ದೇನು ಕಾಣದ್ದೇನು? – ಭಾಗ ೧

ನನ್ನ ಪಂಚ್ ಲೈನ್ ಬ್ಲಾಗಿನಲ್ಲಿ ಪಂಚ್ ಲೈನುಗಳು ಸಾಂಗೋಪಾಂಗವಾಗಿ ಬರುತ್ತಿದ್ದವಾದರೂ, ಬರಹಗಳನ್ನ ಬರೆಯಲಿಕ್ಕೆ ಯಾಕೋ ಮನಸ್ಸು ಆಗಿರಲಿಲ್ಲ. ತಲೆಯಲ್ಲಿ ಯೋಚನೆಗಳು, ಯೋಜನೆಗಳು ಸಾಕಷ್ಟಿದ್ದರೂ ಬರಹಗಳಾಗಿ ಮೂಡಿರಲಿಲ್ಲ. ಇನ್ನು ಮೇಲೆ ನನ್ನ ಅಧ್ಯಾಪನ ವೃತ್ತಿಯ ಹಲವು ಮಜಲುಗಳನ್ನ ಬರಹಗಳಲ್ಲಿ ಕಂತುಗಳಲ್ಲಿ ಪ್ರಕಟಿಸುತ್ತೇನೆ.

ಮಾಸ್ತರಿಕೆ ಚಾಲೂ ಮಾಡಿ ದೀಡ್ ವರ್ಷ ಕಳದಾವು. ಕಂಡದ್ದೇನು ಕಾಣದ್ದೇನು ಅನ್ನೂದರ ಬಗ್ಗೆ ಸ್ವಾನುಸಂಧಾನ. ಒಂದು ಪ್ರಮುಖ ವಿಷಯ. “ದೀಡು” ಅನ್ನೋದು ಹಿಂದಿಯ “ಢೇಡ್” ಶಬ್ಧದ ಅಪಭ್ರಂಶ. ಅಂದ್ರೆ, ಒಂದೂವರೆ ಅಂತಾ ಅರ್ಥ. ಇಲ್ಲಿಗೆ ಹೊಸದಾಗಿ ಬಂದಾಗ ದೀಡು ಅನ್ನೋದು ಒಂದು ಮಜವಾದ ಶಬ್ಧವಾಗಿ ಕಂಡಿತ್ತು.

ಜಗತ್ತನ್ನೇ ಬದಲಾಯಿಸಿಬಿಡುತ್ತೀನೆಂಬ ಹುಚ್ಚು ಹಂಬಲ, ಹೇಳಿದ್ದನ್ನ ಗಮನವಿಟ್ಟು(ಬೇಕೋ ಬೇಡವೋ) ಕೇಳುವ ಜನ(ಅರ್ಥಾತ್ ವಿದ್ಯಾರ್ಥಿಗಳು), ಪ್ರಧಾನಮಂತ್ರಿಗಳಿಗೆ, ಮುಖ್ಯ ಮಂತ್ರಿಗಳಿಗೆ ಭಾಷಣ ಓದಲಿಕ್ಕೆ ಇರೋವಂಥಾ ಡಯಾಸು, ಕಾರಿಡಾರಿನಲ್ಲಿ – ಕ್ಯಾಂಪಸ್ ನಲ್ಲಿ ನಡೆದು ಹೋಗುತ್ತಿದ್ದರೆ ಹಫ್ತಾ ವಸೂಲಿಗಿಳಿದವರಿಗೆ ಹಫ್ತಾವನ್ನ ಕೇಳದೇ ಕೊಡುವಂತೆ ನಮಸ್ಕಾರಗಳು, ಕಾಲೇಜು ಬಸ್ಸಿನಲ್ಲಿ ಪ್ರತ್ಯೇಕ ಸ್ಟಾಫ್ ಸೀಟು, ಅದರಲ್ಲಿ ಯಾರಾದರೂ ಕೂತಿದ್ದರೆ ಎದ್ದೇಳಿಸಿ ಕೂರುವ ಗತ್ತು, ಸೌಲಭ್ಯ… ಇವೆಲ್ಲ ಮೊದಲ ನೋಟಕ್ಕೆ ಸಿಗುವ ಒಂದೂವರೆ ವರ್ಷದ ಹಿಂದಿನ ನಾಸ್ಟಾಲ್ಜಿಯಾ..!

ಹುಬ್ಬಳ್ಳಿಗೆ ಕಾಲಿಟ್ಟು ನಾಲ್ಕು ವರ್ಷಗಳು ಕಳೆಯುತ್ತಿವೆ. ಇಲ್ಲಿನ ಭಾಷೆ, ಊಟ, ಸಂಸ್ಕೃತಿ, ಪ್ರಧಾನತೆ, ಅಭಿರುಚಿ, ಹಾವಭಾವಗಳು, ವಿಶೇಷ ಬೈಗುಳಗಳು, ಗದ್ದಲಗಳು ಎಲ್ಲವೂ ಚಿರಪರಿಚಿತವಾಗುತ್ತಿವೆ. ಊರು ದಾವಣಗೆರೆಯಾದ್ದರಿಂದ ಹುಬ್ಬಳ್ಳಿಯ ಭಾಷೆಯನ್ನ ಕರಗತ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಲಿಲ್ಲ. ಹುಬ್ಬಳ್ಳಿ ಕಡೆಯ ಭಾಷೆ ಕನ್ನಡದ ಉಪಭಾಷೆಗಳಲ್ಲೊಂದು. ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆಯ ಭಾಷೆಗಳ ಸೊಗಡು ಒಂದು ರೀತಿಯಾದರೆ, ಬಿಜಾಪುರ, ಗುಲ್ಬರ್ಗ, ಬೀದರ್ ಕಡೆಯ ಭಾಷೆಗಳ ಸೊಗಡೇ ಬೇರೆ. ಹುಬ್ಬಳ್ಳಿಯಿಂದ ಒಂದೂವರೆ ತಾಸಿನ ಪ್ರಯಾಣದ ಬೆಳಗಾವಿ ಕಡೆಯ ಭಾಷೆಯ ಮರಾಠಿ ಮಿಶ್ರಿತ ಕನ್ನಡದ ಸೊಗಡೇ ಬೇರೆ. ಬಹುಮಟ್ಟಿಗೆ ಹುಬ್ಬಳ್ಳಿಯ accent ಕಲಿತುಕೊಂಡಿದ್ದೇನೆ. ಮಾತಾಡಿದರೆ, ಥೇಟ್ ಹುಬ್ಬಳ್ಳಿಯಾತನೇನೋ ಎಂಬಂತೆ ಮಾತು ಕಲಿತಿದ್ದೇನೆ.

ಉತ್ತರ ಕರ್ನಾಟಕದ ಹೆಬ್ಬಾಗಿಲೆಂದೇ ಪರಿಗಣಿಸಲ್ಪಡುವ ಹುಬ್ಬಳ್ಳಿಯ ಭಾಷೆ ಗಂಡು ಮೆಟ್ಟಿದ ಭಾಷೆ ಅಂತಲೇ ಕರೆಯಲ್ಪಡುತ್ತದೆ. ಹಾಗಾದ್ರೆ ಹೆಣ್ಣು ಮೆಟ್ಟಿದ ಭಾಷೆ ಯಾವುದು ಎಂಬ ಪ್ರಶ್ನೆ ಮನದಲ್ಲಿ ಸುಳಿದು ಹೋಗುತ್ತದೆ..! ಇನ್ನೊಂದು ವಿಚಿತ್ರವೆಂದರೆ, ಹುಬ್ಬಳ್ಳಿಯ ಬ್ರಾಂಡ್ ಅಂಬಾಸಿಡರ್ ಅಂತಾ ಪರಿಗಣಿಸುವುದಾದರೆ ಅದು ಕಿತ್ತೂರು ಚನ್ನಮ್ಮ. ಧಾರವಾಡದಿಂದ ಬೆಳಗಾವಿಗೆ ಹೋಗುವ ಧಾರಿಯಲ್ಲಿನ ಕಿತ್ತೂರಿನಾಕೆಯಾದರೂ, ಆಕೆ ಸಮಸ್ತ ಕನ್ನಡಿಗರ, ದೇಶಪ್ರೇಮಿಗಳ ಪ್ರತಿನಿಧಿ. ಹುಬ್ಬಳ್ಳಿಯ ಪ್ರಮುಖ ವರ್ತುಲಕ್ಕೆ(ಸರ್ಕಲ್ ಗೆ ನಮ್ಮ ಹುಬ್ಬಳ್ಳಿ ಕಡೆಗೆ ಇರೋ ಸುಂದರ ಕನ್ನಡ ಹೆಸರು) ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಲಾಗಿದೆ. ಇದರ ವಿಶೇಷತೆ ತಿಳಿಯಲೇ ಬೇಕು. ಸಾಮಾನ್ಯವಾಗಿ ಕುದುರೆಯ ಮೇಲೆ ಕುಳಿತಿರುವ ಬಸವೇಶ್ವರರ ಅಥವಾ ಇನ್ಯಾವುದೇ ರಾಜನ ಅಥವಾ ಮಹಾಪುರುಷರ ಮೂರ್ತಿಗಳನ್ನ ನೋಡಿದ್ದಕ್ಕೂ ಇಲ್ಲಿರುವ ಚನ್ನಮ್ಮ ವರ್ತುಳದ ಚನ್ನಮ್ಮನಿಗೂ ವ್ಯತ್ಯಾಸವಿದೆ. ಕೇವಲ ಹಿಂಭಾಗದ ಎರಡು ಕಾಲುಗಳ ಮೇಲೆ ಕುದುರೆ ಕೆನೆಯುತ್ತ ನಿಂತಿದೆ. ಅದರ ಮೇಲೆ ತೆರೆದ ಕತ್ತಿ ಹಿಡಿದ ಚನ್ನಮ್ಮ ಆಸೀನಳಾಗಿದ್ದಾಳೆ. ಪ್ರತಿ ಬಾರಿ ಈ ಸರ್ಕಲ್ಲನ್ನ ಸಿಟಿ ಬಸ್ಸು ಸುತ್ತು ಹಾಕುವಾಗಲೂ ಮನಸ್ಸು ಒಮ್ಮೆ ಚನ್ನಮ್ಮನ ಮೂರ್ತಿ ಕಟೆದ ಶಿಲ್ಪಿಯನ್ನ ನೆನೆಯುತ್ತದೆ. ಕುದುರೆಯ ಕೇವಲ ಎರಡು ಕಾಲುಗಳ ಮೇಲೆ ಇಡೀ ಭಾರವನ್ನ, ಗುರುತ್ವ ಕೇಂದ್ರವನ್ನ ಸರಿದೂಗಿಸುವುದು ಸವಾಲಿನ ಕೆಲಸ. ಎಷ್ಟೋ ಮೂರ್ತಿಗಳಲ್ಲಿ ನಾಲ್ಕೂ ಕಾಲಿನ ಮೇಲೆ ಕುದುರೆ ನಿಂತಿರುತ್ತದೆ. ಅದರ ಮೇಲೆ ಯಾರಾದರೂ ಮಹಾಪುರುಷರು ಕುಂತಿರುವ ಭಂಗಿಯಿರುತ್ತದೆ.

ಕಿತ್ತೂರು ಚನ್ನಮ್ಮ ವೃತ್ತದ ಇನ್ನೊಂದು ಪ್ರಮುಖ ವಿಶೇಷತೆ ಇದೆ. ಒಬ್ಬ ಎಂಜಿನಿಯರಾಗಿ ಇದನ್ನ ಗಮನಿಸಬೇಕು. ಈ ವೃತ್ತದಲ್ಲಿ ೬ ರಸ್ತೆಗಳು ಕೂಡುತ್ತವೆ. ಅದರಲ್ಲಿ ಎರಡು ರಾಷ್ಟ್ರ‍ೀಯ ಹೆದ್ದಾರಿಗಳು. ಯಾವುದೇ ಕಾರಣಕ್ಕೂ ಇಲ್ಲಿ ಟ್ರಾಫಿಕ್ ಜಾಮ್ ಆಗುವಂತಿಲ್ಲ. ಹೆದ್ದಾರಿಯ ವಾಹನಗಳನ್ನ ಜಾಸ್ತಿ ಹೊತ್ತು ತಡೆಹಿಡಿಯುವಂತಿಲ್ಲ. ಇದನ್ನ ಟ್ರಾಫಿಕ್ ಐಲ್ಯಾಂಡ್ ಅಂತಲೇ ಕರೀತಾರೆ. ಚನ್ನಮ್ಮ ವೃತ್ತದಲ್ಲಿ ಏನಾದರೂ ಪ್ರತಿಭಟನೆಗಳು, ಜಾಥಾಗಳು ನಡೆದರೆ ಹುಬ್ಬಳ್ಳಿ ಹಲವು ತಾಸುಗಳ ಕಾಲ ಸ್ಥಬ್ಧವಾಗಿಬಿಡುತ್ತದೆ. ಇದರ ಟ್ರಾಫಿಕ್ ಸಿಸ್ಟಮ್‍ನ್ನ ವಿನ್ಯಾಸಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಇದರ ಬಗ್ಗೆ ಎಂ.ಟೆಕ್ ನಲ್ಲಿ ನನ್ನ ಗುರುಗಳಾಗಿದ್ದ ಪ್ರೊ.ಬಿ.ಎಲ್.ದೇಸಾಯಿಯವರು Design constraints ಬಗ್ಗೆ ಹೇಳುತ್ತಿದ್ದರು. ವಾಹನಗಳ ಹರಿವನ್ನ ನಿಯಂತ್ರಿಸುವುದು, ಅವುಗಳಿಗೆ ಪರ್ಯಾಯ ಮಾರ್ಗ ತೋರಿಸಿ ಟ್ರಾಫಿಕ್ಕನ್ನ ಕಡಿಮೆ ಮಾಡುವುದು ಇವೆಲ್ಲವೂ ಸಾಮಾನ್ಯ ಕೆಲಸವೇನಲ್ಲ. ಇದು ಹಲವು ಬಾರಿ ಕಗ್ಗಂಟಾಗಿತ್ತಂತೆ. ಹಾಗಾಗಿ ಚನ್ನಮ್ಮ ಸರ್ಕಲ್ಲಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಭಾರತದ ಮಟ್ಟದಲ್ಲಿ Design contest ಏರ್ಪಡಿಸಿದ್ದರಂತೆ. ಅದರಲ್ಲಿ ಆಯ್ಕೆಯಾದದ್ದನ್ನ ಈಗ ಉಳಿಸಿಕೊಂಡಿದ್ದಾರೆ.

ಮಾಸ್ತರೇನೋ ಆದೆ. ಆದರೆ, ಮಾಸ್ತರಿಕೆಗೆ ಒಗ್ಗಿಕೊಳ್ಳಲಿಕ್ಕೆ ಸ್ವಲ್ಪ ಸಮಯ ಬೇಕು. ಚಿಕ್ಕವನಿದ್ದಾಗಿನಿಂದಲೂ ಸ್ಟೇಜಿನ ಮೇಲೆ ಅದೂ ಇದೂ ಕಾರ್ಯಕ್ರಮ ಕೊಡುತ್ತಿದ್ದುದರಿಂದ ನನಗೇನೂ ಸಭಾ ಕಂಪನ, ಜನರೊಂದಿಗೆ ಬೆರೆಯದಿರುವಿಕೆ ಇವ್ಯಾವೂ ಇಲ್ಲ. ಆದರೂ ಹೊಸ ವ್ಯಕ್ತಿಗಳೊಂದಿಗೆ ನಮ್ಮ ಮಾತು, ಹಾವಭಾವ ಇವೆಲ್ಲವನ್ನೂ tune ಮಾಡಿಕೊಳ್ಳಬೇಕೆಂದರೆ ಸ್ವಲ್ಪ ಟೈಮು ಹಿಡಿಯುತ್ತದೆ. ಮೆನ್ ಆರ್ ಫ್ರಂ ಮಾರ್ಸ್, ವಿಮೆನ್ ಆರ್ ಫ್ರಂ ವೀನಸ್ ನಂಥ, ಡೇಲ್ ಕಾರ್ನೆಗಿಯ ಹೌ ಟು ಮೇಕ್ ಫ್ರೆಂಡ್ಸ್ ಅಂಡ್ ಇನ್ ಫ್ಲುಯೆಂನ್ಸ್ ಪೀಪಲ್ ಥರದ ರಿಲೇಷನ್‍ಷಿಪ್ ಮ್ಯಾನೇಜ್‍ಮೆಂಟ್ ಬುಕ್ಕುಗಳನ್ನ ಓದಿದ್ದರಿಂದ ೬೦-೭೦ ಮಂದಿಯನ್ನ ನಿಭಾಯಿಸುವುದು ಕಷ್ಟವೆನಿಸಲಿಲ್ಲ.

3 thoughts on “ಮಾಸ್ತರಿಕೆಗೆ ದೀಡು : ಕಂಡದ್ದೇನು ಕಾಣದ್ದೇನು? – ಭಾಗ ೧

  1. ಹುಬ್ಬಳ್ಳಿಯಲ್ಲಿ ನಾನು ಕಳೆದ ಐದು ವರ್ಷದ ಅನುಭವ ಮತ್ತೆ ನೆನಪಿಗೆ ತಂದ ನಿಮಗೆ ನಮನಗಳು ಸರ್. ನನ್ನ ಕೆಲಸದ ಮೊದಲ ದಿನಗಳನ್ನು ನಾನು ಕಳೆದದ್ದು ಧಾರವಾಡದ ಲೈನ್ ಬಝಾರಿನಲ್ಲಿ. ಸರಿ ಸುಮಾರು, ಅದೂ ಧೀಡ್ ವರ್ಷಗಳ ಕಾಲ. ನಂತರ ಹುಬ್ಬಳ್ಳಿಯ ಹೊಸೂರ, ವಿಕಾಸನಗರ, ಶಿರೂರ ಪಾರ್ಕ್ ಗಳಲ್ಲಿನ ಒಡನಾಟ. ಅದೂ ಕೂಡ ೪+ಧೀಡ್ ವರ್ಷ!
    ಅಲ್ಲಿನ ಜನಜೀವನ, ಅವರದೇ ಆದ ಶೈಲಿ ಅದಕ್ಕಿಂತಲೂ ಮಿಗಿಲಾಗಿ ನನಗೆ ರುಚಿಸಿದ್ದು ಆ ಜೋಳದ ರೊಟ್ಟಿ, ಗುರೆಳ್ಳು ಚಟ್ನಿಯ ಘಮ ಮರೆಯುವುದು ಕಷ್ಟ. ಕನ್ನಡವಂತೂ ನಾನೊಬ್ಬ ಉತ್ತರಕನ್ನಡಿಗನೆಂಬಷ್ಟೂ ಸಲೀಸಾಗಿ ಕಲಿತ್ತಿದ್ದೆ. ಬೆಂಗಳೂರಿಗೆ ಬಂದರೂ ಆದರ ನಂಟು ನನ್ನನಿನ್ನೂ ಬಿಟ್ಟಿಲ್ಲ. ಪ್ರತೀ ಮೂರು ತಿಂಗಳಿಗೊಮ್ಮೆಯಾದರೂ ಧಾರವಾಡ ಫೇಢದ ರುಚಿ ನನ್ನನ್ನು ಬರಸೆಳೆಯುತ್ತದೆ.

  2. EE COMMENT ANNU ENGLISH BHASHEYALLI BAREDUDDAKKE KSHAME YAACHISUVE,
    -But i dont understand how “Men are from Mars and women are from Venus” has helped u to understand ppl’s(student’s) behavior.
    -Coming to the point Hubballi Baigalugalu, they are so vulgar though so sweet tht when frnds scold us we feel happy:), i hope u’ve felt tht kinda happiness.

  3. ಮರುಕೋರಿಕೆ (Pingback): ಮಾಸ್ತರಿಕೆಗೆ ಮೂರು – ಹುಬ್ಳೀಕರ್ ಧಾರವಾಡಕರ್ ಗದಗಕರ್ ಪುಣೇಕರ್ ಬೆಳಗಾಂವಕರ್ ಅಷ್ಟೇ ಅಲ್ಲ. ಇಗ್ನೋರ್ ಕರ್ ಇಗ್

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s