ಬಸವಜಯಂತಿ ವಿಶೇಷ: ೧೨ನೇ ಶತಮಾನದ ಶರಣರ ಕಾಲದ ಖಾದ್ಯ ಪದಾರ್ಥಗಳು

ಹೋಳಿಗೆ (ಕೋಲಶಾಂತಯ್ಯ ವಚನದಲ್ಲಿದೆ)

ಎಣ್ಣೆ ಹೋಳಿಗೆ (ಚನ್ನಬಸವಣ್ಣನ ವಚನದಲ್ಲಿದೆ), ಎಣ್ಣೆ ಹೂರಿಗೆ(ಮಡಿವಾಳ ಮಾಚಯ್ಯ). ಹೋಳಿಗೆಗೆ ೮೦೦ ವರ್ಷಗಳ ಇತಿಹಾಸವಿದೆ..!

ಬೀಸುಂಬೂರಿಗೆ(ಹರಿಹರ ಕವಿ)

ಹೂರಿಗೆ (ಮಂಗರಸನ ಸೂಪಶಾಸ್ತ್ರ) -ಗೋಧಿಯ ಹಿಟ್ಟು ಅಥವಾ ರವೆಯನ್ನು ಕಲಿಸಿ ಸ್ವಲ್ಪ ಸೇರಿಸಿ ನಾರು ಹರಿಯದ ಕಣಕವನ್ನಾಗಿ ಮಾಡಿ, ನಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಬಟ್ಟೆಯಲ್ಲಿ ಮುಚ್ಚಿಡಬೇಕು. ಕಡಲೆಬೇಳೆಯನ್ನು ಬೇಯಿಸಿ ಅದಕ್ಕೆ ತಕ್ಕಷ್ಟು ಬೆಲ್ಲವನ್ನು ಸೇರಿಸಿ ತಯಾರಿಸಿದ ಹೂರಣವನ್ನು ಒಂದು ಗೋಳಕದ ಮೇಲಿಟ್ಟು, ಅದರ ಮೇಲೆ ಮತ್ತೊಂದು ಹಿಟ್ಟಿನುಂಡೆಯನ್ನಿಟ್ಟು , ಕೈಗಳ ಹರವಿ ಅದನ್ನು ಹಂಚಿನ ಮೇಲೆ ತುಪ್ಪದಲ್ಲಿ ಬೇಯಿಸುವುದು.

ಖಂಡಮಂಡಗೆ(ಬಸವಣ್ಣನ ವಚನ) , ಕಟ್ಟು ಮಂಡಗೆ(ಮಡಿವಾಳ ಮಾಚಿದೇವ) – ಕಣಕದಲ್ಲಿ ಬರಿಯ ಸಕ್ಕರೆ ತುಪ್ಪಗಳ ಹೂರಣವನ್ನು ಅಟ್ಟು ಸಕ್ಕರೆಯನ್ನು ತಳಿದು ಬಿಯೋಡಿನ(ಬಿಸಿ ಹಂಚು) ಮೇಲಿರಿಸುವುದು.

ಸುಲಿಗಡಲೆಯ ಕಜ್ಜಾಯ(ಬಸವಣ್ಣನ ವಚನ)

ಉಂಡಲಿಗೆ, ಉಂಡೆ, ಹಾಲುಂಡೆ (ಹರಿಹರ ಕವಿ)  – ಕಡೆಗಂದಿಯೆಮ್ಮೆಯ ಹಾಲಿನಲ್ಲಿ ತುರುವೆ ಬೇರನ್ನು ಜಜ್ಜಿ ಹಾಕಿ, ಆ ಹಾಲನ್ನು ಅರ್ಧ ಆಗುವವರೆಗೂ ಕಾಯಿಸಿ ಅದಕ್ಕೆ ತುಪ್ಪ ಸಕ್ಕರೆಗಳನ್ನು ಬೆರೆಸಿ, ಲವಂಗ – ಪತರೆ – ಏಲಕ್ಕಿಗಳನ್ನು ಪುಡಿ ಮಾಡಿ ಅದರಲ್ಲಿ ಕಲಸಿ, ಆ ಗಟ್ಟಿಯಾದ ಹಾಲನ್ನು ತೆಗೆದು ಉಂಡೆಗಳನ್ನಾಗಿ ಮಾಡುವುದೇ ಹಾಲುಂಡೆ ಅಥವಾ ಕ್ಷೀರದುಂಡೆ (ಲೋಕೋಪಕಾರ ಗ್ರಂಥ) – ಧಾರವಾಡ ಪೇಡ ಮಾಡುವ ವಿಧಾನವೂ ಇದೇ.

ಸೂಸಲು – ಅಲ್ಲಮಪ್ರಭು ವಚನ. ಈಗ ಸೂಸಲು ಎಂಬುದು ಸೇವಗೆ(ಶ್ಯಾವಿಗೆ?)ಯೊಡನೆ ಕಲಸಿ ತಿನ್ನಲು ಮಾಡಿದ ಎಳ್ಳು ಬೆಲ್ಲಗಳ ಮಿಶ್ರಣವನ್ನು ಸೂಚಿಸುತ್ತದೆ. ಸೇವಗೆಯನ್ನು ಪರಡಿ ಎಂತಲೂ ಕರೆಯುತ್ತಿದ್ದರು. ಹರಿಹರನು ಪರಡಿಯ ಪಾಯಸವನ್ನು ಹೆಸರಿಸುತ್ತಾನೆ. ಮಂಗರಸನು ಹೇಳುವ ‘ಸೂಸಲು ಸಕ್ಕರೆ’ಯೂ ಅಲ್ಲಮನು ಹೇಳುವ ಸೂಸಲು ಒಂದೇ ಇರಬಹುದು. ಹಾಲನ್ನು ಗಟ್ಟಿಯಾಗುವಂತೆ ಕಾಸಿ ಅದನ್ನು ಆರಿಸಿ ಸಕ್ಕರೆಯನ್ನು ಸೇರಿಸಿದರೆ ಸೂಸಲು ಸಕ್ಕರೆಯಾಗುತ್ತದೆಯೆಂದು ಮಂಗರಸನು ವಿವರಿಸುತ್ತಾನೆ.

ಪಾಯಸವನ್ನು ವಚನಗಳಲ್ಲಿ ‘ತುಯ್ಯಲು’ ಎಂದು ಕರೆದಿದ್ದಾರೆ. (ಅಲ್ಲಮಪ್ರಭು, ಬಸವಣ್ಣ)

ಹಡಪದ ಅಪ್ಪಣ್ಣನು ದೋಸೆ-ಕಡುಬುಗಳನ್ನು ಹೆಸರಿಸುತ್ತಾನೆ. ‘ಕಡುಬು’ ಎನ್ನುವುದು ಬಹುಷಃ ‘ಇಡ್ಡಲಿ’ಯನ್ನು ಸೂಚಿಸುತ್ತದೆ. ‘ಇಡ್ಡಲಿಗೆ’ ಯನ್ನು ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಉಲ್ಲೇಖಿಸುತ್ತದೆ. – ಉದ್ದನ್ನು ರುಬ್ಬಿ, ಮೊಸರು, ಇಂಗು, ಜೀರಿಗೆ, ಕೊತ್ತಂಬರಿ, ಮೆಣಸು, ಶುಂಠಿಗಳನ್ನು ಸೇರಿಸಿ ಬೇಯಿಸುವುದು ಇಡ್ಡಲಿಗೆ ಎಂದೆನಿಸಿಕೊಳ್ಳುತ್ತಿತ್ತು. (ಲೋಕೋಪಕಾರ) . ನನ್ನದೊಂದು ಪ್ರಶ್ನೆ. ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿರುವ ಶರಣ ಸಂಸ್ಕೃತಿಯ ಕಾಲದಲ್ಲೇ ಇಡ್ಲಿ ದೋಸೆಗಳು ಉಲ್ಲೇಖಿತವಾಗಿರುವಾಗ ಇಡ್ಲಿ ದೋಸೆಗಳು ತಮಿಳುನಾಡು ಮೂಲದವು ಎಂದು ಹೇಗೆ ಹೇಳುತ್ತೀರಿ?

ಗುಗ್ಗರಿ ಎನ್ನುವುದೂ ಒಂದು ಖಾದ್ಯವಾಗಿತ್ತು – ಬಸವಣ್ಣನ ವಚನ

ಅವಲಕ್ಕಿ – ಬಸವಣ್ಣನ ವಚನ
ಕಿಚ್ಚಡಿ ಮತ್ತು ಮೇಲೋಗರ ಎಂಬುವು ವಿಶಿಷ್ಟ ರೀತಿಯಲ್ಲಿ ತಯಾರಿಸಿದ ಅನ್ನಗಳು. – ಬಸವಣ್ಣ ಹಾಗೂ ದೇವರ ದಾಸಿಮಯ್ಯ ವಚನಗಳು.

ಹುಗ್ಗಿ (ಗೋಧಿ ಹುಗ್ಗಿ?) ಮತ್ತು ಬೆಳಸೆ- ಚನ್ನಬಸವಣ್ಣನ ವಚನಗಳಲ್ಲಿ ಉಲ್ಲೇಖವಾಗಿದೆ. (ಪುಳ್ಗೆಳ್ಗೆ – ಹುಗ್ಗಿಯ ಹಳಗನ್ನಡ ರೂಪವು ‘ರಾಮಚಂದ್ರ ಚರಿತ ಪುರಾಣ’ ದಲ್ಲಿ ಉಲ್ಲೇಖವಾಗಿದೆ)

ಪ್ರಾಚೀನಭಾರತದ ಸಮಯದಲ್ಲಿಯೇ ಪಂಚಾಮೃತದ ಉಲ್ಲೇಖವಿದೆ. ಹಾಲಿಗೆ ಸಕ್ಕರೆ, ತುಪ್ಪ, ಮೊಸರು ಮತ್ತು ಜೇನುಗಳನ್ನು ಸೇರಿಸಿ ದೇವರಿಗೆ ಅಭಿಷೇಕ ಮಾಡಿದಾಗ ಪಂಚಾಮೃತವೆನಿಸಿಕೊಳ್ಳುತ್ತಿತ್ತು. ‘ಬಸವ ಪುರಾಣ’ವು ಮೊಸರಿಗೆ ಬದಲು ಬಾಳೆಯ ಹಣ್ಣನ್ನು ಹೇಳುತ್ತದೆ.

ಹಾಲಿಗೆ ತುಪ್ಪ, ಸಕ್ಕರೆಗಳನ್ನು ಸೇರಿಸುವುದನ್ನು ಮಹಾದೇವಿಯಕ್ಕನು ‘ತ್ರಿವಿಧಾಮೃತ’ ಎಂದು ಕರೆದಿದ್ದಾಳೆ.

ಈ ಬಸವ ಜಯಂತಿಗೆ ಕೇಜಿಗಟ್ಲೇ ಬಂಗಾರ ತೊಗೋಬೇಡಿ. ಬಂಗಾರ ತಿನ್ನಕ್ಕಾಗಲ್ಲ. ಇಲ್ಲಿರುವ ಖಾದ್ಯ ಪದಾರ್ಥಗಳನ್ನ ಮನೆಯಲ್ಲಿ ತಯಾರಿಸಿ ಮಕ್ಕಳೊಂದಿಗೆ ಸೇವಿಸಿ, ವಚನ ಹೇಳಿಸಿ. ಬದುಕು ಸಾರ್ಥಕ.

ಬರಹ – ಶ್ರೀ. ಗಣೇಶ್ ಕೆ. ದಾವಣಗೆರೆ, ಸಹಾಯಕ ಪ್ರಾಧ್ಯಾಪಕರು. Www.pratispandana.WordPress.com

ಆಕರ – ವಚನ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ ಲೇಖಕರು – ಡಾ. ಪಿ.ವಿ.ನಾರಾಯಣ.

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.