ಇಪ್ಪತ್ತೊಂಬತ್ತು ಮತ್ತು ಮೂವತ್ತು ಡಿಸೆಂಬರ್. 2010. ತಾಲೂಕು ಪಂಚಾಯಿತಿ ಮತ್ತು ಜಿಲ್ಲಾಪಂಚಾಯಿತಿ ಚುನಾವಣೆ ಕಾಲ. ನಾನು ಮಾಸ್ತರಿಕೆಗೆ ತೊಡಗಿ ಅರ್ಧವರ್ಷವೂ ಕಳೆದಿರಲಿಲ್ಲ. ನಮ್ಮದು ಖಾಸಗಿ ಕಾಲೇಜಾದರೂ, ಚುನಾವಣೆಗೆ ಅಧಿಕಾರಿಗಳು ಕಡಿಮೆ ಬಿದ್ದಿದ್ದರಿಂದ ಚುನಾವಣೆಗೆ ನಿಯೋಜಿಸಲಾಗಿತ್ತು. ಒಂದು ದಿನ ಟ್ರೈನಿಂಗ್. ಟ್ರೈನಿಂಗಿನಲ್ಲಿ ಧಾರವಾಡ ಜಿಲ್ಲಾಧಿಕಾರಿಗಳಾದ ದರ್ಪಣ ಜೈನ್ ಮತ್ತು ತಹಸೀಲ್ದಾರರು ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಈ ಹಿಂದೆ ಚುನಾವಣೆಯಲ್ಲಿ ಮೊದಲ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿಯಾಗಿ, ಪ್ರಿಸೈಡಿಂಗ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದವರು ಸಂಕೀರ್ಣ ಸನ್ನಿವೇಶಗಳಲ್ಲಿ, ಮತಕೇಂದ್ರ ವಶ, ಬ್ಯಾಲೆಟ್ ಯೂನಿಟ್, ವೋಟಿಂಗ್ ಯೂನಿಟ್ ಗಳನ್ನ ಒಡೆದು ಹಾಕಿದಾಗ ಏನು ಮಾಡಬೇಕು ಅಂತಾ ಪ್ರಶ್ನೆ ಮಾಡಿದರು. ಆಗ, ನಮಗೆ ತಿಳಿಸಿ. ನಾವು ಬರ್ತೇವೆ ಅನ್ನೋ ಉತ್ತರ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರಿಂದ. ಆದರೆ, ಪ್ರಶ್ನೆ ಕೇಳಿದ ಮಾಸ್ತರರು ಇನ್ನೊಂದು ಪ್ರಶ್ನೆ ಕೇಳಿದರು. ನಿಮಗೆ ತಿಳಿಸಿದೆವು. ಆದರೂ ನೀವು ಬರಲಿಲ್ಲ ಅಂದು ಪೇಚಿಗೆ ಸಿಲುಕಿಸಿದರು.
ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್‍ಗಳನ್ನ ಸೀಲ್ ಮಾಡಲಿಕ್ಕೆ ಪೇಪರ್‌ನ ರಿಬ್ಬನ್‌ಗಳನ್ನ ಒದಗಿಸಲಾಗುತ್ತದೆ. ಚುನಾವಣೆಗೆ ಕೋಟಿಗಟ್ಟಲೇ ರೊಕ್ಕ ಸುರಿಯುವ ಚುನಾವಣಾ ಆಯೋಗ ಒಂದಿಷ್ಟು ಗುಲಾಬಿ, ಹಸಿರು ಬಣ್ಣದ ಪೇಪರು ರಿಬ್ಬನ್ನುಗಳನ್ನ ಟ್ರೈನಿಂಗ್‌ನಲ್ಲಿ ಪ್ರಯೋಗಕ್ಕೆ ನೀಡಲಿಕ್ಕೆ ಏಕೆ ಅಷ್ಟೊಂದು ಹಿಂದು ಮುಂದು ನೋಡುತ್ತದೆ ಅನ್ನುವುದು ನನಗೆ ಇನ್ನೂ ಅರ್ಥವಾಗದ ವಿಷಯ. ಆ ರಿಬ್ಬನ್‌ಗಳನ್ನ ಹೇಗೆ ಬಳಸುವುದು ಅಂತಾ ಯಾವುದೇ ಅಧಿಕಾರಿಗೆ ಕೇಳಿ. ದ್ವಂದ್ವವೇ. ಆದರೂ ತಹಸೀಲ್ದಾರರಾಗಿದ್ದ (ಸಧ್ಯಕ್ಕೀಗ ಧಾರವಾಡ ಜಿಲ್ಲಾ ಅಪರ ಜಿಲ್ಲಾಧಿಕಾರಿ) ಮಹಾಂತೇಶ ಬೀಳಗಿಯವರು ನಿರರ್ಗಳವಾಗಿ, ಮನದಟ್ಟಾಗುವಂತೆ ಚುನಾವಣಾ ಪ್ರಕ್ರಿಯೆಯನ್ನ ವಿವರಿಸಿದ್ದರು.
ಅಮ್ಮ ಸರ್ಕಾರಿ ಶಾಲಾ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ೩೬ವರ್ಷಗಳ ಕಾಲ ಪ್ರತಿ ಸಲವೂ ಚುನಾವಣೆಗೆ ಹೋದಾಕೆ. ಪ್ರತಿ ಚುನಾವಣೆಯ ಒಳ ಹೊರಗುಗಳನ್ನ ಬಲ್ಲವಳು. ನನಗೆ ಬಂದ ಚುನಾವಣಾ ಕರ್ತವ್ಯವನ್ನ ಬೇರೆ ಯಾರಿಗಾದರೂ ವಹಿಸುವಂತೆ ತುಂಬಾ ಒತ್ತಾಯಿಸಿದಳು. ಗದ್ದಲಗಳು, ಮತಗಟ್ಟೆ ವಶ ಪ್ರಕರಣಗಳು, ಬೆದರಿಕೆಗಳು, ಅಕ್ರಮಗಳು ಇವೆಲ್ಲವನ್ನ ನೋಡಿದಾಕೆ. ಆದರೆ, ನನಗೆ ಒಂದು ಹುಚ್ಚುತನ. ಜಗತ್ತನ್ನ ನೋಡುವ ಹಂಬಲ. ಗ್ರಾಮೀಣ ಭಾರತದ ಚುನಾವಣಾ ದರ್ಶನವನ್ನ ಒಮ್ಮೆ ಮಾಡಲೇಬೇಕೆಂಬ ಬಯಕೆ. ನನಗೆ ಒಂದು ನಂಬಿಕೆಯಿತ್ತು. ನನ್ನ ನಾಲಗೆ ನನ್ನ ಮಾತು ಕೇಳುತ್ತದೆ. ಯಾರ ಬಳಿಯೂ ಎದ್ವಾ ತದ್ವಾ ಮಾತಾಡುವುದಿಲ್ಲ. ಇನ್ನು ಒದೆ ಹೇಗೆ ಬಿದ್ದಾವು ಅನ್ನೋ ಹುಂಬ ಯೋಚನೆ. ಆದರೂ ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆ ಸಿಡಿದೆದ್ದು ಜನ ಏನು ಮಾಡಲೂ ಹಿಂಜರಿಯರು. ಜಾಸ್ತಿ ಅಂದ್ರೆ ಏನಾಗಬಹುದು? ಒದ್ದರೆ, ಒದಿಸಿಕೊಂಡೂ ಬಂದರಾಯಿತು ಅಂದುಕೊಂಡೆ. ಮತಗಟ್ಟೆ ವಶ ಮಾಡಿಕೊಂಡು ಮತಯಂತ್ರಗಳನ್ನ, ನಿಯಂತ್ರಕಗಳನ್ನ ಒಡೆದು ಹಾಕುವ ಸನ್ನಿವೇಶ ಸೃಷ್ಟಿಯಾಗಬಹುದಿತ್ತು. ಅದಕ್ಕೂ ಉತ್ತರ ಸಿದ್ಧಪಡಿಸಿಕೊಂಡೆ. ನೀವು ಹಿಂಗೆಲ್ಲಾ ಮಾಡಿದರೆ ಮತ್ತೊಂದು ಸಲ ಚುನಾವಣೆಯಾಗುತ್ತದೆ ಅಷ್ಟೇ. ಸುಮ್ನೆ ಯಾಕೆ ಒಡೆದು ಹಾಕ್ತೀರಾ ಅಂತಾ ಕೇಳೋಣ ಅಂದುಕೊಂಡೆ.
ನನ್ನ ಚಿಕ್ಕಮ್ಮನ ಮಗ ಸರ್ಕಾರಿ ಹುದ್ದೆಯಲ್ಲಿ ಇರುವುದರಿಂದ, ಚುನಾವಣೆಗೆ ಅಧಿಕಾರಿಯಾಗಿ ಹೋಗಿರುವುದರಿಂದ, ಆತನ ಸಲಹೆಯನ್ನೂ ಕೇಳಿದೆ. ಆತ ಕೊಟ್ಟ ಸಲಹ ನನಗೆ ಜೀವದಾಯಿಯಾಗಿತ್ತು. ಸೊಳ್ಳೆ ಬತ್ತಿ ತೊಗೊಂಡು ಹೋಗು. ಹಳ್ಳಿಗಳಲ್ಲಿ, ಶಾಲೆಗಳಲ್ಲಿ ಸಂಜೆ ಹೊತ್ತಿಗೆ ಅಸಾಧ್ಯ ಸೊಳ್ಳೆಗಳಿರುತ್ತವೆ ಅಂದಿದ್ದ. ಹಂಗೇ ಆಯಿತು. ಒಂದು ಪ್ಯಾಕ್ ಸೊಳ್ಳೆ ಬತ್ತಿ ಒಯ್ಯದಿದ್ದರೆ ಚುನಾವಣೆ ನಡೆಸುವ ಹಿಂದಿನ ದಿನ ರಾತ್ರಿ ಮತ ಕೇಂದ್ರದಲ್ಲಿ ಮಲಗುವುದೇ ತ್ರಾಸದಾಯಕವಾಗುತ್ತಿತ್ತು. ಒಂದು ಎಮರ್ಜೆನ್ಸಿ ಲೈಟು, ಸರ್ಕಾರದ ಮುಖವಾಣಿ – ರೇಡಿಯೋವನ್ನೂ ಜೋಡಿಸಿ ಇಟ್ಟುಕೊಂಡೆ. ಚುನಾವಣೆ ಕುರಿತಾದ ಯಾವುದಾದರೂ ಉಪಯುಕ್ತ ಮಾಹಿತಿಗಳು ಸಿಗಬಹುದು ಅಂತಾ.
ಚುನಾವಣೆಯ ಹಿಂದಿನ ದಿನ ಬೆಳಗ್ಗೆ ಆರೂವರೆಗೆ ಲ್ಯಾಂಮಿಂಗ್ಟನ್ ರೋಡಿನ ಸ್ಕೂಲಿಗೆ ಬರಲಿಕ್ಕೆ ಹೇಳಿದರು. ನಾನು ಹೋದದ್ದು ಏಳು ಗಂಟೆಗೆ ಅನ್ನಿಸುತ್ತೆ. ಹೋಗಿ ನೋಡಿದರೆ ಇನ್ನೂ ಸಿದ್ಧತೆಗಳು ನಡೆಯುತ್ತಿದ್ದವು. ಒಂಬತ್ತರ ಸುಮಾರಿಗೆ ಬಸ್ಸಿನಲ್ಲಿ ಕಲಘಟಗಿಗೆ ಕಳುಹಿಸಲಾಯಿತು. ಅಲ್ಲಿ ನನ್ನನ್ನ ಲಿಸ್ಟ್‌ನಲ್ಲಿ ನೋಡಿಕೊಂಡೆ. ಅಲ್ಲಿ ನನಗೆ ಡ್ಯೂಟಿ ಹಾಕಿರಲಿಲ್ಲ. ಮೀಸಲು ವಿಭಾಗದಲ್ಲಿ ಇದ್ದೆ. ಚುನಾವಣೆಗೆ ಬೇಕಾದ ಅಧಿಕಾರಿಗಳಿಗಿಂತ ಮೂವತ್ತು ನಲವತ್ತು ಪ್ರತಿಶತ ಹೆಚ್ಚಿಗೆ ಜನರನ್ನ ಆಯೋಜಿಸಲಾಗಿರುತ್ತದೆ. ಯಾರಿಗಾದರೂ ಮೈಗೆ ಹುಷಾರಿಲ್ಲದಂತಾದರೆ, ಮತದಾನ ಪ್ರಕ್ರಿಯೆ ವಿಳಂಬವಾದರೆ ಹೆಚ್ಚಿನ ಅಧಿಕಾರಿಗಳನ್ನ ಮೀಸಲು ವಿಭಾಗದಿಂದ ಕಳುಹಿಸಲಾಗುತ್ತದೆ. ಮೈಕಿನಲ್ಲಿ ನಿಮ್ಮ ಹೆಸರನ್ನ ಕರೆಯುತ್ತೇವೆ. ಅಲ್ಲಿಯವರೆಗೂ ಆ ಕೊಠಡಿಯಲ್ಲಿ ಕುಳಿತಿರಿ ಅಂದರು. ಮೂರು ತಾಸು ಕುಳಿತೆ. ಕೆಟ್ಟ ಬೋರು. ಮೂರು ತಾಸು ಕಳೆಯುವುದೇ ಇಷ್ಟು ಬೋರು ಎಂದಾದರೆ ಇನ್ನೂ ಒಂದು ದಿನ ಹಿಂಗೇ ಕಳೆಯುವುದು ಹೆಂಗೆ ಅಂತಾ ಯೋಚನೆ ಮಾಡಿದೆ. ಆಗಾಗ ಆಯೋಜಕರ ಬಳಿ ಸುಳಿದಾಡಿ ಯಾವುದಾದರೂ ಮತಕೇಂದ್ರಕ್ಕೆ ಪ್ರಿಸೈಡಿಂಗ್ ಅಧಿಕಾರಿ ಬಂದಿಲ್ಲವಾದರೆ ನನ್ನನ್ನ ಹಾಕಿ ಅಂತಾ ವಿನಂತಿಸಿಕೊಂಡೆ. ಕೊನೆಗೆ ಹನ್ನೆರಡರ ಹೊತ್ತಿಗೆ ಆಯೋಜನೆ ಆಯಿತು. ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮ. ನನ್ನ ಮತ ಗಟ್ಟೆಯಲ್ಲಿದ್ದ ಇನ್ನುಳಿದ ಅಧಿಕಾರಿಗಳನ್ನ ಸೇರಿಕೊಂಡೆ. ನನಗೆ ಹೊಸ ಅನುಭವ. ಚುನಾವಣೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನ ಕೊಡಲಾಗುತ್ತಿತ್ತು. ಅವುಗಳನ್ನ ಎಣಿಸಿ ಚೀಲದಲ್ಲಿ ಹಾಕಿಕೊಳ್ಳಬೇಕು. ಮತಗಟ್ಟೆಯ ಉಳಿದ ಅಧಿಕಾರಿಗಳಿಗೆ ಚುನಾವಣೆಯ ಭತ್ಯೆಯನ್ನೂ ನನ್ನ ಕೈಯಲ್ಲೇ ನೀಡಲಾಗಿತ್ತು. ಅಮ್ಮ ಒಂದು ಮಾತು ಹೇಳಿದ್ದಳು. ಚುನಾವಣೆ ಮುಗಿದ ಮೇಲೆ ಮತ ಪೆಟ್ಟಿಗೆಯನ್ನ ಸಂಬಂಧಪಟ್ಟವರಿಗೆ ಸಲ್ಲಿಸಿ ಚೀಟಿ ತೆಗೆದುಕೊಳ್ಳುವವರೆಗೂ ಯಾವ ಕಾರಣಕ್ಕೂ ಯಾವ ಮತಗಟ್ಟೆ ಅಧಿಕಾರಿಗೂ ಹಣ ನೀಡಬೇಡ ಅಂತಾ. ಇಲ್ಲದೇ ಹೋದರೆ, ಎಲ್ಲರೂ ದುಡ್ಡು ಇಸ್ಕೊಂಡು ಅವರವರ ದಾರಿ ಹಿಡಿಯುತ್ತಾರೆ. ಎಲ್ಲ ಸಾಮಗ್ರಿಗಳನ್ನ ನೀನೊಬ್ಬನೇ ಹೊತ್ತು ಅಡ್ಡಾಡಬೇಕಾಗುತ್ತದೆ ನೋಡು ಅಂದಿದ್ದಳು. ಅಮ್ಮ ಹೇಳಿದ್ದು ಹೇಗೆ ಸತ್ಯವಾಯಿತು ಮುಂದೆ ಹೇಳುತ್ತೇನೆ.
ಬಸ್ಸು ಹೊರಟದ್ದು ಒಂದರ ಸುಮಾರಿಗೆ..! ಆ ದಾರಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬಳಿ ಸಂಬಂಧಪಟ್ಟ ಅಧಿಕಾರಿಗಳನ್ನ ಇಳಿಸುತ್ತಾ ಬಸ್ಸು ಸಾಗಿತು. ನನಗೆ ಆಯೋಜಿಸಲಾದ ಜಿನ್ನೂರು ತಲುಪಿದ್ದು ಮದ್ಯಾಹ್ನ ಗಂಟೆ ಎರಡರ ಸುಮಾರಿಗೆ. ಇಬ್ಬರು ಶಿಕ್ಷಕಿರು, ಒಬ್ಬರು ಶಿಕ್ಷಕರು, ಒಬ್ಬರು ಪೊಲೀಸ್ ಪೇದೆ ನಮ್ಮ ತಂಡದಲ್ಲಿದ್ದರು. ಒಬ್ಬರು ಅದೇ ಜಿನ್ನೂರಿನಲ್ಲಿ ಶಿಕ್ಷಕಿಯಾಗಿದ್ದವರು. ಈ ಕಾರಣದಿಂದಾಗಿ ಅಲ್ಲಿ ಜವಾನನನ್ನ ನೇಮಿಸಿಕೊಳ್ಳುವುದು, ರಾತ್ರಿಯ ಊಟದ ಏರ್ಪಾಡು ಮಾಡಿಕೊಳ್ಳುವುದು ಎಲ್ಲವೂ ಸಲೀಸಾಯಿತು. ಮದ್ಯಾಹ್ನ ಇಬ್ಬರು ಆ ಹಿರಿಯ ಶಿಕ್ಷಕಿಯರು ತಂದ ರೊಟ್ಟಿ, ಬಾಜಿ, ಮೊಸರನ್ನವನ್ನೇ ಎಲ್ಲರೂ ಹಂಚಿಕೊಂಡು ತಿಂದೆವು. ಅವರು ಸ್ವಲ್ಪ ಹೆಚ್ಚಾಗಿಯೇ ತಂದಿದ್ದರು.
ಸಂಜೆ ಸೊಳ್ಳೆ ಕಡಿತ ಶುರುವಾಯಿತು. ಅಂದೇನಾದರೂ ಸೊಳ್ಳೆ ಕಾಯಿಲ್ ಇಲ್ಲದೇ ಹೋಗಿದ್ದರೆ ನಿದ್ದೆಗೆಟ್ಟು ಮುಂದಿನ ದಿನವೆಲ್ಲ ಹಾಳಾಗುತ್ತಿತ್ತು. ಚುನಾವಣೆಯ ನಂತರ ನಾನಾ ನಮೂನಿ ಪ್ಯಾಕೇಟುಗಳಲ್ಲಿ ಹಲವಾರು ಪತ್ರಗಳನ್ನ ಹಾಕಿ ಅಂಟು ಹಚ್ಚಿ ಪ್ಯಾಕ್ ಮಾಡುವುದರ ಬಗ್ಗೆ ಎಲ್ಲವನ್ನ ಪರಿಶೀಲಿಸುತ್ತ ಕುಳಿತೆ. ಮತದಾರರ ಪಟ್ಟಿಯ ಇನ್ನೂರು ಮುನ್ನೂರು ಪೇಜಿನ ಪುಸ್ತಕಕ್ಕೆ ಪ್ರತಿ ಪೇಜಿಗೂ ಸಹಿ ಹಾಕಬೇಕಿತ್ತು. ಅದನ್ನ ಹಿಂದಿನ ದಿನವೇ ಮಾಡಿ ಇಟ್ಟುಕೊಂಡಿರಬೇಕು ಅಂತಾ ಅಮ್ಮ ಹೇಳಿದ್ದಳು. ಆದರೆ, ಸಹಿ ದುರುಪಯೋಗವಾದರೆ ಅನ್ನೋ ಭೀತಿಯಿಂದ ನಾನು ಮುಂಚಿತವಾಗಿ ಸಹಿ ಹಾಕಿ ಇಡಲಿಲ್ಲ. ರಾತ್ರಿ ಊಟ ಮುಗಿಸಿ ನಿದ್ದೆ. ಬೆಳಗ್ಗೆ ಐದಕ್ಕೆ ಎದ್ದದ್ದು. ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಮತ್ತು ನೀರಿನ ವ್ಯವಸ್ಥೆಯಿದ್ದದ್ದು ಮೆಚ್ಚಬೇಕು. ಶೌಚಾಲಯವಿಲ್ಲದಿದ್ದರೆ ಎಲೆಕ್ಷನ್ ನಡೆಸಲು ಬಂದ ಹೆಣ್ಣುಮಕ್ಕಳ ಕತೆ ಏನಾಗಬೇಕು? ಶೌಚಾಲಯ ಎಂದಾಗ ಇನ್ನೊಂದು ವಿಷಯ ನೆನಪಿಗೆ ಬಂತು. ಲೇಡೀಸ್ ಕಾಲೇಜಿನಲ್ಲಿ ಜೆಂಟ್ಸ್ ರೆಸ್ಟ್ ರೂಂ ಬೇಕಾ? ಖಂಡಿತ ಹೌದು..! ಮಾಸ್ತರು ಮಂದಿಗಳು, ಹೊರಗಿನಿಂದ ಯಾವುದಾದರೂ ಪರೀಕ್ಷೆ ಬರೆಯಲು ಬರುವ ಹುಡುಗರ ಗತಿ ಏನಾಗಬೇಕು?
ಬೆಳಗ್ಗೆ ನಾಷ್ಟಾ ಮುಗಿಸಿ, ಗಂಟೆ ಏಳಕ್ಕೆ ಅಣಕು ಮತದಾನ ಮಾಡಿ ರೆಡಿ ಮಾಡಿಕೊಂಡೆವು. ಪೌನೆ ಎಂಟರವರೆಗೂ ಯಾವ ಮತದಾರರ ಸುಳಿವೂ ಇಲ್ಲ. ಎಂಟರ ಸುಮಾರಿಗೆ ಒಬ್ಬ ಅಜ್ಜ ಬಂದ. ಒಂದು ಪಕ್ಷದ ಏಜೆಂಟು. ಎಲ್ಲ ಪಕ್ಷದ ಏಜೆಂಟರನ್ನ ನಾನು ಹೆಸರು ನಮೂದಿಸಿಕೊಂಡು ಅವರ ಸಹಿ ಪಡೆಯಬೇಕಿತ್ತು. ಆತನ ಹೆಸರು ಕೇಳಿದೆ. ಹೆಸರು ಹೇಳಿದ. ಹೆಸರಿನಲ್ಲಿ ಅಡ್ಡ ಹೆಸರನ್ನ ಹೇಳಿದ್ದು ಸರಿಯಾಗಿ ಕೇಳಿಸಲಿಲ್ಲ. ನಾನು ಛೇರಿನ ಮೇಲೆ ಕುಳಿತು, ಹಾಳೆಯನ್ನ ಟೇಬಲ್‌ಮೇಲಿಟ್ಟು ಬರೆಯುತ್ತಿದ್ದೆ. ಆ ಅಜ್ಜ ನನಗೆ ಕೇಳಲಿಲ್ಲ ಅಂತಾ ಒಂದು ಸ್ವಲ್ಪ ಬಗ್ಗಿ ಬಾಯ್ತೆರೆದು ಕುಶ್ಣಮ್ಮನವರ್ ಅಂದ. ಬಾಯ್ತೆರೆದದ್ದೇ ತಡ, ಹಾಕಿದ್ದ ಎಲೆ ಅಡಿಕೆ ರಸಧಾರೆಯಾಗಿ ಗದ್ದದ ಮೇಲಿನಿಂದ ಕೆಳಗಿಳಿದು ನಾನು ಬರೆಯುತ್ತಿದ್ದ ಹಾಳೆಯ ಮೇಲೆ ಬಿತ್ತು. ನಾನು ಯಾಕಾದರೂ ಆತನನ್ನ ಸ್ಪಷ್ಟೀಕರಣ ಕೇಳಿದೆನೋ ಅಂದುಕೊಂಡೆ. ಆದರೂ ನನ್ನ ಸಂಶಯ ನಿವಾರಣೆ ಆಗಿರಲಿಲ್ಲ. ಮತ್ತೊಮ್ಮೆ ಕೇಳಿದೆ. ಕೃಷ್ಣಮ್ಮನವರ್? ಅಲ್ಲ. ಕ ಕೊಂಬು ಕು, ಶ, ಣ ವೊತ್ತು, ಮ ಕ್ಕೆ ಮ ವೊತ್ತು ಅಂತಾ ಬಿಡಿಸಿ ಹೇಳಿದ. ನನಗೆ ಇಲ್ಲಿಯವರೆಗೂ ಇಂಥಾ ಅಡ್ಡಹೆಸರು ಕೇಳಿಲ್ಲವಾದ್ದರಿಂದ ನಾನು ಆ ಶಬ್ಧದ ರೂಪ ನಿಷ್ಪತ್ತಿಯ ಬಗ್ಗೆ ಯೋಚಿಸುತ್ತ ಕುಳಿತೆ. (ಅದು ಇಲ್ಲಿಯವರೆಗೂ ಬಗೆಹರಿದಿಲ್ಲ..!)
ಒಂಬತ್ತೂವರೆ ಹತ್ತಕ್ಕೆ ಮತದಾನ ಜೋರಾಯಿತು. ಮತದಾರನೊಬ್ಬ ಬಂದ ತಕ್ಷಣವೇ ಆತನ ಹೆಸರನ್ನ ಮತದಾರರ ಪಟ್ಟಿಯಲ್ಲಿ ಹುಡುಕಬೇಕು. ಅದೇ ಸವಾಲಿನ ಕೆಲಸ. ಅದನ್ನ ಕುಂದಗೋಳದ ಶಿಕ್ಷಕರೊಬ್ಬರು ಶ್ರಮವಹಿಸಿ ಮಾಡಿದರು. ಸಂಜೆಯ ಹೊತ್ತಿಗೆ ಅವರಿಗೆ ಬೆನ್ನು ನೋವು, ಕೈ ನೋವು ಬಂದು ತುಂಬಾ ತ್ರಾಸುಪಟ್ಟರು. ಗುರುತಿನ ಚೀಟಿಗಾಗಿ ಹನ್ನೆರಡೋ ಹದಿನೈದೋ ಥರದ ಗುರುತು ಪತ್ರಗಳನ್ನ ತೋರಿಸುವ ಅವಕಾಶವಿತ್ತು. ತಾತ್ಕಾಲಿಕ ರೇಷನ್ ಕಾರ್ಡಿನ ಡೇಟು ಮುಗಿದ ಹರಿದ ಹಾಳೆಯನ್ನ ತೋರಿಸಿದವನಿಗೆ ನಾನು ಮತದಾನದ ಅವಕಾಶವನ್ನ ನಿರಾಕರಿಸಿದೆ. ಆತ, ಆ ಪತ್ರವನ್ನ ನೀಡಿದ್ದು ಗ್ರಾಮ ಪಂಚಾಯ್ತಿ. ಗ್ರಾಮ ಪಂಚಾಯಿತಿಗಿಂತ ದೊಡ್ಡದು ಯಾವುದಿದೆ ಅಂತಾ ಕೇಳಿದ. (ಅಣ್ಣಾ ಹಜಾರೆ ಇದ್ದಿದ್ದರೆ ಗ್ರಾಮ ಪಂಚಾಯ್ತಿಯೇ ದುನಿಯಾ. ಸಂಸತ್ತಿಗಿಂತ ಗ್ರಾಮಪಂಚಾಯ್ತಿಯೇ ದೊಡ್ಡದು ಅನ್ನುತ್ತಿದ್ದರೇನೋ. )ನಾನು ನನ್ನ ಬಳಿ ಇದ್ದ ಗುರುತಿನ ಚೀಟಿಗಳ ಪಟ್ಟಿಯನ್ನ ತೋರಿಸಿದೆ. ಈ ಪಟ್ಟಿಯಲ್ಲಿ ಇರುವ ಯಾವುದಾದರೂ ಒಂದನ್ನ ತಾ ಅಂದೆ. ಮತದಾನ ಕೇಂದ್ರದಿಂದ ಹೊರಬಂದು ಸಮಾಧಾನಪಡಿಸಲು ಪ್ರಯತ್ನಿಸಿದೆ. ಕೊನೆಗೆ ತಹಸೀಲ್ದಾರರಿಗೆ ಫೋನು ಹಚ್ಚಿ ಆ ವ್ಯಕ್ತಿಯನ್ನ ಮತದಾನಕ್ಕೆ ಕಳುಹಿಸಬಹುದೇ ಅಂತಾ ಕೇಳಿದೆ. ಏಜೆಂಟರನ್ನ ಕೇಳಿ. ಆತ ಅದೇ ಊರಿನವನು ಅಂದರೆ ಬಿಟ್ಟುಬಿಡಿ ಅಂದರು. ಮತದಾನಕ್ಕೆ ಆತನನ್ನ ಕಳುಹಿಸಿದೆ.
ಮತದಾನ ಕೇಂದ್ರದ ಹೊರಗೆ ಯಾಕೋ ಸ್ವಲ್ಪ ಗದ್ದಲ. ಹೊರಗೆ ಹೋದೆ. ಅಭ್ಯರ್ಥಿ ಮತ್ತು ಅವನ ಅಳಿಯನಿಗೂ ಬಾಯಿ ಮಾತಿನ ಜಗಳ. ನಾನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಇರ್ಲಿ ಬಿಡಿ ಸಾರ್ ಅಂದೆ. “ಲೇ ಮಾವಾ ನಿನ್ ನೋಡ್ಕತೀನ್ ಲೇ” ಅಂದವನೇ ಭರ್ರ್ ಅಂತಾ ಗಾಡಿ ಹತ್ತಿ ಹೋದ. ಶಾಲೆಯ ಕೊಠಡಿಯ ಬಾಗಿಲಲ್ಲಿ ಇದ್ದ ಪೊಲೀಸ್ ಪೇದೆ “ಸರ್, ನೀವ್ ಹೊರಗೆ ಹೋಗಬೇಡಿ. ನಿಮಗೆ ಏನಾದ್ರೂ ಮಾಡಿದ್ರೆ ಏನ್ ಮಾಡ್ತೀರಾ” ಅಂದ. ಆದರೆ, ನನಗೆ ಒಂದು ಹುಂಬ ಧೈರ್ಯ. ಏನೂ ಆಗಲ್ಲ ಅನ್ನೋ ಒಳ ಮನಸ್ಸಿನ ಮಾತು.
ಮತದಾನ ಕೇಂದ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳು 950. ಪ್ರತಿಯೊಬ್ಬ ವ್ಯಕ್ತಿ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿಗೆ ಓಟು ಚಲಾಯಿಸಬೇಕು. ಪ್ರತಿ ಸಲ ವೋಟು ಮಾಡಲಿಕ್ಕೆ ನಿಯಂತ್ರಣ ಯಂತ್ರದಿಂದ ಅನುಮೋದನೆ ನೀಡಬೇಕು. ಪ್ರತಿ ಸಲ ಕೀ ಒತ್ತಿದಾಗಲೂ, ಮತ ನೀಡಿದಾಗಲೂ ಬಝರ್ ಶಬ್ಧ ಮಾಡುತ್ತದೆ. ಅಲ್ಲಿಗೆ ಸುಮಾರು 2900 ಬಾರಿ ಆ ಹತ್ತು ಹತ್ತು ಸೆಕೆಂಡುಗಳ ಬಝರ್ ಕೇಳಿದ್ದೇನೆ..! ಕೆಲವೊಮ್ಮೆ ತಲೆ ಚಿಟ್ಟು ಹಿಡಿಯುತ್ತಿತ್ತು. ಯಾವ ಶಬ್ಧ ಯಾವ ಯಂತ್ರದಿಂದ ಬರುತ್ತಿದೆ ಅನ್ನುವ ಜ್ಞಾನವೇ ಹೊರಟು ಹೋಗುತ್ತಿತ್ತು. ಅಷ್ಟರ ಮಟ್ಟಿಗೆ ದಂದ್ವ. ಒಬ್ಬ ಪ್ರಿಸೈಡಿಂಗ್ ಅಧಿಕಾರಿಯಿಂದ ನಾನು ಕೇಳಲ್ಪಟ್ಟ ಪ್ರಕಾರ ಈ ರೀತಿ ದ್ವಂದ್ವ ಆಗಿ, ಒಬ್ಬ ವ್ಯಕ್ತಿ ತಾಲೂಕು ಪಂಚಾಯ್ತಿಗೆ ಮತದಾನ ಮಾಡಿ, ಜಿಲ್ಲಾ ಪಂಚಾಯ್ತಿಗೆ ಮತದಾನ ಮಾಡದೇ ಹೋದರೆ ಲೆಕ್ಕ ತಪ್ಪಿದಾಗ, ಇನ್ನೊಬ್ಬ ವ್ಯಕ್ತಿ ಮತದಾನ ಮಾಡುವಾಗ ಇದೇ ಶಬ್ಧ ದ್ವಂದ್ವವನ್ನ ಉಪಯೋಗಿಸಿಕೊಂಡು, ಆತನಿಗೆ ಇನ್ನೊಮ್ಮೆ ಒತ್ತು, ಮತದಾನವಾಗಿಲ್ಲ ಅಂತಾ ಒತ್ತಿಸುತ್ತಿದ್ದರಂತೆ..!
ನಾನು ಪ್ರಿಸೈಡಿಂಗ್ ಅಧಿಕಾರಿಯಾಗಿದ್ದೆ. ಕೆಲಸ – ಎಲ್ಲರನ್ನ ಸಂಭಾಳಿಸಿಕೊಂಡು ಹೋಗುವುದು, ವಿವಿಧ ಕಾಗದ ಪತ್ರಗಳಿಗೆ ಒಂದೈನೂರು ಸಹಿ ಹಾಕುವುದು, ಪತ್ರಗಳನ್ನ ಲಕೋಟೆಗಳಲ್ಲಿ ಜೋಡಿಸುವುದು, ರಿಪೋರ್ಟು ಬರೆಯುವುದು, ಸಂಕೀರ್ಣ ಸನ್ನಿವೇಶದಲ್ಲಿ ಸಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು, ಜೊತೆಗೆ, ಎಲ್ಲದಕ್ಕೂ ಹೊಣೆಗಾರನಾಗಿರುವುದು. ಸಂಜೆಯಾಗುತ್ತ ಬಂದರೂ ಮತದಾನ ಮುಗಿಯಲಿಲ್ಲ. ಇನ್ನೊಬ್ಬ ಪ್ರಿಸೈಡಿಂಗ್ ಅಧಿಕಾರಿಯನ್ನ ಕರ್ತವ್ಯಕ್ಕೆ ಸಂಜೆ ನಾಲ್ಕರ ಹೊತ್ತಿಗೆ ನಮ್ಮ ಮತ ಕೇಂದ್ರಕ್ಕೆ ಆಯೋಜಿಸಲಾಯಿತು. ಮತಪಟ್ಟಿಯಲ್ಲಿ ಇದ್ದದ್ದು ಸಾವಿರದ ಇನ್ನೂರು ಚಿಲ್ಲರೆ ಓಟುಗಳು. ಚಲಾವಣೆಯಾದದ್ದು ಒಂಬೈನೂರಾ ಐವತ್ತರ ಸುಮಾರು. ಎಪ್ಪತ್ತೆಂಟು ಪ್ರತಿಶತ ಮತದಾನವಾಗಿತ್ತು. ಸಂಜೆ ಐದಾದರೂ ನೂರೈವತ್ತು, ಇನ್ನೂರು ಜನರ ಕ್ಯೂ. ಎಲ್ಲರಿಗೂ ಚೀಟಿ ಕೊಟ್ಟೆ. ಚೀಟಿ ಕೊಟ್ಟವರಿಗೆ ಮಾತ್ರ ಸಂಜೆ ಐದರ ನಂತರ ಮತದಾನಕ್ಕೆ ಅವಕಾಶ. ಮತದಾನ ಮುಗಿಸಿದ್ದು ಸಂಜೆ ಏಳು ಗಂಟೆಗೆ. ಎಲ್ಲವನ್ನ ಪ್ಯಾಕ್ ಮಾಡುವ ಹೊತ್ತಿಗೆ ರಾತ್ರಿ ಒಂಬತ್ತಾಯಿತು. ಆ ಇಬ್ಬರು ಶಿಕ್ಷಕಿಯರು ಇದ್ದಕ್ಕಿದ್ದಂತೆ ಬೇರೆಯದೇ ವರಸೆ ಶುರು ಹಚ್ಚಿದರು. ಮೂದಲಿಕೆ ಶುರುವಾಯಿತು. ಇದನ್ನ ಮೊದಲೇ ಮಾಡಬೇಕಿತ್ತು. ನಿನ್ನೆಯೇ ಮಾಡಬೇಕಿತ್ತು ಅನ್ನತೊಡಗಿದರು. ಆದರೆ, ನನಗೆ ಚುನಾವಣೆ ನಡೆಸುವುದು, ಪ್ರಿಸೈಡಿಂಗ್ ಅಧಿಕಾರಿಯಾದದ್ದು ಎಲ್ಲವೂ ಹೊಸತು. ಸಂಜೆ ಬಂದ ಇನ್ನೊಬ್ಬ ಅಧಿಕಾರಿ ಹೇಳಿಕೊಟ್ಟು ಮಾಡಿಸುತ್ತಿದ್ದರು. ನಮ್ಮನ್ನ ಕರೆದೊಯ್ಯುವ ಚುನಾವಣೆ ಆಯೋಜಿತ ಬಸ್ ಬಂದು ನಿಂತಿತ್ತು. ಎಲ್ಲವನ್ನ ಪ್ಯಾಕ್ ಮಾಡಿಕೊಂಡು, ಬ್ಯಾಗ್ ನಲ್ಲಿ ಹಾಕಿಕೊಂಡು, ಸೀಲ್ ಮಾಡಿ, ಹೊರಟೆವು. ಶಾಲೆಯಿಂದ ಸ್ವಲ್ಪ ದೂರ ನಡೆದು ಬಸ್ ಹತ್ತಿದೆವು. ರಾತ್ರಿ ಊಟವಿಲ್ಲ. ಹಸಿವು. ಬಳಲಿಕೆ. ಇವೆಲ್ಲವನ್ನ ಸ್ವೀಕಾರ ಕೇಂದ್ರದಲ್ಲಿ ಒಪ್ಪಿಸಿ ಹುಬ್ಬಳ್ಳಿ ಸೇರಿದರೆ ಸಾಕು ಅನ್ನೋ ಧಾವಂತ. ಅದಕ್ಕೇ ಹೇಳಿದ್ದು ಹೆಣ ಹೊರುವ ಅನುಭವ ಆಗಿದ್ದು ಅಂತಾ. ಪ್ರಜಾಪ್ರಭುತ್ವದ ಹೆಣ. ಯಾವನೋ ಹೆಬ್ಬೆಟ್ಟು ಚುನಾವಣೆ ನಿಲ್ತಾನೆ. ರೊಕ್ಕ ಮಾಡ್ಕಂತಾನೆ. ಅಂಥವನಿಗೆ ಆದರಿಸಿ ಹಾಕಿದ ಮತಗಳನ್ನ ಊಟ, ನೀರು ಬಿಟ್ಟು ನಾವು ಹೊರುತ್ತಿದ್ದೇವೆ. ಯಾವ ಪುರುಷಾರ್ಥಕ್ಕೆ..? ಇದನ್ನೇ ನೋಡಿ, ಅನುಭವಿಸಿ, “ಪ್ರಜಾಪ್ರಭುತ್ವದ ಹೆಣ ಹೊತ್ತು ಬಂದೆ” ಅಂತಾ ಚುನಾವಣೆ ಮುಗಿಸಿದ ಮಾರನೇ ದಿನ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡಿದ್ದೆ.
ಪೋಲಿಂಗ್ ಆಫೀಸರ್ ಆಗಿದ್ದ ಶಿಕ್ಷಕಿಯರು ತಮ್ಮ ಚುನಾವಣಾ ಭತ್ಯೆ ಕೊಡಿ, ನಾವು ಇನ್ನು ಹೊರಡುತ್ತೇವೆ. ನೀವು ಹೆಂಗೂ ಇಬ್ಬರು ಗಂಡಸರು ಇದ್ದೀರಿ ಮತಪೆಟ್ಟಿಗೆ, ಉಳಿದ ಸಾಮಾಗ್ರಿಗಳನ್ನ ತಲುಪಿಸಿ ಅಂದರು. ಈಗ ಒಬ್ಬರಿಗೆ ದುಡ್ಡು ಕೊಟ್ಟರೆ ಇನ್ನೆಲ್ಲರೂ ಕೇಳುತ್ತಾರೆ. ಎಲ್ಲರಿಗೂ ದುಡ್ಡು ಕೊಟ್ಟರೆ, ಅವರು ತಮ್ಮ ತಮ್ಮ ದಾರಿ ಹಿಡೀತಾರೆ. ನಾನೊಬ್ಬನೇ ಎಲ್ಲ ಸಾಮಗ್ರಿಗಳನ್ನ ಹಿಡಿದು ಅಡ್ಡಾಡಲೇ? ಅಮ್ಮ ಕೊಟ್ಟಿದ್ದ ಅಮೂಲ್ಯ ಸಲಹೆ ಉಪಯುಕ್ತವಾಗಿತ್ತು. ಎಲ್ಲ ಸಾಮಗ್ರಿಗಳನ್ನ ಒಪ್ಪಿಸುವವರೆಗೆ ದುಡ್ಡು ಬಿಚ್ಚಲಿಲ್ಲ. ಪ್ರತಿ ಸಾಮಗ್ರಿಯನ್ನ ಎಣಿಸಿ, ಕೊಟ್ಟು, ಕೊಟ್ಟದ್ದಕ್ಕೆ ರಸೀದಿ ಇಸ್ಕೊಂಡಾಗ ರಾತ್ರಿ ಹತ್ತು ಹತ್ತೂವರೆ ಹನ್ನೊಂದು ಗಂಟೆ. ನನ್ನ ತಂಡದಲ್ಲಿದ್ದ ಎಲ್ಲ ಅಧಿಕಾರಿಗಳಿಗೂ ದುಡ್ಡು ಹಂಚಿ ಲೆಕ್ಕ ಚುಕ್ತಾ ಮಾಡಿ, ಆ ಇಬ್ಬರು ಶಿಕ್ಷಕಿಯರಿಗೆ ಹಿಂದಿನ ದಿನ ಊಟ ಉಪಚಾರ ನೋಡಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿ, ಭತ್ಯೆಯನ್ನ ಸಾಮಗ್ರಿಗಳನ್ನ ಒಪ್ಪಿಸಿದ್ದಾದಮೇಲೆಯೇ ಕೊಡುತ್ತಿರುವುದಕ್ಕೆ ವಿಷಾದಿಸಿದೆ. ಪೊಲೀಸ್ ಪೇದೆಗೆ ಪೊಲೀಸ್ ಡಿಪಾರ್ಟ್‌ಮೆಂಟಿನಿಂದ ಭತ್ಯೆ ಸಿಗಬೇಕಿತ್ತು. ಅದನ್ನ ಹಿರಿಯ ಅಧಿಕಾರಿಗಳೇ ತಿಂದು ಹಾಕುತ್ತಾರೆಂದೂ ತನಗೇನೂ ಸಿಗುವುದಿಲ್ಲವೆಂದೂ ಹೇಳುತ್ತಿದ್ದ. ಆತನಿಗೆ ನನ್ನ ಕಿಸೆಯಿಂದಲೇ ನೂರಿನ್ನೂರು ಕೊಡಬೇಕೆಂದವನು ಯಾಕೋ ಮರೆತುಬಿಟ್ಟೆ. ಚುನಾವಣೆಯ ಸಂಬಂಧವಾಗಿಯೇ ನಿಯೋಜಿಸಲಾದ ಹುಬ್ಬಳ್ಳಿ ಬಸ್ಸಿನಲ್ಲಿ ಹುಬ್ಬಳ್ಳಿ ತಲುಪಿದಾಗ ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆ..! ಹಳೇ ಬಸ್ ಸ್ಟ್ಯಾಂಡಿನಲ್ಲಿ ಒಂದಿಷ್ಟು ಪಲಾವು, ಇಡ್ಲಿ ತಿಂದು ಹೊರಡುವ ಹೊತ್ತಿಗೆ ಹನ್ನೆರಡೂವರೆ. ರೂಮು ತಲುಪಿದಾಗ ಒಂದು ಗಂಟೆ.
ನನ್ನ ತಕರಾರುಗಳು ಇವು.
1. ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳುವ ಎಲ್ಲ ಅಧಿಕಾರಿಗಳಿಗೆ ಮತಪೆಟ್ಟಿಗೆ, ಕಂಟ್ರೋಲ್ ಯೂನಿಟ್ ಗಳನ್ನ ಸಂಗ್ರಹಿಸುವ ಕೇಂದ್ರದಲ್ಲಿ ಊಟದ ವ್ಯವಸ್ಥೆಯನ್ನೇಕೆ ಮಾಡಬಾರದು?
2. ದೂರದ ಊರುಗಳಿಂದ ಬಂದ ಹೆಣ್ಣು ಮಕ್ಕಳಿಗೆ ಮಧ್ಯ ರಾತ್ರಿ ಊರು ಸೇರಿಸಿದರೆ ಕರೆದೊಯ್ಯಲು ಯಾರಾದರೂ ಬರಲೇ ಬೇಕು. ಚುನಾವಣೆಗೆ ಸಾವಿರಾರು ಕೋಟಿ ಖರ್ಚು ಮಾಡುವ ಚುನಾವಣಾ ಆಯುಕ್ತರ ಕಛೇರಿ, ಚುನಾವಣೆಗೆ ದುಡಿಯುವ ವ್ಯಕ್ತಿಗಳನ್ನೇಕೆ ಮನೆಗೆ ತಲುಪಿಸುವ ಒಂದು ಸಣ್ಣ ಜವಾಬ್ದಾರಿ ಹೊರುವುದಿಲ್ಲ?
3. ಚುನಾವಣೆ ನಡೆಸುವ ಬಗ್ಗೆ ಮಾಹಿತಿ ಮತ್ತು ಸಲಹೆಗಳನ್ನೊಳಗೊಂಡ ಸಿಡಿ ತಯಾರಿಸಿ ಪ್ರತಿ ಅಧಿಕಾರಿಗೂ ಕೊಡುವುದು ಉತ್ತಮ. ಜೊತೆಗೆ, ವೀಡಿಯೋವನ್ನ ಪ್ರತಿಯೊಬ್ಬರ ಮೊಬೈಲ್‌ಗೂ ಡೌನ್‍ಲೋಡ್ ಮಾಡಿಸಬಹುದು. ಇಲ್ಲದಿದ್ದರೆ ಪ್ರತಿ ಸಲವೂ ದ್ವಂದ್ವ ಮತ್ತು ಅರೆ ಜ್ಞಾನ.
ಏನೇ ಇರಲಿ. ಬೃಹತ್ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಸಂಕೀರ್ಣವಾದುದು. ಇಷ್ಟು ದೊಡ್ಡ ದೇಶದಲ್ಲಿ ಪ್ರಜಾಪ್ರಭುತ್ವ ಒಂದು ಮಟ್ಟಿಗೆ ಯಶಸ್ವಿಯಾಗಿದೆ. ಗ್ರಾಮ ಭಾರತದ ಅರ್ಥವಾಗದ ಸಮೀಕರಣಗಳ ಸಂಕೀರ್ಣಮಯ ಚುನಾವಣಾ ಸನ್ನಿವೇಶವನ್ನ ಅರಿಯುವ ಪ್ರಯತ್ನವನ್ನ ಇದರಲ್ಲಿ ಮಾಡಿದೆ.
ನಾಳೆ ಚುನಾವಣೆ. “ಒಳ್ಳೇ” ವ್ಯಕ್ತಿಗೆ ಓಟ್ ಹಾಕಿ. ಆ ಒಳ್ಳೇ ವ್ಯಕ್ತಿ ಅತಿ ಕಡಿಮೆ ಹೊಲಸು ತಿನ್ನುವ ವ್ಯಕ್ತಿಯಾಗಿರಲಿ ಎಂಬ ಬಯಕೆಯೊಂದಿಗೆ..
ಗಣೇಶ್ ಕೆ.