ಮಾಸ್ತರಿಕೆಗೆ ದೀಡು ೨ : ಒಂದೇ ಒಂದು ಕೊನೆಯ ಸಹಿಯ ಬೆಲೆ.

Pen cropನಮ್ಮ ಹುಡುಗರಿಗೆ ಗೌರ್‍ಮೆಂಟ್ ಆಫೀಸಲ್ಲಿ ಕೆಲಸ ಮಾಡಿಸಿಕೊಂಡು ಬರೋವಷ್ಟು ಕೆಲಸ ಬೀಳೋದು, ಕಂಬದಿಂದ ಕಂಬಕ್ಕೆ, ಬಾಗಿಲಿನಿಂದ ಬಾಗಿಲಿಗೆ ಅಡ್ಡಾಡೋ ಕೆಲಸ ಬರೋದು ಲ್ಯಾಬ್ ಎಕ್ಸಾಮಿಗೆ ಮುಂಚೆ ಲ್ಯಾಬ್ ರೆಕಾರ್ಡಿಗೆ, ಸರ್ಟಿಫಿಕೇಟಿಗೆ ಲ್ಯಾಬಿನ ಪ್ರಾಧ್ಯಾಪಕರಿಂದ, ಅದಾದ ಮೇಲೆ ವಿಭಾಗದ ಮುಖ್ಯಸ್ಥರಿಂದಹಿ ಸಹಿ ಪಡೆಯುವ ವೇಳೆಗೆ. ನಾನಂತೂ ಒಂದೆರಡು ಆಕ್ಷೇಪಣೆಗಳನ್ನ ಸಲ್ಲಿಸದೇ ಸಹಿ ಹಾಕಿದ್ದೇ ಇಲ್ಲ/ಆಕ್ಷೇಪಣೆ ಸಲ್ಲಿಸುವಂತೆ ಅವರು ಏನಾದರೂ ಒಂದನ್ನ ಬಿಟ್ಟಿರುತ್ತಾರೆ. ಅದು ನನ್ನ ಕೆಂಪು ಶಾಯಿಯ ಕಣ್ಣಿಗೆ ಬೀಳುತ್ತದೆ.

ಕೆಟ್ಟ ಉಡಾಳರಿಗೆ, ಪುಂಡ ಪ್ರಚಂಡರಿಗೆ “ಪಾಠ” ಕಲಿಸಬೇಕೆಂಡರೆ ಬೈಯ್ಯಬಾರದು, ಕೂಗಾಡಬಾರದು. ನಾವು ತಾಳ್ಮೆ ಕಳೆದುಕೊಂಡಷ್ಟೂ, ಕೂಗಾಡಿದಷ್ಟೂ ಅವರು ಅದನ್ನ ಎಂಜಾಯ್ ಮಾಡುತ್ತಾರೆ. ಅವರು ಬೈಯುತ್ತಾರೆ ಕೂಗಾಡುತ್ತಾರೆ ಅಂತಾ ನಿರೀಕ್ಷಿಸುತ್ತಾರೆ. ಆಗ ಅನಿರೀಕ್ಷಿತವಾದದ್ದು ನಡೆಯಬೇಕು. ತಬ್ಬಿಬ್ಬಾಗೋಗೋದು ಅವರು. ಇರಿಟೇಟ್ ಆಗೋದು ಅವರು..! ಮೆದು ಮಾತಿನಲ್ಲಿ ನಯ ವಿನಯದಲ್ಲಿ ಏನೇನನ್ನ ಬರೆದಿಲ್ಲ, ಏನೇನನ್ನ ಬರೆಯಬೇಕು ಅಂತಾ ಹೇಳುತ್ತೇನೆ. ಅವರು ಜಬರದಸ್ತಾಗಿ ಕೇಳಲಿಕ್ಕೆ, ಜಗಳ ಕಾಯಲಿಕ್ಕೆ ಅವಕಾಶವೇ ಇಲ್ಲದಂತೆ. ಬರೆದು ತಂದಾದ ಮೇಲೆ, ಇನ್ನೇನಾದರೂ ಬಿಟ್ಟು ಬಂದಿರುತ್ತಾರೆ. ಮತ್ತೊಮ್ಮೆ ದಂಡಯಾತ್ರೆ..! ಮೆದುಮಾತಿನಲ್ಲೇ ಉಡಾಳರನ್ನೂ ಮೆದುವಾಗಿಸುವ ಕಾರ್ಯ..! ಎರಡು ಮೂರು ಬಾರಿ ಕಳಿಸಿದ ಮೇಲೆ ಸರ್ಟಿಫಿಕೇಟಿನ ಮೇಲಿನ ಸಹಿಗೆ ಜಾಸ್ತಿ ಬೆಲೆ ಬಂದಿರುತ್ತೆ. 🙂

ಹುಡುಗರಿಗೆ ನಮ್ಮ ಸರ್ಕಾರದ “ಸಕಾಲ” ಯೋಜನೆಯನ್ನ, ಅದರ ಅಗತ್ಯತೆಗಳನ್ನ ಹೀಗೂ ತಿಳಿಸಬಹುದು. 🙂

ಕನಸು ಕಂಗಳ ಹುಡುಗ

 ಕನಸು ಮಾರುವ ಕಾರ್ಖಾನೆ.

ವಿಧಾನ ಸೌಧದಂಥಾ ಭವ್ಯ ಅರಮನೆ.

ಹೊಸತನ, ಹೊಸ ಹುರುಪು, ನವಚೈತನ್ಯ

ನನ್ನಂಥ ಕನಸು ಕಂಗಳ ಯುವಕನಿಗೆ ಎಲ್ಲ ಅನನ್ಯ.

 

ಹೊಸ ದಿಗಂತದೆಡೆ ಕೈಚಾಚಿ,

ಹೊಸ ಅನುಭವಗಳ ಹೊರಚಾಚಿ

ನಿಂತಿದ್ದೇನೆ ನಾ ಇಲ್ಲಿ ಅನನುಭವಿ.

ಮಾಯಾ ಲೋಕದ ಅನನುಭವಗಳ ಅನುಭವಿ!

 

ಒಂದು ದಿಗಂತದಲ್ಲಿ ನಾನು,

ಮತ್ತೊಂದು ದಿಗಂತಕ್ಕೆ ನನ್ನ ಕನಸು.

ಮಧ್ಯೆ ಸಾಗಿದರೂ ಸಾಗಿದರೂ ಸಾಗುವ ದಾರಿ ತೋರುವ ಎಂಜಿನಿಯರಿಂಗು

ಇವೆಲ್ಲ ಸಂಬಂಧಗಳ ನಡುವೆ ಮೂಕ ಪ್ರೇಕ್ಷಕ ಮನಸು!

 

ಮೊಗೆ-ಒಗೆದು ತೆಗೆದರೂ ಹಳತೆಂಬುದಿಲ್ಲ.

ತೆರೆ-ತೆರೆದು ನೋಡಿದರೂ ವಿಸ್ಮಯವೇ ಎಲ್ಲ!

ಲೋಕಕ್ಕೊಂದು ಕಾಣ್ಕೆಗೆ ಕನಸಿನಲೂ ನನಸಿನಲೂ ಅದೇ ಗುಂಗು.

ಹೊಸತನದ ಸಾಕ್ಷಿಗೆ, ದಿಗ್ದರ್ಶನಕೆ ಎಂಜಿನಿಯರಿಂಗು.

 

ನಾನು ನನ್ನವರಿಲ್ಲವೆಂಬ, ಇದ್ದರೂ ಕಡಿಮೆ ಎಂಬ ಅನಾಥ ಪ್ರಜ್ಞೆ.

ಇಂದಲ್ಲ ನಾಳೆ ನಮ್ಮರಾಗುವರು ಬಿಡು, ಅವಜ್ಞೆ.

ಕನಸಿನ ಕನ್ನಿಕೆಯರಾರೂ ದೊರಕಲಿಲ್ಲ ಸ್ನೇಹಕ್ಕೆ

ಬಿಡಿ, ಬೇಸರವಿಲ್ಲ ಅದಕ್ಕೆ..!

 

ಕಾರಿಡಾರುಗಳಲ್ಲಿ ತಾಜಾ ತರುಣಿಯರ ಮೆರವಣಿಗೆ.

ಪ್ರೇರಣೆ, ಪ್ರೇರೇಪಣೆಯೇ ಈ ಬರವಣಿಗೆ!

ಏಕೆ ಹಿಡಿಸಲಿಲ್ಲವೋ ನಾನು ತಿಲೋತ್ತಮೆಯರಂಥ ತರುಣಿಯರಿಗೆ

ಬಹುಷಃ ಇರಬೇಕೇನೋ ನನ್ನ ಕೊರವಣಿಗೆ!

 

ಕಾಲ ಬದಲಾದಂತೆ..,

ಕನಸುಗಳು ಮಾಸುತ್ತವೆ,

ಮನಸುಗಳು ಮಾಗುತ್ತವೆ,

ಕಾಯ ಬಾಗುತ್ತದೆ,

ಹೊಸತನವೂ ಹಳತಾಗುತ್ತದೆ.

ಹಳತಾಗುವ ಮುನ್ನ ಹೊಸತನವನ್ನೊಮ್ಮೆ

ಎಡತಾಗುವ, ಸವಿಯುವ ಬಯಕೆ!

 

ಈಗ ಸಿಕ್ಕವರಾರೂ ಮುಂದೆ ಸಿಗುವುದಿಲ್ಲ.

ಮುಂದೆ ಸಿಗುವವರನ್ನು ಒಮ್ಮೆಯೂ ನೋಡಿಲ್ಲ.

ಸಿಕ್ಕಾಗ ಮಜಾ ಉಡಾಯಿಸು ಎನ್ನುತ್ತೆ ಉಡಾಫೆಯ ಬ್ರೈನು.

ಯಾರು ಸಿಕ್ಕರೇನು, ಸಿಗದಿದ್ದರೇನು ಸಾಗುತ್ತದೆ ಜೀವನದ ಟ್ರೈನು!

 

ಮೊದಲ ತೊದಲುಗಳೆಲ್ಲ ಈಗ ಧ್ವನಿಯಾಗಿವೆ.

ಅದಲು ಬದಲಾಗಿ ಪ್ರತಿಧ್ವನಿಯಾಗಿವೆ.

ಮೊದಲು ಮೊದಲು ಎಲ್ಲವೂ ಸರಿಯಾಗಿರುತ್ತದೆ.

ಖುಶಿ ಕೊಡುತ್ತದೆ, “ಮೊದಲ” ವೈಶಿಷ್ಟ್ಯವೇ ಅದು ತಾನೇ..?

 

ಹಿಂತಿರುಗಿ ನೋಡಿದಾಗ,

ಮಸುಕು ಮಸುಕಾದ ಕನಸುಗಳ ಸಂತೆ.

ಪಿಸುಮಾತಿನ ಗುಸು-ಗುಸುಗಳ ಅಂತೆ ಕಂತೆ.

ಏನೇ ಆಗಲಿ, ಎಲ್ಲ ಇರಬೇಕಲ್ಲ

ನಾವು ಇಷ್ಟಪಟ್ಟಂತೆ..?..!!