ಪ್ರೀತಿಯ ಮೇಷ್ಟ್ರು ಸುಬ್ಬಣ್ಣ ಭಟ್ಟರು

ಡಾ.ಸುಬ್ಬಣ್ಣ ಭಟ್ಟರು ಮಂಗಳೂರಿನ ಸೂರತ್ಕಲ್‍ನ ನ್ಯಾಷನಲ್ ಇನ್ಸ್ಟಿ‍ಟ್ಯೂಟ್ ಆಫ್ ಟೆಕ್ನಾಲಜಿ (NITK, Suratkal) ನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾರಿದ್ದವರು. ಸ್ನಾತಕ ಪೂರ್ವ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನ ಎನ್.ಐ.ಟಿ.ಕೆ. ನಲ್ಲೇ ಓದಿದವರು. ನಂತರ Ph.D ಪದವಿಯನ್ನ IIT, Kanpur ನಲ್ಲಿ ಪಡೆದವರು. ಸಧ್ಯಕ್ಕೀಗ ಹುಬ್ಬಳ್ಳಿಯ ಸೆಮಿ ಕಂಡಕ್ಟರ್ ಕಂಪನಿ, ಸಂಕಲ್ಪ್ ಸೆಮಿ ಕಂಡಕ್ಟರ್ ಕಂಪನಿಯ ಟೆಕ್ನಿಕಲ್ ಅಡ್ವೈಸರ್. ಕೆ.ಎಲ್.ಇ.ಐ.ಟಿ ಕ್ಯಾಂಪಸ್ ನಲ್ಲಿರುವ ekLakshya VLSI R&D Centre ನ ಮುಖ್ಯಸ್ಥರು.

Dr. P. Subbanna Bhat

Dr. P. Subbanna Bhat

ಅವರು ಒಬ್ಬ ಸೀದಾ ಸಾದಾ ವ್ಯಕ್ತಿ. ನಾನು ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನಲ್ಲಿ ೨೦೦೮ರಲ್ಲಿ ಎಂ.ಟೆಕ್ ಓದುವಾಗ ಅವರು Digital and Analog Mixed Mode Circuits ಕಲಿಸುತ್ತಿದ್ದರು. ಟ್ರಾನ್ಸಿಸ್ಟರ್, ಮಾಸ‌ಫೆಟ್‌ಗಳಿಂದ ಸಿಲೆಬಸ್ ಇದ್ದರೂ, ಅವರು ಶುರು ಮಾಡಿದ್ದು ಚಾರ್ಜ್, ಪೊಟೆನ್ಷಿಯಲ್, ಕರೆಂಟ್, ಕರೆಂಟ್ ಡೆನ್ಸಿಟಿ, ಕಂಡಕ್ಟರ್, ಸೆಮಿ ಕಂಡಕ್ಟರ್, ಕಂಡಕ್ಷನ್ ಬ್ಯಾಂಡು, ವೇಲೆನ್ಸ್ ಬ್ಯಾಂಡು, ಪಿ.ಎನ್. ಜನ್ಷನ್ ಡಯೋಡು, ಅದಾದ ಮೇಲೆ ಟ್ರಾನ್ಸಿಸ್ಟರ್, ಮಾಸ್‌ಫೆಟ್…!

(ಇವನ್ನೆಲ್ಲ ಅವರು ಪಾಠ ಮಾಡುವಾಗ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ನೆನಪಾದವರು ದಾವಣಗೆರೆಯ ನನ್ನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಎಸ್.ಹಾಲಪ್ಪನವರು. ಅವರು ಹೇಳಿದ ಡೆಫ್ನೇಷನ್ನುಗಳು, ಕಾನ್ಸೆಪ್ಟ್ ಗಳು ಇನ್ನೂ ತಲೆಯಲ್ಲಿ ಉಳಿದಿವೆ. ಅದಕ್ಕೆ ನಾನು ಅವರಿಗೆ ಆಭಾರಿ. ಅವರ ಬಗ್ಗೆ ಇನ್ನೊಮ್ಮೆ ಬರೆಯುವೆ. )

ಇವೆಲ್ಲವೂ ಸಿಲೆಬಸ್ ನಲ್ಲಿ ಇರಲಿಲ್ಲ. ಇವೆಲ್ಲವುಗಳ ತಿರುಳು ತಿಳಿಯದೇ ಮುಂದೆವರಿಯುವಂತಿಲ್ಲ. ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳೇ ತುಂಬಾ ತಲೆ ತಿನ್ನುವುದು. ಆದರೆ, ಇವೆಲ್ಲವನ್ನ ಸ್ನಾತಕೋತ್ತರ ಪದವಿಯಲ್ಲಿ ಹೇಳುತ್ತಾ ಹೋದರೆ ಸಿಲೆಬಸ್ ಮುಗಿಸುವುದು ಯಾವಾಗ? ಹಲವಾರು ಫ್ರೊಫೆಸರ್ ಗಳಲ್ಲಿ ಒಂದು assumption ಇರುತ್ತದೆ. Fundamental ಗಳನ್ನ ಅವರು ಹಿಂದಿನ ಸೆಮಿಸ್ಟರ್ ಗಳಲ್ಲೇ ತಿಳಿದುಕೊಂಡಿರಬೇಕು. ಮತ್ತೆ ಪದವಿಯನ್ನ ಹೇಗೆ ಮುಗಿಸಿದರು? ನಮ್ಮದೇನಿದ್ದರೂ fundamental ಗಳ ಮೇಲೆ ಬಿಲ್ಡಿಂಗ್ ಕಟ್ಟುವ ಕಾರ್ಯ. ಆದರೆ, ಎಲ್ಲರಿಗಿಂತ ವಿಭಿನ್ನವಾಗಿ ಯೋಚಿಸುವ, ವಿಚಾರ ಮಾಡುವ ಪ್ರವೃತ್ತಿ ಸುಬ್ಬಣ್ಣ ಭಟ್ಟರದು. ಎಲ್ಲರೂ ಇದೇ ರೀತಿ ಉತ್ತರಗಳನ್ನೇ ಕೊಡುತ್ತಾ ಹೋದರೆ, ಸ್ನಾತಕೋತ್ತರ ಪದವಿಯ ಹಂತದಲ್ಲೂ ಸಣ್ಣ ಡೌಟುಗಳು ಹಾಗೇ ಉಳಿದುಬಿಟ್ಟರೆ ಮುಂದೆ ಇವರೆಲ್ಲ ಪ್ರಾಧ್ಯಾಪಕರಾಗುವವರು. ಇನ್ನು ಹುಡುಗರ ಗತಿ ಏನಾಗಬೇಕು ಅನ್ನೋ ಮುಂದಾಲೋಚನೆ ಅವರದು. ಇದೂ ಕೂಡಾ ನಾಡು ಕಟ್ಟುವ ಕೆಲಸ.

ನಮ್ಮ ದೇಶದಲ್ಲಿ ಉತ್ತಮ ಪ್ರಾಧ್ಯಾಪಕರ ತೀವ್ರ ಅಂದರೆ ತೀವ್ರ ಕೊರತೆ ಇದೆ. ತಮ್ಮ ಓದಿನಿಂದ, ಪರ್ಸೆಂಟೇಜಿನಿಂದ ನೌಕರಿ ಹಿಡಿದು ಪ್ರಾಧ್ಯಾಪಕ ಹುದ್ದೆಗೇರಬಹುದು. ಆದರೆ, “ಉತ್ತಮ ಪ್ರಾಧ್ಯಾಪಕ”ರಾಗುವುದು ಸುಲಭದ ಮಾತಲ್ಲ. “ಉತ್ತಮ” ಎಂಬುದನ್ನ ಬಿರುದಾಗಿ ಕೊಡುವುದು ನಮ್ಮ ಮೇಲಿನವರಲ್ಲ. ಪಾಠ ಕೇಳಿದ ಶಿಷ್ಯಂದಿರು. ಸ್ನಾತಕ ಪೂರ್ವ ಪದವಿ ತರಗತಿಗಳಲ್ಲಿ ಕೆಲವು ಕಬ್ಬಿಣದ ಕಡಲೆಯಂಥಾ ವಿಷಯಗಳನ್ನ ಕೆಲವು ಅನುಭವಿಗಳಿಂದಲೇ ಕೇಳಬೇಕು. ಆಗಲೇ ಆ ವಿಷಯದ ಒಳ-ಹೊರಗುಗಳು ತಿಳಿಯುತ್ತವೆ. ನೆನಪಿರಲಿ ವಯಸ್ಸು ಮತ್ತು ಅನುಭವ ಬೇರೆಯದೇ ರೀತಿಯಲ್ಲಿರುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳನ್ನ ಸವೆಸಿದ ಮಾತ್ರಕ್ಕೆ ವಿಷಯ ಜ್ಞಾನ ಬೆಳೆಯುತ್ತದೆ ಎಂದೇನಿಲ್ಲ. ಅದು ಖಾಲಿ ತಲೆಯ, ಬಿಳಿ ತಲೆಯ ಹಿರಿಯರ ಗ್ರಹಿಕೆಗಳಷ್ಟೆ. ಜ್ಞಾನ ಯಾವಾಗಲೂ ಶ್ರದ್ಧೆ ಮತ್ತು ಬದ್ಧತೆಯನ್ನ ಬಯಸುತ್ತವೆ. ಉಂಡಾಡಿ ಗುಂಡರಾಗಿ ಅಲೆದಾಡಿ, ಪಗಾರ ತೆಗೆದುಕೊಂಡು ಹತ್ತಿಪ್ಪತ್ತು ವರ್ಷ ಸವೆಸಿದರೆ ಯಾವ ವಿಷಯದಲ್ಲೂ ತಜ್ಞತೆ ದೊರೆಯುವುದಿಲ್ಲ. Experienced faculty ಅನ್ನೋ ಶಬ್ಧದ ಬಗೆಗೆ ಹೇಳುವಾಗ ಇದನ್ನೆಲ್ಲಾ ಹೇಳಬೇಕಾಗಿ ಬಂತು.

ಸುಬ್ಬಣ್ಣ ಭಟ್ಟರದು ಸಹಜ ನಗುವಿನ, ಪ್ರಶಾಂತ ಸ್ವಭಾವದ, ಕೌತುಕತೆಯನ್ನ ಹುಟ್ಟಿಸುತ್ತ, ವಿಷಯದ ಹರವುಗಳನ್ನ ಪರಿಚಯಿಸಿ ಆಳಕ್ಕಿಳಿಯುವ ಅದ್ಭುತ ಶೈಲಿ. ನಾವು ನಮ್ಮ ಗೆಳೆಯರು ಯಾರ ಕ್ಲಾಸು ಮಿಸ್ ಮಾಡಿದರೂ, ಸ್ವಲ್ಪ ಲೇಟಾದರೂ, ಸುಬ್ಬಣ್ಣ ಭಟ್ಟರ ಕ್ಲಾಸೆಂದರೆ ಎಂದೂ ಚಕ್ಕರ್ ಹಾಕಿದವರಲ್ಲ. ದಿನವೂ ಹೊಸದನ್ನ ಕಲಿಯುತ್ತಿದ್ದೆವು. ಚರ್ಚಿಸುತ್ತಿದ್ದೆವು. ನಾನು ಎಲ್ಲರಿಗಿಂತ ಹೆಚ್ಚಾಗಿ ಪ್ರಶ್ನೆ ಕೇಳುವ ಸ್ವಭಾವದವನು. ಪ್ರಶ್ನೆ ಎಂಥದ್ದೇ ಇರಲಿ. ಪ್ರಶಾಂತವಾಗಿ ಏನೂ ಗೊತ್ತಿಲ್ಲದ ವ್ಯಕ್ತಿಗೆ ಹೇಳುವಂತೆ ಹೇಳುತ್ತಿದ್ದರು. ಕೊನೆಗೆ Did I answer your question? ಅನ್ನುತ್ತಿದ್ದರು. ಏನೂ ಹೇಳದೇ ಇದ್ದರೆ, ಅಥವಾ ಗೊತ್ತಾಗಲಿಲ್ಲ ಎಂದರೆ ಮತ್ತೊಂದು ರೀತಿಯಲ್ಲಿ ಗೊತ್ತು ಮಾಡಿಸಲಿಕ್ಕೆ ಹೊರಡುತ್ತಿದ್ದರು. ಒಂದು ಚಾಕ್ ಪೀಸು, ಬೋರ್ಡು ಸಿಕ್ಕುಬಿಟ್ಟರೆ ಮುಗೀತು. ದುನಿಯಾ ತೋರಿಸಿಬಿಡುತ್ತಿದ್ದರು..! ಅವರು ಬೋರ್ಡಿನ ಮೇಲೆ ತೆಗೆಯುತ್ತಿದ್ದ ಚಿತ್ರಗಳಾದರೂ ಅಷ್ಟೇ. ಕರಾರುವಾಕ್..! ನೋಡಲಿಕ್ಕೇ ಒಂದು ಖುಷಿ. ಎಳೆಯುತ್ತಿದ್ದ ಪ್ರತಿ ರೇಖೆಗಳು ಬೋರ್ಡಿನ ಮೇಲೆ ದಾಖಲಾಗುವುದರ ಜೊತೆಗೆ ಮೆದುಳಿನಲ್ಲೂ ದಾಖಲಾಗುತ್ತಿದ್ದವು. ಅವರು ಒಂದು ರೀತಿಯಲ್ಲಿ ಗೂಗಲ್ ಇದ್ದಂತೆ. ಮಾಹಿತಿ, ಜ್ಞಾನ ಸಾಗರ. ಪಾಠದ ರೀತಿ ಒಂದು ರೀತಿ HTML ಪೇಜ್ ನಂತೆ. ಯಾವುದಾದರೂ terminology ಬಂದರೆ, ಅದರ ಬಗ್ಗೆ ಕೇಳಿದರೆ ಅದಕ್ಕೆ ಸಂಬಂಧಪಟ್ಟದ್ದೆಲ್ಲವನ್ನ ವಿವರಿಸಿ ಮತ್ತೆ ಪಾಠಕ್ಕೆ ಮರಳುವ ಅಪೂರ್ವ ತಾಳ್ಮೆ. ಒಂಥರಾ hyperlink ಮೇಲೆ ಕ್ಲಿಕ್ ಮಾಡಿದಂತೆ..! ಜ್ಞಾನವನ್ನ ಹಂಚಬೇಕೆಂಬ ಮಹತ್ ಹಂಬಲ ಅವರದು. ಹಲವು ಪ್ರಾಧ್ಯಾಪಕರು fundamental ಗಳ ಪ್ರಶ್ನೆ ಕೇಳಿದರೆ ಇದು ನನ್ನ ಕೆಲಸವಲ್ಲ ಅಂದುಬಿಡುತ್ತಾರೆ. ಇಲ್ಲವೇ ಇಷ್ಟು ದಿವಸ ಏನು ಕಲಿತಿರಿ ಅಂತಾ ಅಪಮಾನಿಸಿಬಿಡುತ್ತಾರೆ.

ಸುಬ್ಬಣ್ಣ ಭಟ್ಟರು Analog and mixed mode VLSI Design, signal processing, analog electronics ಗಳಲ್ಲಿ ಅತ್ಯಂತ ಪ್ರವೀಣರು, ಸಿದ್ಧಹಸ್ತರು. ದೇಶದ ಕೆಲವೇ ಕೆಲವು analog design ಪ್ರವೀಣರ ಪೈಕಿ ಒಬ್ಬರು.  ಸಾಫ್ಟ್ ವೇರ್ ಎಂಜಿನಿಯರುಗಳು ಲಕ್ಷ ಸಂಖ್ಯೆಯಲ್ಲಿರಬಹುದು. ಆದರೆ, ಸಿಲಿಕಾನ್ ಚಿಪ್ ಗಳನ್ನ ತಯಾರಿಸುವ ಮೊದಲು ಅದನ್ನ ವಿನ್ಯಾಸಗೊಳಿಸಬೇಕಾಗುತ್ತದೆ. ಆ ವಿನ್ಯಾಸ ಟ್ರಾನ್‌ಸಿಸ್ಟರ್‌ಗಳನ್ನ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸುವ ಮಹತ್ತರ, ಸಂಕೀರ್ಣಮಯ ಕೆಲಸ. ಮನೆ ಕಟ್ಟುವ ಮೊದಲು ಪ್ಲಾನ್ ರೆಡಿ ಮಾಡಿಕೊಂಡಂತೆ. ಪ್ಲಾನೇ ಸರಿ ಇಲ್ಲದಿದ್ದರೆ ಮನೆ ಬೀಳದಿರುತ್ತದೆಯೇ? ಹಾಗೆಯೇ ಎಲೆಕ್ಟ್ರಾನಿಕ್ ವಿನ್ಯಾಸ ಸರಿ ಇಲ್ಲದೇ ಚಿಪ್ ಗಳು ನಿರ್ದಿಷ್ಟ ಕೆಲಸ ನಿರ್ವಹಿಸಲಾರವು. ಅಂಥಾ ವಿನ್ಯಾಸವನ್ನ ಕಲಿಸುವ ವಿಶ್ವದ ಕೆಲವೇ ಕೆಲವು ಪ್ರಾಧ್ಯಾಪಕರ ಪೈಕಿ ಒಬ್ಬರು ಸುಬ್ಬಣ್ಣ ಭಟ್ಟರು. ಒಮ್ಮೆ ಹೇಳಿದ್ದರು analog design ನ್ನ ಮಾಡತಕ್ಕಂಹ ವ್ಯಕ್ತಿಗಳು, ಕರಗತ ಮಾಡಿಕೊಂಡವರು, ಸಂಕೀರ್ಣತೆಯನ್ನ ವಿಶ್ಲೇಷಿಸಿ ಅದಕ್ಕೆ ತಕ್ಕಂತೆ ಪರಿಹಾರ ಸೂಚಿಸಬಲ್ಲವರು ವಿಶ್ವದಲ್ಲಿ ಹುಡುಕಿದರೆ 500 ಮಂದಿ ಸಿಗಬಹುದು ಅಂತಾ. ಅದು ಇಂದಿಗೂ ನಿಜ.

ಮೊನ್ನೆ ಮೊನ್ನೆ ಸುಬ್ಬಣ್ಣ ಭಟ್ಟರು ನಮ್ಮ ಕಾಲೇಜಿನಲ್ಲಿ faculty development programme ನಲ್ಲಿ Basics of Digital signal processing ವಿಷಯದ ಬಗ್ಗೆ ತಲಾ ನಾಲ್ಕು ಗಂಟೆಗಳ ಅವಧಿಯಂತೆ ನಾಲ್ಕು ದಿನ ಕ್ಲಾಸು ತೆಗೆದುಕೊಂಡಿದ್ದರು. ಅವರ ಕ್ಲಾಸನ್ನ ನಾನು ಎಂದೂ ಮಿಸ್ ಮಾಡಿಕೊಳ್ಳುವುದಿಲ್ಲ. ಈ ಅವಧಿಯಲ್ಲೂ ಹೆಚ್ಚಿನ ಪ್ರಶ್ನೆಗಳನ್ನ ಕೇಳಿದ್ದೂ ನಾನೇ.(ಅದೇನೂ ಹೆಗ್ಗಳಿಕೆಯೇನಲ್ಲ.) ಬೇಸರಿಸದೇ ಉತ್ತರಿಸುವುದು ಭಟ್ಟರ  ಶೈಲಿಯಾದ್ದರಿಂದ ಎಲ್ಲದಕ್ಕೂ ಸಮಾಧಾನಕರ ಉತ್ತರ ಸಿಕ್ಕವು. Engineering Mathematics ಮತ್ತು Signal Processing ನಲ್ಲಿ ಬರುವ Fourier series, Fourier Transform, Laplace Transform, Z transform ಗಳನ್ನ ಅದೆಷ್ಟು ಆಸ್ಥೆಯಿಂದ, ಆಸಕ್ತಿಕರವಾಗಿ ತಿಳಿಸುತ್ತಾರೆಂದರೆ ಜೀವನದಲ್ಲಿ ಎಂದಿಗೂ ಆ ಪ್ರಶ್ನೆ ಉದ್ಭವಿಸಬಾರದು ಹಾಗೆ. Mathematics ನಲ್ಲಿ ಬರುವ ಈ ವಿಷಯಗಳನ್ನ ವಿದ್ಯಾರ್ಥಿಗಳು ಲೆಕ್ಕ ಮಾಡಲಿಕ್ಕೆ ಕಲಿತಿರುತ್ತಾರೆಯೇ ಹೊರತು ಅದರ ಉಪಯೋಗವಾಗಲೀ ಅದನ್ನ ಹೇಗೆ ಯಾವ ಯಾವ ಸಂದರ್ಭಗಳಲ್ಲಿ ಬಳಸಬೇಕೆಂಬುದರ ಬಗ್ಗೆ ಅರಿವಿರುವುದಿಲ್ಲ. ಆದ್ರೆ ಇವೆಲ್ಲವೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮ್ಯುನಿಕೇಷನ್ ನ ಜೀವಾಳ. ಇವರ ಪಾಠ ಕೇಳಿ ಪ್ರೇರಿತನಾಗಿಯೇ ಈ ಬಾರಿ Digital Signal Processing ಪಾಠ ಮಾಡುವ ಮಹತ್ತರ ಜವಾಬ್ದಾರಿಯನ್ನ ತೆಗೆದುಕೊಂಡಿದ್ದೇನೆ. ನನ್ನಂಥಾ ಹಲವಾರು ವ್ಯಕ್ತಿಗಳಿಗೆ ಅವರು ಸಾಕ್ಷಾತ್ ದೇವರು. ತತ್ವಜ್ಞಾನಿ, ಶಿಕ್ಷಣ ಕ್ಷೇತ್ರದ ಪರಿವರ್ತನೆಗೆ ಶ್ರಮಿಸುತ್ತಿರುವ ನಿಸ್ವಾರ್ಥಿ.

ಇಂಥವರ ನಿದರ್ಶನಗಳೇ ನಮ್ಮ ವಿದ್ಯಾರ್ಥಿಗಳಿಗೆ, ಯುವ ಪ್ರಾಧ್ಯಾಪಕರಿಗೆ ಸ್ಫೂರ್ತಿ. ಕಲಿಸಿದ ಮಾಸ್ತರಿಗೆ ಒಂದು ಪ್ರೀತಿಯ ಸಲಾಂ.

ಅವರ ಕೆಲವು ನುಡಿಗಳನ್ನ ಅವರ ಎನ್.ಐ.ಟಿ.ಕೆ. ವಿದ್ಯಾರ್ಥಿ ಕೌಶಿಕ್ ಸಂಗ್ರಹಿಸಿದ್ದಾರೆ. ಓದಿ.

  • Never do something that shall lower your esteem in your own eyes…..
  • There is no shortcut to success.
  • Be a Lamp.
  • If anything has to go wrong it will go wrong at right time.
  • Excellence is a reward by itself.
  • Dont do something because nobody is watching you, There is always somebody watching.
  • If you want to eat an elephant, cut it into small pieces (in a technical context).
  • Approximation is the birthright of an engineer.

ಆಕರಗಳು

ಕೌಶಿಕ್ ಬ್ಲಾಗ್

Technical advisor at Sankalp Semiconductors

Dr Subbanna Bhat’s Facebook profile.