ಹಂಪಿಗೆ ಸಿಕ್ಕ ಅಂತರರಾಷ್ಟ್ರೀಯ ಮಾನ್ಯತೆ, ಪ್ರಚಾರ ನಮ್ಮ ಚಿತ್ರದುರ್ಗಕ್ಕೇಕೆ ಇಲ್ಲ?

ಹಂಪಿಗೆ ಸಿಕ್ಕ ಅಂತರರಾಷ್ಟ್ರೀಯ ಮಾನ್ಯತೆ, ಪ್ರಚಾರ ನಮ್ಮ ಚಿತ್ರದುರ್ಗಕ್ಕೇಕೆ ಇಲ್ಲ? ನಾನು ಕಂಡುಕೊಂಡ ಅಂಶಗಳು.

೧. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರದುರ್ಗದ ಅದ್ಭುತ ಕೋಟೆ, ಗವಿಗಳ ಬಗ್ಗೆ ಮಾಹಿತಿ ಇಲ್ಲ.
೨. ಸರ್ಕಾರದಿಂದಲೂ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿಲ್ಲ.
೩. ಆನ್ ಲೈನ್ ಫೋರಂಗಳಲ್ಲಿ ಚಿತ್ರದುರ್ಗದ ಬಗ್ಗೆ ಚರ್ಚೆಯಾಗಿಲ್ಲ.

chitradurga fort

Chitradurga fort

ವಿದೇಶಿಯರಿಗೆ ಏನು ಬೇಕು?
೧. ಸ್ಥಳದ ಬಗ್ಗೆ ಸರಿಯಾದ ಮಾಹಿತಿ, ಆಸಕ್ತಿಕರ ಪ್ರೇಕ್ಷಣೀಯ ಅನ್ನಿಸುವಷ್ಟು ಯಾರಾದರೂ ಬರೆದ ಆಪ್ತ ಬರಹಗಳು ಮತ್ತು ಇತಿಹಾಸ.
೨. ಹತ್ತಿರದ ವಿಮಾನ ನಿಲ್ದಾಣದ ಮಾಹಿತಿ, ಬೆಂಗಳೂರಿನಿಂದ ಇರುವ ದೂರದ ಮಾಹಿತಿ, ಉತ್ತಮವಾದ ಊಟ ವಸತಿ ಸೌಕರ್ಯ, ಹೋಗಿ ಬರಲಿಕ್ಕೆ ತಗಲುವ ಸಮಯ.
೩. ಹತ್ತಿರದಲ್ಲಿ ಇರುವ ಇಂಟರ್ನೆಟ್ ಸೆಂಟರ್‌ಗಳ ಕುರಿತು ಮಾಹಿತಿ.
೪. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಮಾಹಿತಿ ಕೇಂದ್ರಗಳು.
೫. ಇಂಟರ್ನೆಟ್ ನಲ್ಲಿ ಲಭ್ಯವಿರುವ ಇಂಗ್ಳೀಷ್‌ನಲ್ಲಿರುವ ಮಾಹಿತಿ ತುಂಬಾ ಕಡಿಮೆ, ಮತ್ತು ಅದನ್ನ ಪ್ರಸ್ತುತಪಡಿಸಿರುವ ರೀತಿ ಅನಾಕರ್ಷಕವಾಗಿದೆ. ಆಕರ್ಷಕ ವೆಬ್ ಸೈಟನ್ನ ನಿರ್ಮಿಸುವುದೂ ಕೂಡ ವಿದೇಶೀಯರನ್ನ ಚಿತ್ರದುರ್ಗಕ್ಕೆ ಬರಮಾಡಿಕೊಳ್ಳಲಿಕ್ಕೆ ಸಹಕಾರಿ.

ಸರ್ಕಾರ/ಸ್ಥಳೀಯ ಆಡಳಿತ ಏನು ಮಾಡಬೇಕು?
೧. ಚಿತ್ರದುರ್ಗದ ಬಗ್ಗೆ ಅದ್ಭುತವಾದ ಫೋಟೋಗಳನ್ನ ವಿಖ್ಯಾತ ಫೋಟೋಗ್ರಾಫರ್‌ಗಳಿಂಗ ತೆಗೆಸಿ ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕು.
೨. ಚಿತ್ರದುರ್ಗದ ಕೋಟೆಯ ಕುರಿತು ಫೋಟೋಗ್ರಾಫಿ ಸ್ಪರ್ಧೆ ಏರ್ಪಡಿಸಬೇಕು. ಐವತ್ತು ಸಾವಿರದಿಂದ ಲಕ್ಷ ರೂಪಾಯಿ ಬಹುಮಾನವಿಟ್ಟು ಎಲ್ಲ ಫೋಟೋಗ್ರಫಿ ಮ್ಯಾಗಜೀನ್‌ಗಳಲ್ಲಿ ಜಾಹಿರಾತು/ಮಾಹಿತಿ ನೀಡಬೇಕು. ಸ್ಪರ್ಧೆಯಿಂದ ಬರುವ ಅತ್ಯುತ್ತಮ ಫೋಟೋಗಳನ್ನ ಜಾಹಿರಾತುಗಳಿಗೆ ಬಳಸಿಕೊಳ್ಳಬೇಕು.
೩. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶೀಯರು ಬಂದಾಗ ಅವರೊಂದಿಗೆ ಹೇಗೆ ಸೌಜನ್ಯಯುತವಾಗಿ ವರ್ತಿಸಬೇಕು ಅನ್ನುವುದರ ಬಗ್ಗೆ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ, ಮಾಹಿತಿ ಅಧಿಕಾರಿಗಳಿಗೆ, ಬಸ್ ಕಂಡಕ್ಟರುಗಳಿಗೆ ತರಬೇತಿ ನೀಡಬೇಕು.
೪. ಪ್ರಮುಖವಾಗಿ, ವಿದೇಶಿಯರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು. ಸ್ಥಳೀಯ ಕಿಡಿಗೇಡಿಗಳಿಂದ, ದುಷ್ಕರ್ಮಿಗಳಿಂದ ಯಾವುದೇ ಕಿರಿಕಿರಿ ಅಥವಾ ದೌರ್ಜನ್ಯ ನಡೆಯದಂತೆ ಸೂಕ್ತ ಭದ್ರತೆ ಒದಗಿಸಬೇಕು.

ಜನತೆ ಏನು ಮಾಡಬೇಕು?
೧. ಭಾರತಕ್ಕೆ ಬರುವ ಪ್ರತಿ ವಿದೇಶಿ ಯಾತಿಕನ ಕೈಯಲ್ಲೂ ಲವ್ಲಿ ಪ್ಲಾನೆಟ್ ಡಾಟ್ ಕಾಂ(lovelyplanet.com) ಪ್ರಕಟಿಸಿದ ಭಾರತದ ಕುರಿತಾದ ಪುಸ್ತಕವಿರುತ್ತದೆ. ಅದರಲ್ಲಿ ಚಿತ್ರದುರ್ಗದ ಮಾಹಿತಿಯನ್ನ ಸೇರಿಸಲಿಕ್ಕೆ ಮನವಿ ಪತ್ರವನ್ನು ಕಳಿಸಬೇಕು. ಜೊತೆಗೆ ಫೋಟೊಗಳನ್ನು ಕಳಿಸಿಕೊಡಬೇಕು.
೨. ಆನ್ ಲೈನ್ ಫೋರಂಗಳಲ್ಲಿ ಚಿತ್ರದುರ್ಗದ ಬಗ್ಗೆ ಒಳ್ಳೆಯ ಮಾತುಗಳನ್ನ ಬರೆಯಬೇಕು. ಛಾಯಾಚಿತ್ರಗಳನ್ನ ಹಾಕಬೇಕು.
೩. ಫೇಸ್ ಬುಕ್ ಫೋರಂಗಳಲ್ಲಿ ಜನತೆ ಭಾಗವಹಿಸಿ ಚಿತ್ರದುರ್ಗದ ಅದ್ಭುತ ಫೋಟೋಗಳನ್ನ ಶೇರ್ ಮಾಡಬೇಕು.

ಇವೆಲ್ಲವುಗಳನ್ನ ಮಾಡಿದಲ್ಲಿ, ಪ್ರವಾಸೋದ್ಯಮದಿಂದ ಅತಿ ಹೆಚ್ಚಿನ ಹಣದ ಒಳಹರಿವು ಸಾಧ್ಯವಾಗುತ್ತದೆ. ಇದು ನಗರದ ಆರ್ಥಿಕತೆಯನ್ನ ಬಲಗೊಳಿಸುತ್ತದೆ. ಚಿತ್ರದುರ್ಗದ ಸಂಸದ, ಯುವ ರಾಜಕಾರಣಿ ಜನಾರ್ಧನ ಸ್ವಾಮಿ ಇದರ ಬಗ್ಗೆ ತುರ್ತಾಗಿ ಗಮನವಹಿಸಬೇಕಿದೆ.

ಶುಭಾಶಯಗಳೊಂದಿಗೆ,

ಗಣೇಶ್ ಕೆ.
ಸಹಾಯಕ ಪ್ರಾಧ್ಯಾಪಕರು,
ಹುಬ್ಬಳ್ಳಿ

ಬಾಬರಿ ಮಸೀದಿ ಧ್ವಂಸ ಮತ್ತು ಬಾಲ್ಯದ ನೆನಪುಗಳು.

ನಾನು ಆಗ ಎರಡನೇ ಕ್ಲಾಸಿನಲ್ಲಿದ್ದೆ. ಸುಮಾರು ೭ ವರ್ಷ. ಒಂದು ತಿಂಗಳೋ ನಲವತ್ತು ದಿನವೋ ರಜಾ ಕೊಡಲಾಗಿತ್ತು ಶಾಲೆಗೆ. ಒಂಥರಾ ನಮ್ಮ ಮನೆ ಹೊಸ ದಾವಣಗೆರೆಯಲ್ಲಿ ಇರೋದು. ರೈಲ್ವೇ ಹಳಿಯ ಒಂದು ಪಾರ್ಶ್ವ ಹಳೇ ದಾವಣಗೆರೆ. ಇನ್ನೊಂದು ಪಾರ್ಶ್ವ ಹೊಸ ದಾವಣಗೆರೆ. ಹಳೇ ಹುಬ್ಬಳ್ಳಿ ಹೊಸ ಹುಬ್ಬಳ್ಳಿಗಳ ಹಾಗೆ. ಗದ್ದಲಗಳು, ಮೆರವಣಿಗೆಗಳು, ಜಾತ್ರೆಗಳು, ನಂಬಿಕೆಗಳು, ದೈವತ್ವಗಳು, ದ್ವೇಷಗಳು, ವ್ಯಾಪಾರ-ವಹಿವಾಟುಗಳು, ಶ್ರಮಜೀವಿ ಬದುಕುಗಳುಮ, ಕಣ್ಣು ಕೋರೈಸುವ ಸೇಠುಗಳ ಅಂಗಡಿಗಳ ದೀಪಗಳು ಮತ್ತು ಬಡವರ ಮನೆಯ ಸೀಮೆ ಎಣ್ಣೆ ದೀಪಗಳು ಎಲ್ಲವೂ ಇರುತ್ತವೆ, ಈ ಹಳೇ ಊರುಗಳಲ್ಲಿ.  ಹೊಸ ಊರಿನ ದುನಿಯಾವೇ ಬೇರೆ. ಎಲ್ಲ ಪ್ರೊಫೆಷನಲ್ ಮಂದಿಗಳ, ಮಧ್ಯಮ ಮೇಲ್ಮಧ್ಯಮ ವರ್ಗಗಳ ಕತೆ. ಊರು ಅಡ್ಡಾದಿಡ್ಡಿ ಬೆಳೆದಂತೆ ಈ ವ್ಯತ್ಯಾಸ ಅಳಿಸಿ ಹೋಗುತ್ತಿದೆಯಾದರೂ ಊರಿನ ಹಳೇ ಭಾಗಗಳು ಬದಲಾಗಿಲ್ಲ. ದಾವಣಗೆರೆಯಲ್ಲಿ ಹಲವು “ಪೇಟೆ”ಗಳಿವೆ. ಮಂಡಿಪೇಟೆ, ನರಸರಾಜ ಪೇಟೆ, ಬಸವರಾಜ ಪೇಟೆ, ಚೌಕಿ ಪೇಟೆ, ಇಸ್ಲಾಂ ಪೇಟೆ, ವಕ್ಕಲಿಗ ಪೇಟೆ, ದೊಡ್ಡಪೇಟೆ. ಇತ್ತೀಚೆಗೆ ಬಹಳಷ್ಟು ಕಡೆಗಳಲ್ಲಿ ಧರ್ಮಾಧಾರಿತ ಭೌಗೋಳಿಕ ಧೃವೀಕರಣಗಳಾಗುತ್ತಿವೆ. ಹಲವುಕಡೆಗಳಲ್ಲಿ ಹಿಂದೂಗಳಷ್ಟೇ ಇದ್ದರೆ ಇನ್ನು ಕೆಲವುಕಡೆ ಮುಸ್ಲೀಮರಷ್ಟೇ.
—————————————-
ನಾನು ನನ್ನ ಗೆಳೆಯರು, ನವೀನ ಪವನ್ ಎಲ್ಲರೂ ರೋಡಿನಲ್ಲಿ ಗೋಲಿ ಆಡುತ್ತಿದ್ದೆವು. ನಮ್ಮ ಏರಿಯಾಗಳಲ್ಲಿ ಮುಸ್ಲೀಮರಿದ್ಡರೂ ಎಲ್ಲರೂ ವಿದ್ಯಾವಂತರಿದ್ದರು. ಹಿಂದೂಗಳಲ್ಲೂ ವಿದ್ಯಾವಂತರಿದ್ದರು. ಸಾಕಷ್ಟು ಸ್ಥಿತಿವಂತರಿದ್ದರು. ನಮ್ಮ ಭಾಗಗಳಲ್ಲಿ ಯಾವುದೇ ಗದ್ದಲಗಳಾದ ಬಗ್ಗೆ ನನಗೆ ನೆನಪಿಲ್ಲ. ಪೋಲೀಸ್ ಜೀಪು, ವ್ಯಾನು ರೋಡಿನ ಕಡೆಯಲ್ಲಿ ನಿಂತು ನಾವು ಗೋಲಿ ಆಡುವುದನ್ನ ನೋಡುತ್ತಲೇ ನಾವು ನಮ್ಮ ನಮ್ಮ ಮನೆ ಕಡೆ ಓಡಿ ಬರುತ್ತಿದ್ದೆವು. ಮನೆಯಲ್ಲಿ ಅಮ್ಮ ಅಪ್ಪ ಪೇಪರಿನಲ್ಲಿ ಕಂಡಲ್ಲಿ ಗುಂಡು ಹೊಡಿಯೋಕೆ ಆದೇಶ ಇದೆ ಅಂತಾ ಹೆದರಿಸುತ್ತಿದ್ದರು. ಎಷ್ಟೋ ದಿನಗಳ ಕಾಲ ಕರ್ಫ್ಯೂ ಇತ್ತು ಎಂಬ ನೆನಪು. ಪೋಲೀಸರು ಜೀಪಿನಲ್ಲಿ ಕುಂತು ಮೈಕುಗಳಲ್ಲಿ ಅನೌನ್ಸ್ ಮಾಡುತ್ತಿದ್ದರು. ಏನನ್ನ ಹೇಳುತ್ತಿದ್ದರು ಅನ್ನುವ ನೆನಪಿಲ್ಲ. ಬೆಳಗ್ಗೆ ಹತ್ತು ಗಂಟೆ ಹನ್ನೊಂದು ಗಂಟೆಯವರೆಗೂ ಕರ್ಫ್ಯೂ ಸಡಿಲಿಕೆ. ಅಪ್ಪ ಬೆಳಗ್ಗೆ ಹಾಲು ತರಕಾರಿ ತರೋಕೆ ಹೋಗುತ್ತಿದ್ದರು. ಅಪ್ಪ ಅಮ್ಮ ಒಮ್ಮೆ ಕ್ಲಾಕ್ ಟವರಿನ ಬಳಿ ತರಕಾರಿ ಕೊಳ್ಳುತ್ತಿದ್ದಾಗ ಯಾರೋ ಒಂದಿಷ್ಟು ಮಂದಿ ಜೋರಾಗಿ ಓಡಿ ಹೋದರಂತೆ. ಹಾಗೆ ಓಡಿದ್ದೇ ತಡ, ಎಲ್ಲ ಅಂಗಡಿಗಳ ಷಟರುಗಳು ಪಟ ಪಟನೆ ಕೆಳಗೆ ಬಿದ್ದವು. ಅಮ್ಮನೂ ಒಂದು ಅಂಗಡಿಯಲ್ಲಿ ಬಂಧಿಯಾಗಿ ಆಮೇಲೆ ಸ್ವಲ್ಪ ಹೊತ್ತಾದ ಮೇಲೆ ವಾತಾವರಣ ತಣ್ಣಗಾದಮೇಲೆ ಹೊರಗೆ ಬಂದದ್ದನ್ನ ಹೇಳಿದ್ದು ನೆನಪಿದೆ. ಅಪ್ಪನ ಆಫೀಸು ಇದ್ದದ್ದು ಹಳೇ ದಾವಣಗೆರೆಯ ಕೆ.ಆರ್ ರಸ್ತೆಯಲ್ಲಿ. ಹಲವು ದಿನಗಳ ಕಾಲ ಆಫೀಸಿಗೆ ಹೋಗುವುದು ತ್ರಾಸದಾಯಕವಾಗಿತ್ತು. ಭಯಭೀತ ವಾತಾವರಣವಿತ್ತು. ಚೂರಿ ಇರಿತ, ಕೊಲೆ, ಧಾಳಿಗಳು, ಬೆಂಕಿ ಹಚ್ಚುವಿಕ ಎಲ್ಲವೂ ನಡೆದಿದ್ದವು. ನರಸರಾಜ ಪೇಟೆಯಲ್ಲಿಯ ಸಂಬಂಧಿಗಳ ಮನೆಗೆ ಹಾರೆ ಕೋಲು ಹಾಕಿ ಬಾಗಿಲು ಒಡೆಯುವ ಪ್ರಯತ್ನವಾಗಿತ್ತು.

ಇದಾಗಿ ಸ್ವಲ್ಪ ದಿನಗಳ ನಂತರದಲ್ಲಿ ನಾನು ಅಪ್ಪ ಅಮ್ಮನ ಜೊತೆ ಚಿಕ್ಕಮ್ಮಂದಿರ ಮನೆಗೆ ತೆರಳಿದಾಗ ಬೀರುಗಳ ಮೇಲೆ ಆಗಿನ ಕಾಲದಲ್ಲಿ ಪ್ರಸಿದ್ಧವಾಗಿದ್ದ “ಮಂದಿರವಲ್ಲೇ ಕಟ್ಟುವೆವು” ಅನ್ನುವ ಘೋಷಣೆಯ ರಾಮ ಮಂದಿರದ ಚಿತ್ರ ಮತ್ತು ಬಿಲ್ಲು ಹಿಡಿದು ರಾಮ ನಿಂತ ಸ್ಟಿಕ್ಕರುಗಳು ರಾರಾಜಿಸುತ್ತಿದ್ದವು. ನನ್ನಂಥ ಚಿಕ್ಕ ಹುಡುಗರು ಎಲ್ಲೋ ಮಸೀದಿ ಒಡೆದು ಹಾಕಿದರೆ ಇಲ್ಯಾಕೆ ಜನ ಹೊಡೆದಾಡಬೇಕಮ್ಮಾ? ಮಂದಿರವನ್ನೇ ಯಾಕೆ ಕಟ್ಟಬೇಕು? ಸ್ಕೂಲನ್ನ ಕಟ್ಟಿದರೆ ಎಲ್ಲರಿಗೂ ಉಪಯೋಗ ಅಲ್ವಾ? ಅಂತಾ ಮುಗ್ಧ ಕಂಗಳಿಂದ ಅಮ್ಮಂದಿರನ್ನ ಕೇಳುತ್ತಿದ್ದೆವು. ಅಮ್ಮಂದಿರು ಯಾವಾಗಲೂ ನ್ಯೂಟ್ರಲ್. ಯಾವುದೇ ಸಿದ್ಧಾಂತವಾದಿಗಳಲ್ಲ. ಆದರೆ, ಆ ಕೋಮು ಗಲಭೆ ಸೃಷ್ಟಿಸಿದ ಆತಂಕ, ಭಯಭೀತ ವಾತಾವರಣ ಮನಸ್ಸುಗಳನ್ನ ಒಡೆದುಹಾಕಿತ್ತು. ದಾವಣಗೆರೆಯ ಹತ್ತಿಯ ಮಿಲ್ಲಿನ ಉದ್ಯಮ ಮಕಾಡೆ ಮಲಗಿತು. ದಿನಗೂಲಿ ನೌಕರರು ಹೊಟ್ಟೆಗೆ ತಣ್ಣಿರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದಿತ್ತು.

ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ

ಸ್ಥಿತಿ

ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ

      ನಮ್ಮ ಉತ್ತರ ಕರ್ನಾಟಕದ ಮಂದಿಗೆ ಜ್ವಾಳದ ರೊಟ್ಟಿ(ಜೋಳದ ರೊಟ್ಟಿ ಅಂದ್ರೆ ಅದು ಬೆಂಗಳೂರಿನ ಉಚ್ಛಾರಣೆಯಾದೀತು), ಛಲೋ ಬಾಜಿ ಸಿಗ್ಲಿಲ್ಲ  ಅಂದ್ರೆ ಬದ್ಕಕ್ಕೇ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಉತ್ತರದ ಆಹಾರಪದ್ಧತಿಯೇ ವಿಶಿಷ್ಟ. ಬೆಂಗಳೂರಿನಲ್ಲಿ ಇರುವ ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ಬಿಜಾಪುರ, ಗುರ್ಲಬರ್ಗ, ಬೀದರ್ ಕಡೆಯ ಮಂದಿಗೆ ರೊಟ್ಟಿ ಇಲ್ಲದ ಊಟ ಒಗ್ಗುವುದಿಲ್ಲ. ತುಂಬಾ ಮಂದಿ ರೊಟ್ಟಿ ಊಟ ಸಿಗದೇ ಬೆಂಗಳೂರಿನ ಏರಿಯಾಗಳನ್ನ ಬದಲಿಸಿದವರಿದ್ದಾರೆ. ಹಾಗಾಗಿ, ಬೆಂಗಳೂರಿನಲ್ಲಿ ನೆಲೆಸಿರುವ, ನೆಲೆಸಲಿಚ್ಛಿಸುವ, ಹೊಸದಾಗಿ ಸೇರ್ಪಡೆಯಾಗುತ್ತಿರುವ ಮಂದಿಗೆ ರೊಟ್ಟಿಯದೇ ಚಿಂತೆ. ಹಾಗಾಗಿ ಬಿಸಿಲಹನಿ ಬ್ಲಾಗಿನವರು ರೊಟ್ಟಿ ಸಿಗುವ ಖಾನಾವಳಿ, ಹೊಟೆಲುಗಳ ಪಟ್ಟಿ ಮಾಡಿದ್ದಾರೆ. ಅದನ್ನ ಯಥಾವತ್ತು ಪ್ರಕಟಿಸುತ್ತಿದ್ದೇವೆ. ಅವರ ಅನುಮತಿ ಇರುವುದೆಂದು ಭಾವಿಸಿರುತ್ತೇವೆ. ಇಷ್ಟೊಂದು ಮಾಹಿತಿ ಸಂಗ್ರಹಿಸಿರುವಾತ ತನ್ನ ಬೆಂಗಳೂರಿನ ಬದುಕಿನಲ್ಲಿ ರೊಟ್ಟಿ ಊಟಕ್ಕೆ ಬಹಳ ಪರದಾಡಿರಬೇಕು. ಈ ಎಲ್ಲಾ ಮಾಹಿತಿ ಕಲೆ ಹಾಕಲು ಪಟ್ಟ ಶ್ರಮ ಸಾರ್ಥಕವಾಗಲಿ. ಅವರ ಶ್ರಮಕ್ಕೊಂದು ಸಲಾಮು.

 1. ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ.

2. ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ3. ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ)

4. ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361)

5. ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734)

6. ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ.

7. ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.)

8. ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994)

9. ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201)

10. ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650

11. ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ.

12. ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು

13. ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ

ಘಾಟ್,ರಾಜಾಜಿನಗರ.(ಫೊನ್ ನಂ: 9448542268 )

14. ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ.

15. ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642)

16. ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392)

17. ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365)

18. ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220)

19. ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813)

20. ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ.

21. ಪೈ ವಿಹಾರ್, ಆನಂದರಾವ್ ವೃತ್ತ

22. ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ.

23. ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ


Information by http://bisilahani.blogspot.com

ಒಂದು ದುರಂತದ ಸುತ್ತ…

    ನಿನ್ನೆ (೨೭ ಸೆಪ್ಟೆಂಬರ್) ನಮ್ಮ ದಾವಣಗೆರೆಯ ಡೆಂಟಲ್ ಕಾಲೇಜ್ ರೋಡಿನಲ್ಲಿ ಜಿ.ಎಂ.ಐ.ಟಿ ಬಸ್ ಹರಿದು ಸ್ಕೂಟಿ ಮೇಲೆ ಹೊರಟಿದ್ದ ತರಳುಬಾಳು ಕಾಲೇಜಿನ ಪ್ರಿಯಾಂಕ, ಪ್ರಥಮ ಪಿಯುಸಿ ಹುಡುಗಿ, ಸ್ಥಳದಲ್ಲೇ ಸಾವನ್ನಪ್ಪಿದಳು. ಡ್ರೈವರ್ ಲಕ್ಷ್ಮೀ ಫ್ಲೋರ್ ಮಿಲ್ ವರೆಗೂ ಬಸ್ ಓಡಿಸಿಕೊಂಡು ಹೋಗಿ, ನಂತರ ಪರಾರಿಯಾಗಿದ್ದಾನೆ. ಬಿ.ಜೆ.ಪಿ ಎಮ್ಮೆಲ್ಲೆ, ಎಂಪಿ ಇರೋ ದಾವಣಗೆರೆಯಲ್ಲಿ ಪ್ರಕರಣವನ್ನ ಬಯಲಿಗೆ ಬರದಂತೆ ತಡೆಯುವುದು, ಮುಚ್ಚಿ ಹಾಕುವುದು ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ಅದೂ ಬಿ.ಜೆ.ಪಿ ಸರ್ಕಾವಿರುವ ಕರ್ನಾಟಕದಲ್ಲಿ.

 

    ಆದರೆ ಆ ಹುಡುಗಿ..? ಮರಳಿ ಬರುತ್ತಾಳಾ..? ಇರುವ ಒಬ್ಬಳೇ ಮಗಳು, ಹದಿನೆಂಟು ವರ್ಷ ಸಾಕಿ ಸಲುಹಿದ ಮಗಳು, ಬಂಗಾರ ಬಾಳು ಬಾಳಬೇಕಾದವಳು ಹೀಗೆ ಸತ್ತುಹೋದರೆ ತಂದೆ ತಾಯಿಗಳ ಗತಿಯೇನು..? ಆ ವೇದನೆ, ನೋವು, ಕರುಳ ಮಿಡಿತ ಇವುಗಳಿಗೆ ಸಮಾಧಾನ ಹೇಳಲಾಗುವುದುಂಟೇ..?

 

    ೨೦೦೧ರಲ್ಲಿ ಶುರುವಾದ ಜಿ.ಎಂ.ಐ.ಟಿ ಉತ್ತಮವಾದ ಬೆಳವಣಿಗೆಯನ್ನೇ ತೋರಿತು. ನಾಲ್ಕು ವರ್ಷ ಪೂರೈಸಿದ ಮೂರನೇ ಬ್ಯಾಚ್ ವಿದ್ಯಾರ್ಥಿಗಳು ಹೊರ ಬರುವ ಹೊತ್ತಿಗೆ ಒಂದು ಮಟ್ಟಿಗೆ established ಆಗಿತ್ತು. ಈಗ ಹೊರಬಂದ ಜುಲೈ ೨೦೦೮ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಉತ್ತಮವಾದ ಕ್ಯಾಂಪಸ್ ಸೆಲೆಕ್ಷನ್ ಅವಕಾಶಗಳು ಸಿಕ್ಕವು. ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರ ದೂರದೃಷ್ಟಿಯಿಂದಾಗಿ ದಾವಣಗೆರೆಯಲ್ಲಿ ಜಿ.ಎಂ.ಐ.ಟಿ ಶುರುವಾಯಿತು. ಅವರ ಎಲ್ಲ ಮಕ್ಕಳಿಗೆ ಬೆಂಗಳೂರಿನಲ್ಲಿ ಕಾಲೇಜು ಕಟ್ಟಬೇಕೆಂಬ ಹಂಬಲವಿತ್ತು. ಜಿ.ಎಂ.ಐ.ಟಿ ಉತ್ತಮ infrastructure ಹೊಂದಿದೆ. ವಿಧಾನ ಸೌಧದಂಥಾ ಕಟ್ಟಡವಿದೆ. ಐ.ಟಿ ಕಂಪನಿಗಿರುವ ಕನ್ನಡಿಗಳ ಖದರ್ರಿದೆ.

 

    ಆದರೆ ಇವೆಲ್ಲವುಗಳಿಗೆ ಪೂರಕವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಮೊದಲ ಆದ್ಯತೆಗಳಲ್ಲಿ ಒಂದಾಗಬೇಕು. ಆದರೆ, ಜಿ.ಎಂ.ಐ.ಟಿ ಮೇಲಿರುವ ಪ್ರಮುಖ ಆರೋಪವೆಂದರೆ, ಇಲ್ಲಿ ಮೆಟ್ಟಿಲಿನ, ನೆಲದ ಗ್ರಾನೈಟ್ ಕಲ್ಲು ಒಡೆದು ಹೋದರೆ, ನಾಳೆಯೇ ಸರಿ ಮಾಡಿಸುತ್ತಾರೆ, ಆದರೆ ಒಬ್ಬ ಒಳ್ಳೆ ಲೆಕ್ಚರರ್ ಬಿಟ್ಟು ಹೋದರೆ ಆ ಸ್ಥಳಕ್ಕೆ ಸಮರ್ಥರನ್ನ ಕರೆತರುವ ಕೆಲಸ ಆಗುವುದೇ ಇಲ್ಲ. ಜಿ.ಎಂ.ಐ.ಟಿ ಗೆ ಇನ್ನೂ ಹೆಚ್ಚಾಗಿ ಬೆಳೆಯುವ ಅವಕಾಶಗಳಿದ್ದವು. ಜಿ.ಎಂ.ಐ.ಟಿ.ಯ ಜೊತೆಗೇ  ಶುರುವಾದ ಓರಗೆಯ ಕಾಲೇಜುಗಳಲ್ಲೇ ಇದು superb ಎನ್ನುವಂತೆ performance ತೋರಿತ್ತು. ಇನ್ನೇನು ಬಿ.ಐ.ಇ.ಟಿ.ಯನ್ನೇ ಹಿಂದಿಕ್ಕುತ್ತದೆ ಅನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿತು. ಆದರೆ, ಆದ್ರೆ, ಅದಕ್ಕೆ ಬೇಕಾದ Dedicationನ್ನ ಮ್ಯಾನೇಜ್‍ಮೆಂಟ್ ತೋರಲಿಲ್ಲ. ಉತ್ತಮ ಅನುಭವಿ ಲೆಕ್ಚರರ್‌ಗಳನ್ನ ಕರೆತರಬಹುದಾಗಿತ್ತು. ಆದ್ರೆ. ಇಲ್ಲಿ money matter ಜೊತೆಗೆ ಪಿ.ಹೆಚ್.ಡಿ. ಮಾಡಿದವರಿಗೆ, ಮಾಡುವವರಿಗೆ ರಿಸರ್ಚ್‍ಗಾಗಿ ಇರುವ, ಒದಗಿಸಲಾಗುವ, ಅವರ ಬೆಳವಣಿಗೆಗಾಗಿ ಇರುವ ಅವಕಾಶಗಳೂ ಪರಿಗಣಿಸಲ್ಪಡುತ್ತವೆ. ಕಾಲೇಜಿನ ಸಿಂಗಾರಕ್ಕೆ ಖರ್ಚು ಮಾಡುವುದರಲ್ಲಿ ಒಂದಿಷ್ಟನ್ನ ಅನುಭವೀ ಲೆಕ್ಚರರ್‌ಗಳನ್ನ ಕರೆತರಲು ಉಪಯೋಗಿಸಿದ್ದರೆ, ಕಾಲೇಜಿನ ಉನ್ನತಿ, ಅಭಿವೃದ್ಧಿ, Status ಎಲ್ಲವೂ ಏರುಗತಿಯಲ್ಲೇ ಸಾಗುತ್ತಿದ್ದವು. ಐ.ಐ.ಟಿ ಮಂದಿ ಸಿಗದಿದ್ದರೂ ಸೂರತ್ಕಲ್‍ನಂಥ ಕಾಲೇಜಿನ ನಿವೃತ್ತ ವ್ಯಕ್ತಿಗಳನ್ನ ಕರೆತರಬಹುದಾಗಿತ್ತು. ಪ್ರತಿಯೊಂದು ಬ್ರಾಂಚಿನಲ್ಲಿ ಎಂ.ಟೆಕ್, ಪಿ.ಹೆಚ್.ಡಿ ಮಾಡಿದ ಮಂದಿ ಎಷ್ಟಿದ್ದಾರೆ ಅಂತಾ ಗಮನಿಸಿದರೆ, ಹುಡುಗರಿಗೆ ಆದರ್ಶಪ್ರಾಯವಾದ, ಸ್ಫೂರ್ತಿದಾಯರಾದ ಲೆಕ್ಚರರ್‌ಗಳು ಎಷ್ಟು ಮಂದಿ ಇದ್ದಾರೆ ಅಂತಾ ಕಣ್ಣು ಹಾಯಿಸಿದರೆ ನಿರಾಶೆ ಕವಿಯುತ್ತದೆ. ನಿರೀಕ್ಷಿಸಿದ ಮಟ್ಟಕ್ಕೆ ಕಾಲೇಜು ಏರಲೇ ಇಲ್ಲ. ಹೌದು, ನಿಜಕ್ಕೂ ಜಿ.ಎಂ.ಐ.ಟಿಯ ಅಡಿಟೋರಿಯಂ ಹಾಲ್ ನಿಜಕ್ಕೂ ಸುತ್ತಮುತ್ತಲಿನ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲೂ ಇಲ್ಲ. ಯಾವ ಒಂದು ಕಾರ್ಪೊರೇಟ್ ಕಲ್ಚರ್‌‍ಗೂ ಸರಿಸಮವೆಂಬಂತೆ ಕಾಲೇಜಿನ infrastructure ಇದೆ ಎಂಬುದನ್ನ ನಿರ್ವಿವಾದಿತವಾಗಿ ಒಪ್ಪಬಹುದು.

 

    ಆದ್ರೆ, ಇವೆಲ್ಲವುಗಳಿಗೆ ಕಳಶವಿಟ್ಟಂತೆ ಶಿಕ್ಷಣದ ಗುಣಮಟ್ಟವೂ ಇರಬೇಕು ಎಂದು ಬಯಸುವುದರಲ್ಲಿ ತಪ್ಪೇನಿದೆ..?

 

    ಒಂದೇ ಬಿಲ್ಡಿಂಗ್‌ನಲ್ಲೇ ಬೇರೆ ಬೇರೆ ಅಂತಸ್ತುಗಳಲ್ಲಿ ಬೇರೆ ಬೇರೆ ಬ್ರಾಂಚುಗಳು ನೆಲೆಸಿರುವುದೂ ಕೂಡಾ Inter branch interferenceಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಲ್ಲ ಕಾಲೇಜುಗಳಲ್ಲಿ ಪ್ರತಿಯೊಂದು ಬ್ರಾಂಚ್‍ಗೆ ಬೇರೆಯಾದ ಕಟ್ಟಡವೇ ಇರುತ್ತದೆ. ಇದರಿಂದ ಪ್ರತಿಯೊಂದು ಬ್ರಾಂಚ್ ಕೂಡಾ ತನ್ನದೇ ಆದ ರೀತಿಯಲ್ಲಿ ಬೆಳೆಯುತ್ತ ಹೋಗಲಿಕ್ಕೆ ಅವಕಾಶಗಳಿರುತ್ತವೆ. ಆದರೆ ಒಂದೇ ಕಟ್ಟಡವಿದ್ದಾಗ, ಪ್ರಿನ್ಸಿಪಾಲರು ಎಲ್ಲ ಬ್ರಾಂಚುಗಳ ಮೇಲ್ವಿಚಾರಣೆ ನೆಡೆಸುವುದಕ್ಕಿಂತ ಎಲ್ಲ ಬ್ರಾಂಚುಗಳಲ್ಲಿ ಹಿಡಿತ ಸಾಧಿಸುವತ್ತ ಸಾಗುವುದರಿಂದ ಬ್ರಾಂಚುಗಳು autonomous ಆಗಿ ಕೆಲಸ ಮಾಡಲಿಕ್ಕೆ ಅಡ್ಡಿಯಾಗುತ್ತದೆ. ಪ್ರತಿಸಲವೂ ಪ್ರಿನ್ಸಿಪಾಲರು ಬ್ರಾಂಚ್ ಹೆಚ್.ಓ.ಡಿ.ಗಳನ್ನ ಸಣ್ಣ ಸಣ್ಣ ವಿಷಯಗಳಿಗೆ ಪ್ರಶ್ನಿಸುವುದರಿಂದ, ಅವರು ಲೆಕ್ಚರರ್‌ಗಳ ಮೇಲೆ ರೇಗುತ್ತಾರೆ, ಲೆಕ್ಚರರ್‌ಗಳು ಹುಡುಗರ ಮೇಲೆ ರೇಗುತ್ತಾರೆ. ಇದು ಎಲ್ಲ ಕಡೆ ನೆಡೆಯುವ ಸಂಗತಿಯಾದರೂ, ವಿದ್ಯಾರ್ಥಿಗಳಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗುವಂತೆ ಮಾಡಬಾರದು.

 

    ಅನಾಹುತಕ್ಕೆ ಸಂಬಂಧಿಸಿದಂತೆ ಇದನ್ನೆಲ್ಲಾ ಏಕೆ ಹೇಳಬೇಕಾಯಿತೆಂದರೆ, ಒಂದು ಬೇಜವಾಬ್ದಾರಿತನಕ್ಕೆ, ಲೋಪದೋಷಕ್ಕೆ ತನ್ನದೇ ಆದ internal matters ಕಾರಣವಾಗಿರುತ್ತವೆ ಅಂತಾ ತಿಳಿಸಲಿಕ್ಕೆ.

 

    ಡ್ರೈವರ್ ಮಾಡಿದ ಅನಾಹುತಕ್ಕೆ ಕಾಲೇಜಿನ ಮ್ಯಾನೇಜ್‍ಮೆಂಟ್ ನೇರ ಹೊಣೆಯಾಗಿರಲಾರದು. ಆದರೆ, ಪರೋಕ್ಷವಾಗಿ..? ಕೆಲ ತಿಂಗಳ ಹಿಂದೆ ಕಾಲೇಜು ಬಸ್ಸು ಬಿ.ಡಿ.ಟಿ ಕಾಲೇಜಿನ ಕಾಂಪೋಂಡಿಗೆ ಗುದ್ದಿ ಕಾಂಪೋಂಡು ಬಿದ್ದುಹೋಗಿತ್ತು. ಆ ಅನಾಹುತಕ್ಕೆ ಮಳೆಯ, ಕೆಸರಿನ ಕಾರಣ ಕೊಡಬಹುದಾದರೂ ಜೀವಹಾನಿ ಸಂಭವಿಸಿರಲಿಲ್ಲ. ಆಗಲೇ ಮುನ್ನೆಚ್ಚರಿಕೆ ವಹಿಸಿ ಡ್ರೈವರುಗಳನ್ನ ಹದ್ದುಬಸ್ತಿನಲ್ಲಿಡುವಂತೆ ಆದೇಶಿಸಬಹುದಾಗಿತ್ತು. ಆರೇಳು ಬಸ್ಸುಗಳಲ್ಲಿ ಐನೂರಕ್ಕೂ ಹೆಚ್ಚು ಹುಡುಗ-ಹುಡುಗಿಯರು ಓಡಾಡುವಾಗ ಎಚ್ಚರಿಕೆ ವಹಿಸುವುದು ಕರ್ತವ್ಯ. ಹುಡುಗರ ಬಸ್ಸು, ಹುಡುಗಿಯರ ಬಸ್ಸುಗಳು ಒಮ್ಮೆಗೇ ಹೊರಟಾಗ, ರೇಸಿಗೆ ಬಿಟ್ಟಂತೆ ಕೆಲ ಡ್ರೈವರ್‌ಗಳು ಡ್ರೈವ್ ಮಾಡುವುದೂ ಇತ್ತು. ಇವೆಲ್ಲವುಗಳ ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕಿತ್ತು. ಇಲ್ಲಿ ನಾನು ಆಡಳಿತ ಮಂಡಳಿಯ ಬಗ್ಗೆಯೇ ಆರೋಪಿಸುವುದಿಲ್ಲ. ಚಾಲಕರ ಅಜಾಗರೂಕತೆಯೂ ಇದೆ. ಆದ್ರೆ, ಮೇಲ್ವಿಚಾರಣೆಯಲ್ಲಿರುವವರು ಟೈಮ್ ಲಿಮಿಟ್‍ಗಳನ್ನ ಹಾಕಿ ಒತ್ತಡದಲ್ಲಿ ಚಾಲಕರಿಗೆ ಗಾಡಿ ಓಡಿಸುವಂತೆ ಮಾಡುವುದರಿಂದಲೂ ಅನಾಹುತಗಳು ಸಂಭವಿಸಬಹುದು.

 

    ಎ.ಐ.ಸಿ.ಟಿ.ಯು. ಕಾನೂನಿನ ಪ್ರಕಾರ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪಿ.ಯು.ಸಿ ಕಾಲೇಜುಗಳನ್ನ ನೆಡೆಸಬಾರದೆಂಬ ಕಾನೂನಿದೆ. ಮೊನ್ನೆ ಮೊನ್ನೆ ಎ.ಐ.ಸಿ.ಟಿ.ಯು. ಸಮಿತಿಯವರು ಬಂದಾಗ ಅದನ್ನ “ಸರಿಮಾಡಿಕೊಂಡರು” ಎಂಬ ಆರೋಪವಿದೆ. ಇರುವ ಎಂಜಿನಿಯರಿಂಗ್ ಕಾಲೇಜನ್ನೇ ಉತ್ತಮಿಕೆಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಬದಲು ಒಂದೇ ಕ್ಯಾಂಪಸ್‌ನಲ್ಲಿ, ಒಂದೇ ಬಿಲ್ಡಿಂಗ್‍ನಲ್ಲಿ ಪಿ.ಯು.ಸಿ, ಎಂ.ಬಿ.ಎ. ಕಾಲೇಜುಗಳನ್ನ ತೆರೆಯುವುದರಿಂದ Education standard ಯಾವ ಕ್ಷೇತ್ರದಲ್ಲೂ ಎತ್ತರಿಸಲಿಕ್ಕೆ ಸಾಧ್ಯವಿಲ್ಲ ಎಂಬುದನ್ನ ಆಡಳಿತ ಮಂಡಳಿಯ ಜಿ.ಎಂ.ಲಿಂಗರಾಜ್‍ರವರು, ಸಂಸದ ಜಿ.ಎಂ.ಸಿದ್ಧೇಶ್‍ರವರು ತಿಳಿಯಬೇಕು.

 

    ವಿದ್ಯೆ ಕಮರ್ಷಿಯಲೈಸ್ ಆಗಿದೆ. ಅದನ್ನ ಒಪ್ಪಬೇಕು. ವಿದ್ಯೆ ಪಡೆಯಲಿಕ್ಕೆ, ವಿದ್ಯೆ ನೀಡುವ ಆರ್ಗನೈಸೇಷನ್ Insfrastructure setup ಮಾಡಲಿಕ್ಕೆ ಅಪಾರ ಪ್ರಮಾಣದ ದುಡ್ಡು ಬೇಕು. ಆದ್ರೆ, ಅದೇ ವ್ಯಾಪಾರವಾಗಬಾರದು. ವ್ಯಾಪಾರವೇ ಮಾಡಬೇಕೆಂದಿದ್ದರೆ, ಅಡಿಕೆ, ಮೈನಿಂಗ್‍ನಲ್ಲೇ ವ್ಯಾಪಾರ ಮಾಡಬಹುದಾಗಿತ್ತು. ಇದೇ ರೀತಿ ಮಾಡಿದ್ದರೆ, ಟಾಟಾರಂಥವರು, ಐ.ಐ.ಎಸ್.ಸಿ.ಯಂಥಾ ವಿದ್ಯಾಲಯವನ್ನ ಕಟ್ಟಲಾಗುತ್ತಿತ್ತಾ..? ಎರಡು ಮೂರು ದೋಣಿಗಳಲ್ಲಿ ಕಾಲಿಟ್ಟು ಕೆಳಗೆ ಬೀಳುವ ಬದಲು ಒಂದೇ ದೋಣಿಯಲ್ಲಿ ಸಾಗಿ ದಡಸೇರುವುದುತ್ತಮ.

 

    ಏನೇ ಆಗಲಿ, ಈ ದುರ್ಘಟನೆ ಜಿ.ಎಂ.ಐ.ಟಿ.ಗೆ ಕಪ್ಪುಚುಕ್ಕೆಯಂತೆ ಎಂಬುದಂತೂ ದಿಟ.

 

    ಈಗ ಆದದ್ದಾಯಿತು. ಮುಂದಾದರೂ ಎಚ್ಚೆತ್ತುಕೊಳ್ಳಲಿ. ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲು ಹಾಕಬೇಕೆಂಬ ಸಾತ್ವಿಕ ವ್ಯಕ್ತಿ ಜಿ.ಮಲ್ಲಿಕಾರ್ಜುನಪ್ಪನವರ ಕನಸನ್ನ ಅವರ ಮಕ್ಕಳು ನನಸು ಮಾಡುವರೆಂದು ನಂಬಬಹುದೇ..?

 

 

 

 

ಜಗತ್ನಲ್ಲಿ ಇರೋದು ಎರಡೇ ಥರ. ಒಂದು ಚೆನ್ನಾಗಿರೋದು. ಇನ್ನೊಂದು ತುಂಬಾ ಚೆನ್ನಾಗಿರೋದು.

    ಗೆಳೆಯ ಶಶಾಂಕ ಹಿಂಗೆ ಹೇಳ್ತಾ ಇದ್ರೆ, ಇದ್ಯಾವುದೋ ಕಾರ್ಪೊರೇಟ್ ಮಂದಿ ಮಾತಾಡೋ ಪಾಸಿಟಿವ್ ಥಿಂಕಿಂಗ್ ಥಿಯರಿ ಥರಾ ಇದೆ ಅನ್ನಿಸ್ತಾ ಇತ್ತು. ಎಷ್ಟೇ ಆಗ್ಲಿ ಆತ ಸಾಫ್ಟ್‍ವೇರ್ ಕಂಪನಿಯವ ತಾನೇ. ಅದನ್ನ ಅವನು ಉಪಯೋಗಿಸಿಕೊಳ್ಳೋದು ವಿಚಿತ್ರ ಸಂದರ್ಭದಲ್ಲಿ..! ಶನಿವಾರ, ಭಾನುವಾರ ಹಿಂಗೇ ಸುತ್ತಾಡುವಾಗ ಸಿಗುವ ಹುಡುಗಿಯರನ್ನು ನೋಡಿ ಕಾಮೆಂಟ್ ಹೊಡೆಯುವಾಗ, ಅಷ್ಟೇನೂ ಸುಂದರಿಯರಲ್ಲದ ಹುಡುಗಿಯರನ್ನು ನೋಡಿದಾಗ ಬೇರೆ ಹುಡುಗರು ಚೆನ್ನಾಗಿದ್ದಾಳೆ ಅಂದಾಗ ನನ್ನ ಪ್ರತಿಕ್ರಿಯೆ “ಏನು ಕಮ್ಮಗೆ ಅದಳೆ ಬಿಡೋ” ಅನ್ನೋ ಶುದ್ಧ ಉಡಾಫೆ ಅಗಿರ್ತಾ ಇತ್ತು (ಮತ್ತು ಇದೆ..!). “ಕಂಡದ್ದನ್ನ ಕಂಡಂಗೆ ಹೇಳ್ತೀನಪ್ಪಾ ಅದ್ರಲ್ಲೇನು ವಿಶೇಷ? ಲೇ, ಬೆಂಗಳೂರಿಗೆ ಬಂದಮೇಲೆ ನಿನ್ನ ಟೇಷ್ಟು ಕೆಟ್ಟು ಕೆರ ಹಿಡಿದುಬಿಟ್ಟಿದೆ. ಯಾವ್ಯಾವಳಿಗೋ ಫಿಗರ್ರು ಅಂತೀಯಲ್ಲಲೇ?” ಅಂತಾ ಛೇಡಿಸ್ತಾ ಇದ್ದೆ. ಆತ ಆಗ, “ಲೇ, ಜಗತ್ತಿನಲ್ಲಿ ಎರಡೇ ಥರಾ ಇರೋದು. ಒಂದು ಚೆನ್ನಾಗಿರೋದು. ಇನ್ನೊಂದು ತುಂಬಾ ಚೆನ್ನಾಗಿರೋದು” ಅಂತಾ ಲೆಕ್ಚರ್ ಕೊಡ್ತಾ ಇದ್ದ. ನಮ್ಮಿಬ್ಬರ ಜೊತೆಗೆ ಗೆಳೆಯ ಕಾರ್ತೀಕ ಸೇರಿಕೊಂಡುಬಿಟ್ಟರೆ, “ಲೇ ನಿನ್ನ ಮದುವ್ಯಾಗೆ ಸ್ಟೇಜ್ ಮ್ಯಾಲ್ ಬಂದೇ ಹೇಳ್ತೀನಲೇ. ಲೇ ಎನ್ ಕಮ್ಮಗದಳಲೇ ನಿನ್ನ್ ಹೇಣ್ತಿ” ಅಂತಾ ನನಗೇ ಕಾಲೆಳೆಯುತ್ತಾನೆ..! ಬೆಂಗಳೂರು ಕಡೆ ಈ ‘ಕಮ್ಮಗೆ’ ಅನ್ನೋ ಪದ ಚಾಲ್ತಿಯಲ್ಲಿರೋದು ಕಡಿಮೆ. ನಮ್ಮ ದಾವಣಗೆರೆ ಕಡೆ ಹೆಚ್ಚು ಚಾಲ್ತಿಯಲ್ಲಿದೆ. ಅಷ್ಟೇನೂ ಚೆನ್ನಾಗಿಲ್ಲದ್ದಕ್ಕೆ, ಆಕರ್ಷಕವಾಗಿಲ್ಲದ್ದಕ್ಕೆ ವಸ್ತುವಿಗಾಗಲೀ ವ್ಯಕ್ತಿಗಾಗಲೀ ಬಳಸಲ್ಪಡುತ್ತದೆ.

    “ಕಟ್ರಾಸು” ಎಂಬ ಪದವೂ ಕನಿಷ್ಟದಲ್ಲಿ ಅತಿ ಕನಿಷ್ಟ ಎನ್ನುವುದನ್ನು ಬಿಂಬಿಸಲಿಕ್ಕೆ ಬಳಸಲ್ಪಡುತ್ತದೆ. ಬೆಂಗಳೂರಿನಲ್ಲಿ ಆ ಥರ ಶಬ್ದಗಳು ಕಿವಿಗೆ ಈ ವರೆಗೆ ಬಿದ್ದಿಲ್ಲ. ಇನ್ನೊಂದು ವಿಷ್ಯ. ಇದ್ದಿದ್ದು ಇದ್ದಂಗೆ ಹೇಳ್ತೀನಿ. ಇದರಲ್ಲೇನು ಉತ್ಪ್ರೇಕ್ಷೆ ಇಲ್ಲ. ನಮ್ಮ ದಾವಣಗೆರೆ, ಉತ್ತರ ಕರ್ನಾಟಕದ ಭಾಗಗಳಲ್ಲಿ(ದಾವಣಗೆರೆ ಮಧ್ಯಕರ್ನಾಟಕ..!) ಅಷ್ಟೇನೂ ಸುಂದರಿಯರಲ್ಲದವರನ್ನು ನೋಡಿದರೆ, ತುಂಬಾ ವಿಕಾರದ ವ್ಯಕ್ತಿಗಳನ್ನು ಕಂಡ್ರೆ “ಹೇತ್ರೆ ಹೇಲ್ ಬರಲ್ಲ” ಅನ್ನೋ ಮಾತಿದೆ. ಆದ್ರೆ, ಸುಂದರವಾಗಿದ್ದೋರನ್ನ ಕಂಡಾಗಲೆಲ್ಲಾ ಅದು ಬರುತ್ತಾ ಅನ್ನೋದು ನನ್ನ ಪ್ರಶ್ನೆ..!

   ಬೆಂಗಳೂರಿಗೆ ತನ್ನದೇ ಅದ ಭಾಷೆ ಅನ್ನೋದು ಉಳಿದಿಲ್ಲ. ಎಲ್ಲ ಕಲಸು ಮೇಲೋಗರ. “ಏನ್ ಮಗಾ? ಹೆಂಗವ್ಳೆ ನಿನ್ನ್ ಡವ್?” ಅನ್ನೋದೇ ಬೆಂಗಳೂರಿನ ಅಸಲಿಯತ್ತಿನ ಭಾಷೆ ಅಂತಾ ಬಿಂಬಿಸುತ್ತಿದ್ದಾರೆ. ಅದರ ಚಾಳಿ ನಮ್ಮೂರುಕಡೆಗೂ ಹಬ್ತಾ ಇದೆ. ಆದ್ರೆ, ನಮ್ಮಕಡೆ ಭಾಷೆಯಲ್ಲಿನ ಸೊಗಡು, ಗ್ರಾಮೀಣ ಸೊಗಸು ಇಲ್ಲಿ ಮಾಯವಾಗಿದೆ. ಬೆಂಗಳೂರು, ಮೈಸೂರುಗಳು ಮೊದಲು “ಸೌಮ್ಯ ಕನ್ನಡ”ಕ್ಕೆ ಹೆಸರಾಗಿದ್ದಂಥವುಗಳು. ಬರೀ ಕಲಾಸಿ ಪಾಳ್ಯದ ಭಾಷೇನ ತಗಂಡು, ಸಿನಿಮಾದಲ್ಲಿ ತೋರಿಸಿ ತೋರಿಸಿ, ಇದೇ ಬೆಂಗಳೂರು, ಇದೇ ಕರ್ನಾಟಕ ಅಂತಾ ತೋರಿಸೋ ಹಡಕಲಾಸಿ ನಿರ್ದೇಶಕರು, ನಿರ್ಮಾಪಕರು ಬೆಂಗಳೂರಲ್ಲಿ ಬಹಳಷ್ಟಿದ್ದಾರೆ.

   ಒಮ್ಮೆ ಯೋಚಿಸಿ ನೋಡಿ. ಸಿನಿಮಾ ಮತ್ತು ತಾರುಣ್ಯದ ಬದುಕು ಎಷ್ಟು ಬೆಸೆದುಕೊಂಡಿವೆ. ಮತ್ತು ಎಷ್ಟು ಪೂರಕವಾಗಿ ಕೆಲಸ ಮಾಡುತ್ತಿವೆ ಅಂತಾ. ಸಿನಿಮಾದಲ್ಲಿ ತೋರಿಸಿದ್ದನ್ನ ಹುಡುಗರು, ಹುಡುಗಿಯರು ಅನುಕರಿಸುತ್ತಾರೆ. ಅದು ಒಳ್ಳೇದೋ ಕೆಟ್ಟದ್ದೋ. ಹುಡುಗರು-ಹುಡುಗಿಯರು ಕಬ್ಬನ್ ಪಾರ್ಕು, ಹೋಟೆಲ್ಲು, ಲಾಲ್‍ಬಾಗು, ಶಾಪಿಂಗ್ ಕಾಂಪ್ಲೆಕ್ಸು ಸುತ್ತಾಡೋದನ್ನೇ ತಾರುಣ್ಯದ ಜೀವನ. ಕಾಲೇಜು ಬಿಟ್ಟು ತಿರುಗಾಡೋದನ್ನೇ ದೊಡ್ಡಸ್ತಿಕೆ ಅಂತಾ ತೋರಿಸೋ ಅವಿವೇಕಿ ನಿರ್ದೇಶಕರು, ನಿರ್ಮಾಪಕರು “ಸ್ಯಾಂಡಲ್‍ವುಡ್”ನಲ್ಲಿ ಹಲವರಿದ್ದಾರೆ. ಒಮ್ಮೆ ಕಣ್ಣು ಹಾಯಿಸಿ. ಪಾರ್ಕು, ಹೋಟೇಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಅಪ್ಪನ ದುಡ್ನಲ್ಲಿ ಐಶಾರಾಮಿ ಮಜಾ ಮಾಡೋ ಯುವಕ ಯುವತಿಯರನ್ನ ತೋರಿಸಿಯೇ ಸಿನಿಮಾ ಮಾಡುತ್ತಾರೆ. ಮತ್ತೆ ಅದು ಯುವಕ ಯುವತಿಯರನ್ನೇ ಬಲಿಯಾಗಿಸುತ್ತದೆ. “ಚೆಲುವಿನ ಚಿತ್ತಾರ ಸ್ಟೈಲ್ ಎಸ್ಕೇಪ್” ಅನ್ನೋ ಲೇಖನ ಮೂಡಿಬಂದಿತ್ತು “ಹಾಯ್ ಬೆಂಗಳೂರ್”ನಲ್ಲಿ. ಚೆಲುವಿನ ಚಿತ್ತಾರ ನೋಡಿ ಅದೆಷ್ಟು ಮುಗ್ಧ ಹುಡುಗಿಯರು ಹುಡುಗರ ಜೊತೆ ಓಡಿಹೋಗಿದ್ದಾರೋ. ಸಿನಿಮಾದಲ್ಲಿ ತೋರಿಸಿದ್ದನ್ನೇ ಜನ ಮಾಡ್ತಾರೆ. ಜನ ಮಾಡಿದ್ದನ್ನೇ ಸಿನಿಮಾ ಮಾಡಿದ್ದೇವೆ ಅಂತಾ ಬೊಗಳೇ ಬಿಡುವ ಬೊಗಳೇ ದಾಸರು ಇದ್ದರೆ ಕ್ರಿಯೇಟಿವಿಟಿ ಹೇಗೆ ಬಂದೀತು?

   ಮೊನ್ನೆ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆಡೆದ ಘಟನೆ. ರಶ್ ಜಾಸ್ತಿ ಇದ್ದುದರಿಂದ, ಒಬ್ಬನ ಕಾಲು ಇನ್ನೊಬ್ಬನಿಗೆ ತಾಗಿತು. ಬಹುಷಃ ತುಳಿದ ಅಂತಾ ಕಾಣುತ್ತೆ. ತುಳಿಸಿಕೊಂಡವ ಕ್ಯಾತೆ ತೆಗೆದ. ತುಳಿದವನಿಗೆ ರೇಗಿ ಹೋಯಿತು. ಆತ ಏನನ್ನಬೇಕು. ಮೊದಲೇ ಯುವಕ. ಸ್ವಲ್ಪ ಒರಟ. “ಮರ್ಡರ್ ಆಗ್ಬಿಡ್ತೀಯ” ಅನ್ನಬೇಕೇ? ನಮ್ಮೂರು ಕಡೆಗೆ ಜಗಳ ಆಡಲಿಕ್ಕಾದರೂ ಬರ್ತದೆ. ಮನುಷ್ಯತ್ವ ಐತೋ ಇಲ್ಲೋ? ಹೊಟ್ಟೀಗೆ ಅನ್ನ ತಿನ್ತಿಯಾ ಏನ್ ತಿನ್ತೀಯ ಅಂತಾ ಬೈತಾರೆ. ಹಳೀತಾರೆ. ಆದರೆ ಒಂದೇ ಮಾತಿಗೆ “ಮರ್ಡರ್” ಮಾತುಗಳು ಬರುವುದಿಲ್ಲ. ಇಲ್ಲಿ ಇದು ಬೆಂಗಳೂರು ಪ್ರಭಾವ..

   ನಮ್ಮೂರಲ್ಲಿ ಪಾರ್ಕುಗಳಲ್ಲಿ ಜನ ಅಡ್ಡಾಡೊ ಕಡೆ ಕೂತು “ಬಾಂಡು” ಹೊಡೆಯುವ ಜೋಡಿಗಳಿಲ್ಲ. ಇದ್ದರೂ ಕಂಡಕಂಡವರ ಮುಂದೆ ಹಿಂಗೆ ಮಂಗಾಟ, ಹುಚ್ಚಾಟ ಮಾಡೋದಿಲ್ಲ. ಇದನ್ನೆಲ್ಲಾ ನೆನೆಸಿಕೊಂಡಾಗ ನಮ್ಮೂರು ಚೆನ್ನಾಗಿದೆ ಅನ್ನಿಸುತ್ತೆ. ಬೆಂಗಳೂರನ್ನ ರೆಫರೆನ್ಸಾಗಿ ಹಿಡಿದರೂ, ಇನ್ನೂ ಚೆನ್ನಾಗಿದೆ ಅನ್ಸುತ್ತೆ. ನಮ್ಮೂರು ಮಾತ್ರವಲ್ಲ ಬೆಂಗಳೂರನ್ನುಳಿದು ಬೇರೆ ಎಲ್ಲಾ ಕರ್ನಾಟಕದ ಊರುಗಳೂ..!