ಮುಂದಿನ ಹತ್ತು ವರ್ಷದಲ್ಲಿ ಮಲ್ಟಿ ನ್ಯಾಷನಲ್ ಕಂಪನಿಗಳನ್ನ ಮುಳುಗಿಸಲಿರುವ ಬಾಬಾ ರಾಮದೇವ್?

ಇನ್ನು ಹತ್ತು ವರ್ಷಗಳಲ್ಲಿ ಬಾಬಾ ರಾಮ್‍ದೇವ್ ಪ್ರಾಡಕ್ಟ್‌ಗಳು ಎಲ್ಲರ ಮನೆತುಂಬುವುದರಲ್ಲಿ ಸಂಶಯವೇ ಇಲ್ಲ. ಸೋಪು, ಟೂತ್‍ಪೇಸ್ಟು, ಚ್ಯವನಪ್ರಾಶ್, ಗುಲ್ಕನ್‍ನಿಂದ ಹಿಡಿದು ಬಗೆಬಗೆಯ ನೋವುಗಳಿಗೆ, ಪ್ಯಾಕೇಜ್ ಔಷಧಿಗಳನ್ನ ರಾಮದೇವ್ ಬಾಬಾರವರ ದಿವ್ಯ ಯೋಗ ಫಾರ್ಮಸಿ ತಯಾರಿಸಿದೆ. ಬೆಲೆಗಳೂ ಅತಿ ಸ್ಪರ್ಧಾತ್ಮಕವಾಗಿವೆ. (ನಾನೇನೂ ಬಾಬಾ ರಾಮ್‍ದೇವ್‍ ಉತ್ಪನ್ನಗಳ ಕಾಂಟ್ರಾಕ್ಟ್ ಹಿಡಿದಿಲ್ಲ. ಒಂದು ಅಧ್ಯಯನ ಮಾತ್ರ.)

Baba Ramdev

Baba Ramdev

ಅರ್ಧ ಕೆಜಿ ಚ್ಯವನಪ್ರಾಶ್‍ – ಡಾಬರ್ – ರೂ 140. – ಕೆ.ಜಿ.ಗೆ ರೂ 280 ಆಯಿತು.
ಒಂದು ಕೆಜಿ ಚ್ಯವನಪ್ರಾಶ್ – ದಿವ್ಯ ಯೋಗ ಫಾರ್ಮಸಿ – ರೂ 140.
ಒಂದು ಕೆಜಿ ಸ್ಪೆಷಲ್ ಚ್ಯವನಪ್ರಾಶ್ – ದಿವ್ಯ ಯೋಗ ಫಾರ್ಮಸಿ – ರೂ 215.

ಅರ್ಥಾತ್, ರಾಮ್‍ದೇವ್ ಸ್ಪೆಷಲ್ ಚ್ಯವನಪ್ರಾಶ್ ಡಾಬರ್ ಚ್ಯವನ್‍ಪ್ರಾಶ್‍ಗಿಂತ 25 ಪ್ರತಿಶತ ಕಡಿಮೆ ಬೆಲೆಯಲ್ಲಿ ದೊರಕುತ್ತದೆ. ಸಾದಾ ಚ್ಯವನಪ್ರಾಶ್ ಡಾಬರ್ ಚ್ಯವನಪ್ರಾಶ್‌ನ ಅರ್ಧ ಬೆಲೆಯಲ್ಲಿ ದೊರಕುತ್ತದೆ.

ಇದು ಒಂದು ನಿದರ್ಶನ ಅಷ್ಟೇ. ಇಂಥಾ ನೂರಾರು ಉತ್ಪನ್ನಗಳಿವೆ. ಇದನ್ನ ಮಾರುವ ಅಂಗಡಿಯ ಪ್ರಾಂಚೈಸಿ ತಮ್ಮೂರಿನಲ್ಲಿ ತೆಗೆಯಲಿಕ್ಕೆ ಜನ ಕ್ಯೂ ಹಚ್ಚುತ್ತಿದ್ದಾರೆ ಅನ್ನುವ ಸುದ್ದಿಯಿದೆ. ಇದಕ್ಕೆ ರಾಮ್‍ದೇವ್‍ರವರ ಖ್ಯಾತಿ ಅನುಕೂಲಕ್ಕೆ ಬರುತ್ತದೆ. ಆಸ್ಥಾ ಟಿವಿ ಆರೋಗ್ಯ, ಯೋಗದ ವಿಷಯವನ್ನ, ಸ್ವದೇಶಿ ವಿಷಯವನ್ನ ಜೀವಂತವಾಗಿ ಇಡಲಿಕ್ಕೆ ಉಪಯುಕ್ತವಾಗಿದೆ. ಹದಿನೈದು ವರ್ಷಗಳ ಹಿಂದೆ ಆಜಾದಿ ಬಚಾವೋ ಆಂದೋಲನವನ್ನ ರಾಜೀವ್ ದೀಕ್ಷಿತರು ಪ್ರಾರಂಭಿಸಿದಾಗ ಇದ್ದುದಕ್ಕಿಂತ ಹೆಚ್ಚು ಭಾರತದ ಉತ್ಪನ್ನಗಳಿವೆ. ಹಾಗಾಗಿ ಅವರಿದ್ದರೆ, ಇನ್ನೂ ಹೆಚ್ಚಿನ ಉತ್ಪನ್ನಗಳನ್ನ ಶಿಫಾರಸ್ಸು ಮಾಡುತ್ತಿದ್ದರೇನೋ.

ಬಾಬಾ ರಾಮದೇವ್ ತಮ್ಮ ಅಸ್ತಿತ್ವ ತೋರಿಸುವ ಮುಂಚೆಯೇ ಬಿ.ಕೆ.ಎಸ್ ಅಯ್ಯಂಗಾರ್‌ರವರು ಯೋಗವನ್ನ ವಿದೇಶಗಳಲ್ಲಿ ಪ್ರಚುರಪಡಿಸಿದ್ದರು. ಜೊತೆಗೆ ಅಯ್ಯಂಗಾರ್‌ ಅವರು ಬರೆದ ಯೋಗ ಪುಸ್ತಕ ಕನ್ನಡದಲ್ಲೂ ಲಭ್ಯವಿದೆ. ಪ್ರಾಣಾಯಾಮದ ಪ್ರತಿ ವಿಧಾನಗಳನ್ನ, ಅದರ ಆಚರಣೆಗಳನ್ನ, ವೈಜ್ಞಾನಿಕ ಹಿನ್ನೆಲೆಯನ್ನ, ಜೈವಿಕ ಬದಲಾವಣೆಗಳನ್ನ ಅತ್ಯಂತ ವ್ಯವಸ್ಥಿತವಾಗಿ ದಾಖಲಿಸಿದ್ದು ಅಯ್ಯಂಗಾರರು. ಬಾಬಾ ಪ್ರಾಣಾಯಾಮಕ್ಕೆ “ಮಾಸ್ ಲುಕ್” ನೀಡಿದರು. ಜನಸಾಮಾನ್ಯರಿಗೆ ತಲುಪಿಸಿದ್ದು ಅವರ ಹಿರಿಮೆ.

divya yoga pharmacy

ಇವೆಲ್ಲವೂ ಸರಿ. ಆದರೆ, ಏಡ್ಸ್ ಗುಣಪಡಿಸ್ತೀನಿ, ಅಲ್ಜಮೈರ್ ಗುಣಪಡಿಸ್ತೀನಿ. ಔಷಧಿ ತಯಾರು ಮಾಡಿದೀನಿ ಅಂತಾ ಮಾತನಾಡಿ ರಾಮದೇವ್ ಬಾಬಾ ಜನರ ಕಣ್ಣಲ್ಲಿ ಹಗುರಾಗಿಬಿಡುತ್ತಾರೆ. ದಿವ್ಯ ಯೋಗ ಫಾರ್ಮಸಿಯ ವೆಬ್ ಸೈಟಿನಲ್ಲಿ ಒಬ್ಬ ವ್ಯಕ್ತಿ ತನಗೆ ಹೆಚ್.ಐ.ವಿ ಪಾಸಿಟಿವ್ ಇದ್ದು, ತಮ್ಮಲ್ಲಿ ಗುಣಪಡಿಸುವ ಔಷಧಿ ಇದೆಯೇ ಎಂದು ಕೇಳಿದ್ದರು. ಅಲ್ಲಿ ಉತ್ತರವಾಗಿ ನಮ್ಮನ್ನು ಬಂದು ಭೇಟಿ ಮಾಡಿ ಎಂದು ಫೋನ್ ನಂಬರ್ ಕೊಡಲಾಗಿದೆಯೇ ಹೊರತು ಹೆಚ್.ಐ.ವಿ. ಗುಣಪಡಿಸುವ ಬಗ್ಗೆ ಯಾವುದೇ ವಿಶ್ವಾಸವನ್ನ ವ್ಯಕ್ತಪಡಿಸಿಯೂ ಇಲ್ಲ. ಹೇಳಿಕೊಂಡೂ ಇಲ್ಲ. (ಚಿತ್ರದಲ್ಲಿ ಇದರ snap shot ಇದೆ) ಈ ವಿಷಯದಲ್ಲಿ ಮತ್ತು ಬಾಯಿಗೆ ಬಂದಂತೆ ಮಾತಾಡುವ ವಿಷಯದಲ್ಲಿ ರಾಮದೇವ್ ಮಾತ್ರ ಒಬ್ಬ ಹುಂಬ. ರಾಮದೇವ್ ಬಾಬಾ ಸ್ವಲ್ಪ ಪ್ರಬುದ್ಧತೆ ಮೆರೆದದ್ದು ಇತ್ತೀಚೆಗೆ. ದೆಹಲಿ ಅತ್ಯಾಚಾರ ಪ್ರಕರಣದ ನಂತರ ಎಲ್ಲ ದೊಡ್ಡ ದೊಡ್ಡ ವ್ಯಕ್ತಿಗಳು ಅಡಸಾ ಬಡಸಾ ಮಾತಾಡುವಾಗ ಬಾಬಾಗೂ ಪತ್ರಕರ್ತರು ಮೈಕು ಹಿಡಿದಿದ್ದರು. ಯೋಗದ ಬಗ್ಗೆ ಪ್ರಶ್ನೆ ಕೇಳಿ, ಭೋಗದ ಬಗ್ಗೆ ಅಲ್ಲ ಅಂದು ನಕ್ಕು ತಪ್ಪಿಸಿಕೊಂಡಿದ್ದರು.

ಮುಂದಿನ ಬದಲಾವಣೆಗಳೇನಾಗಬಹುದು? ಯಾರಿಗೆ ಲಾಭ – ಯಾರಿಗೆ ಲುಕ್ಸಾನು?
೧. ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆ ಪಾಲಿನಲ್ಲಿ ಮಹತ್ತರ ಪಾಲನ್ನ ರಾಮ್ ದೇವ್ ಕಂಪನಿ ಪಡೆದುಕೊಳ್ಳಬಹುದು.
೨. ದೇಶೀಯ ಬಹುರಾಷ್ಟ್ರೀಯ ಕಂಪನಿಗಳನ್ನೂ ಮುಳುಗಿಸಬಹುದು. (ಡಾಬರ್ ನಂಥವನ್ನ)/ ಸಂಕಷ್ಟಕ್ಕೆ ತಳ್ಳಬಹುದು.
೩. ಮುಂಬರುವ ದಿನಗಳಲ್ಲಿ ಪತಂಜಲಿ ಯೋಗಪೀಠ, ದಿವ್ಯ ಯೋಗ ಫಾರ್ಮಸಿ ನೆಟ್‍ವರ್ಕನ್ನ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಬಹುದು.
೪. ಡಾಬರ್‌ನಂಥ ಕಂಪನಿಗಳಿಗೆ ಸಧ್ಯಕ್ಕೆ ನುಂಗಲಾರದ ತುತ್ತಾಗಿರೋದು ರಾಮದೇವ್ ಬಾಬಾ. ದಿವ್ಯ ಯೋಗ ಫಾರ್ಮಸಿಯ ಎಲ್ಲ ಪ್ರಾಡಕ್ಟ್‌ಗಳಿಗೆ ರಾಮದೇವ್‍ರವರ ಖ್ಯಾತಿಯ ಬೆಂಬಲವಿದೆ. ಬೇರೆ ಕಂಪನಿಗಳು ಹೊಸ ಯೋಗದ ಸ್ವಾಮೀಜಿಗಳನ್ನ ಸೃಷ್ಟಿಸಿಕೊಳ್ಳಬೇಕಾಗಬಹುದೇನೋ?

ಹಂಪಿಗೆ ಸಿಕ್ಕ ಅಂತರರಾಷ್ಟ್ರೀಯ ಮಾನ್ಯತೆ, ಪ್ರಚಾರ ನಮ್ಮ ಚಿತ್ರದುರ್ಗಕ್ಕೇಕೆ ಇಲ್ಲ?

ಹಂಪಿಗೆ ಸಿಕ್ಕ ಅಂತರರಾಷ್ಟ್ರೀಯ ಮಾನ್ಯತೆ, ಪ್ರಚಾರ ನಮ್ಮ ಚಿತ್ರದುರ್ಗಕ್ಕೇಕೆ ಇಲ್ಲ? ನಾನು ಕಂಡುಕೊಂಡ ಅಂಶಗಳು.

೧. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರದುರ್ಗದ ಅದ್ಭುತ ಕೋಟೆ, ಗವಿಗಳ ಬಗ್ಗೆ ಮಾಹಿತಿ ಇಲ್ಲ.
೨. ಸರ್ಕಾರದಿಂದಲೂ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿಲ್ಲ.
೩. ಆನ್ ಲೈನ್ ಫೋರಂಗಳಲ್ಲಿ ಚಿತ್ರದುರ್ಗದ ಬಗ್ಗೆ ಚರ್ಚೆಯಾಗಿಲ್ಲ.

chitradurga fort

Chitradurga fort

ವಿದೇಶಿಯರಿಗೆ ಏನು ಬೇಕು?
೧. ಸ್ಥಳದ ಬಗ್ಗೆ ಸರಿಯಾದ ಮಾಹಿತಿ, ಆಸಕ್ತಿಕರ ಪ್ರೇಕ್ಷಣೀಯ ಅನ್ನಿಸುವಷ್ಟು ಯಾರಾದರೂ ಬರೆದ ಆಪ್ತ ಬರಹಗಳು ಮತ್ತು ಇತಿಹಾಸ.
೨. ಹತ್ತಿರದ ವಿಮಾನ ನಿಲ್ದಾಣದ ಮಾಹಿತಿ, ಬೆಂಗಳೂರಿನಿಂದ ಇರುವ ದೂರದ ಮಾಹಿತಿ, ಉತ್ತಮವಾದ ಊಟ ವಸತಿ ಸೌಕರ್ಯ, ಹೋಗಿ ಬರಲಿಕ್ಕೆ ತಗಲುವ ಸಮಯ.
೩. ಹತ್ತಿರದಲ್ಲಿ ಇರುವ ಇಂಟರ್ನೆಟ್ ಸೆಂಟರ್‌ಗಳ ಕುರಿತು ಮಾಹಿತಿ.
೪. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಮಾಹಿತಿ ಕೇಂದ್ರಗಳು.
೫. ಇಂಟರ್ನೆಟ್ ನಲ್ಲಿ ಲಭ್ಯವಿರುವ ಇಂಗ್ಳೀಷ್‌ನಲ್ಲಿರುವ ಮಾಹಿತಿ ತುಂಬಾ ಕಡಿಮೆ, ಮತ್ತು ಅದನ್ನ ಪ್ರಸ್ತುತಪಡಿಸಿರುವ ರೀತಿ ಅನಾಕರ್ಷಕವಾಗಿದೆ. ಆಕರ್ಷಕ ವೆಬ್ ಸೈಟನ್ನ ನಿರ್ಮಿಸುವುದೂ ಕೂಡ ವಿದೇಶೀಯರನ್ನ ಚಿತ್ರದುರ್ಗಕ್ಕೆ ಬರಮಾಡಿಕೊಳ್ಳಲಿಕ್ಕೆ ಸಹಕಾರಿ.

ಸರ್ಕಾರ/ಸ್ಥಳೀಯ ಆಡಳಿತ ಏನು ಮಾಡಬೇಕು?
೧. ಚಿತ್ರದುರ್ಗದ ಬಗ್ಗೆ ಅದ್ಭುತವಾದ ಫೋಟೋಗಳನ್ನ ವಿಖ್ಯಾತ ಫೋಟೋಗ್ರಾಫರ್‌ಗಳಿಂಗ ತೆಗೆಸಿ ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕು.
೨. ಚಿತ್ರದುರ್ಗದ ಕೋಟೆಯ ಕುರಿತು ಫೋಟೋಗ್ರಾಫಿ ಸ್ಪರ್ಧೆ ಏರ್ಪಡಿಸಬೇಕು. ಐವತ್ತು ಸಾವಿರದಿಂದ ಲಕ್ಷ ರೂಪಾಯಿ ಬಹುಮಾನವಿಟ್ಟು ಎಲ್ಲ ಫೋಟೋಗ್ರಫಿ ಮ್ಯಾಗಜೀನ್‌ಗಳಲ್ಲಿ ಜಾಹಿರಾತು/ಮಾಹಿತಿ ನೀಡಬೇಕು. ಸ್ಪರ್ಧೆಯಿಂದ ಬರುವ ಅತ್ಯುತ್ತಮ ಫೋಟೋಗಳನ್ನ ಜಾಹಿರಾತುಗಳಿಗೆ ಬಳಸಿಕೊಳ್ಳಬೇಕು.
೩. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶೀಯರು ಬಂದಾಗ ಅವರೊಂದಿಗೆ ಹೇಗೆ ಸೌಜನ್ಯಯುತವಾಗಿ ವರ್ತಿಸಬೇಕು ಅನ್ನುವುದರ ಬಗ್ಗೆ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ, ಮಾಹಿತಿ ಅಧಿಕಾರಿಗಳಿಗೆ, ಬಸ್ ಕಂಡಕ್ಟರುಗಳಿಗೆ ತರಬೇತಿ ನೀಡಬೇಕು.
೪. ಪ್ರಮುಖವಾಗಿ, ವಿದೇಶಿಯರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು. ಸ್ಥಳೀಯ ಕಿಡಿಗೇಡಿಗಳಿಂದ, ದುಷ್ಕರ್ಮಿಗಳಿಂದ ಯಾವುದೇ ಕಿರಿಕಿರಿ ಅಥವಾ ದೌರ್ಜನ್ಯ ನಡೆಯದಂತೆ ಸೂಕ್ತ ಭದ್ರತೆ ಒದಗಿಸಬೇಕು.

ಜನತೆ ಏನು ಮಾಡಬೇಕು?
೧. ಭಾರತಕ್ಕೆ ಬರುವ ಪ್ರತಿ ವಿದೇಶಿ ಯಾತಿಕನ ಕೈಯಲ್ಲೂ ಲವ್ಲಿ ಪ್ಲಾನೆಟ್ ಡಾಟ್ ಕಾಂ(lovelyplanet.com) ಪ್ರಕಟಿಸಿದ ಭಾರತದ ಕುರಿತಾದ ಪುಸ್ತಕವಿರುತ್ತದೆ. ಅದರಲ್ಲಿ ಚಿತ್ರದುರ್ಗದ ಮಾಹಿತಿಯನ್ನ ಸೇರಿಸಲಿಕ್ಕೆ ಮನವಿ ಪತ್ರವನ್ನು ಕಳಿಸಬೇಕು. ಜೊತೆಗೆ ಫೋಟೊಗಳನ್ನು ಕಳಿಸಿಕೊಡಬೇಕು.
೨. ಆನ್ ಲೈನ್ ಫೋರಂಗಳಲ್ಲಿ ಚಿತ್ರದುರ್ಗದ ಬಗ್ಗೆ ಒಳ್ಳೆಯ ಮಾತುಗಳನ್ನ ಬರೆಯಬೇಕು. ಛಾಯಾಚಿತ್ರಗಳನ್ನ ಹಾಕಬೇಕು.
೩. ಫೇಸ್ ಬುಕ್ ಫೋರಂಗಳಲ್ಲಿ ಜನತೆ ಭಾಗವಹಿಸಿ ಚಿತ್ರದುರ್ಗದ ಅದ್ಭುತ ಫೋಟೋಗಳನ್ನ ಶೇರ್ ಮಾಡಬೇಕು.

ಇವೆಲ್ಲವುಗಳನ್ನ ಮಾಡಿದಲ್ಲಿ, ಪ್ರವಾಸೋದ್ಯಮದಿಂದ ಅತಿ ಹೆಚ್ಚಿನ ಹಣದ ಒಳಹರಿವು ಸಾಧ್ಯವಾಗುತ್ತದೆ. ಇದು ನಗರದ ಆರ್ಥಿಕತೆಯನ್ನ ಬಲಗೊಳಿಸುತ್ತದೆ. ಚಿತ್ರದುರ್ಗದ ಸಂಸದ, ಯುವ ರಾಜಕಾರಣಿ ಜನಾರ್ಧನ ಸ್ವಾಮಿ ಇದರ ಬಗ್ಗೆ ತುರ್ತಾಗಿ ಗಮನವಹಿಸಬೇಕಿದೆ.

ಶುಭಾಶಯಗಳೊಂದಿಗೆ,

ಗಣೇಶ್ ಕೆ.
ಸಹಾಯಕ ಪ್ರಾಧ್ಯಾಪಕರು,
ಹುಬ್ಬಳ್ಳಿ

ಟಿಪ್ಪು ವಿವಿ ವಿವಾದ

Madan Mohan Malaviya

Madan Mohan Malaviya – Courtesy – http://www.bhu.ac.in

Tippu university Shrirangapattana

ನಾನೆಂದೂ ನನ್ನ ವಿದ್ಯಾರ್ಥಿ ಮಿತ್ರರಿಗೆ ಜಾತಿ, ಧರ್ಮ ಕೇಳಿದವನಲ್ಲ. ಕೇಳುವುದೂ ಇಲ್ಲ. ವಿದ್ಯೆಗೆ ಜಾತಿ ಧರ್ಮಗಳಿಲ್ಲ. ಇರಲೂಕೂಡದು. ವಿದ್ಯೆ ಸಾರ್ವತ್ರಿಕವಾಗಬೇಕು. ಬರೀ ಪ್ರತಿಭಾವಂತರಿಗಷ್ಟೇ ಮೀಸಲೂ ಆಗಬಾರದು. ವಿವಾದದ ವಿಷಯಕ್ಕೆ ಬಂದರೆ, ಅಲಿಗಢ ಮುಸ್ಲಿಂ ವಿವಿ ಇದ್ದಂತೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಮಾಡಬೇಕು ಎನ್ನುವುದು ಒಂದು ರಾಜಕೀಯ ಪಕ್ಷದ ನಿಲುವು. ಅದಕ್ಕೆ ವಿರೋಧವೆಂಬಂತೆ ಇನ್ನೊಂದು ಪಕ್ಷ ಮತ್ತು, ಭಿನ್ನ ನಿಲುವು ಹೊಂದಿರುವ ಸಾಹಿತಿಗಳು ಸಂಶೋಧಕರು ವಿವಿಗೆ ಟಿಪ್ಪು ಹೆಸರು ಬೇಡ ಎಂದಿದ್ದಾರೆ. ಇನ್ನು ಕೆಲವು ಸಾಹಿತಿಗಳು ಈ ಸಾಹಿತಿಗಳನ್ನ ವಿರೋಧಿಸುವ ನಿರ್ಣಯ ತೆಗೆದುಕೊಂಡಿದ್ದಾರೆ.

ಬನಾರಸ್ ಹಿಂದೂ ವಿವಿಯ ವೆಬ್‌ಸೈಟ್‌ನಲ್ಲಿ ಪಂಡಿತ್ ಮದನ ಮೋಹನ ಮಾಳವೀಯರವರ ಸಂದೇಶವನ್ನ ಹಾಕಿದ್ದಾರೆ. ಓದಿ.

India is not a country of the Hindus only. It is a country of the Muslims, the Christians and the Parsees too. The country can gain strength and develop itself only when the people of the different communities in India live in mutual goodwill and harmony .It is my earnest hope and prayer that this centre of life and light which is coming into existence, will produce students who will not only be intellectually equal to the best of their fellow students in other parts of the world, but will also live a noble life, love their country and be loyal to the Supreme ruler.
– Pandit Madan Mohan Malaviya

ಭಾರತವೆಂಬುದು ಹಿಂದೂಗಳದ್ದಷ್ಟೇ ಅಲ್ಲ. ಮುಸ್ಲೀಮರು, ಕ್ರಿಶ್ಚಿಯನ್ನರು, ಪಾರ್ಸಿಗಳದ್ದೂ ಹೌದು. ಈ ಎಲ್ಲ ಸಮುದಾಯಗಳ ಸಮನ್ವಯದಲ್ಲೇ ದೇಶದ ಅಭಿವೃದ್ಧಿಯಿದೆ ಎಂದು ಹೇಳಿದ್ದಾರೆ. ಬನಾರಸ್ ವಿವಿಗೆ ಬನಾರಸ್ ಹಿಂದೂ ವಿವಿ ಎಂದು ಹೆಸರಿಡಬಹುದಾದರೆ ಶ್ರೀರಂಗಪಟ್ಟಣದ ವಿವಿಗೆ ಟಿಪ್ಪೂ ಮುಸ್ಲಿಂ ವಿವಿ ಎಂದೂ ಹೆಸರಿಡಬಹುದು. ಆದರೆ, ಮುಸ್ಲಿಂ ವಿವಿಯಲ್ಲೂ ಮದನಮೋಹನ ಮಾಳವೀಯರಂತೆ ಮುಸ್ಲಿಮೇತರರನ್ನೂ ಸಮಾನವಾಗಿ ಕಾಣುವ, ಸಮನ್ವಯತೆಯನ್ನ ಬಲಪಡಿಸುವ ವ್ಯಕ್ತಿ ನೇಮಿಸಲ್ಪಡುತ್ತಾರೆಯೇ? ಕಾದು ನೋಡಬೇಕು. ಮೊನ್ನೆ ಮೊನ್ನೆ ಕಟ್ಟಿದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದು ಸಮುದಾಯದವರು ಕೆಂಪೇಗೌಡರ ಹೆಸರಿಡಿ ಅಂದರೆ ಇನ್ನೊಬ್ಬರು ಬಸವಣ್ಣನವರ ಹೆಸರು ಸೂಚಿಸಿದರು. ಮಗುದೊಬ್ಬರು ವಿಶ್ವೇಶ್ವರಯ್ಯನವರ ಹೆಸರು ಸೂಚಿಸಿದರು. ಕೊನೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಂತಲೇ ಹೆಸರು ಉಳಿದುಕೊಂಡಿದೆ. ಬೆಂಗಳೂರು ಎಲ್ಲ ಜಾತಿ ಧರ್ಮಗಳ ಜನರದ್ದು. ಹಾಗೆಯೇ ವಿವಿಗೆ ಶ್ರೀರಂಗಪಟ್ಟಣ ವಿವಿ ಎಂದು ಹೆಸರಿಸಿದರೆ ಸಾಕು. ಅದು ಎಲ್ಲ ಜಾತಿಗಳಿಗೆ, ಧರ್ಮಗಳಿಗೆ ಸಮಾನ ನ್ಯಾಯ ಒದಗಿಸಿದಂತಾಗುತ್ತದೆ. ವಿದ್ಯೆ ಹೆಸರಿನಲ್ಲಿ ರಾಜಕೀಯ, ಸಮಾಜ ಒಡೆಯುವಿಕೆ ಬೇಡ. ವಿವಿಯಲ್ಲಿ ಏನೇನು ಕಲಿಸಬೇಕು ಅನ್ನುವ ಚರ್ಚೆ ಆಗಲಿ. ಅದು ಬಿಟ್ಟು ಹೇಳಿಕೆ ಪ್ರತಿ ಹೇಳಿಕೆಗಳ ಧಾಳಿ ಸಲ್ಲ.

ಸಮಾಜ ಶಾಸ್ತ್ರಜ್ಞರಿಗೆ/ಮನೋವಿಜ್ಞಾನಿಗಳಿಗೆ/ಅಪರಾಧ ತಜ್ಞರಿಗೆ ರೇಪ್ ವಿಷಯಾಧಾರಿತ ಹೊಸ ಪಿ.ಹೆಚ್.ಡಿ ಪದವಿಯ ವಿಷಯಗಳು

Image courtesy of [image creator name] / FreeDigitalPhotos.net

ರೇಪ್ ಅಧ್ಯಯನ
ಸಮಾಜ ಶಾಸ್ತ್ರಜ್ಞರಿಗೆ/ಮನೋವಿಜ್ಞಾನಿಗಳಿಗೆ/ಅಪರಾಧ ತಜ್ಞರಿಗೆ ರೇಪ್ ವಿಷಯಾಧಾರಿತ ಹೊಸ ಪಿ.ಹೆಚ್.ಡಿ ಪದವಿಯ ವಿಷಯಗಳು – ಹೀಗೊಂದು ಪಟ್ಟಿ ತಯಾರಿಸಿದ್ದೇನೆ.
೧. ಭಾರತೀಯರಿಗೇಕೆ ಕಾಲು ಕಾಣುವ ಸ್ಕರ್ಟ್ ಕಂಡರೆ, ಕೈ ಕಾಣುವ ಸ್ಲೀವ್‍ಲೆಸ್ ಕಂಡರೆ  ಕಾಮ ಕೆರಳಿ ನಿಲ್ಲುತ್ತದೆ?
೨. ರೇಪ್ ಮಾಡುವ ವ್ಯಕ್ತಿಯ ಮೇಲೆ ವಿದೇಶಿ ಸಂಸ್ಕೃತಿಯ ಪ್ರಭಾವ. (ರೇಪ್ ಮಾಡೋದನ್ನ ಭಾರತೀಯರು ಕಲಿತದ್ದು ವಿದೇಶಿಯರಿಂದಲೇ? ದುಶ್ಯಾಸನ ಸ್ವದೇಶಿಯಲ್ಲವೇ?)
೩. ಇಂಡಿಯಾದಲ್ಲಿ ನಡೆಯುವ ರೇಪುಗಳು ಮತ್ತು ಭಾರತದಲ್ಲಿ ನಡೆಯುವ ರೇಪುಗಳು.
೪. ಗಂಡಸರೇರೆ ರೇಪ್ ಮಾಡುತ್ತಾರೆ?
೫. ರೇಪ್ ಮಾಡುವ ಗಂಡಸರಿಗೇಕೆ ಹೆಣ್ಣನ್ನ ಕಂಡರೆ ಅಷ್ಟು ದ್ವೇಷ, ಕ್ರೌರ್ಯ?
೬. ರೈಲ್ವೇ ಸ್ಟೇಷನ್‍ಗಳಲ್ಲಿ, ಬಸ್‍ಸ್ಟ್ಯಾಂಡ್‍ಗಳಲ್ಲಿ, ಶಾಪಿಂಗ್ ಮಾಲ್‍ಗಳಲ್ಲಿ, ಬ್ರಿಗೇಡು, ಎಂಜಿ, ಕಮರ್ಷಿಯಲ್ ಸ್ಟ್ರ‍ೀಟುಗಳಲ್ಲಿ ಢಿಕ್ಕಿ ಹೊಡೆಯುವ ವಿಕೃತ ಸಂತೋಷವನ್ನೇಕೆ ಭಾರತದ ಗಂಡಸರು ಬಯಸುತ್ತಾರೆ?
೭. ದೇವಸ್ಥಾನಗಳ ಮೇಲಿನ ತೆರೆದೆದೆಯ ಗಾಂಧರ್ವ ಲೋಕದ ಸುಂದರಿಯರು ಕಲ್ಲಾಗಿ ಉಳಿದಿದ್ದರಿಂದಲೇ ರೇಪಿನಿಂದ ಬಚಾವಾದರೇ?
೮. ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾಗದ ಗಂಡಸರು ಹೆಂಗಸರೆಲ್ಲಾ “ಮೈತುಂಬಾ” ಬಟ್ಟೆ ಹಾಕಿಕೊಳ್ಳಬೇಕೆಂದು ಆದೇಶಿಸುವುದೇಕೆ?

ನಮ್ ರಾಜಕಾರಣಿಗಳಿಗೆ ಸಿಎಂ ಡಿಸಿಎಂ ಸೀಟುಗಳು ಒಂಥರಾ ಸುಂದರ ವೇಶ್ಯೆ ಇದ್ದಂಗೆ. ಎಲ್ಲರಿಗೂ Simply irrestible..?

ಸಂವಿಧಾನದತ್ತವಾದ ಪ್ರಜಾಪ್ರಭುತ್ವದ ಉನ್ನತ ಹುದ್ದೆಗಳಾದ ಸಿಎಂ ಡಿಸಿಎಂ ಪದಗಳನ್ನ ತುಚ್ಛವಾಗಿ ಕಾಣುವ ಇರಾದೆ ಈ ಲೇಖನಕ್ಕೆ ಇಲ್ಲ. ಆದರೆ, ಪ್ರಸ್ತುತ ರಾಜಕೀಯ (ಅ)ನೈತಿಕತೆಯ ಹಿನ್ನೆಲೆಯಲ್ಲಿ ಈ ದೃಷ್ಟಿಕೋನದ ವಿಮರ್ಶೆ ಅಗತ್ಯವೆನಿಸಿತು. ಶೆಟ್ಟರರು ಮುಖ್ಯಮಂತ್ರಿಗಳಾಗಿದ್ದಾರೆ. ಉತ್ತರ ಕರ್ನಾಟಕದ ಕಡೆಯ ಪ್ರಭಾವಿ ನಾಯಕ. ಅವರಿಗೆ ಒಳಿತಾಗಲಿ. ಜೊತೆಗೆ, ಅವರಿಂದ ರಾಜ್ಯಕ್ಕೆ ಒಳಿತಾಗಲಿ. ನಿರೀಕ್ಷೆಗಳಂತೂ ಇವೆ. ನಿರಾಸೆಗೊಳ್ಳದಿರಲಿ.

ಕುಮಾರಸ್ವಾಮಿಯವರ ವಚನ “ಭ್ರಷ್ಟತೆ” ಹಿನ್ನೆಲೆಯಲ್ಲಿ ಯಡಿಯೂರಪ್ಪನವರನ್ನ ಗೆಲ್ಲಿಸಿದೆವು. ಮುಖ್ಯಮಂತ್ರಿಯಾದರು. ಆದರೆ “ಭ್ರಷ್ಟತೆ”ಯಿಂದ ರಾಜೀನಾಮೆ ಕೊಡಬೇಕಾಯಿತು. ಯಡಿಯೂರಪ್ಪನವರ ಆಶೆಯಂತೆಯೇ ಸದಾನಂದ ಗೌಡರನ್ನ ಮುಖ್ಯಮಂತ್ರಿ ಮಾಡಲಾಯಿತು. ಕೆಲವೇ ತಿಂಗಳುಗಳು ಕಳೆಯುವುದರೊಳಗೆ ಗೌಡರು ಗುಳಿಗೆ ಒಗೆಯಬೇಕೇ? ಪಾಪ ಅಲ್ಲಿ ಯಡಿಯೂರಪ್ಪನವರಿಗೆ ಎದುರಾದದ್ದು ಇದೇ “ವಚನ ಭ್ರಷ್ಟತೆ”..! ತಾವು ಹೇಳಿದಂತೆ ಕೇಳ್ತೀನಿ ಅಂದದ್ದಕ್ಕೆ ಮುಖ್ಯಮಂತ್ರಿ ಮಾಡಿದರೆ ದಿನ ಕಳೆಯುವುದರಲ್ಲಿ ಉಲ್ಟಾ ಹೊಡೆಯಬೇಕೇ? ಈಗ ಗೌಡರನ್ನ ಇಳಿಸಿ ಶೆಟ್ಟರರನ್ನ ಮುಖ್ಯಮಂತ್ರಿ ಮಾಡಲಾಗಿದೆ. ಶೆಟ್ಟರು ಏನು ವಚನ ಕೊಟ್ಟಿದ್ದಾರೋ ಗೊತ್ತಿಲ್ಲ.

ಈಗ ಸಿಎಂ ಯಾರಾಗಬೇಕು, ಡಿಸಿಎಂ ಯಾರಾಗಬೇಕು ಅನ್ನೋದಕ್ಕೆ ಹಲವಾರು ಹೆಸರುಗಳು ತೇಲಿಬಂದವು. ಈಶ್ವರಪ್ಪ, ಕಾರಜೋಳ ಹೆಸರುಗಳು ಪ್ರಮುಖವಾದವು. ಜಿ.ಎಂ ಸಿದ್ದೇಶರೂ ತಾವೂ ಹಿರಿಯರು ಅಂತಾ ಇದೀವಿ ಬಿಜೆಪೀಲಿ ಅನ್ನೋದನ್ನ ಬಿಡಿಸಿ ಹೇಳಿದರು.

ಒಂದು ಕಥೆ ನೆನಪಿಗೆ ಬರ್ತಾ ಇದೆ. ಎಲ್ಲಿ ಓದಿದ್ದೆ ಅಂತಾ ನೆನಪಿಲ್ಲ. (ಓದುಗರು ಗೊತ್ತಿದ್ದರೆ ಕಾಮೆಂಟಿನಲ್ಲಿ ಹೆಸರಿಸಿ). ಆತ ಬಹಳ ದೊಡ್ಡ ರಾಜ. ಸುಂದರ ಪತ್ನಿಯಿದ್ದಳು. ಯುದ್ಧಕ್ಕೆ ಹೋಗಬೇಕಾಯಿತು. ಪತ್ನಿಯ ಬಗ್ಗೆ ಅತಿಯಾದ ಮೋಹವಿತ್ತು. ಯುದ್ಧ ಮುಗಿಸಿ ಬರುವವರೆಗೂ(ಮುಗಿಸಿ ಬರುತ್ತೇನೆಂಬ ಖಾತ್ರಿ ಇಲ್ಲದಿದ್ದರೂ) ಹೆಂಡತಿಯನ್ನ ಯಾರಾದರೂ ಭೋಗಿಸಿದರೆ ಅನ್ನೋ ಯೋಚನೆ ತಲೆಯಲ್ಲಿ ತಲೆಯಲ್ಲಿ ಸುಳಿಯಿತು. ಹಾಗಾಗಿ ಆಕೆಯ ದೇಹ ತನ್ನನ್ನ ಅಲ್ಲದೇ ಮತ್ಯಾರಿಗೂ ದೊರಕಬಾರದು. ಹಾಗೊಂದು ಉಪಾಯ ಮಾಡಬೇಕೆಂದುಕೊಂಡ. ಆಕೆಯ ಗುಪ್ತಾಂಗಗಳಿಗೆ ಬೀಗ ಹಾಕಿದನಂತೆ. ಬೀಗ ಹಾಕಿದ ಸರಿ. ಆದರೆ ಬೀಗದ ಕೈಯನ್ನ ಯುದ್ದಕ್ಕೆ ತೆಗೆದುಕೊಂಡು ಹೋದರೆ ಎಲ್ಲಾದರೂ ಕಳೆದು ಹೋದರೆ? ತನ್ನ ಹೆಂಡತಿ ತನಗೇ ಪರಕೀಯಳಾಗಿಬಿಟ್ಟಾಳು ಅನ್ನೋ ಯೋಚನೆಯೂ ಸುಳಿಯಿತು. ಹಾಗಾಗಿ ತನ್ನ ಪರಮಾಪ್ತ ಮಿತ್ರನಿಗೆ ಬೀಗವನ್ನೊಪ್ಪಿಸಿ, ಹಿನ್ನೆಲೆಯನ್ನ ಅರುಹಿ, ಜೋಪಾನವಾಗಿ ಕಾಪಾಡುವಂತೆ ಹೇಳಿದ. ತನ್ನ ಪರಮಾಪ್ತ ಮಿತ್ರನಿಗೆ ಒಪ್ಪಿಸಿದ್ದರಿಂದ ಒಂದಷ್ಟರ ಮಟ್ಟಿಗೆ ನಿರುಮ್ಮಳನಂತೆ ಕಂಡು ತನ್ನ ಯುದ್ಧ ತೈಯಾರಿಯಲ್ಲಿ ತೊಡಗಿದ.

ಹೀಗಿದ್ದಾಗ, ಆ ಆಪ್ತ ಗೆಳೆಯ ಬಂದ.

“ಬೇರೆ ಯಾವುದೋ ಬೀಗದ ಕೈ ಕೊಟ್ಟಿದ್ದೀಯ. ಈ ಬೀಗದ ಕೈ ನೀ ಹೇಳಿದ ಬೀಗದ್ದಲ್ಲ” ಅಂದ..!

ಬೀಗದ ಕೈಯನ್ನ ಬೀಗದಲ್ಲಿ ತೂರಿಸಿ ತೆಗೆಯಲು ಪ್ರಯತ್ನಿಸದಿದ್ದರೆ ಆತ ಹೇಗೆ ಈ ಮಾತನ್ನ ಹೇಳಲಿಕ್ಕೆ ಸಾಧ್ಯ..? ಇಂಥಾ ಸಂಗತಿಗಳಲ್ಲಿ, “ವಚನ”ದ ಅರ್ಥ, ಅರ್ಥ ವ್ಯಾಪ್ತಿ, ಸೀಮಿತತೆ, ನಿಷ್ಟೆ ಎಲ್ಲವೂ ಪ್ರಶ್ನಿಸಲ್ಪಡುತ್ತವೆ. ಅದೇ ರೀತಿ ಅಫಜಲ ಖಾನನು ಶಿವಾಜಿಯ ವಿರುದ್ಧದ ಯುದ್ಧದಲ್ಲಿ ಸೋಲುಣ್ಣುವ ಭವಿಷ್ಯವಾಣಿಯನ್ನ ಜ್ಯೋತಿಷಿಯಿಂದ ಕೇಳಿದಮೇಲೆ ತನ್ನ ನೂರೈವತ್ತೂ ಚಿಲ್ಲರೆ ಹೆಂಡತಿಯರನ್ನ ಬಾವಿಯಲ್ಲಿ ಹಾರಿಸಿ, ಸಮಾಧಿ ಕಟ್ಟಿ, ಶಿವಾಜಿ ವಿರುದ್ಧ ಯುದ್ಧ ಮಾಡಿ ತಾನೂ ಸೋತು-ಸತ್ತಾದಮೇಲೆ ತನ್ನನ್ನೂ ಅವರ ಪಕ್ಕದಲ್ಲೇ ಸಮಾಧಿ ಮಾಡಿಸಿಕೊಂಡ ಅಫಜಲಖಾನ ನಮ್ಮ ಪ್ರಸ್ತುತ ರಾಜಕಾರಣದ ಅನೈತಿಕತೆಗೆ ಪ್ರತಿಮೆಯಾಗುತ್ತಾನೆ.

ಯಡಿಯೂರಪ್ಪನವರು ಸಿಎಂ ಸೀಟಿನ ಕೀಲಿಯನ್ನ ಸದಾನಂದಗೌಡರಿಗೆ ಹಸ್ತಾಂತರಿಸುವಾಗ ಈ ಕಥೆಯನ್ನ ಓದಿದ್ದರೆ ಚೆಂದವಿರುತ್ತಿತ್ತು. ಈಗ ಆ ಕೀಲಿಯನ್ನ ಗೌಡರಿಂದ ಕಸಿದು ಶೆಟ್ಟರಿಗೆ ನೀಡುತ್ತಿದ್ದಾರೆ. ಈಗಲಾದರೂ ಈ ಕಥೆ ಅವರಿಗೆ ಮುಟ್ಟಲಿ.

ಅಧಿಕಾರ ಮತ್ತು ಹೆಣ್ಣಿನ ವಿಷಯಗಳಲ್ಲಿ ಎಂಥವರ ನಂಬಿಕೆ, ನಿಷ್ಠೆಗಳೇ ಆಗಲಿ ಪ್ರಶ್ನಿಸಲ್ಪಡುತ್ತವೆ. ಪುಕ್ಕಟೆ ಸಿಕ್ಕರೆ, ಅಥವಾ ಇಬ್ಬರ ಜಗಳದಲ್ಲಿ ಮೂರನೆಯವರಾಗಿ ಲಾಭ ದೊರೆತರೂ ಹಿಗ್ಗೋ ಹಿಗ್ಗು.
ಅದಕ್ಕೇ ಹೇಳಿದ್ದು, ನಮ್ ರಾಜಕಾರಣಿಗಳಿಗೆ ಸಿಎಂ ಡಿಸಿಎಂ ಸೀಟುಗಳು ಒಂಥರಾ ಸುಂದರ ವೇಶ್ಯೆ ಇದ್ದಂಗೆ. ಎಲ್ಲರಿಗೂ Simply irrestible..?