ಇನ್ನಾದರೂ ನ್ಯೂಸ್ ಚಾನಲ್‍ಗಳು ಹೊಟ್ಟೆಗೆ ಅನ್ನ ತಿನ್ನುವ ಕೆಲಸ ಮಾಡಲಿ.

1999 ರಲ್ಲಿಯೂ ಪ್ರಳಯದ ಬಗ್ಗೆ ಚರ್ಚೆ ಮತ್ತು ವಿವಾದಗಳು ಭುಗಿಲೆದ್ದಿದ್ದವು. 2000 ಕ್ಕೆ ಪ್ರಳಯವಾಗುತ್ತದೆ. ಕಲ್ಲಿನ ಕೋಳಿ ಕೂಗುತ್ತದೆ. ಹಂಪೆಯ ರಥ ಚಲಿಸುತ್ತದೆ. ಭೂಮಿ ಬುಡಮೇಲಾಗುತ್ತದೆ. ಸಾಗರಗಳು ಉಕ್ಕಿ ಹರಿಯುತ್ತವೆ. ಅದ್ಯಾವನೋ ಹಡಕಲಾಸಿ ಜೋತಿಷಿ ನಾಸ್ಟ್ರಾಡಾಮಸ್ ಯಾವಾಗಲೋ ಹೇಳಿದ್ದನಂತೆ. ಅದನ್ನ ಹನ್ನೆರಡು ವರ್ಷಗಳ ಹಿಂದೆ ನಮ್ಮ ಜನ ಬಾಯಿ ಚಪ್ಪರಿಸಿ ಹೇಳಿದ್ದೋ ಹೇಳಿದ್ದು. ಮಾಧ್ಯಮಗಳಲ್ಲೂ ಚರ್ಚೆ. ಆಗ ಇದ್ದ ಪ್ರಭಾವಿ ಮಾಧ್ಯಮಗಳೆಂದರೆ ಪತ್ರಿಕೆಗಳೇ. ಉದಯ ಟೀವಿಯಲ್ಲಿ ದಿನಕ್ಕೆ ಮೂರು ಸಲ ನ್ಯೂಸು ಬರುತ್ತಿತ್ತು ಅನ್ನೋದನ್ನ ಬಿಟ್ಟರೆ ಜನ ಸುದ್ದಿಯ ಹಪಹಪಿಗಳಾಗಿರಲಿಲ್ಲ. ಈಗ ಕಾಲ ಬದಲಾಗಿದೆ. 2012. ಕನ್ನಡದಲ್ಲೇ ಇಪ್ಪತ್ತನಾಲ್ಕು ತಾಸು ನ್ಯೂಸು “ಉತ್ಪಾದಿಸುವ” ಆರು ನ್ಯೂಸ್ ಚಾನಲ್‍ಗಳಿವೆ. ಇಡಿ ಒಂದು ವರ್ಷ ಅದೇ ತಲೆಕೆಟ್ಟ ಜೋತಿಷಿಗಳು, ಬ್ರಹ್ಮಾಂಡಿಗಳು, ಗುರೂಜಿಗಳು(?), ಇವರೆಲ್ಲರ ಜೊತೆಗೆ ವಿಜ್ಞಾನಿಗಳು. ಮೊದಮೊದಲು ವಿಜ್ಞಾನಿಗಳನ್ನ ಕರೆಸುತ್ತಲೇ ಇರಲಿಲ್ಲ. ಜನ ವಿರೋಧಿಸಿದ ಮೇಲೆ ಅವರು ಬಂದರಷ್ಟೇ. ಆದರೆ, ವಿಜ್ಞಾನಿಗಳ ಗೋಳು ನೋಡಿ. ತರ್ಕವೇ ಇಲ್ಲದ ಜೋತಿಷ್ಯದ ಮುಂದೆ ತರ್ಕವನ್ನ ಮಂಡಿಸಬೇಕು. ಇದ್ದ ಬದ್ದ ಎಲ್ಲ ಜೋತಿಷಿಗಳು ಲ್ಯಾಪ್ ಟಾಪ್ ಹಿಡಿದುಕೊಂಡು “ವೈಜ್ಞಾನಿಕ ಜೋತಿಷಿ”ಗಳಾಗುತ್ತಿದ್ದಾರೆ. ಆದರೆ, ವಿಜ್ಞಾನಿಗಳು ಭವಿಷ್ಯಗಾರರಾಗದೆ ಸೋಲುತ್ತಿದ್ದಾರೆ. ಅದು ಸಾಧ್ಯವೂ ಇಲ್ಲ.

ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಜನ ಭಯಭೀತರಾಗುವಂತೆ ಅನಿಮೇಟೆಡ್ ವೀಡಿಯೋಗಳನ್ನ ತೋರಿಸಿದ ವಾಹಿನಿಗಳು ಪ್ರಳಯದ ದಿನ ಹತ್ತಿರ ಬಂದಂತೆ ಪ್ರಳಯ ಆಗಲ್ಲ ಅಂತಾ ಘಂಟಾಘೋಷವಾಗಿ ಹೇಳಲಿಕ್ಕೆ ತಯಾರಾದವು. ಕಹಾನಿಮೇ ಟ್ವಿಸ್ಟ್..! ಇನ್ನಾದರೂ ನ್ಯೂಸ್ ಚಾನಲ್‍ಗಳು ಹೊಟ್ಟೆಗೆ ಅನ್ನ ತಿನ್ನುವ ಕೆಲಸ ಮಾಡಲಿ.