ಸ್ವಾಮೀಜಿ ವಿದೇಶ ಪ್ರಯಾಣಕ್ಕೆ ಪ್ರತಿ ಸಲ ಹೋಗುವಾಗಲೂ ಬೆಚ್ಚಿ ಬೀಳುವುದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು..!

ನಾನು ಅತ್ಯಂತ ಗೌರವಿಸುವ, ನಿಷ್ಕಲ್ಮಶ ವ್ಯಕ್ತಿತ್ವದ, ಅಧ್ಯಾತ್ಮವನ್ನ ಕತೆಯಾಗಿಸುವ, ಧರ್ಮಕ್ಕಿಂತ ಬದುಕನ್ನ ಬೋಧಿಸುವ, ಜೀವಿಸುವ ಸಜ್ಜನ ಸಂತ. ನಿರಾಡಂಬರತೆ ಅವರ ವ್ಯಕ್ತತ್ವದ ಮೂಲ ಗುಣ. ಅವರು ಆಚರಣೆಯನ್ನ ಎಂದೂ ಬೋಧಿಸುವುದಿಲ್ಲ. ನೊಂದ ಮನಕ್ಕೆ ಸಾಂತ್ವಾನವಾಗುವಂತೆ, ಬದುಕು ಕಟ್ಟಿಕೊಳ್ಳುವಂತೆ ಪ್ರೇರೇಪಿಸುವ ಮಾತುಗಳು. ನಮ್ಮ ನಮ್ಮ ಜೀವನದ ಮೂಲ ಉದ್ದೇಶಗಳನ್ನ ಒರೆಗೆ ಹಚ್ಚುವ, ನಮ್ಮತನವನ್ನ ಅರಿಯುವ ಪ್ರಯತ್ನದೆಡೆಗೆ ನಮ್ಮ ಮನಸ್ಸುಗಳನ್ನ ಪ್ರೇರೇಪಿಸುವ ಪ್ರವಚನಗಳು. ಅವರ ಮಾತುಗಳನ್ನ ಕೇಳಿ ಅದೆಷ್ಟು ಸಾವಿರ ಜನ ಪ್ರಭಾವಿತರಾಗಿದ್ದಾರೋ.

ಅವರು ಒಂದೊಂದು ಊರಲ್ಲಿ ಒಂದು ತಿಂಗಳು ಪ್ರವಚನ ನೀಡುತ್ತಾರೆ. ಅದೇ ಊರಿಗೆ ಮತ್ತೊಮ್ಮೆ ಬರೋದು ಹತ್ತೋ ಹದಿನೈದೋ ವರ್ಷವಾದಮೇಲೆ..! ದಾವಣಗೆರೆಗೆ ೨೦೦೩ರಲ್ಲಿ ಬಂದಿದ್ದ ಅವರು ಮತ್ತೆ ಬಂದದ್ದು ೨೦೧೨ಕ್ಕೆ..! ಭಕ್ತರು ತಮ್ಮ ತಮ್ಮ ಊರಿಗೆ ಬಂದು ಪ್ರವಚನ ಮಾಡಬೇಕೆಂದು ಪ್ರೀತಿಯಿಂದ ಒತ್ತಾಯಿಸಿ ದಿನಾಂಕಗಳನ್ನ ನಿಗದಿ ಮಾಡಿಕೊಂಡಿರುತ್ತಾರೆ. ವಿದೇಶಗಳಲ್ಲೂ ಅಪಾರ ಭಕ್ತರಿದ್ದಾರೆ. ವಿದೇಶ ಪ್ರಯಾಣಕ್ಕೆ ಪ್ರತಿ ಸಲ ಹೋಗುವಾಗಲೂ ಬೆಚ್ಚಿ ಬೀಳುವುದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು..! ಏಕೆಂದರೆ, ನಿಮ್ಮ ಜೇಬಿನಲ್ಲಿ ಏನಿದೆ ಅಂತಾ ಕೇಳಲಿಕ್ಕೆ ಅವರ ನಿಲುವಂಗಿಗೆ ಜೇಬಿಲ್ಲ. ದುಡ್ಡು ಮುಟ್ಟಲ್ಲ. ಅದರ ಅವಶ್ಯಕತೆಯೂ ಅವರಿಗಿಲ್ಲ. ಭಕ್ತರು ಎಲ್ಲವನ್ನ ನೋಡಿಕೊಳ್ಳುತ್ತಾರೆ. ಪ್ರತಿ ಸಲ ಪ್ರವಚನಕ್ಕೆ ಬರುವಾಗ ದಾರಿಯಲ್ಲಿರುವ ಭಕ್ತರಿಗೆ ವಿನಯ ಪೂರ್ವಕವಾಗಿಯೇ ನಮಸ್ಕರಿಸುತ್ತಾರೆ. ಮುಖದಲ್ಲಿ ಒಂದು ರೀತಿಯ ಸಂತೃಪ್ತ ನಗು. ಅವರ ಮುಖವನ್ನ ನೋಡಿದರೇನೇ ಜೀವನೋತ್ಸಾಹ ನೂರ್ಮಡಿಗೊಳ್ಳುತ್ತದೆ.

ಸಿದ್ದೇಶ್ವರ ಸ್ವಾಮೀಜಿಯವರು ಅಲ್ಲಮ ಪ್ರಭುವಿನ ಆರಾಧಕರು. ಸ್ವತಃ ಹಾಗೆಯೇ ಇದ್ದಾರೆ. ಅವರು ಅಲ್ಲಮನ ಕುರಿತಾಗಿ ಮಾತಾಡುವುದನ್ನ ಕೇಳಬೇಕು. ಅಲ್ಲಮನನ್ನ ಅವರು ವ್ಯಾಖ್ಯಾನಿಸುವುದು ಹೀಗೆ. ಅಲ್ಲಮ ಅಂದರೆ ಯಾವುದೇ ಗುಣವನ್ನ ಆರೋಪಿಸಿ ಅದು “ಅಲ್ಲ”. ಒಳ್ಳೆಯವ – ಅಲ್ಲ. ಕೆಟ್ಟವ – ಅಲ್ಲ. ಶ್ರೇಷ್ಟ – ಅಲ್ಲ. ಕೀಳು – ಅಲ್ಲ. ಯಾವುದನ್ನೇ ಹೇಳಲಿ – ಅದು ಅಲ್ಲ. ಏನೇ ಹೇಳಿ – ಅಲ್ಲ. ನಿರ್ಲಿಪ್ತತೆಯನ್ನ, ಬದುಕಿನ ಸುಲಭ ಸತ್ಯವನ್ನ ಸುಂದರವಾಗಿ ತಮ್ಮ ಮಾತುಗಳಲ್ಲಿ ಹಿಡಿದಿಡುತ್ತಾರೆ. ಅವರ ಒಂದು ಗಂಟೆಯ ಪ್ರವಚನ ಮನಸ್ಸಿಗೆ ಮುದ ನೀಡುತ್ತದೆ. ಜಾತಿ, ಧರ್ಮಗಳನ್ನ ಮೀರಿದ ಅನ್ವೇಷಣೆ. ಸತ್ಯದ ಅನ್ವೇಷಣೆ. ಎಲ್ಲೆಡೆಯೂ ಸ್ಥಬ್ಧತೆ. ನಿಶ್ಯಬ್ಧ. ಒಂದಿಷ್ಟು ಹಿರಿಯರು ಕೆಮ್ಮುವುದು, ಎಲೆಗಳ ಸದ್ದು, ಪಕ್ಷಿಗಳ ಕೂಗು ಅಷ್ಟೇ ಅವರ ಪ್ರವಚನ ಮಾಡಬೇಕಾದರೆ ಸದ್ದು ಅಂದರೆ.

ಬದುಕಿನಲ್ಲಿ ನೀವು ತುಂಬಾ ನೊಂದಿದ್ದರೆ, ಬದುಕಿನ ಮುಂದಿನ ರೂಪುರೇಷೆಗಳೇ ಮಸುಕಾಗಿದ್ದರೆ, ಒಮ್ಮೆ ಈ ಸಂತರ ಮಾತುಗಳಿಗೊಮ್ಮೆ ಕಿವಿಕೊಟ್ಟು ಕೇಳಿ. ನಿಮ್ಮ ಸುತ್ತಮುತ್ತಲಿನ ನಗರದಲ್ಲಿ ಅವರ ಪ್ರವಚನ ಏನಾದರೂ ನಡೆಯುವುದಿದ್ದರೆ ಖಂಡಿತ ಹೋಗಿ ಬನ್ನಿ. ಬದುಕು ಅರ್ಥವಾಗತೊಡಗುತ್ತದೆ.

1 thought on “ಸ್ವಾಮೀಜಿ ವಿದೇಶ ಪ್ರಯಾಣಕ್ಕೆ ಪ್ರತಿ ಸಲ ಹೋಗುವಾಗಲೂ ಬೆಚ್ಚಿ ಬೀಳುವುದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು..!

  1. ಮಾನ್ಯರೇ, ಸಾಮಾನ್ಯವಾಗಿ ಮನೆಗಳಲ್ಲಿ ಶಾಲೆಗಳಲ್ಲಿ ಧರ್ಮಗಳ ಬಗ್ಗೆ ಯಾವುದೇ ಚರ್ಚೆ,ತಿಳುವಳಿಕೆ ಮಾಹಿತಿ ಇರುವುದಿಲ್ಲ. ಇಂತಹ ಮಹಾನುಭಾವರ ಪ್ರವಚನಗಳನ್ನು ಈ ವೇಗದ ಯುಗದಲ್ಲಿ ಮನುಷ್ಯರಾದವರು ಕೇಳಿದರೆ, ಮನಸ್ಸಿಗೆ ನೆಮ್ಮದಿಸಿಗುತ್ತದೆ. ಜಂಜಾಟದ ಈ ಜೀವಕ್ಕೆ ಸ್ವಲ್ಪ ಸಾಂತ್ವನ ಸಿಗುತ್ತದೆ. ಕೆಲವು ಸಾರಿ ಅದು ಲಭ್ಯವಾಗುವುದು ಕಷ್ಟವೇ? ಈಗ ಬಜನೆ, ದೇವರ ನಾಮ, ಪ್ರವಚನ ಕಾಣುವುದು ಅಪರೂಪ. ಇದಕ್ಕೆ ಧಾರ್ಮಿಕ ಸಂಘ ಸಂಸ್ಠೆಗಳು ಇತ್ತ ಗಮನಹರಿಸಿ, ನಮ್ಮ ಮುಂದಿನ ಪೀಳಿಗೆಯಾದರು ನಮ್ಮ ಸಂಸ್ಕೃತಿಯನ್ನು ಮರೆಯದಂತೆ, ಧಾರ್ಮಿಕತೆಯನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಅನುಕೂಲಮಾಡಿಕೊಡುವುದು ಸೂಕ್ತ. ವಂದನೆಗಳೊಡನೆ.

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s