ಒಂದು ಬ್ಯಾಗಿನ ಕತೆ….

Bag

ಸಿಕ್ಕ ಬ್ಯಾಗು

ನಿನ್ನೆ(29 May 2012) ರಾತ್ರಿ 11.30 ಆಗಿತ್ತು. ಊಟದ ಹೋಟೆಲ್‍ಗಳು, ಮೆಸ್ ಗಳು ಎಲ್ಲಾ ಬಂದ್ ಆಗಿದ್ದವು (ನನಗೋಸ್ಕರ ಯಾಕ್ ತೆರೆದಿರ್ತವೆ?) ಹಾಗಾಗಿ, ನನ್ನ ರೂಮು ಗೆಳೆಯರು ಸೇರಿಕೊಂಡು ನಾಲ್ಕು ಜನ ಹುಬ್ಬಳ್ಳಿ ಹಳೇ ಬಸ್ಟ್ಯಾಂಡು ಬಸ್ಸು ಹತ್ತಿದೆವು. ಬಸ್ಸು ಹತ್ತಿ ಟಿಕೇಟು ತೆಗೆದುಕೊಳ್ಳುವ ಧಾವಂತದಲ್ಲಿ ನಾನಿದ್ದಾಗ, ನನ್ನ ಗೆಳೆಯ ಮಲ್ಲಿಕಾರ್ಜುನನಿಗೆ ಆತ ಕುಳಿತ ಸೀಟಿನಲ್ಲಿ ವ್ಯಾನಿಟಿ ಬ್ಯಾಗು ಸಿಕ್ತು. ಯಾರು ಬಿಟ್ಟು ಹೋಗಿದ್ದರೋ ಏನು ತಾನೋ. ಆದ್ರೂ ವ್ಯಾನಿಟಿ ಬ್ಯಾಗು ಅಂದ್ರೆ ಕುತೂಹಲ, ಎಲ್ಲ ಗಂಡು ಜೀವಗಳಿಗೆ. 🙂

ಆ ಬ್ಯಾಗು ಯಾವುದಾದರೂ ಸುಂದರ ಯುವತಿಯದ್ದಾಗಿದ್ದರೆ? ಬ್ಯಾಗು ಕೊಡೋ ವಿಷಯದಲ್ಲೇ ಪ್ರೇಮ್ ಕಹಾನಿ ಶುರುವಾದರೆ? ಆತ್ಮೀಯತೆ ಬೆಳೆದರೆ? ಎಲ್ಲ ಯೋಚನೆಗಳು ಆತನೊಳಗೆ ಸುಳಿದಿರಬೆಕು. ಓಹ್.. ಸಧ್ಯಕ್ಕೆ ಬಿಡಿ. ತೆಗೆದು ನೋಡಿದರೆ ಒಂದು ಮೊಬೈಲು, ಒಂದಿಷ್ಟು ನೂರು ದುಡ್ಡು ದೇವರ ನಾಮ ಸ್ಮರಣೆಯ ಚಿಕ್ಕ ಪುಸ್ತಕಗಳು, ಒಂದು ಬದಿಯ ಖಾನೆಯಲ್ಲಿ ಚಿಕ್ಕದೊಂದು ಬೊಕ್ಕೆ. ಒಂದು ಚಿಕ್ಕ ಟವೆಲ್. ಒಂದು ಕವರಿನಲ್ಲಿ ಒಂದಿಷ್ಟು ಮಲ್ಲಿಗೆ ಹೂ. ಮೊಬೈಲಿನಲ್ಲಿ ನಾಲ್ಕಾರು ನಂಬರುಗಳು ಅಷ್ಟೇ. ಮತ್ತಿನ್ನೇನೂ ಇಲ್ಲ. ದೇವರ ನಾಮದ ಪುಸ್ತಕಗಳನ್ನ ನೋಡಿದ್ದಾದಮೇಲೆ ನಮ್ಮ ಗೆಳೆಯರಿಗೆ ಇದು ಮಧ್ಯವಯಸ್ಕ ಹೆಣ್ಣು ಮಗಳ ಬ್ಯಾಗು ಅನ್ನೋ ಕನ್ಫರ್ಮೇಷನ್ನು ಸಿಕ್ಕಮೇಲೆ ಆಸಕ್ತಿ ಕಡಿಮೆಯಾಗಿ ಅನುಕಂಪ ಜಾಸ್ತಿ ಆಯಿತು.

“ಪಾಪಾ” ನಿಂದ 16 ಮಿಸ್ಸ್ಡ್ ಕಾಲ್ ಗಳು ಇದ್ದವು. ಪಾಪ ಯಾರೋ ಏನೋ. ಎಷ್ಟು ಆತಂಕಿತಗೊಂಡಿದ್ದರೋ ಏನೋ. ಆ ಬ್ಯಾಗನ್ನ, ಆ ಮೊಬೈಲನ್ನ ಯಾರು ಗಿಫ್ಟ್ ಕೊಟ್ಟಿದ್ದರೋ ಏನೊ. ಅದರ ಅಗತ್ಯತೆ ಎಷ್ಟಿತ್ತೋ ಏನೋ. ಇದನ್ನೆಲ್ಲಾ ತಲೇಲಿ ಹೊತ್ತು, ಹಳೇ ಬಸ್ ಸ್ಟ್ಯಾಂಡಿನಲ್ಲಿ ಆ ಸರಿಹೊತ್ತಲ್ಲಿ ಪಲಾವು, ಪುಳಿಯೋಗರೆ, ಇಡ್ಲಿ ವಡೆ, ಚಾ ಆಯಿತು. ಹುಬ್ಬಳ್ಳಿಗೆ ಡಿಸಿಪಿ ಬಡಿಗೇರ ಬಂದಾದಮೇಲೆ ಹೊಟೆಲುಗಳು ಎಲ್ಲವೂ ಹತ್ತು ಗಂಟೆ ಅನ್ನೋ ಹೊತ್ತಿಗೆ ಬಾಗಿಲು ಎಳೆದುಬಿಟ್ಟಿವೆ. ಹತ್ತಾದಮೇಲೆ ಎಲ್ಲೂ ಊಟ ಸಿಗಲ್ಲ. ಬ್ಯಾಚಲರ್ ಲೈಫಿನಲ್ಲಿ ಇಂತಿಷ್ಟೇ ಹೊತ್ತಿಗೆ ಊಟ ಮಾಡಬೇಕು. ಇಂತಿಷ್ಟೇ ಹೊತ್ತಿಗೆ ಮಲಗಬೇಕು, ಇಷ್ಟೇ ಹೊತ್ತಿಗೆ ಎದ್ದೇಳಬೇಕೆಂಬ ಯಾವ ನಿಯಮಾವಳಿಗಳೂ ಇಲ್ಲವಲ್ಲ?!! ಹನ್ನೊಂದರ ಹೊತ್ತಿಗೆ ಊಟ ಸಿಗಲ್ಲ ಅನ್ನೋದಾದ್ರೆ ಹಳೇ ಬಸ್ ಸ್ಟ್ಯಾಂಡು ಆಪ್ತರಕ್ಷಕ..! ರಾತ್ರಿ 1.30ವರೆಗೂ ಬಿಸಿ ಬಿಸಿ ಪಲಾವು, ಪುಳಿಯೋಗರೆ, ಇಡ್ಲಿ – ವಡೆ ಎಲ್ಲವು ಸಿಗ್ತವೆ. ಬಡಿಗೇರ ಬಂದಿದ್ದಾದಮೇಲೆ ಇದಕ್ಕೂ ಕತ್ತರಿ. ಹತ್ತೂವರೆ ಹೊತ್ತಿಗೆ ಅವರೆಲ್ಲ ಪ್ಯಾಕಪ್..! ಆದರೆ, ಆ ಪ್ಯಾಕುಗಳನ್ನೆಲ್ಲ ದೊಡ್ಡ ಸ್ಟಾರು ಬ್ಯಾಗುಗಳಲ್ಲಿ ತುಂಬಿ ಟಿವಿಎಸ್ಸು ಗಾಡಿಗಳಲ್ಲಿ ಇಟ್ಟುಕಂಡಿರುತ್ತಾರೆ. ಪೋಲಿಸರೇನಾದರೂ ಕಿರಿಕ್ಕು ಮಾಡಿ ಓಡಿಸಲು ಬಂದರೆ ಸದಾ ಸನ್ನದ್ಧರು..!

ಊಟ ಮಾಡಿ ರೂಮಿಗೆ ನಾಲ್ವರೂ ನಡೆದು ಬಂದೆವು. ಆ ಸಿಕ್ಕ ಬ್ಯಾಗಿನಲ್ಲಿದ್ದ ನೊಕಿಯಾ ಫೋನು ರಿಂಗಣಿಸಿತು. ಗೆಳೆಯ ಅರುಣ ಮಾತಾಡಿದ. ಇಲ್ಲೇ ಇದೆ. ನಾಳೆ ಬಂದು ತಗಂಡ್ ಹೋಗ್ರಿ ಎಂದ. ಇವತ್ ಒಬ್ಬ ಮಧ್ಯ ವಯಸ್ಕ ವ್ಯಕ್ತಿಯೋರ್ವರು ಇಲ್ಲೇ ನವನಗರದಿಂದ ಬಂದು ಬ್ಯಾಗು ಒಯ್ದರು. ಬ್ಯಾಗು ಕೊಟ್ಟ ಮಲ್ಲಿಕಾರ್ಜುನನಿಗೆ ನೂರರ ನೋಟನ್ನ ಕೈಗಿಟ್ಟು ತುಂಬಾ ಉಪಕಾರವಾಯಿತು ಅಂದರಂತೆ. ಈತ ಬೇಡ ಅಂದಿದಾನೆ. ಅಟ್ಲೀಸ್ಟ್ ಚಾ ನದ್ರೂ ಕುಡಿಯೋಣು ಬರ್ರಿ ಅಂದಿದಾರೆ. (ನಮ್ ಹುಬ್ಬಳ್ಯಾಗ ಚಾ ಕುಡಿಸೋದು ಅಂದ್ರೆ honor ಇದ್ಧಾಂಗ.) ಇಲ್ಲಾ. ನನ್ ಕಾಲೇಜಿಗೆ ಟೈಮಾಗುತ್ತೆ ಅಂದವನು ಕಾಲೇಜಿನ ದಾರಿ ಹಿಡಿದಿದ್ದಾನೆ.

ನನಗೆ ನನ್ನ ಅಪ್ಪ ಕೊಡಿಸಿದ್ದ ವಾಚು ನನ್ನ ಬೇಜವಾಬ್ದಾರಿತನದಿಂದ ಕಳೆದುಕೊಂಡದ್ದು(ವಾಪಾಸಂತೂ ಸಿಕ್ಕಿಲ್ಲ) ನೆನಪಾಯಿತು.

ಗಣೇಶ್ ಕೆ.