ಪೊಲೀಸರೊಂದಿಗೆ ಎರಡು ಸ್ವಾರಸ್ಯಕರ ಪ್ರಸಂಗಗಳು

     ಮೊದಲನೆಯದು : ಬಸವನಗುಡಿಗೆ ಹೋಗಬೇಕಿತ್ತು. ಸೌತ್ ಎಂಡ್ ಸರ್ಕಲ್ಲಿನಲ್ಲಿದ್ದೆ. ಸಾಮಾನ್ಯವಾಗಿ ಸರ್ಕಲ್ ಪೊಲೀಸರಿಗೆ ಕೇಳಿದರೆ, ಅಡ್ರೆಸ್ಸು ಸರಿಯಾಗಿ ಹೇಳ್ತಾರೆ ಅನ್ನೋ ನಂಬಿಕೆ. ಅದು ಹಲವಾರು ಬಾರಿ ನಿಜವಾಗಿದೆ ಬಿಡಿ. ನಾನು ಅಪರಿಚಿತ ಸ್ಥಳಗಳಲ್ಲಿ ಮತ್ತೆ ವಿಚಾರಿಸುವುದು ಬೀಡಿ ಅಂಗಡಿಗಳು, ಚಪ್ಪಲಿ ಹೊಲಿಯುವವರು, ಸರ್ಕಲ್ಲಿನಲ್ಲಿ ಹರ್‍ಅಟುವವರು ಮತ್ತು ಸಣ್ಣ ಪುಟ್ಟ ಅಂಗಡಿಗಳಲ್ಲೇ. ಸಾಮಾನ್ಯವಾಗಿ ಅಲ್ಲಿಯೂ ಸರಿಯಾದ ಮಾಹಿತಿ ದೊರಕುತ್ತದೆ. ಹತ್ತಿರದಲ್ಲೇ ಸರ್ಕಲ್ ಪೊಲೀಸನೊಬ್ಬ ಇದ್ದುದರಿಂದ ಮತ್ತು ಆತ ಯಾವುದೇ ಕೆಲಸವಿಲ್ಲದೇ, ಸರ್ಕಲ್ಲಿನ ಮೂಲೆಯೊಂದರಲ್ಲಿ ನಿರ್ಮಿಸಲಾಗಿರುವ ತನ್ನ ಕ್ಯಾಬಿನ್ನಿನಲ್ಲಿ ಕುಳಿತಿದ್ದರಿಂದ, ಆತನಿಗೆ ‘ಸರ್, ಬಸವನ ಗುಡಿಗೆ ಹೋಗಲಿಕ್ಕೆ ಎಲ್ಲಿ ಬಸ್ ಸಿಗ್ತವೆ?’ ಅಂತಾ ಕೇಳಿದೆ. ಆತ ಅಲ್ಲಿ ಅಂತಾ ಕೈ ತೋರಿಸಿದ. ಇದೋ ಮೊದಲೇ ಬೆಂಗಳೂರು. ಒಂದು ಸರ್ಕಲ್ಲು ಅಂದ್ರೆ ನಾಲ್ಕಕ್ಕಿಂತ ಹೆಚ್ಚು ರೋಡುಗಳು ಕೂಡುತ್ತವೆ. ಜೊತೆಗೆ ಎದುರಾ ಬದರಾ ಬಸ್ ಸ್ಟಾಪ್‍ಗಳಿರುತ್ತವೆ. ಹಾಗಾಗಿ ‘ಸರ್ ಈ ಕಡೆಗೆ ಇರೋದೋ ಇಲ್ಲಾ ಆ ಕಡೆಗೆ ಇರೋದೋ’ ಅಂತ ಕೇಳಿದೆ. ಅದೆಲ್ಲಿತ್ತೋ ಅಂಥಾ ಕೋಪ. ‘ರೀ ಹೋಗ್ರೀ ಸುಮ್ನೆ. ನಾವೇನ್ ಕೈ ಹಿಡ್ಕಂಡ್ ಬಂದು ಬಸ್ನಲ್ಲಿ ಕೂರ್ಸಕ್ಕಾಗುತ್ತಾ?’ ಅಂದ. ನಾನು ‘ಸಾರ್, ಎರಡು ಕಡೆ ಸ್ಟಾಪ್‍ಗಳಿದಾವಲ್ಲ ಸಾರ್ ಅದಕ್ಕೇ ಕೇಳಿದೆ’ ಅಂತಾ ಸಮಜಾಯಿಷಿ ನೀಡಿದೆ. ಅದಕ್ಕೆ ಅವನು ‘ಹೋಗ್ರೀ ಸುಮ್ನೆ. ಈಗ್ ಹೋಗ್ತೀರೋ ಇಲ್ಲೋ?’ ಅನ್ನೋದೇ..?

ಆಗಿನಿಂದ ಬೆಂಗಳೂರಿನಲ್ಲಿ ಎಂಥೆಂಥಾ ಮಂಗ ನನ್ಮಕ್ಳು ಇದಾರೆ ಅಂತಾ ಗೊತ್ತಾಯ್ತು. ಹಾಗಾಗಿ ಒಂದು ತತ್ವ, ಥಿಯರಂ, ಥಿಯರಿ ಎಲ್ಲಾ ಕಂಡು ಹಿಡಿದಿದ್ದೇನೆ..! ಒಬ್ಬನೇ ವ್ಯಕ್ತಿಗೆ ‘ಎರಡನೇ ಪ್ರಶ್ನೆ ಬಿಲ್‍ಕುಲ್ ಕೇಳಲೇ ಬಾರದು’..! ಯಾರಿಗಾದರೂ ಒಂದು ಪ್ರಶ್ನೆ ಕೇಳ್ರಿ. ಆತ ಹೇಳಿದ್ದು ಮಾತ್ರ ಕ್ಲಾರಿಫೈ ಮಾತ್ರ ಮಾಡಿಕೊಳ್ಳಬೇಡಿ..! ಜಗತ್ತಿನಲ್ಲಿ ತುಂಬಾ ಜನರಿದ್ದಾರೆ. ಪ್ರಶ್ನೆ ಕೇಳಲಿಕ್ಕೆ. ಒಬ್ಬರಿಗೆ ಒಂದೇ ಟಿಕೇಟ್ ಅನ್ನೋ ಸಿನಿಮಾ ಥೇಟರ್‌ಗಳಿಗೆ ಹೋಗಿ ಬಂದು, ಶ್ರೀ ರಾಮಚಂದ್ರನ ಏಕಪತ್ನೀ ವ್ರತ ನೋಡಿ ನಾನು ‘ಏಕ ಪ್ರಶ್ನೀ ವ್ರತಸ್ಥ’ನಾಗಿದ್ದೇನೆ.

 

ಎರಡನೆಯದು

     ಮೊನ್ನೆ ಮೊನ್ನೆ ನನ್ನ ರೂಂ ಇರುವೆಡೆಗೆ ಒಬ್ಬನದು ಆತ್ಮಹತ್ಯೆ(ಅಥವಾ ಕೊಲೆ) ನೆಡೆದಿತ್ತು. ನಾನು ನಮ್ಮ ಏರಿಯಾದಲ್ಲಿ ಈ ಪಾಟಿ ಜನಾ ಸೇರಿದಾರಲ್ಲಾ ಅಂತಾ ಕೆಲವರನ್ನ ವಿಚಾರಿಸಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಬಾಗಿಲು ಒಡೆದು ಪೊಲೀಸರು ಹೆಣ ತೆಗೀತಿದಾರೆ ಅಂದರು. ಸತ್ತು ಎರಡು ಮೂರು ದಿನ ಆಗಿರಬೇಕು, ಪೊಲೀಸರು ಮೂಗಿಗೆ ಬಟ್ಟೆ ಕಟ್ಟಿಕೊಂಡು, ಬಾಗಿಲ ಬಳಿ ಹರಸಾಹಸ ಮಾಡುತ್ತಿದ್ದರು. ಹೊರಗಡೆ ಆಂಬುಲೆನ್ಸ್, ಸುವರ್ಣ ಚಾನಲ್‌ನೋರು, ಪೊಲೀಸ್ ಜೀಪು ಎಲ್ಲವು ಇದ್ದವು. ಆ ಕಡೆ ಸತ್ತ ವ್ಯಕ್ತಿ ಯಾರು ಎನ್ನೋದರ ಬಗ್ಗೆ ಟಿ.ವಿ ಯೋರು ಹಿರಿಯ ಪೊಲೀಸರಿಂದ ಮಾಹಿತಿ ರೆಕಾರ್ಡ್ ಮಾಡುತ್ತಿದ್ದರು. ಗುಂಪಿನಿಂದ ಹೊರಗೆ ಒಂದಿಷ್ಟು ಪೊಲೀಸರಿದ್ದರು. ನಾನು ದೊಡ್ಡದಾಗಿ ಕ್ರೈಂ ವರದಿಗಾರನೇನೋ ಎಂಬಂತೆ ಒಬ್ಬ ಪೊಲೀಸನಿಗೆ ‘ಏನಾಗಿದೆ ಸಾರ್?’ ಅಂದೆ. ‘ಸುಯಿಸೈಡ್ ಮಾಡಿಕೊಂಡಿದ್ದಾನೆ, ಸತ್ತು ಮೂರ್ನಾಲ್ಕು ದಿನಗಳಾಗಿರಬಹುದು’ ಎಂದು ಆತ ಹೇಳಿದ. ನಾನು ‘ಈಗ ಇನ್ವೆಸ್ಟಿಗೇಷನ್ ಶುರು ಮಾಡೀದೀರಾ ಸಾರ್?’ ಅಂದೆ. ಆತನಿಗೆ ನಖಶಿಖಾಂತ ಉರಿದು ಹೋಯಿತು. ಏರಿದ ದನಿಯಲ್ಲಿ ‘ರೀ ಸ್ವಾಮೀ, ನಮಗೇನ್ ಕನಸು ಬೀಳುತ್ತೇನ್ರೀ ಹೀಗಾಗಿತ್ತು ಅಂತಾ? ನಿಮ್ಮಂಥೋರೇ ಯಾರಾದ್ರೂ ತಿಳಿಸಿದಾಗಲೇ ಗೊತ್ತಾದಮೇಲೆ ಬಂದು ಬಾಡಿ ಹೊರಗೆ ತೆಗೀತಾ ಇದೀವಿ’ ಅಂದ. ನನಗೆ ನನ್ನ ತಪ್ಪಿನ ಅರಿವಾಗಿತ್ತು. ಕೇಳುವ ಭರದಲ್ಲಿ ‘ಈಗ ಇನ್ವೆಷ್ಟಿಗೇಷನ್ ಶುರು ಮಾಡಿದೀರಾ?’ ಅನ್ನೋದು ಯಾವ ಅರ್ಥದಲ್ಲಿದೆ ಅನ್ನೋದು ತಿಳಿದಿತ್ತು. ಸಿನಿಮಾದಲ್ಲಿ ಪೊಲೀಸರು ಕೊನೆಗೆ ಬರುವವರಂತೆ, ಮೂರ್ನಾಲ್ಕು ದಿನ ಆದ ಮೇಲೆ ಇನ್ವೆಷ್ಟಿಗೇಷನ್ ಶುರು ಮಾಡೀದೀರಾ ಅನ್ನೋ ಅರ್ಥದಲ್ಲಿ ನನ್ನ ಪ್ರಶ್ನೆ ಇತ್ತು. ನಾನು ‘ಹಾಗಲ್ಲ ಸಾರ್, ನಾನು ಆ ಅರ್ಥದಲ್ಲಿ ಕೇಳಲಿಲ್ಲ. ತಪ್ಪು ತಿಳ್ಕೋಬೇಡಿ’ ಅಂತಾ ಸಮಜಾಯಿಷಿ ನೀಡಿದೆ. ಕನ್ವಿನ್ಸ್ ಮಾಡಿದೆ. ಆತ ಕೊನೆಗೆ ನಗುತ್ತಾ ನನ್ನ ಬೆನ್ನು ತಟ್ಟಿ ‘ಸ್ವಲ್ಪ ವಿಚಾರ ಮಾಡ್ಬೇಕು’ ಅಂತಾ ಹೊರಡಲು ಸಿದ್ಧವಾಗುತ್ತಿದ್ದ ಜೀಪು ಹತ್ತಿದ..!

ಪತ್ರಿಕಾ ಸಂಪಾದಕರಿಗೊಂದು ಅಭಿಮಾನಿಯೊಬ್ಬನ (ಅಭಿಮಾನದ ಪರಮಾವಧಿಯ) ಪತ್ರ..! – Ganesh K

    ಸಾರ್, ನಾನು ನಿಮ್ಮ ಪತ್ರಿಕೆಯ ಕಟ್ಟಾ ಅಭಿಮಾನಿ. ದಿನವೂ ತಪ್ಪದೇ ಒಂದಕ್ಷರವನ್ನೂ ಬಿಡದೇ ಓದುತ್ತೇನೆ. ನಾವು ನಮ್ಮ ಮನೆಯಲ್ಲಿ ನಿಮ್ಮ ಪತ್ರಿಕೆಯ ಮೇಲಿನ ಅಭಿಮಾನದಿಂದ, ಮನೆಕೆಲಸಗಳಲ್ಲಿ ಪೇಪರು ಬಳಸುವ ಹಲವಾರು ಸಂದರ್ಭಗಳಲ್ಲಿ ನಿಮ್ಮ ಪತ್ರಿಕೆಯನ್ನೇ ಬಳಸುತ್ತೇವೆ. ನಿಮ್ಮ ಪತ್ರಿಕೆ ನಿಜಕ್ಕೂ ಬಹುಪಯೋಗಿಯಾಗಿದೆ. ಸೊಪ್ಪು ಸೋಸುವಾಗ, ಬಿಸಿಲಿನಲ್ಲಿ ಕಾಳು-ಕಡಿ, ಒಣಮೆಣಸಿನಕಾಯಿ ಮುಂತಾದುವುಗಳನ್ನು ಒಣಗಿಸಲಿಕ್ಕೆ ನೆಲದ ಮೇಲೆ ಹಾಸಲು, ಎಣ್ಣೆ ಡಬ್ಬಿಯ ಮೇಲಿನ ಜಿಡ್ಡನ್ನು ಒರೆಸಲು, ಅಕಸ್ಮಾತ್ ಎಣ್ಣೆ ಅಡುಗೆ ಮಾಡುವಾಗ ನೆಲದ ಮೇಲೆ ಬಿದ್ದಾಗ ಒರೆಸಲು, ನೀರೊಲೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹೊತ್ತಿಸಲು, ಅಡುಗೆ ಮಾಡಲು ಒಲೆ ಹೊತ್ತಿಸಲಿಕ್ಕೆ, ಮನೆಯಲ್ಲಿ ಚಿಕ್ಕ ಮಕ್ಕಳು “ಚೀಚೀ” ಮಾಡಿದಾಗ ಒರೆಸಲಿಕ್ಕೆ, ಅಡುಗೆ ಮನೆಯ ಕಪಾಟುಗಳ ಮೇಲೆ ಹಾಸಲಿಕ್ಕೆ ಇವೆಲ್ಲವಕ್ಕೂ ನಾವು ನಿಮ್ಮ ಪತ್ರಿಕೆಯನ್ನೇ ಬಳಸುತ್ತೇವೆ. ಹೋಟೆಲುಗಳಲ್ಲಿ ಬೆಣ್ಣೆದೋಸೆ ತಿಂದಾದ ಮೇಲೆ ಕೈಯ ಜಿಡ್ಡೊರೆಸಿಕೊಳ್ಳಲಿಕ್ಕೆ ನಾನು ನಿಮ್ಮ ಪತ್ರಿಕೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಅಂಗಡಿಗಳಿಂದ ದಿನಸಿ ಸಾಮಾನುಗಳನ್ನು ತರುವಾಗ ನಿಮ್ಮ ಪತ್ರಿಕೆಯಲ್ಲಿಯೇ ಪೊಟ್ಟಣ ಕಟ್ಟಲು ಅಂಗಡಿಯಾತನಿಗೆ ಶಿಫ಼ಾರಸ್ಸು ಮಾಡುತ್ತೇನೆ. ಇನ್ನು ನಮ್ಮೂರಿನ ಹಳ್ಳಿಗಳಲ್ಲಿ, ಮಣ್ಣಿನ ಗೋಡೆಗಳಾದ್ದರಿಂದ ಮಣ್ಣು ಉದುರದಂತೆ, ಗೋಡೆಗಳಿಗೆ ಮತ್ತು ಮೇಲ್ಛಾವಣಿಗಳಿಗೆ ನಿಮ್ಮ ಪತ್ರಿಕೆಯನ್ನೇ ಅಂಟಿಸುವಂತೆ ಸಲಹೆ ಮಾಡುತ್ತೇನೆ.

    ಯಾವಾಗಲೇ ಆಗಲಿ, ಟ್ರೈನು ಪ್ರಯಾಣ ಮಾಡುವಾಗ ನಿಮ್ಮ ಪತ್ರಿಕೆಯನ್ನೇ ಖರೀದಿಸುತ್ತೇನೆ. ಪ್ಯಾಸೆಂಜರ್ ಟ್ರೈನುಗಳಲ್ಲಿ ಕುರ್ಚಿ ಸೀಟುಗಳು ಸಿಗುವುದೇ ಅಪರೂಪದಲ್ಲಿ ಅಪರೂಪ. ಹಾಗಾಗಿ ನಿಮ್ಮ ಪತ್ರಿಕೆಯನ್ನೇ ನೆಲದ ಮೇಳೆ ಹಾಸಿ ಕುಳಿತುಕೊಳ್ಳಲಿಕ್ಕೆ, ಮಲಗಲಿಕ್ಕೆ ಬಳಸುತ್ತೇವೆ.

    ಇನ್ನು ಪರಿವಾರ ಸಮೇತರಾಗಿ ಪ್ರಯಾಣ ಹೊರಟಾಗ, ನಿಮ್ಮ ಪತ್ರಿಕೆಯನ್ನು ಓದಿದ್ದಾದ ಮೇಲೆ, ಅದರಲ್ಲಿಯೇ ತಂದ ಖಾರ-ಮಂಡಕ್ಕಿ, ಕುರುಕಲು ತಿಂಡಿಗಳನ್ನು ತಿಂದುಬಿಡುತ್ತೇವೆ.(ತಿಂದು ಬಿಸಾಡುತ್ತೇವೆ ಅಂದರೆ ನಿಮಗೆ ಬೇಸರವಾಗಬಹುದು. ಆದರೆ ಅದರೆಲ್ಲದರ ಮುಂಚೆ ನಿಮ್ಮ ಪತ್ರಿಕೆಯನ್ನು ಒದಿದ್ದಾದ ಮೇಲೆ ತಾನೇ ಅದು ಬಹುಪಯೋಗಿ ಕಾರ್ಯಕ್ರಮಗಳಿಗೆ ಬಳಕೆಯಾಗುವುದು? ಹಾಗಾಗಿ ತಾವೇನು ಬೇಸರಿಸಿಕೊಳ್ಳಬೇಕಿಲ್ಲ. ಕೊಂಡ ಹೊಸ ಪತ್ರಿಕೆ ಕೇವಲ ಓದಲಿಕ್ಕೆ ಮಾತ್ರ ಉಪಯೋಗಿಸಲ್ಪಡುತ್ತದೆ. ಆನಂತರ ತಾನೇ ಅದರ ದಶಾವತಾರದ ಅವತರಣಿಕೆ ಶುರುವಾಗುವುದು..?)

    ಪತ್ರಿಕೆಗಳು ಸಮಾಜವನ್ನು ಶುದ್ಧವಾಗಿಡುವಂಥವುಗಳು ಎಂಬ ಮಾತಿದೆ. ಹಾಗಾಗಿ ಮನೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳಿಗೆ, ಪ್ರಯಾಣದ ಅವಧಿಯಲ್ಲಿ ರೈಲಿನಲ್ಲಿ ನೆಲದ ಮೇಲೆ ಹಾಸಿ ಕೂರಲು ತುಂಬಾ ಉಪಕಾರಿಯಾಗಿ ಪರಿಣಮಿಸಿ ನಮ್ಮ ಬಟ್ಟೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿಮ್ಮ ಪತ್ರಿಕೆ “ಸಹಕರಿಸಿದೆ”. ನಿಮ್ಮ ಪತ್ರಿಕೆ ನಿಜಕ್ಕೂ “ಸ್ವಚ್ಛತಾವಾಹಿನಿ”..!

    ಸಮಾಜವನ್ನು, ಮನೆ-ಮನೆಗಳನ್ನು ಸ್ವಚ್ಛವಾಗಿಡಲು ಹೆಣಗುವ ನಿಮ್ಮ ಪತ್ರಿಕೆಯೇ ಕೆಲವೊಮ್ಮೆ ಸ್ವಚ್ಛತಾ ಸಮಸ್ಯೆಯಿಂದ ನರಳಿ ಧೂಳು ಹಿಡಿಯುತ್ತವೆ. ವಿಪರ್ಯಾಸವೆಂದರೆ ಇತ್ತೀಚಿಗೆ ಬರುವ ನಿಮ್ಮ ಪತ್ರಿಕೆಯ ಹೊಸ ಸಂಚಿಕೆಗಳೇ ಹಳೇ ಸಂಚಿಕೆಗಳ ಧೂಳೊರೆಸಲು ವಿಫಲವಾಗುತ್ತವೆ. ಆ ಸಂದರ್ಭ ಒದಗಿ ಬಂದಾಗ ಹಳೆಯ ಪೇಪರುಗಳನ್ನೆಲ್ಲಾ ಗಂಟು ಕಟ್ಟಿ ಗುಜರಿಯವನಿಗೆ ಮಾರಿಬಿಡುತ್ತೇನೆ.

    ನಿಮ್ಮ ಪತ್ರಿಕೆಗೆ ಸಂಕಷ್ಟದ ಪರಿಸ್ಥಿತಿ ಎದುರಾಗುವುದು ಅಲ್ಲೇ. ಇಂಗ್ಳೀಷ್ ಪತ್ರಿಕೆಗಳಿಗೆ ಜಾಸ್ತಿಬೆಲೆ. ಜೊತೆಗೆ ಇಂಗ್ಳೀಷ್ ಪತ್ರಿಕೆಗಳು ದಿನವೂ ದಂಡಿಗಟ್ಟಲೇ ಪೇಜುಗಳನ್ನು ಕೊಟ್ಟಿರುತ್ತವೆ. ಇಂಗ್ಳೀಷ್ ಪತ್ರಿಕೆಗಳಿಗಿರುವ ಬೆಲೆ ಕನ್ನಡ ಪತ್ರಿಕೆಗಳಿಗೇಕಿಲ್ಲ? ಒಂದು ಕೇಜಿ ಪೇಪರ್ ಗುಜರಿಗೆ ಹಾಕಿದರೆ ಒಂದು ದಿನದ ಪತ್ರಿಕೆಯ ಬೆಲೆ ಕೂಡಾ ಇರೋದಿಲ್ಲ. ಈ ಅನ್ಯಾಯವನ್ನು ಸಹಿಸಿಕೊಂಡು ನಿಮ್ಮ ಪತ್ರಿಕೆ ಗುಜರಿಯವನ ಗಾಡಿ ಏರುತ್ತದೆ. ಅನ್ಯಾಯದ ವಿರುದ್ಧ ದನಿಯೆತ್ತಲು ಪತ್ರಿಕೆಯನ್ನು ಬಳಸಿಕೊಳ್ಳುವ ತಾವು ತಮ್ಮ ಪತ್ರಿಕೆಗೆ ದಯಮಾಡಿ ನ್ಯಾಯ ಕೊಡಿಸಿ(ಜೊತೆಗೆ ನಮಗೂ..!)

    ಆದರೂ, ಆದಿಯಿಂದ ಅಂತ್ಯದವರೆಗೂ ಬಹುಪಯೋಗಿಯಾಗಿ, ಸಾರ್ಥಕ್ಯದ ಜೀವನ ನೆಡೆಸಿ, ಗತ್ತು-ಗಮ್ಮತ್ತು ಮೆರೆದು, ಸುದ್ದಿ ಮನೆಯಿಂದ ರದ್ದಿಮನೆಗೆ ತೆರಳುವ ನಿಮ್ಮ ಪತ್ರಿಕೆಗೆ ಮತ್ತು ಪತ್ರಿಕೆಯ ಸೃಷ್ಟಿಕರ್ತರಿಗೆ, ಪತ್ರಕರ್ತರಿಗೆ ಮತ್ತು ತಮಗೆ ಅನಂತಾನಂತ ಧನ್ಯವಾದಗಳು.