ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆಗೆ

ನನ್ನ ವಿರುದ್ಧ ಆರೋಪಗಳಿಗೆ ಇಗೋ ಸಮಾರೋಪ

ಈ ವರ್ಷ ಸಂಕ್ರಾಂತಿ ನನ್ನ ವೃತ್ತಿ ಜೀವನದಲ್ಲೂ ಸಂಕ್ರಾಂತಿಯ ಗಳಿಗೆ. ಆ ವೇಳೆಯಲ್ಲಿ ನಾನು ದಿಢೀರನೆ ಸುವರ್ಣ ನ್ಯೂಸ್ ಬಿಡುವ ನಿರ್ಧಾರ ಕೈಗೊಂಡಿದ್ದು, ಕನ್ನಡದ ಎರಡು ಪ್ರಮುಖ ಪತ್ರಿಕೆಗಳಲ್ಲಿ ಯಾವುದನ್ನು ಸೇರಲಿ ಎಂಬ ಆಯ್ಕೆಯ ಮುಂದೆ ಕುಳಿತು ಹಗಲೂ ರಾತ್ರಿ ಯೋಚಿಸಿದ್ದು, ನನ್ನ ಸಹೋದ್ಯೋಗಿಗಳೋಡನೆ ಈ ಕುರಿತು ಚರ್ಚಿಸಿದ್ದು, ನಂತರ ಉದಯವಾಣಿಯ ಗ್ರೂಪ್ ಎಡಿಟರ್ ಆದದ್ದು, ಯಾವುದೇ ತಯಾರಿ ಇಲ್ಲದೇ ಮೂರು ಬಜೆಟ್, ವಿಶ್ವಕಪ್ ಕ್ರಿಕೆಟ್ ಮುಂತಾದ ಪ್ರಮುಖ ದಿನಗಳ ಪತ್ರಿಕೆ ರೂಪಿಸಿದ್ದು, ದಿಢೀರನೆ ಹುಬ್ಬಳ್ಳಿ ಆವೃತ್ತಿ ಆರಂಭಿಸಿದ್ದು, ಪತ್ರಿಕೆಯ ಮುಂದಿನ 5 ವರ್ಷಗಳ ನೀಲನಕ್ಷೆ ರೂಪಿಸಲು ಕೈಹಾಕಿದ್ದು, ಮಂಗಳೂರು ಆವೃತ್ತಿಯ ವೃತ್ತಿಸೂಕ್ಷ್ಮಗಳನ್ನು ಅಭ್ಯಸಿಸಿದ್ದು, ಬೆಂಗಳೂರು ಆವೃತ್ತಿಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳಲು ಅವಿರತ ಪ್ರಯತ್ನಿಸಿದ್ದು…. ಹೀಗೆ ಒಂದು ದಿನವೂ ಬಿಡುವಿಲ್ಲದೇ ಕಳೆದ 5 ತಿಂಗಳು ಅದು ಹೇಗೆ ಉರುಳಿತೋ ಗೊತ್ತಾಗುತ್ತಲೇ ಇಲ್ಲ.

ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆ ಬರೆದಿದ್ದಾರೆ. ಅವರಿಗೆ ಪ್ರತಿಕ್ರಿಯೆ.

ಮೊದಲನೆಯದಾಗಿ ಉದಯವಾಣಿಯಲ್ಲಿ ಚಲನಶೀಲತೆಗೆ ಕೈಹಾಕಿರುವ ನಿಮಗೆ ಶುಭವಾಗಲಿ.

ಎರಡನೆಯದಾಗಿ ಮೀಡಿಯಾ strategy ಗಳ ಬಗ್ಗೆ ಬರೆದಿದ್ದೀರಿ. ಹಾಗಾಗಿ ಒಂದು ವಿಷಯವನ್ನ ಪ್ರಸ್ತಾಪಿಸಲಿಕ್ಕೆ ಇಚ್ಷಿಸುತ್ತೇನೆ. ಮೊನ್ನೆ ಮೊನ್ನೆ ಹುಬ್ಬಳ್ಳಿ ಆವೃತ್ತಿ ಬಿಡುಗಡೆ ಮಾಡಿದ್ದೀರಿ. ನೋಡಿದ್ದೇನೆ. ಕನ್ನಡದ ಬೇರಾವ ಪತ್ರಿಕೆಯಲ್ಲೂ ಇರದ ಪ್ರಿಂಟ್ ಕ್ವಾಲಿಟಿ ಉದಯವಾಣಿಗೆ ಇದೆ. ಹುಬ್ಬಳ್ಳಿ ಆವೃತ್ತಿ ಮೂಲಕ ಉದಯವಾಣಿ “ಕರಾವಳಿ” ಬ್ರಾಂಡಿನಿಂದ ಆಚೆಗೆ ಯೋಚಿಸಿದೆ. ಆದರೆ, ಹುಬ್ಬಳ್ಳಿ ಆವೃತ್ತಿಯಲ್ಲಿ ನಾನು ಗಮನಿಸಿದಂತೆ ಈ ಕಡೆಯ ಭಾಷಾ ಬಳಕೆ ನಡೆದಿಲ್ಲ. ಅಟ್ಲೀಸ್ಟ್ ದಿನಕ್ಕೆ ಒಂದೆರಡು ಪುಟ್ಟ ಲೇಖನಗಳು ಹುಬ್ಬಳ್ಳಿ ಭಾಷೆಯಲ್ಲಿ ಬರಬೇಕು. ಇದು ಜನರಿಗೆ ಆಪ್ತ ಮನೋಭಾವವನ್ನ ನೀಡಲು ಶಕ್ತವಾಗುತ್ತದೆ.

ಇನ್ನು ಉದಯವಾಣಿಯ ಅಂಕಣಕಾರರು ಕರಾವಳಿ ಭಾಗದವರು. ಇಲ್ಲಿನ ಜನರಿಗೆ ಫಾದರ್ ಅಂದ್ರೆ ತಿಳಿಯಲ್ಲ. ಇಲ್ಲಿನ ಪ್ರಿಯಾರಿಟಿಗಳೇ ಬೇರೆ. ಪ್ರಿಯಾರಿಟಿಗಳನ್ನ ಆಧರಿಸಿ ಮೀಡಿಯಾ strategy ಗಳು ಅನುಷ್ಟಾನಗೊಳ್ಳಬೇಕು. ನಮ್ ಕಡೆ ಪಾಟೀಲ, ಕಟ್ಟಿಮನಿ, ಅಂಗಡಿ ಮುಂತಾದ ಹೆಸರುಗಳು ಚಾಲ್ತಿಯಲ್ಲಿರುತ್ತವೆ. ಹಾಗಾಗಿ ಉತ್ತರ ಕರ್ನಾಟಕದ ಕಡೆಯ ಮಂದಿಯನ್ನೂ ಅಂಕಣಕಾರಿಕೆಗೆ ಸೇರಿಸಿಕೊಂಡರೆ ಈ ಕಡೆಯ ಪತ್ರಿಕೆ ಅನ್ನೋ ಭಾವ ಮೂಡಿಸಲಿಕ್ಕೆ ಸಹಕಾರಿಯಾಗಬಹುದು.

ಮೂರನೆಯದಾಗಿ, ಹುಬ್ಬಳ್ಳಿಯಲ್ಲಿ ಪ್ರಮುಖ ಬೀದಿಗಳಲ್ಲಿ, ಚನ್ನಮ್ಮನ ವೃತ್ತದಲ್ಲಿ ಹಾಕಿರುವ ಅಡ್ವರ್ಟೈಸ್ಮೆಂಟ್ ಗಳಲ್ಲಿ ಸ್ಥಳೀಯ ಸುದ್ದಿಗೆ ಪ್ರಾಧಾನ್ಯ ಕೊಡುವುದಾಗಿ ಹೇಳಿದ್ದೀರಿ. ಆದ್ರೆ, ಸ್ಥಳೀಯ ನಾಡಿ ಮಿಡಿತ ಅರಿಯುವಲ್ಲಿ ಇನ್ನೂ ಪ್ರಾವೀಣ್ಯ ಬೇಕಿದೆ ಅನ್ನಿಸುತ್ತದೆ. ಈಗಲೂ ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಬಿಟ್ಟರೆ ಬೇರೆಯದಕ್ಕೆ ಪ್ರತಿಷ್ಠೆ ಕಡಿಮೆ. ಇದಕ್ಕೆ ಕಾರಣಗಳೂ ಇವೆ. ಅಜ್ಜ ಮುತ್ತಜ್ಜನ ಕಾಲದಿಂದ ಮನೆಗೆ ಬರುತ್ತಿದ್ದ ಪೇಪರ್ ನ್ನ ಬದಲಿಸಲಿಕ್ಕೆ ಮನಸ್ಸಾಗಿಲ್ಲ. ಆದ್ರೆ, ಸಂಯುಕ್ತ ಕರ್ನಾಟಕದ ಹಳೇ ತುಕ್ಕು ಹಿಡಿದ ನೀತಿಗಳು, strategy ಗಳು ಒಂದು ದಿನ ಪೇಪರ್ರನ್ನೇ ಮುಳುಗಿಸಿದರೆ ಆಶ್ಚರ್ಯವಿಲ್ಲ. ಆ ದಿನಗಳೂ ದೂರವಿಲ್ಲ.

ಹೊಸತನವನ್ನ ಬಯಸುವ ಯುವ ಜನತೆ ವಿಜಯ ಕರ್ನಾಟಕ, ಕನ್ನಡ ಪ್ರಭದತ್ತ ಮುಖ ಮಾಡಿದ್ದಾರೆ. ಅಂಥಾ ಯುವಜನತೆಯನ್ನ ಉದಯವಾಣಿಯತ್ತಲೂ ಒಲಿಸಿಕೊಳ್ಳಬೇಕಿದೆ. ಇದೆಲ್ಲದಕ್ಕೂ ಸ್ಥಳೀಯ ಭಾಷಾ ಸೊಗಡು ಸೇರಿದರೆ ಪತ್ರಿಕೆ ಉತ್ತರ ಕರ್ನಾಟಕದಲ್ಲೂ ಭದ್ರವಾಗಿ ಕಾಲೂರಬಹುದು.

ಶುಭವಾಗಲಿ.

ಪತ್ರಿಕಾ ಸಂಪಾದಕರಿಗೊಂದು ಅಭಿಮಾನಿಯೊಬ್ಬನ (ಅಭಿಮಾನದ ಪರಮಾವಧಿಯ) ಪತ್ರ..! – Ganesh K

    ಸಾರ್, ನಾನು ನಿಮ್ಮ ಪತ್ರಿಕೆಯ ಕಟ್ಟಾ ಅಭಿಮಾನಿ. ದಿನವೂ ತಪ್ಪದೇ ಒಂದಕ್ಷರವನ್ನೂ ಬಿಡದೇ ಓದುತ್ತೇನೆ. ನಾವು ನಮ್ಮ ಮನೆಯಲ್ಲಿ ನಿಮ್ಮ ಪತ್ರಿಕೆಯ ಮೇಲಿನ ಅಭಿಮಾನದಿಂದ, ಮನೆಕೆಲಸಗಳಲ್ಲಿ ಪೇಪರು ಬಳಸುವ ಹಲವಾರು ಸಂದರ್ಭಗಳಲ್ಲಿ ನಿಮ್ಮ ಪತ್ರಿಕೆಯನ್ನೇ ಬಳಸುತ್ತೇವೆ. ನಿಮ್ಮ ಪತ್ರಿಕೆ ನಿಜಕ್ಕೂ ಬಹುಪಯೋಗಿಯಾಗಿದೆ. ಸೊಪ್ಪು ಸೋಸುವಾಗ, ಬಿಸಿಲಿನಲ್ಲಿ ಕಾಳು-ಕಡಿ, ಒಣಮೆಣಸಿನಕಾಯಿ ಮುಂತಾದುವುಗಳನ್ನು ಒಣಗಿಸಲಿಕ್ಕೆ ನೆಲದ ಮೇಲೆ ಹಾಸಲು, ಎಣ್ಣೆ ಡಬ್ಬಿಯ ಮೇಲಿನ ಜಿಡ್ಡನ್ನು ಒರೆಸಲು, ಅಕಸ್ಮಾತ್ ಎಣ್ಣೆ ಅಡುಗೆ ಮಾಡುವಾಗ ನೆಲದ ಮೇಲೆ ಬಿದ್ದಾಗ ಒರೆಸಲು, ನೀರೊಲೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹೊತ್ತಿಸಲು, ಅಡುಗೆ ಮಾಡಲು ಒಲೆ ಹೊತ್ತಿಸಲಿಕ್ಕೆ, ಮನೆಯಲ್ಲಿ ಚಿಕ್ಕ ಮಕ್ಕಳು “ಚೀಚೀ” ಮಾಡಿದಾಗ ಒರೆಸಲಿಕ್ಕೆ, ಅಡುಗೆ ಮನೆಯ ಕಪಾಟುಗಳ ಮೇಲೆ ಹಾಸಲಿಕ್ಕೆ ಇವೆಲ್ಲವಕ್ಕೂ ನಾವು ನಿಮ್ಮ ಪತ್ರಿಕೆಯನ್ನೇ ಬಳಸುತ್ತೇವೆ. ಹೋಟೆಲುಗಳಲ್ಲಿ ಬೆಣ್ಣೆದೋಸೆ ತಿಂದಾದ ಮೇಲೆ ಕೈಯ ಜಿಡ್ಡೊರೆಸಿಕೊಳ್ಳಲಿಕ್ಕೆ ನಾನು ನಿಮ್ಮ ಪತ್ರಿಕೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಅಂಗಡಿಗಳಿಂದ ದಿನಸಿ ಸಾಮಾನುಗಳನ್ನು ತರುವಾಗ ನಿಮ್ಮ ಪತ್ರಿಕೆಯಲ್ಲಿಯೇ ಪೊಟ್ಟಣ ಕಟ್ಟಲು ಅಂಗಡಿಯಾತನಿಗೆ ಶಿಫ಼ಾರಸ್ಸು ಮಾಡುತ್ತೇನೆ. ಇನ್ನು ನಮ್ಮೂರಿನ ಹಳ್ಳಿಗಳಲ್ಲಿ, ಮಣ್ಣಿನ ಗೋಡೆಗಳಾದ್ದರಿಂದ ಮಣ್ಣು ಉದುರದಂತೆ, ಗೋಡೆಗಳಿಗೆ ಮತ್ತು ಮೇಲ್ಛಾವಣಿಗಳಿಗೆ ನಿಮ್ಮ ಪತ್ರಿಕೆಯನ್ನೇ ಅಂಟಿಸುವಂತೆ ಸಲಹೆ ಮಾಡುತ್ತೇನೆ.

    ಯಾವಾಗಲೇ ಆಗಲಿ, ಟ್ರೈನು ಪ್ರಯಾಣ ಮಾಡುವಾಗ ನಿಮ್ಮ ಪತ್ರಿಕೆಯನ್ನೇ ಖರೀದಿಸುತ್ತೇನೆ. ಪ್ಯಾಸೆಂಜರ್ ಟ್ರೈನುಗಳಲ್ಲಿ ಕುರ್ಚಿ ಸೀಟುಗಳು ಸಿಗುವುದೇ ಅಪರೂಪದಲ್ಲಿ ಅಪರೂಪ. ಹಾಗಾಗಿ ನಿಮ್ಮ ಪತ್ರಿಕೆಯನ್ನೇ ನೆಲದ ಮೇಳೆ ಹಾಸಿ ಕುಳಿತುಕೊಳ್ಳಲಿಕ್ಕೆ, ಮಲಗಲಿಕ್ಕೆ ಬಳಸುತ್ತೇವೆ.

    ಇನ್ನು ಪರಿವಾರ ಸಮೇತರಾಗಿ ಪ್ರಯಾಣ ಹೊರಟಾಗ, ನಿಮ್ಮ ಪತ್ರಿಕೆಯನ್ನು ಓದಿದ್ದಾದ ಮೇಲೆ, ಅದರಲ್ಲಿಯೇ ತಂದ ಖಾರ-ಮಂಡಕ್ಕಿ, ಕುರುಕಲು ತಿಂಡಿಗಳನ್ನು ತಿಂದುಬಿಡುತ್ತೇವೆ.(ತಿಂದು ಬಿಸಾಡುತ್ತೇವೆ ಅಂದರೆ ನಿಮಗೆ ಬೇಸರವಾಗಬಹುದು. ಆದರೆ ಅದರೆಲ್ಲದರ ಮುಂಚೆ ನಿಮ್ಮ ಪತ್ರಿಕೆಯನ್ನು ಒದಿದ್ದಾದ ಮೇಲೆ ತಾನೇ ಅದು ಬಹುಪಯೋಗಿ ಕಾರ್ಯಕ್ರಮಗಳಿಗೆ ಬಳಕೆಯಾಗುವುದು? ಹಾಗಾಗಿ ತಾವೇನು ಬೇಸರಿಸಿಕೊಳ್ಳಬೇಕಿಲ್ಲ. ಕೊಂಡ ಹೊಸ ಪತ್ರಿಕೆ ಕೇವಲ ಓದಲಿಕ್ಕೆ ಮಾತ್ರ ಉಪಯೋಗಿಸಲ್ಪಡುತ್ತದೆ. ಆನಂತರ ತಾನೇ ಅದರ ದಶಾವತಾರದ ಅವತರಣಿಕೆ ಶುರುವಾಗುವುದು..?)

    ಪತ್ರಿಕೆಗಳು ಸಮಾಜವನ್ನು ಶುದ್ಧವಾಗಿಡುವಂಥವುಗಳು ಎಂಬ ಮಾತಿದೆ. ಹಾಗಾಗಿ ಮನೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳಿಗೆ, ಪ್ರಯಾಣದ ಅವಧಿಯಲ್ಲಿ ರೈಲಿನಲ್ಲಿ ನೆಲದ ಮೇಲೆ ಹಾಸಿ ಕೂರಲು ತುಂಬಾ ಉಪಕಾರಿಯಾಗಿ ಪರಿಣಮಿಸಿ ನಮ್ಮ ಬಟ್ಟೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿಮ್ಮ ಪತ್ರಿಕೆ “ಸಹಕರಿಸಿದೆ”. ನಿಮ್ಮ ಪತ್ರಿಕೆ ನಿಜಕ್ಕೂ “ಸ್ವಚ್ಛತಾವಾಹಿನಿ”..!

    ಸಮಾಜವನ್ನು, ಮನೆ-ಮನೆಗಳನ್ನು ಸ್ವಚ್ಛವಾಗಿಡಲು ಹೆಣಗುವ ನಿಮ್ಮ ಪತ್ರಿಕೆಯೇ ಕೆಲವೊಮ್ಮೆ ಸ್ವಚ್ಛತಾ ಸಮಸ್ಯೆಯಿಂದ ನರಳಿ ಧೂಳು ಹಿಡಿಯುತ್ತವೆ. ವಿಪರ್ಯಾಸವೆಂದರೆ ಇತ್ತೀಚಿಗೆ ಬರುವ ನಿಮ್ಮ ಪತ್ರಿಕೆಯ ಹೊಸ ಸಂಚಿಕೆಗಳೇ ಹಳೇ ಸಂಚಿಕೆಗಳ ಧೂಳೊರೆಸಲು ವಿಫಲವಾಗುತ್ತವೆ. ಆ ಸಂದರ್ಭ ಒದಗಿ ಬಂದಾಗ ಹಳೆಯ ಪೇಪರುಗಳನ್ನೆಲ್ಲಾ ಗಂಟು ಕಟ್ಟಿ ಗುಜರಿಯವನಿಗೆ ಮಾರಿಬಿಡುತ್ತೇನೆ.

    ನಿಮ್ಮ ಪತ್ರಿಕೆಗೆ ಸಂಕಷ್ಟದ ಪರಿಸ್ಥಿತಿ ಎದುರಾಗುವುದು ಅಲ್ಲೇ. ಇಂಗ್ಳೀಷ್ ಪತ್ರಿಕೆಗಳಿಗೆ ಜಾಸ್ತಿಬೆಲೆ. ಜೊತೆಗೆ ಇಂಗ್ಳೀಷ್ ಪತ್ರಿಕೆಗಳು ದಿನವೂ ದಂಡಿಗಟ್ಟಲೇ ಪೇಜುಗಳನ್ನು ಕೊಟ್ಟಿರುತ್ತವೆ. ಇಂಗ್ಳೀಷ್ ಪತ್ರಿಕೆಗಳಿಗಿರುವ ಬೆಲೆ ಕನ್ನಡ ಪತ್ರಿಕೆಗಳಿಗೇಕಿಲ್ಲ? ಒಂದು ಕೇಜಿ ಪೇಪರ್ ಗುಜರಿಗೆ ಹಾಕಿದರೆ ಒಂದು ದಿನದ ಪತ್ರಿಕೆಯ ಬೆಲೆ ಕೂಡಾ ಇರೋದಿಲ್ಲ. ಈ ಅನ್ಯಾಯವನ್ನು ಸಹಿಸಿಕೊಂಡು ನಿಮ್ಮ ಪತ್ರಿಕೆ ಗುಜರಿಯವನ ಗಾಡಿ ಏರುತ್ತದೆ. ಅನ್ಯಾಯದ ವಿರುದ್ಧ ದನಿಯೆತ್ತಲು ಪತ್ರಿಕೆಯನ್ನು ಬಳಸಿಕೊಳ್ಳುವ ತಾವು ತಮ್ಮ ಪತ್ರಿಕೆಗೆ ದಯಮಾಡಿ ನ್ಯಾಯ ಕೊಡಿಸಿ(ಜೊತೆಗೆ ನಮಗೂ..!)

    ಆದರೂ, ಆದಿಯಿಂದ ಅಂತ್ಯದವರೆಗೂ ಬಹುಪಯೋಗಿಯಾಗಿ, ಸಾರ್ಥಕ್ಯದ ಜೀವನ ನೆಡೆಸಿ, ಗತ್ತು-ಗಮ್ಮತ್ತು ಮೆರೆದು, ಸುದ್ದಿ ಮನೆಯಿಂದ ರದ್ದಿಮನೆಗೆ ತೆರಳುವ ನಿಮ್ಮ ಪತ್ರಿಕೆಗೆ ಮತ್ತು ಪತ್ರಿಕೆಯ ಸೃಷ್ಟಿಕರ್ತರಿಗೆ, ಪತ್ರಕರ್ತರಿಗೆ ಮತ್ತು ತಮಗೆ ಅನಂತಾನಂತ ಧನ್ಯವಾದಗಳು.