ನಾವು ಖುಷಿಯನ್ನ ಅನುಭವಿಸುವುದಕ್ಕಿಂತಲೂ ಖುಷಿಯ “ಶಾಸ್ತ್ರ” ಮಾಡಿ ಮುಗಿಸುವುದರಲ್ಲಿ ಏಕೆ ಆತುರರಾಗಿದ್ದೇವೆ?

Mungaru Male

Mungaru Male

ಜುಬಿನ್ ಮೆಹ್ತಾ. ಕಾಶ್ಮೀರದ ಶಾಲಿಮಾರ್ ಉದ್ಯಾನವನ – ಜರ್ಮನಿಯ ರಾಯಭಾರಿ ಕಛೇರಿ ಆಯೋಜಿಸಿದ ಸಂಗೀತ ಕಾರ್ಯಕ್ರಮ ಅಂದಾಗ ನನ್ನ ಹಿರಿಯ ಜರ್ಮನ್ ಗೆಳೆಯರಾದ ವೂಲ್ಫ್ ಗ್ಯಾಂಗ್ ಬೀಕ್ ನೆನಪಿಗೆ ಬಂದರು. ವಯಸ್ಸು ನಮ್ಮಪ್ಪನಷ್ಟು. ಅರವತ್ತೈದು. ನನಗೆ ಬೆಳಗಾವಿಯಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪರಿಚಯವಾದವರು. ಮೊನ್ನೆ ಫೇಸ್ ಬುಕ್ಕಿನಲ್ಲಿ ವೀಡಿಯೋ ಕಾಲಿಂಗ್ ನಲ್ಲಿ ಸಿಕ್ಕಿದ್ದರು. ಅವರ ಪತ್ನಿ ಇಂಡೋನೇಷಿಯಾದಾಕೆ. ಪ್ರತಿ ಬಾರಿ ಕಾಲ್ ಮಾಡಿದಾಗಲೂ “ನಮಸ್ತೆ” ಅಂತಾ ಕೈಜೋಡಿಸಿ ವಿಷ್ ಮಾಡಿದಮೇಲೇ ಮುಂದಿನ ಮಾತು. ಈಮೇಲ್ ನಲ್ಲಾದರೂ ಅಷ್ಟೇ. ವಿಷಯಕ್ಕೆ ಬರುವ ಮುಂಚೆ, ನಮಸ್ತೆ. ಭಾರತದವರು ಹಾಯ್ ಬಾಯ್ ಗಾಯ್ ಗಳತ್ತ ಹೊರಳಿದ್ದಾರೆ. ನಾವು ನಮ್ಮತನಗಳನ್ನ ಬೇರೆಯವರ ಕಡೆಯಿಂದ ಕಲಿಯುವ ಸ್ಥಿತಿ ಬಂತೇ?

ಇನ್ನೊಂದು ವಿಷಯ. ಏನ್ ಮಾಡ್ತಾ ಇದೀರಿ ಅಂದಾಗ, ಹೋದ ವಾರ ಸೈಕ್ಲಿಂಗ್ ಹೋಗಿದ್ದೆ. ಜೊತೆ ಜೊತೆಗೆ ಗಾಳಿಪಟ ಹಾರಿಸೋದು. ನದಿ ತೀರದಲ್ಲಿ ಸೈಕಲ್ ಹೊಡೀಯೋದು ಎಷ್ಟ್ ಮಜಾ ಗೊತ್ತಾ? ದಿನಕ್ ಒಂದು ಅರವತ್ತು ಎಪ್ಪತ್ತು ಕಿಲೋಮೀಟರ್. ಒಂದು ವಾರದಲ್ಲಿ ತುಳಿದದ್ದು ಏಳುನೂರು ಕಿಲೋಮೀಟರ್..! ಈ ವಯಸ್ಸಲ್ಲಿ ಆರೋಗ್ಯಕ್ಕಾಗಿ ಕಾಪಾಡಿಕೊಳ್ಳಬೇಕು ಅಂದು ನಕ್ಕರು.

ಇವರ ರೇಂಜಿನಲ್ಲಿ ಸೈಕಲ್ ತುಳಿದರೆ “ಅಂಬಾರಿ” ಸಿನಿಮಾದಲ್ಲಿ ನಾಯಕ ಲೂಸ್ ಮಾದ ಯೋಗೇಶ್ ನಾಯಕಿ ಸುಪ್ರೀತಾಳನ್ನ ಸೈಕಲ್ ಮೇಲೆ ಕರ್ಕೊಂಡ್ ಹೋಗಿ ತಾಜ್ ಮಹಲ್ ತೋರಿಸಿದಂತೆ ತಮ್ಮ ತಮ್ಮ ಪ್ರೇಯಸಿಯರಿಗೆ ಡೆಲ್ಲಿ ಕಾಶ್ಮೀರ ತೋರಿಸಿಬಿಡಬಹುದು. ಮೊದಲ ಬಾರಿ ಕೆಲ ವರ್ಷಗಳ ಹಿಂದೆ, ಅಂಬಾರಿ ಸಿನಿಮಾ ನೋಡಿದ ಮೇಲೆ ತಕ್ಷಣಕ್ಕೆ ಒಪ್ಪಿಕೊಳ್ಳಲಾಗಲಿಲ್ಲ. ಹುಡುಗನೊಬ್ಬ ಹುಡುಗಿಯನ್ನ ಸೈಕಲ್ ಮೇಲೆ ಕರ್ಕೊಂಡ್ ಹೋಗಿ ತಾಜಮಹಲ್ ತೋರಿಸೋದು ನಾಟಕೀಯತೆ ಅನ್ನಿಸಿತು. ಆದರೆ, ವೂಲ್ಫ್ ಗ್ಯಾಂಗ್ ಬೀಕ್‌ರವರ ರೀತಿಯಲ್ಲಿ ನೋಡಿದರೆ, ಅಂಬಾರಿ ಸಿನಿಮಾ ಸರಿ ಅನ್ನಿಸುತ್ತೆ. ನಾವು ನಮ್ಮತನಗಳನ್ನ ಕಳೆದುಕೊಳ್ಳುತ್ತಿದ್ದೇವೆ ಅನ್ನಿಸುತ್ತದೆ. ನಿಜವಾದ ಖುಷಿಗಳನ್ನ ಕಳೆದುಕೊಳ್ಳುತ್ತಿದ್ದೇವೆ ಅನ್ನಿಸುತ್ತದೆ. ನಮ್ಮ ಜನರಿಗೆ ಮುಂಗಾರು ಮಳೆಯ ಸೇತುವೆಯ ಸ್ಥಳಕ್ಕೆ ಹೋಗಿ ಸೈಕಲ್ ಹೊಡಿಯುವ ರೀತಿಯಲ್ಲಿ ಫೋಟೋ ತೆಗೆಸಿಕೊಂಡು ಫೇಸ್ ಬುಕ್ಕಿನಲ್ಲಿ ಅಪ್‌ಲೋಡ್ ಮಾಡುವುದಷ್ಟೇ ಖುಷಿ. ಅದು ಖುಷಿಯಲ್ಲ. ಖುಷಿಯ ತೋರ್ಪಡಿಕೆ. ನಾಳೆ ಗಣಪ್ಪನ ಹಬ್ಬ. ಖುಷಿಗಿಂತ ಖುಷಿಯ ತೋರ್ಪಡಿಕೆಯೇ(ಖುಷಿಯಿರದಿದ್ದರೂ) ಜಾಸ್ತಿ. ನಾವು ಖುಷಿಯನ್ನ ಅನುಭವಿಸುವುದಕ್ಕಿಂತಲೂ ಖುಷಿಯ “ಶಾಸ್ತ್ರ” ಮಾಡಿ ಮುಗಿಸುವುದರಲ್ಲಿ ಏಕೆ ಆತುರರಾಗಿದ್ದೇವೆ?