ಒಂದು ದುರಂತದ ಸುತ್ತ…

    ನಿನ್ನೆ (೨೭ ಸೆಪ್ಟೆಂಬರ್) ನಮ್ಮ ದಾವಣಗೆರೆಯ ಡೆಂಟಲ್ ಕಾಲೇಜ್ ರೋಡಿನಲ್ಲಿ ಜಿ.ಎಂ.ಐ.ಟಿ ಬಸ್ ಹರಿದು ಸ್ಕೂಟಿ ಮೇಲೆ ಹೊರಟಿದ್ದ ತರಳುಬಾಳು ಕಾಲೇಜಿನ ಪ್ರಿಯಾಂಕ, ಪ್ರಥಮ ಪಿಯುಸಿ ಹುಡುಗಿ, ಸ್ಥಳದಲ್ಲೇ ಸಾವನ್ನಪ್ಪಿದಳು. ಡ್ರೈವರ್ ಲಕ್ಷ್ಮೀ ಫ್ಲೋರ್ ಮಿಲ್ ವರೆಗೂ ಬಸ್ ಓಡಿಸಿಕೊಂಡು ಹೋಗಿ, ನಂತರ ಪರಾರಿಯಾಗಿದ್ದಾನೆ. ಬಿ.ಜೆ.ಪಿ ಎಮ್ಮೆಲ್ಲೆ, ಎಂಪಿ ಇರೋ ದಾವಣಗೆರೆಯಲ್ಲಿ ಪ್ರಕರಣವನ್ನ ಬಯಲಿಗೆ ಬರದಂತೆ ತಡೆಯುವುದು, ಮುಚ್ಚಿ ಹಾಕುವುದು ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ಅದೂ ಬಿ.ಜೆ.ಪಿ ಸರ್ಕಾವಿರುವ ಕರ್ನಾಟಕದಲ್ಲಿ.

 

    ಆದರೆ ಆ ಹುಡುಗಿ..? ಮರಳಿ ಬರುತ್ತಾಳಾ..? ಇರುವ ಒಬ್ಬಳೇ ಮಗಳು, ಹದಿನೆಂಟು ವರ್ಷ ಸಾಕಿ ಸಲುಹಿದ ಮಗಳು, ಬಂಗಾರ ಬಾಳು ಬಾಳಬೇಕಾದವಳು ಹೀಗೆ ಸತ್ತುಹೋದರೆ ತಂದೆ ತಾಯಿಗಳ ಗತಿಯೇನು..? ಆ ವೇದನೆ, ನೋವು, ಕರುಳ ಮಿಡಿತ ಇವುಗಳಿಗೆ ಸಮಾಧಾನ ಹೇಳಲಾಗುವುದುಂಟೇ..?

 

    ೨೦೦೧ರಲ್ಲಿ ಶುರುವಾದ ಜಿ.ಎಂ.ಐ.ಟಿ ಉತ್ತಮವಾದ ಬೆಳವಣಿಗೆಯನ್ನೇ ತೋರಿತು. ನಾಲ್ಕು ವರ್ಷ ಪೂರೈಸಿದ ಮೂರನೇ ಬ್ಯಾಚ್ ವಿದ್ಯಾರ್ಥಿಗಳು ಹೊರ ಬರುವ ಹೊತ್ತಿಗೆ ಒಂದು ಮಟ್ಟಿಗೆ established ಆಗಿತ್ತು. ಈಗ ಹೊರಬಂದ ಜುಲೈ ೨೦೦೮ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಉತ್ತಮವಾದ ಕ್ಯಾಂಪಸ್ ಸೆಲೆಕ್ಷನ್ ಅವಕಾಶಗಳು ಸಿಕ್ಕವು. ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರ ದೂರದೃಷ್ಟಿಯಿಂದಾಗಿ ದಾವಣಗೆರೆಯಲ್ಲಿ ಜಿ.ಎಂ.ಐ.ಟಿ ಶುರುವಾಯಿತು. ಅವರ ಎಲ್ಲ ಮಕ್ಕಳಿಗೆ ಬೆಂಗಳೂರಿನಲ್ಲಿ ಕಾಲೇಜು ಕಟ್ಟಬೇಕೆಂಬ ಹಂಬಲವಿತ್ತು. ಜಿ.ಎಂ.ಐ.ಟಿ ಉತ್ತಮ infrastructure ಹೊಂದಿದೆ. ವಿಧಾನ ಸೌಧದಂಥಾ ಕಟ್ಟಡವಿದೆ. ಐ.ಟಿ ಕಂಪನಿಗಿರುವ ಕನ್ನಡಿಗಳ ಖದರ್ರಿದೆ.

 

    ಆದರೆ ಇವೆಲ್ಲವುಗಳಿಗೆ ಪೂರಕವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಮೊದಲ ಆದ್ಯತೆಗಳಲ್ಲಿ ಒಂದಾಗಬೇಕು. ಆದರೆ, ಜಿ.ಎಂ.ಐ.ಟಿ ಮೇಲಿರುವ ಪ್ರಮುಖ ಆರೋಪವೆಂದರೆ, ಇಲ್ಲಿ ಮೆಟ್ಟಿಲಿನ, ನೆಲದ ಗ್ರಾನೈಟ್ ಕಲ್ಲು ಒಡೆದು ಹೋದರೆ, ನಾಳೆಯೇ ಸರಿ ಮಾಡಿಸುತ್ತಾರೆ, ಆದರೆ ಒಬ್ಬ ಒಳ್ಳೆ ಲೆಕ್ಚರರ್ ಬಿಟ್ಟು ಹೋದರೆ ಆ ಸ್ಥಳಕ್ಕೆ ಸಮರ್ಥರನ್ನ ಕರೆತರುವ ಕೆಲಸ ಆಗುವುದೇ ಇಲ್ಲ. ಜಿ.ಎಂ.ಐ.ಟಿ ಗೆ ಇನ್ನೂ ಹೆಚ್ಚಾಗಿ ಬೆಳೆಯುವ ಅವಕಾಶಗಳಿದ್ದವು. ಜಿ.ಎಂ.ಐ.ಟಿ.ಯ ಜೊತೆಗೇ  ಶುರುವಾದ ಓರಗೆಯ ಕಾಲೇಜುಗಳಲ್ಲೇ ಇದು superb ಎನ್ನುವಂತೆ performance ತೋರಿತ್ತು. ಇನ್ನೇನು ಬಿ.ಐ.ಇ.ಟಿ.ಯನ್ನೇ ಹಿಂದಿಕ್ಕುತ್ತದೆ ಅನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿತು. ಆದರೆ, ಆದ್ರೆ, ಅದಕ್ಕೆ ಬೇಕಾದ Dedicationನ್ನ ಮ್ಯಾನೇಜ್‍ಮೆಂಟ್ ತೋರಲಿಲ್ಲ. ಉತ್ತಮ ಅನುಭವಿ ಲೆಕ್ಚರರ್‌ಗಳನ್ನ ಕರೆತರಬಹುದಾಗಿತ್ತು. ಆದ್ರೆ. ಇಲ್ಲಿ money matter ಜೊತೆಗೆ ಪಿ.ಹೆಚ್.ಡಿ. ಮಾಡಿದವರಿಗೆ, ಮಾಡುವವರಿಗೆ ರಿಸರ್ಚ್‍ಗಾಗಿ ಇರುವ, ಒದಗಿಸಲಾಗುವ, ಅವರ ಬೆಳವಣಿಗೆಗಾಗಿ ಇರುವ ಅವಕಾಶಗಳೂ ಪರಿಗಣಿಸಲ್ಪಡುತ್ತವೆ. ಕಾಲೇಜಿನ ಸಿಂಗಾರಕ್ಕೆ ಖರ್ಚು ಮಾಡುವುದರಲ್ಲಿ ಒಂದಿಷ್ಟನ್ನ ಅನುಭವೀ ಲೆಕ್ಚರರ್‌ಗಳನ್ನ ಕರೆತರಲು ಉಪಯೋಗಿಸಿದ್ದರೆ, ಕಾಲೇಜಿನ ಉನ್ನತಿ, ಅಭಿವೃದ್ಧಿ, Status ಎಲ್ಲವೂ ಏರುಗತಿಯಲ್ಲೇ ಸಾಗುತ್ತಿದ್ದವು. ಐ.ಐ.ಟಿ ಮಂದಿ ಸಿಗದಿದ್ದರೂ ಸೂರತ್ಕಲ್‍ನಂಥ ಕಾಲೇಜಿನ ನಿವೃತ್ತ ವ್ಯಕ್ತಿಗಳನ್ನ ಕರೆತರಬಹುದಾಗಿತ್ತು. ಪ್ರತಿಯೊಂದು ಬ್ರಾಂಚಿನಲ್ಲಿ ಎಂ.ಟೆಕ್, ಪಿ.ಹೆಚ್.ಡಿ ಮಾಡಿದ ಮಂದಿ ಎಷ್ಟಿದ್ದಾರೆ ಅಂತಾ ಗಮನಿಸಿದರೆ, ಹುಡುಗರಿಗೆ ಆದರ್ಶಪ್ರಾಯವಾದ, ಸ್ಫೂರ್ತಿದಾಯರಾದ ಲೆಕ್ಚರರ್‌ಗಳು ಎಷ್ಟು ಮಂದಿ ಇದ್ದಾರೆ ಅಂತಾ ಕಣ್ಣು ಹಾಯಿಸಿದರೆ ನಿರಾಶೆ ಕವಿಯುತ್ತದೆ. ನಿರೀಕ್ಷಿಸಿದ ಮಟ್ಟಕ್ಕೆ ಕಾಲೇಜು ಏರಲೇ ಇಲ್ಲ. ಹೌದು, ನಿಜಕ್ಕೂ ಜಿ.ಎಂ.ಐ.ಟಿಯ ಅಡಿಟೋರಿಯಂ ಹಾಲ್ ನಿಜಕ್ಕೂ ಸುತ್ತಮುತ್ತಲಿನ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲೂ ಇಲ್ಲ. ಯಾವ ಒಂದು ಕಾರ್ಪೊರೇಟ್ ಕಲ್ಚರ್‌‍ಗೂ ಸರಿಸಮವೆಂಬಂತೆ ಕಾಲೇಜಿನ infrastructure ಇದೆ ಎಂಬುದನ್ನ ನಿರ್ವಿವಾದಿತವಾಗಿ ಒಪ್ಪಬಹುದು.

 

    ಆದ್ರೆ, ಇವೆಲ್ಲವುಗಳಿಗೆ ಕಳಶವಿಟ್ಟಂತೆ ಶಿಕ್ಷಣದ ಗುಣಮಟ್ಟವೂ ಇರಬೇಕು ಎಂದು ಬಯಸುವುದರಲ್ಲಿ ತಪ್ಪೇನಿದೆ..?

 

    ಒಂದೇ ಬಿಲ್ಡಿಂಗ್‌ನಲ್ಲೇ ಬೇರೆ ಬೇರೆ ಅಂತಸ್ತುಗಳಲ್ಲಿ ಬೇರೆ ಬೇರೆ ಬ್ರಾಂಚುಗಳು ನೆಲೆಸಿರುವುದೂ ಕೂಡಾ Inter branch interferenceಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಲ್ಲ ಕಾಲೇಜುಗಳಲ್ಲಿ ಪ್ರತಿಯೊಂದು ಬ್ರಾಂಚ್‍ಗೆ ಬೇರೆಯಾದ ಕಟ್ಟಡವೇ ಇರುತ್ತದೆ. ಇದರಿಂದ ಪ್ರತಿಯೊಂದು ಬ್ರಾಂಚ್ ಕೂಡಾ ತನ್ನದೇ ಆದ ರೀತಿಯಲ್ಲಿ ಬೆಳೆಯುತ್ತ ಹೋಗಲಿಕ್ಕೆ ಅವಕಾಶಗಳಿರುತ್ತವೆ. ಆದರೆ ಒಂದೇ ಕಟ್ಟಡವಿದ್ದಾಗ, ಪ್ರಿನ್ಸಿಪಾಲರು ಎಲ್ಲ ಬ್ರಾಂಚುಗಳ ಮೇಲ್ವಿಚಾರಣೆ ನೆಡೆಸುವುದಕ್ಕಿಂತ ಎಲ್ಲ ಬ್ರಾಂಚುಗಳಲ್ಲಿ ಹಿಡಿತ ಸಾಧಿಸುವತ್ತ ಸಾಗುವುದರಿಂದ ಬ್ರಾಂಚುಗಳು autonomous ಆಗಿ ಕೆಲಸ ಮಾಡಲಿಕ್ಕೆ ಅಡ್ಡಿಯಾಗುತ್ತದೆ. ಪ್ರತಿಸಲವೂ ಪ್ರಿನ್ಸಿಪಾಲರು ಬ್ರಾಂಚ್ ಹೆಚ್.ಓ.ಡಿ.ಗಳನ್ನ ಸಣ್ಣ ಸಣ್ಣ ವಿಷಯಗಳಿಗೆ ಪ್ರಶ್ನಿಸುವುದರಿಂದ, ಅವರು ಲೆಕ್ಚರರ್‌ಗಳ ಮೇಲೆ ರೇಗುತ್ತಾರೆ, ಲೆಕ್ಚರರ್‌ಗಳು ಹುಡುಗರ ಮೇಲೆ ರೇಗುತ್ತಾರೆ. ಇದು ಎಲ್ಲ ಕಡೆ ನೆಡೆಯುವ ಸಂಗತಿಯಾದರೂ, ವಿದ್ಯಾರ್ಥಿಗಳಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗುವಂತೆ ಮಾಡಬಾರದು.

 

    ಅನಾಹುತಕ್ಕೆ ಸಂಬಂಧಿಸಿದಂತೆ ಇದನ್ನೆಲ್ಲಾ ಏಕೆ ಹೇಳಬೇಕಾಯಿತೆಂದರೆ, ಒಂದು ಬೇಜವಾಬ್ದಾರಿತನಕ್ಕೆ, ಲೋಪದೋಷಕ್ಕೆ ತನ್ನದೇ ಆದ internal matters ಕಾರಣವಾಗಿರುತ್ತವೆ ಅಂತಾ ತಿಳಿಸಲಿಕ್ಕೆ.

 

    ಡ್ರೈವರ್ ಮಾಡಿದ ಅನಾಹುತಕ್ಕೆ ಕಾಲೇಜಿನ ಮ್ಯಾನೇಜ್‍ಮೆಂಟ್ ನೇರ ಹೊಣೆಯಾಗಿರಲಾರದು. ಆದರೆ, ಪರೋಕ್ಷವಾಗಿ..? ಕೆಲ ತಿಂಗಳ ಹಿಂದೆ ಕಾಲೇಜು ಬಸ್ಸು ಬಿ.ಡಿ.ಟಿ ಕಾಲೇಜಿನ ಕಾಂಪೋಂಡಿಗೆ ಗುದ್ದಿ ಕಾಂಪೋಂಡು ಬಿದ್ದುಹೋಗಿತ್ತು. ಆ ಅನಾಹುತಕ್ಕೆ ಮಳೆಯ, ಕೆಸರಿನ ಕಾರಣ ಕೊಡಬಹುದಾದರೂ ಜೀವಹಾನಿ ಸಂಭವಿಸಿರಲಿಲ್ಲ. ಆಗಲೇ ಮುನ್ನೆಚ್ಚರಿಕೆ ವಹಿಸಿ ಡ್ರೈವರುಗಳನ್ನ ಹದ್ದುಬಸ್ತಿನಲ್ಲಿಡುವಂತೆ ಆದೇಶಿಸಬಹುದಾಗಿತ್ತು. ಆರೇಳು ಬಸ್ಸುಗಳಲ್ಲಿ ಐನೂರಕ್ಕೂ ಹೆಚ್ಚು ಹುಡುಗ-ಹುಡುಗಿಯರು ಓಡಾಡುವಾಗ ಎಚ್ಚರಿಕೆ ವಹಿಸುವುದು ಕರ್ತವ್ಯ. ಹುಡುಗರ ಬಸ್ಸು, ಹುಡುಗಿಯರ ಬಸ್ಸುಗಳು ಒಮ್ಮೆಗೇ ಹೊರಟಾಗ, ರೇಸಿಗೆ ಬಿಟ್ಟಂತೆ ಕೆಲ ಡ್ರೈವರ್‌ಗಳು ಡ್ರೈವ್ ಮಾಡುವುದೂ ಇತ್ತು. ಇವೆಲ್ಲವುಗಳ ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕಿತ್ತು. ಇಲ್ಲಿ ನಾನು ಆಡಳಿತ ಮಂಡಳಿಯ ಬಗ್ಗೆಯೇ ಆರೋಪಿಸುವುದಿಲ್ಲ. ಚಾಲಕರ ಅಜಾಗರೂಕತೆಯೂ ಇದೆ. ಆದ್ರೆ, ಮೇಲ್ವಿಚಾರಣೆಯಲ್ಲಿರುವವರು ಟೈಮ್ ಲಿಮಿಟ್‍ಗಳನ್ನ ಹಾಕಿ ಒತ್ತಡದಲ್ಲಿ ಚಾಲಕರಿಗೆ ಗಾಡಿ ಓಡಿಸುವಂತೆ ಮಾಡುವುದರಿಂದಲೂ ಅನಾಹುತಗಳು ಸಂಭವಿಸಬಹುದು.

 

    ಎ.ಐ.ಸಿ.ಟಿ.ಯು. ಕಾನೂನಿನ ಪ್ರಕಾರ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪಿ.ಯು.ಸಿ ಕಾಲೇಜುಗಳನ್ನ ನೆಡೆಸಬಾರದೆಂಬ ಕಾನೂನಿದೆ. ಮೊನ್ನೆ ಮೊನ್ನೆ ಎ.ಐ.ಸಿ.ಟಿ.ಯು. ಸಮಿತಿಯವರು ಬಂದಾಗ ಅದನ್ನ “ಸರಿಮಾಡಿಕೊಂಡರು” ಎಂಬ ಆರೋಪವಿದೆ. ಇರುವ ಎಂಜಿನಿಯರಿಂಗ್ ಕಾಲೇಜನ್ನೇ ಉತ್ತಮಿಕೆಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಬದಲು ಒಂದೇ ಕ್ಯಾಂಪಸ್‌ನಲ್ಲಿ, ಒಂದೇ ಬಿಲ್ಡಿಂಗ್‍ನಲ್ಲಿ ಪಿ.ಯು.ಸಿ, ಎಂ.ಬಿ.ಎ. ಕಾಲೇಜುಗಳನ್ನ ತೆರೆಯುವುದರಿಂದ Education standard ಯಾವ ಕ್ಷೇತ್ರದಲ್ಲೂ ಎತ್ತರಿಸಲಿಕ್ಕೆ ಸಾಧ್ಯವಿಲ್ಲ ಎಂಬುದನ್ನ ಆಡಳಿತ ಮಂಡಳಿಯ ಜಿ.ಎಂ.ಲಿಂಗರಾಜ್‍ರವರು, ಸಂಸದ ಜಿ.ಎಂ.ಸಿದ್ಧೇಶ್‍ರವರು ತಿಳಿಯಬೇಕು.

 

    ವಿದ್ಯೆ ಕಮರ್ಷಿಯಲೈಸ್ ಆಗಿದೆ. ಅದನ್ನ ಒಪ್ಪಬೇಕು. ವಿದ್ಯೆ ಪಡೆಯಲಿಕ್ಕೆ, ವಿದ್ಯೆ ನೀಡುವ ಆರ್ಗನೈಸೇಷನ್ Insfrastructure setup ಮಾಡಲಿಕ್ಕೆ ಅಪಾರ ಪ್ರಮಾಣದ ದುಡ್ಡು ಬೇಕು. ಆದ್ರೆ, ಅದೇ ವ್ಯಾಪಾರವಾಗಬಾರದು. ವ್ಯಾಪಾರವೇ ಮಾಡಬೇಕೆಂದಿದ್ದರೆ, ಅಡಿಕೆ, ಮೈನಿಂಗ್‍ನಲ್ಲೇ ವ್ಯಾಪಾರ ಮಾಡಬಹುದಾಗಿತ್ತು. ಇದೇ ರೀತಿ ಮಾಡಿದ್ದರೆ, ಟಾಟಾರಂಥವರು, ಐ.ಐ.ಎಸ್.ಸಿ.ಯಂಥಾ ವಿದ್ಯಾಲಯವನ್ನ ಕಟ್ಟಲಾಗುತ್ತಿತ್ತಾ..? ಎರಡು ಮೂರು ದೋಣಿಗಳಲ್ಲಿ ಕಾಲಿಟ್ಟು ಕೆಳಗೆ ಬೀಳುವ ಬದಲು ಒಂದೇ ದೋಣಿಯಲ್ಲಿ ಸಾಗಿ ದಡಸೇರುವುದುತ್ತಮ.

 

    ಏನೇ ಆಗಲಿ, ಈ ದುರ್ಘಟನೆ ಜಿ.ಎಂ.ಐ.ಟಿ.ಗೆ ಕಪ್ಪುಚುಕ್ಕೆಯಂತೆ ಎಂಬುದಂತೂ ದಿಟ.

 

    ಈಗ ಆದದ್ದಾಯಿತು. ಮುಂದಾದರೂ ಎಚ್ಚೆತ್ತುಕೊಳ್ಳಲಿ. ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲು ಹಾಕಬೇಕೆಂಬ ಸಾತ್ವಿಕ ವ್ಯಕ್ತಿ ಜಿ.ಮಲ್ಲಿಕಾರ್ಜುನಪ್ಪನವರ ಕನಸನ್ನ ಅವರ ಮಕ್ಕಳು ನನಸು ಮಾಡುವರೆಂದು ನಂಬಬಹುದೇ..?

 

 

 

 

1 thought on “ಒಂದು ದುರಂತದ ಸುತ್ತ…

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s