ಯಾವ ಮೋಹನ ಮುರಳಿ ಕರೆಯಿತೋ …

೨೭ ಮೇ ೨೦೦೫, ಭಾನು.

ಯಾವ ಮೋಹನ ಮುರಳಿ ಕರೆಯಿತೋ …

ಬದುಕಿನ ಭಾವದಲಿ ಬಣ್ಣದ ಛಾಯೆ.

ಸತ್ತ ಭಾವನೆಗಳಿಗೆ ಮರು ಹುಟ್ಟು.

ಹೀಗೇಕೆ..?

ಕೇವಲ ಮುಖದ ಮೇಲೆ

ಪ್ರಶ್ನಾರ್ಥಕ ಚಿಹ್ನೆ, ನಿರರ್ಥಕ ಚಿಹ್ನೆ.

 

ಬದುಕು ಕಲಿಸುವ ಪಾಠಗಳ ಕಲಿಯದೇ ಹೋದೆನಾ..?

ಎಲ್ಲರಿಗಿಂತಲೂ ಹಿಂದುಳಿದೆನಾ..?

ಹೀಗೇಕೆ ನಾ ಹೀಗೇಕೆ..?

 

ಆಶಾವಾದವೇಕೆ ನಿರಾಶಾವಾದವಾಯಿತು..?

ಬದುಕಿನಲ್ಲಿ ಕಪ್ಪು-ಬಿಳುಪುಗಳೇ ಬಣ್ಣಗಳಾದವಾ..?

ಬಣ್ಣಗಳೇ ಬಣ್ಣ ಕಳೆದುಕೊಂಡವಾ…?

ಇಲ್ಲಾ.., ಬದುಕಿನಲ್ಲಿ ನಾ ಬಣ್ಣ ಕಳೆದುಕೊಂಡೆನಾ..?

 

ಹೃದಯ ಸಮುದ್ರ ಕಲಕಿದ ತಾರುಣ್ಯವೆಲ್ಲಿ ಏನಾಯಿತು..?

ಉತ್ಸಾಹದ ಸುನಾಮಿ ಅಲೆ ಶಾಂತವಾಗಿದೆಯೇಕೆ..?

ಗರಿಗೆದರಿ ಚಿಮ್ಮಬೇಕಿದ್ದ ಸಮುದ್ರದ ಅಲೆಗಳಾದರೂ ಎಲ್ಲಿ..?

ಸಮುದ್ರವೇಕೆ ಸರೋವರವಾಯಿತು? ಮಾನಸ ಸರೋವರವಾಯಿತು..?

ಗುರಿಗಳೆಲ್ಲ ಗರಿ ಬಿಚ್ಚಿ ಹಾರುವ ಕಾಲಕ್ಕೆ ಕಾಲು ಕಳೆದುಕೊಂಡ ಹಕ್ಕಿಯಾದೆನಾ..?

 

ಜಗತ್ತಿಗೆ ನನ್ನ ಕಾಣ್ಕೆ ಬೇಕು.

ಜಗತ್ತಿಗೆ ನಾ ಬೇಕಾದವ.

ಜಗತ್ತಿಗೆ ನಾ ಬೆಳೆಯಬೇಕೆಂಬ ಹಂಬಲವಿದೆ.

ನನ್ನನ್ನು ಮುಗಿಲೆತ್ತರಕ್ಕೇರಿಸುವ ಬಲವಿದೆ, ಒಲವಿದೆ.

ಜಗತ್ತಿನಿಂದ ನನಗೆ ಬುಲಾವಿದೆ.

 

ಅಡಗಿ ಹೋದ, ಉಡುಗಿ ಹೋದ ಉತ್ಸಾಹವ ಹುಡುಕಿ ತರುವೆ.

ಮತ್ತೊಂದು ಹೊಸ ಸೆಲೆಯಲ್ಲಿ, ಹೊಸ ಹುರುಪಿನೊಂದಿಗೆ ಬರುವೆ.

ಅರ್ಥ ಕಳೆದುಕೊಂಡ ಬಾಳಿಗೆ ‘ಅರ್ಥ’ವೂ ಬೇಕು.

ಬೇಕು-ಬೇಕುಗಳ ಮಧ್ಯೆ ಬೇಡವೇಕೆ ಸೇರಿಕೊಂಡಿತು..?

ಬೇಡ-ಬೇಡಗಳೆಲ್ಲ ಬಾಡುವವರೆಗೆ ಹೋರಾಡುವೆ.

ಬದುಕಿನ ಸರ್ವ ಸ್ವತಂತ್ರ ಭಾವನೆಗಳಿಗೆ ದನಿಯಾಗುವೆ.

ಕಿತ್ತುಹೋದ ಕತ್ತನ್ನು ಕೊರಳಿಗೆ ಸೇರಿಸುವೆ, ಜೀವ ತುಂಬುವೆ.

 

ನಿರಾಶಾವಾದವೇಕೆ ಮನೆಮಾಡಿದೆ ಮನದ ಮನೆಯಲ್ಲಿ..?

ಸಶಕ್ತನಾಗುವೆ ಹೊಡೆದೋಡಿಸಲು, ಬಡಿದೋಡಿಸಲು.

ಬಡಿಗೋಲಾಗುವೆ ನಾ ಬದುಕು ಡೋಲಾಯಮಾನವಾಗುವ ಮುನ್ನ.

ನಿನ್ನೆಗಳ ನಿನ್ನೆಗಳಿಗೆ ಸೇರಿಸಿ, ಇಂದು-ನಾಳೆಗಳ ನನ್ನವುಗಳನ್ನಾಗಿಸಿಕೊಳ್ಳುತ್ತೇನೆ.

 

ಯಾವ ಮೋಹನ ಮುರಳಿ ಕರೆಯಿತೋ ಮರಳಿದೆ

ಆಶಾವಾದದೊಂದಿಗೆ…!

ಮೋಹನ ಸುಧೆ ಹರಿಸಲಿಕ್ಕೆ..!

ಏಕೆ ದೂರಾದೆ ಪ್ರಿಯೇ…

ಏಕೆ ದೂರಾದೆ ಪ್ರಿಯೇ…

ಮನದ ಮುಗಿಲಿಂದ ಮಿಂಚಿನಂತೆ ಬಳುಕಿ..?

ಮನದ ಮಾತುಗಳು ಕೇಳದಾದವೇನು?

ಹೃದಯದಾಲಾಪ ಕೇಳದಾಯಿತೇನು?

ಕಟ್ಟಿದ ಕನಸಿನ ಕಾರ್ಮೋಡಗಳೇಕೋ ಮಳೆಯಾಗಿ ಸುರಿಯಲಿಲ್ಲ

ಹೃದಯದ ಮೇಲೆ ನಿನ್ನ ಹೆಸರ ಬರೆಯಲಿಲ್ಲ.

ಉತ್ತರಗಳೇ ಇಲ್ಲ.

ಪ್ರಶ್ನೆಗಳೇ ಎಲ್ಲ!

“ಉತ್ತರೆ”ಯಾಗು ಬಾ ಪ್ರಿಯೆ..!

ಮುನಿಸೇಕೆ ನನ್ನ ಕನಸಿನ ಕನ್ಯೆ?

ಹೇಳೊಮ್ಮೆ ಉತ್ತರವ ಮನದನ್ನೆ

ನಿನ್ನೀ ಮನಸೇಕೆ ಕನವರಿಸದೇ ನನ್ನ ಬಗ್ಗೆ..?

ನಾನಿರದ ಬಾಳಿನಲಿ ಕಂಡೀತೇ ನಗೆ ಬುಗ್ಗೆ..?!

ಬದುಕು-ಭಾವಗಳ ಬೆಸೆಯುವ ಅನುಬಂಧ

ಮಸುಕಾಯಿತೇ ಮಧುರ ಭಾವಬಂಧ?

ಎಲ್ಲಿ ಕಣ್ಮರೆಯಾಯಿತು ಸ್ನೇಹದ ಸಲುಗೆ

ಭಾವ-ಭಾವಗಳ ಬೆಸೆಯುವ ಬೆಸುಗೆ?

ಕಳೆದ ಕ್ಷಣಗಳ ಬೆಚ್ಚಗಿಟ್ಟಿದ್ದೇನೆ

ಈ ಹೃದಯದಾ ಅಂತರಾಳದಲಿ

ಕನವರಿಸುತ್ತಿದ್ದೇನೆ, ಬೆದರುತ್ತಿದ್ದೇನೆ

ಕೊನೆಯಾಯಿತೇ ಎಂದು ಪ್ರೇಮ, ಸ್ನೇಹದಲ್ಲಿ….

ಹೃದಯ ಹೃದಯಗಳ ನಡುವಿನ ಅನುಬಂಧ ಸದಾ ಇರಲಿ.

ಭಾವನೆಗಳ ಬೆಸೆದ ಅನುಕ್ಷಣವೂ ಅನುಗಾಲ ಹಸಿರಾಗಿರಲಿ.

ನೀ ಎಲ್ಲಾದರೂ ಇರು, ಹೇಗಾದರೂ ಇರು

ಹೃದಯದಾ ಮೂಲೆಯೊಂದನ್ನು ನನಗಾಗಿ ಇಟ್ಟಿರು..!

ಕನಸು ಕಂಗಳ ಹುಡುಗ

 ಕನಸು ಮಾರುವ ಕಾರ್ಖಾನೆ.

ವಿಧಾನ ಸೌಧದಂಥಾ ಭವ್ಯ ಅರಮನೆ.

ಹೊಸತನ, ಹೊಸ ಹುರುಪು, ನವಚೈತನ್ಯ

ನನ್ನಂಥ ಕನಸು ಕಂಗಳ ಯುವಕನಿಗೆ ಎಲ್ಲ ಅನನ್ಯ.

 

ಹೊಸ ದಿಗಂತದೆಡೆ ಕೈಚಾಚಿ,

ಹೊಸ ಅನುಭವಗಳ ಹೊರಚಾಚಿ

ನಿಂತಿದ್ದೇನೆ ನಾ ಇಲ್ಲಿ ಅನನುಭವಿ.

ಮಾಯಾ ಲೋಕದ ಅನನುಭವಗಳ ಅನುಭವಿ!

 

ಒಂದು ದಿಗಂತದಲ್ಲಿ ನಾನು,

ಮತ್ತೊಂದು ದಿಗಂತಕ್ಕೆ ನನ್ನ ಕನಸು.

ಮಧ್ಯೆ ಸಾಗಿದರೂ ಸಾಗಿದರೂ ಸಾಗುವ ದಾರಿ ತೋರುವ ಎಂಜಿನಿಯರಿಂಗು

ಇವೆಲ್ಲ ಸಂಬಂಧಗಳ ನಡುವೆ ಮೂಕ ಪ್ರೇಕ್ಷಕ ಮನಸು!

 

ಮೊಗೆ-ಒಗೆದು ತೆಗೆದರೂ ಹಳತೆಂಬುದಿಲ್ಲ.

ತೆರೆ-ತೆರೆದು ನೋಡಿದರೂ ವಿಸ್ಮಯವೇ ಎಲ್ಲ!

ಲೋಕಕ್ಕೊಂದು ಕಾಣ್ಕೆಗೆ ಕನಸಿನಲೂ ನನಸಿನಲೂ ಅದೇ ಗುಂಗು.

ಹೊಸತನದ ಸಾಕ್ಷಿಗೆ, ದಿಗ್ದರ್ಶನಕೆ ಎಂಜಿನಿಯರಿಂಗು.

 

ನಾನು ನನ್ನವರಿಲ್ಲವೆಂಬ, ಇದ್ದರೂ ಕಡಿಮೆ ಎಂಬ ಅನಾಥ ಪ್ರಜ್ಞೆ.

ಇಂದಲ್ಲ ನಾಳೆ ನಮ್ಮರಾಗುವರು ಬಿಡು, ಅವಜ್ಞೆ.

ಕನಸಿನ ಕನ್ನಿಕೆಯರಾರೂ ದೊರಕಲಿಲ್ಲ ಸ್ನೇಹಕ್ಕೆ

ಬಿಡಿ, ಬೇಸರವಿಲ್ಲ ಅದಕ್ಕೆ..!

 

ಕಾರಿಡಾರುಗಳಲ್ಲಿ ತಾಜಾ ತರುಣಿಯರ ಮೆರವಣಿಗೆ.

ಪ್ರೇರಣೆ, ಪ್ರೇರೇಪಣೆಯೇ ಈ ಬರವಣಿಗೆ!

ಏಕೆ ಹಿಡಿಸಲಿಲ್ಲವೋ ನಾನು ತಿಲೋತ್ತಮೆಯರಂಥ ತರುಣಿಯರಿಗೆ

ಬಹುಷಃ ಇರಬೇಕೇನೋ ನನ್ನ ಕೊರವಣಿಗೆ!

 

ಕಾಲ ಬದಲಾದಂತೆ..,

ಕನಸುಗಳು ಮಾಸುತ್ತವೆ,

ಮನಸುಗಳು ಮಾಗುತ್ತವೆ,

ಕಾಯ ಬಾಗುತ್ತದೆ,

ಹೊಸತನವೂ ಹಳತಾಗುತ್ತದೆ.

ಹಳತಾಗುವ ಮುನ್ನ ಹೊಸತನವನ್ನೊಮ್ಮೆ

ಎಡತಾಗುವ, ಸವಿಯುವ ಬಯಕೆ!

 

ಈಗ ಸಿಕ್ಕವರಾರೂ ಮುಂದೆ ಸಿಗುವುದಿಲ್ಲ.

ಮುಂದೆ ಸಿಗುವವರನ್ನು ಒಮ್ಮೆಯೂ ನೋಡಿಲ್ಲ.

ಸಿಕ್ಕಾಗ ಮಜಾ ಉಡಾಯಿಸು ಎನ್ನುತ್ತೆ ಉಡಾಫೆಯ ಬ್ರೈನು.

ಯಾರು ಸಿಕ್ಕರೇನು, ಸಿಗದಿದ್ದರೇನು ಸಾಗುತ್ತದೆ ಜೀವನದ ಟ್ರೈನು!

 

ಮೊದಲ ತೊದಲುಗಳೆಲ್ಲ ಈಗ ಧ್ವನಿಯಾಗಿವೆ.

ಅದಲು ಬದಲಾಗಿ ಪ್ರತಿಧ್ವನಿಯಾಗಿವೆ.

ಮೊದಲು ಮೊದಲು ಎಲ್ಲವೂ ಸರಿಯಾಗಿರುತ್ತದೆ.

ಖುಶಿ ಕೊಡುತ್ತದೆ, “ಮೊದಲ” ವೈಶಿಷ್ಟ್ಯವೇ ಅದು ತಾನೇ..?

 

ಹಿಂತಿರುಗಿ ನೋಡಿದಾಗ,

ಮಸುಕು ಮಸುಕಾದ ಕನಸುಗಳ ಸಂತೆ.

ಪಿಸುಮಾತಿನ ಗುಸು-ಗುಸುಗಳ ಅಂತೆ ಕಂತೆ.

ಏನೇ ಆಗಲಿ, ಎಲ್ಲ ಇರಬೇಕಲ್ಲ

ನಾವು ಇಷ್ಟಪಟ್ಟಂತೆ..?..!!