ಭ್ರಷ್ಟಾಚಾರದ ವಿರುದ್ದ ಹೋರಾಟದಲ್ಲಿ ನಾವು ರಾಮದೇವ ಬಾಬಾನನ್ನ ಬೆಂಬಲಿಸುವ ಸಂದಿಗ್ಥತೆಯಲ್ಲಿದ್ದೇವೆ.

ಸಂಪಾದಕೀಯರವರು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.

ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ!

ಇದಕ್ಕೆ ಇನ್ನೊಂದು ಮಜಲು ಇದೆ. ಅದನ್ನ ನೋಡುವ ಪ್ರಯತ್ನವಿದು.

ನಾವು ಪ್ರಜಾಪ್ರಭುತ್ವದ, ಪ್ರಜ್ಞಾವಂತಿಕೆಯ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ.

ರಾಮದೇವ ಬಾಬಾ ಕೂಡಾ ಸಾಯಿಬಾಬಾನಂತೆ ಹೈಪ್‍ಗಳನ್ನೇ ಸೃಷ್ಟಿ ಮಾಡಿ ಜನರನ್ನ ಮರಳು ಮಾಡುತ್ತಿರುವುದು. ರೊಕ್ಕ ಮಾಡುತ್ತಿರುವುದು.

ಆದರೆ, ಒಂದು ಪ್ರಬಲವಾದ ಅನುಮಾನವೂ ಕಾಡುತ್ತದೆ. ನಮ್ಮ ಜನ ಹಂಗೇ ಕೇಳಿದರೆ ರೊಕ್ಕ ಬಿಚ್ಚಲ್ಲ, ರೊಕ್ಕ ಬಿಚ್ಚುವುದಿರಲಿ ತಿರುಗಿ ಮೂಸಿ ನೋಡುವುದೂ ಇಲ್ಲ. ದೈವತ್ವ ಅನ್ನೋದು ಅಷ್ಟರ ಮಟ್ಟಿಗೆ ನಮ್ಮ ದೇಶವನ್ನ ಆವರಿಸಿಬಿಟ್ಟಿದೆ. ದೇವಮಾನವ ಬೂದಿಕೊಡ್ತಾನೆ, ಕ್ಯಾನ್ಸರ್ ವಾಸಿಮಾಡ್ತಾನೆ, ಕಂಡ ಕಂಡ ರೋಗಗಳನ್ನ ವಾಸಿಮಾಡ್ತಾನೆ ಅಂತಾ ಪ್ರಚಾರ ಸಿಕ್ಬಿಟ್ರೆ ಸಾಕು ಜನ ಮುಗಿ ಬೀಳ್ತಾರೆ. ಅದಕ್ಕೆ ವಿದ್ಯಾವಂತರೂ ಬೆಂಬಲಿಸವುದು ವಿಪರ್ಯಾಸ ಮತ್ತು ದುರಂತ.

ಈ ರಾಮದೇವ ಬಾಬಾಗಳು, ಸಾಯಿಬಾಬಾಗಳು ಎಲೆಕ್ಷನ್‍ಗೆ ನಿಂತು ಆಡಳಿತ ಮಾಡಿದ್ರೆ, ಇವರೂ ಏನೂ ಸುಧಾರಣೆ ಮಾಡಕ್ ಆಗ್ತಾ ಇರ್ತಿರ್ಲಿಲ್ಲ. ಪ್ರತೀಸಲವೂ “ಅತಿ ಆಶಾವಾದ”ವು ಆಶಾಭಂಗದಲ್ಲೇ ಕೊನೆಗೊಳ್ಳುತ್ತದೆ. ಸರಿಯಾಗಿ ೩ ವರ್ಷಗಳ ಹಿಂದೆ ಯಡ್ಯೂರಪ್ಪನನ್ನ ಜನ ಸುಧಾರಣೆಯ ಹರಿಕಾರ, ಹೊಸತನವನ್ನ ತರಬಲ್ಲಾತ ಅಂತಲೇ ಬಲವಾಗಿ ನಂಬಿದ್ದರು. ಆ ನಂಬಿಕೆಗಳೆಲ್ಲವೂ ಠುಸ್ ಆಗಿವೆ. ಆಶಾವಾದವು ಅತಿಯಾದಾಗ ನಿರಾಸೆ ಮೂಡಿಸುತ್ತದೆ. ಅದು ಪ್ರಜಾಪ್ರಭುತ್ವದ ಮಟ್ಟಿಗೆ ನೂರಕ್ಕೆ ನೂರು ಸತ್ಯ. ಈಗ ರಾಮದೇವ ಬಾಬಾ ಸತ್ಯಾಗ್ರಹ ಮಾಡಿ, ಕಪ್ಪು ಹಣ ತರ್ತಾರೋ ಬಿಡ್ತಾರೋ ಬಿಡಿ. ಆದ್ರೆ, ಪೊಲಿಟಿಕಲಿ ಇನ್ನೂ ಸ್ಟ್ರಾಂಗ್ ಆಗ್ತಾರೆ. ಅವರ ಮಾತನ್ನ ತೆಗೆದು ಹಾಕುವುದು ಸುಲಭವಾಗುವುದಿಲ್ಲ. ಇದೇ ಜನಪ್ರಿಯತೆಯನ್ನ ಬಳಸಿಕೊಂಡು ಅವರು ರಾಜಕೀಯ ಪಕ್ಷವನ್ನ ಸ್ಥಾಪಿಸಬಹುದಾದ ಸಕಲ ಸಾಧ್ಯತೆಗಳೂ ಇವೆ. ಆದ್ರೆ, ನಮ್ಮ ಯಡ್ಯೂರಪ್ಪನ ಮೇಲೆ ನಾವು ಆಸೆ, ವಿಶ್ವಾಸಗಳನ್ನ ಇಟ್ಟುಕೊಂಡದ್ದು ಠುಸ್ ಆದಂತೆ ಬಾಬಾ ವಿಷಯದಲ್ಲೂ ಆಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರ ಹಾಕಿದವರಿಗೆ ಮಾತ್ರ ಗೊತ್ತಾಗುತ್ತದೆ.

ಆದರೆ, ಇಲ್ಲಿ ಪ್ರಶ್ನೆ ಇರೋದು ಬಾಬಾನನ್ನ ಬೆಂಬಲಿಸಬೇಕೋ ಅಥವಾ ಬೇಡವೋ ಅನ್ನೋದು. ರಾಜಕೀಯೇತರ ವ್ಯಕ್ತಿಯೊಬ್ಬ ಸರ್ಕಾರದ ಜುಟ್ಟು ಹಿಡ್ಕಂಡು ಅಲ್ಲಾಡಿಸುವ ತಾಕತ್ತಿರುವುದು ಬಾಬಾನಂಥವರಿಗೆ ಮಾತ್ರ ಅನ್ನೋದು ವೈರುಧ್ಯವೂ ಹೌದು ವಿಪರ್ಯಾಸವೂ ಹೌದು. ಆದರೆ, ಸಧ್ಯದ ಭ್ರಷ್ಟಾಚಾರದ ವಿರುದ್ದ ಹೋರಾಟದಲ್ಲಿ ನಾವು ರಾಜಕೀಯೇತರ ವ್ಯಕ್ತಿಯೊಬ್ಬನನ್ನ ಬೆಂಬಲಿಸುವ ಸಂದಿಗ್ಥತೆಯಲ್ಲಿದ್ದೇವೆ. ಹಾಗಾಗಿ ನಾನು ರಾಮದೇವ ಬಾಬಾನನ್ನ ಬೆಂಬಲಿಸುತ್ತೇನೆ.

ಗಣೇಶ್ ಕೆ