ಲೋಕಪಾಲ್ – ಯಾರದೋ ಹೆಸರು ಯಾರದೋ ಬಸರು ಅನ್ನೋ ಹಂಗಾಯಿತು ಇದು.

ಯಾರದೋ ಹೆಸರು ಯಾರದೋ ಬಸರು ಅನ್ನೋ ಹಂಗಾಯಿತು ಇದು.
ಅಣ್ಣಾ ಹಜಾರೆ ಒಳ್ಳೇ ವ್ಯಕ್ತಿ. ಆದರೆ, ಅವರ ಒಳ್ಳೇತನವನ್ನ ಯಾರು ಹೆಂಗೆ ಬೇಕಾದರೂ ಬಳಸಬಹುದು ಅನ್ನುವುದಕ್ಕೆ ನಿನ್ನೆಯ ರಾಜ್ಯ ಸಭೆ, ಇವತ್ತಿನ ಲೋಕಸಭೆ ಮಸೂದೆ ಮಂಡನೆ, ನಂತರ ಹಜಾರೆಯವರ ಉಪವಾಸ ಅಂತ್ಯ.. ಇವೆಲ್ಲ ಸನ್ನಿವೇಶಗಳು ಪುಷ್ಟಿಕರಿಸುತ್ತವೆ.

ಅಣ್ಣಾ ಹಜಾರೆಯವರನ್ನ ಜೈಲಿಗೆ ತಳ್ಳಿದ್ದನ್ನ, ರಾಮದೇವ ಬಾಬಾರನ್ನ ವೇದಿಕೆಯ ಮೇಲೆ ಅಟ್ಟಾಡಿಸಿಕೊಂಡು ಹೋಗಿದ್ದನ್ನ ನೆನಿಸಿಕೊಳ್ಳಿ. ಎಲ್ಲಿದ್ದ ರಾಹುಲ ಗಾಂಧೀ? ಬಾಯಿ ಸತ್ತು ಹೋಗಿತ್ತಾ ಅವತ್ತು? ಮನೀಷ್ ತಿವಾರಿ “ಅಡಿಯಿಂದ ಮುಡಿಯವರೆಗೆ ನೀನೇ ಭ್ರಷ್ಟ” ಅಂತಾ ಅಣ್ಣಾ ಹಜಾರೆಯವರನ್ನೇ ಅವಮಾನಿಸಿದಾಗ ಎಲ್ಲಿ ಹೋಗಿದ್ದ ರಾಹುಲ ಗಾಂಧೀ? ನಿನ್ನೆ ಅಣ್ಣಾ ಹಜಾರೆಯವರು ರಾಹುಲಗಾಂಧಿಯನ್ನ ಕೊಂಡಾಡಿದ್ದೇನು ರಾಹುಲಗಾಂಧೀ ಅಣ್ಣಾ ಹಜಾರೆಯವರನ್ನ ಕೊಂಡಾಡಿದ್ದೇನು. ಇವೆಲ್ಲ ಕನಸಿನ ಚಿತ್ರಗಳಂತೆ ಕಣ್ಣ ಮುಂದೆ ಸರಿದು ಹೋದವು.

ಅಣ್ಣಾ ಹಜಾರೆಯವರು ಇಲ್ಲಿಯವರೆಗೂ ರಾಲೇಗಣ ಸಿದ್ಧಿಯಲ್ಲೇ ಉಪವಾಸ ಸತ್ಯಾಗ್ರಹಗಳನ್ನ ಮಾಡಿಕೊಂಡಿದ್ದರೆ ದೇಶಾದ್ಯಂತ ಸುದ್ದಿಯಾಗುತ್ತಿತ್ತೇ? ಯುವಕರನ್ನ ಸಂಘಟಿಸಲಾಗುತ್ತಿತ್ತೇ? ಸರ್ಕಾರದ ಮೇಲೆ ಒತ್ತಡ ನಿರ್ಮಿಸಲಾಗುತ್ತಿತ್ತೇ? ಅರವಿಂದ ಕೇಜ್ರಿವಾಲ್ ಅನ್ನೋ ವ್ಯಕ್ತಿ ಹಜಾರೆಯವರ ಹಿಂದಿನ ಎಲ್ಲ ಉಪವಾಸ ಸತ್ಯಾಗ್ರಹಗಳಲ್ಲಿ ಹಿಂದೆ ನಿಂತು ಸಂಘಟಿಸಿ, ದೇಶದಲ್ಲಿ ಸಂಚಲನ ಮೂಡಿಸಲಿಲ್ಲವೇ?

ಸೌಜನ್ಯಕ್ಕಾದರೂ ಕೇಜ್ರಿವಾಲ್ ಹೆಸರು ಹೇಳಿದ್ದರೂ ಅಣ್ಣಾ ಹಜಾರೆ ಇನ್ನೂ ದೊಡ್ಡವರಾಗುತ್ತಿದ್ದರು. ನಿಷ್ಪಕ್ಷಪಾತಿ ಅನ್ನಿಸಿಕೊಳ್ಳುತ್ತಿದ್ದರು.

ತನಗೂ ಈ ಕೃತ್ಯಗಳಿಗೂ ಸಂಬಂಧವಿಲ್ಲದಂತೆ ಕುಂತವನು ಭವ್ಯ ಭಾರತದ ಅತಿ ಹೇತ್ಲಾಂಡಿ ಪ್ರಧಾನಿ ಡಾ|ಮನಮೋಹನ್ ಸಿಂಗ್..!

  ಹಿಂದಿನ ಬರಹದಲ್ಲಿ ರಾಮದೇವ್ ಬಾಬಾ ಈ ಸತ್ಯಾಗ್ರಹದ ನಂತರ ಪೊಲಿಟಿಕಲಿ ಸ್ಟ್ರಾಂಗ್ ಆಗಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದೆ. ಬಹುತೇಕ ಹಾಗೆಯೇ ಆಗಿದೆ. ಸುಖಾ ಸುಮ್ಮನೆ ಕೇಂದ್ರ ಸರ್ಕಾರ ತನ್ನ ಕಾಲಮೇಲೆ, ತಲೆಮೇಲೆ, ಹಣೆಬರಹದ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಿದೆ.

Manamohan singh

Manamohan Singh - Courtesy Topnews.in

ಮಾನವೀಯ ಮೌಲ್ಯ ಇಟ್ಟುಕೊಂಡ ಯಾವ ವ್ಯಕ್ತಿಯೂ ಕೂಡಾ ಬಾಬಾ ಮತ್ತು ಅವರ ಸಂಗಡಿಗರ ಮೇಲಿನ ರಾತ್ರಿ ಧಾಳಿಯನ್ನ ಸಮರ್ಥಿಸಲಿಕ್ಕೆ ಸಾಧ್ಯವಿಲ್ಲ, ಕಾಂಗೇಸ್ಸೊಂದನ್ನು ಬಿಟ್ಟು..!  ಬಾಬಾ ರಾಮದೇವ್ ಗೆ ಭಾರೀ ಅನುಕಂಪದ ಅಲೆಯನ್ನ ಸೃಷ್ಟಿಸಿಕೊಡುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಹಿರಿದು. ಏನೋ ಮಾಡಲು ಹೋಗಿ ಚಡ್ಡಿಯಲ್ಲಿ ಹುಳ ಬಿಟ್ಟುಕೊಂಡು ಕಡಿಸಿಕೊಳ್ಳುತ್ತಿರುವ ಅನುಭವ ಕೇಂದ್ರ ಸರ್ಕಾರಕ್ಕೆ ಮತ್ತು ಕಾಂಗ್ರೇಸ್ ಗೆ. ರಾತ್ರೋ ರಾತ್ರಿ ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದ ಹಿರಿಯ ನಾಗರೀಕರಿರುವ ಸಭಾಂಗಣಕ್ಕೆ ನುಗ್ಗಿ ಹಲ್ಲೆ, ಲಾಠಿ ಬೀಸೋದು ಇದು ಯಾವ ಜಮಾನ ಅನ್ನೋದು ಅನುಮಾನ ಬರುತ್ತೆ. ಶಾಂತಿಯುತ ಸಭೆಗೆ ಪೊಲೀಸರನ್ನ ನುಗ್ಗಿಸಿ, ಅಶ್ರು ವಾಯು ಸೆಲ್ ಗಳನ್ನ ಸಿಡಿಸುವುದನ್ನ ಕಂಡಾಗ ಕಾರ್ಗಿಲ್ ಯುದ್ಧ ಕಣದಲ್ಲಿ ಯೋಧರು ಶೆಲ್ ಧಾಳಿ ನೆಡೆಸುವುದು ನೆನಪಿಗೆ ಬಂತು. ಆದರೆ, ತನ್ನದೇ ದೇಶದ ಮುಗ್ಧ ಪ್ರಜೆಗಳ ಮೇಲೆ ಅಪ್ರಚೋದಿತ ಧಾಳಿ ಮಾಡುವ ಸರ್ಕಾರ ಮುಂದೆ ಎಂದಿಗೂ ಪ್ರಜೆಗಳ ನಂಬಿಕೆಗಳನ್ನ ಗಳಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ.

   

Ram dev baba satyagraha - Midnight arrest

Ram dev baba satyagraha - Crushed by Center govt - Image courtesy - Deccan Herald

ಯಾವ ಪೊಲೀಸ್ ಆಯುಕ್ತನೂ ಇದನ್ನ ಸಮರ್ಥಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ರಾಮದೇವ್ ಬಾಬಾ ಬರೀ ಯೋಗ ಕ್ಲಾಸ್ ನಡೆಸಲಿಕ್ಕೆ ಅನುಮತಿ ತೆಗೆದುಕೊಂಡರು. ಸತ್ಯಾಗ್ರಹ ಮಾಡಲಿಕ್ಕಲ್ಲ. ಆಯ್ತು. ಮಾಧ್ಯಮಗಳ ಮೂಲಕ ಅವರನ್ನ ಜಂತರ್ ಮಂತರ್ ಗೆ ತೆರಳಿ ಅಂತಾ ಮನವಿ ಮಾಡಬಹುದಿತ್ತಲ್ಲ? ನೋಟಿಸ್ ಕೊಡಬಹುದಿತ್ತಲ್ಲ? ಕಾನೂನು ಪ್ರಕಾರ ಸರಿಯಲ್ಲ ಅನ್ನಬಹುದಿತ್ತಲ್ಲ? ಇವ್ಯಾವನ್ನೂ ಮಾಡದೇ ತನ್ನ ರಾಜಕೀಯ ಕಾರಣಗಳಿಗೋಸ್ಕರ ಬಾಬಾ ಮತ್ತು ಸಾವಿರಾರು ಜನರನ್ನ ಎತ್ತಂಗಡಿ ಮಾಡಿಸಿದ್ದು ಜಲಿಯನ್ ವಾಲಾಬಾಗ್ ನ ಜನರಲ್ ಡಯರ್ ನ ಬರ್ಬರತೆಗೆ ಸಮ.

Soniya gandhi

Soniya Gandhi - Image courtesy - nilacharal.com


    ಬೆಳ್ಳಂ ಬೆಳಗ್ಗೆ ದಿಗ್ವಿಜಯ್ ಸಿಂಗ್ ಎಂಬ ಅರೆ ಹುಚ್ಚ, ಅವಕಾಶವಾದಿ ರಾಜಕಾರಣಿ ಈ ಪೊಲೀಸರ ಹಲ್ಲೆಯನ್ನ, ಲಾಠಿ ಬೀಸಿದ್ದನ್ನ ಸಮರ್ಥಿಸಿಕೊಳ್ಳುತ್ತಿರುವುದನ್ನ ನೆನಪಿಸಿಕೊಂಡರೆ ಹೇಸಿಗೆ ಹುಟ್ಟಿಸುತ್ತದೆ. ಇಂಥಾ ರಾಜಕಾರಣಿಗಳನ್ನ ಈ ಪ್ರಜಾಪ್ರಭುತ್ವ ಇನ್ನೂ ಉಳಿಸಿದೆಯಲ್ಲಾ ಅಂತಾ ಪ್ರಜಾಪ್ರಭುತ್ವದ ಬಗ್ಗೆ ಸಿಟ್ಟೂ ಹುಟ್ಟುತ್ತದೆ. ಮತಾಂಧ ಲಾಡೆನ್ ನ್ನ “ಲಾಡೆನ್ ಜೀ” ಅಂತಾನೆ. ಬಾಬಾ ರಾಮದೇವನನ್ನ “ಥಗ್”, “ಚೀಟ್” ಅಂತಾನೆ. ಈ ಮೋಸಗಾರನ ಮಡಿಲಲ್ಲೇ ತಾನೇ ಪ್ರಣಬ್ ಮುಖರ್ಜಿ, ಕಪಿಲ್ ಸಿಬಲ್ ಎಂಬ ಮುಂದಿನ ಸಾಲಿನ ಕಾಂಗ್ರೇಸ್ ನಾಯಕರು ವಾರಗಟ್ಟಲೇ ಇದ್ದುದು? ಮೋಸಗಾರನ ಜೊತೆ “ಡೀಲ್” ಮಾಡಿಕೊಳ್ಳುವ ಕೇಂದ್ರ ಸರ್ಕಾರ ಮೋಸಗಾರನಲ್ಲವಾ?

Ram dev baba addressing press conference after reaching Dehradun

Ram dev baba addressing press conference after reaching Dehradun - Image courtesy news24online.com

ಇದೆಲ್ಲಾ ಒಂದೆಡೆ ಬೆಳಗ್ಗೆ ನಡೆಯುತ್ತಿದ್ದರೆ, ತನಗೂ ಈ ಕೃತ್ಯಗಳಿಗೂ ಸಂಬಂಧವಿಲ್ಲದಂತೆ ಸೋನಿಯಾ ಮೇಡಂ ಆರ್ಡರ್ ಗಾಗಿ ಕಾದು ಕುಳಿತವನು ಭವ್ಯ ಭಾರತದ ಅತಿ ಹೇತ್ಲಾಂಡಿ ಪ್ರಧಾನಿ ಡಾ|ಮನಮೋಹನ್ ಸಿಂಗ್..! ಸಿಖ್ ಧರ್ಮಕ್ಕೇ ಅವಮಾನ ಈ ಮನಮೋಹನ ಸಿಂಗ್. ಸಿಖ್ಖರೆಂದರೆ ಧೈರ್ಯ, ನಿಷ್ಟುರತೆ, ಪ್ರಾಮಾಣಿಕತೆ ಇವೆಲ್ಲವುಗಳ ಸಾಕಾರ ಮೂರ್ತಿಗಳು. ಸಿಖ್ಖ್ ಧರ್ಮಕ್ಕೇ ಅವಮಾನ ಈತನಂತೆ ಇರುವವರು. ಕೆಲಸಕ್ಕೆ ಬಾರದ ವ್ಯಕ್ತಿಯನ್ನ “ಒಳ್ಳೆಯವನು” ಅಂತಾ ಪೂಜಿಸಲಿಕ್ಕೆ ನಮಗೇನೂ ಹುಚ್ಚಿಡಿದಿಲ್ಲ. ಆರ್ಥಿಕ ತಜ್ಞ, ಅಭಿವೃದ್ಧಿಯ ಹರಿಕಾರ, ಜಾಗತೀಕರಣದ ಬೇರು ನೆಟ್ಟಾತ ಎಲ್ಲ ಸರಿ. ಆದರೆ, ಪ್ರಧಾನಿಯಾಗಿ ಅಟ್ಟರ್ ಫ್ಲಾಪ್. ಇಂಥಾ ಬಾಯಿ ಸತ್ತ ಪ್ರಧಾನಿಯನ್ನ ಪಡೆದದ್ದು ಭಾರತದ ದುರ್ದೈವ. ಅದಕ್ಕೇ ಬಹುವಚನ ಬೇಡವೆನಿಸಿದೆ.

    ಇನ್ನು “ಟೈಮ್ಸ್ ನೌ” ಚಾನಲ್ ಗೆ ಜಲಿಯನ್ ವಾಲಾಬಾಗ್ ಚಿತ್ರಣ ನೆನಪಾಗುವುದಿಲ್ಲ. ಬ್ಲೂ ಸ್ಟಾರ್ ಆಪರೇಷನ್ ನೆನಪಾಗುತ್ತೆ..! ರಾಮದೇವ್ ಬಾಬಾನನ್ನ ಹೊತ್ತೊಯ್ದು ಮತ್ತೆ ಡೆಹರಾಡೂನ್ ಗೆ ಬಿಟ್ಟು ಬಂದ ದಿನ ಎಲ್ಲ ಮಾಧ್ಯಮಗಳಲ್ಲಿ ಬಾಬಾ ಮೇಲಿನ ಹಲ್ಲೆ ಬಗ್ಗೆ ಚರ್ಚೆ. ಆ ದಿನ ಎಲ್ಲ ಮಾಧ್ಯಮಗಳಿಗೂ ಈ ಸನ್ನಿವೇಸವನ್ನ ಬೇರೆ ಬೇರೆ ಡೈಮೆನ್ಷನ್ ಗಳಲ್ಲಿ ನೋಡುವ ತವಕ. ಟೈಮ್ಸ್ ನೌ ಚಾನಲ್ ನಲ್ಲಿ ಸಂಜೆ ಬ್ಲೂ ಸ್ಟಾರ್ ಆಪರೇಶನ್ ಬಗ್ಗೆ ಒಂದು ಕಾರ್ಯ ಕ್ರಮ ಪ್ರಸಾರವಾಯಿತು. ಎತ್ತಣ ಬಾಬಾ ಮೇಲಿನ ಹಲ್ಲೆ ಎತ್ತಣ ಬ್ಲೂಸ್ಟಾರು? ಇಲ್ಲಿ ಒಂದು ಸೂಕ್ಷ್ಮ ವಿಷಯವನ್ನ ಗಮನಿಸಬೇಕು.

೧. ಬ್ಲೂ ಸ್ಟಾರ್ ಆಪರೇಶನ್ ನಡೆದದ್ದು ಪ್ರತ್ಯೇಕತೆಯನ್ನ ಹತ್ತಿಕ್ಕಲಿಕ್ಕೆ. ಧಾರ್ಮಿಕವಾಗಿ ಅದು ಅನ್ ಎಥಿಕಲ್. ಪೊಲಿಟಿಕಲಿ ಕರಕ್ಟ್. ಇಡೀ ಪಂಜಾಬೇ ಸಿಡಿದು ಹೋಗುವಂತಿದ್ದ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ದಿಟ್ಟ ನಿರ್ಧಾರ ತೆಗೆದುಕೊಂಡರು. ಇಲ್ಲಿ ಬಹುತೇಕ ಜನ ವ್ಯವಸ್ಥೆಯನ್ನ ಬೆಂಬಲಿಸುತ್ತಾರೆ. ಪ್ರತಿಭಟನಾಕಾರರನ್ನಾಗಲೀ ಪ್ರತ್ಯೇಕತಾವಾದಿಗಳನ್ನಾಗಲೀ ಅಲ್ಲ.
೨. ಜನರಲ್ ಡಯರ್ ಅಮೃತಸರದ ಬಳಿಯ ಜಲಿಯನ್ ವಾಲಾಬಾಗ್ ನಲ್ಲಿ ೧೯೧೯ರಲ್ಲಿ ಒಂದು enclosed area ನಲ್ಲಿ ಶಾಂತಿಯುತ ಸಭೆ ನಡೆಸುತ್ತಿದ್ದ ಜನರ ಗುಂಪಿನ ಮೇಲೆ ಏಕಾಏಕಿ ಗುಂಡಿನ ಧಾಳಿ ನಡೆಸಿದ. ಒಂದು ವ್ಯವಸ್ಥಿತ, ಅಮಾನವೀಯ, ಬರ್ಬರ ಧಾಳಿ ನಡೆಸಿ ಜನರ ಸಾವು ನೋವಿಗೆ ಕಾರಣನಾದ. ಇದು ವ್ಯವಸ್ಥೆ ನಡೆಸಿದ ಕೃತ್ಯ. ಇದನ್ನ ಯಾವ ಭಾರತೀಯನೂ ಬೆಂಬಲಿಸುವುದಿಲ್ಲ.

ಇನ್ನು ಟೈಮ್ಸ್ ನೌ ಜನರಿಗೆ ನೆನಪಿಸಿದ್ದು ಅಮಾನವೀಯತೆಯನ್ನಲ್ಲ. System ಒಂದು ತುರ್ತು ಅಗತ್ಯಕ್ಕೆ ಕೈಗೊಂಡ ಕ್ರಮವನ್ನ ಮಾಧ್ಯಮವೊಂದು ಸಮರ್ಥಿಸುವಂತಿತ್ತು.

ಇದೆಲ್ಲಾ ಆಯ್ತು ಸರಿ. ಜನರೆಲ್ಲಾ ಜನರಲ್ ಡಯರನನ್ನ, ಜಲಿಯನ್ ವಾಲಾಬಾಗ್ ನ ನೆನಪಿಸಿಕೊಂಡರೆ, ಮಾಧ್ಯಮಗಳಿಗೆ ಬ್ಲೂ ಸ್ಟಾರ್ ಆಪರೇಶನ್ ನೆನಪಾದದ್ದು ದುರಂತ.

ಮುಂದೇನು?
೧. ರಾಮದೇವ್ ಬಾಬಾ ಹೋರಾಟವನ್ನ ಇನ್ನೂ ತೀವ್ರಗೊಳಿಸಬಹುದು.
೨. ರಾಮದೇವ್ ಬಾಬಾ ಮೇಲೆ ಇಲ್ಲ ಸಲ್ಲದ ಕೇಸುಗಳನ್ನ ಜಡಿದು ಒಂದೆಡೆ ಕೂಡಿಸಲಿಕ್ಕೆ, ಇಮೇಜ್ ಹಾಳು ಮಾಡಲಿಕ್ಕೆ, ತಾನು ಪ್ರತಿಪಾದಿಸಿದ “ಮೋಸಗಾರ” ಇಮೇಜಿಗೆ ಹೊಸ ಹೊಸ ಕಾರಣಗಳನ್ನ ಹುಡುಕಬಹುದು. ರಾಮದೇವ್ ಬಾಬಾನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸರ್ವ ಪ್ರಯತ್ನಗಳನ್ನೂ ಮಾಡುತ್ತದೆ.
೩. ಬಾಬಾನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಪ್ರತಿಯಾಗಿ ಇನ್ನೋಂದು ಆಂದೋಲನ ನಡೆಸಬಹುದು. ಆದರೆ, ಸಧ್ಯಕ್ಕೆ ಅಂಥಾ ಪ್ರಬಲ ಕಾರಣಗಳ್ಯಾವೂ ಪ್ರತಿ ಆಂದೋಲನಕ್ಕೆ ಕಾರಣಗಳಿಲ್ಲ. ಅಂಥದ್ದನ್ನ ಮಾಡಿದರೂ ಜನ ಚಪ್ಪಲಿ ಕೈಗೆತ್ತಿಕೊಳ್ತಾರೆ.
೪. ಇದರ ಜೊತೆ ಅಣ್ಣಾ ಹಜಾರೆ ಕೂಡಾ ಪ್ರತಿಭಟನೆ, ಸತ್ಯಾಗ್ರಹ ಶುರು ಮಾಡಿಕೊಂಡರೆ, ಅವರನ್ನ ಏನಾದ್ರೂ ಮಾಡಿ ತಡೆದು,  ಜನಲೋಕಪಾಲ್ ಬಿಲ್ ನ ಡ್ರಾಫ್ಟ್ ಕಾಪಿ ತನಗೆ ಬೇಕಾಗಿರುವಂತೆ ರೂಪಿಸಿಕೊಳ್ಳುತ್ತದೆ.
೫. ಇದೆಲ್ಲಾ ನಡೆಯುವಷ್ಟರ ಹೊತ್ತಿಗೆ ರಾಮದೇವ್ ಬಾಬಾನ ಹಣ ಕಪ್ಪು ಹಣದಿಂದಲೇ ಬಂದದ್ದು ಅನ್ನೋ ವಾದವನ್ನ ಮಂಡಿಸಲಿಕ್ಕೆ ಶುರು ಮಾಡುತ್ತದೆ. ಹಾಗಾಗಿ ಕಪ್ಪು ಹಣದ ವಿರುದ್ಧ ಹೋರಾಡಲಿಕ್ಕೆ ನೈತಿಕ ಹಕ್ಕಿಲ್ಲ ಅನ್ನುತ್ತದೆ.
೬. ರಾಮದೇವ ಬಾಬಾನನ್ನ ಯಾವುದಾದರೂ ಹಗರಣಗಳಲ್ಲಿ ಸಿಲುಕಿಸಲಿಕ್ಕೆ ಶತಾಯುಗತಾಯ ಪ್ರಯತ್ನ ನಡೆಸುತ್ತದೆ. ನಿತ್ಯಾನಂದನ ರಾಸಲೀಲೆ ಥರದವಾದರೆ, ಜನ ಮನರಂಜನೆ ಕೂಡಾ ಅನುಭವಿಸುತ್ತಾರೆ ಮತ್ತು ಕಪ್ಪು ಹಣ, ಭ್ರಷ್ಟಾಚಾರವನ್ನೂ ಮರೆತುಬಿಡುತ್ತಾರೆ.
೭. ಈಗ ವಿಶ್ವಾಸ ಕಳೆದುಕೊಂಡಿರುವುದು ಕೇಂದ್ರ ಸರಕಾರ. ಹಾಗಾಗಿ ಕೇಂದ್ರ ಸರಕಾರ ಏನೇ ಗಿಮಿಕ್ ಗಳನ್ನ ಮಾಡಲಿಕ್ಕೆ ಹೊರಟರೂ ಜನ ಅನುಮಾನದಿಂದ ನೋಡುತ್ತರೆ, ಜೊತೆಗೆ ರಾಮದೇವ ಬಾಬಾನ ಮೇಲಿನ ಅನುಕಂಪದ ಅಲೆ ಕೂಡಾ ಸಾಥ್ ಕೊಡುತ್ತದೆ.

ಭ್ರಷ್ಟಾಚಾರದ ವಿರುದ್ದ ಹೋರಾಟದಲ್ಲಿ ನಾವು ರಾಮದೇವ ಬಾಬಾನನ್ನ ಬೆಂಬಲಿಸುವ ಸಂದಿಗ್ಥತೆಯಲ್ಲಿದ್ದೇವೆ.

ಸಂಪಾದಕೀಯರವರು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.

ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ!

ಇದಕ್ಕೆ ಇನ್ನೊಂದು ಮಜಲು ಇದೆ. ಅದನ್ನ ನೋಡುವ ಪ್ರಯತ್ನವಿದು.

ನಾವು ಪ್ರಜಾಪ್ರಭುತ್ವದ, ಪ್ರಜ್ಞಾವಂತಿಕೆಯ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ.

ರಾಮದೇವ ಬಾಬಾ ಕೂಡಾ ಸಾಯಿಬಾಬಾನಂತೆ ಹೈಪ್‍ಗಳನ್ನೇ ಸೃಷ್ಟಿ ಮಾಡಿ ಜನರನ್ನ ಮರಳು ಮಾಡುತ್ತಿರುವುದು. ರೊಕ್ಕ ಮಾಡುತ್ತಿರುವುದು.

ಆದರೆ, ಒಂದು ಪ್ರಬಲವಾದ ಅನುಮಾನವೂ ಕಾಡುತ್ತದೆ. ನಮ್ಮ ಜನ ಹಂಗೇ ಕೇಳಿದರೆ ರೊಕ್ಕ ಬಿಚ್ಚಲ್ಲ, ರೊಕ್ಕ ಬಿಚ್ಚುವುದಿರಲಿ ತಿರುಗಿ ಮೂಸಿ ನೋಡುವುದೂ ಇಲ್ಲ. ದೈವತ್ವ ಅನ್ನೋದು ಅಷ್ಟರ ಮಟ್ಟಿಗೆ ನಮ್ಮ ದೇಶವನ್ನ ಆವರಿಸಿಬಿಟ್ಟಿದೆ. ದೇವಮಾನವ ಬೂದಿಕೊಡ್ತಾನೆ, ಕ್ಯಾನ್ಸರ್ ವಾಸಿಮಾಡ್ತಾನೆ, ಕಂಡ ಕಂಡ ರೋಗಗಳನ್ನ ವಾಸಿಮಾಡ್ತಾನೆ ಅಂತಾ ಪ್ರಚಾರ ಸಿಕ್ಬಿಟ್ರೆ ಸಾಕು ಜನ ಮುಗಿ ಬೀಳ್ತಾರೆ. ಅದಕ್ಕೆ ವಿದ್ಯಾವಂತರೂ ಬೆಂಬಲಿಸವುದು ವಿಪರ್ಯಾಸ ಮತ್ತು ದುರಂತ.

ಈ ರಾಮದೇವ ಬಾಬಾಗಳು, ಸಾಯಿಬಾಬಾಗಳು ಎಲೆಕ್ಷನ್‍ಗೆ ನಿಂತು ಆಡಳಿತ ಮಾಡಿದ್ರೆ, ಇವರೂ ಏನೂ ಸುಧಾರಣೆ ಮಾಡಕ್ ಆಗ್ತಾ ಇರ್ತಿರ್ಲಿಲ್ಲ. ಪ್ರತೀಸಲವೂ “ಅತಿ ಆಶಾವಾದ”ವು ಆಶಾಭಂಗದಲ್ಲೇ ಕೊನೆಗೊಳ್ಳುತ್ತದೆ. ಸರಿಯಾಗಿ ೩ ವರ್ಷಗಳ ಹಿಂದೆ ಯಡ್ಯೂರಪ್ಪನನ್ನ ಜನ ಸುಧಾರಣೆಯ ಹರಿಕಾರ, ಹೊಸತನವನ್ನ ತರಬಲ್ಲಾತ ಅಂತಲೇ ಬಲವಾಗಿ ನಂಬಿದ್ದರು. ಆ ನಂಬಿಕೆಗಳೆಲ್ಲವೂ ಠುಸ್ ಆಗಿವೆ. ಆಶಾವಾದವು ಅತಿಯಾದಾಗ ನಿರಾಸೆ ಮೂಡಿಸುತ್ತದೆ. ಅದು ಪ್ರಜಾಪ್ರಭುತ್ವದ ಮಟ್ಟಿಗೆ ನೂರಕ್ಕೆ ನೂರು ಸತ್ಯ. ಈಗ ರಾಮದೇವ ಬಾಬಾ ಸತ್ಯಾಗ್ರಹ ಮಾಡಿ, ಕಪ್ಪು ಹಣ ತರ್ತಾರೋ ಬಿಡ್ತಾರೋ ಬಿಡಿ. ಆದ್ರೆ, ಪೊಲಿಟಿಕಲಿ ಇನ್ನೂ ಸ್ಟ್ರಾಂಗ್ ಆಗ್ತಾರೆ. ಅವರ ಮಾತನ್ನ ತೆಗೆದು ಹಾಕುವುದು ಸುಲಭವಾಗುವುದಿಲ್ಲ. ಇದೇ ಜನಪ್ರಿಯತೆಯನ್ನ ಬಳಸಿಕೊಂಡು ಅವರು ರಾಜಕೀಯ ಪಕ್ಷವನ್ನ ಸ್ಥಾಪಿಸಬಹುದಾದ ಸಕಲ ಸಾಧ್ಯತೆಗಳೂ ಇವೆ. ಆದ್ರೆ, ನಮ್ಮ ಯಡ್ಯೂರಪ್ಪನ ಮೇಲೆ ನಾವು ಆಸೆ, ವಿಶ್ವಾಸಗಳನ್ನ ಇಟ್ಟುಕೊಂಡದ್ದು ಠುಸ್ ಆದಂತೆ ಬಾಬಾ ವಿಷಯದಲ್ಲೂ ಆಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರ ಹಾಕಿದವರಿಗೆ ಮಾತ್ರ ಗೊತ್ತಾಗುತ್ತದೆ.

ಆದರೆ, ಇಲ್ಲಿ ಪ್ರಶ್ನೆ ಇರೋದು ಬಾಬಾನನ್ನ ಬೆಂಬಲಿಸಬೇಕೋ ಅಥವಾ ಬೇಡವೋ ಅನ್ನೋದು. ರಾಜಕೀಯೇತರ ವ್ಯಕ್ತಿಯೊಬ್ಬ ಸರ್ಕಾರದ ಜುಟ್ಟು ಹಿಡ್ಕಂಡು ಅಲ್ಲಾಡಿಸುವ ತಾಕತ್ತಿರುವುದು ಬಾಬಾನಂಥವರಿಗೆ ಮಾತ್ರ ಅನ್ನೋದು ವೈರುಧ್ಯವೂ ಹೌದು ವಿಪರ್ಯಾಸವೂ ಹೌದು. ಆದರೆ, ಸಧ್ಯದ ಭ್ರಷ್ಟಾಚಾರದ ವಿರುದ್ದ ಹೋರಾಟದಲ್ಲಿ ನಾವು ರಾಜಕೀಯೇತರ ವ್ಯಕ್ತಿಯೊಬ್ಬನನ್ನ ಬೆಂಬಲಿಸುವ ಸಂದಿಗ್ಥತೆಯಲ್ಲಿದ್ದೇವೆ. ಹಾಗಾಗಿ ನಾನು ರಾಮದೇವ ಬಾಬಾನನ್ನ ಬೆಂಬಲಿಸುತ್ತೇನೆ.

ಗಣೇಶ್ ಕೆ