ಸುಖಪುರುಷ – ಸುಖಸ್ತ್ರೀ

ಸುಖಪುರುಷ – ಸುಖಸ್ತ್ರೀ
———————–
ಹುಬ್ಬಳ್ಳಿಯಲ್ಲಿ ಇಂಟರ್ಸಿಟಿ ರೈಲು ಇಳಿದವನು ಕೋಟಿಗಟ್ಲೇ ರೊಕ್ಕ ಕೊಟ್ಟು ಗ್ರಾನೈಟ್ ನೆಲಹಾಸು ಹಾಕುವ ರೈಲ್ವೇ ಡಿಪಾರ್ಮೆಂಟು, ಜಗಜಗಿಸುವ ಲೈಟುಗಳಿರುವ ಪ್ಲಾಟ್ ಫಾರಂ ಇದ್ದರೂ ಪ್ರೀಪೇಡ್ ಆಟೋ ಇಲ್ಲದರ ಬಗ್ಗೆ ಬೈದುಕೊಂಡು ಸರ ಸರನೆ ಪ್ಲಾಟ್‍ಫಾರಂನಿಂದ ನಡೆದು ಹೊರಬಿದ್ದು ಮತ್ತೆ ಇನ್ನೂರು ಮುನ್ನೂರು ಮೀಟರ್ ನಡೆಯುತ್ತಾ, ನಮ್ಮ ದೇಶದಲ್ಲಿ ವಯಸ್ಸಾದವರು ರೈಲು ನಿಲ್ದಾಣದಿಂದ ಎಷ್ಟೊಂದು ನಡೆಯಬೇಕು ಸರ್ಕಾರಗಳೇನೂ ಮಾಡುವುದೇ ಇಲ್ಲವಾ? ಎಸಿ ಕಾರುಗಳಲ್ಲಿ ಓಡಾಡುವವರಿಗೆ ಇವೆಲ್ಲಾ ಎಲ್ಲಿ ನೆನಪಾಗುತ್ತವೆ ಅಂದುಕೊಳ್ಳುತ್ತಾ ಒಂದು ಆಟೋ ಹಿಡಿದು ಅರವತ್ತು ಕೇಳಿದವನಿಗೆ ಐವತ್ತು ಕೊಡುತ್ತೇನೆಂದು ಮಾತಾಡಿ, ಆಟೋ ಇಳಿದು ಸರ ಸರನೆ ಬಂದು ರೂಮು ಬಾಗಿಲು ತಟ್ಟಿದರೆ ಬಾಗಿಲು ತೆಗೆದ ಮಲ್ಲಿಕಾರ್ಜುನ ಎಡಗೈಯಲ್ಲಿ ಬಾಗಿಲು ತೆಗೆದು ಮತ್ತೆ ತಾಟಿನಲ್ಲಿ ರೊಟ್ಟಿ ಮುರಿಯುತ್ತಾ ಹೆಸರುಕಾಳು ಬಾಜಿ ಜೊತೆ ಊಟ ಮುಂದುವರೆಸಿದ.

“ಎಲ್ಲಿ ತಂದಿ ರೊಟ್ಟೀನಾ? ”
“ಆಂಟೀ ಮೆಸ್‍ದಾಗ”
“ಎಷ್ಟು ರೊಟ್ಟೀಗೆ, ಬಾಜೀಗೆ?”
“ಸಪರೇಟಾಗಿ ಗೊತ್ತಿಲ್ಲ. ಊಟ ತಂದೆ. ಮೂವತ್ತೈದು.”
“ಹೆಂಗಿದೆ ಊಟ?”
“ಅಡ್ಡಿಯಿಲ್ಲ ಸರ್. ಒಕೆ.”
“ಆಂಟಿ ಛಲೋ ಅದಾಳಲ್ಲಾ?”
“ಹಂಗ್ ಅನ್ನಿಸ್ತಾಳೆ ಸರ್. ಆದ್ರೆ, ಎಲ್ಲಾ ಇಳೇ ಬಿದ್ದಾವು. ನೋಡಕ್ ಮಕಾ ಮಾತ್ರ ಸೂಪರ್”
“ಇನ್ನೂ ಮತ್‍ಹ್ಯಾಂಗ್ ಇರ್ತಾಳೋ? ಎರಡು ಮಕ್ಕಳನ್ನ ಹಡೆದು, ಬೆಳೆಸಿ, ಬೇಯಿಸಿ ಹಾಕಿ”

ಕೋಣೆಯಲ್ಲಿ ಒಂದರ್ಧ ನಿಮಿಷ ನಗು.

“ಸರ್, ಆಂಟೀ ಹ್ಯಾಂಗೆ? ಒಳ್ಳೇಕಿಯಾ?”
“ಒಳ್ಳ್ಯಾಕಿ ಅಂದ್ರೆ?” ಮುಖದ ಮೇಲೊಂದು ಪ್ರಶ್ನಾರ್ಥಕ ಚಿನ್ಹೆ.
“ಅಂದ್ರೆ ಬ್ಯಾರಾರ್ ಕೂಡೆ ಓಡೇನೂ ಹೋಗಂಗಿಲ್ಲಾ..?”
“ಈಗ್ಯಾಕ್ ಈ ಚಿಂತಿ ಬಂತು?”
“ಇಲ್ಲೇ ಗಣಪ್ಪನ ಗುಡಿ ಬಾಜೂ ಇರೋ ಖಾನಾವಳಿಯ ಮಾಲೀಕನ ಹೇಣ್ತಿ ಇದ್ದೋಳು ಅಲ್ಲೇ ಕೆಲ್ಸ ಮಾಡೋನ್ ಕೂಡೆ ಓಡಿ ಹೋದ್ಲು”

ಕೋಣೆಯಲ್ಲಿ ಮತ್ತೆ ನಗು. ಓಡಿಹೋಗುವವರನ್ನ ನೋಡಿದರೆ ಜನರಿಗೆ ನಗುವೇಕೆ ಬರುತ್ತದೆ? ಜೀವನದಲ್ಲಿ ಓಡುತ್ತಿರಬೇಕು. ಓಡಿ ಹೋಗಬಾರದು..! ಬೆಂಗ್ಳೂರಾಗೆ ದಿನಬೆಳಗಾದ್ರೆ ಕುಂಡಿ ತುರಿಸಿಕೊಳ್ಳಾಕ್ ಟೈಮ್ ಇಲ್ದಂಗ್ ತಮ್ ತಮ್ ಕೆಲ್ಸಕ್ಕೆ ಪುರುಸೊತ್ತಿಲ್ಲದಂಗ್ ಓಡ್ತಾರೆ. ಯಾರೂ ನಗಂಗಿಲ್ಲ. ಯಾರ್ ಮಕದಾಗೂ ನಗೂ ಇಲ್ಲ. ಆದ್ರೆ, “ಓಡಿಹೋಗುವವರನ್ನ” “ಓಡಿ ಹೋಗಿ ಮದುವೆಯಾಗುವವರನ್ನ” ನೋಡಿ ಜನ ಯಾಕೆ ನಗ್ತಾರೆ, ಬಾಯಿಗ್ ಬಂದಿದ್ ಮಾತಡ್ತಾರೆ?

“ಸರ್, ಈವಾಂಟಿಗೆ ಆಂಟಿ ಅನ್ನಬಾರದು. ಅಕ್ಕ ಅನ್ನಬಾರದು. ಮೇಡಂ ಅನ್ನಬೇಕು..! ಮೊನ್ನೆ ಪಾರ್ಸಲ್ ತರಕ್ ಹೋದಾಗ ಯಕ್ಕಾ ಒಂದ್ ಊಟ ಕಟ್ಟು ಅಂದೆ. ಹಾಂ ಇಲ್ಲ ಹೂಂ ಇಲ್ಲ. ಆಂಟೀ ಒಂದು ಊಟ ಅಂದೆ. ಉತ್ರಿಲ್ಲ. ಮೇಡಂ ಒಂದ್ ಊಟ ಪಾರ್ಸೆಲ್ ಮಾಡಿ ಅಂದ್ರೆ ಪಟ್‍ನೆ ಹಾಂ ಮಾಡ್ತಾ ಇದೀನ್ರಿ ಅಂದಳು.”
“ಅವುನೌನ್ ಬೆಂಗ್ಳೂರ್ ಭಾಷೆಗೆ ಈ ಹುಡಗ್ಯಾರ್ ಬೀಳೋದ್ ನೋಡಿದ್ನಿ. ಈ ಆಂಟಿಗುಳೂ ಹಂಗೇ ಆದ್ವಾ? ನಮ್ಮೂರಾಗೆ ನಾವೆಲ್ಲಾ ಜವಾರಿ ಕನ್ನಡ ಮಾತಾಡಿದ್ರೆ ಆ ಇಬ್ರು ಸೂಳೇಮಕ್ಳು ಎರಡೇ ಎರಡ್ ಸಲ ಬೆಂಗ್ಳೂರ್‌‍ಗೆ ಹೋಗಿ, ಸಾಫ್ಟ್‌ ಆಗಿ, ಹೇಗಿದೀರಾ, ಹಾಗಾ ಹೀಗಾ, ಹೌದು ಕಣ್ರೀ, ಹೀಗೆ ಕಣ್ರೀ ಅಂತಾ ಮಾತಾಡಿ ನಮ್ಮೂರ್ ಹುಡ್ಗೇರ್‌ನ ಬೀಳಿಸ್ಕತಿದ್ರು. ಈ ಹುಡ್ಗೇರಿಗೆ ಬೆಂಗ್ಳೂರ್ ಭಾಷೆ ಮಾತಾಡ ಹುಡುಗರು ಮಾತ್ರ ಸ್ಟ್ಯಾಂಡರ್ಡ್‌ ಆಗಿ ಕಾಣ್ತಾರೆ” ಅವನು ಬಿರುಸಾಗಿಯೇ ಆಕ್ರೋಶ ವ್ಯಕ್ತಪಡಿಸಿದ.

ಹಾಗಾದರೆ ಸುಖ ಕೊಡುವ ಜವಾಬ್ದಾರಿ ಯಾರ್ದು? ಹೆಣ್ಣು ಭೋಗದ ವಸ್ತು ಅಂದ್ರೆ ಹೆಣ್ಣು ಸುಖ ಕೊಡ್ತಾಳೆ ಅಂತಾ ಅರ್ಥ ಅಲ್ಲೇನು? ಭೋಗದ ವಸ್ತು ಅಂದರೆ ಭೋಗಿಸಲ್ಪಡುವ ವಸ್ತು ಅಂತಲಾ? ಹೆಣ್ ಮಕ್ಳು ಬ್ಯಾರೆ ಗಂಡಸರ ಕೂಡೆ ಓಡಿ ಹೊಕ್ಕಾರೆ ಅಂದ್ರೆ ಗಂಡ ಸುಖ ಕೊಡ್ಲಿಲ್ಲಾ ಅಂತಾ ಅರ್ಥ ಅಲ್ಲೇನು? ಅಲ್ಲಿಗೆ ಹಂಗ್ ನೋಡಿದ್ರೆ, ಗಂಡಸು ಸುಖ ಕೊಡುವ ಮಷೀನ್ ಅಲ್ಲೇನು? ಗಂಡಸ್ರೂ ಭೋಗಿಸಲ್ಪಡುವ ವಸ್ತುಗಳಾಗಿಲ್ಲೇನು?
,
ಆಂಟಿ ಮೆಸ್ಸಿನ ಊಟ ಮಾಡಿದವನು ಇವ್ಯಾವುದರ ಪರಿವೆ ಇಲ್ಲದೇಲೇ ಲೈಟು ಆರಿಸಿ ಚಾದರ ಹೊದ್ದು ಮಲಗಿದ.