ಏಕೆ ದೂರಾದೆ ಪ್ರಿಯೇ…

ಏಕೆ ದೂರಾದೆ ಪ್ರಿಯೇ…

ಮನದ ಮುಗಿಲಿಂದ ಮಿಂಚಿನಂತೆ ಬಳುಕಿ..?

ಮನದ ಮಾತುಗಳು ಕೇಳದಾದವೇನು?

ಹೃದಯದಾಲಾಪ ಕೇಳದಾಯಿತೇನು?

ಕಟ್ಟಿದ ಕನಸಿನ ಕಾರ್ಮೋಡಗಳೇಕೋ ಮಳೆಯಾಗಿ ಸುರಿಯಲಿಲ್ಲ

ಹೃದಯದ ಮೇಲೆ ನಿನ್ನ ಹೆಸರ ಬರೆಯಲಿಲ್ಲ.

ಉತ್ತರಗಳೇ ಇಲ್ಲ.

ಪ್ರಶ್ನೆಗಳೇ ಎಲ್ಲ!

“ಉತ್ತರೆ”ಯಾಗು ಬಾ ಪ್ರಿಯೆ..!

ಮುನಿಸೇಕೆ ನನ್ನ ಕನಸಿನ ಕನ್ಯೆ?

ಹೇಳೊಮ್ಮೆ ಉತ್ತರವ ಮನದನ್ನೆ

ನಿನ್ನೀ ಮನಸೇಕೆ ಕನವರಿಸದೇ ನನ್ನ ಬಗ್ಗೆ..?

ನಾನಿರದ ಬಾಳಿನಲಿ ಕಂಡೀತೇ ನಗೆ ಬುಗ್ಗೆ..?!

ಬದುಕು-ಭಾವಗಳ ಬೆಸೆಯುವ ಅನುಬಂಧ

ಮಸುಕಾಯಿತೇ ಮಧುರ ಭಾವಬಂಧ?

ಎಲ್ಲಿ ಕಣ್ಮರೆಯಾಯಿತು ಸ್ನೇಹದ ಸಲುಗೆ

ಭಾವ-ಭಾವಗಳ ಬೆಸೆಯುವ ಬೆಸುಗೆ?

ಕಳೆದ ಕ್ಷಣಗಳ ಬೆಚ್ಚಗಿಟ್ಟಿದ್ದೇನೆ

ಈ ಹೃದಯದಾ ಅಂತರಾಳದಲಿ

ಕನವರಿಸುತ್ತಿದ್ದೇನೆ, ಬೆದರುತ್ತಿದ್ದೇನೆ

ಕೊನೆಯಾಯಿತೇ ಎಂದು ಪ್ರೇಮ, ಸ್ನೇಹದಲ್ಲಿ….

ಹೃದಯ ಹೃದಯಗಳ ನಡುವಿನ ಅನುಬಂಧ ಸದಾ ಇರಲಿ.

ಭಾವನೆಗಳ ಬೆಸೆದ ಅನುಕ್ಷಣವೂ ಅನುಗಾಲ ಹಸಿರಾಗಿರಲಿ.

ನೀ ಎಲ್ಲಾದರೂ ಇರು, ಹೇಗಾದರೂ ಇರು

ಹೃದಯದಾ ಮೂಲೆಯೊಂದನ್ನು ನನಗಾಗಿ ಇಟ್ಟಿರು..!