‘ಮುಂಗಾರು ಮಳೆ’ನಾ ಇಲ್ಲಾ ‘ಹನಿ ಹನಿ’ನಾ ನೀವೇ ನಿರ್ಧರಿಸಿ…!

      ಮೊನ್ನೆ ಮೊನ್ನೆ ಬಸವೇಶ್ವರ ನಗರದಿಂದ ಕಾರ್ಡ್ ರೋಡ್ ಕಡೆ ನಡಕೊಂಡು ಬರ್ತಾ ಇದ್ದೆ. ಎಡಗಡೆ ಒಂದು ಗೋಡೆಗೆ ಇತ್ತೀಚೆಗೆ ಬಿಡುಗಡೆಯಾದ ‘ಹನಿ ಹನಿ’ ಚಿತ್ರದ ಪೋಸ್ಟರ್ ಅಂಟಿಸಿದ್ದರು. ಗೋಡೆಗೆ ಒಬ್ಬಾತ ಕುಳಿತು ‘ಜಲಬಾಧಿತ’ ಜಲಧಾರೆ ಹರಿಸುತ್ತಿದ್ದ. ಆ ಗೋಡೆಯ ಮೇಲಿನ ಚಿತ್ರದಲ್ಲಿ ಹನಿ ಹನಿ ಚಿತ್ರದ ಹೀರೋ, ಹೀರೋಯಿನ್(ಪೂಜಾ ಗಾಂಧಿ) ಗಾಡಿ ಮೇಲೆ ಕುಂತಿರೋ ಚಿತ್ರ ಇತ್ತು. ನನಗೆ ಇನ್ನೊಂದು ವಿಷಯದ ಬಗ್ಗೆ ಸಮಜಾಯಿಷಿ ಬೇಕಿದೆ. ಅಲ್ಲಾ, ಎಲ್ಲಾ ಸಾಲದಾಗಿ ಈ ಚಿತ್ರ ಪ್ರಚಾರಕರು ಪೋಸ್ಟರ್‍ಗಳನ್ನ ‘ಸಾರ್ವಜನಿಕ ಬಯಲು ಶೌಚಾಲಯ’ಗಳ ಬಳಿಯಲ್ಲಿಯೇ ಯಾಕೆ ಹಚ್ಚುತಾರೆ ಅನ್ನೋದು ನನಗೆ ಕಾಡುವ ಪ್ರಶ್ನೆ. ಇಲ್ಲಾಂದ್ರೆ, ಅಲ್ಲಿ ಪೋಸ್ಟರ್ ಹಚ್ಚಿರುವ ಕಡೆ ಹೋಗಿಯೇ ಜಲಬಾಧೆ ತೀರಿಸಿಕೊಳ್ಳುತ್ತಲೇ ಪುಕ್ಕಟೆ ಮನೋರಂಜನೆ ಪಡೆಯುವ ‘ಜಲಬಾಧಿತರ’ ಇರಾದೆಯೋ..? ಗೊತ್ತಿಲ್ಲ..!

     ಆದರೆ, ಈ ಪ್ರಸಂಗದಲ್ಲಿ ಗೋಡೆ ಮೇಲಿರೋ ಪಾಪ ಪೂಜಾ ಗಾಂಧಿ, ಏನಂತ ಅಂದುಕೊಳ್ಳಬೇಕು ‘ಮುಂಗಾರು ಮಳೆ’ಯಾ ಇಲ್ಲಾ ‘ಹನಿ ಹನಿ’ಯಾ..? ಬಹುಷಃ ಮೊದಲನೆಯದಾದ ನಂತರ ಎರಡನೆಯದು ಅಂದುಕೊಂಡಿರಬಹುದು…!!!!

ಏಪ್ರಿಲ್ ಒಂದು : ನಮ್ಮೆಲ್ಲರ ದಿನ. ನಿಮಗೆಲ್ಲಾ ಶುಭಾಶಯಗಳು..!

      ಅಕ್ಟೋಬರ್ ತಿಂಗಳಿಂದಾ ‘ಕುರ್ಚಿ ವ್ಯವಹಾರ’ ನೆಡೆದೇ ಇದೆ. ನಮ್ಮ ನಗೆ ನಗಾರಿಯವರು ಚೆಡ್ಯೂರಪ್ಪ, ಜೋಕುಮಾರಸ್ವಾಮಿಯರನ್ನ ಏಪ್ರಿಲ್ ಒಂದರಂದು ಆರಾಧ್ಯ ದೈವಗಳನ್ನಾಗಿಸಿದ್ದಾರೆ. ಅವರು ಕುರ್ಚಿ ಜಗಳಗಳ ಬಗ್ಗೆ ಬರೆದಿದ್ದರು. ಹಾಗಾಗಿ ಒಂದು ಜೋಕು ನೆನಪಿಗೆ ಬರ್ತಾ ಇದೆ. ಬಹುಷಃ ಕೇಳಿರಲಾರಿರಿ ಎಂಬ ನಂಬುಗೆಯೊಂದಿಗೆ…

     ಒಮ್ಮೆ ಬಸ್ಸು ಹತ್ತುವಾಗ ತುಂಬಾ ರಷ್ ಇತ್ತು. ಹೊರಗಿನಿಂದ ಹತ್ತುವ ವ್ಯಕ್ತಿಗಳು ಕರ್ಚೀಫು, ಟವಲ್ಲುಗಳನ್ನು ಹಾಕಿ ತಮ್ಮ ಸೀಟ್‌ಗಳನ್ನು ಭದ್ರಪಡಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಹೀಗೇ ತಾನೆ ಅನಾಮತ್ತಾಗಿ, ಅನಧೀಕೃತವಾಗಿ ರಿಸರ್ವೇಷನ್ನು ಮಾಡೋಡು..?
          

     ಹೀಗೆ ಕರ್ಚೀಫು ಹಾಕಿ ಒಳಗೆ ತನ್ನ ಸೀಟನ್ನ ಒಬ್ಬಾತ ರಿಸರ್ವ್ ಮಾಡಿದಿನಿ ಅಂತ ಅಂದುಕೊಂದು ಒಳಗೆ ಹೋಗಿ ನೋಡಿದರೆ, ಒಬ್ಬ ಆಸಾಮಿ ಕರ್ಚೀಫು ಸರಿಸಿ ಕೂತಿದ್ದಾನೆ. ನಾನು ಕರ್ಚೀಫು ಮೊದಲು ಹಾಕಿದೀನಿ ಈ ಸೀಟು ನಂದು ಅಂದನಂತೆ ಕರ್ಚೀಫು ಹಾಕಿದವ. ಅದಕ್ಕೆ ಕುಂತಿರುವ ವ್ಯಕ್ತಿ ಏನಂದ ಗೊತ್ತಾ? ವಿಧಾನಸೌಧದ ಮೇಲೆ ನಾನೂ ಕರ್ಚೀಫು ಹಾಕ್ತೀನಿ. ವಿಧಾನ ಸೌಧ ನಂದಾಗುತ್ತಾ ಅಂದನಂತೆ. ತರ್ಕ ಅಂದರೆ ಹಿಂಗಿರಬೇಕಲ್ಲವಾ..!

ಪತ್ರಿಕಾ ಸಂಪಾದಕರಿಗೊಂದು ಅಭಿಮಾನಿಯೊಬ್ಬನ (ಅಭಿಮಾನದ ಪರಮಾವಧಿಯ) ಪತ್ರ..! – Ganesh K

    ಸಾರ್, ನಾನು ನಿಮ್ಮ ಪತ್ರಿಕೆಯ ಕಟ್ಟಾ ಅಭಿಮಾನಿ. ದಿನವೂ ತಪ್ಪದೇ ಒಂದಕ್ಷರವನ್ನೂ ಬಿಡದೇ ಓದುತ್ತೇನೆ. ನಾವು ನಮ್ಮ ಮನೆಯಲ್ಲಿ ನಿಮ್ಮ ಪತ್ರಿಕೆಯ ಮೇಲಿನ ಅಭಿಮಾನದಿಂದ, ಮನೆಕೆಲಸಗಳಲ್ಲಿ ಪೇಪರು ಬಳಸುವ ಹಲವಾರು ಸಂದರ್ಭಗಳಲ್ಲಿ ನಿಮ್ಮ ಪತ್ರಿಕೆಯನ್ನೇ ಬಳಸುತ್ತೇವೆ. ನಿಮ್ಮ ಪತ್ರಿಕೆ ನಿಜಕ್ಕೂ ಬಹುಪಯೋಗಿಯಾಗಿದೆ. ಸೊಪ್ಪು ಸೋಸುವಾಗ, ಬಿಸಿಲಿನಲ್ಲಿ ಕಾಳು-ಕಡಿ, ಒಣಮೆಣಸಿನಕಾಯಿ ಮುಂತಾದುವುಗಳನ್ನು ಒಣಗಿಸಲಿಕ್ಕೆ ನೆಲದ ಮೇಲೆ ಹಾಸಲು, ಎಣ್ಣೆ ಡಬ್ಬಿಯ ಮೇಲಿನ ಜಿಡ್ಡನ್ನು ಒರೆಸಲು, ಅಕಸ್ಮಾತ್ ಎಣ್ಣೆ ಅಡುಗೆ ಮಾಡುವಾಗ ನೆಲದ ಮೇಲೆ ಬಿದ್ದಾಗ ಒರೆಸಲು, ನೀರೊಲೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹೊತ್ತಿಸಲು, ಅಡುಗೆ ಮಾಡಲು ಒಲೆ ಹೊತ್ತಿಸಲಿಕ್ಕೆ, ಮನೆಯಲ್ಲಿ ಚಿಕ್ಕ ಮಕ್ಕಳು “ಚೀಚೀ” ಮಾಡಿದಾಗ ಒರೆಸಲಿಕ್ಕೆ, ಅಡುಗೆ ಮನೆಯ ಕಪಾಟುಗಳ ಮೇಲೆ ಹಾಸಲಿಕ್ಕೆ ಇವೆಲ್ಲವಕ್ಕೂ ನಾವು ನಿಮ್ಮ ಪತ್ರಿಕೆಯನ್ನೇ ಬಳಸುತ್ತೇವೆ. ಹೋಟೆಲುಗಳಲ್ಲಿ ಬೆಣ್ಣೆದೋಸೆ ತಿಂದಾದ ಮೇಲೆ ಕೈಯ ಜಿಡ್ಡೊರೆಸಿಕೊಳ್ಳಲಿಕ್ಕೆ ನಾನು ನಿಮ್ಮ ಪತ್ರಿಕೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಅಂಗಡಿಗಳಿಂದ ದಿನಸಿ ಸಾಮಾನುಗಳನ್ನು ತರುವಾಗ ನಿಮ್ಮ ಪತ್ರಿಕೆಯಲ್ಲಿಯೇ ಪೊಟ್ಟಣ ಕಟ್ಟಲು ಅಂಗಡಿಯಾತನಿಗೆ ಶಿಫ಼ಾರಸ್ಸು ಮಾಡುತ್ತೇನೆ. ಇನ್ನು ನಮ್ಮೂರಿನ ಹಳ್ಳಿಗಳಲ್ಲಿ, ಮಣ್ಣಿನ ಗೋಡೆಗಳಾದ್ದರಿಂದ ಮಣ್ಣು ಉದುರದಂತೆ, ಗೋಡೆಗಳಿಗೆ ಮತ್ತು ಮೇಲ್ಛಾವಣಿಗಳಿಗೆ ನಿಮ್ಮ ಪತ್ರಿಕೆಯನ್ನೇ ಅಂಟಿಸುವಂತೆ ಸಲಹೆ ಮಾಡುತ್ತೇನೆ.

    ಯಾವಾಗಲೇ ಆಗಲಿ, ಟ್ರೈನು ಪ್ರಯಾಣ ಮಾಡುವಾಗ ನಿಮ್ಮ ಪತ್ರಿಕೆಯನ್ನೇ ಖರೀದಿಸುತ್ತೇನೆ. ಪ್ಯಾಸೆಂಜರ್ ಟ್ರೈನುಗಳಲ್ಲಿ ಕುರ್ಚಿ ಸೀಟುಗಳು ಸಿಗುವುದೇ ಅಪರೂಪದಲ್ಲಿ ಅಪರೂಪ. ಹಾಗಾಗಿ ನಿಮ್ಮ ಪತ್ರಿಕೆಯನ್ನೇ ನೆಲದ ಮೇಳೆ ಹಾಸಿ ಕುಳಿತುಕೊಳ್ಳಲಿಕ್ಕೆ, ಮಲಗಲಿಕ್ಕೆ ಬಳಸುತ್ತೇವೆ.

    ಇನ್ನು ಪರಿವಾರ ಸಮೇತರಾಗಿ ಪ್ರಯಾಣ ಹೊರಟಾಗ, ನಿಮ್ಮ ಪತ್ರಿಕೆಯನ್ನು ಓದಿದ್ದಾದ ಮೇಲೆ, ಅದರಲ್ಲಿಯೇ ತಂದ ಖಾರ-ಮಂಡಕ್ಕಿ, ಕುರುಕಲು ತಿಂಡಿಗಳನ್ನು ತಿಂದುಬಿಡುತ್ತೇವೆ.(ತಿಂದು ಬಿಸಾಡುತ್ತೇವೆ ಅಂದರೆ ನಿಮಗೆ ಬೇಸರವಾಗಬಹುದು. ಆದರೆ ಅದರೆಲ್ಲದರ ಮುಂಚೆ ನಿಮ್ಮ ಪತ್ರಿಕೆಯನ್ನು ಒದಿದ್ದಾದ ಮೇಲೆ ತಾನೇ ಅದು ಬಹುಪಯೋಗಿ ಕಾರ್ಯಕ್ರಮಗಳಿಗೆ ಬಳಕೆಯಾಗುವುದು? ಹಾಗಾಗಿ ತಾವೇನು ಬೇಸರಿಸಿಕೊಳ್ಳಬೇಕಿಲ್ಲ. ಕೊಂಡ ಹೊಸ ಪತ್ರಿಕೆ ಕೇವಲ ಓದಲಿಕ್ಕೆ ಮಾತ್ರ ಉಪಯೋಗಿಸಲ್ಪಡುತ್ತದೆ. ಆನಂತರ ತಾನೇ ಅದರ ದಶಾವತಾರದ ಅವತರಣಿಕೆ ಶುರುವಾಗುವುದು..?)

    ಪತ್ರಿಕೆಗಳು ಸಮಾಜವನ್ನು ಶುದ್ಧವಾಗಿಡುವಂಥವುಗಳು ಎಂಬ ಮಾತಿದೆ. ಹಾಗಾಗಿ ಮನೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳಿಗೆ, ಪ್ರಯಾಣದ ಅವಧಿಯಲ್ಲಿ ರೈಲಿನಲ್ಲಿ ನೆಲದ ಮೇಲೆ ಹಾಸಿ ಕೂರಲು ತುಂಬಾ ಉಪಕಾರಿಯಾಗಿ ಪರಿಣಮಿಸಿ ನಮ್ಮ ಬಟ್ಟೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿಮ್ಮ ಪತ್ರಿಕೆ “ಸಹಕರಿಸಿದೆ”. ನಿಮ್ಮ ಪತ್ರಿಕೆ ನಿಜಕ್ಕೂ “ಸ್ವಚ್ಛತಾವಾಹಿನಿ”..!

    ಸಮಾಜವನ್ನು, ಮನೆ-ಮನೆಗಳನ್ನು ಸ್ವಚ್ಛವಾಗಿಡಲು ಹೆಣಗುವ ನಿಮ್ಮ ಪತ್ರಿಕೆಯೇ ಕೆಲವೊಮ್ಮೆ ಸ್ವಚ್ಛತಾ ಸಮಸ್ಯೆಯಿಂದ ನರಳಿ ಧೂಳು ಹಿಡಿಯುತ್ತವೆ. ವಿಪರ್ಯಾಸವೆಂದರೆ ಇತ್ತೀಚಿಗೆ ಬರುವ ನಿಮ್ಮ ಪತ್ರಿಕೆಯ ಹೊಸ ಸಂಚಿಕೆಗಳೇ ಹಳೇ ಸಂಚಿಕೆಗಳ ಧೂಳೊರೆಸಲು ವಿಫಲವಾಗುತ್ತವೆ. ಆ ಸಂದರ್ಭ ಒದಗಿ ಬಂದಾಗ ಹಳೆಯ ಪೇಪರುಗಳನ್ನೆಲ್ಲಾ ಗಂಟು ಕಟ್ಟಿ ಗುಜರಿಯವನಿಗೆ ಮಾರಿಬಿಡುತ್ತೇನೆ.

    ನಿಮ್ಮ ಪತ್ರಿಕೆಗೆ ಸಂಕಷ್ಟದ ಪರಿಸ್ಥಿತಿ ಎದುರಾಗುವುದು ಅಲ್ಲೇ. ಇಂಗ್ಳೀಷ್ ಪತ್ರಿಕೆಗಳಿಗೆ ಜಾಸ್ತಿಬೆಲೆ. ಜೊತೆಗೆ ಇಂಗ್ಳೀಷ್ ಪತ್ರಿಕೆಗಳು ದಿನವೂ ದಂಡಿಗಟ್ಟಲೇ ಪೇಜುಗಳನ್ನು ಕೊಟ್ಟಿರುತ್ತವೆ. ಇಂಗ್ಳೀಷ್ ಪತ್ರಿಕೆಗಳಿಗಿರುವ ಬೆಲೆ ಕನ್ನಡ ಪತ್ರಿಕೆಗಳಿಗೇಕಿಲ್ಲ? ಒಂದು ಕೇಜಿ ಪೇಪರ್ ಗುಜರಿಗೆ ಹಾಕಿದರೆ ಒಂದು ದಿನದ ಪತ್ರಿಕೆಯ ಬೆಲೆ ಕೂಡಾ ಇರೋದಿಲ್ಲ. ಈ ಅನ್ಯಾಯವನ್ನು ಸಹಿಸಿಕೊಂಡು ನಿಮ್ಮ ಪತ್ರಿಕೆ ಗುಜರಿಯವನ ಗಾಡಿ ಏರುತ್ತದೆ. ಅನ್ಯಾಯದ ವಿರುದ್ಧ ದನಿಯೆತ್ತಲು ಪತ್ರಿಕೆಯನ್ನು ಬಳಸಿಕೊಳ್ಳುವ ತಾವು ತಮ್ಮ ಪತ್ರಿಕೆಗೆ ದಯಮಾಡಿ ನ್ಯಾಯ ಕೊಡಿಸಿ(ಜೊತೆಗೆ ನಮಗೂ..!)

    ಆದರೂ, ಆದಿಯಿಂದ ಅಂತ್ಯದವರೆಗೂ ಬಹುಪಯೋಗಿಯಾಗಿ, ಸಾರ್ಥಕ್ಯದ ಜೀವನ ನೆಡೆಸಿ, ಗತ್ತು-ಗಮ್ಮತ್ತು ಮೆರೆದು, ಸುದ್ದಿ ಮನೆಯಿಂದ ರದ್ದಿಮನೆಗೆ ತೆರಳುವ ನಿಮ್ಮ ಪತ್ರಿಕೆಗೆ ಮತ್ತು ಪತ್ರಿಕೆಯ ಸೃಷ್ಟಿಕರ್ತರಿಗೆ, ಪತ್ರಕರ್ತರಿಗೆ ಮತ್ತು ತಮಗೆ ಅನಂತಾನಂತ ಧನ್ಯವಾದಗಳು.