ಸಮಾಜ ಶಾಸ್ತ್ರಜ್ಞರಿಗೆ/ಮನೋವಿಜ್ಞಾನಿಗಳಿಗೆ/ಅಪರಾಧ ತಜ್ಞರಿಗೆ ರೇಪ್ ವಿಷಯಾಧಾರಿತ ಹೊಸ ಪಿ.ಹೆಚ್.ಡಿ ಪದವಿಯ ವಿಷಯಗಳು

Image courtesy of [image creator name] / FreeDigitalPhotos.net

ರೇಪ್ ಅಧ್ಯಯನ
ಸಮಾಜ ಶಾಸ್ತ್ರಜ್ಞರಿಗೆ/ಮನೋವಿಜ್ಞಾನಿಗಳಿಗೆ/ಅಪರಾಧ ತಜ್ಞರಿಗೆ ರೇಪ್ ವಿಷಯಾಧಾರಿತ ಹೊಸ ಪಿ.ಹೆಚ್.ಡಿ ಪದವಿಯ ವಿಷಯಗಳು – ಹೀಗೊಂದು ಪಟ್ಟಿ ತಯಾರಿಸಿದ್ದೇನೆ.
೧. ಭಾರತೀಯರಿಗೇಕೆ ಕಾಲು ಕಾಣುವ ಸ್ಕರ್ಟ್ ಕಂಡರೆ, ಕೈ ಕಾಣುವ ಸ್ಲೀವ್‍ಲೆಸ್ ಕಂಡರೆ  ಕಾಮ ಕೆರಳಿ ನಿಲ್ಲುತ್ತದೆ?
೨. ರೇಪ್ ಮಾಡುವ ವ್ಯಕ್ತಿಯ ಮೇಲೆ ವಿದೇಶಿ ಸಂಸ್ಕೃತಿಯ ಪ್ರಭಾವ. (ರೇಪ್ ಮಾಡೋದನ್ನ ಭಾರತೀಯರು ಕಲಿತದ್ದು ವಿದೇಶಿಯರಿಂದಲೇ? ದುಶ್ಯಾಸನ ಸ್ವದೇಶಿಯಲ್ಲವೇ?)
೩. ಇಂಡಿಯಾದಲ್ಲಿ ನಡೆಯುವ ರೇಪುಗಳು ಮತ್ತು ಭಾರತದಲ್ಲಿ ನಡೆಯುವ ರೇಪುಗಳು.
೪. ಗಂಡಸರೇರೆ ರೇಪ್ ಮಾಡುತ್ತಾರೆ?
೫. ರೇಪ್ ಮಾಡುವ ಗಂಡಸರಿಗೇಕೆ ಹೆಣ್ಣನ್ನ ಕಂಡರೆ ಅಷ್ಟು ದ್ವೇಷ, ಕ್ರೌರ್ಯ?
೬. ರೈಲ್ವೇ ಸ್ಟೇಷನ್‍ಗಳಲ್ಲಿ, ಬಸ್‍ಸ್ಟ್ಯಾಂಡ್‍ಗಳಲ್ಲಿ, ಶಾಪಿಂಗ್ ಮಾಲ್‍ಗಳಲ್ಲಿ, ಬ್ರಿಗೇಡು, ಎಂಜಿ, ಕಮರ್ಷಿಯಲ್ ಸ್ಟ್ರ‍ೀಟುಗಳಲ್ಲಿ ಢಿಕ್ಕಿ ಹೊಡೆಯುವ ವಿಕೃತ ಸಂತೋಷವನ್ನೇಕೆ ಭಾರತದ ಗಂಡಸರು ಬಯಸುತ್ತಾರೆ?
೭. ದೇವಸ್ಥಾನಗಳ ಮೇಲಿನ ತೆರೆದೆದೆಯ ಗಾಂಧರ್ವ ಲೋಕದ ಸುಂದರಿಯರು ಕಲ್ಲಾಗಿ ಉಳಿದಿದ್ದರಿಂದಲೇ ರೇಪಿನಿಂದ ಬಚಾವಾದರೇ?
೮. ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾಗದ ಗಂಡಸರು ಹೆಂಗಸರೆಲ್ಲಾ “ಮೈತುಂಬಾ” ಬಟ್ಟೆ ಹಾಕಿಕೊಳ್ಳಬೇಕೆಂದು ಆದೇಶಿಸುವುದೇಕೆ?

ಇನ್ನಾದರೂ ನ್ಯೂಸ್ ಚಾನಲ್‍ಗಳು ಹೊಟ್ಟೆಗೆ ಅನ್ನ ತಿನ್ನುವ ಕೆಲಸ ಮಾಡಲಿ.

1999 ರಲ್ಲಿಯೂ ಪ್ರಳಯದ ಬಗ್ಗೆ ಚರ್ಚೆ ಮತ್ತು ವಿವಾದಗಳು ಭುಗಿಲೆದ್ದಿದ್ದವು. 2000 ಕ್ಕೆ ಪ್ರಳಯವಾಗುತ್ತದೆ. ಕಲ್ಲಿನ ಕೋಳಿ ಕೂಗುತ್ತದೆ. ಹಂಪೆಯ ರಥ ಚಲಿಸುತ್ತದೆ. ಭೂಮಿ ಬುಡಮೇಲಾಗುತ್ತದೆ. ಸಾಗರಗಳು ಉಕ್ಕಿ ಹರಿಯುತ್ತವೆ. ಅದ್ಯಾವನೋ ಹಡಕಲಾಸಿ ಜೋತಿಷಿ ನಾಸ್ಟ್ರಾಡಾಮಸ್ ಯಾವಾಗಲೋ ಹೇಳಿದ್ದನಂತೆ. ಅದನ್ನ ಹನ್ನೆರಡು ವರ್ಷಗಳ ಹಿಂದೆ ನಮ್ಮ ಜನ ಬಾಯಿ ಚಪ್ಪರಿಸಿ ಹೇಳಿದ್ದೋ ಹೇಳಿದ್ದು. ಮಾಧ್ಯಮಗಳಲ್ಲೂ ಚರ್ಚೆ. ಆಗ ಇದ್ದ ಪ್ರಭಾವಿ ಮಾಧ್ಯಮಗಳೆಂದರೆ ಪತ್ರಿಕೆಗಳೇ. ಉದಯ ಟೀವಿಯಲ್ಲಿ ದಿನಕ್ಕೆ ಮೂರು ಸಲ ನ್ಯೂಸು ಬರುತ್ತಿತ್ತು ಅನ್ನೋದನ್ನ ಬಿಟ್ಟರೆ ಜನ ಸುದ್ದಿಯ ಹಪಹಪಿಗಳಾಗಿರಲಿಲ್ಲ. ಈಗ ಕಾಲ ಬದಲಾಗಿದೆ. 2012. ಕನ್ನಡದಲ್ಲೇ ಇಪ್ಪತ್ತನಾಲ್ಕು ತಾಸು ನ್ಯೂಸು “ಉತ್ಪಾದಿಸುವ” ಆರು ನ್ಯೂಸ್ ಚಾನಲ್‍ಗಳಿವೆ. ಇಡಿ ಒಂದು ವರ್ಷ ಅದೇ ತಲೆಕೆಟ್ಟ ಜೋತಿಷಿಗಳು, ಬ್ರಹ್ಮಾಂಡಿಗಳು, ಗುರೂಜಿಗಳು(?), ಇವರೆಲ್ಲರ ಜೊತೆಗೆ ವಿಜ್ಞಾನಿಗಳು. ಮೊದಮೊದಲು ವಿಜ್ಞಾನಿಗಳನ್ನ ಕರೆಸುತ್ತಲೇ ಇರಲಿಲ್ಲ. ಜನ ವಿರೋಧಿಸಿದ ಮೇಲೆ ಅವರು ಬಂದರಷ್ಟೇ. ಆದರೆ, ವಿಜ್ಞಾನಿಗಳ ಗೋಳು ನೋಡಿ. ತರ್ಕವೇ ಇಲ್ಲದ ಜೋತಿಷ್ಯದ ಮುಂದೆ ತರ್ಕವನ್ನ ಮಂಡಿಸಬೇಕು. ಇದ್ದ ಬದ್ದ ಎಲ್ಲ ಜೋತಿಷಿಗಳು ಲ್ಯಾಪ್ ಟಾಪ್ ಹಿಡಿದುಕೊಂಡು “ವೈಜ್ಞಾನಿಕ ಜೋತಿಷಿ”ಗಳಾಗುತ್ತಿದ್ದಾರೆ. ಆದರೆ, ವಿಜ್ಞಾನಿಗಳು ಭವಿಷ್ಯಗಾರರಾಗದೆ ಸೋಲುತ್ತಿದ್ದಾರೆ. ಅದು ಸಾಧ್ಯವೂ ಇಲ್ಲ.

ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಜನ ಭಯಭೀತರಾಗುವಂತೆ ಅನಿಮೇಟೆಡ್ ವೀಡಿಯೋಗಳನ್ನ ತೋರಿಸಿದ ವಾಹಿನಿಗಳು ಪ್ರಳಯದ ದಿನ ಹತ್ತಿರ ಬಂದಂತೆ ಪ್ರಳಯ ಆಗಲ್ಲ ಅಂತಾ ಘಂಟಾಘೋಷವಾಗಿ ಹೇಳಲಿಕ್ಕೆ ತಯಾರಾದವು. ಕಹಾನಿಮೇ ಟ್ವಿಸ್ಟ್..! ಇನ್ನಾದರೂ ನ್ಯೂಸ್ ಚಾನಲ್‍ಗಳು ಹೊಟ್ಟೆಗೆ ಅನ್ನ ತಿನ್ನುವ ಕೆಲಸ ಮಾಡಲಿ.

ಸುಖಪುರುಷ – ಸುಖಸ್ತ್ರೀ

ಸುಖಪುರುಷ – ಸುಖಸ್ತ್ರೀ
———————–
ಹುಬ್ಬಳ್ಳಿಯಲ್ಲಿ ಇಂಟರ್ಸಿಟಿ ರೈಲು ಇಳಿದವನು ಕೋಟಿಗಟ್ಲೇ ರೊಕ್ಕ ಕೊಟ್ಟು ಗ್ರಾನೈಟ್ ನೆಲಹಾಸು ಹಾಕುವ ರೈಲ್ವೇ ಡಿಪಾರ್ಮೆಂಟು, ಜಗಜಗಿಸುವ ಲೈಟುಗಳಿರುವ ಪ್ಲಾಟ್ ಫಾರಂ ಇದ್ದರೂ ಪ್ರೀಪೇಡ್ ಆಟೋ ಇಲ್ಲದರ ಬಗ್ಗೆ ಬೈದುಕೊಂಡು ಸರ ಸರನೆ ಪ್ಲಾಟ್‍ಫಾರಂನಿಂದ ನಡೆದು ಹೊರಬಿದ್ದು ಮತ್ತೆ ಇನ್ನೂರು ಮುನ್ನೂರು ಮೀಟರ್ ನಡೆಯುತ್ತಾ, ನಮ್ಮ ದೇಶದಲ್ಲಿ ವಯಸ್ಸಾದವರು ರೈಲು ನಿಲ್ದಾಣದಿಂದ ಎಷ್ಟೊಂದು ನಡೆಯಬೇಕು ಸರ್ಕಾರಗಳೇನೂ ಮಾಡುವುದೇ ಇಲ್ಲವಾ? ಎಸಿ ಕಾರುಗಳಲ್ಲಿ ಓಡಾಡುವವರಿಗೆ ಇವೆಲ್ಲಾ ಎಲ್ಲಿ ನೆನಪಾಗುತ್ತವೆ ಅಂದುಕೊಳ್ಳುತ್ತಾ ಒಂದು ಆಟೋ ಹಿಡಿದು ಅರವತ್ತು ಕೇಳಿದವನಿಗೆ ಐವತ್ತು ಕೊಡುತ್ತೇನೆಂದು ಮಾತಾಡಿ, ಆಟೋ ಇಳಿದು ಸರ ಸರನೆ ಬಂದು ರೂಮು ಬಾಗಿಲು ತಟ್ಟಿದರೆ ಬಾಗಿಲು ತೆಗೆದ ಮಲ್ಲಿಕಾರ್ಜುನ ಎಡಗೈಯಲ್ಲಿ ಬಾಗಿಲು ತೆಗೆದು ಮತ್ತೆ ತಾಟಿನಲ್ಲಿ ರೊಟ್ಟಿ ಮುರಿಯುತ್ತಾ ಹೆಸರುಕಾಳು ಬಾಜಿ ಜೊತೆ ಊಟ ಮುಂದುವರೆಸಿದ.

“ಎಲ್ಲಿ ತಂದಿ ರೊಟ್ಟೀನಾ? ”
“ಆಂಟೀ ಮೆಸ್‍ದಾಗ”
“ಎಷ್ಟು ರೊಟ್ಟೀಗೆ, ಬಾಜೀಗೆ?”
“ಸಪರೇಟಾಗಿ ಗೊತ್ತಿಲ್ಲ. ಊಟ ತಂದೆ. ಮೂವತ್ತೈದು.”
“ಹೆಂಗಿದೆ ಊಟ?”
“ಅಡ್ಡಿಯಿಲ್ಲ ಸರ್. ಒಕೆ.”
“ಆಂಟಿ ಛಲೋ ಅದಾಳಲ್ಲಾ?”
“ಹಂಗ್ ಅನ್ನಿಸ್ತಾಳೆ ಸರ್. ಆದ್ರೆ, ಎಲ್ಲಾ ಇಳೇ ಬಿದ್ದಾವು. ನೋಡಕ್ ಮಕಾ ಮಾತ್ರ ಸೂಪರ್”
“ಇನ್ನೂ ಮತ್‍ಹ್ಯಾಂಗ್ ಇರ್ತಾಳೋ? ಎರಡು ಮಕ್ಕಳನ್ನ ಹಡೆದು, ಬೆಳೆಸಿ, ಬೇಯಿಸಿ ಹಾಕಿ”

ಕೋಣೆಯಲ್ಲಿ ಒಂದರ್ಧ ನಿಮಿಷ ನಗು.

“ಸರ್, ಆಂಟೀ ಹ್ಯಾಂಗೆ? ಒಳ್ಳೇಕಿಯಾ?”
“ಒಳ್ಳ್ಯಾಕಿ ಅಂದ್ರೆ?” ಮುಖದ ಮೇಲೊಂದು ಪ್ರಶ್ನಾರ್ಥಕ ಚಿನ್ಹೆ.
“ಅಂದ್ರೆ ಬ್ಯಾರಾರ್ ಕೂಡೆ ಓಡೇನೂ ಹೋಗಂಗಿಲ್ಲಾ..?”
“ಈಗ್ಯಾಕ್ ಈ ಚಿಂತಿ ಬಂತು?”
“ಇಲ್ಲೇ ಗಣಪ್ಪನ ಗುಡಿ ಬಾಜೂ ಇರೋ ಖಾನಾವಳಿಯ ಮಾಲೀಕನ ಹೇಣ್ತಿ ಇದ್ದೋಳು ಅಲ್ಲೇ ಕೆಲ್ಸ ಮಾಡೋನ್ ಕೂಡೆ ಓಡಿ ಹೋದ್ಲು”

ಕೋಣೆಯಲ್ಲಿ ಮತ್ತೆ ನಗು. ಓಡಿಹೋಗುವವರನ್ನ ನೋಡಿದರೆ ಜನರಿಗೆ ನಗುವೇಕೆ ಬರುತ್ತದೆ? ಜೀವನದಲ್ಲಿ ಓಡುತ್ತಿರಬೇಕು. ಓಡಿ ಹೋಗಬಾರದು..! ಬೆಂಗ್ಳೂರಾಗೆ ದಿನಬೆಳಗಾದ್ರೆ ಕುಂಡಿ ತುರಿಸಿಕೊಳ್ಳಾಕ್ ಟೈಮ್ ಇಲ್ದಂಗ್ ತಮ್ ತಮ್ ಕೆಲ್ಸಕ್ಕೆ ಪುರುಸೊತ್ತಿಲ್ಲದಂಗ್ ಓಡ್ತಾರೆ. ಯಾರೂ ನಗಂಗಿಲ್ಲ. ಯಾರ್ ಮಕದಾಗೂ ನಗೂ ಇಲ್ಲ. ಆದ್ರೆ, “ಓಡಿಹೋಗುವವರನ್ನ” “ಓಡಿ ಹೋಗಿ ಮದುವೆಯಾಗುವವರನ್ನ” ನೋಡಿ ಜನ ಯಾಕೆ ನಗ್ತಾರೆ, ಬಾಯಿಗ್ ಬಂದಿದ್ ಮಾತಡ್ತಾರೆ?

“ಸರ್, ಈವಾಂಟಿಗೆ ಆಂಟಿ ಅನ್ನಬಾರದು. ಅಕ್ಕ ಅನ್ನಬಾರದು. ಮೇಡಂ ಅನ್ನಬೇಕು..! ಮೊನ್ನೆ ಪಾರ್ಸಲ್ ತರಕ್ ಹೋದಾಗ ಯಕ್ಕಾ ಒಂದ್ ಊಟ ಕಟ್ಟು ಅಂದೆ. ಹಾಂ ಇಲ್ಲ ಹೂಂ ಇಲ್ಲ. ಆಂಟೀ ಒಂದು ಊಟ ಅಂದೆ. ಉತ್ರಿಲ್ಲ. ಮೇಡಂ ಒಂದ್ ಊಟ ಪಾರ್ಸೆಲ್ ಮಾಡಿ ಅಂದ್ರೆ ಪಟ್‍ನೆ ಹಾಂ ಮಾಡ್ತಾ ಇದೀನ್ರಿ ಅಂದಳು.”
“ಅವುನೌನ್ ಬೆಂಗ್ಳೂರ್ ಭಾಷೆಗೆ ಈ ಹುಡಗ್ಯಾರ್ ಬೀಳೋದ್ ನೋಡಿದ್ನಿ. ಈ ಆಂಟಿಗುಳೂ ಹಂಗೇ ಆದ್ವಾ? ನಮ್ಮೂರಾಗೆ ನಾವೆಲ್ಲಾ ಜವಾರಿ ಕನ್ನಡ ಮಾತಾಡಿದ್ರೆ ಆ ಇಬ್ರು ಸೂಳೇಮಕ್ಳು ಎರಡೇ ಎರಡ್ ಸಲ ಬೆಂಗ್ಳೂರ್‌‍ಗೆ ಹೋಗಿ, ಸಾಫ್ಟ್‌ ಆಗಿ, ಹೇಗಿದೀರಾ, ಹಾಗಾ ಹೀಗಾ, ಹೌದು ಕಣ್ರೀ, ಹೀಗೆ ಕಣ್ರೀ ಅಂತಾ ಮಾತಾಡಿ ನಮ್ಮೂರ್ ಹುಡ್ಗೇರ್‌ನ ಬೀಳಿಸ್ಕತಿದ್ರು. ಈ ಹುಡ್ಗೇರಿಗೆ ಬೆಂಗ್ಳೂರ್ ಭಾಷೆ ಮಾತಾಡ ಹುಡುಗರು ಮಾತ್ರ ಸ್ಟ್ಯಾಂಡರ್ಡ್‌ ಆಗಿ ಕಾಣ್ತಾರೆ” ಅವನು ಬಿರುಸಾಗಿಯೇ ಆಕ್ರೋಶ ವ್ಯಕ್ತಪಡಿಸಿದ.

ಹಾಗಾದರೆ ಸುಖ ಕೊಡುವ ಜವಾಬ್ದಾರಿ ಯಾರ್ದು? ಹೆಣ್ಣು ಭೋಗದ ವಸ್ತು ಅಂದ್ರೆ ಹೆಣ್ಣು ಸುಖ ಕೊಡ್ತಾಳೆ ಅಂತಾ ಅರ್ಥ ಅಲ್ಲೇನು? ಭೋಗದ ವಸ್ತು ಅಂದರೆ ಭೋಗಿಸಲ್ಪಡುವ ವಸ್ತು ಅಂತಲಾ? ಹೆಣ್ ಮಕ್ಳು ಬ್ಯಾರೆ ಗಂಡಸರ ಕೂಡೆ ಓಡಿ ಹೊಕ್ಕಾರೆ ಅಂದ್ರೆ ಗಂಡ ಸುಖ ಕೊಡ್ಲಿಲ್ಲಾ ಅಂತಾ ಅರ್ಥ ಅಲ್ಲೇನು? ಅಲ್ಲಿಗೆ ಹಂಗ್ ನೋಡಿದ್ರೆ, ಗಂಡಸು ಸುಖ ಕೊಡುವ ಮಷೀನ್ ಅಲ್ಲೇನು? ಗಂಡಸ್ರೂ ಭೋಗಿಸಲ್ಪಡುವ ವಸ್ತುಗಳಾಗಿಲ್ಲೇನು?
,
ಆಂಟಿ ಮೆಸ್ಸಿನ ಊಟ ಮಾಡಿದವನು ಇವ್ಯಾವುದರ ಪರಿವೆ ಇಲ್ಲದೇಲೇ ಲೈಟು ಆರಿಸಿ ಚಾದರ ಹೊದ್ದು ಮಲಗಿದ.

ಚಕ್ರವರ್ತಿ ಸೂಲಿಬೆಲೆ ಯಾವ ಸಂದೇಶ ನೀಡುತ್ತಿದ್ದಾರೆ? ಹೆಣ್ಣು ಮಕ್ಕಳ ಮೈ ಕೈ ಮುಟ್ಟುವುದು ಸರಿ ಎಂತಲೋ..?

ಚಕ್ರವರ್ತಿ ಸೂಲಿಬೆಲೆ ಮಲಾಲಾ ಬಗ್ಗೆ ಒಳ್ಳೆಯ ಲೇಖವನವನ್ನೇ ಬರೆದಿದ್ದಾರೆ. ಆದರೆ, ಪರೋಕ್ಷವಾಗಿ ಮಂಗಳೂರಿನ ಗೂಂಡಾಗಿರಿಗಳನ್ನ, ಹೊಡೆದು “ಬುದ್ಧಿವಾದ” ಹೇಳೋದನ್ನ ಸಮರ್ಥಿಸಿದ್ದಾರೆಯೇ?

ಅವರ ಲೇಖನದ ಸಾಲುಗಳಿವು.

 

“ನಾವು ಕೈಮುಟ್ಟಿದ್ದನ್ನು, ಮೈಮುಟ್ಟಿದ್ದನ್ನೆಲ್ಲ ತಾಲಿಬಾನ್ ಎಂದು ಬುದ್ಧಿಜೀವಿಗಳು ಕರೆದುಬಿಡುತ್ತಾರಲ್ಲ, ಅಂಥವರು ಬಿಬಿಸಿ ಪ್ರಕಟಪಡಿಸಿರುವ ತಾಲಿಬಾನಿನ ವಿಡಿಯೋ ನೋಡಬೇಕು. ಉಸಿರುಗಟ್ಟಿ ಸತ್ತೇ ಹೋಗುತ್ತಾರೆ”

ಚಕ್ರವರ್ತಿ ಸೂಲಿಬೆಲೆ ಯಾವ ಸಂದೇಶ ನೀಡುತ್ತಿದ್ದಾರೆ? ಹೆಣ್ಣು ಮಕ್ಕಳ ಮೈ ಕೈ ಮುಟ್ಟುವುದು ಸರಿ ಎಂತಲೋ..?
http://kannadavesatya.wordpress.com/2012/11/15/chakravarthi-sulibele/

ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಮತದಾರರಿಗೇಕೆ..?

    ಚುನಾವಣೆ ಸುರುವಾಗಿದೆ. ಹಣ, ಹೆಂಡ, ಸೀರೆ, ಪಂಚೆ, ಟಿ.ವಿ, ಫ್ರಿಡ್ಜು ಮುಂತಾದ ಸಕಲ ಸಾಮಗ್ರಿಗಳನ್ನ ಹೊತ್ತ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಚುನಾವಣಾ ಆಯೋಗದ ಕೆಂಗಣ್ಣಿನಿಂದಾಗಿ ಈಗ “ಉಡುಗೊರೆ” ನೀಡುವ ಪರಿ ಕೂಡಾ ಬದಲಾಗಿದೆ. ಮೊದಲು ಮೊದಲು ಮನೆಗಳಿಗೇ ಸಾಮಾನುಗಳನ್ನ ತಲುಪಿಸುತ್ತಿದ್ದವರು ಈಗ “ಕೂಪನ್” ನೀಡಿ, ನಿರ್ದಿಷ್ಟ ಅಂಗಡಿಗಳಲ್ಲಿ “ಉಡುಗೊರೆ” ಪಡೆಯುವಂತೆ ಸೂಚಿಸುತ್ತಿದ್ದಾರೆ. ರಾಜಕಾರಣಿಗಳೇನೋ ಆಮಿಷ ಒಡ್ಡುತ್ತಾರೆ. ಇಷ್ಟು ದಿನ ಹಾಯಾಗಿ ಗೂಳಿಗಳಂಗೆ “ತಿಂದುಂಡು” ಅಲೆದಾಡಿದ್ದಕ್ಕೆ ದಂಡ ಪಾವತಿಸುತ್ತಿದ್ದಾರೆ. ಆದರೆ, ಮತದಾರರರು ಇವರ ಋಣಭಾರದಲ್ಲೇಕೆ ಇರಬೇಕು ಎಂಬುದು ನನ್ನ ಪ್ರಶ್ನೆ. ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಜನಕ್ಕೇಕೆ? ಎಲ್ಲರಿಂದನೂ ಬರೋದನ್ನೆಲ್ಲವನ್ನ ತೊಗೋಬೇಕು. ತಮಗೆ ಬೇಕಾದವರಿಗೆ ಒತ್ತಬೇಕು. ಆದರೆ, ಬಡವರ, ದಲಿತರ, ಸ್ಲಂ ಜನರ “ನಿಯತ್ತು” ಹೊಲಸು ರಾಜಕಾರಣಿಗಳನ್ನ ಇನ್ನೂ ಜೀವಂತ ಇಟ್ಟಿದೆ. ಮುಗ್ಧ ಜನರ ಮುಗ್ಧತೆಯನ್ನ ಎನ್‍ಕ್ಯಾಷ್ ಮಾಡಿಕೊಳ್ತಾ ಇದಾರೆ ಅಷ್ಟೇ.

    ಇನ್ನ ಜಾಗೃತ, ಪ್ರಜ್ಞಾವಂತ ಮತದಾರ ಮಹಾಪ್ರಭುಗಳ ಬಗ್ಗೆ ಹೇಳಬೇಕು. ಮೊನ್ನೆ ಮೊನ್ನೆ ನೆಡೆದ ನಮ್ಮೂರಿನ ಕಾರ್ಪೊರೇಷನ್ ಎಲಕ್ಷನ್‍ಗೆ ಹೋಗಿದ್ದೆ ಮತದಾನಕ್ಕೇ ಅಂತಲೇ. ಬಹಳ ಜನ ಕಟಕಿಯಾಡಿದ್ದರು ನಿನೊಬ್ಬ ಓಟುಹಾಕದಿದ್ರೆ ಯಾವನಿಗೂ ಏನೂ ಆಗಲ್ಲ ಅಂತಾ. ಹೋದಾಗ, ಇರುವ ಎಲ್ಲಾ ಕ್ಷೇತ್ರಗಳನ್ನ ಒಮ್ಮೆ ಗಾಡಿಯಲ್ಲಿ ಸುತ್ತಿ ಬಂದಿದ್ದೇನೆ. ೨೦ ವರ್ಷಗಳಲ್ಲಿ ತಿರುಗಾಡದ ಪ್ರದೇಶಗಳನ್ನ, ಕೇವಲ ಹೆಸರು ಕೇಳಿದ್ದ ಪ್ರದೇಶಗಳನ್ನ, ಇನ್ನೂ ಕೆಲವು ಹೆಸರೇ ಕೇಳದ ಏರಿಯಾಗಳನ್ನ ಸುತ್ತಿಬಂದಿದ್ದೇನೆ. ಸಮೀಕ್ಷೆ ಮಾಡಿದ್ದೇನೆ. ಎಲ್ಲೆಲ್ಲಿ ಬಡವರಿದ್ದಾರೋ, ದಲಿತರಿದ್ದಾರೋ, ಸ್ಲಂ ನಿವಾಸಿಗಳಿದ್ದಾರೋ, ನಿರ್ಗತಿಕರಿದ್ದಾರೋ ಅಲ್ಲೆಲ್ಲಾ ಎಲಕ್ಷನ್ ಅಂದರೆ ಹಬ್ಬದ ವಾತಾವರಣ. ಕೆ.ಟಿ.ಜೆ ನಗರ, ನಿಟ್ಟುವಳ್ಳಿ, ಆಜಾದ್ ನಗರ, ಹಳೇ ದಾವಣಗೆರೆಯ ಪ್ರದೇಶಗಳು ಜನಸಂದಣಿಯ ಪ್ರದೇಶಗಳಾಗಿದ್ದವು. ಜನ ಮನೆಯಲ್ಲಿಯೇ ಇರಲಿಲ್ಲ..! ರೋಡ ತುಂಬೆಲ್ಲಾ ಜನ. ರಾಜಕಾರಣಿಗಳೂ, ಸಚಿವರಾಗಿದ್ದವರೂ ಆಗಾಗ ಬಂದು ಹೋಗುತ್ತಿದ್ದರು.  ಬ್ಯಾನರ್ ಬಂಟಿಗ್, ಎಲ್ಲಾ ರಸ್ತೆ ತುಂಬೆಲ್ಲಾ ತುಂಬಿಕೊಂಡಿತ್ತು. ಯಾವ ಧಾರ್ಮಿಕ ಹಬ್ಬಗಳಲ್ಲೂ ಕಾಣಬರದ ಉತ್ಸಾಹ, ಹುಮ್ಮಸ್ಸು, ಹಬ್ಬದ ವಾತಾವರಣ. ಜನ ಓಟು ಹಾಕಲ್ಲಿಕ್ಕೆ ಕ್ಯೂನಲ್ಲಿ ನಿಂತಿದ್ದರು.  ಇನ್ನೂ ಕೆಲವು “ವಿದ್ಯಾವಂತರ, ಪ್ರಜ್ಞಾವಂತರ” ಏರಿಯಾಗಳನ್ನ ತಿರುಗಾಡಿ ಬಂದಿದ್ದೇನೆ. ಎಸ್.ಎಸ್.ಲೇ ಔಟ್, ವಿದ್ಯಾನಗರಗಳಲ್ಲಿ, ಮೆಡಿಕಲ್, ಡೆಂಟಲ್ ಕಾಲೇಜುಗಳಿರುವ ಬಡಾವಣೆಗಳಲ್ಲಿ, ಆಂಜನೇಯ ಬಡಾವಣೆಗಳಲ್ಲಿ ಎಲಕ್ಷನ್ನಿನ ಕುರುಹುಗಳೇ ಕಾಣುತ್ತಿರಲಿಲ್ಲ. ಮತಗಟ್ಟೆಗಳ ಬಳಿ ಒಬ್ಬರೊ ಇಬ್ಬರೋ ಇರುತ್ತಿದ್ದರು. ಮತಗಟ್ಟೆ ಎಲ್ಲಿದೇ ಎಂಬುದೇ ಗೊತ್ತಾಗುವಂತಿರಲಿಲ್ಲ. ಆದರೆ, ಅದೇ ಕೆಳ ಮಧ್ಯಮ ವರ್ಗದ ಜನರಿರುವ ಏರಿಯಾಗಳಲ್ಲಿ, ನಿಮ್ಮದೊಂದು ಓಟು ಇದೆ ಅಂದರೆ ಕೈ ಹಿಡಿದುಕೊಂಡು ಹೋಗಿ ಇಲ್ಲಿದೆ ಮತಗಟ್ಟೆ, ಅಣ್ಣಾ ನಮ್ಮ ಪಕ್ಷಕ್ಕೇ ಓಟು ಹಾಕಿ ಗೊತ್ತಲ್ಲಾ… ಅಂತಾ ಅನ್ನೋ ಮಂದಿ ಇದ್ದರು.

    ಎಷ್ಟು ವಿರೋಧಾಭಾಸಗಳಲ್ಲವಾ? ನಾವು ಯಾರನ್ನ ವಿದ್ಯಾವಂತರು, ಪ್ರಜ್ಞಾವಂತರು ಅನ್ನೋದು? ಮತ ಹಾಕದವರನ್ನಾ? ಕೈಗೆ ಸಿಕ್ಕಾಗಲೆಲ್ಲಾ ನಮ್ಮ ಭಾರತ ಹಿಂಗೇ ಅಂತಾ ಹೀಗಳೆಯುವವರನ್ನಾ..? ನಮ್ ದೇಶ ಇನ್ನು ಉದ್ಧಾರ ಆಗೋಲ್ಲ ಅನ್ನೋ ಜೋಬದ್ರಗೇಡಿಗಳನ್ನಾ..? ಒಮ್ಮೆ ಯೋಚಿಸಬೇಕಾಗಿದೆ.  40*60 ಸೈಟುಗಳಿರುವ, ಮನೆಗಳಿರುವ ಏರಿಯಾಗಳಲ್ಲಿ ಮನೆಗೆ ಒಬ್ಬರೋ ಇಬ್ಬರೋ ಇರುತ್ತಿದ್ದರು. ಒಮ್ಮೊಮ್ಮೆ ಅದೂ ಇಲ್ಲ. ಎಲಕ್ಷನ್ನು ಬಂತೆಂದ್ರೆ, ರಜಾ ದಿನ ಕಳೆಯಲು ತಮ್ಮೂರಿಗೋ, ಮಗನೂರಿಗೋ ಪಿಕ್‍ನಿಕ್ ಹೊರಟುಬಿಡುತ್ತಿದ್ದರು. ರಾಜಕಾರಣಿಗಳು ನೋಡೋದು ತಲೆಗಳನ್ನ, ಎಣಿಸೋದು ತಲೆಗಳನ್ನ, ಓಟುಗಳನ್ನ. ಐಶ್ವರ್ಯವನ್ನಲ್ಲ. 10*10 ಇರೊ ಕೆಳಮಧ್ಯಮ ವರ್ಗದ, ಬಡವರ, ಹಿಂದುಳಿದವರ ಮನೆಗಳಲ್ಲಿ ಹತ್ತು ಓಟುಗಳಿರುತ್ತವೆ. ಒಬ್ಬರ ಮನೆಗೆ ಹೋಗಿ ಬಂದರೆ, ಅವರನ್ನ ಒಲಿಸಿಕೊಂಡರೆ, 10ಓಟು ಅನಾಮತ್ತಾಗಿ ಬಿತ್ತು ಅಂತಾನೇ ಅರ್ಥ. ವಿದ್ಯಾವಂತರ ಮನೆಗಳಲ್ಲಿ ಒಬ್ಬರು, ಇಬ್ಬರು ಇರುವ ಮನೆಗಳಲ್ಲಿ, ಇರುವ ಮಂದಿನೂ ಓಟು ಹಾಕದಿದ್ರೆ, ರಸ್ತೆ ಚರಂಡಿ ಲೈಟು ಎಲ್ಲಾ ಬರ್ತವಾ? ಕೈಯ್ಯಾಗೆ ಜುಟ್ಟು ಹಿಡ್ಕಳಕ್ಕೆ ಕೊಟ್ಟರೂ ಹಿಡಿದುಕೊಳ್ಳದ ಮಂದಿಯನ್ನೇನಾ ವಿದ್ಯಾವಂತರು, ಬುದ್ಧಿವಂತರು ಅನ್ನೋದು?

    ಎಲ್ಲೆಲ್ಲಿ ಚುನಾವಣೆ ಅಬ್ಬರ ಹೆಚ್ಚಾಗಿತ್ತೋ ಅಲ್ಲೆಲ್ಲಾ ಸಿಮೆಂಟು ರೋಡುಗಳಾಗಿವೆ. ಪಾಪ, ಬಡವರು, ಸೂರಿದ್ದೂ ಕಡಿಮೆ ಜಾಗವಿರುವವರು, ಮಲಗೋದೇ ರಸ್ತೆಗಳ ಮೇಲೆ. ಹಾಗಾಗಿ ಓಟುಗಳಿರುವ ಕಡೆಗಳೆಲ್ಲಾ ಸಿಮೆಂಟು ರಸ್ತೆಗಳಾಗಿವೆ. ಅದೇ ವಿದ್ಯಾ ನಗರ, ಆಂಜನೇಯ ಬಡಾವಣೆ, ಎಸ್.ಎಸ್.ಲೇ ಔಟ್‍ಗಳಲ್ಲಿ ಒಂದು ಸರಿಯಾದ ಮಣ್ಣಿನ ರಸ್ತೇನೂ ಇಲ್ಲ. ಯಾಕಂದ್ರೆ, ಬರೀ ಮಾತಿನ ಮಲ್ಲರು ಸಿಗಬಲ್ಲರು, ದೇಶದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ನೀಡುವ ಮಂದಿ ಸಿಗಬಲ್ಲರೇ ಹೊರತು ಮತದಾರರಲ್ಲ.  ಎಲ್ಲೆಲ್ಲೆ ಮತದಾನ ನೆಡೆಯುವುದಿಲ್ಲವೋ ಆ ಕ್ಷೇತ್ರಗಳನ್ನ ರಾಜಕಾರಣಿಗಳು ನಿರ್ಲಕ್ಷಿಸಿಬಿಡುತ್ತಾರೆ. ಅವು ಅಸಲಿಗೆ ಸವಾಲುಗಳೇ ಅಲ್ಲ. ಅವರ ಮತಗಳು ನಿರ್ಣಾಯಕವಲ್ಲ. ನಿರ್ಣಾಯಕ ಮತಗಳಾಗದ ಹೊರತು ರಾಜಕಾರಣಿಗಳು ಗಮನ ಹರಿಸುವುದಿಲ್ಲ. ಹಾಗಾಗಿ 10-15 ವರ್ಷಗಳಾದರೂ ಏರಿಯಾಗಳು ಧೂಳು ಮಣ್ಣಿನಲ್ಲೇ ಇರಬೇಕಾಗುತ್ತದೆ. ಇದನ್ನ ನಮ್ಮ ಮಾನ್ಯ”ವಿದ್ಯಾವಂತ, ಪ್ರಜ್ಞಾವಂತ” ಮತದಾರರು ತಿಳಿಯುವುದೇ ಇಲ್ಲ.

    ಹರಿಜನ ಕೇರಿಗಳಲ್ಲಿ, ಬಡವರ ಏರಿಯಾಗಳಲ್ಲಿ ಜನ ಹೆಂಡ, ಹಣ, ಸೀರೆ, ಪಂಚೆಗಳಿಗೆ ತಮ್ಮ ಮತಗಳನ್ನ ಮಾರಿಕೊಂಡಿರಬಹುದು. ಆದರೆ, ಅವರು ಮತದಾನ ಮಾಡಿದ್ದಾರೆ.  ತಮ್ಮ ಕ್ಷೇತ್ರದ ಮತಗಳು, ತಮ್ಮವರ ಮತಗಳು ನಿರ್ಣಾಯಕವಾಗುವಂತೆ ಮಾಡಿದ್ದಾರೆ. ಇದು ಮಹತ್ಕಾರ್ಯವಲ್ಲವೇ? ಇವರು ವಿವೇಚನಾಪೂರಿತ ಮತದಾರರಾಗಿಲ್ಲದೇ ಇರಬಹುದು ಆದರೆ, ಪ್ರಜ್ಞಾವಂತ ಮತದಾರರು. ಮತದಾನದ ಪ್ರಜ್ಞೆಯಿದೆ ಅವರಲ್ಲಿ.