ಜಗತ್ನಲ್ಲಿ ಇರೋದು ಎರಡೇ ಥರ. ಒಂದು ಚೆನ್ನಾಗಿರೋದು. ಇನ್ನೊಂದು ತುಂಬಾ ಚೆನ್ನಾಗಿರೋದು.

    ಗೆಳೆಯ ಶಶಾಂಕ ಹಿಂಗೆ ಹೇಳ್ತಾ ಇದ್ರೆ, ಇದ್ಯಾವುದೋ ಕಾರ್ಪೊರೇಟ್ ಮಂದಿ ಮಾತಾಡೋ ಪಾಸಿಟಿವ್ ಥಿಂಕಿಂಗ್ ಥಿಯರಿ ಥರಾ ಇದೆ ಅನ್ನಿಸ್ತಾ ಇತ್ತು. ಎಷ್ಟೇ ಆಗ್ಲಿ ಆತ ಸಾಫ್ಟ್‍ವೇರ್ ಕಂಪನಿಯವ ತಾನೇ. ಅದನ್ನ ಅವನು ಉಪಯೋಗಿಸಿಕೊಳ್ಳೋದು ವಿಚಿತ್ರ ಸಂದರ್ಭದಲ್ಲಿ..! ಶನಿವಾರ, ಭಾನುವಾರ ಹಿಂಗೇ ಸುತ್ತಾಡುವಾಗ ಸಿಗುವ ಹುಡುಗಿಯರನ್ನು ನೋಡಿ ಕಾಮೆಂಟ್ ಹೊಡೆಯುವಾಗ, ಅಷ್ಟೇನೂ ಸುಂದರಿಯರಲ್ಲದ ಹುಡುಗಿಯರನ್ನು ನೋಡಿದಾಗ ಬೇರೆ ಹುಡುಗರು ಚೆನ್ನಾಗಿದ್ದಾಳೆ ಅಂದಾಗ ನನ್ನ ಪ್ರತಿಕ್ರಿಯೆ “ಏನು ಕಮ್ಮಗೆ ಅದಳೆ ಬಿಡೋ” ಅನ್ನೋ ಶುದ್ಧ ಉಡಾಫೆ ಅಗಿರ್ತಾ ಇತ್ತು (ಮತ್ತು ಇದೆ..!). “ಕಂಡದ್ದನ್ನ ಕಂಡಂಗೆ ಹೇಳ್ತೀನಪ್ಪಾ ಅದ್ರಲ್ಲೇನು ವಿಶೇಷ? ಲೇ, ಬೆಂಗಳೂರಿಗೆ ಬಂದಮೇಲೆ ನಿನ್ನ ಟೇಷ್ಟು ಕೆಟ್ಟು ಕೆರ ಹಿಡಿದುಬಿಟ್ಟಿದೆ. ಯಾವ್ಯಾವಳಿಗೋ ಫಿಗರ್ರು ಅಂತೀಯಲ್ಲಲೇ?” ಅಂತಾ ಛೇಡಿಸ್ತಾ ಇದ್ದೆ. ಆತ ಆಗ, “ಲೇ, ಜಗತ್ತಿನಲ್ಲಿ ಎರಡೇ ಥರಾ ಇರೋದು. ಒಂದು ಚೆನ್ನಾಗಿರೋದು. ಇನ್ನೊಂದು ತುಂಬಾ ಚೆನ್ನಾಗಿರೋದು” ಅಂತಾ ಲೆಕ್ಚರ್ ಕೊಡ್ತಾ ಇದ್ದ. ನಮ್ಮಿಬ್ಬರ ಜೊತೆಗೆ ಗೆಳೆಯ ಕಾರ್ತೀಕ ಸೇರಿಕೊಂಡುಬಿಟ್ಟರೆ, “ಲೇ ನಿನ್ನ ಮದುವ್ಯಾಗೆ ಸ್ಟೇಜ್ ಮ್ಯಾಲ್ ಬಂದೇ ಹೇಳ್ತೀನಲೇ. ಲೇ ಎನ್ ಕಮ್ಮಗದಳಲೇ ನಿನ್ನ್ ಹೇಣ್ತಿ” ಅಂತಾ ನನಗೇ ಕಾಲೆಳೆಯುತ್ತಾನೆ..! ಬೆಂಗಳೂರು ಕಡೆ ಈ ‘ಕಮ್ಮಗೆ’ ಅನ್ನೋ ಪದ ಚಾಲ್ತಿಯಲ್ಲಿರೋದು ಕಡಿಮೆ. ನಮ್ಮ ದಾವಣಗೆರೆ ಕಡೆ ಹೆಚ್ಚು ಚಾಲ್ತಿಯಲ್ಲಿದೆ. ಅಷ್ಟೇನೂ ಚೆನ್ನಾಗಿಲ್ಲದ್ದಕ್ಕೆ, ಆಕರ್ಷಕವಾಗಿಲ್ಲದ್ದಕ್ಕೆ ವಸ್ತುವಿಗಾಗಲೀ ವ್ಯಕ್ತಿಗಾಗಲೀ ಬಳಸಲ್ಪಡುತ್ತದೆ.

    “ಕಟ್ರಾಸು” ಎಂಬ ಪದವೂ ಕನಿಷ್ಟದಲ್ಲಿ ಅತಿ ಕನಿಷ್ಟ ಎನ್ನುವುದನ್ನು ಬಿಂಬಿಸಲಿಕ್ಕೆ ಬಳಸಲ್ಪಡುತ್ತದೆ. ಬೆಂಗಳೂರಿನಲ್ಲಿ ಆ ಥರ ಶಬ್ದಗಳು ಕಿವಿಗೆ ಈ ವರೆಗೆ ಬಿದ್ದಿಲ್ಲ. ಇನ್ನೊಂದು ವಿಷ್ಯ. ಇದ್ದಿದ್ದು ಇದ್ದಂಗೆ ಹೇಳ್ತೀನಿ. ಇದರಲ್ಲೇನು ಉತ್ಪ್ರೇಕ್ಷೆ ಇಲ್ಲ. ನಮ್ಮ ದಾವಣಗೆರೆ, ಉತ್ತರ ಕರ್ನಾಟಕದ ಭಾಗಗಳಲ್ಲಿ(ದಾವಣಗೆರೆ ಮಧ್ಯಕರ್ನಾಟಕ..!) ಅಷ್ಟೇನೂ ಸುಂದರಿಯರಲ್ಲದವರನ್ನು ನೋಡಿದರೆ, ತುಂಬಾ ವಿಕಾರದ ವ್ಯಕ್ತಿಗಳನ್ನು ಕಂಡ್ರೆ “ಹೇತ್ರೆ ಹೇಲ್ ಬರಲ್ಲ” ಅನ್ನೋ ಮಾತಿದೆ. ಆದ್ರೆ, ಸುಂದರವಾಗಿದ್ದೋರನ್ನ ಕಂಡಾಗಲೆಲ್ಲಾ ಅದು ಬರುತ್ತಾ ಅನ್ನೋದು ನನ್ನ ಪ್ರಶ್ನೆ..!

   ಬೆಂಗಳೂರಿಗೆ ತನ್ನದೇ ಅದ ಭಾಷೆ ಅನ್ನೋದು ಉಳಿದಿಲ್ಲ. ಎಲ್ಲ ಕಲಸು ಮೇಲೋಗರ. “ಏನ್ ಮಗಾ? ಹೆಂಗವ್ಳೆ ನಿನ್ನ್ ಡವ್?” ಅನ್ನೋದೇ ಬೆಂಗಳೂರಿನ ಅಸಲಿಯತ್ತಿನ ಭಾಷೆ ಅಂತಾ ಬಿಂಬಿಸುತ್ತಿದ್ದಾರೆ. ಅದರ ಚಾಳಿ ನಮ್ಮೂರುಕಡೆಗೂ ಹಬ್ತಾ ಇದೆ. ಆದ್ರೆ, ನಮ್ಮಕಡೆ ಭಾಷೆಯಲ್ಲಿನ ಸೊಗಡು, ಗ್ರಾಮೀಣ ಸೊಗಸು ಇಲ್ಲಿ ಮಾಯವಾಗಿದೆ. ಬೆಂಗಳೂರು, ಮೈಸೂರುಗಳು ಮೊದಲು “ಸೌಮ್ಯ ಕನ್ನಡ”ಕ್ಕೆ ಹೆಸರಾಗಿದ್ದಂಥವುಗಳು. ಬರೀ ಕಲಾಸಿ ಪಾಳ್ಯದ ಭಾಷೇನ ತಗಂಡು, ಸಿನಿಮಾದಲ್ಲಿ ತೋರಿಸಿ ತೋರಿಸಿ, ಇದೇ ಬೆಂಗಳೂರು, ಇದೇ ಕರ್ನಾಟಕ ಅಂತಾ ತೋರಿಸೋ ಹಡಕಲಾಸಿ ನಿರ್ದೇಶಕರು, ನಿರ್ಮಾಪಕರು ಬೆಂಗಳೂರಲ್ಲಿ ಬಹಳಷ್ಟಿದ್ದಾರೆ.

   ಒಮ್ಮೆ ಯೋಚಿಸಿ ನೋಡಿ. ಸಿನಿಮಾ ಮತ್ತು ತಾರುಣ್ಯದ ಬದುಕು ಎಷ್ಟು ಬೆಸೆದುಕೊಂಡಿವೆ. ಮತ್ತು ಎಷ್ಟು ಪೂರಕವಾಗಿ ಕೆಲಸ ಮಾಡುತ್ತಿವೆ ಅಂತಾ. ಸಿನಿಮಾದಲ್ಲಿ ತೋರಿಸಿದ್ದನ್ನ ಹುಡುಗರು, ಹುಡುಗಿಯರು ಅನುಕರಿಸುತ್ತಾರೆ. ಅದು ಒಳ್ಳೇದೋ ಕೆಟ್ಟದ್ದೋ. ಹುಡುಗರು-ಹುಡುಗಿಯರು ಕಬ್ಬನ್ ಪಾರ್ಕು, ಹೋಟೆಲ್ಲು, ಲಾಲ್‍ಬಾಗು, ಶಾಪಿಂಗ್ ಕಾಂಪ್ಲೆಕ್ಸು ಸುತ್ತಾಡೋದನ್ನೇ ತಾರುಣ್ಯದ ಜೀವನ. ಕಾಲೇಜು ಬಿಟ್ಟು ತಿರುಗಾಡೋದನ್ನೇ ದೊಡ್ಡಸ್ತಿಕೆ ಅಂತಾ ತೋರಿಸೋ ಅವಿವೇಕಿ ನಿರ್ದೇಶಕರು, ನಿರ್ಮಾಪಕರು “ಸ್ಯಾಂಡಲ್‍ವುಡ್”ನಲ್ಲಿ ಹಲವರಿದ್ದಾರೆ. ಒಮ್ಮೆ ಕಣ್ಣು ಹಾಯಿಸಿ. ಪಾರ್ಕು, ಹೋಟೇಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಅಪ್ಪನ ದುಡ್ನಲ್ಲಿ ಐಶಾರಾಮಿ ಮಜಾ ಮಾಡೋ ಯುವಕ ಯುವತಿಯರನ್ನ ತೋರಿಸಿಯೇ ಸಿನಿಮಾ ಮಾಡುತ್ತಾರೆ. ಮತ್ತೆ ಅದು ಯುವಕ ಯುವತಿಯರನ್ನೇ ಬಲಿಯಾಗಿಸುತ್ತದೆ. “ಚೆಲುವಿನ ಚಿತ್ತಾರ ಸ್ಟೈಲ್ ಎಸ್ಕೇಪ್” ಅನ್ನೋ ಲೇಖನ ಮೂಡಿಬಂದಿತ್ತು “ಹಾಯ್ ಬೆಂಗಳೂರ್”ನಲ್ಲಿ. ಚೆಲುವಿನ ಚಿತ್ತಾರ ನೋಡಿ ಅದೆಷ್ಟು ಮುಗ್ಧ ಹುಡುಗಿಯರು ಹುಡುಗರ ಜೊತೆ ಓಡಿಹೋಗಿದ್ದಾರೋ. ಸಿನಿಮಾದಲ್ಲಿ ತೋರಿಸಿದ್ದನ್ನೇ ಜನ ಮಾಡ್ತಾರೆ. ಜನ ಮಾಡಿದ್ದನ್ನೇ ಸಿನಿಮಾ ಮಾಡಿದ್ದೇವೆ ಅಂತಾ ಬೊಗಳೇ ಬಿಡುವ ಬೊಗಳೇ ದಾಸರು ಇದ್ದರೆ ಕ್ರಿಯೇಟಿವಿಟಿ ಹೇಗೆ ಬಂದೀತು?

   ಮೊನ್ನೆ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆಡೆದ ಘಟನೆ. ರಶ್ ಜಾಸ್ತಿ ಇದ್ದುದರಿಂದ, ಒಬ್ಬನ ಕಾಲು ಇನ್ನೊಬ್ಬನಿಗೆ ತಾಗಿತು. ಬಹುಷಃ ತುಳಿದ ಅಂತಾ ಕಾಣುತ್ತೆ. ತುಳಿಸಿಕೊಂಡವ ಕ್ಯಾತೆ ತೆಗೆದ. ತುಳಿದವನಿಗೆ ರೇಗಿ ಹೋಯಿತು. ಆತ ಏನನ್ನಬೇಕು. ಮೊದಲೇ ಯುವಕ. ಸ್ವಲ್ಪ ಒರಟ. “ಮರ್ಡರ್ ಆಗ್ಬಿಡ್ತೀಯ” ಅನ್ನಬೇಕೇ? ನಮ್ಮೂರು ಕಡೆಗೆ ಜಗಳ ಆಡಲಿಕ್ಕಾದರೂ ಬರ್ತದೆ. ಮನುಷ್ಯತ್ವ ಐತೋ ಇಲ್ಲೋ? ಹೊಟ್ಟೀಗೆ ಅನ್ನ ತಿನ್ತಿಯಾ ಏನ್ ತಿನ್ತೀಯ ಅಂತಾ ಬೈತಾರೆ. ಹಳೀತಾರೆ. ಆದರೆ ಒಂದೇ ಮಾತಿಗೆ “ಮರ್ಡರ್” ಮಾತುಗಳು ಬರುವುದಿಲ್ಲ. ಇಲ್ಲಿ ಇದು ಬೆಂಗಳೂರು ಪ್ರಭಾವ..

   ನಮ್ಮೂರಲ್ಲಿ ಪಾರ್ಕುಗಳಲ್ಲಿ ಜನ ಅಡ್ಡಾಡೊ ಕಡೆ ಕೂತು “ಬಾಂಡು” ಹೊಡೆಯುವ ಜೋಡಿಗಳಿಲ್ಲ. ಇದ್ದರೂ ಕಂಡಕಂಡವರ ಮುಂದೆ ಹಿಂಗೆ ಮಂಗಾಟ, ಹುಚ್ಚಾಟ ಮಾಡೋದಿಲ್ಲ. ಇದನ್ನೆಲ್ಲಾ ನೆನೆಸಿಕೊಂಡಾಗ ನಮ್ಮೂರು ಚೆನ್ನಾಗಿದೆ ಅನ್ನಿಸುತ್ತೆ. ಬೆಂಗಳೂರನ್ನ ರೆಫರೆನ್ಸಾಗಿ ಹಿಡಿದರೂ, ಇನ್ನೂ ಚೆನ್ನಾಗಿದೆ ಅನ್ಸುತ್ತೆ. ನಮ್ಮೂರು ಮಾತ್ರವಲ್ಲ ಬೆಂಗಳೂರನ್ನುಳಿದು ಬೇರೆ ಎಲ್ಲಾ ಕರ್ನಾಟಕದ ಊರುಗಳೂ..!