ಇನ್ನು 10 ತಿಂಗಳಲ್ಲಿ ಭಾರತ ಚೀನಾ ನಡುವೆ ಸಂಭವನೀಯ ಯುದ್ಧ?

ಚೀನಾದ ತಗಾದೆ ಶುರುವಾದಮೇಲೆ ಭಾರತ ೬೪ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸೇನೆಗೆ ಹೊಸ ಆಯಾಮ ನೀಡುವ ಯೋಜನೆಗೆ ಅಸ್ತು ಎಂದಿದೆ. ಸಾವಿರಾರು ಸೇನೆಯ ತುಕಡಿಗಳನ್ನ ಹೊಂದಿದ ಸ್ಟ್ರೈಕಿಂಗ್ ಕಾರ್ಪ್ ನಿಯೋಜಿಸಲು ಉದ್ದೇಶಿಸಿದೆ. ಹಿಂದಿನ ವಾರದ ದಿ ವೀಕ್ ಪ್ರಕಟಿಸಿರುವ ಸೇನಾ ವಲಯದ ಅಭಿಮತದ ಪ್ರಕಾರ ಚೀನಾ ನಮ್ಮ ಮೇಲೆ ಎರಗಿ ಬರುವುದು ಅಷ್ಟೇನೂ ಸುಲಭದ ಕೆಲಸವೇನಲ್ಲ. ಚೀನೀಯರು ಆಕ್ರಮಣ ಮಾಡಿದರೆ, ಭಾರತವು ಚೀನಾದ ದುರ್ಬಲ ವಲಯಗಳ ಮೇಲೆ ಆಕ್ರಮಣ ಮಾಡಲಿದೆ. ಟಿಬೆಟ್ ಮೂಲಕ ಸಾವಿರಾರು ಕಿಲೋಮೀಟರ್ ಉದ್ದದ ರೈಲು ಮಾರ್ಗ ನಿರ್ಮಿಸಿ ಸೇನೆಯನ್ನ, ಜನರನ್ನ ವಾಯುಪುತ್ರನ ವೇಗದಲ್ಲಿ ಸಾಗಿಸುತ್ತೇವೆ ಎಂದು ಬೀಗುತ್ತಿರುವ ಚೀನಾ ಅದೇ ಕಾರಣಕ್ಕಾಗಿ ಕಳವಳಗೊಂಡಿದೆ. ಟಿಬೆಟ್‌ನಲ್ಲಿರುವ ರೈಲು ಮಾರ್ಗ ಹಲವಾರು ಸೇತುವೆಗಳನ್ನ ಒಳಗೊಂಡಿದೆ. ಜೊತೆಗೆ ಅಲ್ಲಿ ಬೆಂಗಾಡು. ಎಷ್ಟೇ ಎತ್ತರದಿಂದ ನೋಡಿದರೂ ನೆಲ ಕಾಣುತ್ತದೆ. ನಾಲ್ಕು ಸೇತುವೆಗಳನ್ನ ಒಡೆದು ಹಾಕಿದರೆ ಚೀನೀಯರು ಸೇನೆಯನ್ನ ಜಮಾವಣೆ ಮಾಡಲಿಕ್ಕೆ ರೈಲನ್ನ ಬಳಸಲಿಕ್ಕೆ ಸಾಧ್ಯವೇ ಇಲ್ಲ. ಅವನ್ನ ಮರು ನಿರ್ಮಿಸಿ ರೈಲು ಚಲಿಸುವ ಹೊತ್ತಿಗೆ ವಾರಗಳೇ ಬೇಕಾಗುತ್ತವೆ. ಜೊತೆಗೆ, ಟಿಬೆಟಿನಲ್ಲಿ ಹರಿಯುವ ನದಿಗಳಿಗೆ ರಾತ್ರೋ ರಾತ್ರಿ ಸೇತುವೆಗಳನ್ನ ಕಟ್ಟಿಕೊಡುವ ಕಠಿಣ ಪರಿಶ್ರಮದ, ಚಾಣಾಕ್ಷ, ಸಮರ್ಥ ಎಂಜಿನಿಯರುಗಳ ಬಳಗವಿದೆ ಭಾರತಕ್ಕೆ. ನಮ್ಮ ಸೇನೆಯ ಎಂಜಿನಿಯರುಗಳ ಈ ಎಲ್ಲ ವಿಶೇಷಣಗಳೂ ಮೊನ್ನೆ ಮೊನ್ನೆ ಸಂಭವಿಸಿದ ಉತ್ತರಾಖಂಡದ ಪ್ರಾಕೃತಿಕ ಅವಗಢದ ಸಮಯದಲ್ಲಿ ಸಾಬೀತಾಗಿದೆ.

Sino India War in another 10 months - report by headlinestoday

ಇವತ್ತಿನ ಸುದ್ದಿ – ಇನ್ನು ಹತ್ತು ತಿಂಗಳಲ್ಲಿ ಭಾರತ ಚೀನಾ ಯುದ್ಧ ಸಂಭವ – ಹೆಡ್‍ಲೈನ್ಸ್ ಟುಡೇ ವ್ಯಾಖ್ಯಾನ. ಜೊತೆಗೆ ಮಿಲಿಟರಿ ಜರ್ನಲ್‌ಗಳ ಟಿಪ್ಪಣಿಗಳನ್ನ ಆಧಾರವಾಗಿ ಸೇರಿಸಿದೆ. ಯುದ್ಧವೇನಾದರೂ ಸಂಭವಿಸಿದರೆ, ಅದು ಸೇನೆಯ ಮೂರು ವಿಭಾಗಗಳ ಮುಖಾಮುಖಿ ಅಂತಾ ಅಂದುಕೊಂಡರೆ ತಪ್ಪು. ಇನ್ನೊಂದು ಮಜಲಿದೆ. ವಿದ್ಯುತ್ಕಾಂತೀಯ ವಲಯದ ಯುದ್ಧ. electromagnetic war. ತನ್ನ ಶತೃ ದೇಶದ ಸಂವಹನವನ್ನೇ ಬಂದ್ ಮಾಡುವುದು. ಅವರು ಬಳಸುವ ಫ್ರೀಕ್ವೆನ್ಸಿ ಬ್ಯಾಂಡ್‌ಗಳಲ್ಲಿ ಅನಪೇಕ್ಷಿತವಾದ ದೋಷಗಳನ್ನ ಸೇರಿಸುವುದು ಮತ್ತು ಮಾಹಿತಿ ಕದಿಯುವುದು. ಸರಳವಾದ ನಿದರ್ಶನ ಕೊಡುವುದಾದರೆ, ನೀವು ನಿಮ್ಮ ಪ್ರೀತಿಪಾತ್ರರ ಮನೆಗೆ ಒಂದು ಹೂ ಗುಚ್ಛವನ್ನ ಉಡುಗೊರೆಯಾಗಿ ಕಳಿಸಿರುತ್ತೀರಿ. ಆದರೆ, ಅದು ಅವರನ್ನ ಮುಟ್ಟುವ ಹೊತ್ತಿಗೆ ಕಸದ ಬುಟ್ಟಿಯಾಗಿ ಪರಿವರ್ತಿತವಾಗಿದ್ದರೆ? ಇದನ್ನೇ ಎಲೆಕ್ಟ್ರಾನಿಕ್ ಭಾಷೆಯಲ್ಲಿ noise ಅನ್ನುತ್ತೇವೆ. ಎಂಥಾ ವಿಪರ್ಯಾಸ ಅಂದ್ರೆ ನಾನು ಇದನ್ನ ಫೇಸ್ ಬುಕ್ಕಿನ ಭಿತ್ತಿಯಮೇಲೆ ಪ್ರಕಟಿಸಲು ಬಳಸುತ್ತಿರುವ ಎಂಟಿಎಸ್ ಕಂಪನಿಯ ಮೋಡೆಮ್ ಹುವೇಯ್ ಕಂಪನಿ ಉತ್ಪನ್ನ..! ನಾವು ಟೆಲಿಕಾಂ ನೆಟ್‍ವರ್ಕನ್ನ ಮಾತ್ರ ಆರಿಸಬಹುದು. ಅದರ ಹಾರ್ಡ್‌ವೇರ್ ಉತ್ಪಾದಕನನ್ನ ಆಯ್ಕೆ ಮಾಡಲಿಕ್ಕೆ ಸಾಧ್ಯವಿಲ್ಲವಲ್ಲ. ನಮ್ಮ ಕಾಶ್ಮೀರ, ಸಿಕ್ಕಿಂ ನಮಗೆ ಒಂದು ಥರಾ ಕಂಡರೆ ಚೀನೀಯರಿಗೆ ಒಂದು ಥರಾ ಗೂಗಲ್ ಭೂಪಟದಲ್ಲಿ ಕಾಣಿಸುತ್ತವೆ. ಗೂಗಲ್‌ನಂಥ ಕಂಪನಿಯನ್ನೇ ಚೀನಾ ಸದೆಬಡೆದು ತನ್ನ ಮಾತು ಕೇಳುವಂತೆ ಮಾಡುತ್ತದೆ. ಇನ್ನು ಚೀನೀ ಕಂಪನಿಯನ್ನ ಬಿಟ್ಟೀತಾ ಚೀನಾ? ಹಾರ್ಡ್‌ವೇರ್ ಕೋಡಿಂಗ್ ಡೀಕೋಡಿಂಗ್, ವಿನ್ಯಾಸ, ದೋಷಗಳು, ಎಲ್ಲವನ್ನ ಕಸಿದುಕೊಂಡರೆ ಏನು ಗತಿ?

ಇದಕ್ಕೆ ಇನ್ನೂ ಒಂದು ಮಗ್ಗುಲಿದೆ. ಎಂಟಿಎಸ್ ರಿಲಾಯನ್ಸ್ ಕಂಪನಿ ಸೇರಿದಂತೆ ಭಾರತದಲ್ಲಿರುವ ಹಲವು ಕಂಪನಿಗಳ ಡೇಟಾಕಾರ್ಡ್/ಮೋಡೆಮ್‌ಗಳು ಹುವೇಯ್ ಕಂಪನಿಯವು. ಆಗಸ್ಟ್ ೮ ರಂದು ಡಿಜಿಟಲ್ ಟ್ರೆಂಡ್ಸ್ ಪ್ರಸ್ತುತಪಡಿಸಿರುವ ಲೇಖನದ ಲಿಂಕನ್ನೂ ಕೂಡಾ ಕೊಟ್ಟಿದ್ದೇನೆ ಓದಿ. ಅಮೇರಿಕಾದ ಸಿ.ಐ.ಎ ಮತ್ತು ಎನ್.ಎಸ್.ಎ.ನ ಹಿಂದಿನ ಮುಖ್ಯಸ್ಥ ಮೈಕೆಲ್ ಹೆಡೆನ್ ಚೀನೀ ಟೆಲಿಕಾಂ ಕಂಪನಿಗಳು ಅಮೇರಿಕಾದ ಭದ್ರತೆಗೆ ಆತಂಕಕಾರಿ ಅಂದಿದ್ದಾರೆ. ಅಮೇರಿಕಾವೇ ಚೀನಾ ಕಂಡು ಬೆಚ್ಚಿ ಬೀಳುತ್ತಿದೆ. ಇನ್ನು ಬಗಲಲ್ಲಿರುವ ಭಾರತ ಬೆಚ್ಚಗೆ ಕುಳಿತಿರಲು ಸಾಧ್ಯವೇ? ಅಲ್ಲಿಗೆ, ಭಾರತದ ಅಷ್ಟು ಕೋಟಿ ಚೀನಾ ನಿರ್ಮಿತ ಡೇಟಾ ಕಾರ್ಡುಗಳು, ಮೊಬೈಲುಗಳ ಕತೆ ಏನು? ಉತ್ತರವಿಲ್ಲ.

ಚೀನಾ ಜೊತೆಗಿನ ಸಂಭವನೀಯ ಯುದ್ಧಕ್ಕೆ ಇನ್ನು ಹತ್ತು ತಿಂಗಳಿದೆ. ಯಾವ ಪ್ರಮಾಣದಲ್ಲಿ ಎಗರಿ ಬೀಳಲಿದೆ ಗೊತ್ತಿಲ್ಲ. ಇತ್ತೀಚೆಗೆ ಚೀನಾಕ್ಕೆ ಹೊರಟುನಿಂತ ರಕ್ಷಣಾ ಸಚಿವ ಎ.ಕೆ. ಆಂಟನಿ ಚೀನಾ ತಲುಪುವ ಮೊದಲೇ ಅಲ್ಲಿಯ ಜನರಲ್ ಭಾರತಕ್ಕೆ ಎಚ್ಚರಿಕೆ ಕೊಡುತ್ತಾನೆ. ಅದಕ್ಕೆ ಒಂದೇ ಒಂದು ಪ್ರತಿಕ್ರಿಯೆಯನ್ನೂ ಯುಪಿಎ ನೀಡುವುದಿಲ್ಲ..! ಇನ್ನೊಂದು ವರ್ಷವಾದಮೇಲೆ ಮೋದಿಯವರು ಜನಬೆಂಬಲದಿಂದ ಪ್ರಧಾನಿಯಾಗಿ ಆರಿಸಿ ಬಂದರು ಎಂದೇ ಇಟ್ಟುಕೊಳ್ಳೋಣ. ಅಂಬಾನಿಗಳು ಮೋದಿಯವರನ್ನ ಎಷ್ಟೊಂದು ಹೊಗಳುತ್ತಾರೆ ಅಂದ್ರೆ, ಅದಕ್ಕೆ ಹಿಂದೆ ನೂರು ಪಟ್ಟು ಪ್ರತಿಫಲ ನಿರೀಕ್ಷಿಸದೇ ಇರಲಿಕ್ಕೆ ಸಾಧ್ಯವೇ ಇಲ್ಲ. ಅಂಬಾನಿಗಳು ವ್ಯಾಪಾರೀ ಹಿತಾಸಕ್ತಿಯಿಂದ ದೇಶದ ಹಿತಾಸಕ್ತಿಯನ್ನ ಬಲಿಕೊಡುವುದಿಲ್ಲವೆಂಬುದಕ್ಕೆ ಏನು ಖಾತರಿ?

ಕೊನೆಗೆ ಒಂದು ಮಾತು. ಈಗ ಅನುಮತಿಸಿರುವ ೬೪ ಸಾವಿರ ಕೋಟಿಯ ಯೋಜನೆಗೂ ಭ್ರಷ್ಟಾಚಾರದ, ಕಮೀಷನ್ನಿನ ವಾಸನೆ ಹೊಡೆಯುತ್ತದೆ. ಇಷ್ಟು ದಿವಸ ಇಲ್ಲದ್ದು ಒಂದೇ ಸಲಕ್ಕೆ ದೇಶ ಪ್ರೇಮ ಅತಿಯಾಗಿಬಿಟ್ಟಿದೆ. ಅರವತ್ನಾಕು ಸಾವಿರ ಕೋಟಿ ಅಂದ್ರೆ ಸುಮ್ನೇನಾ? ಸಧ್ಯಕ್ಕೀಗ ನಮ್ಮ ದೇಶದ ಎಷ್ಟೊ ಪ್ರತಿಭಾವಂತ ಎಂಜಿನಿಯರುಗಳಿಗೆ ಕೆಲಸವಿಲ್ಲ. ಕಾರಣ ಆರ್ಥಿಕ ಹಿಂಜರಿತ. ಬೇರೆ ದೇಶಗಳಿಂದ ಯುದ್ಧೋಪಕರಣಗಳನ್ನ ಆಮದು ಮಾಡಿಕೊಳ್ಳುವುದರಿಂದ ನಮಗೆ ಎರಡು ರೀತಿಯಿಂದ ಹೊಡೆತ.
ಮೊದಲನೆಯದಾಗಿ ನಮಗೆ ಟೆಕ್ನಾಲಜಿ ಸಿಗುವುದಿಲ್ಲ. ನಮ್ಮವರು ಮೇಂಟೇನೆನ್ಸ್ ಎಂಜಿನಿಯರುಗಳಾಗುತ್ತಾರೆಯೇ ಹೊರತು ಡಿಸೈನ್ ಎಂಜಿನಿಯರುಗಳಾಗುವುದಿಲ್ಲ. ಹಾಗಾಗಿ, ತಂತ್ರಜ್ಞಾನದಲ್ಲಿ ನಾವು ಹಿಂದೆ ಉಳಿಯುತ್ತೇವೆ.
ಎರಡನೆಯದಾಗಿ. ನಾವು ಸ್ವಂತ ಸಾಮರ್ಥ್ಯದ ಮೇಲೆ ಯುದ್ಧೋಪಕರಣಗಳನ್ನ ನಮಗಾಗಿ ತಯಾರಿಸುವುದನ್ನ ಕಲಿಯುವುದೇ ಇಲ್ಲ. ಹೊರ ದೇಶಗಳಿಗೆ ಮಾರಲಿಕ್ಕೂ ಸಾಧ್ಯವಿಲ್ಲ. ಲಾಭವೂ ಆಗುವುದಿಲ್ಲ.

ಸರ್ಕಾರಗಳು ದೇಶೀಯಾವಾಗಿ ಯುದ್ಧೋಪಕರಣಗಳನ್ನ ತಯಾರಿಸುವುದಕ್ಕೆ ಆದ್ಯತೆ ನೀಡಲಿ. ಇದು ಅತಿ ನಿಧಾನವಾದ ಪ್ರಕ್ರಿಯೆ. ಒಂದೇ ದಿವಸದಲ್ಲಿ ತಂತ್ರಜ್ಞಾನಗಳನ್ನ ಕಲಿಯಲಿಕ್ಕೆ ಸಾಧ್ಯವಿಲ್ಲ. ಇವತ್ತು ಶುರು ಮಾಡಿದರೆ, ಇನ್ನು ಹತ್ತು ವರ್ಷಗಳಲ್ಲಿ ಒಂದು ಹಂತಕ್ಕೆ ಬರುತ್ತದೆ. ಜೊತೆಗೆ, ದಂಡಿಯಾಗಿ ಎಂಜಿನಿಯರಿಂಗ್ ಕಾಲೇಜುಗಳನ್ನ ಕಟ್ಟಲಿಕ್ಕೆ ಅನುಮತಿ ಕೊಟ್ಟು, ಆ ಹುಡುಗರು ಮೊದಲ ಸೆಮಿಸ್ಟರಿನಲ್ಲೇ ಫೇಲಾಗಬಾರದು, ಕಾಲೇಜು ಫೀಸು ಬಿಟ್ಟುಹೋಗುತ್ತದೆ ಅಂತಾ ಪ್ರತಿ ಪ್ರಶ್ನೆಪತ್ರಿಕೆಗೆ ಹದಿನಾರು ಮಾರ್ಕ್ಸು ಎಲ್ಲರಿಗೂ ಏಕರೀತಿಯ multiple choice questions ಕೊಟ್ಟು ಬೇರೆಯವರಿಂದ ಕಾಪಿ ಹೊಡೆದು ಬರೆಯಲಿಕ್ಕೆ ಅನುವು ಮಾಡಿಕೊಟ್ಟು, ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ನತ್ತಲೇ ಸುಳಿಯದಂತೆ ಶುಲ್ಕ ಏರಿಸಿ, outdated syllabus ಇಟ್ಟರೆ ಇನ್ಯಾವ ಸೀಮೆ ಎಂಜಿನಿಯರುಗಳು ತಯಾರಾದಾರು?

http://www.digitaltrends.com/mobile/huawei-were-not-a-security-threat-were-just-a-pawn/

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s