ಇನ್ನು ಹತ್ತು ವರ್ಷಗಳಲ್ಲಿ ಬಾಬಾ ರಾಮ್‍ದೇವ್ ಪ್ರಾಡಕ್ಟ್‌ಗಳು ಎಲ್ಲರ ಮನೆತುಂಬುವುದರಲ್ಲಿ ಸಂಶಯವೇ ಇಲ್ಲ. ಸೋಪು, ಟೂತ್‍ಪೇಸ್ಟು, ಚ್ಯವನಪ್ರಾಶ್, ಗುಲ್ಕನ್‍ನಿಂದ ಹಿಡಿದು ಬಗೆಬಗೆಯ ನೋವುಗಳಿಗೆ, ಪ್ಯಾಕೇಜ್ ಔಷಧಿಗಳನ್ನ ರಾಮದೇವ್ ಬಾಬಾರವರ ದಿವ್ಯ ಯೋಗ ಫಾರ್ಮಸಿ ತಯಾರಿಸಿದೆ. ಬೆಲೆಗಳೂ ಅತಿ ಸ್ಪರ್ಧಾತ್ಮಕವಾಗಿವೆ. (ನಾನೇನೂ ಬಾಬಾ ರಾಮ್‍ದೇವ್ ಉತ್ಪನ್ನಗಳ ಕಾಂಟ್ರಾಕ್ಟ್ ಹಿಡಿದಿಲ್ಲ. ಒಂದು ಅಧ್ಯಯನ ಮಾತ್ರ.)
ಅರ್ಧ ಕೆಜಿ ಚ್ಯವನಪ್ರಾಶ್ – ಡಾಬರ್ – ರೂ 140. – ಕೆ.ಜಿ.ಗೆ ರೂ 280 ಆಯಿತು.
ಒಂದು ಕೆಜಿ ಚ್ಯವನಪ್ರಾಶ್ – ದಿವ್ಯ ಯೋಗ ಫಾರ್ಮಸಿ – ರೂ 140.
ಒಂದು ಕೆಜಿ ಸ್ಪೆಷಲ್ ಚ್ಯವನಪ್ರಾಶ್ – ದಿವ್ಯ ಯೋಗ ಫಾರ್ಮಸಿ – ರೂ 215.
ಅರ್ಥಾತ್, ರಾಮ್‍ದೇವ್ ಸ್ಪೆಷಲ್ ಚ್ಯವನಪ್ರಾಶ್ ಡಾಬರ್ ಚ್ಯವನ್‍ಪ್ರಾಶ್‍ಗಿಂತ 25 ಪ್ರತಿಶತ ಕಡಿಮೆ ಬೆಲೆಯಲ್ಲಿ ದೊರಕುತ್ತದೆ. ಸಾದಾ ಚ್ಯವನಪ್ರಾಶ್ ಡಾಬರ್ ಚ್ಯವನಪ್ರಾಶ್‌ನ ಅರ್ಧ ಬೆಲೆಯಲ್ಲಿ ದೊರಕುತ್ತದೆ.
ಇದು ಒಂದು ನಿದರ್ಶನ ಅಷ್ಟೇ. ಇಂಥಾ ನೂರಾರು ಉತ್ಪನ್ನಗಳಿವೆ. ಇದನ್ನ ಮಾರುವ ಅಂಗಡಿಯ ಪ್ರಾಂಚೈಸಿ ತಮ್ಮೂರಿನಲ್ಲಿ ತೆಗೆಯಲಿಕ್ಕೆ ಜನ ಕ್ಯೂ ಹಚ್ಚುತ್ತಿದ್ದಾರೆ ಅನ್ನುವ ಸುದ್ದಿಯಿದೆ. ಇದಕ್ಕೆ ರಾಮ್‍ದೇವ್‍ರವರ ಖ್ಯಾತಿ ಅನುಕೂಲಕ್ಕೆ ಬರುತ್ತದೆ. ಆಸ್ಥಾ ಟಿವಿ ಆರೋಗ್ಯ, ಯೋಗದ ವಿಷಯವನ್ನ, ಸ್ವದೇಶಿ ವಿಷಯವನ್ನ ಜೀವಂತವಾಗಿ ಇಡಲಿಕ್ಕೆ ಉಪಯುಕ್ತವಾಗಿದೆ. ಹದಿನೈದು ವರ್ಷಗಳ ಹಿಂದೆ ಆಜಾದಿ ಬಚಾವೋ ಆಂದೋಲನವನ್ನ ರಾಜೀವ್ ದೀಕ್ಷಿತರು ಪ್ರಾರಂಭಿಸಿದಾಗ ಇದ್ದುದಕ್ಕಿಂತ ಹೆಚ್ಚು ಭಾರತದ ಉತ್ಪನ್ನಗಳಿವೆ. ಹಾಗಾಗಿ ಅವರಿದ್ದರೆ, ಇನ್ನೂ ಹೆಚ್ಚಿನ ಉತ್ಪನ್ನಗಳನ್ನ ಶಿಫಾರಸ್ಸು ಮಾಡುತ್ತಿದ್ದರೇನೋ.
ಬಾಬಾ ರಾಮದೇವ್ ತಮ್ಮ ಅಸ್ತಿತ್ವ ತೋರಿಸುವ ಮುಂಚೆಯೇ ಬಿ.ಕೆ.ಎಸ್ ಅಯ್ಯಂಗಾರ್‌ರವರು ಯೋಗವನ್ನ ವಿದೇಶಗಳಲ್ಲಿ ಪ್ರಚುರಪಡಿಸಿದ್ದರು. ಜೊತೆಗೆ ಅಯ್ಯಂಗಾರ್ ಅವರು ಬರೆದ ಯೋಗ ಪುಸ್ತಕ ಕನ್ನಡದಲ್ಲೂ ಲಭ್ಯವಿದೆ. ಪ್ರಾಣಾಯಾಮದ ಪ್ರತಿ ವಿಧಾನಗಳನ್ನ, ಅದರ ಆಚರಣೆಗಳನ್ನ, ವೈಜ್ಞಾನಿಕ ಹಿನ್ನೆಲೆಯನ್ನ, ಜೈವಿಕ ಬದಲಾವಣೆಗಳನ್ನ ಅತ್ಯಂತ ವ್ಯವಸ್ಥಿತವಾಗಿ ದಾಖಲಿಸಿದ್ದು ಅಯ್ಯಂಗಾರರು. ಬಾಬಾ ಪ್ರಾಣಾಯಾಮಕ್ಕೆ “ಮಾಸ್ ಲುಕ್” ನೀಡಿದರು. ಜನಸಾಮಾನ್ಯರಿಗೆ ತಲುಪಿಸಿದ್ದು ಅವರ ಹಿರಿಮೆ.
ಇವೆಲ್ಲವೂ ಸರಿ. ಆದರೆ, ಏಡ್ಸ್ ಗುಣಪಡಿಸ್ತೀನಿ, ಅಲ್ಜಮೈರ್ ಗುಣಪಡಿಸ್ತೀನಿ. ಔಷಧಿ ತಯಾರು ಮಾಡಿದೀನಿ ಅಂತಾ ಮಾತನಾಡಿ ರಾಮದೇವ್ ಬಾಬಾ ಜನರ ಕಣ್ಣಲ್ಲಿ ಹಗುರಾಗಿಬಿಡುತ್ತಾರೆ. ದಿವ್ಯ ಯೋಗ ಫಾರ್ಮಸಿಯ ವೆಬ್ ಸೈಟಿನಲ್ಲಿ ಒಬ್ಬ ವ್ಯಕ್ತಿ ತನಗೆ ಹೆಚ್.ಐ.ವಿ ಪಾಸಿಟಿವ್ ಇದ್ದು, ತಮ್ಮಲ್ಲಿ ಗುಣಪಡಿಸುವ ಔಷಧಿ ಇದೆಯೇ ಎಂದು ಕೇಳಿದ್ದರು. ಅಲ್ಲಿ ಉತ್ತರವಾಗಿ ನಮ್ಮನ್ನು ಬಂದು ಭೇಟಿ ಮಾಡಿ ಎಂದು ಫೋನ್ ನಂಬರ್ ಕೊಡಲಾಗಿದೆಯೇ ಹೊರತು ಹೆಚ್.ಐ.ವಿ. ಗುಣಪಡಿಸುವ ಬಗ್ಗೆ ಯಾವುದೇ ವಿಶ್ವಾಸವನ್ನ ವ್ಯಕ್ತಪಡಿಸಿಯೂ ಇಲ್ಲ. ಹೇಳಿಕೊಂಡೂ ಇಲ್ಲ. (ಚಿತ್ರದಲ್ಲಿ ಇದರ snap shot ಇದೆ) ಈ ವಿಷಯದಲ್ಲಿ ಮತ್ತು ಬಾಯಿಗೆ ಬಂದಂತೆ ಮಾತಾಡುವ ವಿಷಯದಲ್ಲಿ ರಾಮದೇವ್ ಮಾತ್ರ ಒಬ್ಬ ಹುಂಬ. ರಾಮದೇವ್ ಬಾಬಾ ಸ್ವಲ್ಪ ಪ್ರಬುದ್ಧತೆ ಮೆರೆದದ್ದು ಇತ್ತೀಚೆಗೆ. ದೆಹಲಿ ಅತ್ಯಾಚಾರ ಪ್ರಕರಣದ ನಂತರ ಎಲ್ಲ ದೊಡ್ಡ ದೊಡ್ಡ ವ್ಯಕ್ತಿಗಳು ಅಡಸಾ ಬಡಸಾ ಮಾತಾಡುವಾಗ ಬಾಬಾಗೂ ಪತ್ರಕರ್ತರು ಮೈಕು ಹಿಡಿದಿದ್ದರು. ಯೋಗದ ಬಗ್ಗೆ ಪ್ರಶ್ನೆ ಕೇಳಿ, ಭೋಗದ ಬಗ್ಗೆ ಅಲ್ಲ ಅಂದು ನಕ್ಕು ತಪ್ಪಿಸಿಕೊಂಡಿದ್ದರು.
ಮುಂದಿನ ಬದಲಾವಣೆಗಳೇನಾಗಬಹುದು? ಯಾರಿಗೆ ಲಾಭ – ಯಾರಿಗೆ ಲುಕ್ಸಾನು?
೧. ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆ ಪಾಲಿನಲ್ಲಿ ಮಹತ್ತರ ಪಾಲನ್ನ ರಾಮ್ ದೇವ್ ಕಂಪನಿ ಪಡೆದುಕೊಳ್ಳಬಹುದು.
೨. ದೇಶೀಯ ಬಹುರಾಷ್ಟ್ರೀಯ ಕಂಪನಿಗಳನ್ನೂ ಮುಳುಗಿಸಬಹುದು. (ಡಾಬರ್ ನಂಥವನ್ನ)/ ಸಂಕಷ್ಟಕ್ಕೆ ತಳ್ಳಬಹುದು.
೩. ಮುಂಬರುವ ದಿನಗಳಲ್ಲಿ ಪತಂಜಲಿ ಯೋಗಪೀಠ, ದಿವ್ಯ ಯೋಗ ಫಾರ್ಮಸಿ ನೆಟ್‍ವರ್ಕನ್ನ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಬಹುದು.
೪. ಡಾಬರ್‌ನಂಥ ಕಂಪನಿಗಳಿಗೆ ಸಧ್ಯಕ್ಕೆ ನುಂಗಲಾರದ ತುತ್ತಾಗಿರೋದು ರಾಮದೇವ್ ಬಾಬಾ. ದಿವ್ಯ ಯೋಗ ಫಾರ್ಮಸಿಯ ಎಲ್ಲ ಪ್ರಾಡಕ್ಟ್‌ಗಳಿಗೆ ರಾಮದೇವ್‍ರವರ ಖ್ಯಾತಿಯ ಬೆಂಬಲವಿದೆ. ಬೇರೆ ಕಂಪನಿಗಳು ಹೊಸ ಯೋಗದ ಸ್ವಾಮೀಜಿಗಳನ್ನ ಸೃಷ್ಟಿಸಿಕೊಳ್ಳಬೇಕಾಗಬಹುದೇನೋ?