
Madan Mohan Malaviya – Courtesy – http://www.bhu.ac.in
ನಾನೆಂದೂ ನನ್ನ ವಿದ್ಯಾರ್ಥಿ ಮಿತ್ರರಿಗೆ ಜಾತಿ, ಧರ್ಮ ಕೇಳಿದವನಲ್ಲ. ಕೇಳುವುದೂ ಇಲ್ಲ. ವಿದ್ಯೆಗೆ ಜಾತಿ ಧರ್ಮಗಳಿಲ್ಲ. ಇರಲೂಕೂಡದು. ವಿದ್ಯೆ ಸಾರ್ವತ್ರಿಕವಾಗಬೇಕು. ಬರೀ ಪ್ರತಿಭಾವಂತರಿಗಷ್ಟೇ ಮೀಸಲೂ ಆಗಬಾರದು. ವಿವಾದದ ವಿಷಯಕ್ಕೆ ಬಂದರೆ, ಅಲಿಗಢ ಮುಸ್ಲಿಂ ವಿವಿ ಇದ್ದಂತೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಮಾಡಬೇಕು ಎನ್ನುವುದು ಒಂದು ರಾಜಕೀಯ ಪಕ್ಷದ ನಿಲುವು. ಅದಕ್ಕೆ ವಿರೋಧವೆಂಬಂತೆ ಇನ್ನೊಂದು ಪಕ್ಷ ಮತ್ತು, ಭಿನ್ನ ನಿಲುವು ಹೊಂದಿರುವ ಸಾಹಿತಿಗಳು ಸಂಶೋಧಕರು ವಿವಿಗೆ ಟಿಪ್ಪು ಹೆಸರು ಬೇಡ ಎಂದಿದ್ದಾರೆ. ಇನ್ನು ಕೆಲವು ಸಾಹಿತಿಗಳು ಈ ಸಾಹಿತಿಗಳನ್ನ ವಿರೋಧಿಸುವ ನಿರ್ಣಯ ತೆಗೆದುಕೊಂಡಿದ್ದಾರೆ.
ಬನಾರಸ್ ಹಿಂದೂ ವಿವಿಯ ವೆಬ್‌ಸೈಟ್‌ನಲ್ಲಿ ಪಂಡಿತ್ ಮದನ ಮೋಹನ ಮಾಳವೀಯರವರ ಸಂದೇಶವನ್ನ ಹಾಕಿದ್ದಾರೆ. ಓದಿ.
India is not a country of the Hindus only. It is a country of the Muslims, the Christians and the Parsees too. The country can gain strength and develop itself only when the people of the different communities in India live in mutual goodwill and harmony .It is my earnest hope and prayer that this centre of life and light which is coming into existence, will produce students who will not only be intellectually equal to the best of their fellow students in other parts of the world, but will also live a noble life, love their country and be loyal to the Supreme ruler.
– Pandit Madan Mohan Malaviya
ಭಾರತವೆಂಬುದು ಹಿಂದೂಗಳದ್ದಷ್ಟೇ ಅಲ್ಲ. ಮುಸ್ಲೀಮರು, ಕ್ರಿಶ್ಚಿಯನ್ನರು, ಪಾರ್ಸಿಗಳದ್ದೂ ಹೌದು. ಈ ಎಲ್ಲ ಸಮುದಾಯಗಳ ಸಮನ್ವಯದಲ್ಲೇ ದೇಶದ ಅಭಿವೃದ್ಧಿಯಿದೆ ಎಂದು ಹೇಳಿದ್ದಾರೆ. ಬನಾರಸ್ ವಿವಿಗೆ ಬನಾರಸ್ ಹಿಂದೂ ವಿವಿ ಎಂದು ಹೆಸರಿಡಬಹುದಾದರೆ ಶ್ರೀರಂಗಪಟ್ಟಣದ ವಿವಿಗೆ ಟಿಪ್ಪೂ ಮುಸ್ಲಿಂ ವಿವಿ ಎಂದೂ ಹೆಸರಿಡಬಹುದು. ಆದರೆ, ಮುಸ್ಲಿಂ ವಿವಿಯಲ್ಲೂ ಮದನಮೋಹನ ಮಾಳವೀಯರಂತೆ ಮುಸ್ಲಿಮೇತರರನ್ನೂ ಸಮಾನವಾಗಿ ಕಾಣುವ, ಸಮನ್ವಯತೆಯನ್ನ ಬಲಪಡಿಸುವ ವ್ಯಕ್ತಿ ನೇಮಿಸಲ್ಪಡುತ್ತಾರೆಯೇ? ಕಾದು ನೋಡಬೇಕು. ಮೊನ್ನೆ ಮೊನ್ನೆ ಕಟ್ಟಿದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದು ಸಮುದಾಯದವರು ಕೆಂಪೇಗೌಡರ ಹೆಸರಿಡಿ ಅಂದರೆ ಇನ್ನೊಬ್ಬರು ಬಸವಣ್ಣನವರ ಹೆಸರು ಸೂಚಿಸಿದರು. ಮಗುದೊಬ್ಬರು ವಿಶ್ವೇಶ್ವರಯ್ಯನವರ ಹೆಸರು ಸೂಚಿಸಿದರು. ಕೊನೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಂತಲೇ ಹೆಸರು ಉಳಿದುಕೊಂಡಿದೆ. ಬೆಂಗಳೂರು ಎಲ್ಲ ಜಾತಿ ಧರ್ಮಗಳ ಜನರದ್ದು. ಹಾಗೆಯೇ ವಿವಿಗೆ ಶ್ರೀರಂಗಪಟ್ಟಣ ವಿವಿ ಎಂದು ಹೆಸರಿಸಿದರೆ ಸಾಕು. ಅದು ಎಲ್ಲ ಜಾತಿಗಳಿಗೆ, ಧರ್ಮಗಳಿಗೆ ಸಮಾನ ನ್ಯಾಯ ಒದಗಿಸಿದಂತಾಗುತ್ತದೆ. ವಿದ್ಯೆ ಹೆಸರಿನಲ್ಲಿ ರಾಜಕೀಯ, ಸಮಾಜ ಒಡೆಯುವಿಕೆ ಬೇಡ. ವಿವಿಯಲ್ಲಿ ಏನೇನು ಕಲಿಸಬೇಕು ಅನ್ನುವ ಚರ್ಚೆ ಆಗಲಿ. ಅದು ಬಿಟ್ಟು ಹೇಳಿಕೆ ಪ್ರತಿ ಹೇಳಿಕೆಗಳ ಧಾಳಿ ಸಲ್ಲ.