ಐಪಿಎಲ್ 5 – ಈ ದುರಂತಕ್ಕೆ ಏನ್ ಅಂತೀರಿ?

IPL session 5 logo ಆತ ಎಂಜಿನಿಯರಿಂಗ್ ಕಾಲೇಜು ಹುಡುಗ. ಕಾಲೇಜು ಫೀಸ್ ಕಟ್ಟು ಅಂತಾ 50,000 ಕೊಟ್ಟರು. ಆದರೆ, ಆತ ಐಪಿಎಲ್ ಬೆಟ್ಟಿಂಗ್ ಆಡಿ ಐವತ್ತನ್ನ ಲಕ್ಷ ಮಾಡಿಕೊಂಡರೆ ಹೇಗೆ ಅಂತಾ ಯೋಚಿಸಿ, ಬೆಟ್ಟಿಂಗೆ ಕಟ್ಟಿದ. ಪರಿಣಾಮ? ಅವರಪ್ಪ ಕಷ್ಟಪಟ್ಟು ವರ್ಷವೆಲ್ಲ ದುಡಿದ 50,000 ಯಾವನದೋ ಪಾಲಾಯಿತು. ಅವರ ಅಪ್ಪ ಅಮ್ಮ ಈಗ ಗೋಳಾಡ್ತಾ ಇದಾರೆ. ಇದು ನಾನು ಕಣ್ಣಾರೆ ಕಂಡ ಸತ್ಯ ಘಟನೆ.

ಒಂದೇ ಒಂದು ಬಾರಿ ಹುಡುಗರ ಪಿಜಿಗಳು, ಕಾಲೇಜು ಬಾಯ್ಸ್ ಹಾಸ್ಟೆಲ್ ಗಳು, ನಾಲ್ಕು ಜನ ಸೇರುವ ವೃತ್ತಗಳು ಎಲ್ಲವನ್ನ ಒಮ್ಮೆ ಅಡ್ಡಾಡಿ ಬನ್ನಿ. ನಿಮಿಷ ನಿಮಿಷಕ್ಕೂ ಬೆಟ್ಟಿಂಗ್. ಐನೂರಕ್ಕೆ D ಅನ್ನೋ ಕೋಡ್ ವರ್ಡ್. ಸಾವಿರಕ್ಕೆ S ಅನ್ನೋ ಕೋಡ್ ವರ್ಡ್. 1 D ಅಂದ್ರೆ 500. 2 D ಅಂದ್ರೆ 1000, 1 S ಅಂದ್ರೆ 1000. 2 S ಅಂದ್ರೆ 2000 ಹಿಂಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರಲ್ಲೂ ಫ್ಯಾನ್ಸಿ ಅನ್ನೋ ಆಟ ಬೇರೆ ಇದೆ. ಪ್ರತಿ ಬಾಲ್ ಮೇಲೆ ಬೆಟ್ಟಿಂಗ್. ಈ ಬಾಲ್ ಫೋರ್ ಹೋಗುತ್ತೆ. ಬೆಟ್ ಕಟ್ತೀಯಾ? ಹಳ್ಳಿಯಲ್ಲಿ ಕೂತಿರುವ ಬುಕ್ಕಿಯ ದನಿ. ಈತ ಇಲ್ಲಿಂದ 2 S ಅಂದ್ರೆ ಎರಡು ಸಾವಿರ ಬೆಟ್ಟಿಂಗ್. ಬಂತು ಅಂದ್ರೆ 4000. ಹೋಯ್ತು ಅಂದ್ರೆ 2000 ಖತಂ. ಸುಮ್ನೆ ಒಂದು ಆಟ ಆಡಿ ರೊಕ್ಕ ಮಾಡಿಕೊಂಡು ಹೋಗುವಂತಿಲ್ಲ. ಸೀಸನ್ ಮುಗಿಯುವವರೆಗೂ ಆಡಬೇಕು. ಹೊಸಬರಾದರೆ  50,000 ಠೇವಣಿ ಕೂಡಾ ಇಡಬೇಕು. ಅಮೇಲೆ ಆಟ.

ಇಷ್ಟೆಲ್ಲಾ ಮಾತುಕತೆಗಳು ನಾಲ್ಕೈದು ಸೆಕೆಂಡುಗಳಲ್ಲಿ ಆಗುವಂಥದ್ದು. ಬುಕ್ಕಿಗಳು ಜಾಸ್ತಿ ಹೊತ್ತು ಮಾತಾಡಲ್ಲ. ನಿರ್ಧರಿಸಲು ನಿಮಿಷಗಟ್ಲೇ ಟೈಮ್ ಕೂಡಾ ಕೊಡಲ್ಲ. ಬರೀ Guess work ಮೇಲೆ ಹೌದು ಇಲ್ಲಾ ಅನ್ಬೇಕು.

ಹದಿನೈದು ವರ್ಷಗಳ ಇಂಡಿಯಾ ಪಾಕಿಸ್ತಾನ ಮ್ಯಾಚು ನಡೆಯಬೇಕಾದ್ರೆ ಹೊರಗಡೆ ನಾವೂ ಒಬ್ನೂ ಅಡ್ಡಾಡ್ತಿರಲಿಲ್ಲ. ಅಲ್ಲಿದ್ದುದು ಒಂದು ರೀತಿಯ ದೇಶಾಭಿಮಾನ ಅನ್ನಿ, ರಾಷ್ಟ್ರೀಯತೆ ಅನ್ನಿ. ಏನಾದ್ರು ಅನ್ನಿ. ಆದ್ರೆ, ಐಪಿಎಲ್ ಬಂದಾದ ಮೇಲೆ ಇಲ್ಲಿರೋದು ಯಾವನು ಫೋರ್ ಹೊಡೆದರು ಯಾವನು ಸಿಕ್ಸ್ ಹೊಡೆದರು ಕುಣಿಯುವ ಚೀರ್ ಗರ್ಲ್ ಮನಸ್ಥಿತಿಯದ್ದು. ಯಾವನಿಗೆ ಏನಾದ್ರೆ ನಮಿಗೇನು? ನಮಿಗೆ ಖುಷಿ ಬೇಕು ಅಷ್ಟೇ. ಅದು ಯಾವ ಮೂಲದಿಂದ ಬಂದರೂ ಸರಿಯೇ. ಯಾರನ್ನ ತುಳಿದು ಬಂದರೂ ಸರಿಯೇ. ಈ ಮನಸ್ಥಿತಿಗೆ ಯಾವುದೇ ತಾತ್ವಿಕ ತಳಹದಿ ಇಲ್ಲ.

ಪ್ರತಿ ಟೀಮಿನೋರೋ ಪ್ರತಿ ಆಟಗಾರನನ್ನ ಕೋಟಿಗಟ್ಲೇ ಎಣಿಸಿ ಎಣಿಸಿ ಹರಾಜು ಹಾಕಿದರು. ಜನ ಆವಾಗ್ಲೇ ಜೂಜಿ(ಬೀದಿ?)ಗೆ ಬಿದ್ದದ್ದು. ಯಾರ್ ಯಾರೋ ರೊಕ್ಕ ಮಾಡ್ಕತಾರೆ. ನಾವ್ ಯಾಕ್ ಮಾಡ್ಕಬಾರ್ದು? ಅನ್ನೋ ಮನಸ್ಥಿತಿ ಶುರುವಾಗಿದ್ದೇ ಆವಾಗ. ಲಾಸ್ ವೆಗಾಸ್ ಮನಸ್ಥಿತಿ. ಜೂಜು ಮೋಜು ಇವೆರಡೇ ಜೀವನ.

ಇದೆಲ್ಲ ಸರಿ. ಬಾಯ್ಸ್ ಹಾಸ್ಟೆಲ್ ಗಳ ಮತ್ತು ಪಿಜಿ ಗಳಲ್ಲಿ ಹುಡುಗರಿಗೆ ಆಡಲಿಕ್ಕೆ ರೊಕ್ಕವಾದ್ರೂ ಎಲ್ಲಿಂದ ಬರಬೇಕು? ಮನೆ ಖಾಲಿ ಮಾಡಿ ಅಡ್ವಾನ್ಸು ತಗಂಡು ಯಾರದೋ ಮನೆಯಲ್ಲಿ ಸಾಮಾನು ಬಿಸಾಕಿ ಒಂದು ಕೊಂಪೆಗೆ ರೂಮನ್ನ ಶಿಫ್ಟು ಮಾಡಿ ಅ ರೊಕ್ಕದಲ್ಲಿ ಐಪಿಎಲ್ ಬೆಟ್ಟಿಂಗ್ ಆಡಿದ ವ್ಯಕ್ತಿಗಳನ್ನೂ ಕಣ್ಣಾರೆ ಕಂಡಿದ್ದೇನೆ. ಅಪ್ಪ ಕೊಡಿಸಿದ ಆಂಡ್ರಾಯ್ಡ್ ಮೊಬೈಲು, ವಾಚು, ಪಾಕೆಟ್ ಮನಿ, ಯಾವನ ಹತ್ರ ಇಸ್ಕೊಂಡ ಸಾಲ ಎಲ್ಲವೂ ಐಪಿಎಲ್ ಬೆಟ್ಟಿಂಗ್ ಪಾಲು.

ಮಲ್ಯ ಕುದುರೆ ಬಾಲಕ್ಕೆ ರೊಕ್ಕ ಕಟ್ತಾನೆ. ಅವನ ಮಗ ಕಂಡ ಕಂಡೋರ ಜೊತೆ ರಾತ್ರಿ ಮಲಗ್ತಾನೆ. ಸಿನಿ ತಾರೆಯರು ಇವರೆಲ್ಲರ ತಾಳಕ್ಕೆ ತಕ್ಕಂತೆ ಕುಣೀತಾರೆ. ಆದ್ರೆ, ಯಾವಾನಾದ್ರೂ ಬೀದಿಗ್ ಬಂದಿದ್ ಕೇಳಿದೀರಾ? ಕಿಂಗ್ ಫಿಷರ್ ಮುಳುಗುತ್ತೆ. 7000 ಕೋಟಿ  ಸಾಲ ಅಂತಾರೆ. ಮಲ್ಯ ಎಂದಾದ್ರೂ ಮನೆ ಮಾರೋ ಸ್ಥಿತಿಗೆ, ಏನಾದ್ರೂ ಅಡ ಇಡೋ ಸ್ಥಿತಿಗೆ ಬಂದಿದಾನಾ? ಬರಲ್ಲ ಸ್ವಾಮೀ. ಇವೇ ಹುಡುಗರು ರೊಕ್ಕ ಕಟ್ಟಿ ಮೋಸ ಹೋಗೋದು. ಓದೋದು ಬರಿಯೋದು ಬಿಟ್ಟು ಐಪಿಎಲ್ ಬೆಟ್ಟಿಂಗ್ ಅಂತಾ ಜೀವನವನ್ನ ಹಾಳು ಮಾಡ್ಕಂತಿರೋದು. ಎಲ್ಲಿ ರೊಕ್ಕ ಝಣ ಝಣ ಅನ್ನುತ್ತದೋ ಅದರ ಜೊತೆ ಕ್ರೈಮ್ ಕೂಡಾ ಜೊತೆಗೇ ಬರುತ್ತೆ. ಐಪಿಎಲ್ ಬೆಟ್ಟಿಂಗ್ ಕಟ್ಟಿ ರೊಕ್ಕ ಕೊಡದೇ ಹೋದರೆ ಬುಕ್ಕಿಗಳು ಏನ್ ಸುಮ್ನೇ ಬಿಡ್ತಾರಾ? ರೌಡಿಗಳು, ರಿಯಲ್ ಎಸ್ಟೇಟ್ ಕುಳಗಳು ಎಲ್ಲರೂ ಇದರಲ್ಲಿ ಶಾಮೀಲಾಗಿರುವ ಶಂಕೆ ಇದ್ದೇ ಇರುತ್ತದೆ. ರೊಕ್ಕ ಕೊಡದೇ ಇರೋ ಹುಡುಗರು ಒದೆ ತಿಂತಾರೆ.

ಅಪಾಯಕಾರಿ, ಆಘಾತಕಾರಿ ಮತ್ತು ಚಿಂತನೆಗೀಡುಮಾಡುವ ಸಂಗತಿ ಇದು. ಎಲ್ಲಿಗೆ ಬಂತು ಭಾರತ ಭಾರತದ ಅವನತಿಯ ಆರಂಭ ಶುರುವಾಗಿದೆಯಾ? ಐಪಿಎಲ್ ನಲ್ಲಿನ ಜನ ಕೆಟ್ಟೋರ್ ಇರ್ಬೋದು. ಕ್ರಿಕೆಟ್ ನಿಷೇಧಿಸಬೇಕೇಕೆ ಅನ್ನೋರು ಸ್ವಲ್ಪ ಕೇಳಿಸ್ಕತೀರಾ?