ಕಲಾತ್ಮಕ ಮತ್ತು ಸಾಹಿತಿಕ ಪ್ರಕಾರಗಳಲ್ಲಿ ತಂತ್ರಜ್ಞಾನ – ಮುಂದೊಂದು ದಿನ ಇತಿಹಾಸದ ಪುಟ ಸೇರಿ ನಗು ತರಿಸಬಹುದೇ?
ಒಂದಿಷ್ಟು ದಶಕಗಳ ಹಿಂದಿನ ಸಿನಿಮಾಗಳತ್ತ ಹೋಗೋಣ. ವಿಲನ್ನು ಬಂದವನೇ ಹೀರೋನ ಅಥವಾ ಹೀರೋಯಿನ್ನಿನ ಮನೆಗೆ ಬರುತ್ತಾನೆ. ಆಗ ಹೀರೋ/ಹೀರೋಯಿನ್ನು ಪೊಲೀಸರಿಗೆ ಫೋನು ಮಾಡಲು ಲ್ಯಾಂಡ್ ಲೈನ್ ಫೋನಿನ (ಫೋನಿನ ವಿವಿಧ ಪ್ರಕಾರಗಳು ಬಂದಾದಮೇಲೆ ಫೋನಿನ ಹಿಂದಿನ ಈ ವಿಶೇಷಣ ಬಂತು) ರಿಸೀವರ್ ಕೈಗೆತ್ತಿಕೊಳ್ಳುತ್ತಾನೆ/ಳೆ. ವಿಲನ್ನು ಟೆಲಿಫೋನಿನ ವಯರ್ ಕತ್ತರಿಸುತ್ತಾನೆ. ಆ ವಯರ್ ನಿಂದಲೇ ಕುತ್ತಿಗೆಗೆ ಬಿಗಿಯುತ್ತಾನೆ. ಈಗಿನ ವೈರ್ ಲೆಸ್ ಯುಗದಲ್ಲಿ ಟೆಲಿಫೋನಿಗೆ ವಯರ್ಗಳೂ ಇಲ್ಲ. ಕತ್ತರಿಸುವಂತೆಯೂ ಇಲ್ಲ. ಇನ್ನು ಮುಂದಿನ ಸಿನಿಮಾಗಳಲ್ಲಿ ಮೊಬೈಲ್ ಜಾಮರ್ ತಂದು ವಿಲನ್ ಹೀರೋಯಿನ್ನು, ಹೀರೋಗಳನ್ನ ಕೊಲ್ಲಬೇಕು..!
ಒಂದು ಅಣ್ಣಾವ್ರ ಹಳೇ ಸಿನಿಮಾದಲ್ಲಿ(ಆಪರೇಷನ್ ಡೈಮಂಡ್ ರಾಕೆಟ್) ರಿಮೂಟ್ ಕಂಟ್ರೋಲ್ ಅಂತಾ ಡಿಜಿಟಲ್ ಡೈರಿ ಬಳಸಲಾಗಿದೆ. ಫೋನುಗಳು ಬರುವ ಮುಂಚೆ, ಡಿಜಿಟಲ್ ಡೈರಿಗಳು ಬಳಕೆಯಲ್ಲಿದ್ದವು. ನೂರಾರು ಜನರ ಹೆಸರು, ಈಮೇಲ್ ಐಡಿ, ವಿಳಾಸಗಳನ್ನ, ಹುಟ್ಟು ಹಬ್ಬಗಳನ್ನ ಶೇಖರಿಸಿ ಇಡಬಹುದಾಗಿತ್ತು. ಈಗ ಅದು ಔಟ್ ಡೇಟೆಡ್.
ಯಾವುದೋ ಹಗರಣದ ಕ್ಯಾಸೆಟ್ ನನ್ನ ಬಳಿ ಇದೆ ಅಂತಾ ಹೆದರಿಸುತ್ತಿದ್ದವರು ಅದರ “ಮಾಸ್ಟರ್ ಕಾಪಿ”ಯನ್ನ ಕೊಡಲಿಕ್ಕೆ ಲಕ್ಷಾಂತರ(ಆಗ ಕೋಟಿಗಳಿಗೆ ಬೆಲೆ ಇತ್ತು..!) ರೂಪಾಯಿಗಳ ಬೇಡಿಕೆ ಇಡುತ್ತಿದ್ದರು. ಈ ಡಿಜಿಟಲ್ ಯುಗದಲ್ಲಿ ಮಾಸ್ಟರ್ ಕಾಪಿ, ಕ್ಯಾಮರಾ ಕಾಪಿ ಅನ್ನೋದೇ ಇಲ್ಲ. ಒಂದು ಸಿನೆಮಾ ಒಂದು ಪೆನ್ ಡ್ರೈವ್ ನಲ್ಲಿದೆ. ಅದನ್ನ ಕಾಪಿ ಮಾಡಿಕೊಂಡರೆ, ಅದೂ ಕೂಡಾ ಮಾಸ್ಟರ್ ಕಾಪಿಯೇ. ಹಾಗಾದರೆ, ಇಂಥಾ ಕಥೆಗಳು ಆ ಕಾಲದ ತಂತ್ರಜ್ಞಾನವನ್ನ ಪ್ರತಿಬಿಂಬಿಸಲು ಪ್ರಯತ್ನಿಸುತ್ತವೆಯೇ ಹೊರತು ಕಥೆಯ ಎಳೆಯನ್ನಲ್ಲ. ಏಕೆಂದರೆ ಕಥೆಯ ಎಳೆಯೂ ತಂತ್ರಜ್ಞಾನ ಅವಲಂಬಿತವಾಗಿರುತ್ತದೆ.
“ಆತ ತನ್ನ ಆಂಡ್ರಾಯ್ಡ್ ಮೊಬೈಲ್ ತೆಗೆದು ತನ್ನ ಗರ್ಲ್ ಫ್ರೆಂಡ್ ಗೆ ಮೆಸೇಜು ಮಾಡಿದ” ಎನ್ನುವ ಸಾಲಿದೆ ಅಂದುಕೊಳ್ಳಿ ಕಥೆಯಲ್ಲಿ. ಮುಂದೆ ಒಂದು ದಿನ ಆಂಡ್ರಾಯ್ಡ್ ಅನ್ನುವ ಕಾರ್ಯಾಚರಣೆ ವ್ಯವಸ್ಥೆಯೇ ಇಲ್ಲವಾಗಬಹುದು. ಅದನ್ನ ಕಥೆ ಓದುವ ಜನ ಮರೆತಿರಲೂಬಹುದು. ಆಗ, ಗೂಗಲ್ ತೆಗೆದು ಆಂಡ್ರಾಯ್ಡ್ ಎಂದರೇನು ಅಂತಾ ತಿಳಿಯುವ ಸ್ಥಿತಿ ಬರಬಹುದು. ಒಂದು ಉದಾಹರಣೆ ಕೊಡ್ತೀನಿ. ಈಗಿನ ಎಷ್ಟು ಜನ ಸಾಫ್ಟ್ವೇರಿಗರಿಗೆ ಪ್ಯಾಸ್ಕಲ್ ಕೋಬಾಲ್ ಭಾಷೆಗಳು ತಿಳಿದಿವೆ? ಅದರ ಸಿಂಟ್ಯಾಕ್ಸ್ ಗಳು ನೆನಪಿವೆ? ಅವೆಲ್ಲವೂ ಸಧ್ಯಕ್ಕೆ ಇತಿಹಾಸದ ಪುಟ ಸೇರಿದವುಗಳಾಗಿವೆ. ಮೊನ್ನೆ ಮೊನ್ನೆ ಮುಕ್ತಾಯಗೊಂಡ ಟೆಲಿಗ್ರಾಂ ಕತೆಯೂ ಅದೇ. ಈಗಿನ ಎಷ್ಟು ಮಕ್ಕಳಿಗೆ ಟೆಲಿಗ್ರಾಂ ಗೊತ್ತು ಹೇಳಿ? ಅಂದರೆ, ಇವತ್ತಿನ ಮಟ್ಟಿಗೆ ಸಹಜ ಅನುಭವಗ್ರಹ್ಯವಾದ ಮೂರ್ತ ಸ್ವರೂಪಗಳಿಂದ ಅಮುರ್ತಗಳನ್ನ ಕಟ್ಟಿಕೊಡಲಿಕ್ಕೆ ಪ್ರಯತ್ನಿಸುವವರು ಆ ಅನುಭವಗ್ರಹ್ಯ ಸಾಧನಗಳು ಒಂದು ಮಟ್ಟಿಗೆ ಶಾಶ್ವತವೇ ಎಂದೂ ಪರಿಗಣಿಸುವುದು ಅವಶ್ಯ ಎಂಬುದು ನನ್ನ ಭಾವನೆ. ಇಲ್ಲವಾದರೆ, ಅಮೂರ್ತಗಳು ಅಮೂರ್ತಗಳಾಗಿಯೇ ಉಳಿಯುವ ಸಂಭವವೇ ಹೆಚ್ಚು.
ಕತೆಗಾರರು ಬಹುಮುಖ್ಯವಾಗಿ ನೆನಪಿಡಬೇಕಾದ ಅಂಶ ಇದು. ಎಷ್ಟರ ಮಟ್ಟಿಗೆ ತಂತ್ರಜ್ಞಾನದ ವಿವರಣೆ ಮತ್ತು ಅವಲಂಬನೆ ತಮ್ಮ ಕಥೆಯಲ್ಲಿದೆ ಎನ್ನುವುದನ್ನ ಸ್ವವಿಮರ್ಶೆಗೊಳಪಡಿಸಬೇಕು ಮತ್ತು ಮುಂದಿನ ಹತ್ತಿಪ್ಪತ್ತು ಅಥವಾ ಐವತ್ತು ವರ್ಷಗಳ ನಂತರದಲ್ಲಿಯೂ ಈ ಕಥೆ obsolete ಆಗಬಾರದೆಂದರೆ ಎಷ್ಟು ತಂತ್ರಜ್ಞಾನ ಬೇಕೋ ಅಷ್ಟನ್ನೇ ಬಳಸಬೇಕು. ಏಕೆಂದರೆ, ತಂತ್ರಜ್ಞಾನ ಬದಲಾಗುತ್ತಿರುತ್ತದೆ. ಆದರೆ, ತಂತ್ರಜ್ಞಾನ ಬದಲಾದಂತೆ ಕಥೆಯೂ ಬದಲಾಗುವುದಿಲ್ಲವಲ್ಲ..!