ಬಾಬರಿ ಮಸೀದಿ ಧ್ವಂಸ ಮತ್ತು ಬಾಲ್ಯದ ನೆನಪುಗಳು.

ನಾನು ಆಗ ಎರಡನೇ ಕ್ಲಾಸಿನಲ್ಲಿದ್ದೆ. ಸುಮಾರು ೭ ವರ್ಷ. ಒಂದು ತಿಂಗಳೋ ನಲವತ್ತು ದಿನವೋ ರಜಾ ಕೊಡಲಾಗಿತ್ತು ಶಾಲೆಗೆ. ಒಂಥರಾ ನಮ್ಮ ಮನೆ ಹೊಸ ದಾವಣಗೆರೆಯಲ್ಲಿ ಇರೋದು. ರೈಲ್ವೇ ಹಳಿಯ ಒಂದು ಪಾರ್ಶ್ವ ಹಳೇ ದಾವಣಗೆರೆ. ಇನ್ನೊಂದು ಪಾರ್ಶ್ವ ಹೊಸ ದಾವಣಗೆರೆ. ಹಳೇ ಹುಬ್ಬಳ್ಳಿ ಹೊಸ ಹುಬ್ಬಳ್ಳಿಗಳ ಹಾಗೆ. ಗದ್ದಲಗಳು, ಮೆರವಣಿಗೆಗಳು, ಜಾತ್ರೆಗಳು, ನಂಬಿಕೆಗಳು, ದೈವತ್ವಗಳು, ದ್ವೇಷಗಳು, ವ್ಯಾಪಾರ-ವಹಿವಾಟುಗಳು, ಶ್ರಮಜೀವಿ ಬದುಕುಗಳುಮ, ಕಣ್ಣು ಕೋರೈಸುವ ಸೇಠುಗಳ ಅಂಗಡಿಗಳ ದೀಪಗಳು ಮತ್ತು ಬಡವರ ಮನೆಯ ಸೀಮೆ ಎಣ್ಣೆ ದೀಪಗಳು ಎಲ್ಲವೂ ಇರುತ್ತವೆ, ಈ ಹಳೇ ಊರುಗಳಲ್ಲಿ.  ಹೊಸ ಊರಿನ ದುನಿಯಾವೇ ಬೇರೆ. ಎಲ್ಲ ಪ್ರೊಫೆಷನಲ್ ಮಂದಿಗಳ, ಮಧ್ಯಮ ಮೇಲ್ಮಧ್ಯಮ ವರ್ಗಗಳ ಕತೆ. ಊರು ಅಡ್ಡಾದಿಡ್ಡಿ ಬೆಳೆದಂತೆ ಈ ವ್ಯತ್ಯಾಸ ಅಳಿಸಿ ಹೋಗುತ್ತಿದೆಯಾದರೂ ಊರಿನ ಹಳೇ ಭಾಗಗಳು ಬದಲಾಗಿಲ್ಲ. ದಾವಣಗೆರೆಯಲ್ಲಿ ಹಲವು “ಪೇಟೆ”ಗಳಿವೆ. ಮಂಡಿಪೇಟೆ, ನರಸರಾಜ ಪೇಟೆ, ಬಸವರಾಜ ಪೇಟೆ, ಚೌಕಿ ಪೇಟೆ, ಇಸ್ಲಾಂ ಪೇಟೆ, ವಕ್ಕಲಿಗ ಪೇಟೆ, ದೊಡ್ಡಪೇಟೆ. ಇತ್ತೀಚೆಗೆ ಬಹಳಷ್ಟು ಕಡೆಗಳಲ್ಲಿ ಧರ್ಮಾಧಾರಿತ ಭೌಗೋಳಿಕ ಧೃವೀಕರಣಗಳಾಗುತ್ತಿವೆ. ಹಲವುಕಡೆಗಳಲ್ಲಿ ಹಿಂದೂಗಳಷ್ಟೇ ಇದ್ದರೆ ಇನ್ನು ಕೆಲವುಕಡೆ ಮುಸ್ಲೀಮರಷ್ಟೇ.
—————————————-
ನಾನು ನನ್ನ ಗೆಳೆಯರು, ನವೀನ ಪವನ್ ಎಲ್ಲರೂ ರೋಡಿನಲ್ಲಿ ಗೋಲಿ ಆಡುತ್ತಿದ್ದೆವು. ನಮ್ಮ ಏರಿಯಾಗಳಲ್ಲಿ ಮುಸ್ಲೀಮರಿದ್ಡರೂ ಎಲ್ಲರೂ ವಿದ್ಯಾವಂತರಿದ್ದರು. ಹಿಂದೂಗಳಲ್ಲೂ ವಿದ್ಯಾವಂತರಿದ್ದರು. ಸಾಕಷ್ಟು ಸ್ಥಿತಿವಂತರಿದ್ದರು. ನಮ್ಮ ಭಾಗಗಳಲ್ಲಿ ಯಾವುದೇ ಗದ್ದಲಗಳಾದ ಬಗ್ಗೆ ನನಗೆ ನೆನಪಿಲ್ಲ. ಪೋಲೀಸ್ ಜೀಪು, ವ್ಯಾನು ರೋಡಿನ ಕಡೆಯಲ್ಲಿ ನಿಂತು ನಾವು ಗೋಲಿ ಆಡುವುದನ್ನ ನೋಡುತ್ತಲೇ ನಾವು ನಮ್ಮ ನಮ್ಮ ಮನೆ ಕಡೆ ಓಡಿ ಬರುತ್ತಿದ್ದೆವು. ಮನೆಯಲ್ಲಿ ಅಮ್ಮ ಅಪ್ಪ ಪೇಪರಿನಲ್ಲಿ ಕಂಡಲ್ಲಿ ಗುಂಡು ಹೊಡಿಯೋಕೆ ಆದೇಶ ಇದೆ ಅಂತಾ ಹೆದರಿಸುತ್ತಿದ್ದರು. ಎಷ್ಟೋ ದಿನಗಳ ಕಾಲ ಕರ್ಫ್ಯೂ ಇತ್ತು ಎಂಬ ನೆನಪು. ಪೋಲೀಸರು ಜೀಪಿನಲ್ಲಿ ಕುಂತು ಮೈಕುಗಳಲ್ಲಿ ಅನೌನ್ಸ್ ಮಾಡುತ್ತಿದ್ದರು. ಏನನ್ನ ಹೇಳುತ್ತಿದ್ದರು ಅನ್ನುವ ನೆನಪಿಲ್ಲ. ಬೆಳಗ್ಗೆ ಹತ್ತು ಗಂಟೆ ಹನ್ನೊಂದು ಗಂಟೆಯವರೆಗೂ ಕರ್ಫ್ಯೂ ಸಡಿಲಿಕೆ. ಅಪ್ಪ ಬೆಳಗ್ಗೆ ಹಾಲು ತರಕಾರಿ ತರೋಕೆ ಹೋಗುತ್ತಿದ್ದರು. ಅಪ್ಪ ಅಮ್ಮ ಒಮ್ಮೆ ಕ್ಲಾಕ್ ಟವರಿನ ಬಳಿ ತರಕಾರಿ ಕೊಳ್ಳುತ್ತಿದ್ದಾಗ ಯಾರೋ ಒಂದಿಷ್ಟು ಮಂದಿ ಜೋರಾಗಿ ಓಡಿ ಹೋದರಂತೆ. ಹಾಗೆ ಓಡಿದ್ದೇ ತಡ, ಎಲ್ಲ ಅಂಗಡಿಗಳ ಷಟರುಗಳು ಪಟ ಪಟನೆ ಕೆಳಗೆ ಬಿದ್ದವು. ಅಮ್ಮನೂ ಒಂದು ಅಂಗಡಿಯಲ್ಲಿ ಬಂಧಿಯಾಗಿ ಆಮೇಲೆ ಸ್ವಲ್ಪ ಹೊತ್ತಾದ ಮೇಲೆ ವಾತಾವರಣ ತಣ್ಣಗಾದಮೇಲೆ ಹೊರಗೆ ಬಂದದ್ದನ್ನ ಹೇಳಿದ್ದು ನೆನಪಿದೆ. ಅಪ್ಪನ ಆಫೀಸು ಇದ್ದದ್ದು ಹಳೇ ದಾವಣಗೆರೆಯ ಕೆ.ಆರ್ ರಸ್ತೆಯಲ್ಲಿ. ಹಲವು ದಿನಗಳ ಕಾಲ ಆಫೀಸಿಗೆ ಹೋಗುವುದು ತ್ರಾಸದಾಯಕವಾಗಿತ್ತು. ಭಯಭೀತ ವಾತಾವರಣವಿತ್ತು. ಚೂರಿ ಇರಿತ, ಕೊಲೆ, ಧಾಳಿಗಳು, ಬೆಂಕಿ ಹಚ್ಚುವಿಕ ಎಲ್ಲವೂ ನಡೆದಿದ್ದವು. ನರಸರಾಜ ಪೇಟೆಯಲ್ಲಿಯ ಸಂಬಂಧಿಗಳ ಮನೆಗೆ ಹಾರೆ ಕೋಲು ಹಾಕಿ ಬಾಗಿಲು ಒಡೆಯುವ ಪ್ರಯತ್ನವಾಗಿತ್ತು.

ಇದಾಗಿ ಸ್ವಲ್ಪ ದಿನಗಳ ನಂತರದಲ್ಲಿ ನಾನು ಅಪ್ಪ ಅಮ್ಮನ ಜೊತೆ ಚಿಕ್ಕಮ್ಮಂದಿರ ಮನೆಗೆ ತೆರಳಿದಾಗ ಬೀರುಗಳ ಮೇಲೆ ಆಗಿನ ಕಾಲದಲ್ಲಿ ಪ್ರಸಿದ್ಧವಾಗಿದ್ದ “ಮಂದಿರವಲ್ಲೇ ಕಟ್ಟುವೆವು” ಅನ್ನುವ ಘೋಷಣೆಯ ರಾಮ ಮಂದಿರದ ಚಿತ್ರ ಮತ್ತು ಬಿಲ್ಲು ಹಿಡಿದು ರಾಮ ನಿಂತ ಸ್ಟಿಕ್ಕರುಗಳು ರಾರಾಜಿಸುತ್ತಿದ್ದವು. ನನ್ನಂಥ ಚಿಕ್ಕ ಹುಡುಗರು ಎಲ್ಲೋ ಮಸೀದಿ ಒಡೆದು ಹಾಕಿದರೆ ಇಲ್ಯಾಕೆ ಜನ ಹೊಡೆದಾಡಬೇಕಮ್ಮಾ? ಮಂದಿರವನ್ನೇ ಯಾಕೆ ಕಟ್ಟಬೇಕು? ಸ್ಕೂಲನ್ನ ಕಟ್ಟಿದರೆ ಎಲ್ಲರಿಗೂ ಉಪಯೋಗ ಅಲ್ವಾ? ಅಂತಾ ಮುಗ್ಧ ಕಂಗಳಿಂದ ಅಮ್ಮಂದಿರನ್ನ ಕೇಳುತ್ತಿದ್ದೆವು. ಅಮ್ಮಂದಿರು ಯಾವಾಗಲೂ ನ್ಯೂಟ್ರಲ್. ಯಾವುದೇ ಸಿದ್ಧಾಂತವಾದಿಗಳಲ್ಲ. ಆದರೆ, ಆ ಕೋಮು ಗಲಭೆ ಸೃಷ್ಟಿಸಿದ ಆತಂಕ, ಭಯಭೀತ ವಾತಾವರಣ ಮನಸ್ಸುಗಳನ್ನ ಒಡೆದುಹಾಕಿತ್ತು. ದಾವಣಗೆರೆಯ ಹತ್ತಿಯ ಮಿಲ್ಲಿನ ಉದ್ಯಮ ಮಕಾಡೆ ಮಲಗಿತು. ದಿನಗೂಲಿ ನೌಕರರು ಹೊಟ್ಟೆಗೆ ತಣ್ಣಿರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದಿತ್ತು.