ಯಾರದೋ ಹೆಸರು ಯಾರದೋ ಬಸರು ಅನ್ನೋ ಹಂಗಾಯಿತು ಇದು.
ಅಣ್ಣಾ ಹಜಾರೆ ಒಳ್ಳೇ ವ್ಯಕ್ತಿ. ಆದರೆ, ಅವರ ಒಳ್ಳೇತನವನ್ನ ಯಾರು ಹೆಂಗೆ ಬೇಕಾದರೂ ಬಳಸಬಹುದು ಅನ್ನುವುದಕ್ಕೆ ನಿನ್ನೆಯ ರಾಜ್ಯ ಸಭೆ, ಇವತ್ತಿನ ಲೋಕಸಭೆ ಮಸೂದೆ ಮಂಡನೆ, ನಂತರ ಹಜಾರೆಯವರ ಉಪವಾಸ ಅಂತ್ಯ.. ಇವೆಲ್ಲ ಸನ್ನಿವೇಶಗಳು ಪುಷ್ಟಿಕರಿಸುತ್ತವೆ.
ಅಣ್ಣಾ ಹಜಾರೆಯವರನ್ನ ಜೈಲಿಗೆ ತಳ್ಳಿದ್ದನ್ನ, ರಾಮದೇವ ಬಾಬಾರನ್ನ ವೇದಿಕೆಯ ಮೇಲೆ ಅಟ್ಟಾಡಿಸಿಕೊಂಡು ಹೋಗಿದ್ದನ್ನ ನೆನಿಸಿಕೊಳ್ಳಿ. ಎಲ್ಲಿದ್ದ ರಾಹುಲ ಗಾಂಧೀ? ಬಾಯಿ ಸತ್ತು ಹೋಗಿತ್ತಾ ಅವತ್ತು? ಮನೀಷ್ ತಿವಾರಿ “ಅಡಿಯಿಂದ ಮುಡಿಯವರೆಗೆ ನೀನೇ ಭ್ರಷ್ಟ” ಅಂತಾ ಅಣ್ಣಾ ಹಜಾರೆಯವರನ್ನೇ ಅವಮಾನಿಸಿದಾಗ ಎಲ್ಲಿ ಹೋಗಿದ್ದ ರಾಹುಲ ಗಾಂಧೀ? ನಿನ್ನೆ ಅಣ್ಣಾ ಹಜಾರೆಯವರು ರಾಹುಲಗಾಂಧಿಯನ್ನ ಕೊಂಡಾಡಿದ್ದೇನು ರಾಹುಲಗಾಂಧೀ ಅಣ್ಣಾ ಹಜಾರೆಯವರನ್ನ ಕೊಂಡಾಡಿದ್ದೇನು. ಇವೆಲ್ಲ ಕನಸಿನ ಚಿತ್ರಗಳಂತೆ ಕಣ್ಣ ಮುಂದೆ ಸರಿದು ಹೋದವು.
ಅಣ್ಣಾ ಹಜಾರೆಯವರು ಇಲ್ಲಿಯವರೆಗೂ ರಾಲೇಗಣ ಸಿದ್ಧಿಯಲ್ಲೇ ಉಪವಾಸ ಸತ್ಯಾಗ್ರಹಗಳನ್ನ ಮಾಡಿಕೊಂಡಿದ್ದರೆ ದೇಶಾದ್ಯಂತ ಸುದ್ದಿಯಾಗುತ್ತಿತ್ತೇ? ಯುವಕರನ್ನ ಸಂಘಟಿಸಲಾಗುತ್ತಿತ್ತೇ? ಸರ್ಕಾರದ ಮೇಲೆ ಒತ್ತಡ ನಿರ್ಮಿಸಲಾಗುತ್ತಿತ್ತೇ? ಅರವಿಂದ ಕೇಜ್ರಿವಾಲ್ ಅನ್ನೋ ವ್ಯಕ್ತಿ ಹಜಾರೆಯವರ ಹಿಂದಿನ ಎಲ್ಲ ಉಪವಾಸ ಸತ್ಯಾಗ್ರಹಗಳಲ್ಲಿ ಹಿಂದೆ ನಿಂತು ಸಂಘಟಿಸಿ, ದೇಶದಲ್ಲಿ ಸಂಚಲನ ಮೂಡಿಸಲಿಲ್ಲವೇ?
ಸೌಜನ್ಯಕ್ಕಾದರೂ ಕೇಜ್ರಿವಾಲ್ ಹೆಸರು ಹೇಳಿದ್ದರೂ ಅಣ್ಣಾ ಹಜಾರೆ ಇನ್ನೂ ದೊಡ್ಡವರಾಗುತ್ತಿದ್ದರು. ನಿಷ್ಪಕ್ಷಪಾತಿ ಅನ್ನಿಸಿಕೊಳ್ಳುತ್ತಿದ್ದರು.