ಯಾರಿಗುಂಟು ಯಾರಿಗಿಲ್ಲ. 3,000 ರೂ ಗೆ 100 ಪುಸ್ತಕಗಳು..! (ನೂರಿನ್ನೂರು ರೂ ಪುಸ್ತಕಗಳು ಸರಾಸರಿ 30ರ ಅತಿ ಸುಲಭ ಬೆಲೆಯಲ್ಲಿ!)

 

    ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೇ ತನ್ನ ಬಳಗನೆಲ್ಲವ? ಅನ್ನೋ ಶರಣರ ವಚನವಿದೆ.(ನಾನೇನೂ ಕಾಗೆಯಷ್ಟು ಕಪ್ಪಗಿಲ್ಲಪ್ಪ..!) ನಾನಂತೂ 3000 ಕೊಟ್ಟು 100 ಪುಸ್ತಕ ಕೊಂಡದ್ದಾಯಿತು. ಇನ್ನು ಊರವರಿಗೆಲ್ಲಾ ಕೊಡಿಸುವ “ಕಾಯಕ”..!

 

    ಸುವರ್ಣ ಕರ್ನಾಟಕ ವರ್ಷಾಚರಣೆಯ ಸುಸಂದರ್ಭದಲ್ಲಿ “ಸುವರ್ಣ ಸಾಹಿತ್ಯ ಗ್ರಂಥಮಾಲೆ” ಅನ್ನೋ ಯೋಜನೆಯಡಿಯಲ್ಲಿ ಸೃಜನಶೀಲ ಮತ್ತು ಸೃಜನೇತರ 100 ಪುಸ್ತಕಗಳನ್ನು ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳ ಮುಖಾಂತರ ಆಯ್ಕೆ ಮಾಡಿ, ಅಚ್ಚು ಹಾಕಿಸಿ ಸುಲಭ ಬೆಲೆಗೆ ಮಾರಾಟದ ವ್ಯವಸ್ಥೆ ಮಾಡಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ ಕನ್ನಡ ಸಾಹಿತ್ಯದ ಮಹತ್ವದ ಕಾಲಘಟ್ಟಗಳನ್ನು ನೆನಪಿಸುವ ಎಲ್ಲ ಪ್ರಕಾರದ ಪುಸ್ತಕಗಳು ಲಭ್ಯ. ಬಿಡಿ ಪುಸ್ತಕಗಳೂ ಲಭ್ಯ. ಬಿಡಿ ಪುಸ್ತಕವೊಂದಕ್ಕೆ ಬೆಲೆ ರೂ 25 ರಿಂದ 50. ಒಮ್ಮೆಗೇ ಕೊಂಡರೆ 3,620 ರೂ ಬೆಲೆಯ 100 ಪುಸ್ತಕಗಳ ಪುಸ್ತಕಗಳ ಬೆಲೆ 3,000

 

 

 

   ಬಿಡಿಯಾಗಿ ಬೇರೆ ಅಂಗಡಿಗಳಲ್ಲಿ ಖರೀದಿ ಮಾಡಿದರೆ 10,000 ಕ್ಕಿಂತ ಕಡಿಮೆಯಾಗದು ಎಂಬ ಅಂದಾಜು.

 

 

 

ಕುವೆಂಪು, ತೀ.ನ.ಶ್ರೀ, ಶಿವರುದ್ರಪ್ಪ, ಪುತಿನ, ಚನ್ನವೀರ ಕಣವಿ, ತೇಜಸ್ವಿ, ಯು.ಆರ್.ಅನಂತ ಮೂರ್ತಿ, ಗಿರೀಶ್ ಕಾರ್ನಾಡ್, ಹಾಮಾನಾ, ತ್ರಿವೇಣಿ, ಕುಂ.ವೀರಭದ್ರಪ್ಪ, ಶಾಂತರಸ, ಸಿದ್ಧಲಿಂಗಯ್ಯ, ವ್ಯಾಸರಾಯ ಬಲ್ಲಾಳ, ಶಂಕರ ಮೊಕಾಶಿ ಪುಣೇಕರ, ವಿ.ಕೃ. ಗೋಕಾಕ್, ಎಂ.ಕೆ.ಇಂದಿರಾ, ಚದುರಂಗ, ಬಿ.ಜಿ.ಎಲ್.ಸ್ವಾಮಿ, ಕೆ.ಎಸ್.ನರಸಿಂಹಸ್ವಾಮಿ, ದೇ.ಜ.ಗೌ, ಹೆಚ್.ನರಸಿಂಹಯ್ಯ, ಕೆ.ಎಸ್.ನಿಸ್ಸಾರ್ ಅಹಮದ್, ನಾ.ಕಸ್ತೂರಿ, ಜಿ.ಪಿ.ರಾಜರತ್ನಂ, ಸಿ.ಆರ್.ಚಂದ್ರಶೇಖರ್, ಆಲೂರು ವೆಂಕಟರಾಯರು, ಎಂ.ಎಂ.ಕಲಬುರ್ಗಿ, ಎಂ.ಚಿದಾನಂದಮೂರ್ತಿ ಮುಂತಾದ ಅನೇಕಾನೇಕರು ಬರೆದ ಶ್ರೇಷ್ಠ ಕೃತಿಗಳು

 

 

 

ಕಾದಂಬರಿಗಳು, ಕಥಾಸಂಕಲನಗಳು, ಜೀವನ ಚರಿತ್ರೆ,ವೈಚಾರಿಕ – ವೈಜ್ಞಾನಿಕ ಲೇಖನಗಳು, ವಿಮರ್ಶಾ ಸಂಪುಟ, ಕಥಾ ಸಂಪುಟ, ಜಾನಪದ ಸಂಪುಟ, ಪ್ರಬಂಧ ಸಂಪುಟ, ಕಾವ್ಯ ಸಂಪುಟ ಮುಂತಾದ ಸೃಜನಶೀಲ ಮತ್ತು ಸೃಜನೇತರ ಕೃತಿಗಳು.

 

ಸಿಗುವ ಸ್ಥಳ : ಕನ್ನಡ ಭವನ, ನೆಲಮಹಡಿ(ನೆಲಮನೆ) (ರವೀಂದ್ರ ಕಲಾಕ್ಷೇತ್ರದ ಪಕ್ಕ / ಟೌನ್ ಹಾಲ್ ಪಕ್ಕ)

 

 

 

ಸಮಯ : ಬೆಳಗ್ಗೆ 10ರಿಂದ ಸಂಜೆ 5ರವರೆಗೆ.

 

 

 

ಒಂದು ಸೆಟ್ ಪುಸ್ತಕ ಕೊಳ್ಳುವುದಾದರೆ ಜೊತೆಗೆ ಇನ್ನೊಬ್ಬರನ್ನು ಕರೆದೊಯ್ಯುವುದು ಒಳಿತು. ಎರಡು ರಟ್ಟಿನ ಡಬ್ಬಿ ತುಂಬ ಪುಸ್ತಕಗಳಿರುತ್ತವೆ.

 

 

 

ಆಫರ್ ಎಲ್ಲಿವರೆಗೆ : ಪುಸ್ತಕಗಳು ಇರುವವರೆಗೆ. ಒಂದೊಂದು ಪುಸ್ತಕಗಳನ್ನೂ 3000 ಪ್ರತಿ ಹಾಕಿಸಿದ್ದಾರೆ. ಇನ್ನೂ ಒಂದು ತಿಂಗಳು ಸಿಗುವ ನಿರೀಕ್ಷೆ. ತಡ ಮಾಡದೆ, ಈ ಸುಸಂದರ್ಭ ಬಳಸಿಕೊಳ್ಳಿ.

 

 

 

   ಸರ್ಕಾರದ ಈ ಯೋಜನೆಯನ್ನ ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸರ್ಕಾದವರು ಒಮ್ಮೊಮ್ಮೆ ಒಳ್ಳೇ ಕೆಲಸಗಳನ್ನ ಮಾಡುತ್ತಾರೆ. ಆ ಒಳ್ಳೇ ಕೆಲಸಗಳ ಲಾಭ ಪಡೆಯಬೇಕು. ಅದೂ ಕೂಡಾ ಸಕಾಲದಲ್ಲಿ.

 

 

 

   ಇನ್ನೊಂದು ವಿಷ್ಯ. ಒಂದು ಜೊತೆ ರೀಬಾಕ್ ಶೂ ತೊಗೋಳ್ಳೋಕೆ 2500 ರಿಂದ 3000 ಬೇಕು. ಇನ್ನೂ ಜಾಸ್ತಿನೇ ಬೇಕಾಗಬಹುದು. ಜೀವಮಾನಕ್ಕಾಗುವಷ್ಟು ಪುಸ್ತಕಗಳನ್ನ ಕೊಂಡುಕೊಳ್ಳಲಿಕ್ಕೆ ಇಷ್ಟೂ ಖರ್ಚು ಮಾಡದಿದ್ದರೆ..?