ಕರುನಾಡಿಗೆ ಕನ್ನಡ ಕನಸುಗಳು – ಅಣಿಯಾಗಬೇಕಿವೆ ಕನ್ನಡ ಮನಸುಗಳು – ಗಣೇಶ್.ಕೆ,2ganesh@gmail.com

 ಕರುನಾಡಿಗೆ ಕನ್ನಡ ಕನಸುಗಳು – ಅಣಿಯಾಗಬೇಕಿವೆ ಕನ್ನಡ ಮನಸುಗಳು    

     ತೇಜಸ್ವಿ ಹೇಳುತ್ತಿದ್ದರು ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು ಅಂತ. ಆದರೆ ಹಾಗಾಗಬೇಕಾದರೆ ಕರ್ನಾಟಕದ ಅನ್ನ ತಿನ್ನುವವರೆಲ್ಲರೂ(ಕನಿಷ್ಟ ಪಕ್ಷ ಒಂದಿಷ್ಟು ಮಂದಿಯಾದರೂ) ಕನ್ನಡಕ್ಕಾಗಿ ದುಡಿಯಬೇಕು. ನವೆಂಬರ್ ತಿಂಗಳಿನಲ್ಲಿ ಜೋರಾಗಿ ಕನ್ನಡ ಚಿತ್ರಗೀತೆ ರೆಕಾರ್ಡುಗಳನ್ನು ಹಾಕಿಸಿ, ಆರ್ಕೆಸ್ಟ್ರಾದವರನ್ನ ಕರೆಸಿ ಕಿವಿ ಹರಿದು ಹೋಗುವಷ್ಟು ಸ್ಪೀಕರ್ ಸೌಂಡ್ ಇಟ್ಟು, ದೊಡ್ಡ ದೊಡ್ಡ ಭಾಷಣ ಬಿಗಿದರೆ ಕನ್ನಡ ಉದ್ಧಾರವಾಗುವುದಿಲ್ಲ. ಇವೆಲ್ಲವೂ ಕನ್ನಡವನ್ನು ಜೀವಂತವಾಗಿಡಲಿಕ್ಕೆ ಸಹಕಾರಿಯಾಗಬಹುದು. ಕನ್ನಡವಿರದ ಕಡೆಗಳಲ್ಲಿ ಕನ್ನಡ ಕಾರ್ಯಕ್ರಮಗಳು ರೂಪುಗೊಳ್ಳುವುದು ಶುಭ ಸಂಕೇತವೇ. ಆದರೆ ಅದು ಕೇವಲ “ಅಸ್ತಿತ್ವ(ಅಸ್ಥಿತ್ವ..!?)ಪ್ರದರ್ಶನ”ವಾಗಬಾರದು.  

    ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯವೊಂದನ್ನು ಬಿಟ್ಟು ಉಳಿದೆಲ್ಲದರ ಬಗ್ಗೆ ಗಮನಹರಿಸುತ್ತದೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ್ನು ನಂಬಿ ಕುಳಿತುಕೊಳ್ಳುವಂತಿಲ್ಲ. ಕನ್ನಡ ನಮ್ಮ ಮನೆ ದೇವರಿದ್ದಂತೆ. ಅದಕ್ಕೆ ಊದುಬತ್ತಿ, ಕರ್ಪೂರ ಬೆಳಗಲಿಕ್ಕೂ ಸರ್ಕಾರದ ಅನುದಾನ ಕೇಳುವುದು ಎಷ್ಟು ಸರಿ..? ಇದರ ಬಗ್ಗೇನೇ ನಕಾರಾತ್ಮಕವಾಗಿ ಬರೀತಾ ಹೋದ್ರೆ ಈ ಬರಹವೂ ಅದೇ ಕೆಟಗರಿಗೆ ಸೇರಿಬಿಡುತ್ತದೆ. ಈಗ ಸಕಾರಾತ್ಮಕವಾಗಿ ಕನ್ನಡದ ಅಭ್ಯುದಯದ ಬಗ್ಗೆ ಯೋಚಿಸೋಣ.

 

ಕನ್ನಡದ ಏಳ್ಗೆಗಾಗಿ, ಕನ್ನಡವನ್ನು ವೃತ್ತಿಪರವಾಗಿಸಲು ಕೆಲವು ಅಂಶಗಳನ್ನು ಸಿದ್ಧಪಡಿಸಿದ್ದೇನೆ. ಇವುಗಳ ಬಗ್ಗೆ ಚರ್ಚೆಯಾಗಬೇಕು.

 

 

    ಇಲ್ಲಿ ಕೆಲವು ರಚನಾತ್ಮಕ ಕಾರ್ಯಗಳನ್ನು ಮಾತ್ರ ಹೇಳಿದ್ದೇನೆ. ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಆದರೆ ಬರೀ ಪ್ರತಿಭಟನೆಗಳಿಂದ ಏನೂ ಲಭಿಸುವುದಿಲ್ಲ. ಪ್ರತಿಭಟನೆಗಳು ಬೇಡ ಎಂದು ಇದರ ಅರ್ಥವಲ್ಲ. ಅವು ಕಾರ್ಯಕ್ರಮಗಳ ಸಾಂಕೇತಿಕ ಭಾಗವಾಗಬೇಕು. ಅವುಗಳೇ ಕಾರ್ಯಕ್ರಮಗಳಾಗಬಾರದು..! ಆದರೆ ಎಲ್ಲದಕ್ಕೂ ಪ್ರತಿಭಟನೆ ನೆಡೆಸುತ್ತಾ ಹೊರಟರೆ..? ಪ್ರತಿಭಟನೆಗೊಂದು ಅರ್ಥವೇ ಇರುವುದಿಲ್ಲ.

 

    ಈ ಎಲ್ಲಾ ಅಂಶಗಳ ಬಗ್ಗೆ ಚರ್ಚೆಯಾಗಬೇಕು. ಕಾರ್ಯಗತಗೊಳಿಸಲು ಇರುವ ಅಡೆತಡೆಗಳಬಗ್ಗೆ ಚರ್ಚೆಯಾಗಬೇಕು. ನಿಮ್ಮ ಪ್ರತಿಕ್ರಿಯೆಗಳಿಗೆ, ಸಲಹೆಗಳಿಗೆ, ಸೂಚನೆಗಳಿಗೆ ಸದಾ ಸ್ವಾಗತವಿದ್ದೇ ಇದೆ.

 

 • ಜಾಗತೀಕರಣವನ್ನು ನಾವು ಒಪ್ಪಿಯಾಗಿದೆ. ಕೈಯಲ್ಲಿ ಹಿಡಿದಿರುವ ಮೊಬೈಲು ಜಾಗತೀಕರಣದ್ದು, ಮನೆ ಮನೆಗಳನ್ನು ಹೊಕ್ಕಿರುವ ಎಲೆಕ್ಟ್ರಾನಿಕ್ ಉಪಕರಣಗಳು, ಕಂಪ್ಯೂಟರ್‌ಗಳು ಜಾಗತೀಕರಣದ ಫಲಗಳು. ಈಗ ಕವಿಗಳು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ದಲಿತಪರ ಕಾಳಜಿ ಹೊಂದಿರುವವರು ಏನೇ ಹೋರಾಟಗಳನ್ನು ಮಾಡಿದರೂ ಅದು ಫಲರಹಿತ ಪ್ರಯತ್ನ. ಆದರೆ ಅವರ ವಿಚಾರವನ್ನು ತೆರೆದಿಡುವ ಹಕ್ಕು ಅವರಿಗಿದೆ. ಹೋರಾಟದ ರೂಪ-ರೇಷೆಗಳು ಬದಲಾಗಬೇಕಿದೆ. ಜಾಗತೀಕರಣವನ್ನು ಬದಲಾಯಿಸುವುದು ಸಾಧ್ಯವಾಗದ ಮಾತು. ಜಾಗತೀಕರಣದ ಉಪಯೋಗವನ್ನು ಪಡೆದು ಅದರಲ್ಲಿನ ಲೋಪ-ದೋಷಗಳನ್ನು ಸರಿಪಡಿಸಿ, ನಮ್ಮ ಸಂಸ್ಕೃತಿಗೆ, ಭಾಷೆಯ ಅನುಕೂಲಕ್ಕೆ ತಕ್ಕಂತೆ ಜಾಗತೀಕರಣವನ್ನು ಬದಲಾಯಿಸಿಕೊಳ್ಳುವುದು ಇಂದಿನ ಅಗತ್ಯ.
 •  ಜಾಗತೀಕರಣದಿಂದ ನಮ್ಮ ಭಾಷೆಯನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದಕ್ಕೆ ಪೂರ್ಣಚಂದ್ರ ತೇಜಸ್ವಿ ಅಗ್ರಪಂಕ್ತಿ ಹಾಕಿ ಕೊಟ್ಟು ಹೋಗಿದ್ದಾರೆ. ಕನ್ನಡ ವಿಶ್ವವ್ಯಾಪಿಯಾಗಬೇಕಾದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡಬೇಕು. ಸಾರ್ವತ್ರಿಕವಾದ ಕನ್ನಡ ತಂತ್ರಾಂಶಗಳು ರೂಪುಗೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡಡಿಗ ಸಾಫ್ಟ್‌ವೇರ್ ತಂತ್ರಜ್ಞರಿಗೆ ಕೊರತೆಯೇ? ಈಗ ಆಗಬೇಕಾಗಿರುವುದು ಅವರಲ್ಲಿನ ಕನ್ನಡತನವನ್ನು ಬಡಿದೆಬ್ಬಿಸುವ ಕೆಲಸ. ಇದು ಸರಕಾರದಿಂದ ಆಗದ ಕೆಲಸ. ಸರ್ಕಾರದ ಅಧೀನದಲ್ಲಿರುವ ಯಾವುದೇ ಸಮಿತಿ, ಪರಿಷತ್ತುಗಳುಗಳು ಉಪಯೋಗಕ್ಕೆ ಬಾರವು. ಸರ್ಕಾರದಿಂದ ಆದೇಶ ಬಂದರೂ ಕೆಲಸ ಮಾಡದ ಕೆಲಸಗಾರರಿಂದ ಕನ್ನಡತನವನ್ನು ಅಪೇಕ್ಷಿಸುವುದು ಮೂರ್ಖತನ. ಏನಿದ್ದರೂ ಸರಕಾರದ ಸಹಾಯ ಪಡೆಯಬಹುದು. ಕನ್ನಡತನ ನಮ್ಮ ಮನೆ ಹಬ್ಬದಂತೆ. ಅದನ್ನು ಆಚರಿಸಲಿಕ್ಕೆ ಸರಕಾರಕ್ಕೆ ಮೊರೆ ಹೋಗುವುದು ಎಷ್ಟು ಸರಿ?
 • ಕನ್ನಡದ ಬಗ್ಗೆ ಅಪಾರ ಅಭಿಮಾನವನ್ನು, ಸಕ್ರಿಯವಾಗಿ ಕನ್ನಡ ಅಂತರ್ಜಾಲ ಕಾರ್ಯದಲ್ಲಿ ಭಾಗವಹಿಸಿರುವ ಸಾಫ್ಟ್‌ವೇರ್ ತಂತ್ರಜ್ಞರ ಯುವ ಪಡೆಯೊಂದನ್ನು ಕಟ್ಟಬೇಕಿದೆ. ಇಂತಿಷ್ಟು ಶುಲ್ಕದಂತೆ ಸಂಗ್ರಹಿಸಿ, ಸದಸ್ಯತ್ವ ನೀಡಿ ಸಂಸ್ಥೆ ಮಾಡಬೇಕಿದೆ. ಆ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು. ಹಣದ ವೆಚ್ಚದ ವಿವರಗಳೆಲ್ಲವೂ ಪಾರದರ್ಶಕವಾಗಿರಬೇಕು. ಹಣವನ್ನ ಕನ್ನಡ ವಿದ್ಯಾರ್ಥಿಗಳ ಬೆಳವಣಿಗೆಗೆ ಉಪಯೋಗಿಸಬಹುದು. ಇದು ತಂತ್ರಜ್ಞ ಕನ್ನಡಿಗರ ಸಬಲೀಕರಣದ ಮೊದಲ ಹೆಜ್ಜೆಯಾಗಲಿದೆ.
 • ಕನ್ನಡ ತಂತ್ರಾಂಶ ಅಭಿವೃದ್ಧಿಗಾಗಿ ಈಗಾಗಲೇ ತಂತ್ರಾಂಶ ಅಭಿವೃದ್ಧಿ ಪಥದಲ್ಲಿ ದಾಪುಗಾಲಿಟ್ಟಿರುವ, ಅಕ್ಷರ ಕ್ರಾಂತಿಗೆ ಸಹಕರಿಸಿರುವ “ಬರಹ”ದ ಶೇಷಾದ್ರಿ ವಾಸುರಂಥವರನ್ನು ತಂತ್ರಾಂಶಾಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಿಸಿಕೊಳ್ಳಬೇಕು.
 • ಎಂಜಿನಿಯರಿಂಗಿನ ಕೊನೆಯ ಸೆಮಿಸ್ಟರಿನ ವಿದ್ಯಾರ್ಥಿಗಳಿಗೆ ಕನ್ನಡ ತಂತ್ರಾಶದ ಅಭಿವೃದ್ಧಿಯ ಪ್ರಾಜೆಕ್ಟ್ ನೀಡಿ, ಈ ದೆಸೆಯಲ್ಲಿ ಮುಂದುವರಿದ ಹಿರಿಯ ಸಾಫ್ಟ್‌ವೇರ್ ತಂತ್ರಜ್ಞರಿಂದ ಮಾರ್ಗದರ್ಶನ ಕೊಡಿಸಿ, ವಿದ್ಯಾರ್ಥಿವೇತನ ನೀಡಿದರೆ ಸರ್ಕಾರ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ವ್ಯಯಿಸುವ ಅಪಾರ ಖರ್ಚು-ವೆಚ್ಚಗಳನ್ನು ಉಳಿಸಬಹುದು. ಮತ್ತು ಕಡಿಮೆ ವೆಚ್ಚದಲ್ಲಿ ತಂತ್ರಾಂಶವನ್ನು ತಯಾರಿಸಬಹುದು. ಎಂಜಿನಿಯರಿಂಗ್ ಹಂತದಲ್ಲಿಯೇ ಕನ್ನಡತನವನ್ನ ಜಾಗೃತಗೊಳಿಸಬಹುದು. 
 • ಇನ್ನು ಗ್ರಂಥಾಲಯಗಳಲ್ಲಿ, ಗ್ರಂಥಾಲಯಗಳ ಬಳಿಯಲ್ಲಿ ಬರಹಗಾರರಿಗಾಗಿಯೇ ಒಂದು ಸಂಕೀರ್ಣವನ್ನು ನಿರ್ಮಿಸಬೇಕು. ಬರಹಗಾರರು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುವಂತೆ ಮಾಡಬೇಕು. ಬರೆಯಲು ಸೂಕ್ತ ವಾತಾವರಣ, ಅನ್ಯ ಬರಹಗಾರರ ಸಾಂಗತ್ಯ ದೊರಕುವಂಥಾ ವಾತಾವರಣ ನಿರ್ಮಿಸಬೇಕು. ಗ್ರಂಥಾಲಯಗಳ ಪುಸ್ತಕಗಳಲ್ಲಿ ವಿಶೇಷ ಪುಸ್ತಕಗಳ ಗುಣವಿಶೇಷಗಳನ್ನು ಸಾದರಪಡಿಸುವ ಕೈಪಿಡಿ ತಯಾರಿಸಬೇಕು. ಏಕೆಂದರೆ, ಯಾವುದನ್ನೇ ಆಗಲಿ ನಾವು ಆಸಕ್ತಿ ಮೂಡದ ಹೊರತು ಓದಲಿಕ್ಕೆ ಶುರುವಿಟ್ಟುಕೊಳ್ಳುವುದೇ ಇಲ್ಲ. ಹಾಗಾಗಿ ಒಂದೊಂದು ವಿಧದ ಆಸಕ್ತಿಗೆ ಅನುಗುಣವಾಗಿ, ಪುಸ್ತಕಗಳ ಪಟ್ಟಿ ಹೊಂದಿರುವ ಕೈಪಿಡಿ ಅನಿವಾರ್ಯ. ಕೈಪಿಡಿಯು  ಇದು ಒಂಥರಾ ಗೂಗಲ್ ಸರ್ಚ್ ನಂತೆ. ನಿಮಗೆ ಬೇಕಾದದ್ದನ್ನ ಹುಡುಕಿ ತೆಗೆದುಕೊಳ್ಳಬಹುದು. ಪುಸ್ತಕದ ಬಗ್ಗೆ ಆಸಕ್ತಿ, ಕೌತುಕ ಮೂಡಿಸುವ ಕೈಪಿಡಿ, ಕ್ರಾಂತಿ ಖಂಡಿತ ಮಾಡಬಲ್ಲದು.
 • ಸೃಜನಶೀಲ ಸಾಹಿತ್ಯದ ಜೊತೆ-ಜೊತೆಗೆ ಜನೋಪಯೋಗಿ, ಮಾಹಿತಿಯುತ, ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಪುಸ್ತಕಗಳನ್ನು ರಚಿಸಲು ಯುವ ಬರಹಗಾರರಿಗೆ ಉತ್ತೇಜನ, ಮಾರ್ಗದರ್ಶನ ನೀಡಬೇಕು.  ಪ್ರಕಟಿಸಿ, ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಇದು ಕನ್ನಡದ ಮಾರುಕಟ್ಟೆಯನ್ನ ವಿಸ್ತಾರಗೊಳಿಸುವಲ್ಲಿ ಸಫಲವಾಗುತ್ತದೆ. ಮಾರುಕಟ್ಟೆ ಇಲ್ಲದೆ ಅಭಿವೃದ್ಧಿ ಜಪ ಮಾಡಿದರೆ, ಏನೂ ಸಿಗದು, ಸಾಗದು. ಬರಹಗಾರರಿಗೆ ಸೂಕ್ತ ಸಂಭಾವನೆ ದೊರಕುವಂತೆ ಮಾಡಿ, ಬರಹಗಾರರಿಗೆ “ಬರಹದ ಬದುಕು” ಹಿಡಿಸುವಂತೆ ಮಾಡಿದರೆ “ಬರವಣಿಗೆಯು ನಿತ್ಯ ಸಮಾರಾಧನೆ”ಯಾಗುತ್ತದೆ. ಇದಕ್ಕೆ ನನ್ನ ಬಳಿ ಒಂದು ಚಿಂತನೆಯಿದೆ. ಒಂದು ಮಧ್ಯವರ್ತಿ ಸಂಸ್ಥೆ ಬರಹಗಾರರ ಬರಹಗಳನ್ನ ಸ್ವೀಕರಿಸುವ ವ್ಯವಸ್ಥೆ ಮಾಡಬೇಕು. ಒಂದು ರೀತಿಯಲ್ಲಿ ಮಾನ್ಸ್ಟರ್ ಡಾಟ್ ಕಾಂ ಇದ್ದಂತೆ. ತಮ್ಮ ತಮ್ಮ ರೆಸ್ಯೂಮ್ ಹಾಕಿದಂತೆ. ಇದರ ಮೂಲಕವಾಗಿ ಮಾಧ್ಯಮಗಳು, ಪತ್ರಿಕೆಗಳು, ಪ್ರಕಾಶಕರು ಬರಹಗಳನ್ನ ಪಡೆದುಕೊಳ್ಳಬಹುದು. ಇದು ಬರಹಗಾರ ಮತ್ತು ಮಾಧ್ಯಮ, ಪ್ರಕಾಶಕರ ನಡುವೆ ಸ್ನೇಹಸೇತುವಾಗುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಇಂಟರ್ನೆಟ್ ನಲ್ಲಿ, ಬ್ಲಾಗುಗಳಲ್ಲಿ ಕಂಡುಬರುತ್ತಿರುವ ಕನ್ನಡ ಬರಹಗಳನ್ನ ನೋಡಿದರೆ, ಈ ಕ್ರಮ ಪರಿಣಾಮಕಾರಿಯಾಗುತ್ತದೆ ಎನಿಸುತ್ತದೆ. ಇದರಿಂದ ಉಭಯತರರಿಗೂ ಲಾಭ ಮತ್ತು ಸಂಪರ್ಕ ಒದಗಿದಂತಾಗುತ್ತದೆ. ಜೊತೆಗೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಅತಿಯಾಗಿ ಕಾಡುವ ಬರಹಗಳ ಕೊರತೆ ನೀಗಿಸಬಹುದು.
 • ಸರ್ಕಾರ ಬೇರೆ ರಾಜ್ಯಗಳಲ್ಲಿ ಕನ್ನಡ ಪೀಠ ಸ್ಥಾಪನೆಗೆ ಎಲ್ಲಾ ನೆರವು ನೀಡಬೇಕು. ಇದನ್ನು ಹೊರದೇಶಗಳಿಗೂ ವಿಸ್ತರಿಸಬೇಕು. ಅಲ್ಲಿ ಅಭ್ಯಾಸಿಸುವವರಿಗೆ, ಸಂಶೋಧನೆ ನೆಡೆಸುವವರಿಗೆ ವಿದ್ಯಾರ್ಥಿವೇತನ, ಆರ್ಥಿಕ ನೆರವು ಘೋಷಿಸಬೇಕು. ಕಂಡ ಕಂಡವುಗಳಿಗೆಲ್ಲಾ ಬೇಕಾ”ಬಿಟ್ಟಿ” ಹಣ ಮಂಜೂರು ಮಾಡುವ ಸರ್ಕಾರ ಇವುಗಳತ್ತ ಗಮನ ಹರಿಸಿ, ಹೊರದೇಶದ, ಹೊರರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪೀಠ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡೋದಕ್ಕೇ ಇಷ್ಟೊಂದು ಸತಾಯಿಸಿದ ಸರ್ಕಾರಗಳು ಇದನ್ನು ಮಾಡುವುದರ ಬಗ್ಗೆ ಒಲವು ಹರಿಸುವುದು ಕಡಿಮೆ ಎಂದೆನಿಸುತ್ತದೆ. ಆದರೆ ಹೋರಾಟ ನೆಡೆಸಿ, ಕನ್ನಡದ ಪರ ಲಾಬಿ ನೆಡೆಸುವುದು ಅನಿವಾರ್ಯ.
 • ಡಾ||ಯು.ಆರ್.ಅನಂತಮೂರ್ತಿಯವರು ಸೂಚಿಸಿದಂತೆ, ಪಂಪನ ಹೆಸರಿನಲ್ಲಿ ವರ್ಷಕ್ಕೊಂದು ಅಗ್ರಗಣ್ಯ ಸಾಹಿತಿಯನ್ನು, ಅವರ ಸಾಹಿತ್ಯವನ್ನು ಗುರುತಿಸಿ,  ಒಂದು ರಾಷ್ಟ್ರೀಯ ಪ್ರಶಸ್ತಿ ಕೊಡಬೇಕು. ಇದು ರಾಷ್ಟ್ರ ಮಟ್ಟದ್ದಾಗಿರಬೇಕು. ಎಲ್ಲಾ ಭಾಷೆಗಳೂ ಗಣನೆಗೆ ಬರಬೇಕು. ಇದರಿಂದ ಕರ್ನಾಟಕದ ಬಗ್ಗೆ, ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಹೊರ ರಾಜ್ಯಗಳಲ್ಲೂ ಬೆಳೆಯುವಂತೆ ಮಾಡಬಹುದು.
 • ಕನ್ನಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳು ಈಗಿರುವ MW(Medium Wave) ನಂತೆ SW(Short Wave)ನಲ್ಲಿ ಕೂಡಾ ಬರುವಂತೆ ನೋಡಿಕೊಂಡರೆ, ಕನ್ನಡದ ಕಂಪು ದೇಶದೆಲ್ಲೆಡೆ ಪಸರಿಸುತ್ತದೆ. ಹೊರ ರಾಜ್ಯದ ಕನ್ನಡಿಗರ ನಾಡಿಮಿಡಿತವಾಗುತ್ತದೆ. ಏಕೆಂದರೆ, SW ನ ತರಂಗಗಳು ಅತಿ ದೂರದವರೆಗೆ ಪಸರಿಸಬಲ್ಲವು. ಆದರೆ, AM ತರಂಗಗಳ ಪರಿಮಿತಿ ಕೇವಲ 150-200ಕಿ.ಮೀ. SW ನ ತರಂಗಗಳಲ್ಲಿ ಕನ್ನಡ ಕೇಂದ್ರಗಳು ಪ್ರಸಾರ ಆರಂಭಿಸಿದರೆ, ಪಕ್ಕದ ರಾಜ್ಯದಲ್ಲೂ ಕೇಳಬಹುದು. ಪಕ್ಕದ ಶ್ರೀಲಂಕಾದಲ್ಲಿ, ಪಾಕಿಸ್ತಾನದಲ್ಲಿ, ನೇಪಾಳದಲ್ಲಿ ಕೂಡಾ ಕೇಳಬಹುದು. ಇದು ಕನ್ನಡ ಮನಸುಗಳ ಏಕತ್ರೀಕರಣಕ್ಕೆ ಸಹಕಾರಿ.
 • ಕನ್ನಡ ಸಾಹಿತ್ಯದ ಬಗ್ಗೆ ಆಸ್ಥೆವಹಿಸಿ, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹದಿನೈದು ದಿನ, ತಿಂಗಳಿಗೊಂದರಂತೆ ಸಾಹಿತ್ಯ ಕಾರ್ಯಕ್ರಮ ನೆಡೆಯುವಂತೆ, ಸಾಹಿತ್ಯ ಪುಸ್ತಕಗಳು ಎಲ್ಲರಿಗೂ ಒದಗುವಂತೆ ಸಾಹಿತ್ಯ ಮಳಿಗೆಗಳನ್ನು ತೆರೆಯಬೇಕು. ಆದಷ್ಟು, ಜನರನ್ನು ಸೆಳೆಯುವಂಥ, ಮನೋರಂಜಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಚಿಂತನಗೋಷ್ಠಿಗಳು, ಉಪನ್ಯಾಸಗಳನ್ನು ಜನ ದಿನಾಲೂ ಕೇಳಿರುತ್ತಾರೆ. ಅದೇ ಊದಿದ್ದೇ ಊದೋ ತುತ್ತೂರಿ ಊದಿದರೆ ಯಾರು ತಾನೇ ಬಂದಾರು? ಜನಸಾಮಾನ್ಯರಿಗೆ, ಇನ್ನೂ ಕನ್ನಡ ಓದುಗವಲಯಕ್ಕೆ ಪ್ರವೇಶಿಸುವವರಿಗೆ ನವೋದಯ, ನವ್ಯ, ನವ್ಯೋತ್ತರಗಳು ಬೇಕಿಲ್ಲ. ವಿವಾದಗಳು ಬೇಕಿಲ್ಲ. ಕೇಳಿದರೆ ಅಹ್ಲಾದತೆಯನ್ನುಂಟುಮಾಡುವ, ಹೃದಯಸ್ಪರ್ಶಿಯಾದ ಕಾರ್ಯಕ್ರಮಗಳು ನೆಡೆಯಬೇಕು. ಉರ್ದು ಸಾಹಿತ್ಯದ “ಮುಶಾಯಿರಾ”ಗಳು ಇದಕ್ಕೆ ಸ್ಪೂರ್ತಿಯಾಗಬಹುದು. ಯುವ ಸಮೂಹದ ಸಾಹಿತ್ಯಾಭಿಮಾನಿಗಳನ್ನು, ಸಾಹಿತ್ಯರಚನಾಕಾರರನ್ನು, ಬರಹಗಾರರನ್ನು ಹೊಸ ದಿಕ್ಕಿನತ್ತ ಕರೆದೊಯ್ಯುವುದು ಈಗಿನ ಅಗತ್ಯತೆ. ಬರೀ ಭ್ರಷ್ಟಾಚಾರ, ಜಾಗತೀಕರಣ, ಕೋಮುವಾದ, ಜಾತ್ಯಾತೀತತೆ ಇವೇ ವಿಷಯಗಳಲ್ಲ ಬರೆಯಲಿಕ್ಕೆ. ಸಾಕಷ್ಟು ವಿಷಯಗಳಿವೆ, ಗಮನ ಹರಿಸಿದರೆ. ಜಾಗತೀಕರಣ ಬಂದಾಗಿದೆ. ಈಗೇನಿದ್ದರೂ ಅಳಿವು ಉಳಿವಿನ ಪ್ರಶ್ನೆ. ಈಗ ಜಾಗತೀಕರಣವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನೆಡೆಯಬೇಕು.
 • ಕನ್ನಡದ ಉಳಿವಿಗಾಗಿ ಹೋರಾಟಗಳು ನೆಡೆಯುತ್ತವೆಯೇ ಹೊರತು, ಕನ್ನಡದ ಬೆಳವಣಿಗೆಗಾಗಿ ಯಾರೂ ದನಿಯೆತ್ತುತ್ತಿಲ್ಲ. ಬೆಳವಣಿಗೆಯಿಲ್ಲದ ಭಾಷೆಯನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಬರೀ ಅಸ್ತಿತ್ವವನ್ನು ಉಳಿಸಿಕೊಂಡರೆ ಅದು ಬರೀ ಬೆದರುಗೊಂಬೆಯಾದೀತು. ಉಳಿದರೆ ಸಾಲದು. ಬೆಳೆಯಬೇಕು. 
 • ಇನ್ನು ಮುಖ್ಯವಾಗಿ ಸರ್ಕಾರಿ ಕನ್ನಡ ಶಾಲೆಗಳನ್ನು ಪುನಶ್ಚೇತನಗೊಳಿಸಬೇಕು. ಸರ್ಕಾರಿ ನೌಕರರು, ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸಿದರೆ, ಕನ್ನಡ ಮಾಧ್ಯಮದಲ್ಲಿ ಓದಿಸಿದರೆ ಅವರನ್ನು ಉತ್ತೇಜಿಸುವ ಸಲುವಾಗಿ ಬಡ್ತಿ ನೀಡಬೇಕು. ಸರಕಾರಿ ಶಾಲೆಗಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಮಕ್ಕಳೇ ಇಲ್ಲದ ಮೇಲೆ ಶಾಲೆಗಳನ್ನು ನೆಡೆಸುವುದು ಸಾಧ್ಯವೇ? ಇನ್ನು ಕೆಲವೇ ವರ್ಷಗಳಲ್ಲಿ ಶಾಲೆಗಳೇ ನಿರ್ನಾಮವಾಗುವ ಪರಿಸ್ಥಿತಿಯಿದೆ. ನಗರ ಪ್ರದೇಶಗಳಲ್ಲಂತೂ ಈ ಪರಿಸ್ಥಿತಿ ಭಯಾನಕವಾಗಿದೆ. ಶಾಲೆಗಳೇ ಮುಚ್ಚಿದ ಮೇಲೆ ಹೊಸದಾಗಿ ಶಿಕ್ಷಕರು ನೇಮಕಗೊಳ್ಳಲು ಸಾಧ್ಯವೇ? ವಿದ್ಯಾರ್ಥಿಗಳು, ಶಾಲೆಗಳು ಉಳಿದರೆ ತಾನೇ ಶಿಕ್ಷಕರು..? ಶಿಕ್ಷಕರು ತಮ್ಮ ಮೇಲೆ ನೇತಾಡುತ್ತಿರುವ ತೂಗುಕತ್ತಿಯನ್ನು ನೋಡಬೇಕಿದೆ.
 • ಶಿಕ್ಷಣ ಕ್ಷೇತ್ರದಲ್ಲಿ, ಬರೀ ಅಂಕಿ-ಅಂಶಗಳನ್ನಿಡಲಿಕ್ಕೇ ಶಿಕ್ಷಕರನ್ನ ನೇಮಿಸಿಕೊಂಡಂತಿದೆ ಸರ್ಕಾರ. ಏಕೆಂದರೆ, ಸರ್ಕಾರಕ್ಕೆ ಬೇಕಿರುವುದು ಗುಣಾತ್ಮಕ ಬೆಳವಣಿಗೆಯಲ್ಲ. ಅಂಕಿ-ಅಂಶಗಳ ಬೆಳವಣಿಗೆ. ಬರೀ ಉತ್ತೀರ್ಣತೆಯ ಪ್ರತಿಶತವನ್ನ ಹೆಚ್ಚಿಸುವುದೇ ತಮ್ಮ ಆದ್ಯ ಕರ್ತವ್ಯ ಎಂಬಂತೆ ಇಲಾಖೆ ವರ್ತಿಸುತ್ತಿದೆ. ಕನ್ನಡ ಭಾಷೆ ಪತ್ರಿಕೆಯಲ್ಲೂ ೪೦ ಅಂಕಗಳನ್ನ ಬಹುಆಯ್ಕೆ ಪ್ರಶ್ನೆಗಳನ್ನಿರಿಸುವುದು ನೋಡಿದರೆ ಇದರ ಮಹತ್ವ ತಿಳಿಯುತ್ತದೆ.  ಸರ್ಕಾರಿ ಶಿಕ್ಷಕರು ಮಕ್ಕಳನ್ನ ಓದಿಸುವುದಕ್ಕಿಂತ ಎಷ್ಟು ಮಂದಿಗೆ ಏನು ಓದಲು ಬರುತ್ತದೆ, ಏನು ಬರುವುದಿಲ್ಲ, ಯಾಕೆ ಅನ್ನೋ ಅಂಕಿ ಅಂಶಗಳನ್ನಿಡುವುದರಲ್ಲೇ ಕಾಲ ವ್ಯಯವಾಗುತ್ತದೆ. ಶಿಕ್ಷಣ ವಿಧಾನ ಸುಧಾರಣೆ ಹೆಸರಿನಲ್ಲಿ ನೆಡೆದಿರುವ ಸಂಕೀರ್ಣಮಯತೆ ಇಲ್ಲವಾಗಬೇಕು. ಶಿಕ್ಷಕರು ಇವೆಲ್ಲವುಗಳಿಂದ ಬೇಸತ್ತಿದ್ದಾರೆ. ಸರ್ಕಾರಗಳು ತಮಗೆ ಅಂಕಿ ಅಂಶಗಳೇ ಪ್ರಧಾನವಾಗಿದ್ದಲ್ಲಿ, ಬೇಕಾದರೆ ಚುನಾವಣಾ ಸಮೀಕ್ಷೆ ನೆಡೆಸುವ ಏಜೆನ್ಸಿಗಳಿದ್ದಂತೆ ಶಿಕ್ಷಣ ಕ್ಷೇತ್ರದ ಸಮೀಕ್ಷೆ ನೆಡೆಸಲಿಕ್ಕೆ ಏಜೆನ್ಸಿಗಳನ್ನ ನೇಮಿಸಿಕೊಳ್ಳಲಿ. ಶಿಕ್ಷಕರ ಜೀವ ಹಿಂಡುವುದರಿಂದ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಶಿಕ್ಷಕರು ಪಾಠ ಮಾಡುವುದರ ಬಗ್ಗೆ ಗಮನಹರಿಸುವುದನ್ನ ಬಿಟ್ಟು ಬಿಸಿಯೂಟ, ಜನಗಣತಿ, ದನಗಣತಿ ಅಂತಾ ಹೊರಟರೆ ವಿದ್ಯಾರ್ಥಿಗಳ ಗತಿ? ಶಿಕ್ಷಣ ಸುಧಾರಕರು ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಗಳ ಸರಳೀಕರಣದ ಬದಲಾಗಿ ಶಿಕ್ಷಕರ ಕೆಲಸಗಳ ಸರಳೀಕರಣ ಮಾಡಬೇಕಿದೆ.
 •     ಭವ್ಯ ಕರ್ನಾಟಕದಲ್ಲಿ ಸುಂದರ, ಸುಭದ್ರ, ಶುದ್ಧ ಕನ್ನಡದ ಕನಸೊಂದು ನನಸಾಗಲೆಂದು ಬಯಸುವೆ.

  ಗಣೇಶ್.ಕೆ, 2ganesh@gmail.com

   

  ಕನ್ನಡ ಅಳಿವಿನಂಚಿನಲ್ಲಿರುವುದು ಗೊತ್ತಿದೆ. ಅದಕ್ಕೆ ಬೊಬ್ಬೆ ಹಾಕಿದರೆ ಏನೂ ಬರುವುದಿಲ್ಲ. ರಚನಾತ್ಮಕ ಕಾರ್ಯಕ್ರಮಗಳಿಂದ ಮಾತ್ರ ಸುಧಾರಣೆ ಸಾಧ್ಯ. ತಮ್ಮ ಎಲ್ಲ ಸಿದ್ಧಾಂತಗಳನ್ನು, “ಇಗೋ”ಗಳನ್ನು ಬದಿಗೆ ಸರಿಸಿ, ಇಗೋ ಬಂದೆ ಎಂದು ಬರಬೇಕಿದೆ.
  ಕನ್ನಡೇತರರಿಗೆ ಕನ್ನಡದ ಕಲಿಸುವ, ಕನ್ನಡದ ಬಗ್ಗೆ ತಿಳಿಸಿ ಹೇಳುವ, ಕನ್ನಡ ನಾಡಿನ ಬಗ್ಗೆ ಸವಿಸ್ತಾರವಾಗಿ ವಿವರಿಸುವ ವ್ಯಕ್ತಿಗಳನ್ನು ತರಬೇತುಗೊಳಿಸಿ, ಕನ್ನಡ ಕಲಿಸುವ ಕೈಂಕರ್ಯಕ್ಕೆ ಕೈಹಾಕಬೇಕು. ಈ ಕೆಲಸವನ್ನು ಸಂಘ ಸಂಸ್ಥೆಗಳು, ಕನ್ನಡಪರ ಕಾಳಜಿಯುಳ್ಳ ವಿದ್ಯಾವಂತರು, ದುಭಾಷಿಗಳು ವಹಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ಆಗಲೇ ಕಾರ್ಯನಿರತರಾಗಿರುವ ಸಮೂಹಗಳನ್ನ ಪ್ರೋತ್ಸಾಹಿಸಬೇಕು.