ಬಸವೇಶ್ವರ ಬ್ರಾಹ್ಮಣ ಸಂಘ..!

ಮೊನ್ನೆ ಮೊನ್ನೆ ಪೇಪರ್ರಲ್ಲಿ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬಸವೇಶ್ವರನಗರ ಬ್ರಾಹ್ಮಣ ಸಂಘ ಅಂತಾ ಇತ್ತು. ಅದರೊಟ್ಟಿಗೇ ಇಂಥಾ ಯೋಚನೆಯೊಂದು ಸುಳಿದು ಹೋಯಿತು..! ಎಷ್ಟೇ ಆಗಲಿ ಬಸವಣ್ಣನವರು ಬ್ರಾಹ್ಮಣರಾಗಿಯೇ ಹುಟ್ಟಿದವರು ತಾನೇ. ಬಸವಣ್ಣನವರು ಬ್ರಾಹ್ಮಣ ಸಂಪ್ರದಾಯದ ಅನಾಚಾರಗಳ ವಿರುದ್ಧ ೧೨ನೇ ಶತಮಾನದಲ್ಲಿಯೇ ದನಿಯೆತ್ತಿದವರು. ಈ ಹೆಸರಿನಲ್ಲಿ ಒಂದು ಸಂಘ ತೆರೆದರೆ, ಬ್ರಾಹ್ಮಣರು ಬಸವಣ್ಣನನ್ನು ತಮ್ಮವರೆಂದುಕೊಳ್ಳಲು ಒಂದು ಅವಕಾಶ! ನನ್ನ ಬ್ರಾಹ್ಮಣ ಗೆಳೆಯನಿಗೆ ಈ ಬಗ್ಗೆ ಹೇಳುತ್ತಿದ್ದೆ. ಆತ ನಕ್ಕು ಸುಮ್ಮನಾದ. ಸುಮ್ಮನೇ ಆತ್ಮೀಯತೆಯಿಂದ ಛೇಡಿಸುವಾಗ, ಆತನಿಗೆ ನೀವು ಬಾಮುಂಡ್ರು ಹಿಂಗೆಲ್ಲಾ ಮಾಡ್ಬಾರ್ದು ಅಂತಾ ಹೇಳಿದಾಗಲೆಲ್ಲಾ ಆತನ ಉತ್ತರ ಬ್ರಾಹ್ಮಣನಾಗಿ ಹುಟ್ಟಿ ಏನು ಉಪಯೋಗ ಆಯ್ತು ಹೇಳು ಎನ್ನುವುದೇ ಆಗಿರುತ್ತಿತ್ತು. ತೀರಾ ಮಧ್ಯಮ ವರ್ಗದಿಂದ ಬೆಳೆದು ಬಂದ ಆತನಿಗೆ ಜಾತಿಯಿಂದ ಏನೂ ಲಾಭವಾಗಿಲ್ಲ.

ಇನ್ನೊಂದು ವಿಷಯವೆಂದರೆ ನಮ್ಮೂರಿನ ಲಾಯರ್ ರೋಡಿನ “ಮಾಧ್ವ ಯುವಕ ಸಂಘ”ದ ಆಟದ ಮೈದಾನದಲ್ಲಿ ಬರೀ ಮಾಧ್ವ ಬ್ರಾಹ್ಮಣ ಹುಡುಗರೇ ಆಡುತ್ತಾರೆ. ಸ್ಮಾರ್ತ ಹುಡುಗರೂ ಹೋಗುವುದಿಲ್ಲ..! ಜನಿವಾರಕ್ಕೂ ಬೆಲೆಇಲ್ಲ..! ಇನ್ನು ಅದರ ಪಕ್ಕದ ದೀಕ್ಷಿತ್ ರೋಡಿನ ಕಥೆಯೂ ಅದೇ. ಬೇರೆ ಹುಡುಗರೊಂದಿಗೆ ಈ ಹುಡುಗರು ಸೇರುವುದೇ ಇಲ್ಲ. ಅದೇಕೆ ಆ ಮಟ್ಟಿಗೆ ಒಂದು ಗೆರೆ ಕೊರೆದುಕೊಂಡುಬಿಟ್ಟಿರುತ್ತಾರೆ? ದೇವರು ಧರ್ಮ ಸಂಪ್ರದಾಯ ಇವುಗಳಾಚೆಗಿನ ಬದುಕು ಏಕೆ ಕಣ್ಮರೆಯಾಗಿರುತ್ತದೆ? ಬೇರೆ ಹುಡುಗರ ಜೊತೆ ಹೋದರೂ ಬ್ರಾಹ್ಮಣ ಹುಡುಗರೊಂದಿಗೆ ಇರುವ ಆತ್ಮೀಯತೆ, ಸಲುಗೆ ಬೆಳೆಸಿಕೊಳ್ಳುವುದಿಲ್ಲ. ಇನ್ನು ಭಾರತೀಯ ಸಂಸ್ಕೃತಿ ಎಂದರೆ ವೇದ, ವೇದಾಂತ, ಭಗವದ್ಗೀತೆ, ಉಪನಿಷತ್ತು ಇಷ್ಟೇನಾ? ರಾಮಾಯಣ ಮಹಾಭಾರತ ಮಾತ್ರ ನಮ್ಮ ಸಂಸ್ಕೃತಿಯನ್ನು ಜೋಪಾನ ಮಾಡಿವೆಯಾ? ಬಸವಣ್ಣನಂಥವರು ೧೨ನೇ ಶತಮಾನದಲ್ಲಿ ಮಾಡಿದ ವೈಚಾರಿಕ ಕ್ರಾಂತಿ, ಜಾಗೃತವಾದ ಕಾಯಕ-ದಾಸೋಹ ಪ್ರಜ್ಞೆ ಇವೆಲ್ಲವೂ ನಮ್ಮ ಸಂಸ್ಕೃತಿಯನ್ನು ಜತನವಾಗಿ ಕಾಪಾಡಲಿಕ್ಕೆ, ವಿಚಾರದ ಓರೆಗಲ್ಲಿಗೆ ಹಚ್ಚಲಿಕ್ಕೆ ಕಾರಣವಾಗಿವೆ.

ಬಸವಣ್ಣನ ಅನುಯಾಯಿಗಳಾದ ಲಿಂಗಾಯಿತರ ಮನೆಗಳಲ್ಲಿ ಬೇಕಾದ್ರೆ ಭಗವದ್ಗೀತೆ ಸಿಗುತ್ತದೆ. ಆದರೆ ಎಷ್ಟು ಜನ ಬ್ರಾಹ್ಮಣರ ಮನೆಗಳಲ್ಲಿ ಬಸವಣ್ಣನ ವಚನಗಳು ಸಿಗುತ್ತವೆ? ಸಂಸ್ಕೃತಿ ಎಂದರೆ ವೈದಿಕ ಮಾತ್ರವೇ ಅಲ್ಲ. ಅದನ್ನು ಧಿಕ್ಕರಿಸಿ ವೈಚಾರಿಕ ನೆಲೆಗಟ್ಟಿನಲ್ಲಿ ಹೊಸದೊಂದು ಕ್ರಾಂತಿಗೆ, ಧರ್ಮದ ಮರುಹುಟ್ಟಿಗೆ, ಮರುವಿಮರ್ಶೆಗೆ ಕಾರಣವಾದ ಅವೈದಿಕದ ನಿಲುವನ್ನೂ ಗಂಭೀರವಾಗಿ ಪರಿಗಣಿಸಬೇಕು.

ಮತಾಂತರ ನೆಡೆಯುತ್ತಿದೆ ಎಂದಾಕ್ಷಣ ಜಾಗೃತರಾಗಿ ಅದನ್ನು ತಡೆಯಲು, ಕ್ರೈಸ್ತ ಮಿಷಿನರಿಗಳ ಕುತಂತ್ರದ ಆಮಿಷಕ್ಕೆ ಬಲಿಯಾಗಿ ಮತಾಂತರವಾಗುವ ಅಮಾಯಕರನ್ನು, ದಲಿತರನ್ನು ರಕ್ಷಿಸಲು ಮುಂದಾಗುವ ಆರ್.ಎಸ್.ಎಸ್-ಬಜರಂಗದಳಗಳು ಅವರನ್ನು ಬ್ರಾಹ್ಮಣರನ್ನಾಗಿಸಿ ಜನಿವಾರ ದೀಕ್ಷೆ ನೀಡುತ್ತವೆಯೇ? ತುಳಿತಕ್ಕೊಳಗಾದವರು, ಶೋಷಿತರು, ಕಾಲಡಿಯಲ್ಲಿದ್ದವರು ಎಲ್ಲಿರಬೇಕೋ ಅಲ್ಲೇ ಇರಬೇಕೇ? ಇದು ಅವರ ನಿಲುವೇ? ಪ್ರಶ್ನೆಗಳ ಸರಮಾಲೆ ಇದೆ. ಉತ್ತರ… ಯಾರಿಗೆ ಕೇಳೋಣ?

ಇದನ್ನೆಲ್ಲಾ ನೆನಸಿಕೊಂಡಾಗ ವಿಚಾರವಂತ ಬ್ರಾಹ್ಮಣ ಹುಡುಗರು ಸೇರಿ ಇಂಥದೊಂದು ಸಂಘ ಕಟ್ಟಬಹುದಲ್ಲವೇ ಅನ್ನಿಸಿತ್ತು..!