ನಮ್ ರಾಜಕಾರಣಿಗಳಿಗೆ ಸಿಎಂ ಡಿಸಿಎಂ ಸೀಟುಗಳು ಒಂಥರಾ ಸುಂದರ ವೇಶ್ಯೆ ಇದ್ದಂಗೆ. ಎಲ್ಲರಿಗೂ Simply irrestible..?

ಸಂವಿಧಾನದತ್ತವಾದ ಪ್ರಜಾಪ್ರಭುತ್ವದ ಉನ್ನತ ಹುದ್ದೆಗಳಾದ ಸಿಎಂ ಡಿಸಿಎಂ ಪದಗಳನ್ನ ತುಚ್ಛವಾಗಿ ಕಾಣುವ ಇರಾದೆ ಈ ಲೇಖನಕ್ಕೆ ಇಲ್ಲ. ಆದರೆ, ಪ್ರಸ್ತುತ ರಾಜಕೀಯ (ಅ)ನೈತಿಕತೆಯ ಹಿನ್ನೆಲೆಯಲ್ಲಿ ಈ ದೃಷ್ಟಿಕೋನದ ವಿಮರ್ಶೆ ಅಗತ್ಯವೆನಿಸಿತು. ಶೆಟ್ಟರರು ಮುಖ್ಯಮಂತ್ರಿಗಳಾಗಿದ್ದಾರೆ. ಉತ್ತರ ಕರ್ನಾಟಕದ ಕಡೆಯ ಪ್ರಭಾವಿ ನಾಯಕ. ಅವರಿಗೆ ಒಳಿತಾಗಲಿ. ಜೊತೆಗೆ, ಅವರಿಂದ ರಾಜ್ಯಕ್ಕೆ ಒಳಿತಾಗಲಿ. ನಿರೀಕ್ಷೆಗಳಂತೂ ಇವೆ. ನಿರಾಸೆಗೊಳ್ಳದಿರಲಿ.

ಕುಮಾರಸ್ವಾಮಿಯವರ ವಚನ “ಭ್ರಷ್ಟತೆ” ಹಿನ್ನೆಲೆಯಲ್ಲಿ ಯಡಿಯೂರಪ್ಪನವರನ್ನ ಗೆಲ್ಲಿಸಿದೆವು. ಮುಖ್ಯಮಂತ್ರಿಯಾದರು. ಆದರೆ “ಭ್ರಷ್ಟತೆ”ಯಿಂದ ರಾಜೀನಾಮೆ ಕೊಡಬೇಕಾಯಿತು. ಯಡಿಯೂರಪ್ಪನವರ ಆಶೆಯಂತೆಯೇ ಸದಾನಂದ ಗೌಡರನ್ನ ಮುಖ್ಯಮಂತ್ರಿ ಮಾಡಲಾಯಿತು. ಕೆಲವೇ ತಿಂಗಳುಗಳು ಕಳೆಯುವುದರೊಳಗೆ ಗೌಡರು ಗುಳಿಗೆ ಒಗೆಯಬೇಕೇ? ಪಾಪ ಅಲ್ಲಿ ಯಡಿಯೂರಪ್ಪನವರಿಗೆ ಎದುರಾದದ್ದು ಇದೇ “ವಚನ ಭ್ರಷ್ಟತೆ”..! ತಾವು ಹೇಳಿದಂತೆ ಕೇಳ್ತೀನಿ ಅಂದದ್ದಕ್ಕೆ ಮುಖ್ಯಮಂತ್ರಿ ಮಾಡಿದರೆ ದಿನ ಕಳೆಯುವುದರಲ್ಲಿ ಉಲ್ಟಾ ಹೊಡೆಯಬೇಕೇ? ಈಗ ಗೌಡರನ್ನ ಇಳಿಸಿ ಶೆಟ್ಟರರನ್ನ ಮುಖ್ಯಮಂತ್ರಿ ಮಾಡಲಾಗಿದೆ. ಶೆಟ್ಟರು ಏನು ವಚನ ಕೊಟ್ಟಿದ್ದಾರೋ ಗೊತ್ತಿಲ್ಲ.

ಈಗ ಸಿಎಂ ಯಾರಾಗಬೇಕು, ಡಿಸಿಎಂ ಯಾರಾಗಬೇಕು ಅನ್ನೋದಕ್ಕೆ ಹಲವಾರು ಹೆಸರುಗಳು ತೇಲಿಬಂದವು. ಈಶ್ವರಪ್ಪ, ಕಾರಜೋಳ ಹೆಸರುಗಳು ಪ್ರಮುಖವಾದವು. ಜಿ.ಎಂ ಸಿದ್ದೇಶರೂ ತಾವೂ ಹಿರಿಯರು ಅಂತಾ ಇದೀವಿ ಬಿಜೆಪೀಲಿ ಅನ್ನೋದನ್ನ ಬಿಡಿಸಿ ಹೇಳಿದರು.

ಒಂದು ಕಥೆ ನೆನಪಿಗೆ ಬರ್ತಾ ಇದೆ. ಎಲ್ಲಿ ಓದಿದ್ದೆ ಅಂತಾ ನೆನಪಿಲ್ಲ. (ಓದುಗರು ಗೊತ್ತಿದ್ದರೆ ಕಾಮೆಂಟಿನಲ್ಲಿ ಹೆಸರಿಸಿ). ಆತ ಬಹಳ ದೊಡ್ಡ ರಾಜ. ಸುಂದರ ಪತ್ನಿಯಿದ್ದಳು. ಯುದ್ಧಕ್ಕೆ ಹೋಗಬೇಕಾಯಿತು. ಪತ್ನಿಯ ಬಗ್ಗೆ ಅತಿಯಾದ ಮೋಹವಿತ್ತು. ಯುದ್ಧ ಮುಗಿಸಿ ಬರುವವರೆಗೂ(ಮುಗಿಸಿ ಬರುತ್ತೇನೆಂಬ ಖಾತ್ರಿ ಇಲ್ಲದಿದ್ದರೂ) ಹೆಂಡತಿಯನ್ನ ಯಾರಾದರೂ ಭೋಗಿಸಿದರೆ ಅನ್ನೋ ಯೋಚನೆ ತಲೆಯಲ್ಲಿ ತಲೆಯಲ್ಲಿ ಸುಳಿಯಿತು. ಹಾಗಾಗಿ ಆಕೆಯ ದೇಹ ತನ್ನನ್ನ ಅಲ್ಲದೇ ಮತ್ಯಾರಿಗೂ ದೊರಕಬಾರದು. ಹಾಗೊಂದು ಉಪಾಯ ಮಾಡಬೇಕೆಂದುಕೊಂಡ. ಆಕೆಯ ಗುಪ್ತಾಂಗಗಳಿಗೆ ಬೀಗ ಹಾಕಿದನಂತೆ. ಬೀಗ ಹಾಕಿದ ಸರಿ. ಆದರೆ ಬೀಗದ ಕೈಯನ್ನ ಯುದ್ದಕ್ಕೆ ತೆಗೆದುಕೊಂಡು ಹೋದರೆ ಎಲ್ಲಾದರೂ ಕಳೆದು ಹೋದರೆ? ತನ್ನ ಹೆಂಡತಿ ತನಗೇ ಪರಕೀಯಳಾಗಿಬಿಟ್ಟಾಳು ಅನ್ನೋ ಯೋಚನೆಯೂ ಸುಳಿಯಿತು. ಹಾಗಾಗಿ ತನ್ನ ಪರಮಾಪ್ತ ಮಿತ್ರನಿಗೆ ಬೀಗವನ್ನೊಪ್ಪಿಸಿ, ಹಿನ್ನೆಲೆಯನ್ನ ಅರುಹಿ, ಜೋಪಾನವಾಗಿ ಕಾಪಾಡುವಂತೆ ಹೇಳಿದ. ತನ್ನ ಪರಮಾಪ್ತ ಮಿತ್ರನಿಗೆ ಒಪ್ಪಿಸಿದ್ದರಿಂದ ಒಂದಷ್ಟರ ಮಟ್ಟಿಗೆ ನಿರುಮ್ಮಳನಂತೆ ಕಂಡು ತನ್ನ ಯುದ್ಧ ತೈಯಾರಿಯಲ್ಲಿ ತೊಡಗಿದ.

ಹೀಗಿದ್ದಾಗ, ಆ ಆಪ್ತ ಗೆಳೆಯ ಬಂದ.

“ಬೇರೆ ಯಾವುದೋ ಬೀಗದ ಕೈ ಕೊಟ್ಟಿದ್ದೀಯ. ಈ ಬೀಗದ ಕೈ ನೀ ಹೇಳಿದ ಬೀಗದ್ದಲ್ಲ” ಅಂದ..!

ಬೀಗದ ಕೈಯನ್ನ ಬೀಗದಲ್ಲಿ ತೂರಿಸಿ ತೆಗೆಯಲು ಪ್ರಯತ್ನಿಸದಿದ್ದರೆ ಆತ ಹೇಗೆ ಈ ಮಾತನ್ನ ಹೇಳಲಿಕ್ಕೆ ಸಾಧ್ಯ..? ಇಂಥಾ ಸಂಗತಿಗಳಲ್ಲಿ, “ವಚನ”ದ ಅರ್ಥ, ಅರ್ಥ ವ್ಯಾಪ್ತಿ, ಸೀಮಿತತೆ, ನಿಷ್ಟೆ ಎಲ್ಲವೂ ಪ್ರಶ್ನಿಸಲ್ಪಡುತ್ತವೆ. ಅದೇ ರೀತಿ ಅಫಜಲ ಖಾನನು ಶಿವಾಜಿಯ ವಿರುದ್ಧದ ಯುದ್ಧದಲ್ಲಿ ಸೋಲುಣ್ಣುವ ಭವಿಷ್ಯವಾಣಿಯನ್ನ ಜ್ಯೋತಿಷಿಯಿಂದ ಕೇಳಿದಮೇಲೆ ತನ್ನ ನೂರೈವತ್ತೂ ಚಿಲ್ಲರೆ ಹೆಂಡತಿಯರನ್ನ ಬಾವಿಯಲ್ಲಿ ಹಾರಿಸಿ, ಸಮಾಧಿ ಕಟ್ಟಿ, ಶಿವಾಜಿ ವಿರುದ್ಧ ಯುದ್ಧ ಮಾಡಿ ತಾನೂ ಸೋತು-ಸತ್ತಾದಮೇಲೆ ತನ್ನನ್ನೂ ಅವರ ಪಕ್ಕದಲ್ಲೇ ಸಮಾಧಿ ಮಾಡಿಸಿಕೊಂಡ ಅಫಜಲಖಾನ ನಮ್ಮ ಪ್ರಸ್ತುತ ರಾಜಕಾರಣದ ಅನೈತಿಕತೆಗೆ ಪ್ರತಿಮೆಯಾಗುತ್ತಾನೆ.

ಯಡಿಯೂರಪ್ಪನವರು ಸಿಎಂ ಸೀಟಿನ ಕೀಲಿಯನ್ನ ಸದಾನಂದಗೌಡರಿಗೆ ಹಸ್ತಾಂತರಿಸುವಾಗ ಈ ಕಥೆಯನ್ನ ಓದಿದ್ದರೆ ಚೆಂದವಿರುತ್ತಿತ್ತು. ಈಗ ಆ ಕೀಲಿಯನ್ನ ಗೌಡರಿಂದ ಕಸಿದು ಶೆಟ್ಟರಿಗೆ ನೀಡುತ್ತಿದ್ದಾರೆ. ಈಗಲಾದರೂ ಈ ಕಥೆ ಅವರಿಗೆ ಮುಟ್ಟಲಿ.

ಅಧಿಕಾರ ಮತ್ತು ಹೆಣ್ಣಿನ ವಿಷಯಗಳಲ್ಲಿ ಎಂಥವರ ನಂಬಿಕೆ, ನಿಷ್ಠೆಗಳೇ ಆಗಲಿ ಪ್ರಶ್ನಿಸಲ್ಪಡುತ್ತವೆ. ಪುಕ್ಕಟೆ ಸಿಕ್ಕರೆ, ಅಥವಾ ಇಬ್ಬರ ಜಗಳದಲ್ಲಿ ಮೂರನೆಯವರಾಗಿ ಲಾಭ ದೊರೆತರೂ ಹಿಗ್ಗೋ ಹಿಗ್ಗು.
ಅದಕ್ಕೇ ಹೇಳಿದ್ದು, ನಮ್ ರಾಜಕಾರಣಿಗಳಿಗೆ ಸಿಎಂ ಡಿಸಿಎಂ ಸೀಟುಗಳು ಒಂಥರಾ ಸುಂದರ ವೇಶ್ಯೆ ಇದ್ದಂಗೆ. ಎಲ್ಲರಿಗೂ Simply irrestible..?